ದೇಶದಲ್ಲಿ ಇಂಧನ ದರಗಳ ಏರಿಕೆಯ ಸರಣಿ ಮುಂದುವರೆದಿದ್ದು, ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಗುರುವಾರಂದು ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 36 ಪೈಸೆ ಹೆಚ್ಚಳವಾಗಿದ್ದು, ಡೀಸೆಲ್ 37 ಪೈಸೆ ಹೆಚ್ಚಳವಾಗಿದೆ. ಇದರೊಂದಿಗೆ ಬೆಂಗಳೂರಿನಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 110.25 ರೂ ಆಗಿದ್ದು, ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 101.12 ರೂ ಗೆ ಹೆಚ್ಚಳವಾಗಿದೆ.
ಕಳೆದ ಹತ್ತು ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಒಟ್ಟು ಆರು ಬಾರಿ ಹೆಚ್ಚಿಸಲಾಗಿದೆ. ಪೆಟ್ರೋಲ್‌ಗೆ ಹೋಲಿಸಿದರೆ ವಿಮಾನಯಾನ ಟರ್ಬೈನ್ ಇಂಧನ (ಎಟಿಎಫ್ ಅಥವಾ ಜೆಟ್ ಇಂಧನ)ದ ದರವು 35% ಕಡಿಮೆ ದರವನ್ನು ಹೊಂದಿದೆ. ಜೆಟ್ ಇಂಧನದ ಬೆಲೆ ದೆಹಲಿಯಲ್ಲಿ ಪ್ರತಿ ಲೀಟರ್‌ಗೆ 79 ರೂ.ಗೆ ಮಾರಾಟ ಮಾಡಲಾಗುತ್ತಿದೆ.
ಇದನ್ನೂ ಓದಿ: ಪೆಟ್ರೋಲ್, ಡೀಸೆಲ್, ಗ್ಯಾಸ್ ಸೇರಿದಂತೆ ದಿನಬಳಕೆಯ ವಸ್ತುಗಳ ಬೆಲೆ ಏರಿಕೆ ನಿಂತಿಲ್ಲ: ಏಕೆ ಗೊತ್ತೆ?
ರಾಜ್ಯದಲ್ಲೇ ಅತೀ ಹೆಚ್ಚು ಪೆಟ್ರೋಲ್ ದರವು ಉತ್ತರ ಕನ್ನಡ ಜಿಲ್ಲೆಯಲ್ಲಿ ದಾಖಲಾಗಿದ್ದು, ಅಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 112.48 ರೂ. ಆಗಿದೆ. ರಾಜ್ಯದಲ್ಲಿ ಅತೀ ಕಡಿಮೆ ಪೆಟ್ರೋಲ್ ದರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದ್ದು, ಅಲ್ಲಿ ಪ್ರತಿ ಲೀಟರ್‌ಗೆ 109.43 ರೂ ಆಗಿದೆ.
ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂನಂತಹ ಸರ್ಕಾರಿ ತೈಲ ಸಂಸ್ಕರಣಾ ಸಂಸ್ಥೆಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲ ಬೆಲೆ ಮತ್ತು ರೂಪಾಯಿ-ಡಾಲರ್ ವಿನಿಮಯ ದರಗಳನ್ನು ಗಣನೆಗೆ ತೆಗೆದುಕೊಂಡು ಇಂಧನ ದರವನ್ನು ಪ್ರತಿದಿನ ಪರಿಷ್ಕರಿಸುತ್ತವೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಗಳನ್ನು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದಲೇ ಜಾರಿಗೆ ತರಲಾಗುತ್ತದೆ.
ಪ್ರಸ್ತುತ, ಬ್ರೆಂಟ್ ಕಚ್ಚಾ ತೈಲದ ದರ ಒಂದು ಬ್ಯಾರೆಲ್‌ಗೆ 86.04 ಡಾಲರ್ ಆಗಿದ್ದರೆ, ಯುಎಸ್ ವೆಸ್ಟ್ ಟೆಕ್ಸಾಸ್ ಇಂಟರ್‌ಮೀಡಿಯೇಟ್(ಡಬ್ಲ್ಯೂಟಿಐ) ಕಚ್ಚಾ ತೈಲದ ಬೆಲೆ ಬ್ಯಾರಲ್‌ಗೆ 83.87 ಡಾಲರ್ ಆಗಿದೆ. ಒಂದು ಬ್ಯಾರೆಲ್ ಕಚ್ಚಾ ತೈಲದಲ್ಲಿ ಸುಮಾರು 158 ಲೀಟರ್ ಇಂಧನಗಳು(ಪೆಟ್ರೋಲ್, ಡೀಸೆಲ್,ಸೀಮೆಎಣ್ಣೆ, ಎಲ್‌ಪಿಜಿ ಗ್ಯಾಸ್ ಇತ್ಯಾದಿ) ಉತ್ಪಾದನೆಯಾಗುತ್ತದೆ ಎಂದು ಹೇಳಲಾತ್ತದೆ.
ಇದನ್ನೂ ಓದಿ: ಪೆಟ್ರೋಲ್ 200 ರೂ.ಗೆ ಏರಿದಾಗ ಟ್ರಿಪಲ್ ರೈಡಿಂಗ್‌ಗೆ ಅವಕಾಶ: ಅಸ್ಸಾಂ ಬಿಜೆಪಿ ಮುಖ್ಯಸ್ಥನ ವಿಚಿತ್ರ ಹೇಳಿಕೆ
ಇದನ್ನೂ ಓದಿ: ಪೆಟ್ರೋಲ್ ದರ ಹೆಚ್ಚಳಕ್ಕೆ ಆಯಿಲ್ ಬಾಂಡ್ ಕಾರಣ? – BJP ನಾಯಕರ ಹೇಳಿಕೆಯ ನಿಜಾಂಶವೇನು?
ಇದನ್ನೂ ಓದಿ: ‘ಕಷ್ಟಗಳಿದ್ದರೆ ಸುಖದ ಬೆಲೆ ತಿಳಿಯುತ್ತದೆ’ – ಪೆಟ್ರೋಲ್ ದರ ಏರಿಕೆಗೆ ಬಿಜೆಪಿ ಸಚಿವನ ಸಮರ್ಥನೆ!


