Homeಮುಖಪುಟಸಾರ್ವಜನಿಕ ಶಿಕ್ಷಣದ ಕುಸಿತ ದಾಖಲಿಸುವ ವರದಿಗಳು; ತಜ್ಞರು ಹೇಳುವುದೇನು?

ಸಾರ್ವಜನಿಕ ಶಿಕ್ಷಣದ ಕುಸಿತ ದಾಖಲಿಸುವ ವರದಿಗಳು; ತಜ್ಞರು ಹೇಳುವುದೇನು?

- Advertisement -
- Advertisement -

ಶಿಕ್ಷಣಕ್ಕೆ ಸಂಬಂಧಿಸಿದಂತೆ ಎರಡು ಆತಂಕಕಾರಿ ವರದಿಗಳು ಇತ್ತೀಚೆಗೆ ಹೊರಬಿದ್ದವು. ಮೊದಲನೆಯದ್ದು ಯುನೆಸ್ಕೊದ್ದಾದರೆ, ಎರಡನೆಯದ್ದನ್ನು ನಮ್ಮ ಕೇಂದ್ರ ಸರ್ಕಾರವೇ ಬಿಡುಗಡೆ ಮಾಡಿದೆ.

ಯುನೆಸ್ಕೋದ ನೂತನ ಗ್ಲೋಬಲ್ ಎಜುಕೇಶನ್ ಮಾನಿಟರಿಂಗ್ ವರದಿ 2022ರ ಪ್ರಕಾರ, “ಕಳೆದ 30 ವರ್ಷಗಳಲ್ಲಿ ದಕ್ಷಿಣ ಏಷ್ಯಾ ದೇಶಗಳಲ್ಲಿ ಶಿಕ್ಷಣವು ಕ್ಷಿಪ್ರಗತಿಯಲ್ಲಿ ಬೆಳೆದಿದೆ. ಈ ದೇಶಗಳ ಪೈಕಿ ಭಾರತ ಮನ್ನುಗ್ಗುತ್ತಿದೆ. ಕಳೆದ ಎಂಟು ವರ್ಷಗಳಲ್ಲಿ ಭಾರತದಲ್ಲಿ ತೆರೆಯಲ್ಪಟ್ಟಿರುವ ಪ್ರತಿ 10 ಹೊಸ ಶಾಲೆಗಳ ಪೈಕಿ 7 ಖಾಸಗಿ ಶಾಲೆಗಳಾಗಿವೆ.”

“ಸಾರ್ವಜನಿಕ ಶಿಕ್ಷಣದ ಕಳಪೆ ಗುಣಮಟ್ಟ, ಅಸಮರ್ಪಕ ಪೂರೈಕೆ ಮತ್ತು ಪೋಷಕರ ನಿರೀಕ್ಷೆಗಳ ಹಿನ್ನೆಲೆಯಲ್ಲಿ ಭಾರತದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಬೆಳವಣಿಗೆಯಾಗಿವೆ. ಸರ್ಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುವುದಿಲ್ಲ ಎಂದು ಶೇ.73ರಷ್ಟು ಪೋಷಕರು ಅಭಿಪ್ರಾಯಪಡುತ್ತಾರೆ”.

ಖಾಸಗಿ ಟ್ಯೂಷನ್ ದರಗಳಲ್ಲಿ ಭಾರೀ ಹೆಚ್ಚಳವನ್ನು ಭಾರತದಲ್ಲಿ ಗುರುತಿಸಲಾಗಿದೆ. 61% ಮಾಧ್ಯಮಿಕ ಶಾಲಾ ವಿದ್ಯಾರ್ಥಿಗಳು ಕಳಪೆ ಶಾಲಾ ಗುಣಮಟ್ಟದ ಕಾರಣದಿಂದಾಗಿ ಟ್ಯೂಷನ್ ತೆಗೆದುಕೊಂಡಿದ್ದಾರೆ. 2020ರಲ್ಲಿ ಸುಮಾರು 29,600 ಮಾನ್ಯತೆ ಪಡೆಯದ ಶಾಲೆಗಳು 3.8 ಮಿಲಿಯನ್ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿರುವುದಾಗಿ ವರದಿ ಹೇಳುತ್ತದೆ.

