ದಟ್ಟ ಕವಿದ ಮೋಡ, ಮಳೆಗಾಳಿ. ಬದಲಾವಣೆಗೆ ಮುನ್ಸೂಚನೆ ನೀಡುವಂತಹ ವಾತಾವರಣ. ಹೋರಾಟದ ಕಿಚ್ಚನ್ನು ಹೊತ್ತು ತಂದ ಹೋರಾಟಗಾರರು… ಇಂತಹ ಪರಿಸರದಲ್ಲಿ ಹಾರಾಡಿದ್ದು ಹಸಿರುಶಾಲು, ಕೇಳಿಸಿದ್ದು ಉಳುವ ಯೋಗಿ ನೋಡಲ್ಲಿ ಎಂಬ ರಾಷ್ಟ್ರಕವಿ ಕುವೆಂಪು ಅವರ ಗೀತೆ..
ಬಂಡಾಯದ ನೆಲ ನರಗುಂದದಲ್ಲಿ ಬುಧವಾರ ಬೆಳಗಿನಿಂದಲೇ ಹಸಿರು ಶಾಲುಗಳ ಸಂಚಲನ. 41 ವರ್ಷಗಳ ಹಿಂದೆ ತಮ್ಮ ಹಕ್ಕುಗಳಿಗೆ, ಸರ್ಕಾರದ ದಬ್ಬಾಳಿಕೆಯ ವಿರುದ್ಧ ಸಿಡಿದು ಜೀವ ತ್ಯಾಗ ಮಾಡಿದ ರೈತರ ನೆನಪಿನಲ್ಲಿ ಹುತಾತ್ಮರ ದಿನಾಚರಣೆಗೆ ಇಡೀ ಊರು ಹುರುಪಿನಲ್ಲಿತ್ತು.
ಮಹದಾಯಿ ನೀರಿಗಾಗಿ ಕಳೆದ ಏಳು ವರ್ಷಗಳಿಂದ ನಡೆಯುತ್ತಿರುವ ಹೋರಾಟ, ರಾಜ್ಯದ ರೈತರನ್ನು ಕಂಗೆಡಿಸಿರುವ ಭೂಸುಧಾರಣೆ ಕಾಯ್ದೆ, ಒಕ್ಕೂಟ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳ ವಿರುದ್ಧ ರಣ ಕಹಳೆ ಮೊಳಗಿಸುವ ಉತ್ಸಾಹವೂ ಸೇರಿತ್ತು. ಈ ದಿನವನ್ನು ಕೃಷಿ ಉಳಿಸಿ ಪ್ರಜಾಪ್ರಭುತ್ವ ರಕ್ಷಿಸಿ ಸಂಕಲ್ಪ ದಿನವನ್ನಾಗಿ ಆಚರಿಸಲು ನಾಡಿನ ಎಲ್ಲ ಭಾಗದಿಂದ ರೈತರು ಆಗಮಿಸಿದ್ದರು.
ಗದಗ ಜಿಲ್ಲೆಯ ರೋಣ ಪಟ್ಟಣದಿಂದ ನರಗುಂದಕ್ಕೆ ಆಗಮಿಸಿದ ನೂರಾರು ರೈತರ ಪಾದಯಾತ್ರೆ ಮೂಲಕ ಗಮಿಸಿದ್ದು, ಪಾದಯಾತ್ರೆಯಲ್ಲಿ ಹಲವು ರಾಜ್ಯಗಳ ರೈತ ಮುಖಂಡರು ಭಾಗಿಯಾಗಿದ್ದಾರೆ. ನರಗುಂದ ಹುತಾತ್ಮರ ಸ್ಮಾರಕಕ್ಕೆ ಮಾಲಾಪರ್ಣೆ ಮಾಡಿದ ಬಳಿಕ ವೇದಿಕೆಗೆ ಆಗಮಿಸಿದರು.
