ಇಂದಿನಿಂದ (ಏಪ್ರಿಲ್ 01) ಪಂಜಾಬ್ ರಾಜ್ಯದ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೇವೆ ಸಿಗಲಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಘೋಷಿಸಿದ್ದಾರೆ. ಸಂಪುಟ ಸಭೆ ಈ ಯೋಜನೆಗೆ ಬುಧವಾರ ಅನುಮೋದನೆ ನೀಡಿದೆ.
ಪಂಜಾಬ್ ರಾಜ್ಯದ ಮಹಿಳೆಯರು ಮತ್ತು ಯುವತಿಯರನ್ನು ಸಬಲೀಕರಣಗೊಳಿಸುವ ಸರ್ಕಾರದ ಪ್ರಯತ್ನಗಳ ಭಾಗವಾಗಿ ಮುಖ್ಯಮಂತ್ರಿ ಮಾರ್ಚ್ 5 ರಂದು ವಿಧಾನಸಭೆಯಲ್ಲಿ ಉಚಿತ ಪ್ರಯಾಣ ಯೋಜನೆಯನ್ನು ಘೋಷಿಸಿದ್ದರು ಎಂದು ಸರ್ಕಾರದ ಅಧಿಕೃತ ಹೇಳಿಕೆ ತಿಳಿಸಿದೆ.
ಪಂಜಾಬ್ ರಾಜ್ಯದ 1.31 ಕೋಟಿ ಮಹಿಳೆಯರು ಮತ್ತು ಯುವತಿಯರು ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ. 2011 ರ ಜನಗಣತಿಯ ಪ್ರಕಾರ, ಪಂಜಾಬ್‌ನಲ್ಲಿ 2.77 ಕೋಟಿ ಜನಸಂಖ್ಯೆ ಇದೆ (ಪುರುಷರು 1,46,39,465 ಮತ್ತು ಮಹಿಳೆಯರು 1,31,03,873).
ಕಳೆದ ಬಾರಿಯ ದೆಹಲಿ ಚುನಾವಣೆಗೆ ಮುನ್ನ ಆಮ್ ಆದ್ಮಿ ಪಾರ್ಟಿಯ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡ ಇದೇ ರೀತಿ ಮಹಿಳೆಯರಿಗೆ ಉಚಿತ ಪ್ರಯಣ ಸೇವೆ ನಿಡುವ ಕ್ರಮ ಕೈಗೊಂಡಿದ್ದರು. ಬಸ್ ಮತ್ತು ಮೆಟ್ರೋ ಎರಡರಲ್ಲಿಯೂ ಉಚಿತ ಪ್ರಯಾನ ಎಂದು ಘೋಷಿಸಿದ್ದರು. ಮುಂದಿನ ವರ್ಷದ ಆರಂಭದಲ್ಲಿ ಪಂಜಾಬ್ ರಾಜ್ಯದಲ್ಲಿಯೂ ಚುನಾವಣೆ ನಡೆಯಲಿದೆ.
ಇದನ್ನೂ ಓದಿ: ಪಂಜಾಬ್ ಬಿಜೆಪಿ ಶಾಸಕನ ಮೇಲೆ ಹಲ್ಲೆ ಪ್ರಕರಣ: ನಮ್ಮ ರೈತರು ಭಾಗಿಯಾಗಿಲ್ಲವೆಂದ ರಾಕೇಶ್ ಟಿಕಾಯತ್
ಈ ಯೋಜನೆಯಡಿ, ಪಂಜಾಬ್‌ನ ಮಹಿಳೆಯರು ಪಂಜಾಬ್ ರಸ್ತೆ ಸಾರಿಗೆ ನಿಗಮ (PRTC), ಪಂಜಾಬ್ ರಸ್ತೆ ಮಾರ್ಗ ಬಸ್‌ಗಳು (PUNBUS) ಮತ್ತು ಸ್ಥಳೀಯ ಸಂಸ್ಥೆಗಳಿಂದ ನಿರ್ವಹಿಸಲ್ಪಡುವ ನಗರ ಬಸ್ ಸೇವೆಗಳನ್ನು ಒಳಗೊಂಡಂತೆ ಸರ್ಕಾರಿ ಸ್ವಾಮ್ಯದ ಬಸ್‌ಗಳಲ್ಲಿ ಉಚಿತ ಬಸ್ ಪ್ರಯಾಣವನ್ನು ಪಡೆಯಬಹುದು.