ಕೇಂದ್ರ ಶಿಕ್ಷಣ ಸಚಿವಾಲಯದ ’ಎಜುಕೇಷನ್+’ ಇತ್ತೀಚೆಗೆ ಬಿಡುಗಡೆ ಮಾಡಿರುವ ಮತ್ತೊಂದು ವರದಿಯು ಮತ್ತಷ್ಟು ಆತಂಕಗಳನ್ನು ಹುಟ್ಟಿಸಿದೆ. ದೇಶದಲ್ಲಿನ ಶಾಲೆಗಳ ಸ್ಥಿತಿಗತಿ ಕುರಿತ ’ಏಕೀಕೃತ ಜಿಲ್ಲಾ ಮಾಹಿತಿ ವ್ಯವಸ್ಥೆ:2021-22’ ವರದಿಯ ಪ್ರಕಾರ, ಕೋವಿಡ್-19 ಸಾಂಕ್ರಾಮಿಕ ರೋಗದ ಅವಧಿಯ ಎರಡನೇ ವರ್ಷದಲ್ಲಿ (2021-22) ದೇಶಾದ್ಯಂತ ಖಾಸಗಿ ಮತ್ತು ಸರ್ಕಾರಿ ಶಾಲೆಗಳು ಸೇರಿದಂತೆ ಸುಮಾರು 20,000 ಶಾಲೆಗಳನ್ನು ಮುಚ್ಚಲಾಗಿದೆ.

ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿಯು ದೇಶದಾದ್ಯಂತ ಕ್ಷೀಣಿಸುತ್ತಿದೆ ಮತ್ತು 2021-22ರ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಶಾಲೆಗಳಲ್ಲಿ ಹೆಚ್ಚಳವಾಗಿದೆ ಎಂದು ವರದಿ ಗಮನ ಸೆಳೆದಿದೆ. 2020-21ಕ್ಕೆ ಹೋಲಿಸಿದರೆ 2021-22ರಲ್ಲಿ 1 ರಿಂದ 8ನೇ ತರಗತಿಯ ವಿದ್ಯಾರ್ಥಿಗಳ ಡ್ರಾಪ್‌ಔಟ್ ಪ್ರಮಾಣವು ಸರಿಸುಮಾರು ಎರಡು ಪಟ್ಟು ಹೆಚ್ಚಾಗಿದೆ ಎನ್ನಲಾಗಿದೆ.

ಸರ್ಕಾರಿ ಮತ್ತು ಖಾಸಗಿ ಶಾಲೆಗಳು ಸ್ವಯಂಪ್ರೇರಣೆಯಿಂದ ಒದಗಿಸಿದ ದತ್ತಾಂಶದ ಆಧಾರದ ಮೇಲೆ ವರದಿ ಸಿದ್ಧಪಡಿಸಲಾಗಿದೆ. ಆದರೆ 2020-21ರಲ್ಲಿ ದೇಶಾದ್ಯಂತ ಶಾಲೆಗಳ ಸಂಖ್ಯೆ 1,509,136 ಇದ್ದವು; ಈ ಪ್ರಮಾಣ 2021-22ರಲ್ಲಿ 1,489,115ಕ್ಕೆ ಇಳಿಕೆಯಾಗಿದೆ.

