Homeಕರ್ನಾಟಕಭಗವದ್ಗೀತೆಯಲ್ಲಿ ಅದ್ಯಾವ ನೈತಿಕ ಶಿಕ್ಷಣವಿದೆ?

ಭಗವದ್ಗೀತೆಯಲ್ಲಿ ಅದ್ಯಾವ ನೈತಿಕ ಶಿಕ್ಷಣವಿದೆ?

- Advertisement -
- Advertisement -

ಶಾಲಾ ಕಾಲೇಜುಗಳಲ್ಲಿ ಮುಸ್ಲಿಂ ಹೆಣ್ಣುಮಕ್ಕಳು ಹಿಜಾಬ್ ಧರಿಸಬಾರದೆಂದು ವಿವಾದ ಸೃಷ್ಟಿಯಾದಾಗ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್, “ಶಾಲಾ ಕಾಲೇಜುಗಳಲ್ಲಿ ಧರ್ಮವನ್ನು ಆಚರಿಸಬಾರದು” ಎಂಬ ಹೇಳಿಕೆ ನೀಡಿದರು. “ವಿವಿಧ ಧರ್ಮದ ಹಿನ್ನೆಲೆಯ ಮಕ್ಕಳು ಒಟ್ಟಿಗೆ ಕೂರುವಾಗ ಹಿಜಾಬ್ ಹಾಕಿಕೊಳ್ಳುವುದು ಸರಿಯಲ್ಲ, ಅದು ಸಮವಸ್ತ್ರ ಸಂಹಿತೆಯ ಉಲ್ಲಂಘನೆ” ಎಂಬ ವಾದವನ್ನು ಹೂಡಲಾಯಿತು. ಈಗ ಇದೇ ಬಿ.ಸಿ.ನಾಗೇಶ್, “ಶಾಲೆಗಳಲ್ಲಿ ಭಗವದ್ಗೀತೆಯನ್ನು ಬೋಧಿಸುತ್ತೇವೆ” ಎನ್ನುತ್ತಿದ್ದಾರೆ.

ಸೆಪ್ಟಂಬರ್‌ನಲ್ಲಿ ನಡೆದ ಅಧಿವೇಶನದಲ್ಲಿ ವಿಧಾನ ಪರಿಷತ್‌ನ ಪ್ರಶ್ನೋತ್ತರ ಕಲಾಪದ ವೇಳೆ ಬಿಜೆಪಿಯ ಸದಸ್ಯರಾದ ಎಂ.ಕೆ.ಪ್ರಾಣೇಶ್ ಮತ್ತು ಎನ್.ರವಿಕುಮಾರ್ ಅವರ ಪ್ರಶ್ನೆಗೆ ಶಿಕ್ಷಣ ಸಚಿವರು ಉತ್ತರಿಸುತ್ತಾ, “ಪ್ರಸ್ತುತ ಶಾಲಾ ಪಠ್ಯದಲ್ಲಿ ಭಗವದ್ಗೀತೆಯನ್ನು ಪ್ರತ್ಯೇಕವಾಗಿ ಬೋಧಿಸುವ ವಿಚಾರ ಸರಕಾರದ ಮುಂದಿಲ್ಲ. ಆದರೆ, ಮಕ್ಕಳಿಗೆ ನೈತಿಕ ಶಿಕ್ಷಣ ನೀಡುವುದು ಅಗತ್ಯ. ಹಾಗಾಗಿ, ಸಮಿತಿ ರಚಿಸಿ ಅದು ನೀಡುವ ಶಿಫಾರಸು ಆಧರಿಸಿ ಭಗವದ್ಗೀತೆ ಅಳವಡಿಸಲಾಗುವುದು” ಎಂದಿದ್ದಾರೆ.

“ನೈತಿಕ ಶಿಕ್ಷಣ ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆ ಮಾಡಿ, ಡಿಸೆಂಬರ್‌ನಿಂದ ಮಕ್ಕಳಿಗೆ ಬೋಧಿಸಲು ಪ್ರಯತ್ನಿಸಲಾಗುವುದು. ಹಾಗೆಯೇ, ಪಠ್ಯಗಳಲ್ಲಿರುವ ಇತಿಹಾಸದ ತಪ್ಪುಗಳನ್ನು ಸರಿ ಮಾಡಲಾಗುವುದು” ಎಂದು ತಿಳಿಸಿದ್ದಾರೆ.

ಬಿ.ಸಿ ನಾಗೇಶ್

ಪಠ್ಯಪುಸ್ತಕವನ್ನು ತಮ್ಮ ಸಿದ್ಧಾಂತಕ್ಕನುಗುಣವಾಗಿ ತಿರುಚುವುದು, ಇತಿಹಾಸಕ್ಕೆ ಅಪಚಾರವೆಸಗುವುದು, ಮಕ್ಕಳ ಮೇಲೆ ವೈದಿಕ ಪರಂಪರೆಯ ಆಲೋಚನೆಗಳನ್ನು ಹೇರುವುದು, ವೇದಗಣಿತವನ್ನು ದಲಿತ ಮಕ್ಕಳಿಗೆ ಕಲಿಸುತ್ತೇವೆ ಎನ್ನುವುದು- ಈ ರೀತಿಯ ವಿಚಾರಗಳಲ್ಲೇ ಸರ್ಕಾರ ಕಾಲಕ್ಷೇಪ ಮಾಡುತ್ತಿರುವಂತೆ ಕಾಣುತ್ತಿದೆ. ಭಗವದ್ಗೀತೆಯನ್ನು ಮಕ್ಕಳಿಗೆ ಬೋಧಿಸುವ ಉದ್ದೇಶವಾದರೂ ಏನು? ಇದರಿಂದ ಯಾವ ಪ್ರಯೋಜನವಾಗುತ್ತದೆ? ಎಂಬ ಪ್ರಶ್ನೆಗಳು ಮುನ್ನಲೆಗೆ ಬಂದಿವೆ.

’ನ್ಯಾಯಪಥ’ದೊಂದಿಗೆ ಮಾತನಾಡಿದ ನಾಡಿನ ಹಿರಿಯ ವಿದ್ವಾಂಸರು, ಶಿಕ್ಷಣ ತಜ್ಞರೂ ಆದ ಡಾ.ಜಿ.ರಾಮಕೃಷ್ಣ ಅವರು, “ಭಗವದ್ಗೀತೆಯನ್ನು ಬೋಧಿಸುವುದು ತಪ್ಪೇನು ಅಲ್ಲ, ಆದರೆ ಅದು ಯಾವ ವಿಚಾರಗಳನ್ನು ಪ್ರತಿಪಾದಿಸಲು ಹೊರಟಿದೆ ಎಂಬುದನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು” ಎಂದು ಆಶಿಸಿದರು.

