ಮಹಾರಾಷ್ಟ್ರದ ಮಾಜಿ ಸಚಿವ ಹಾಗೂ ಬಾಲಿವುಡ್ ವಲಯದಲ್ಲಿ ಖ್ಯಾತನಾಮರಾಗಿರುವ ಬಾಬಾ ಸಿದ್ದೀಕ್ ಅವರು ಶನಿವಾರ ಅಜಿತ್ ಪವಾರ್ ನೇತೃತ್ವದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ(ಎನ್‌ಸಿಪಿ)ಕ್ಕೆ ಸೇರ್ಪಡೆಯಾಗಿದ್ದಾರೆ.
ಕಾಂಗ್ರೆಸ್‌ನ ಹಿರಿಯ ನಾಯಕರಾಗಿದ್ದ ಬಾಬಾ ಸಿದ್ದೀಕ್, ಫೆಬ್ರವರಿ 8ರಂದು ರಾಜೀನಾಮೆ ನೀಡುವ ಮೂಲಕ ಪಕ್ಷದೊಂದಿಗಿನ 48 ವರ್ಷಗಳ ಸಂಬಂಧ ಕಡಿದುಕೊಂಡಿದ್ದರು.
ಎನ್‌ಸಿಪಿ ಸೇರ್ಪಡೆ ಬಳಿಕ ಮಾತನಾಡಿದ ಬಾಬಾ ಸಿದ್ದೀಕ್, ” ಕಾಂಗ್ರೆಸ್‌ನ ಕುರಿತು ನನಗೆ ಬಹಳಷ್ಟು ಹೇಳಲು ಇದೆ. ಆ ಪಕ್ಷದಲ್ಲಿ ನನ್ನನ್ನು ಸಾಂಬಾರಿನ ಸುವಾಸನೆಗೆ ಕರಿಬೇವು ಬಳಸುವಂತೆ ನನ್ನನ್ನು ಬಳಸಿಕೊಂಡಿದ್ದರು. ಪಕ್ಷದ ತೊರೆದ ಬಗ್ಗೆ ದುಖಃವಿದೆ. ಆದರೆ, ಹಲವು ವರ್ಷಗಳ ಜಂಜಾಟ ಕೊನೆಗೊಂಡಿತಲ್ಲ ಎಂಬ ಖುಷಿಯೂ ಇದೆ” ಎಂದಿದ್ದಾರೆ.
“ಬಹಳ ಸಣ್ಣ ಪ್ರಾಯದಲ್ಲೇ ನಾನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವನ್ನು ಸೇರಿಕೊಂಡಿದ್ದೆ. ಇದು 48 ವರ್ಷಗಳ ಕಾಲದ ಮಹತ್ವದ ಪ್ರಯಾಣವಾಗಿದೆ. ಇಂದು ನಾನು ತಕ್ಷಣದಿಂದ ಜಾರಿಗೆ ಬರುವಂತೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಹೇಳಲು ತುಂಬಾ ವಿಷಯಗಳಿವೆ. ಆದರೆ, ಅವುಗಳನ್ನು ಹೇಳದಿರುವುದೇ ಉತ್ತಮ. ಈ ಪ್ರಯಾಣದಲ್ಲಿ ನನ್ನ ಜೊತೆ ಭಾಗಿಯಾದ ಎಲ್ಲರಿಗೂ ಧನ್ಯವಾದಗಳು” ಎಂದು ಬಾಬಾ ಸಿದ್ದಿಕ್ ಫೆ.8ರಂದು ತನ್ನ ರಾಜೀನಾಮೆ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದರು.
ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ನಡುವೆ ಮಹಾರಾಷ್ಟ್ರ ಕಾಂಗ್ರೆಸ್‌ನ ಇಬ್ಬರು ಪ್ರಮುಖ ನಾಯಕರು ರಾಜೀನಾಮೆ ನೀಡಿದ್ದಾರೆ. ಮಾಜಿ ಕೇಂದ್ರ ಸಚಿವ ಮಿಲಿಂದ್ ದಿಯೋರಾ ಇತ್ತೀಚೆಗೆ ಕಾಂಗ್ರೆಸ್ ತೊರೆದು ಸಿಎಂ ಏಕನಾಥ್ ಶಿಂದೆ ಬಣ ಸೇರಿದ್ದರು. ಈ ಬೆನ್ನಲ್ಲೇ ಮತ್ತೊಬ್ಬ ನಾಯಕ ಬಾಬಾ ಸಿದ್ದೀಕ್ ರಾಜೀನಾಮೆ ನೀಡಿದ್ದಾರೆ.
ಬಾಬಾ ಸಿದ್ದಿಕ್ ಅವರು 1999, 2004 ಮತ್ತು 2009 ರಲ್ಲಿ ಸತತ ಮೂರು ಅವಧಿಗೆ ಕಾಂಗ್ರೆಸ್ ಶಾಸಕರಾಗಿದ್ದರು. ಅಲ್ಲದೆ, ಆಹಾರ ಮತ್ತು ನಾಗರಿಕ ಸರಬರಾಜು, ಕಾರ್ಮಿಕ ಮತ್ತು ಎಫ್‌ಡಿಎ, (2004-08) ರಾಜ್ಯ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಈ ಹಿಂದೆ ಎರಡು ಸತತ ಅವಧಿಗಳು (1992-1997) ಪುರಸಭೆಯ ಕಾರ್ಪೊರೇಟರ್ ಆಗಿಯೂ ಸೇವೆ ಸಲ್ಲಿಸಿದ್ದರು. ಮುಂಬೈ ಪ್ರಾದೇಶಿಕ ಕಾಂಗ್ರೆಸ್ ಸಮಿತಿ ಮತ್ತು ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿಯ ಸಂಸದೀಯ ಮಂಡಳಿಯ ಅಧ್ಯಕ್ಷರಾಗಿ ಮತ್ತು ಹಿರಿಯ ಉಪಾಧ್ಯಕ್ಷರಾಗಿಯೂ ಸೇವೆ ಕಾರ್ಯ ನಿರ್ವಹಿಸಿದ್ದರು.
ಕಾಂಗ್ರೆಸ್ ಪಕ್ಷ ಮಹಾರಾಷ್ಟ್ರದಲ್ಲಿ ಇಂಡಿಯಾ ಮೈತ್ರಿಕೂಟದ ಪಕ್ಷಗಳಾದ ಶಿವಸೇನೆ ಯುಬಿಟಿ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ-ಶರದ್ಚಂದ್ರ ಪವಾರ್ (ಎನ್‌ಸಿಪಿಯ ಶರದ್ ಪವಾರ್ ಬಣ) ಜೊತೆಗೆ ಲೋಕಸಭೆ ಚುನಾವಣೆಯಲ್ಲಿ ಸೀಟು ಹಂಚಿಕೆ ಮಾಡಿಕೊಳ್ಳಲಿದೆ.
ಇದನ್ನೂ ಓದಿ : ‘ಅಪ್ಪ-ಅಮ್ಮ’ ನನಗೆ ವೋಟ್ ಹಾಕದಿದ್ದರೆ ನೀವು ಊಟ ಮಾಡಬೇಡಿ: ಶಾಲಾ ಮಕ್ಕಳಿಗೆ ಹೇಳಿದ ಶಾಸಕ; ವಿವಾದ ಸೃಷ್ಟಿ