ಇದನ್ನೂ ಓದಿ: ಇದು ಶಿಕ್ಷಣ ಇಲಾಖೆಯೋ, ತುಘಲಕ್ ಮಾದರಿ ಆಡಳಿತವೋ?: ಡಾ.ವಿ.ಪಿ.ನಿರಂಜನಾರಾಧ್ಯ

ಅಂಕಿ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಮುಚ್ಚಲ್ಪಟ್ಟ 20,021 ಶಾಲೆಗಳಲ್ಲಿ 9,663 ಸರ್ಕಾರಿ ಶಾಲೆಗಳಿವೆ. ಇನ್ನುಳಿದಂತೆ 1,815 ಸರ್ಕಾರಿ ಅನುದಾನಿತ, 4,909 ಖಾಸಗಿ ಮತ್ತು 3,634 ಇತರ ಮ್ಯಾನೇಜ್‌ಮೆಂಟ್ ವರ್ಗದ ಶಾಲೆಗಳು ಬಾಗಿಲು ಹಾಕಿವೆ.

ರಾಜ್ಯವಾರು ವಿಂಗಡನೆಯನ್ನು ಅವಲೋಕಿಸಿದರೆ, ಎರಡನೇ ಸಾಂಕ್ರಾಮಿಕ ವರ್ಷದಲ್ಲಿ ಹೆಚ್ಚಿನ ಸಂಖ್ಯೆಯ ಶಾಲೆಗಳನ್ನು ಮುಚ್ಚಲಾದ ರಾಜ್ಯಗಳಲ್ಲಿ ಮಧ್ಯಪ್ರದೇಶ (7,689), ಒಡಿಶಾ (1,894), ಆಂಧ್ರಪ್ರದೇಶ (1,395), ಉತ್ತರ ಪ್ರದೇಶ (1143), ಪಂಜಾಬ್ (994), ಮತ್ತು ಮಹಾರಾಷ್ಟ್ರ (509) ಸೇರಿವೆ.

ಸರ್ಕಾರಿ ಶಾಲೆಗಳಿಗೆ ಸೇರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿರುವಾಗ ಖಾಸಗಿ ಶಾಲೆಗಳಲ್ಲಿ ದಾಖಲಾತಿ ಕಡಿಮೆಯಾಗುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಸಾಂಕ್ರಾಮಿಕ ರೋಗ ಸೃಷ್ಟಿಸಿದ ಆರ್ಥಿಕ ನಿರ್ಬಂಧಗಳು ಮತ್ತು ಆರ್ಥಿಕ ಹಿಂಜರಿತದ ಪರಿಣಾಮವಾಗಿ ಖಾಸಗಿ ಶಾಲಾ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಿಗೆ ಸೇರುವುದನ್ನು ಮುಂದುವರೆಸಿದ್ದಾರೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದು ದೀರ್ಘಕಾಲಿಕವಾಗಿ ಉಳಿಯುವುದೇ ಎಂಬ ಪ್ರಶ್ನೆ ಕೂಡ ಇಲ್ಲಿ ಮುಖ್ಯವಾಗುತ್ತದೆ.

ಒಂದು ವರದಿಯು ಖಾಸಗಿ ಶಾಲೆಗಳಿಗೆ ಸಿಗುತ್ತಿರುವ ಆದ್ಯತೆಯನ್ನು ತೋರಿಸಿದರೆ, ಮತ್ತೊಂದು ವರದಿಯು ಸರ್ಕಾರಿ ಶಾಲೆಗಳನ್ನು ಹೆಚ್ಚಿಸಬೇಕಾದ ಅನಿವಾರ್ಯತೆಯನ್ನು ಎತ್ತಿಹಿಡಿದಿದೆ. ಕೋವಿಡ್ ನಂತರದಲ್ಲಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಕುರಿತು ಪೋಷಕರಲ್ಲಿ ’ಅನಿವಾರ್ಯ’ವಾಗಿ ಭರವಸೆ ಹುಟ್ಟಿದರೂ, ಸರ್ಕಾರವೇ ನಿರ್ಲಕ್ಷ್ಯ ತಾಳಿ ಶಾಲೆಗಳನ್ನು ಮುಚ್ಚುತ್ತಿರುವುದು ಸ್ಪಷ್ಟವಾಗುತ್ತದೆ.

