ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ವೀರಭದ್ರ ಸಿಂಗ್ (87) ಗುರುವಾರ ಮುಂಜಾನೆ (ಜುಲೈ 8) ಶಿಮ್ಲಾದಲ್ಲಿ ನಿಧನರಾಗಿದ್ದಾರೆ. ಕಳೆದ ಜುಲೈ 5 ರಂದು ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದರು. ಜೊತೆಗೆ ತೀವ್ರ ಅನಾರೋಗ್ಯದಿಂದ ಮಾಜಿ ಮುಖ್ಯಮಂತ್ರಿ ಬಳಲುತ್ತಿದ್ದರು.
ಹಿಮಾಚಲ ಪ್ರದೇಶದಲ್ಲಿ ಆರು ಬಾರಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದ ಅವರು, ಇಂದಿರಾ ಗಾಂಧಿ ವೈದ್ಯಕೀಯ ಕಾಲೇಜಿನಲ್ಲಿ (ಐಜಿಎಂಸಿ) ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಗುರುವಾರ ಮುಂಜಾನೆ 3: 30 ರ ಸುಮಾರಿಗೆ ನಿಧನರಾದರು ಎಂದು ಐಜಿಎಂಸಿಯ ಹಿರಿಯ ವೈದ್ಯಕೀಯ ಅಧೀಕ್ಷಕ ಜನಕ್ ರಾಜ್ ಖಚಿತಪಡಿಸಿದ್ದಾರೆ.
87 ವರ್ಷದ ವೀರಭದ್ರ ಸಿಂಗ್ ಅವರಿಗೆ ಕಳೆದ ಮೂರು ತಿಂಗಳಲ್ಲಿ 2 ಬಾರಿ ಕೊರೊನಾ ವೈರಸ್ ಸೋಂಕು ತಗುಲಿತ್ತು. ಹಿನ್ನೆಲೆಯಲ್ಲಿ ಏಪ್ರಿಲ್ 13ರಂದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಗಿತ್ತು. ನಂತರ ಅವರು ಚೇತರಿಸಿಕೊಂಡಿದ್ದರು. ಬಳಿಕ ಆರೋಗ್ಯ ಸ್ಥಿತಿ ಹದಗೆಟ್ಟು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನ್ಯೂಮೋನಿಯಾ, ಮಧುವೇಹದಂತಹ ಅನಾರೋಗ್ಯಗಳಿಂದ ಬಳಲುತ್ತಿದ್ದರು.
ಇದನ್ನೂ ಓದಿ: ಉಪ್ಪಿನಂಗಡಿ: ಪೊಲೀಸರ ಬೇಜವಾಬ್ದಾರಿಯಿಂದ ಯುವಕ ಸಾವು , ಲ್ಲದ ಪೊಲೀಸ್ ದೌರ್ಜನ್ಯ- ಆರೋಪ
ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರಿಗೆ ಗೌರವ ಸೂಚಕವಾಗಿ ಮೂರು ದಿನಗಳ ಕಾಲ ಹಿಮಾಚಲ ಪ್ರದೇಶದಲ್ಲಿ ಶೋಕಾಚರಣೆಯನ್ನು ಆಚರಿಸಲು ಸರ್ಕಾರ ನಿರ್ಧರಿಸಿದೆ. ಜುಲೈ 8 ರಿಂದ 10ರ ವರೆಗೆ ಶೋಕಾಚರಣೆಯನ್ನು ಆಚರಿಸಲಾಗುವುದು.
“ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರು ಜುಲೈ 8 ರ ಬೆಳಿಗ್ಗೆ ನಿಧನರಾಗಿದ್ದಾರೆ. ಅಗಲಿದ ಗಣ್ಯರಿಗೆ ಗೌರವ ಸೂಚಕವಾಗಿ, ಹಿಮಾಚಲ ಪ್ರದೇಶ ಸರ್ಕಾರವು ರಾಜ್ಯದಲ್ಲಿ ಮೂರು ದಿನಗಳ ರಾಜ್ಯ ಶೋಕಾಚರಣೆಯನ್ನು ಆಚರಿಸಲು ನಿರ್ಧರಿಸಿದೆ. ಜುಲೈ 8 ರಿಂದ ಜುಲೈ 10 ರವರೆಗೆ ಈ ಅವಧಿಯಲ್ಲಿ ಯಾವುದೇ ಅಧಿಕೃತ ಮನರಂಜನಾ ಕಾರ್ಯಕ್ರಮಗಳು ಇರುವುದಿಲ್ಲ” ಎಂದು ಸರ್ಕಾರ ಹೇಳಿದೆ.
ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ಒಂಬತ್ತು ಬಾರಿ ಶಾಸಕರಾಗಿ, ಐದು ಬಾರಿ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದರು. 1983 ರ ಅಕ್ಟೋಬರ್‌ನಲ್ಲಿ ಮೊದಲ ಬಾರಿಗೆ ರಾಜ್ಯ ವಿಧಾನಸಭೆಗೆ ಆಯ್ಕೆಯಾಗಿದ್ದರು.
ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ನಿಧನಕ್ಕೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ: ಭೀಮಾ ಕೋರೆಗಾಂವ್ ಪ್ರಕರಣ: ಸುರೇಂದ್ರ ಗಾಡ್ಲಿಂಗ್ ಕಂಪ್ಯೂಟರ್‌ಗೆ ಸುಳ್ಳು ಸಾಕ್ಷ್ಯಗಳನ್ನು ಸೇರಿಸಲಾಗಿದೆ-ವರದಿ