’ಭಗವದ್ಗೀತೆ- ಒಂದು ಅವಲೋಕನ’ ಎಂಬ ಕೃತಿಯನ್ನು ಬರೆದಿರುವ ಅವರು, ಭಗವದ್ಗೀತೆಯ ಆಳ ಅಗಲಗಳನ್ನು ವಿಸ್ತೃತವಾಗಿ ಕೃತಿಯಲ್ಲಿ ಚರ್ಚಿಸಿದ್ದಾರೆ. ಸರ್ಕಾರದ ನಡೆ ಹಾಗೂ ಗೀತೆಯ ತಾತ್ವಿಕತೆಯ ಕುರಿತು ಅವರು ಹಲವು ಅಭಿಪ್ರಾಯಗಳನ್ನು ಪತ್ರಿಕೆಯೊಂದಿಗೆ ಹಂಚಿಕೊಂಡರು.

“ಭಗವದ್ಗೀತೆಯ ಬಗ್ಗೆ ಆಗಾಗ್ಗೆ ಪ್ರಸ್ತಾಪಗಳು ಬರುತ್ತಲೇ ಇರುತ್ತವೆ. ಗೀತೆಯಲ್ಲಿನ ಚಿಕ್ಕದಾದ 12ನೇ ಅಧ್ಯಾಯವನ್ನು ಬಾಯಿಪಾಠ ಮಾಡಿಸಿ ಮಕ್ಕಳಿಗೆ ಸ್ಪರ್ಧೆ ಏರ್ಪಡಿಸುವುದೂ ಇದೆ. ಬಾಯಿಪಾಠ ಮಾಡಿದರೆ ಜ್ಞಾಪಕ ಶಕ್ತಿ ಹೆಚ್ಚುತ್ತದೆ ಎಂಬ ಭ್ರಮೆ ಇರಬಾರದು. ಗೀತೆಯ ತತ್ವವನ್ನು ಹೇಳಲು ಹೊರಟಿದ್ದೇವಾ? ಅಥವಾ ಕೇವಲ ಪದ್ಯಗಳನ್ನು ಬಾಯಿಪಾಠ ಮಾಡಿಸಲು ಹೊರಟಿದ್ದೇವಾ? ಭಗವದ್ಗೀತೆಯನ್ನು ಕಲಿತುಕೊಳ್ಳಲಿ, ತೊಂದರೆ ಇಲ್ಲ. ಆಗ ಮಾತ್ರವೇ ಅದರಲ್ಲಿ ಏನಿದೆ ಎಂಬುದು ಗೊತ್ತಾಗುತ್ತದೆ. ಆದರೆ ಈ ಸರ್ಕಾರ ಹಾಕಿಕೊಳ್ಳುವ ಯೋಜನೆಗಳು ಅಪಾಯಕಾರಿಯಾಗಿವೆ. ’ಇದು ಅತ್ಯಂತ ಸಮರ್ಥವಾದ, ಉಪಯುಕ್ತವಾದ, ದೊಡ್ಡ ಮಟ್ಟದ ಜ್ಞಾನ ನೀಡುವ ಗ್ರಂಥ, ಇದರಲ್ಲಿ ಅದ್ವಿತೀಯ ವಿಚಾರಗಳಿವೆ’ ಎಂಬ ಮನೋಭಾವನೆಯನ್ನು ಮಕ್ಕಳಲ್ಲಿ ಬೆಳೆಸಲಾಗುತ್ತದೆ. ಆ ದೃಷ್ಟಿಯಲ್ಲಿ ಆಕ್ಷೇಪ ಎತ್ತುವುದು ಅಗತ್ಯ” ಎನ್ನುತ್ತಾರೆ ಜಿ.ಆರ್.

“ಸ್ಥಿತಪ್ರಜ್ಞನ ಲಕ್ಷಣಗಳೇನು ಎಂಬುದು ಭಗವದ್ಗೀತೆಯ ಎರಡನೇ ಅಧ್ಯಾಯದಲ್ಲಿ ಬರುತ್ತದೆ. ಆ ಪದ್ಯಗಳು ಬಾಯಿಪಾಠವಾದ ತಕ್ಷಣ ನಾವು ಸ್ಥಿತಿಪ್ರಜ್ಞ ಆಗುವುದಿಲ್ಲ. ಸ್ಥಿತಪ್ರಜ್ಞನಾಗಲು ಏನು ಮಾಡಬೇಕು ಎಂದು ಗೀತೆ ಹೇಳುತ್ತದೆಯೋ ಅದರ ಪರಾಮರ್ಶೆ ಮಾಡಿಕೊಳ್ಳಬೇಕು. ಆದರೆ ಭಗವದ್ಗೀತೆಯಲ್ಲಿ ಅಷ್ಟು ಮಾತ್ರ ಇಲ್ಲ. ಗೀತೆಯ ಹಿನ್ನೆಲೆ, ಅದು ಪ್ರತಿಪಾದಿಸುವ ಮತದ ಅರ್ಥವೇನು ಎಂಬುದನ್ನು ಗಮನಿಸಿದಾಗ ಆ ಗ್ರಂಥಕ್ಕೆ ಏನೆಲ್ಲ ವೈಭವಗಳನ್ನು ಕಟ್ಟಿಕೊಡಲಾಗಿದೆಯೋ ಅದು ಸಮರ್ಥನೀಯವಲ್ಲವೆನಿಸುತ್ತದೆ”.

“ಮೊದಲ ಅಧ್ಯಾಯ ಯುದ್ಧದ ಹಿನ್ನೆಲೆಯಲ್ಲಿ ಪ್ರಾರಂಭವಾಗುತ್ತದೆ. ಈ ಯುದ್ಧವಾದರೆ ಅಪಾರ ಜೀವಹಾನಿ ಉಂಟಾಗುತ್ತದೆ ಎಂದು ಅರ್ಜುನ ಹಿಂಜರಿಯುತ್ತಾನೆ. ಒಂದು ಯುದ್ಧಭೂಮಿಯಲ್ಲಿ ನಿಂತು ಯಾರಾದರೂ ಹದಿನೆಂಟು ಅಧ್ಯಾಯಗಳನ್ನು ಚರ್ಚೆ ಮಾಡಲು ಸಾಧ್ಯವಿಲ್ಲ. ಈ ಗೀತೆಯ ಕರ್ತೃ ತನ್ನ ಭಾವನೆಗಳಿಗೆ, ತತ್ವಗಳಿಗೆ ಒಂದು ಸ್ವರೂಪವನ್ನು ಕೊಡಬೇಕಿತ್ತು. ಹೀಗಾಗಿ ಈ ಗ್ರಂಥ ರಚಿಸಿದ್ದಾನೆ. ಯುದ್ಧದ ಸಂದರ್ಭದಲ್ಲಿ ಇಂತಹದೊಂದು ಸಂಭಾಷಣೆ ನಡೆಯಲು ಸಾಧ್ಯವೇ? ಈ ಕೃತಿಯ ಕರ್ತೃ ಸಂವಾದದ ರೂಪದಲ್ಲಿ ತನ್ನ ಸಾಮಾಜಿಕ, ತಾತ್ವಿಕ ಅಭಿಪ್ರಾಯಗಳನ್ನು ಅಭಿವ್ಯಕ್ತಿಸಿದ್ದಾನೆ ಅಷ್ಟೇ” ಎಂದು ವಿವರಿಸಿದರು.

