1965ನೇ ಇಸವಿಯ ವೇಳೆಗಾಗಲೇ ಹಾರ್ಲೆ ಮತ್ತು ಹಾರ್ಲೆ ಮ್ಯಾನೇಜ್ಮೆಂಟ್‌ನ ತೋಟಗಳ ವಿಸ್ತೀರ್ಣ ಸಾವಿರ ಎಕರೆಗಳನ್ನು ಮೀರಿತ್ತು. ಸುಮಾರು ಇನ್ನೂರೆವತ್ತಕ್ಕೂ ಹೆಚ್ಚು ಕುಟುಂಬಗಳು ಹಾರ್ಲೆ ಸಮೂಹದಲ್ಲಿ ದುಡಿದು ಬದುಕುತ್ತಿದ್ದರು.
ಕಾಫಿ ವಲಯದಲ್ಲಿ ಆಗ ಈಗಿನಂತೆ ಹೊರಗಿನಿಂದ ಬಂದು ಕೆಲಸ ಮಾಡುವ ಜನರಿರಲಿಲ್ಲ. ಎಲ್ಲರೂ ಆಯಾ ತೋಟಗಳಲ್ಲೇ ವಾಸ. ಹೊರಗಿಂದ ಕೆಲಸಕ್ಕೆ ಬರಲು ಆ ಕಾಲದಲ್ಲಿ ಕೆಲಸಗಾರರಿಗೆ ಸ್ವಂತ ನೆಲೆಯೆನ್ನುವುದು ಇರಲೇ ಇಲ್ಲ. ಈ ತೋಟ ಬಿಟ್ಟು ಹೊರಟರೆ ಇನ್ನೊಂದು ತೋಟ ಅಷ್ಟೇ.
ಅದಕ್ಕೂ ಹಿಂದೆ ದಕ್ಷಿಣ ಕನ್ನಡದಿಂದ ಮತ್ತು ಕೇರಳ- ತಮಿಳುನಾಡಿಗಳಿಂದ ಬರುತ್ತಿದ್ದ ಹಂಗಾಮಿ ಕಾರ್ಮಿಕರು ಹೆಚ್ಚಾಗಿ ಘಟ್ಟಗಳಲ್ಲೇ ನೆಲೆ ನಿಂತಿದ್ದರು. ಘಟ್ಟದ ಕೆಳಗಿನಿಂದ ಬರುವ ವಲಸೆ ಕಡಿಮೆಯಾಗಿತ್ತು. ಈ ಎಲ್ಲ ಕಾರಣಗಳಿಂದ ಕಾಫಿ ತೋಟಗಳಲ್ಲಿ ಕನ್ನಡ, ತುಳು, ಮಲೆಯಾಳಂ ಮತ್ತು ತಮಿಳು ಈ ನಾಲ್ಕೂ ವ್ಯವಹಾರ ಭಾಷೆಯಾಗಿದ್ದವು.
ಕಾಲಾನಂತರದಲ್ಲಿ ಎರಡನೇ ತಲೆಮಾರಿಗೆ, ಇಲ್ಲಿ ನೆಲೆಸಿದ್ದ ತಮಿಳು ಮತ್ತು ಮಲೆಯಾಳಿಗಳು ಕನ್ನಡಿಗರೇ ಆಗಿದ್ದಾರೆ. ಇಲ್ಲಿನ ಸಾಂಸ್ಕೃತಿಕ ವಲಯದಲ್ಲಿ ಸೇರಿ ಹೋಗಿದ್ದಾರೆ. ತುಳು ಭಾಷಿಕರು ಹೇಗೂ ಕನ್ನಡಿಗರೇ, ಅವರಿಂದ ಇಲ್ಲಿನವರೂ ಸಾವಿರಾರು ಜನ ತುಳು ಕಲಿತರು. ಈಗ ಸಕಲೇಶಪುರ ತಾಲ್ಲೂಕಿನಲ್ಲಿ ತುಳು ಎರಡನೇ ಸಾಮಾನ್ಯ ಭಾಷೆಯಾಗಿದೆ.

