ನಮ್ಮ ಅಪರೂಪದ ಶಿಕ್ಷಣ ಸಚಿವ ಬಿ.ಸಿ ನಾಗೇಶರಿಗೆ ಬಹಳ ಹಿಂದೆಯೇ ತಲೆಬಿಸಿಯಾಗಿ ಪುರೋಹಿತಶಾಹಿ ಪುನರುತ್ಥಾನದ ಸಲಕರಣೆಗಳನ್ನು ಶಿಕ್ಷಣ ಇಲಾಖೆಯ ಪಠ್ಯಪುಸ್ತಕದೊಳಕ್ಕೆ ತುರುಕಲು ಹೋಗಿ ತರಾಟೆಗೆ ಗುರಿಯಾಗಿದ್ದು ಇತಿಹಾಸ. ನಂತರ ಕೆಲವು ಪಠ್ಯಗಳನ್ನು ಸರಿಮಾಡಿದ ಬುಕ್‌ಲೆಟ್ ಒಂದನ್ನು ಶಾಲೆಗೊಂದರಂತೆ ಹಂಚಿಹೋಗಿದ್ದ ಮರ್ಯಾದೆಯನ್ನು ಉಳಿಸಿಕೊಳ್ಳಲು ಪ್ರಯತ್ನಪಟ್ಟ ಇವರು ಈಗ ಮಕ್ಕಳು ಒಂದೆಡೆ ಕುಳಿತು ಧ್ಯಾನ ಮಾಡಿ ನಂತರ ಪಾಠ ಓದಿಕೊಳ್ಳಬೇಕೆಂದು ಹಠ ಹಿಡಿದಿದ್ದಾರಂತಲ್ಲಾ. ಇಂತಹ ಆಲೋಚನೆಗೂ ಮೊದಲು ಇವರು ಸಕಾಲಕ್ಕೆ ಮಕ್ಕಳಿಗೆ ಪಠ್ಯ, ಬಟ್ಟೆ ಬೂಟ್ಸು ಇತ್ಯಾದಿ ಅಗತ್ಯಗಳನ್ನು ಒದಗಿಸುವುದನ್ನು ಬಿಟ್ಟು ಬಿಟ್ಟಿ ಸಲಹೆಯಾದ ಧ್ಯಾನದ ಸೂಚನೆ ಕಂಡುಕೇಳರಿಯದ ಹಾಸ್ಯಾಸ್ಪದ ಸಂಗತಿಯಾಗಿದೆಯಲ್ಲಾ. ಇವರು ಧ್ಯಾನ ಮಾಡಿ ಎಂದು ಹೇಳುತ್ತಿರುವ ಮಕ್ಕಳು ಒಂದು ಕ್ಷಣ ಎಲ್ಲೂ ನಿಲ್ಲದೆ ಹಕ್ಕಿ ಪಕ್ಷಿಗಳಂತೆ ಹಾರಾಡುವಂತವರು, ಜಿಂಕೆ ಮೊಲಗಳಂತೆ ನೆಗೆದಾಡುವಂತವರು; ಇದನ್ನ ಗ್ರಹಿಸಿದ ಈ ನಾಗೇಶ್ ತಮ್ಮ ವಠಾರದ ವೃದ್ಧರು ಕುಳಿತಿರುವುದನ್ನು ನೋಡಿ ಅದನ್ನೇ ಧ್ಯಾನ ಎಂದುಕೊಂಡು ಮಕ್ಕಳಿಗೂ ಬೋಧಿಸತೊಡಗಿದ್ದಾರೆ. ಒಂದು ವೇಳೆ ಧ್ಯಾನ ಆರಂಭಗೊಂಡರೆ ಅದರ ಆರಂಭಕ್ಕೊಂದು ಶ್ಲೋಕದ ಪ್ರಾರ್ಥನೆಯ ಸರ್ಕ್ಯುಲರ್ ಹೊರಡುತ್ತವೆ. ಆನಂತರ ಮತ್ತೊಂದು; ಧ್ಯಾನ ಮುಗಿಸಿದ ಮಕ್ಕಳಿಗೆಲ್ಲಾ ಎದೆಯ ಮೇಲೆ ಕೈಯಿಟ್ಟು ನಮಸ್ತೆ ಸದಾವತ್ಸಲೇ ಮಾತೃಭೂಮಿ ಎಂದು ಹೇಳಿಕೊಡುವುದಿಲ್ಲ ಎನ್ನುವುದು ಯಾವ ಗ್ಯಾರಂಟಿ ಎನ್ನಲಾಗುತ್ತಿದೆಯಲ್ಲಾ, ಥೂತ್ತೇರಿ.