ಡಾ.ಜಿ.ರಾಮಕೃಷ್ಣ

“ಮೊದಲ ಅಧ್ಯಾಯದಲ್ಲಿ-ಪತಂತಿ ಪಿತರೋ ಹ್ಯೇಷಾಂ ಲುಪ್ತಪಿಂಡೋದಕ ಕ್ರಿಯಾಹ- ಎಂಬ ಪದ್ಯವಿದೆ. ಯುದ್ಧ ಮಾಡಿದರೆ ಸಾವಿರಾರು ಜನ ಸಾಯುತ್ತಾರೆ, ಮಕ್ಕಳು ಅನಾಥರಾಗುತ್ತಾರೆ ಎಂಬುದಕ್ಕಿಂತ ಪಿಂಡ ಇಡಲು ಮಕ್ಕಳು ಇರುವುದಿಲ್ಲವಲ್ಲ ಎಂಬ ಆತಂಕ ಇಲ್ಲಿದೆ. ರೂಢಿಗತ ಸಂಪ್ರದಾಯಕ್ಕೆ ಧಕ್ಕೆ ಉಂಟಾಗುತ್ತದೆ ಎಂಬ ಅರ್ಥ ಇಲ್ಲಿದೆ. ಇಷ್ಟೊಂದು ಜನ ಸತ್ತು ಹೋಗುತ್ತಾರೆಂಬ ಘಾಸಿ ಆತನಿಗೆ ಆಗುತ್ತಿಲ್ಲ, ಸತ್ತು ಹೋದವರಿಗೆ ಪಿಂಡ ಇಡಲು ಯಾರು ಇರುವುದಿಲ್ಲ ಎಂಬ ಅಳಲನ್ನು ಇಲ್ಲಿ ವ್ಯಕ್ತಪಡಿಸಲಾಗಿದೆ. ಇದಕ್ಕೆ ಅರ್ಥವಿದೆಯೇ?” ಎಂದು ಪ್ರಶ್ನಿಸಿದರು.

“ಯಾವುದೋ ಆಚರಣೆಗಳು, ನಂಬಿಕೆಗಳು, ಸಾಮಾಜಿಕ ವ್ಯವಸ್ಥೆಯ ಸ್ವರೂಪ ಇತ್ಯಾದಿಗಳ ಕುರಿತು ಇರುವ ಅಭಿಪ್ರಾಯಗಳನ್ನು ಬಲವಂತವಾಗಿ ನಮ್ಮ ಮನಸ್ಸಿನ ಮೇಲೆ ಹೇರುವುದಕ್ಕೆ ಗೀತೆಯನ್ನು ಬರೆಯಲಾಗಿದೆ. ಸಿದ್ಧ ವಿಚಾರಗಳನ್ನು ಒಪ್ಪಬೇಕೆಂದು ಗೀತೆ ಮಂಡಿಸುತ್ತದೆ. ಯಜ್ಞ ಮಾಡಿದರೆ ಮಳೆ ಬರುತ್ತದೆ, ಮಳೆ ಬಂದರೆ ಬೆಳೆಯಾಗುತ್ತದೆ ಎಂದು ಹೇಳಲಾಗುತ್ತದೆ. ಮಳೆ ಬಂದರೆ ಬೆಳೆಯಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತು. ಯಜ್ಞ ಮಾಡಿದರೆ ಮಳೆ ಬರುತ್ತದೆ ಎಂಬುದಕ್ಕೆ ಯಾವ ಪುರಾವೆ ಇದೆ? ನಿಮ್ಮ ಖುಷಿಗೆ ಯಜ್ಞ ಮಾಡುವುದಾದರೆ ಮಾಡಿ, ಆದರೆ ಅದರಿಂದ ಮಳೆ ಬರುತ್ತದೆ ಎಂದು ಮಕ್ಕಳಿಗೆ ಹೇಳಿಕೊಡುವುದು ಸರಿಯಲ್ಲ. ಎಳೆಯ ಮನಸ್ಸಿಗೆ ಮೌಢ್ಯವನ್ನು ತುಂಬಬಾರದು” ಎಂದು ಎಚ್ಚರಿಸಿದರು.

“ನಮ್ಮ ಸಮಾಜದಲ್ಲಿನ ಲೋಪದೋಷಗಳನ್ನು ಕಂಡ ಬುದ್ಧ, ಪರ್ಯಾಯ ಸಮಾಜ ಕಟ್ಟಲು ಆಶಿಸಿದ. ಸಮಾನತೆಯನ್ನು ಬೋಧಿಸಿದ. ಪವಾಡಗಳನ್ನು, ಯಜ್ಞಗಳನ್ನು ಟೀಕಿಸಿದ. ಜಾತೀಯ ಸಂಕೋಲೆಯನ್ನು ಪ್ರಶ್ನಿಸಿದ. ಪ್ರಶ್ನೆ ಮಾಡಲು ಶುರುಮಾಡಿದ ಮೇಲೆ ತಾರತಮ್ಯದ ವ್ಯವಸ್ಥೆಯ ಪರ ಇರುವವರು ಸಮರ್ಥನೆಗೆ ಇಳಿದರು. ಭಗವದ್ಗೀತೆ ಆ ರೀತಿಯ ಸಮರ್ಥನೆಗಾಗಿ ಬಂದಿರುವ ಗ್ರಂಥ. ವರ್ಣ ವ್ಯವಸ್ಥೆ ಎಂಬುದು ಮೂಲಭೂತವಾದ ಸಂಗತಿ. ಅದನ್ನು ಯಾವುದೇ ಕಾರಣಕ್ಕೂ ಪ್ರಶ್ನೆ ಮಾಡಬಾರದು ಎಂಬ ತತ್ವ ಗೀತೆಯಲ್ಲಿ ಇದೆ…”