ಹಾರ್ಲೆ ತೋಟಗಳ ಸಮೂಹದಲ್ಲಿ ಕೃಷಿ ಚಟುವಟಿಕೆಗಳು ಬಿರುಸಿನಿಂದ ಸಾಗಿದ್ದವು. ಏಳೆಂಟು ವರ್ಷಗಳಲ್ಲಿ ಮ್ಯಾನೇಜರ್, ರೈಟರುಗಳು, ಮೇಸ್ತ್ರಿಗಳು, ಮೆಕ್ಯಾನಿಕ್, ಡ್ರೈವರ್‌ಗಳು, ಬಡಗಿಗಳು ಒಳ್ಳೆಯ ನುರಿತ ಕಾರ್ಮಿಕರು ಹೀಗೆ ಅನುಭವೀ ಕೆಲಸಗಾರರ ತಂಡವೊಂದನ್ನು ಗಣಪಯ್ಯ ಕಟ್ಟಿದ್ದರು. ತಮ್ಮ ರಾಜಕಾರಣದ ಓಡಾಟಗಳೆಷ್ಟೇ ಇರಲಿ ಗಣಪಯ್ಯ ಮನೆಯಲ್ಲಿದ್ದಾಗ ಪ್ರತಿದಿನ ತೋಟಕ್ಕೆ ಒಂದು ಭೇಟಿ ನೀಡದೆ ಇರುತ್ತಿರಲಿಲ್ಲ.
ಇಷ್ಟು ದೊಡ್ಡ ಸಂಸ್ಥೆಯ ಯಜಮಾನರಾಗಿದ್ದರೂ ಇವರು ವಾಸವಿದ್ದುದು ಮಿಡ್ಲಟನ್ ಕಾಲದಲ್ಲಿ ಕಟ್ಟಿದ್ದ, ಬೇರೆ ಕಾಫಿ ಎಸ್ಟೇಟ್ ಬಂಗಲೆಗಳಿಗೆ ಹೋಲಿಸಿದರೆ ಅತಿ ಸಾಮಾನ್ಯವೆನಿಸಿದ ಒಂದು ಬಂಗಲೆಯಲ್ಲಿ. ಮನೆಯೊಳಗೂ ಅತ್ಯಂತ ಸರಳ. ಮನೆಗೆ ಯಾರೇ ಬರಲಿ ಎಲ್ಲರಿಗೂ ಜೊತೆಯಲ್ಲಿಯೇ ಊಟ. ಅದೂ ನೆಲದಲ್ಲಿ ಕುಳಿತು.
ಇವರ ಊಟದ ಮನೆಗೆ ಹೋಗುವ ದಾರಿಯಲ್ಲಿ ಗೋಡೆಯಲ್ಲಿ ಒಂದು ಹಲಗೆಯನ್ನು ಚಜ್ಜಾದಂತೆ ಅಳವಡಿಸಲಾಗಿತ್ತು. ಅದರ ಮೇಲೆ ಒಂದು ಮಡಕೆ, ಒಂದು ತೆಂಗಿನ ಚಿಪ್ಪಿಗೆ ಬಿದಿರು ಕಡ್ಡಿ ಸಿಕ್ಕಿಸಿದ ಸೌಟು. -ಹಿಂದಿನ ಕಾಲದಲ್ಲಿ ಗಂಜಿ, ಸಾರು ಮುಂತಾದವನ್ನು ಬಡಿಸಲು ಬಳಸುತ್ತಿದ್ದಂತಹದು. ಮತ್ತೊಂದು ಹಳೆಯ ಹಿತ್ತಾಳೆ ಗಂಗಳ.
ಒಮ್ಮೆ ಗಣಪಯ್ಯನವರ ಗೆಳೆಯರಾದ ಗ್ರೆಗೊರಿ ಮಥಾಯಿಸರು ಅದನ್ನು ನೋಡಿ “ಇದನ್ನೇಕೆ ಇಲ್ಲಿ ಇಟ್ಟುಕೊಂಡಿದ್ದೀರಿ”? ಎಂದರಂತೆ.