ಕುವೆಂಪು ವಿರಚಿತ ಉಳುವ ಯೋಗಿಯ ನೋಡಲ್ಲಿ ರೈತ ಗೀತೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ದೆಹಲಿಯ ಗಡಿಗಳಲ್ಲಿ ಎಂಟು ತಿಂಗಳುಗಳಿಂದ ನಡೆಯುತ್ತಿರುವ ರೈತ ಹೋರಾಟದಲ್ಲಿ ತೊಡಗಿರುವ ಮುಖಂಡರುಗಳಾದ ಭಾರತೀಯ ಕಿಸಾನ್ ಯೂನಿಯನ್‌ನ ಹರ್ನೇಕ್ ಸಿಂಗ್, ಜೈ ಕಿಸಾನ್ ಸಂಘಟನೆಯ ದೀಪಕ್ ಲಾಂಬ ಅವರು ಮೂರು ಕೃಷಿ ಕಾಯ್ದೆಗಳ ಪ್ರತಿಗಳನ್ನು ಸುಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಇದನ್ನೂ ಓದಿ: ಜ.26 ರ ಘಟನೆ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆದರೆ, ವಿಶ್ವಸಂಸ್ಥೆ ಬಳಿ ಹೋಗುವುದಿಲ್ಲ-ರಾಕೇಶ್ ಟಿಕಾಯತ್

ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದ ದೀಪಕ್ ಲಾಂಬ ಅವರು, ‘ಒಕ್ಕೂಟ ಸರ್ಕಾರದ ಕೃಷಿ ಮಂತ್ರಿಗೆ ಅವರೇ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳ ಯಾವುವು ಎಂಬುದು ಗೊತ್ತಿಲ್ಲ. ಆದರೂ ಸರ್ಕಾರ ಒಂದು ಹೆಸರಿಟ್ಟಿದೆ. ನಾವು ಅದಕ್ಕೊಂದು ಹೆಸರಿಟ್ಟಿದ್ದೇವೆ. ಅಗತ್ಯವಸ್ತುಗಳ ಕಾಯ್ದೆ ಎಂದು ಅವರು ಕರೆದಿದ್ದಾರೆ, ನಾವು ಕಾನೂನು ಮುಕ್ತಗೊಳಿಸುವ ಕಾಯ್ದೆ, ಎರಡನೆಯದು, ಎಪಿಎಂಸಿ ಕೊನೆಗೊಳಿಸುವ ಮಾತಾಡುವ ಕಾಯ್ದೆ, ಅದನ್ನು ನಾವು ಮಾರುಕಟ್ಟೆ ಕೊಲೆ ಮಾಡುವ ಕಾಯ್ದೆ, ಮೂರನೆಯದು, ಕಾಂಟ್ರ್ಯಾಕ್ಟ್ ಫಾರ್ಮಿಂಗ್ ಬಗ್ಗೆ ಹೇಳುತ್ತದೆ, ಅದನ್ನು ಕೃಷಿ ಬಂದ್ ಮಾಡಿದ ಕಾನೂನು ಎಂದು ಕರೆದಿದ್ದೇವೆ. ಇವೇ ಕೃಷಿ ಕಾಯ್ದೆಗಳ ಉದ್ದೇಶವನ್ನು ತಿಳಿಸುತ್ತವೆ ಭಾವಿಸುತ್ತೇನೆ’ ಎಂದು ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ವಿಶ್ಲೇಷಿಸಿದರು.
ಕಪ್ಪು, ತೆರಿಗೆ ವಿನಾಯಿತಿ ವಿಷಯದಲ್ಲಿ ಸುಳ್ಳು ಭರವಸೆ ನೀಡಿದ ಈ ಸರ್ಕಾರ, ರೈತರ ವಿಷಯದಲ್ಲೂ ಭರವಸೆಯ ನೀಡಿತ್ತು. ಈಗ ಅದನ್ನು ಮರೆತು ಅಹಂಕಾರದಿಂದ ಕಾಯ್ದೆಗಳನ್ನು ಜಾರಿಗೆ ತಂದಿದೆ. ಮಾಧ್ಯಮದವರು ಈ ಕಾಯ್ದೆಗಳನ್ನು ಸರ್ಕಾರ ಯಾವಾಗ ಹಿಂಪಡೆಯುತ್ತದೆ ಎಂದು ನಮಗೆ ಕೇಳುತ್ತಾರೆ. ಮೋದಿ ಎಷ್ಟು ತಡ ಮಾಡುತ್ತಾರೆ ಅಷ್ಟು ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದ್ದೇವೆ ಎಂದರು.