“ಲೋಕಾಯತರು ಯಜ್ಞಗಳನ್ನು ಟೀಕಿಸಿದರು. ಯಜ್ಞ ಮಾಡಿದರೆ ಸ್ವರ್ಗಕ್ಕೆ ಹೋಗುತ್ತಾರೆ ಎನ್ನುವವರಿಗೆ ಪ್ರಶ್ನೆಗಳನ್ನು ಕೇಳುತ್ತಿದ್ದರು. ಯಜ್ಞದಲ್ಲಿ ಮೇಕೆಯನ್ನೋ, ಕುರಿಯನ್ನೋ ಕಡಿಯುವುದು ಸರಿಯೇ ಎಂದು ಪ್ರಶ್ನಿಸಿದರು. ’ಯಜ್ಞದಲ್ಲಿ ಬಳಸಲಾಗುವ ಪ್ರಾಣಿಗಳು ಸ್ವರ್ಗಕ್ಕೆ ಹೋಗುತ್ತವೆ’ ಎಂದವರಿಗೆ ಲೋಕಾಯತರು, ’ಪ್ರಾಣಿ ಸ್ವರ್ಗಕ್ಕೆ ಹೋಗುತ್ತೆ ಎನ್ನುವುದಾದರೆ ನಿಮ್ಮ ಅಪ್ಪನನ್ನೇ ಕಡಿದು ಸ್ವರ್ಗಕ್ಕೆ ಕಳುಹಿಸಿಬಿಡಬಹುದಲ್ಲ’ ಎಂದು ಮರುತ್ತರು ನೀಡಿದರು. ಇಂತಹ ಯಜ್ಞಗಳನ್ನು ಸಮರ್ಥಿಸುವ ಗ್ರಂಥ ಗೀತೆ. ಸಮಾಜದ ತರತಮವನ್ನು ಪ್ರಶ್ನಿಸುವ ಬಣ ಒಂದು ಕಡೆ ಇದ್ದರೆ, ಅದನ್ನು ಸಮರ್ಥನೆ ಮಾಡುವ ಇನ್ನೊಂದು ಬಣ ಇರುತ್ತದೆ. ಗೀತೆಯು ತಾರತಮ್ಯವನ್ನು ಸಮರ್ಥಿಸುವ ಬಣದಿಂದ ರಚನೆಯಾಗಿದೆ. ’ಗೀತೆಯ ಪ್ರಕಾರ ಅಸಮಾನತೆ ಎಂಬುದು ಮೂಲಭೂತ ಲಕ್ಷಣ’ವಾಗಿತ್ತೆಂಬುದನ್ನು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಕ್ಕಳಿಗೆ ಹೇಳಿಕೊಡುವುದಾದರೆ ಹೇಳಿ. ಆಗ ಭಗವದ್ಗೀತೆಯನ್ನು ಸಮರ್ಥನೆ ಮಾಡಿದಂತೆ ಆಗುವುದಿಲ್ಲ. ಅದನ್ನು ಪರಿಚಯಿಸಿಕೊಟ್ಟು, ಅದರಲ್ಲಿನ ಲೋಪದೋಷಗಳನ್ನು ಗುರುತಿಸಿದ ಹಾಗೆ ಆಗುತ್ತದೆ” ಎಂದು ಅಭಿಪ್ರಾಯಪಟ್ಟರು.

“ಯಾವ ಹಂತದಲ್ಲಿ ಮಕ್ಕಳಿಗೆ ಗೀತೆಯನ್ನು ಹೇಳಿಕೊಡುತ್ತೇವೆ ಎಂಬುದು ಮುಖ್ಯ. ಹತ್ತನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗೆ ಸಮಾಜದಲ್ಲಿನ ತಾರತಮ್ಯವನ್ನು ತಿಳಿಸಿಕೊಟ್ಟು, ಅದನ್ನು ಹೇಗೆ ಹೋಗಲಾಡಿಸಬೇಕೆಂದು ಹೇಳುವುದು ಸರ್ವಥಾ ಸ್ವಾಗತಾರ್ಹ. ಬದಲಾವಣೆಗೆ ವಿರುದ್ಧವಾದ ಗೀತೆಯಲ್ಲಿ ಅಸಮಾನತೆಯನ್ನು ಭಗವಂತನೇ ನಿರ್ಮಾಣ ಮಾಡಿದ್ದಾನೆ ಎಂದು ಪ್ರತಿಪಾದನೆ ಮಾಡಲಾಗಿದೆ. ಮಕ್ಕಳಿಗೆ ವಿಕಾಸದ ಹಂತವನ್ನು ತಿಳಿಸಿಕೊಡಬೇಕೇ ಹೊರತು ಗೀತೆಯನ್ನಲ್ಲ” ಎಂದು ಡಾ. ಜಿ.ಆರ್.ಹೇಳಿದರು.

“ಗೀತೆಯಲ್ಲಿ ಒಂದು ಕಡೆ ತಾಮಸಿಕ ಗುಣ ಉಳ್ಳವರನ್ನು ಟೀಕೆ ಮಾಡುತ್ತಾ, ಅವರನ್ನು ನರಾಧಮರು ಎಂದು ಕರೆಯಲಾಗಿದೆ. ತಾಮಸಿಕ ಗುಣ ಇರುವವರು ಯಾರು ಎಂದು ಕೇಳಿದರೆ- ’ಶೂದ್ರರು’ ಎನ್ನುತ್ತದೆ ಗೀತೆ. ಶೂದ್ರರಷ್ಟು ದೈಹಿಕವಾಗಿ ಕೆಲಸ ಮಾಡುವವರು ಯಾರೂ ಇಲ್ಲ. ದೈಹಿಕ ಶ್ರಮದಿಂದ ಉತ್ಪಾದನೆ ಮಾಡಿ, ಇಡೀ ಸಮಾಜವನ್ನು ಪೋಷಿಸುವ ವ್ಯಕ್ತಿಯನ್ನು ತಾಮಸ ಗುಣದವನು ಎನ್ನುವುದು ಸರಿಯೇ? ಆತನಿಗೆ ವಿದ್ಯೆ ನೀಡಬಾರದು ಎನ್ನುವುದು ಸರಿಯೇ? ಗೀತೆಯ ಹದಿನಾರನೇ ಅಧ್ಯಾಯದಲ್ಲಿ ಇದು ಬರುತ್ತದೆ. ಶೂದ್ರರನ್ನು ನರಾಧಮರು, ನಾಮಮಾತ್ರವಾದ ಯಜ್ಞ ಮಾಡುವವರು ಎಂದು ಹೀಯಾಳಿಸಲಾಗಿದೆ. ಮಂತ್ರಗಳನ್ನು ಹೇಳದವರನ್ನು ಹಂಗಿಸಲಾಗಿದೆ” ಎಂದು ತಿಳಿಸಿದರು.

ಡಾ.ಬಿ.ಆರ್.ಅಂಬೇಡ್ಕರ್ ದೃಷ್ಟಿಯಲ್ಲಿ ’ಭಗವದ್ಗೀತೆ’

ಭಗವದ್ಗೀತೆಯ ಕುರಿತು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಮಾಡಿರುವ ಟಿಪ್ಪಣಿಗಳು ಮಹತ್ವದ್ದಾಗಿವೆ. ಈ ವಿಚಾರಗಳನ್ನು ಚಿಂತಕರಾದ ಶಿವಸುಂದರ್ ತಮ್ಮ ’ವಾರ್ತಾಭಾರತಿ’ಯ ಅಂಕಣ ಬರಹದಲ್ಲಿ ವಿಸ್ತೃತವಾಗಿ ಇತ್ತೀಚೆಗೆ ಚರ್ಚಿಸಿದ್ದರು.