ಶ್ರೀಪಾದ್ ಭಟ್

ಚಿಂತಕರು ಹಾಗೂ ಶಿಕ್ಷಣತಜ್ಞರಾದ ಶ್ರೀಪಾದ್ ಭಟ್ ಅವರು ’ನ್ಯಾಯಪಥ’ ಪತ್ರಿಕೆಯೊಂದಿಗೆ ಮಾತನಾಡಿ, “ಈ ರೀತಿಯ ವರದಿಗಳು ಬರುತ್ತಲೇ ಇರುತ್ತವೆ. ಶಿಕ್ಷಣ ಸಂಬಂಧಿತ ಸಮಸ್ಯೆಗಳಿಗೆ ಕೊಠಾರಿ ಆಯೋಗದ ವರದಿಯಲ್ಲೇ ಪರಿಹಾರಗಳಿವೆ. ವಸಾಹತ್ತೋತ್ತರ ಭಾರತಕ್ಕೆ ಯಾವ ರೀತಿಯ ಶಿಕ್ಷಣ ಬೇಕು ಎಂಬುದನ್ನು ಆಯೋಗವು 60 ವರ್ಷಗಳ ಹಿಂದೆಯೇ ಗುರುತಿಸಿದೆ. ವೃತ್ತಿಪರ ಹಾಗೂ ಸಮಾನ ಶಿಕ್ಷಣಕ್ಕೆ ಒತ್ತು ನೀಡಿದೆ. ಆ ವರದಿಯನ್ನು ಮರೆತುಬಿಟ್ಟಿದ್ದೇವೆ. ಪ್ರಭುತ್ವದ ಕಡೆಗೆ ಎಲ್ಲರೂ ಬೊಟ್ಟು ಮಾಡುತ್ತಾರೆ. ಆದರೆ, ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಉಳಿಸುವ ನಿಟ್ಟಿನಲ್ಲಿ, ಪ್ರಭುತ್ವದ ಪಾಲುದಾರನಾದ ನಾಗರಿಕ ಸಮಾಜ ಯಾವುದೇ ಪ್ರಯತ್ನವನ್ನು ಮಾಡಲಿಲ್ಲ. ಈವರೆಗೆ ಒಂದೂ ಶಿಕ್ಷಣ ಚಳವಳಿಯಾಗಲಿಲ್ಲ” ಎಂದು ವಿಷಾದಿಸಿದರು.

“ಮುಖ್ಯವಾಗಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಗೆ ಸಮರ್ಪಕ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡುತ್ತಿಲ್ಲ. ಕಳೆದ ಎಂಟು ವರ್ಷಗಳಿಂದ ಕೇಂದ್ರದಿಂದ ಬರುತ್ತಿರುವ ಅನುದಾನ ತೀರ ಕಡಿಮೆಯಾಗಿದೆ. ಶಿಕ್ಷಣಕ್ಕೆ ಮೀಸಲಿಡುವ ಬಜೆಟ್ ಗಾತ್ರ ವರ್ಷವರ್ಷವೂ ಕಿರಿದಾಗುತ್ತಿದೆ. ರಾಜ್ಯ ಸರ್ಕಾರ 26,000 ಕೋಟಿ ರೂ.ಗಳನ್ನು ನೀಡಿದರೆ ಅದರಲ್ಲಿ ಶೇ.80ರಷ್ಟು ಹಣ ಸಿಬ್ಬಂದಿ ವೇತನಕ್ಕೆ ಖರ್ಚಾಗುತ್ತದೆ. ಇನ್ನುಳಿದ ಹಣದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕಷ್ಟವಾಗಿದೆ. ಅನುದಾನ ನಿಂತು ಹೋಗುತ್ತಿರುವುದೇ ಸಮಸ್ಯೆಯ ಮೂಲ ಕಾರಣ” ಎಂದು ಅಭಿಪ್ರಾಯಪಟ್ಟರು.