******
ತುಮಕೂರಿನ ಆಸ್ಪತ್ರೆಯಲ್ಲಿ ಗರ್ಭಿಣಿಗೆ ಹೆರಿಗೆ ಮಾಡಲು ದಾಖಲೆ ಕೇಳಿದ ವೈದ್ಯರ ನಡವಳಿಕೆಯಿಂದ ಕಂಗಾಲಾದ ತಾಯಿ, ತನ್ನ ದಾಖಲೆಯನ್ನೇ ಆಳಿಸಿ ಹೊರಟುಹೋಗಿದ್ದಾಳಲ್ಲಾ. ಅದೂ ಅವಳಿ ಮಕ್ಕಳಿಗೆ ಜನ್ಮ ನೀಡಿ; ಆ ಮಕ್ಕಳು ಅವ್ವನ ಹಾದಿ ಹಿಡಿದಿವೆ. ಹೃದಯ ಕಲಕುವ ಈ ಸಂಗತಿ ಕೇಳಿದ ಸುಧಾಕರ ಕೂಡಲೇ ತಮ್ಮ ಕೊಠಡಿ ಸೇರಿಕೊಂಡಿದ್ದರಿಂದ ಗಾಬರಿಗೊಂಡ ಹಿಂಬಾಲಕರು ಬಾಗಿಲ ಹೊರಗಿನಿಂದ ಕೂಗಿ “ಸಾರ್ ರಾಜಿನಾಮೆ ಬರೆಯಬೇಡಿ. ಆಸ್ಪತ್ರೆಯ ಡಾಕ್ಟರು ಮಾಡಿದ ಅಪರಾಧಕ್ಕೆ ನೀವು ಹೊಣೆಗಾರರಲ್ಲ” ಎಂದರಂತಲ್ಲಾ. ಆ ಕಡೆಯಿಂದ ಸುಧಾಕರ್ “ನಾನು ರಾಜಿನಾಮೆ ಬರೆಯುತ್ತಿಲ್ಲ, ಸಿದ್ದರಾಮಯ್ಯ ಅವಧಿಯಲ್ಲಿ ನಡೆದ ಶಿಶುಮರಣದ ದಾಖಲೆ ಹುಡುಕುತ್ತಿದ್ದೇನೆ” ಎಂದಾಗ ಹಿಂಬಾಲಕರು ಹಿಂಬದಿಯಿಂದ ಗಾಳಿಬಿಟ್ಟು ಸುಧಾರಿಸಿಕೊಂಡರಂತಲ್ಲಾ. ಇತ್ತ ತುಮಕೂರು ಸುದ್ದಿ ಬಿಟ್ಟು ಮಾರಿಕೊಂಡ ಮಾಧ್ಯಮದವರು ರೇಣುಕಾಚಾರ್ಯರ ತಮ್ಮನ ಮಗನ ದುರ್ಮರಣವನ್ನು ದಿನವಿಡೀ ತೋರುತ್ತಾ, ಸಾಲದೆಂಬಂತೆ ಸುದ್ದಿ ಸಂಗ್ರಹಿಸಲು ಮನೆಯ ಬಳಿಗೆ ಹೋದಾಗ, ರೇಣುಕಾಚಾರ್ಯ ನಾನು ಹಿಂದೂ ಪ್ರೇಮಿ ಮತ್ತು ಜಾತಿ ಪ್ರೇಮಿ, ಹಾಗಾಗಿ ಹಿಜಾಬ್ ವಿಷಯದಲ್ಲಿ ನನಗೆ ಬೆದರಿಕೆ ಕರೆ ಬಂದಿತ್ತು. ಪೊಲೀಸರು ಸರಿಯಾಗಿ ತನಿಖೆ ನಡೆಸುತ್ತಿಲ್ಲ. ಇದು ವೇಗದ ಅಪಘಾತ ಅಂತ ಪೊಲೀಸರು ಸುಳ್ಳು ಹೇಳುತ್ತಿದ್ದಾರೆ. ಎಂದು ಪ್ರತಿ ಮಾತಿಗೂ ಒಂದೊಂದು ಗುಕ್ಕು ಉಣ್ಣುತ್ತಿದ್ದರಂತಲ್ಲಾ. ಹೀಗೆ ನಾಲ್ವರು ಮಹಿಳೆಯರು ಸರದಿಯಂತೆ ಅನ್ನದ ತುತ್ತು ಬಾಯಿಗೆ ಹಿಡಿಯುತ್ತಿದ್ದಾಗ ತೀರಿಕೊಂಡ ಚಂದ್ರಶೇಖರನ ತಂದೆ ತಾಯಿ ಮತ್ತು ಪೊಲೀಸರು ದಂಗುಬಡಿದು ನಿಂತಿದ್ದರಲ್ಲಾ. ಥೂತ್ತೇರಿ.