Happy to share that our Cabinet has approved free travel within the State for all women/girls of Punjab in State Transport buses from 1st April. I’m sure it will be a strong step towards further empowering the women of Punjab. pic.twitter.com/4lLdVsIhGE
— Capt.Amarinder Singh (@capt_amarinder) March 31, 2021
ಆದರೆ, ಈ ಯೋಜನೆಯು ಸರ್ಕಾರಿ ಸ್ವಾಮ್ಯದ ಎಸಿ ಬಸ್‌ಗಳು, ವೋಲ್ವೋ ಬಸ್‌ಗಳು ಮತ್ತು ಎಚ್‌ವಿಎಸಿ (HVAC) ಬಸ್‌ಗಳಿಗೆ ಅನ್ವಯಿಸುವುದಿಲ್ಲ. ಸೌಲಭ್ಯವನ್ನು ಪಡೆಯಲು ಆಧಾರ್ ಕಾರ್ಡ್, ಮತದಾರರ ಕಾರ್ಡ್ ಅಥವಾ ಪಂಜಾಬ್ ನಿವಾಸಿಗಳೆಂದು ಹೇಳುವ ಯಾವುದಾದರೂ ದಾಖಲೆಗಳನ್ನು ನೀಡಬೇಕಾಗುತ್ತದೆ.
ಈ ಯೋಜನೆಯು ಸಾರಿಗೆಯ ದರದಿಂದಾಗಿ ಶಾಲೆ ಬಿಡುವ ಹೆಣ್ಣು ಮಕ್ಕಳನ್ನು ಕಡಿಮೆ ಮಾಡುವುದಲ್ಲದೆ, ಕೆಲಸ ಮಾಡುವ ಮಹಿಳೆಯರಿಗೆ ಅನುಕೂಲವಾಗಲಿದೆ ಎಂದು ಹೇಳಲಾಗಿದೆ. ಕೆಲಸದ ಸ್ಥಳಕ್ಕೆ ಸಾಕಷ್ಟು ದೂರ ಪ್ರಯಾಣಿಸುವ ಮಹಿಳೆಯರಿಗೆ ಯಾವುದೇ ಆರ್ಥಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಸಹಾಯಕವಾಗಲಿದೆ ಎಂದು ಸರ್ಕಾರ ತಿಳಿಸಿದೆ.
ಜೊತೆಗೆ ಈ ಯೋಜನೆಯಿಂದ ರಸ್ತೆಗಳಲ್ಲಿ ಸಂಚರಿಸುವ ವೈಯಕ್ತಿಕ ವಾಹನಗಳ ಸಂಖ್ಯೆ ಕಡಿಮೆಗೊಳ್ಳುತ್ತವೆ. ಇದರಿಂದ ವಾಯುಮಾಲಿನ್ಯ, ಅಪಘಾತಗಳು ಮತ್ತು ವಾಹನ ದಟ್ಟಣೆ ಕಡಿಮೆಯಾಗುತ್ತದೆ ಎಂದು ಕ್ಯಾಬಿನೆಟ್ ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: ಬೆಳಗಾವಿ ರೈತ ಮಹಾಪಂಚಾಯತ್: ಕಿತ್ತೂರು ರಾಣಿ ಚೆನ್ನಮ್ಮನ ಮಾದರಿಯಲ್ಲಿ ಹೋರಾಡೋಣ- ರಾಕೇಶ್ ಟಿಕಾಯತ್