“ಜಾಗತೀಕರಣದ ನಂತರ ಶಿಕ್ಷಣಕ್ಕೆ ಸಂಬಂಧಿಸಿದಂತೆ ರಚನೆಯಾದ ಎಲ್ಲ ಸಮಿತಿಗಳೂ ಸರ್ಕಾರ ಹಣ ಬಿಡುಗಡೆ ಮಾಡಬೇಕು ಎಂದಿವೆ. ಅನುದಾನ ನೀಡಲು ಸಾಧ್ಯವಾಗದಿದ್ದರೆ ಪರ್ಯಾಯ ವ್ಯವಸ್ಥೆಗೆ ಅವಕಾಶ ಕಲ್ಪಿಸಲು ಸಲಹೆಗಳನ್ನು ನೀಡಿವೆ. ಉದಾಹರಣೆಗೆ ಸರ್ಕಾರಿ ಮೈದಾನ, ಸರ್ಕಾರಿ ಸೆಮಿನಾರ್ ಹಾಲ್‌ಗಳನ್ನು ಬಾಡಿಗೆ ಕೊಡುವಂತೆ ಸೂಚಿಸಿರುವುದನ್ನು ಗಮನಿಸಬಹುದು. ಪದೇಪದೇ ಈ ಕುರಿತು ಮಾತನಾಡಿ ಸಾಕಾಗಿದ್ದೇವೆ. ಶಿಕ್ಷಣದ ಭಾಗಿದಾರರು ಇನ್ನಾದರೂ ದನಿ ಎತ್ತಬೇಕಾಗಿದೆ” ಎಂದು ಒತ್ತಾಯಿಸಿದರು.

“ಎನ್‌ಇಪಿ ಜಾರಿಗೆ ತಂದಿದ್ದಾರೆ. ಐದನೇ ತರಗತಿ, ಎಂಟನೇ ತರಗತಿ ಮಕ್ಕಳಿಗೆ ಪಬ್ಲಿಕ್ ಪರೀಕ್ಷೆಯನ್ನು ಇಟ್ಟರೆ ಇಲ್ಲಿನ ಸರ್ಕಾರಿ ಶಾಲೆಯ ಮಕ್ಕಳು ದೆಹಲಿ ಪಬ್ಲಿಕ್ ಸ್ಕೂಲ್ ಮಕ್ಕಳ ಜೊತೆ ಸ್ಪರ್ಧಿಸಲು ಸಾಧ್ಯವೆ? ಮಕ್ಕಳು ಶಾಲೆಯನ್ನು ತೊರೆಯಬೇಕಾಗುತ್ತದೆ. ಸರ್ಕಾರಿ ಶಾಲೆಯಲ್ಲಿ ಓದಿದರೆ ಕೀಳಾಗಿ ನೋಡುತ್ತಾರೆಂಬ ಮನೋಭಾವವೂ ಬೆಳೆದುಬಿಟ್ಟಿದೆ. ಸರ್ಕಾರಿ ಶಾಲಾ ಶಿಕ್ಷಕರೇ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವುದಿಲ್ಲ ಎಂಬುದು ಪೋಷಕರ ಆತಂಕಕ್ಕೆ ಕಾರಣವಾಗಿದೆ. ಇಂತಹ ಸಾವಿರಾರು ಕಾರಣಗಳಿವೆ” ಎಂದು ಬೇಸರ ವ್ಯಕ್ತಪಡಿಸಿದರು.