’ಚಾತುವರ್ಣ್ಯಂ ಮಯಾ ಸೃಷ್ಟ್ಯಂ- ಗುಣಕರ್ಮ ವಿಭಾಗಶಃ’- ಅಂದರೆ ಸಮಾಜವನ್ನು ಬಾಹ್ಮಣ, ಕ್ಷತ್ರೀಯ, ವೈಶ್ಯ, ಶೂದ್ರವೆಂದು ನಾಲ್ಕು ಭಾಗಗಳನ್ನಾಗಿ ವಿಂಗಡಿಸುವುದು- ನಾನೇ ಸೃಷ್ಟಿಸಿದವನು ಮತ್ತು ನಾನೇ ಅವರವರ ಜಾಯಮಾನಕ್ಕನುಗುಣವಾಗಿ ವಿವಿಧ ಕಸುಬುಗಳನ್ನು ಅವರಿಗೆ ವಹಿಸಿದವನು. ಈ ಚಾತುರ್ವರ್ಣ್ಯವನ್ನೂ ನಾನೇ ಸೃಷ್ಟಿಸಿದವನು.” (ಗೀತೆ ಅಧ್ಯಾಯ 4. ಶ್ಲೋಕ 13)

ಡಾ.ಬಿ.ಆರ್.ಅಂಬೇಡ್ಕರ್

“ಭಗವದ್ಗೀತೆ ಮತ್ತು ಮಹಾಭಾರತಗಳ ಹುಟ್ಟಿನ ಪೂರ್ವದಲ್ಲಿ ಸಮಾಜವು ಅಪ್ಪಿಕೊಂಡಿದ್ದ ಬ್ರಾಹ್ಮಣ್ಯವನ್ನು ಮತ್ತದರ ಮೇಲುಕೀಳು ಸಿದ್ಧಾಂತವನ್ನು ಅಧ್ಯಾತ್ಮಿಕವಾಗಿಯೂ ಮತ್ತು ಸಾಮಾಜಿಕವಾಗಿಯೂ ಬೌದ್ಧ ಧರ್ಮ ಸೋಲಿಸಿ, ಸಮಾನತೆಯ ಆಶಯ ಮತ್ತು ಬದುಕನ್ನು ಸೃಷ್ಟಿಸಿತ್ತು. ಪುಷ್ಯಮಿತ್ರನ ನೇತೃತ್ವದಲ್ಲಿ ಬ್ರಾಹ್ಮಣ್ಯದ ದಿಗ್ವಿಜಯವು ನಡೆದ ಮೇಲೆ ತತ್ವಶಾಸ್ತ್ರದಲ್ಲಿದ್ದ ಬುದ್ಧಪೂರ್ವದ ಜೈಮುನಿಯ ಪೂರ್ವ ಮೀಮಾಂಸೆ ಹಾಗೂ ಸಾಂಖ್ಯ ದರ್ಶನದಲ್ಲಿದ್ದ ಗುಣಾಧಾರಿತ ಸಮಾಜ ವಿಭಜನೆ, ದೇಹ-ಆತ್ಮಗಳ ಪ್ರತ್ಯೇಕತೆಗಳನ್ನು ಭಗದ್ಗೀತೆಯು ಮತ್ತೆ ಬಳಸಿಕೊಂಡು ಮೇಲು ಕೀಳನ್ನು ಪುನರ್ ಸ್ಥಾಪಿಸಿತು. ಈ ಕ್ರೂರ ವರ್ಣ ವಿಭಜನೆಗೆ ಬೌದ್ಧ ಪೂರ್ವದಲ್ಲಿ ಇಲ್ಲದಿದ್ದ ದೈವಿಕ ಒಪ್ಪಿಗೆಯನ್ನು ಭಗವದ್ಗೀತೆಯ ಮುಖಾಂತರ ಒದಗಿಸಿ ಅದರ ವಿರುದ್ಧ ಧ್ವನಿ ಎತ್ತದಂತೆ ಮಾಡಲಾಯಿತು. ಹಾಗೆಯೇ ಅದರ ಜೊತೆಜೊತೆಗೆ ಕರ್ಮ ಸಿದ್ಧಾಂತ ಹಾಗೂ ಕರ್ಮಾಧಾರಿತ ಪುನರ್ಜನ್ಮ ಸಿದ್ಧಾಂತಗಳನ್ನು ಭಗವದ್ಗೀತೆ ಬಳಸಿಕೊಂಡು ಕರ್ಮಫಲದಂತೆ ಬದುಕು ಎಂಬ ಸಮ್ಮತಿಯನ್ನು ರೂಢಿಸಿತು” ಎಂದು ಅಂಬೇಡ್ಕರ್ ವಿವರಿಸಿದ್ದಾರೆ.

ಸ್ವಧರ್ಮೇ ನಿಧನಂ ಶ್ರೇಯಃ- ತಮ್ಮ ತಮ್ಮ ಧರ್ಮವನ್ನು ಅನುಸರಿಸುತ್ತಾ ಸಾಯುವುದೇ ಲೇಸು.

“ಬೇರೆ ವರ್ಣದವರ ಕಸುಬನ್ನು ಅನುಸರಿಸುವುದು ಸುಲಭವಾಗಿದ್ದರೂ ತನ್ನದೇ ವರ್ಣದ ಕಸುಬನ್ನು ಅನುಸರಿಸುವುದೇ ಜಾಣತನ. ಸಾಕಷ್ಟು ದಕ್ಷತೆಯಿಂದ ಅದನ್ನು ಒಬ್ಬನು ನಿರ್ವಹಿಸಲಾಗದಿದ್ದರೂ ತನ್ನ ವರ್ಣದ ಕಸುಬೇ ಶ್ರೇಯಸ್ಕರವಾದುದು. ಒಬ್ಬನು ತನ್ನ ವರ್ಣದ ಕಸುಬನ್ನು ಅನುಸರಿಸುವುದರಲ್ಲಿ ಆನಂದವಿದೆ. ಇದರ ಫಲವಾಗಿ ಅವನಿಗೆ ಸಾವು ಸಂಭವಿಸಿದರೂ ಚಿಂತೆಯಿಲ್ಲ. ಆದರೆ ಬೇರೆ ವರ್ಣದವರ ಕಸುಬನ್ನು ಅನುಸರಿಸುವುದು ಮಾತ್ರ ಅಪಾಯಕಾರಿ.” (ಅಧ್ಯಾಯ-3, ಶ್ಲೋಕ 35)