******
ರೇಣುಕಾಚಾರ್ಯರ ತಮ್ಮನ ಮಗ ಒಳ್ಳೆ ನಡವಳಿಕೆ ಹುಡುಗ; ತುಸು ಆಧ್ಯಾತ್ಮದ ಕಡೆ ಒಲವಿದ್ದವನು. ಇಂತಹವರಿಗೆಲ್ಲಾ ಗುರುವಿನಂತೆ ಕಾಣುವ ಗೌರಿಗದ್ದೆ ಗುರುನೋಡಿ ಬರುವಾಗ ತುಂಗಾ ಸೇತುವೆ ಮೇಲಿಂದ ಕೆಳಗೆ ಬಿದ್ದು ತೀರಿಕೊಂಡಿದ್ದಾನೆಂಬುದು ಪೊಲೀಸರ ಸಮೇತ ಜನಸಾಮಾನ್ಯರ ನಂಬುಗೆ. ಇಲ್ಲಿ ಅಸಂಖ್ಯಾತ ವೈರಿಗಳನ್ನ ಸೃಷ್ಟಿಸಿಕೊಂಡಿದ್ದವರು ರೇಣುಕಾಚಾರಿ. ಮೊದಲನೆಯದಾಗಿ ಮಸೀದಿಗಳಲ್ಲಿ ಶಸ್ತ್ರಾಸ್ತ್ರ ಮಡಗಿಕೊಂಡಿದ್ದಾರೆ ತನಿಖೆ ಮಾಡಿ ಎಂದಿದ್ದರು; ನನಗೆ ಮುಸ್ಲಿಮರ ಓಟು ಬೇಡ ಎಂದಿದ್ದರು; ಇನ್ನೊಂದೆಡೆ ಹಿಜಾಬ್ ವಿಷಯದಲ್ಲೂ ಅವರ ಬಾಯಿ ಸುಮ್ಮನಿರಲಿಲ್ಲ. ಆ ಕಾರಣವಾಗಿ ಬೆದರಿಕೆ ಕರೆ ಬಂದಿತ್ತೆಂದು ಅವರೇ ಹೇಳುತ್ತಾರೆ. ಇನ್ನ ಅವರ ಕುಟುಂಬ ಸದಸ್ಯರೊಬ್ಬರು ಸುಳ್ಳು ಸುಳ್ಳಾಗಿ ಬೇಡ ಜಂಗಮರ ಜಾತಿ ಪ್ರಮಾಣ ಪತ್ರ ಪಡೆದುದನ್ನ ಸದನದಲ್ಲೇ ಒಪ್ಪಿಕೊಂಡಿದ್ದಾರೆ. ಅದೂ ಅಲ್ಲದೆ ಈಚೆಗೆ ಸರಕಾರಿ ಕರ್ಮಚಾರಿಗಳಿಗೆ ಒತ್ತಡ ತಂದು ನಿಂದಿಸಿ ಸುಳ್ಳುದಾಖಲೆ ಸೃಷ್ಟಿಮಾಡಿ ಸರಕಾರದ ಅನುದಾನ ಪಡೆಯಲು ಯತ್ನಿಸಿದರೆಂಬ ಆಪಾದನೆಯೂ ಇದೆ. ಇಷ್ಟು ಸಮಸ್ಯೆಗಳ ಗೋಜಲುಗಳನ್ನ ಸೃಷ್ಟಿಮಾಡಿಕೊಂಡಿರುವ ರೇಣುಕಾಚಾರಿ ಚಂದ್ರಶೇಖರನ ಸಾವಿನ ತನಿಖೆಗೆ ಬಂದ ಪೋಲೀಸರಿಗೆ ಅವಾಜುಹಾಕಿ, ನಿಮ್ಮ ತನಿಖೆಯೇ ಸರಿಯಿಲ್ಲ, ನನ್ನನ್ನ ತನಿಖೆ ಮಾಡಿ ಎಂದುಬಿಟ್ಟಿದ್ದಾರೆ. ಈ ಬಗ್ಗೆ ಹೊನ್ನಾಳಿ ಠಾಣೆಯ ಪೋಲಿಸರು ಪ್ರಾಥಮಿಕ ಹಂತದ ತನಿಖೆಯ ಮೊದಲ ಪ್ರಶ್ನೆಯಾಗಿ “ಸಾರ್ ಚಂದ್ರಶೇಖರನ ತಂದೆ ತಾಯಿ ದುಃಖದಲ್ಲಿಯೂ ಸಹಜವಾಗಿದ್ದರೂ ತಾವೇಕೆ ಭೂಮಿ ಆಕಾಶ ಒಂದು ಮಾಡಿ ಅಳುತ್ತಿದ್ದೀರಿ ಎಂಬ ಪ್ರಶ್ನೆಯನ್ನು ಕೇಳುವುದಕ್ಕೂ ಮೊದಲು, ನಿಮ್ಮ ತಲೆಯಲ್ಲಿರುವ ಕೊಲೆಗಾರ ಯಾರೆಂದು ಹೇಳಿಬಿಡಿ” ಎನ್ನಲಿದ್ದಾರಂತಲ್ಲಾ, ಥೂತ್ತೇರಿ.