ಡಾ.ವಿ.ಪಿ.ನಿರಂಜನಾರಾಧ್ಯ

ಕರ್ನಾಟಕ ರಾಜ್ಯ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯ ಸಂಸ್ಥಾಪಕ ಮಹಾಪೋಷಕರಾದ ಶಿಕ್ಷಣತಜ್ಞ ಡಾ.ವಿ.ಪಿ.ನಿರಂಜನಾರಾಧ್ಯ ಅವರು ಮಾತನಾಡಿ, “ಸರ್ಕಾರವೇ ಹೇಳಿದಂತೆ ಸರ್ಕಾರಿ ಶಾಲೆಗಳ ಸಂಖ್ಯೆ ಕಡಿಮೆಯಾಗುತ್ತಿರುವುದಕ್ಕೆ ಮುಖ್ಯ ಕಾರಣ ಸರ್ಕಾರವೇ ಆಗಿದೆ. ಯಾವುದೇ ಸಾರ್ವಜನಿಕ ಸಂಸ್ಥೆಯನ್ನು ಮುಚ್ಚಬೇಕೆಂದರೆ- ಅದಕ್ಕೆ ಸಿಗಬೇಕಾದ ಎಲ್ಲ ಹಣಕಾಸು ವ್ಯವಸ್ಥೆ ಮತ್ತು ಸೌಲಭ್ಯವನ್ನು ಕಡಿಮೆ ಮಾಡುತ್ತ ಹೋದರೆ ಸಾಕು. ಯಾವುದೇ ಸೌಲಭ್ಯವಿಲ್ಲದ ಶಾಲೆಗೆ ತಮ್ಮ ಮಕ್ಕಳನ್ನು ಪೋಷಕರು ಕಳುಹಿಸಲು ಬಯಸುವುದಿಲ್ಲ” ಎಂದು ತಿಳಿಸಿದರು.

“ರಾಜ್ಯದಲ್ಲಿ ಶಿಕ್ಷಣ ಹಕ್ಕು ಕಾಯ್ದೆ ಜಾರಿಯಾಗಿ 12 ವರ್ಷಗಳಾಯಿತು. ಆದರೆ ಇಲ್ಲಿಯವರೆಗೂ ಒಟ್ಟು ನೂರು ಶಾಲೆಗಳ ಪೈಕಿ 23 ಶಾಲೆಗಳಲ್ಲಿ ಎಲ್ಲ ಮೂಲಭೂತ ಸೌಲಭ್ಯಗಳನ್ನು ನೀಡಲಾಗಿಲ್ಲ. ಹೀಗಿರುವಾಗ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಉಳಿಯಲು ಸಾಧ್ಯವೇ?” ಎಂದು ಪ್ರಶ್ನಿಸಿದರು.

“ಸರ್ಕಾರಿ ಶಾಲೆಗಳು ಉಳಿಯಬಾರದು ಎಂಬ ರೀತಿಯಲ್ಲಿ ಖಾಸಗೀಕರಣಕ್ಕೆ ಮಣೆಹಾಕಲಾಗುತ್ತಿದೆ. ಖಾಸಗೀಕರಣ ಈಗ ಕಾರ್ಪೊರೆಟೀಕರಣವೂ ಆಗುತ್ತಿದೆ. ಅಂದರೆ ಒಂದೊಂದು ಸಂಸ್ಥೆಯು ನೂರಾರು ಸಂಸ್ಥೆಗಳನ್ನು ನಡೆಸುತ್ತಿವೆ. ಡೆಲ್ಲಿ ಪಬ್ಲಿಕ್ ಸ್ಕೂಲ್, ಜಂಬೋ ಕಿಡ್ಸ್, ಯುರೋ ಕಿಡ್ಸ್- ಇವುಗಳನ್ನು ಉದಾಹರಣೆಯಾಗಿ ನೋಡಬಹುದು. ಇವರು ದೇಶದ ಎಲ್ಲಾ ಕಡೆಯೂ ವ್ಯಾಪಿಸಿದ್ದಾರೆ. ಕಳೆದ 75 ವರ್ಷಗಳಲ್ಲಿ ವೈಜ್ಞಾನಿಕ ನೆಲೆಯಲ್ಲಿ ಆಧುನಿಕ ಶಿಕ್ಷಣವನ್ನು ಕಟ್ಟಿಕೊಳ್ಳಲು ನಮ್ಮ ವ್ಯವಸ್ಥೆ ಸಾಧ್ಯವಾದ ಮಟ್ಟಿಗೆ ಪ್ರಯತ್ನ ಮಾಡಿತ್ತು. ಪರಿಪೂರ್ಣವಲ್ಲದಿದ್ದರೂ ತಕ್ಕಮಟ್ಟಿಗಿನ ಯಶಸ್ಸು ಸಾಧಿಸಲಾಗಿತ್ತು. ಅವಕಾಶ ವಂಚಿತ ಸಮುದಾಯದ ಮಕ್ಕಳಿಗೆ ಶಿಕ್ಷಣ ನೀಡುವ ಪ್ರಯತ್ನ ಮಾಡಲಾಗಿತ್ತು. ಅದು ಕೂಡ ಈಗ ಇಲ್ಲವಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: ಭಗವದ್ಗೀತೆಯಲ್ಲಿ ಅದ್ಯಾವ ನೈತಿಕ ಶಿಕ್ಷಣವಿದೆ?