ಆಗ ಗಣಪಯ್ಯ “ನನಗೆ ಅಹಂಕಾರ ಬರದೇ ಇರಲಿ ಅಂತ ನೆನಪು ಮಾಡಿಕೊಡಲು ಅದನ್ನು ಅಲ್ಲಿ ಕಾಣುವಂತೆ ಇಟ್ಟಿದ್ದೇನೆ. ಒಂದು ಕಾಲದಲ್ಲಿ ನಾನು ಅದರಲ್ಲೇ ಊಟ ಮಾಡುತ್ತಿದ್ದುದು” ಎಂದರಂತೆ.
ಸ್ವತಂತ್ರ ಪಾರ್ಟಿ ಸೇರಿದ ನಂತರ ಬಹುಬೇಗ ಪಕ್ಷದಲ್ಲಿ ಅವರ ಜವಾಬ್ದಾರಿ ಹೆಚ್ಚಾಗುತ್ತ ಹೋಯಿತು. ಅವರು ಸ್ವತಂತ್ರ ಪಾರ್ಟಿ ರಾಜ್ಯಾಧ್ಯಕ್ಷರೂ ಆದರು.

ಈ ಕಾಲದಲ್ಲಿ ಅವರು ಸ್ವತಂತ್ರ ಪಾರ್ಟಿಗೆ ನೂರಾರು ಯುವಕರನ್ನು ಸೇರಿಸಿಕೊಂಡು ಬೆಳೆಸಿದರು. ಸ್ಥಳೀಯವಾಗಿ ಹಾನುಬಾಳಿನ ಅಜ್ಜೇಗೌಡರು, (ಇವರು ಕರ್ನಾಟಕದ ಹಿರಿಯ ಅಧಿಕಾರಿಗಳಾಗಿದ್ದ ಐ.ಎಂ. ವಿಠ್ಠಲ ಮೂರ್ತಿಯವ ಮಾವ) ಗಾಣದಹೊಳೆ ಸುಬ್ಬೇಗೌಡರ ಮಗ ಕೇಶವೇ ಗೌಡರು ಮುಂತಾದವರೆಲ್ಲ ಇದ್ದರು.
ದಕ್ಷಿಣಕನ್ನಡದಿಂದ ಲೋಕಸಭಾ ಸದಸ್ಯರಾಗಿದ್ದ ಶ್ರೀನಿವಾಸ ಮಲ್ಯರೊಡನೆ ಗಣಪಯ್ಯನವರಿಗೆ ನಿಕಟ ಸಂಪರ್ಕವಿತ್ತು. ಮಲ್ಯರ ಬಗ್ಗೆ ಇವರಿಗೆ ಅಪಾರ ಗೌರವ, ಅವರ ದೂರದೃಷ್ಟಿಯ ಕುರಿತು ಮೆಚ್ಚುಗೆ.
ಒಮ್ಮೆ ಶ್ರೀನಿವಾಸ ಮಲ್ಯರೊಡನೆ ಗಣಪಯ್ಯ ಮತ್ತು ರವೀಂದ್ರನಾಥರು ಮಂಗಳೂರಿನಿಂದ ಸಕಲೇಶಪುರದತ್ತ ಕಾರನಲ್ಲಿ ಬರುತ್ತಿದ್ದರಂತೆ. ಆಗ ಹಾಸನ ಮಂಗಳೂರು ರಸ್ತೆಯಲ್ಲಿ ದಿನಕ್ಕೆ ಮೂರು ಬಸ್ಸುಗಳು ನಾಲ್ಕೈದು ಲಾರಿಗಳು ಮಾತ್ರ ಸಂಚರಿಸುತ್ತಿದ್ದ ಕಾಲ. ಏನೋ ಮಾತಾಡುತ್ತ ಮಲ್ಯರು ಈ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಮಾಡಲು ಶಿಫಾರಸು ಮಾಡಿದ್ದೇನೆ ಎಂದರಂತೆ.

ಆಗ ರವೀಂದ್ರನಾಥರು “ಸರ್ ಇಲ್ಲಿ ದಿನಕ್ಕೆ ಮೂರು ಬಸ್ಸು ಸಂಚರಿಸುವುದು ಇದು ರಾಷ್ಟ್ರೀಯ ಹೆದ್ದಾರಿಯೇ”? ಎಂದರಂತೆ,
ಆಗ ಮಲ್ಯರು “ರವಿ ನೀನು ಇವತ್ತಿನ ಸ್ಥಿತಿ ನೋಡಬೇಡ. ಇಪ್ಪತ್ತೈದು ವರ್ಷ ಮುಂದೆ ನೋಡು” ಎಂದು ಉತ್ತರಿಸಿದರಂತೆ.