“ಒಂದೆಡೆ ವರ್ಣಾಶ್ರಮವೆಂದರೆ ಜಾತಿಪದ್ಧತಿಯಂತೆ ಜಡವಲ್ಲ. ಯಾರು ಬೇಕಾದರೂ ಯಾವ ವರ್ಣಕ್ಕೆ ಬೇಕಾದರೂ ಸೇರಿಕೊಳ್ಳಬಹುದು. ಆದರೆ ಅದಕ್ಕೆ ಬೇಕಾದಂತಹ ಗುಣವನ್ನು ರೂಢಿಸಿಕೊಳ್ಳಬೇಕಷ್ಟೆ ಎಂದು ಭಗವದ್ಗೀತೆಯನ್ನು ಮತ್ತು ಹಿಂದೂ ಧರ್ಮದ ತತ್ವಶಾಸ್ತ್ರವನ್ನು ಸಮರ್ಥಿಸಿಕೊಳ್ಳುತ್ತಿದ್ದ ಗಾಂಧಿ, ತಿಲಕರಿಗೆ ಈ ಶ್ಲೋಕವನ್ನು ಉದ್ಧರಿಸಿ ಅಂಬೇಡ್ಕರ್ ಪಾಟೀ ಸವಾಲು ಹಾಕುತ್ತಾರೆ” ಎನ್ನುತ್ತಾರೆ ಶಿವಸುಂದರ್.

“ಯಾರು ಯಾವ ವರ್ಣವನ್ನು ಬೇಕಾದರೂ ಸೇರಬಹುದಾಗಿದ್ದರೆ, ಆಯಾ ಧರ್ಮಗಳಲ್ಲೇ ಇದ್ದು ಸಾಯಬೇಕೆಂದು ಹೇಳುವ ಅಗತ್ಯವೇನಿತ್ತು. ಇಲ್ಲಿ ಧರ್ಮವೆಂದರೆ ಕುಲಧರ್ಮವೇ ಹೊರತು ವಿಶಾಲಾರ್ಥದಲ್ಲಿ ಬಳಸಿಲ್ಲ ಎಂದು ಅಂಬೇಡ್ಕರ್ ಇತರ ಹಲವಾರು ಶ್ಲೋಕಗಳನ್ನು ಉದ್ಧರಿಸಿ ಸಾಬೀತುಪಡಿಸುತ್ತಾರೆ” ಎಂದು ಅಭಿಪ್ರಾಯಪಡುತ್ತಾರೆ.

ಶಿವಸುಂದರ್

“ಏಕೆಂದರೆ ಭಗವದ್ಗೀತೆ ಇದ್ದಕ್ಕಿದ್ದಂತೆ ಶೂನ್ಯದಲ್ಲಿ ಉದ್ಭವಿಸಿದ್ದಲ್ಲ. ಅದು ನಿರ್ದಿಷ್ಟ ಕಾಲಸಂದರ್ಭದಲ್ಲಿ ಹುಟ್ಟಿಕೊಂಡಿತು. ಆ ಸಂದರ್ಭ ಬುದ್ಧಕಾಲದಲ್ಲಿ ಸಂಭವಿಸಿದ್ದ ವರ್ಣಸಂಕರಗಳು ಮತ್ತೆ ಆಗದಂತೆ ತಡೆಯುವುದಕ್ಕೆ ಬ್ರಾಹ್ಮಣ್ಯವು ದಾರಿಗಳನ್ನು ಹುಡುಕುತ್ತಿದ್ದ ಕಾಲ. ಅದಕ್ಕೆ ಬೇಕಾದ ಕಟ್ಟುಪಾಡುಗಳನ್ನು ದೈವಿಕ ನಿರ್ಣಯವೆಂದು ಸ್ಥಾಪಿಸುತ್ತಿದ್ದ ಬ್ರಾಹ್ಮಣ್ಯದ ಪುನರುತ್ಥಾನದ ಕಾಲ ಸಂದರ್ಭವೆಂದು” ಅಂಬೇಡ್ಕರ್ ಹೇಳುತ್ತಾರೆ.

“ತಮ್ಮ ಕಸುಬುಗಳಿಗೆ ಚೆನ್ನಾಗಿ ಹೊಂದಿಕೊಂಡಿರುವ ಅವಿದ್ಯಾವಂತರ ನಂಬಿಕೆಗಳನ್ನು ವಿದ್ಯಾವಂತರು ಅಭದ್ರಗೊಳಿಸಬಾರದು. ಅವನ ವರ್ಣಕ್ಕನುಸಾರವಾದ ಕಸುಬಿನಲ್ಲಿ ಅವನೇ ಮೊದಲು ತೊಡಗಬೇಕು.”

“ಬಳಿಕ ಇತರರೂ ಅವರವರ ವರ್ಣಾನುಸಾರವಾದ ಕಸುಬನ್ನು ಅಂಗೀಕರಿಸುವಂತೆ ಮಾಡಬೇಕು. ಒಬ್ಬ ವಿದ್ಯಾವಂತನು ತನ್ನ ಉದ್ಯೋಗಕ್ಕೆ ಅಂಟಿಕೊಳ್ಳದೆ ಇರಬಹುದು. ಆದರೆ ಅವಿದ್ಯಾವಂತರೂ ಮಂದಮತಿಗಳೂ ಆದವರು ತಮ್ಮ ಕಸುಬಿಗೆ ಅಂಟಿಕೊಂಡಿರುತ್ತಾರೆ. ವಿದ್ಯಾವಂತರು ಅವರನ್ನು ಕೆಡಿಸಬಾರದು. ಅವರ ಕಸುಬನ್ನು ತ್ಯಜಿಸಿ ಅಡ್ಡಹಾದಿ ಹಿಡಿಯುವಂತೆ ಅವರನ್ನು ಪ್ರೇರೇಪಿಸಬಾರದು.” (ಅಧ್ಯಾಯ-3, ಶ್ಲೋಕ 26, 29)

ಭಗವದ್ಗೀತೆಯಲ್ಲಿ ಯಾವುದೇ ನೀತಿಯಾಗಲೀ, ನ್ಯಾಯವಾಗಲೀ ಇಲ್ಲ, ಅದರಲ್ಲಿರುವುದು ಕೇವಲ ಬ್ರಾಹ್ಮಣ ಶ್ರೇಷ್ಟತೆಯನ್ನು ಸ್ಥಾಪಿಸುವ ಹುನ್ನಾರ ಮಾತ್ರ ಎಂಬುದಕ್ಕೆ ಈ ಶ್ಲೋಕವನ್ನು ಉದಾಹರಿಸುತ್ತಾ ಅಂಬೇಡ್ಕರ್ ಅವರು ವಿವರವಾದ ವಿಶ್ಲೇಷಣೆಯನ್ನು ಕೊಡುತ್ತಾರೆ. ಅಷ್ಟು ಮಾತ್ರವಲ್ಲ. ತನ್ನ ಪ್ರತಿಭೆಯನ್ನು ಬಳಸಿಕೊಂಡು ಕೂಡ ಒಬ್ಬ ಅಬ್ರಾಹ್ಮಣನು ಮೇಲಕ್ಕೇರುವುದನ್ನು ಅಡ್ಡಹಾದಿ, ಪಾಪ ಎಂದು ಭಗವದ್ಗೀತೆಯೆಂಬ ದೈವವಾಣಿಯ ಮೂಲಕ ಬ್ರಾಹ್ಮಣರು ಸ್ಥಾಪಿಸುತ್ತಾರೆ ಎಂದು ಅಂಬೇಡ್ಕರ್ ಗೀತೆಯೆ ಅಸಲೀ ಹುನ್ನಾರವನ್ನು ಬಯಲು ಮಾಡುತ್ತಾರೆ.