“ಗ್ಲೋಬಲ್ ಎಜುಕೇಶನ್ ಮಾನಿಟರಿಂಗ್ (ಜೆಮ್) ವರದಿಯನ್ನು ಸೂಕ್ಷ್ಮವಾಗಿ ಗಮನಿಸಿ. ಜಗತ್ತಿನ ಬೇರೆಬೇರೆ ದೇಶಗಳ ಜನರನ್ನು ಈ ವರದಿಗಾಗಿ ಮಾತನಾಡಿಸಿದಾಗ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಗಟ್ಟಿಯಾಗಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. 10 ಜನರಲ್ಲಿ 9 ಜನರು ಸರ್ಕಾರಿ ಶಿಕ್ಷಣಕ್ಕೆ ಆಗ್ರಹಿಸಿದ್ದಾರೆ. ಗುಣಮಟ್ಟದ ಶಿಕ್ಷಣ ಸಿಗಬೇಕು ಎನ್ನುತ್ತಿದ್ದಾರೆ. ಆದರೆ ಸರ್ಕಾರಗಳು ಜನರ ಆಶಯಕ್ಕೆ ವಿರುದ್ಧವಾಗಿ ಖಾಸಗೀಕರಣಕ್ಕೆ ಮಣೆ ಹಾಕುತ್ತಿವೆ. ಇದರ ವಿರುದ್ಧ ಜನಾಂದೋಲನ ಆಗಬೇಕಿದೆ. ಜನರ ಆಶಯಗಳನ್ನು ಕಾಪಾಡಲು ಸರ್ಕಾರಗಳು ಇರಬೇಕೇ ಹೊರತು, ಹತ್ತಿಕ್ಕಲು ಅಲ್ಲ” ಎಂದು ಎಚ್ಚರಿಸಿದರು.

ಮಲ್ಲಿಗೆ ಸಿರಿಮನೆ

’ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ’ ಚಳವಳಿಯ ಮುಖಂಡರಾದ ಮಲ್ಲಿಗೆ ಸಿರಿಮನೆಯವರು ಪತ್ರಿಕೆಗೆ ಪ್ರತಿಕ್ರಿಯಿಸಿ, “ಶಾಲೆಗಳನ್ನು ಮುಚ್ಚುವ ವಿಚಾರದಲ್ಲಿ ಕರ್ನಾಟಕ ಹಿಂದೆ ಬಿದ್ದಿಲ್ಲ. ಶಾಲೆಗಳ ವಿಚಾರದಲ್ಲಿ ಕರ್ನಾಟಕ ಸ್ಥಿತಿಯೂ ಯೋಗ್ಯವಾಗಿಲ್ಲ” ಎಂದು ವಿಷಾದಿಸಿದರು.

“ಜಾಗತಿಕ ಹೂಡಿಕೆದಾರರ ಸಮಾವೇಶ ಥರದ ಕೆಲವು ರಂಗುರಂಗಿನ ಕಾರ್ಯಕ್ರಮವನ್ನು ಸಂಘಟಿಸಿ, ಬಹಳ ಮುಂದುವರಿದ ರಾಜ್ಯ ಎಂದು ತೋರಿಸಿಕೊಳ್ಳಲು ಸರ್ಕಾರ ಯತ್ನಿಸುತ್ತಿದೆ. ಹಲವು ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವ ಕೆಲಸವೂ ಶಾಲೆಗಳನ್ನು ಮುಚ್ಚುವ ಕಾರ್ಯಕ್ರಮದ ಭಾಗವೇ ಆಗಿರುತ್ತದೆ” ಎನ್ನುತ್ತಾರವರು.