ಇಂತಹ ದೂರ ದೃಷ್ಟಿಯನ್ನು ಗಣಪಯ್ಯನವರೂ ಹೊಂದಿದ್ದರು. ಇದನ್ನವರು ಕೃಷಿ ಉದಾಹರಣೆಗಳ ಮೂಲಕ ಹೇಳುತ್ತಿದ್ದರು. “ಒಂದು ಗಿಡ ನೆಡುವಾಗ, ಅದು ಬೆಳೆದು ನಿಂತಾಗ ಬೇಕಾಗುವ ಅವಶ್ಯಕತೆಗಳನ್ನು ಅರಿಯದೆ ನೆಟ್ಟವ ಒಳ್ಳೆಯ ಕೃಷಿಕನಾಗಲಾರ ಎನ್ನುತ್ತಿದ್ದರು.”
ಗಣಪಯ್ಯನವರ ಯಾವುದೇ ಬೇರೆ ಭಾಷಣವಿರಲಿ, ರಾಜಕೀಯ ಭಾಷಣಗಳಲ್ಲಿ ಕೂಡಾ ಕೃಷಿ ಮತ್ತು ಕೃಷಿಕರ ಸಮಸ್ಯೆಗಳು ಮತ್ತು ಪರಿಹಾರಗಳ ಪ್ರಸ್ತಾಪವಿಲ್ಲದೆ ಇರುತ್ತಿರಲಿಲ್ಲ. ಮುಂದೆ ಅವರು ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದಾಗಲೂ ನಂತರದ ಚುನಾವಣಾ ಭಾಷಣಗಳಲ್ಲೂ ಇದು ಮುಂದುವರಿದೇ ಇತ್ತು.

1967ನೇ ಇಸವಿ ರಾಷ್ಟ್ರ ರಾಜಕಾರಣದಲ್ಲಿ ಪ್ರಥಮ ಬಾರಿಗೆ ಕಮ್ಯೂನಿಸ್ಟೇತರ ಪಕ್ಷವೊಂದು ಕಾಂಗ್ರೆಸ್ಸಿಗೆ ಸವಾಲೊಡ್ಡಿತ್ತು. ಸ್ವತಂತ್ರ ಪಕ್ಷ 44 ಸ್ಥಾನ ಗಳಿಸಿ ಲೋಕಸಭೆಯಲ್ಲಿ ವಿರೋಧ ಪಕ್ಷದ ಸ್ಥಾನಗಳಿಸಿತ್ತು. ಹಾಸನ ಜಿಲ್ಲೆಯಲ್ಲಿ ನುಗ್ಗೆಹಳ್ಳಿ ಶಿವಪ್ಪ ಲೋಕಸಭೆಗೆ ಆಯ್ಕೆಯಾದರು. ಕರ್ನಾಟಕದ ವಿಧಾನಸಭೆಯಲ್ಲಿ ಹದಿನಾರು ಸ್ಥಾನ ಗಳಿಸಿತ್ತು. ಹಾಸನ ಜಿಲ್ಲೆಯಲ್ಲಿ ನಾಲ್ಕು ಜನ ಸ್ವತಂತ್ರ ಪಾರ್ಟಿಯಿಂದಲೂ, ಒಬ್ಬರು ಪಿ.ಎಸ್.ಪಿ ಯಿಂದ ಇನ್ನೊಬ್ಬರು ಪಕ್ಷೇತರರಾಗಿಯೂ ಸ್ವತಂತ್ರ ಪಾರ್ಟಿ ಬೆಂಬಲದೊಂದಿಗೆ ಗೆದ್ದಿದ್ದರು. ಅವರಲ್ಲಿ ಒಬ್ಬರು ಹೊಳೆನರಸೀಪುರದಿಂದ ಹೆಚ್.ಡಿ.ದೇವೇಗೌಡರು ಪ್ರಥಮ ಬಾರಿಗೆ ಶಾಸಕರಾಗಿದ್ದರು.