“ಅಯ್ಯಾ, ಅರ್ಜುನ! ಕರ್ತವ್ಯ ಮತ್ತು ಉದ್ಯೋಗಗಳಿಗೆ ಸಂಬಂಧಿಸಿದ ಈ ಧರ್ಮ (ಅಂದರೆ ಚಾತುರ್ವರ್ಣ್ಯನ್ನು ಸಾರಿಯಾದ ಧರ್ಮ) ಅವನತಿ ಹೊಂದಿದಾಗಲೆಲ್ಲಾ ನಾನೇ ಭೂಮಿಯಲ್ಲಿ ಅವತರಿಸಿ ಈ ಅವನತಿಗೆ ಕಾರಣರಾದವರನ್ನು ಶಿಕ್ಷಿಸಿ. ಮತ್ತೆ ಅದನ್ನು ಸುಸಿತ್ಥಿಗೆ ತರುತ್ತೇನೆ.” (ಅಧ್ಯಾಯ-4, ಶ್ಲೋಕ 8)

“ಈ ಆಧುನಿಕ ಯುಗದಲ್ಲಿ ಕೃಷ್ಣ ಕೊಲೆಗಾರನ ವಕೀಲನಾಗಿ ಈ ಸಮರ್ಥನೆಗಳನ್ನು ನೀಡಿದರೆ ಕೃಷ್ಣನನ್ನು ಹುಚ್ಚಾಸ್ಪತ್ರೆಗೆ ಸೇರಿಸುತ್ತಾರಷ್ಟೆ ಎಂದು ಅಂಬೇಡ್ಕರ್ ಈ ವಾದಗಳನ್ನು ಲೇವಡಿ ಮಾಡುತ್ತಾರೆ. ಬೌದ್ಧರ ಮೇಲೆ ಹಾಗೂ ಬ್ರಾಹ್ಮಣ್ಯವನ್ನು ಒಪ್ಪದವರ ಮೇಲೆ ಆಗಿನ ಬ್ರಾಹ್ಮಣೀಯ ಸಾಮ್ರಾಟರು ನಡೆಸುತ್ತಿದ್ದ ಹಿಂಸೆಯನ್ನು ಸಮರ್ಥಿಸಿಕೊಳ್ಳುವುದೇ ಇದರ ಉದ್ದೇಶ. ಅಷ್ಟು ಮಾತ್ರವಲ್ಲದೆ ಮುಂದೆಯೂ ಕನಿಕರ ಹಾಗೂ ಭ್ರಾತೃತ್ವ ಇಲ್ಲದ ಬ್ರಾಹ್ಮಣೀಯ ಸಾಮಾಜಿಕ ವ್ಯವಸ್ಥೆಯನ್ನು ಕಾಪಿಟ್ಟುಕೊಳ್ಳಲು ಬೇಕಾಗುವ ಹಿಂಸೆಯನ್ನು ಸರ್ವಸಹಜವಾಗಿಸಲೆಂದೇ ಭಗವದ್ಗೀತೆ ಸೃಷ್ಟಿಯಾಗಿದೆ ಎಂದು ಅಂಬೇಡ್ಕರ್ ಸಾಬೀತುಪಡಿಸುತ್ತಾರೆ” ಎನ್ನುತ್ತಾರೆ ಶಿವಸುಂದರ್.

ನ್ಯಾಯಪಥದ ಜೊತೆ ಮಾತನಾಡಿದ ಹೆಸರು ಹೇಳಲಿಚ್ಛಿಸದ ಮತ್ತೊಬ್ಬ ಶಿಕ್ಷಣತಜ್ಞರು, “ಗೀತೆಯ ಮೂಲಕ ನೀತಿ ಹೇಳಿಕೊಡಲು ಸಾಧ್ಯವೇ? ಯಥಾಸ್ಥಿತಿಯನ್ನು ಕಾಪಾಡುವ ಮನಸ್ಥಿತಿ ಇರುವ ಪಕ್ಷಗಳು ಇಂತಹ ಪ್ರಯತ್ನ ಮಾಡುತ್ತವೆ. ಭಗವದ್ಗೀತೆ ಶ್ರೇಣೀಕೃತ ಯಥಾಸ್ಥಿತಿಯನ್ನು ಭದ್ರ ಮಾಡುತ್ತದೆ. ಇವರ ಹಿಡನ್ ಅಜೆಂಡಾವೇ ಇದಾಗಿದೆ. ಈಸೋಪನ ಕತೆಗಳಲ್ಲಿ ನೀತಿ ಪಾಠ ಇದೆ. ಮಕ್ಕಳಿಗೆ ಇವುಗಳನ್ನು ಹೇಳಿಕೊಡುವುದು ಸೂಕ್ತ” ಎಂದರು.

“ಮನುಸ್ಮೃತಿಯ ವಿಚಾರಗಳನ್ನೇ ಭಗವದ್ಗೀತೆ ಹೇಳುತ್ತದೆ. ಸಂವಿಧಾನ ಮತ್ತು ಈ ನೆಲದ ಕಾನೂನು ಎಲ್ಲರಿಗೂ ಒಂದೇ ರೀತಿಯ ಶಿಕ್ಷೆಯನ್ನು ವಿಧಿಸುತ್ತವೆ. ಆದರೆ ಮನುಸ್ಮೃತಿ ಹಾಗೂ ಭಗವದ್ಗೀತೆಯು ವರ್ಣಕ್ಕೆ ಅನುಗುಣವಾಗಿ ಬೇರೆಬೇರೆ ಶಿಕ್ಷೆಗಳನ್ನು ವಿಧಿಸುವ ಮಾತುಗಳನ್ನು ಆಡುತ್ತವೆ. ಬ್ರಾಹ್ಮಣನಿಗೆ ಒಂದು ರೀತಿಯ ಶಿಕ್ಷೆಯಾದರೆ, ಶೂದ್ರನಿಗೆ ಬೇರೆಯದೇ ಶಿಕ್ಷೆ. ಇಂತಹ ಪಠ್ಯವನ್ನು ಮಕ್ಕಳಿಗೆ ಹೇಳಿಕೊಡುವುದು ಸೂಕ್ತವಲ್ಲ ಎಂದು ಹೇಳಿದರು.