“ಅತಿಥಿ ಉಪನ್ಯಾಸಕರು, ಅತಿಥಿ ಶಿಕ್ಷಕರನ್ನು ನೇಮಿಸಲಾಗುತ್ತಿದೆ. ಈ ರೀತಿಯ ತಾತ್ಕಾಲಿಕ ವ್ಯವಸ್ಥೆಯಿಂದ ಶಿಕ್ಷಣ ವ್ಯವಸ್ಥೆಗೆ ಧಕ್ಕೆಯಾಗುತ್ತದೆ. ಇದರ ಬದಲು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ಇದಕ್ಕಾಗಿ ದಶಕಗಳ ಕಾಲ ರಾಜ್ಯದಲ್ಲಿ ಹೋರಾಟ ನಡೆದಿದ್ದರೂ ಸರ್ಕಾರ ಮೌನವಾಗಿರುವುದು ದೊಡ್ಡ ದುರಂತ” ಎಂದು ಟೀಕಿಸಿದರು.

“ನೆರೆಹೊರೆಯ ರಾಜ್ಯಗಳನ್ನು ನೋಡಿಯಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಆದರೆ ಕರ್ನಾಟಕ ಮಾತ್ರ ಗಟ್ಟಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿಲ್ಲ. ಪಕ್ಕದ ಆಂಧ್ರಪ್ರದೇಶ ಸರ್ಕಾರ ಶಾಲೆಗಳ ಮೂಲಸೌಕರ್ಯಗಳ ಅಭಿವೃದ್ಧಿಗಾಗಿಯೇ ಆರು ಸಾವಿರ ಕೋಟಿ ರೂಗಳನ್ನು ಮೀಸಲಿಟ್ಟು, ಟಾಸ್ಕ್‌ಫೋರ್ಸ್‌ಗಳನ್ನು ರಚಿಸಿದೆ. ಸರ್ಕಾರಿ ಶಾಲೆಗಳನ್ನು ಉತ್ತಮ ದರ್ಜೆಗೇರಿಸುವ ಪ್ರಯತ್ನ ಮಾಡುತ್ತಿದೆ. ಶಿಕ್ಷಣ ಸಂಘಟನೆಗಳ ಆಗ್ರಹ, ತಜ್ಞರ ಸಲಹೆಗಳನ್ನು ಆಲಿಸುತಿದೆ” ಎಂದು ವಿವರಿಸಿದರು.

“ದೆಹಲಿ ಸರ್ಕಾರ ಶಿಕ್ಷಣ ವಿಚಾರದಲ್ಲಿ ಮಾಡಿರುವ ಕೆಲಸಗಳು ಸಾಕಷ್ಟು ಚರ್ಚೆಗೆ ಒಳಪಟ್ಟಿವೆ. ದೆಹಲಿ ಸರ್ಕಾರ ಮೀಸಲಿಟ್ಟ ಬಜೆಟ್, ವಹಿಸಿದ ಮೇಲ್ವಿಚಾರಣೆ ಉಲ್ಲೇಖಾರ್ಹ. ಶಿಕ್ಷಣ ವಿಚಾರದಲ್ಲಿ ಕೆಟ್ಟ ನಿರ್ವಹಣೆಯನ್ನು ಮಾಡುತ್ತಿರುವ ರಾಜ್ಯಗಳ ಪೈಕಿ ಕರ್ನಾಟಕವೂ ಒಂದಾಗಿದೆ. ತುರ್ತಾಗಿ ಶಿಕ್ಷಣದ ಅಧಃಪತನವನ್ನು ನಿಲ್ಲಿಸಬೇಕಿದೆ” ಎಂದು ಮಲ್ಲಿಗೆ ಒತ್ತಾಯಿಸಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...