ಪಕ್ಕದ ಸುಳ್ಯ ಮತ್ತು ಸೋಮವಾರಪೇಟೆಯಲ್ಲೂ ಸ್ವತಂತ್ರ ಪಾರ್ಟಿ ಗೆದ್ದಿತ್ತು. ಸುಳ್ಯ ಕ್ಷೇತ್ರದಿಂದ ಎ.ರಾಮಚಂದ್ರ ಶಾಸಕರಾಗಿದ್ದರು. ಸೋಮವಾರಪೇಟೆಯಿಂದ ಗುಂಡುಕುಟ್ಟಿ ಮಂಜುನಾಥಯ್ಯ ಗೆದ್ದಿದ್ದರು.
ಗಣಪಯ್ಯನವರು ರಾಜ್ಯ ರಾಜಕಾರಣದ ಮುಂಚೂಣಿ ನಾಯಕರಾಗಿ ಹೊರ ಹೊಮ್ಮಿದ್ದರು. ಅದೇ ಚುನಾವಣೆಯಲ್ಲಿ ಸಿ.ಎಂ.ಪೂಣಚ್ಚ ಕಾಂಗ್ರೆಸ್‌ನಿಂದ ಮಂಗಳೂರು ಲೋಕಸಭಾ ಕ್ಷೇತ್ರದಿಂದ ಗೆದ್ದು ಕೇಂದ್ರದಲ್ಲಿ ರೈಲ್ವೆ ಸಚಿವರಾದರು.
ದೇಶಕ್ಕೆ ಸ್ವಾತಂತ್ರ್ಯ ದೊರೆಯುವ ಸಂದರ್ಭದಲ್ಲಿ ಪ್ರತ್ಯೇಕ ರಾಜ್ಯವಾಗಿದ್ದ ಕೊಡಗನ್ನು ಅಂದಿನ ಮೈಸೂರು ರಾಜ್ಯದಲ್ಲಿ ವಿಲೀನಗೊಳಿಸುವಾಗ ಕೊಡಗಿನ ಮುಖ್ಯಮಂತ್ರಿಗಳಾಗಿ ಅದನ್ನು ಬೆಂಬಲಿಸಿದವರು ಸಿ.ಎಂ. ಪೂಣಚ್ಚ. ಇದರಿಂದಾಗಿ ಅವರು ಕೊಡಗಿನಲ್ಲಿ ಸಾಕಷ್ಟು ವಿರೋಧವನ್ನು ಕಟ್ಟಿಕೊಳ್ಳಬೇಕಾಯಿತು. ಜೊತೆಗೆ ಪೂಣಚ್ಚನವರ ಇಬ್ಬರು ಆಪ್ತಗೆಳೆಯರು ಗುಂಡುಕುಟ್ಟಿ ಮಂಜುನಾಥಯ್ಯ, ಹಾರ್ಲೆ ಗಣಪಯ್ಯ ಕಾಂಗ್ರೆಸ್ಸಿನ ಕಡು ವಿರೋಧಿಗಳಾಗಿ ಸ್ವತಂತ್ರ ಪಾರ್ಟಿಯಲ್ಲಿದ್ದರು. ಪೂಣಚ್ಚನವರ ಮತದಾರ ಕ್ಷೇತ್ರಕ್ಕೆ ಸೇರಿದ ಸುಳ್ಯ ಮತ್ತು ಸೋಮವಾರಪೇಟೆ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ವತಂತ್ರ ಪಾರ್ಟಿಯೂ ವಿರಾಜಪೇಟೆಯಲ್ಲಿ ಜನಸಂಘವೂ ಜಯಗಳಿಸಿದ್ದವು. ಆದರೆ ಮಂಗಳೂರಿನ ಇತರ ವಿಭಾಗಗಳು ಪೂಣಚ್ಚನವರನ್ನು ಬೆಂಬಲಿಸಿದ್ದವು.
- ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)
ಇದನ್ನೂ ಓದಿ: ಕಳೆದುಹೋದ ದಿನಗಳು – 4: ಗಣಪಯ್ಯನವರು ಹಾರ್ಲೆ ಎಸ್ಟೇಟ್ ಮಾಲೀಕರಾಗಿದ್ದು ಹೇಗೆ?