ವೈರುಧ್ಯಗಳ ಕೃತಿ ಗೀತೆ: ಮೂಡ್ನಾಕೂಡು ಚಿನ್ನಸ್ವಾಮಿ

“ಭಗವದ್ಗೀತೆ ಒಳ್ಳೆಯ ಗ್ರಂಥವಲ್ಲ. ಈ ಕುರಿತು ಡಾ.ಬಿ.ಆರ್.ಅಂಬೇಡ್ಕರ್ ವಿಸ್ತೃತವಾಗಿ ಬರೆದಿದ್ದಾರೆ. ಗೀತೆಯಲ್ಲಿ ನೆಗಟಿವ್ ವಿಚಾರಗಳೇ ತುಂಬಿವೆ. ಯುದ್ಧ ಮತ್ತು ಹಿಂಸೆಯನ್ನು ಪ್ರತಿಪಾದಿಸುವ ಕಾರಣಕ್ಕೆ ಗೀತೆಯನ್ನು ಒಂದು ಕಾಲಘಟ್ಟದಲ್ಲಿ ರಷ್ಯಾದಲ್ಲಿ ಬ್ಯಾನ್ ಮಾಡಲಾಗಿತ್ತು. ಮನಸ್ಸಿನ ಬಗ್ಗೆ ಇಲ್ಲಿ ಹೇಳಿರುವ ವಿಚಾರಗಳು ಧಮ್ಮಪದದಿಂದ ನಕಲು ಮಾಡಿದ ಸಂಗತಿಗಳಾಗಿವೆ. ಇನ್ನೊಂದೆಡೆ ಯುದ್ಧವನ್ನು ವೈಭವೀಕರಿಸಲಾಗಿದೆ. ಗೀತೆಯು ವೈರುಧ್ಯಗಳಿಂದ ಕೂಡಿದ ಕೃತಿ” ಎನ್ನುತ್ತಾರೆ ಕವಿ ಮೂಡ್ನಾಕೂಡು ಚಿನ್ನಸ್ವಾಮಿ.

ಮೂಡ್ನಾಕೂಡು ಚಿನ್ನಸ್ವಾಮಿ

“ಗೀತೆಗೆ ನೈತಿಕ ಮೌಲ್ಯವೇ ಇಲ್ಲ. ಯುದ್ಧ ಮಾಡು ಎನ್ನುವುದು ನೈತಿಕ ಮೌಲ್ಯವೇ? ವ್ಯಭಿಚಾರ ಮಾಡುವುದು ನೈತಿಕ ಮೌಲ್ಯವೇ? ಅಲ್ಲೊಂದು ಇಲ್ಲೊಂದು ಒಳ್ಳೆಯ ಮಾತುಗಳು ಎಲ್ಲ ಕೃತಿಯಲ್ಲೂ ಸಿಗುತ್ತವೆ. ಆದರೆ ಇಡೀ ಗೀತೆಯ ಆಶಯವನ್ನು ಸಮಗ್ರವಾಗಿ ನೋಡಿದರೆ ಇಲ್ಲಿ ಯಾವುದೇ ನೈತಿಕತೆ ಕಾಣುವುದಿಲ್ಲ” ಎಂದರು.

ಮಾಡಬೇಕಾದದ್ದು ಬಿಟ್ಟು…

ಸರ್ಕಾರ ಅಥವಾ ಶಿಕ್ಷಣ ಇಲಾಖೆ ಮಾಡಬೇಕಾದ ಕೆಲಸಗಳು ಸಾಕಷ್ಟಿವೆ. ರಾಜ್ಯದ ಸುಮಾರು 13,000 ಶಾಲೆಗಳನ್ನು ಪ್ರತಿನಿಧಿಸುವ ಎರಡು ಸಂಘಗಳು “ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವು ಭ್ರಷ್ಟಾಚಾರ ನಡೆಸುತ್ತಿದೆ” ಎಂದು ಆರೋಪಿಸಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿವೆ.

ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಅಸೋಸಿಯೇಟೆಡ್ ಮ್ಯಾನೇಜ್‌ಮೆಂಟ್ಸ್ ಮತ್ತು ನೋಂದಾಯಿತ ಅನುದಾನ ರಹಿತ ಖಾಸಗಿ ಶಾಲೆಗಳ ನಿರ್ವಹಣಾ ಸಂಘವು, ಪತ್ರ ಬರೆದಿದ್ದು ಶಿಕ್ಷಣ ಸಂಸ್ಥೆಗಳಿಗೆ ಮಾನ್ಯತೆ ಪ್ರಮಾಣ ಪತ್ರ ನೀಡಲು ರಾಜ್ಯ ಶಿಕ್ಷಣ ಇಲಾಖೆಯು ಲಂಚಕ್ಕೆ ಬೇಡಿಕೆಯಿಡುತ್ತಿರುವ ಆರೋಪದ ಕುರಿತು ಪರಿಶೀಲಿಸುವಂತೆ ಪತ್ರ ಬರೆದು ಪ್ರಧಾನಿ ಮೋದಿಯನ್ನು ಒತ್ತಾಯಿಸಿವೆ. ಪಠ್ಯಪುಸ್ತಕ ಪರಿಷ್ಕರಣೆಯ ಗೊಂದಲ ಇನ್ನೂ ಬಗೆಹರಿದಿಲ್ಲ. ಕೋವಿಡ್ ನಂತರದಲ್ಲಿ ಮಕ್ಕಳ ಶಿಕ್ಷಣ ಕುಂಠಿತವಾಗಿದೆ. ಮಾಡಲು ಕೈತುಂಬಾ ಕೆಲಸವಿದೆ. ಇದ್ಯಾವುದನ್ನೂ ಮಾಡದೆ ಕೇವಲ ಬ್ರಾಹ್ಮಣ್ಯವನ್ನೇ ರಾರಾಜಿಸುವ ಯೋಜನೆಗಳತ್ತ ಶಿಕ್ಷಣ ಸಚಿವರು ಗಮನ ಹರಿಸುತ್ತಿದ್ದಾರೆ. ’ಹಿಂದುತ್ವ’ ಅಜೆಂಡಾಗಳನ್ನು ಮಕ್ಕಳ ಮೇಲೆ ಹೇರಲು ಹೊರಟಿರುವುದು ದುರಂತದ ಸಂಗತಿಯಾಗಿದೆ.


ಇದನ್ನೂ ಓದಿ: ಡಿಸೆಂಬರ್‌ನಿಂದ ಶಾಲಾ-ಕಾಲೇಜುಗಳಲ್ಲಿ ಭಗವದ್ಗೀತೆ ತರಗತಿ: ಶಿಕ್ಷಣ ಸಚಿವ ಬಿಸಿ ನಾಗೇಶ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...