“ಸರ್ಕಾರವನ್ನು ಪ್ರಶ್ನಿಸುವುದು ದೇಶದ ಪ್ರತಿ ನಾಗರಿಕನ ಹಕ್ಕು. ಸಂಯುಕ್ತ ಕಿಸಾನ್ ಮೋರ್ಚಾ ಇದನ್ನೇ ಮಾಡುತ್ತಾ ಬಂದಿದೆ. ಇಷ್ಟು ದಿನ ಬಿಜೆಪಿಯ ಜನಪ್ರತಿನಿಧಿಗಳನ್ನು ಪ್ರಶ್ನೆ ಮಾಡುತ್ತಾ ಬಂದಿದ್ದೇವೆ. ಈಗ ಇದರ ಮುಂದಿನ ಹಂತ ಆದೇಶ ಕೊಡುವುದು. ಈ ಹಿನ್ನೆಲೆಯಲ್ಲಿ ಕಳೆದ 17ನೇ ತಾರೀಖು ಜನರ ವಿಪ್ ಜಾರಿ ಮಾಡಿದ್ದೇವೆ” ಎಂದು ದೀಪಕ್ ಲಾಂಬ ಹೋರಾಟದ ಸ್ವರೂಪವನ್ನು ವಿವರಿಸಿದರು.
ದೆಹಲಿಯಲ್ಲಿ ಚಳಿಗಾಲದ ಅಧಿವೇಶನದ ಉದ್ದಕ್ಕೂ ಸಂಸತ್ ಎದುರು ಪ್ರತಿಭಟನೆ ನಡೆಸಲಾಗುವುದು. ಸರ್ಕಾರದ ಅಧಿವೇಶನ ಸಂಸತ್ತಿನ ಒಳಗೆ, ರೈತರ ಸಂಸತ್ತು ಸಂಸತ್ ಭವನದ ಹೊರಗೆ ನಡೆಯಲಿದೆ. ಕೃಷಿ ಕಾಯ್ದೆಗಳನ್ನು ಹಿಂಪಡೆಯುವವರೆಗೂ ಈ ಹೋರಾಟ ನಿಲ್ಲುವುದಿಲ್ಲ. ಹೋರಾಡೋಣ, ಗೆಲ್ಲೋಣ ಇದೇ ನಮ್ಮ ಘೋಷವಾಕ್ಯ ಎಂದು ಹೇಳಿದರು.
ಐವತ್ತಾರು ಇಂಚಿನ ಎದೆಯ ಮೋದಿಯವರಲ್ಲಿ ಭಯ ಕಾಣುತ್ತೇವೆ. ನಾವು ಹುತಾತ್ಮರ ಗೌರವ ಸಲ್ಲಿಸಲು ಇಲ್ಲಿಗೆ ಬಂದಿದ್ದೇವೆ. ನಮ್ಮನ್ನು ನಾವು ಎಲ್ಲಿ ಹೋಗುತ್ತಿದ್ದೇವೆ, ಏನು ತಿಂದೆವು, ಏನು ಮಾಡುತ್ತಿದ್ದೇವೆ ಎಂದು ಹಿಂಬಾಲಿಸುತ್ತಿದ್ದಾರೆ. ಸಂತ ಹೆದರುವುದಿಲ್ಲ. ಕಳ್ಳನಿಗೆ ಭಯವಿರುತ್ತದೆ. ದೆಹಲಿಯಲ್ಲಿ ಅಷ್ಟೇ, ಕರ್ನಾಟಕಕ್ಕೂ ಬಂದು ಮೋದಿಯವರಲ್ಲಿ ಭಯವಿರುವುದು ನಮಗೆ ಗೊತ್ತಾಗುತ್ತಿದೆ’ ಎಂದು ಭಾರತೀಯ ಕಿಸಾನ್ ಯೂನಿಯನ್ ನಾಯಕ ಹರ್ನೇಕ್ ಸಿಂಗ್ ಹೇಳಿದರು.