******
ಅಧಿಕಾರ ವಿಕೇಂದ್ರೀಕರಣದ ಕನಸಿನಿಂದ ರೂಪುಗೊಂಡ ಮಂಡಲ ಪಂಚಾಯ್ತಿ ಅಧ್ಯಕ್ಷನ ಆಳ್ವಿಕೆಯಂತೆ ಒಂದು ಅವಧಿ ಮುಗಿಸಿತು. ವಾಸ್ತವವಾಗಿ ಪಟ್ಟಣ ಕೇಂದ್ರಿತವಾದ ಜನತಾಪಕ್ಷವನ್ನು ಹಳ್ಳಿಗಳಿಗೆ ತಲುಪಿಸುವ ಹುನ್ನಾರ ಕೂಡ ಈ ಪಂಚಾಯ್ತಿ ಕನಸಿನಲ್ಲಿತ್ತು. ನಂತರ ಬಂದ ಕಾಂಗ್ರೆಸ್ ಸರಕಾರದ ಫೋರ್ಪಡೆ ಮಂಡಲವನ್ನ ಒಡೆದು ಒಂದನ್ನ ಎರಡುಮಾಡಿ ಆರೂವರೆ ಸಾವಿರದಷ್ಟು ಗ್ರಾಮಪಂಚಾಯ್ತಿ ಮಾಡಿ ಆಡಳಿತಾಧಿಕಾರಿ ನೇಮಿಸಿದರು. ಹೆಬ್ಬೆಟ್ಟಿನ ಅಧ್ಯಕ್ಷರು ಬಂದು ಅಧಿಕಾರಿ ಹೇಳಿದ ಜಾಗಕ್ಕೆ ಒತ್ತಿ ಅದಕಿಷ್ಟು ಭಕ್ಷೀಸು ಈಸಿಕೊಂಡು ಕಾಲಹಾಕಿದರು. ಇದನ್ನು ನೋಡಿದ ಇತರೆ ಸದಸ್ಯರು ತಾವೂ ಕೈವೊಡ್ಡಿದರು. ಇದರಿಂದ ಸರಕಾರದಿಂದ ಬರುವ ಅನುದಾನವನ್ನು ಲಪಟಾಯಿಸಿ ಸದಸ್ಯರಿಗೆ ಹಂಚುತ್ತ ಕುಳಿತ ಪಿಡಿಓ ಭ್ರಷ್ಟತೆಯ ವಿಕೇಂದ್ರೀಕರಣದ ಪ್ರತಿನಿಧಿಯಾಗಿ ಪಂಚಾಯ್ತಿ ಆಫೀಸಿನಲ್ಲಿ ಕುಳಿತಿದ್ದಾನಲ್ಲಾ. ನರೇಗಾ ಉದ್ಯೋಗಖಾತ್ರಿಯಲ್ಲಿ ಬರುವ ಕೃಷಿಹೊಂಡದಂತಹ ಯಾವುದೇ ಕೆಲಸಗಳಲ್ಲಿ ಎಪ್ಪತ್ತು ಪರಸೆಂಟ್ ಖಟಾವು ಮಾಡುತ್ತಿರುವ ಪಿಡಿಓ ಕೇಳಿದರೆ, ಮೇಲಿನವರಿಗೆ ಕೊಡಬೇಕು ಎನ್ನುತ್ತಿದ್ದಾನೆ. ಇನ್ನ ರೆವಿನ್ಯೂ ಇಲಾಖೆ ಸುಲಿಗೆ ವಿಷಯದಲ್ಲಿ ತಹಸೀಲ್ದಾರ ಏಜೆಂಟರನ್ನ ಬಿಟ್ಟು ವಸೂಲಿಗೆ ಇಳಿದಿದ್ದಾನೆ. ಅವನನ್ನ ಕೇಳಿದರೂ ಮೇಲಿನವರಿಗೆ ಕೊಡಬೇಕು ಎನ್ನುತ್ತಾನೆ. ಮೇಲಿನವನು ಇನ್ನಾರೆಂದು ಶಾಸಕರಿಗೆ ಫೋನ್ ಮಾಡಿದರೆ ಆತ ವ್ಯಾಪ್ತಿಪ್ರದೇಶದ ಹೊರಗಿದ್ದಾನಂತಲ್ಲಾ, ಥೂತ್ತೇರಿ.
ಇದನ್ನೂ ಓದಿ: ರಂಜಿಸಿ ವಂಚಿಸುವ ಕಾಂತಾರ