ಇದನ್ನೂ ಓದಿ: ಅನ್ನದಾತರ ವಿರುದ್ದ ಕತ್ತಿ ಎತ್ತಿ, ರೈತ ವಿರೋಧಿ ಘೋಷಣೆ ಕೂಗಿದ BJP ಕಾರ್ಯಕರ್ತರು

ನಾವು ಒಂದು ಕಿಚ್ಚನ್ನು ಇಲ್ಲಿಗೆ ತಂದಿದ್ದೇವೆ. ನೀವು ಸ್ವರ್ಗದಷ್ಟು ಸಮೃದ್ಧವಾದ ಸ್ಥಳ. ಆದರೆ ಸ್ವರ್ಗವಾಗಿಲ್ಲ. ದೆಹಲಿಯ ಗಡಿಗಳಲ್ಲಿ ಉರಿಸುತ್ತಿರುವ ಈ ಕಿಚ್ಚನ್ನು ಇಲ್ಲಿಯೂ ನಿಮ್ಮ ಎದೆಗೆ ತಾಕಬೇಕೆಂದು ಬಯಸುತ್ತಿದ್ದೇವೆ. ಮೋದಿ ಮತ್ತು ಯೋಗಿಯಂತಹವರನ್ನು ಕುಕೃತ್ಯಗಳನ್ನು ಸುಡಲು ಈ ಕಿಚ್ಚು ಬೇಕು. ಅದನ್ನು ಕರ್ನಾಟಕಕ್ಕೆ ತಂದಿದ್ದೇವೆ. ಇಲ್ಲೂ ಜೀವಂತವಾಗಿ ಪ್ರಜ್ವಲಿಸುತ್ತದೆ ಎಂಬ ನಂಬಿಕೆ ಇದೆ. ಇದೇ ಬೆಂಕಿಯಿಂದ ಐವತ್ತಾರು ಎದೆಯೂ ನಡುಗಿ ಹೋಗಿದೆ ಎಂದು ಹರ್ನೇಕ್ ಸಿಂಗ್ ಹೇಳಿದರು.
ಕಾರ್ಯಕ್ರಮಕದಲ್ಲಿ ರಾಜ್ಯ ರೈತ ಸಂಘದ ಅಧ್ಯಕ್ಷರಾದ ಬಡಗಲಪುರ ನಾಗೇಂದ್ರ, ಗೌರವಾಧ್ಯಕ್ಷರಾದ ಚಾಮರಸ ಪಾಟೀಲ್, ಮಾಜಿ ಶಾಸಕ ಬಿ ಆರ್ ಪಾಟೀಲ್, ರೈತ ಮುಖಂಡರುಗಳಾದ, ಮಧುಸೂದನ್ ತಿವಾರಿ, ರೈತ ಮಹಿಳಾ ಮುಖಂಡರಾದ ಲಲಿತಾ ಮತ್ತು ಮಂಜುಳಾ, ಸಾಮಾಜಿಕ ಕಾರ್ಯಕರ್ತ ಎಸ್ ಆರ್ ಹಿರೇಮಠ ಸೇರಿದಂತೆ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕರ್ನಾಟಕ ರಾಜ್ಯ ರೈತ ಸಂಘ, ಸಂಯುಕ್ತ ಹೋರಾಟ ಕರ್ನಾಟಕ, ಭಾರತೀಯ ಕೃಷಿಕ್ ಸಮಾಜ, ಮಹದಾಯಿ ನೀರಿಗಾಗಿ ಮಹಾವೇದಿಕೆ, ಕರ್ನಾಟಕ ರೈತ ಸೇನೆ, ಜನಾಂದೋಲನ ಮಹಾಮೈತ್ರಿ, ಉತ್ತರ ಕರ್ನಾಟಕ ರೈತ ಸಂಘ ಸೇರಿದಂತೆ ಹಲವು ಸಂಘಟನೆಗಳ ಸಹಯೋಗದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕೃಪೆ: ಅನ್ನದ ಋಣ
ಇದನ್ನೂ ಓದಿ: ನಾಳೆಯಿಂದ ಜಂತರ್ ಮಂತರ್‌ನಲ್ಲಿ ಕಿಸಾನ್ ಪಂಚಾಯತ್: ಕೃಷಿ ಕಾಯ್ದೆ ಹಿಂಪಡೆಯಲು ಪಟ್ಟು


