Homeಅಂಕಣಗಳುಗೌರಿ ಕಾರ್ನರ್; ಗಾಂಧಿವಾದಿಯ ಆಶ್ರಮವೂ ಸರ್ಕಾರದ ಸಮರವೂ..

ಗೌರಿ ಕಾರ್ನರ್; ಗಾಂಧಿವಾದಿಯ ಆಶ್ರಮವೂ ಸರ್ಕಾರದ ಸಮರವೂ..

- Advertisement -
- Advertisement -

ಇನ್ನು ಕೆಲವೇ ದಿನಗಳಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ 140ನೇ ಜನ್ಮದಿನವನ್ನು ಆಚರಿಸಲಿರುವ ದೇಶದಲ್ಲಿ, ಬರುವ ವಾರ ಭಾರತೀಯರ ವಿರುದ್ಧವೇ ಪ್ರಥಮ ಬಾರಿಗೆ ಯುದ್ಧವನ್ನು ಸರ್ಕಾರ ಸಾರಲಿರುವ ಹಿನ್ನೆಲೆಯಲ್ಲಿ ಹಿಮಾಂಶುಕುಮಾರ್ ಎಂಬುವವರಿಗೆ ಕೆಲ ತಿಂಗಳ ಹಿಂದೆ ಆದದ್ದನ್ನು ನೆನಪು ಮಾಡಿಕೊಳ್ಳುವುದು ಅತ್ಯಗತ್ಯ.

ಹಿಮಾಂಶುಕುಮಾರ್ ಅಪ್ಪಟ ಗಾಂಧಿವಾದಿ. ಗಾಂಧಿಯವರು ಯುವಜನತೆ ಈ ದೇಶದ ಬಡವರೊಂದಿಗೆ ವಾಸಿಸಬೇಕೆಂದೂ, ಅವರ ಏಳಿಗೆಗಾಗಿ ಶ್ರಮಿಸಬೇಕೆಂದೂ ಹೇಳಿದ್ದನ್ನೇ ತನ್ನ ಜೀವನದ ಆದರ್ಶ ಎಂದು ಭಾವಿಸಿದ ಹಿಮಾಂಶು ಅವರು 17 ವರ್ಷಗಳ ಹಿಂದೆ ಛತ್ತೀಸಗಡದ ದಾಂತೆವಾಡಕ್ಕೆ ಹೋದರು. ಅದಕ್ಕೆ ಕಾರಣ ದೇಶದ ಅತಿ ಹಿಂದುಳಿದ ಪ್ರದೇಶ ದಾಂತೆವಾಡವಾಗಿದ್ದು. ಅಲ್ಲಿಯ ಆದಿವಾಸಿಗಳಿಗೆ ಸರ್ಕಾರವು ಮೂಲ ಸೌಲಭ್ಯಗಳನ್ನೂ ನೀಡದಿದ್ದದ್ದು. ಗಾಂಧಿಯಂತೆಯೇ ಸರಳ ಜೀವನ ಅನುಸರಿಸುವ ಹಿಮಾಂಶು ದಾಂತೆವಾಡದಲ್ಲಿ ಆದಿವಾಸಿಗಳ ಅಭಿವೃದ್ಧಿಗೆಂದು ‘ವನವಾಸಿ ಚೇತನ ಆಶ್ರಮ’ ಎಂಬ ಸರ್ಕಾರೇತರ ಸಂಸ್ಥೆಯನ್ನು ಪ್ರಾರಂಭಿಸಿದರು.

ಕಾಲಕ್ರಮೇಣ ಆ ಆಶ್ರಮವು ಸ್ಥಳೀಯ ಆದಿವಾಸಿಗಳಿಗೆ ಆಶಾಕಿರಣವಾಯಿತು. ಕಾಲರಾ, ಮಲೇರಿಯಾದಂತಹ ಕಾಯಿಲೆಗಳಿಂದಾಗಿ ಸಾವನ್ನಪ್ಪುತ್ತಿದ್ದ ಆದಿವಾಸಿಗಳಿಗೆ ಆಶ್ರಮದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಜೊತೆಗೆ ಪ್ರಾಥಮಿಕ ಶಿಕ್ಷಣ ನೀಡುವುದು, ಶೌಚಾಲಯಗಳನ್ನು ಸ್ಥಾಪಿಸುವುದು, ಕುಡಿಯುವ ನೀರನ್ನು ಸಂಗ್ರಹಿಸುವುದು, ತಮ್ಮ ಹಕ್ಕುಗಳ ಬಗ್ಗೆ ಪ್ರಜ್ಞೆಯನ್ನು ಹೆಚ್ಚಿಸುವುದು, ಇಂತಹ ಸಮಾಜೋದ್ಧಾರ ಕ್ರಿಯೆಗಳಲ್ಲಿ ಹಿಮಾಂಶು ಮತ್ತವರ ಆಶ್ರಮ ಸಕ್ರಿಯವಾಗಿತ್ತು. ಸಾವಿರಾರು ಆದಿವಾಸಿಗಳ ನೆರವಿಗೆ ಬಂದಿದ್ದ ಈ ಆಶ್ರಮ ನಿರ್ಮಲಾ ದೇಶಪಾಂಡೆ ತರಹದ ಹಿರಿಯ ಗಾಂಧಿವಾದಿಗಳ ಮೆಚ್ಚುಗೆಯನ್ನು ಪಡೆದಿತ್ತು; ಖ್ಯಾತ ಲೇಖಕಿ ಮತ್ತು ಜನಪರ ಚಿಂತಕಿ ಅರುಂಧತಿ ರಾಯ್ ತರಹದ ಜನರಿಂದ ಪ್ರೋತ್ಸಾಹದ ಮಾತುಗಳನ್ನು ಗಳಿಸಿತ್ತು.

ಸರ್ಕಾರ ಮಾಡಬೇಕಿದ್ದ ಕೆಲಸಗಳನ್ನು ನಿಸ್ವಾರ್ಥವಾಗಿ ಮಾಡುತ್ತಿದ್ದ ಹಿಮಾಂಶು ಅವರ ಆಶ್ರಮವನ್ನು ಛತ್ತೀಸಗಡದ ಸರ್ಕಾರವೂ ಬೆಂಬಲಿಸಬೇಕಿತ್ತು. ಆದರೆ ಕಳೆದ ಮೇ ತಿಂಗಳು ಅಲ್ಲಿನ ರಾಜ್ಯ ಸರ್ಕಾರ ಮಾಡಿದ್ದೇನು ಗೊತ್ತಾ? ಸುಮಾರು ಒಂದು ಸಾವಿರ ಪೊಲೀಸರನ್ನು ಮತ್ತು ಜೆಸಿಬಿ ಯಂತ್ರಗಳನ್ನು ಕಳುಹಿಸಿದ ರಾಜ್ಯ ಸರ್ಕಾರ ಇಡೀ ಆಶ್ರಮವನ್ನೇ ಧ್ವಂಸಗೊಳಿಸಿತು! ಈ ಧ್ವಂಸ ಕಾರ್ಯ ಎಷ್ಟು ವ್ಯವಸ್ಥಿತವಾಗಿ ನಡೆಯಿತೆಂದರೆ ಆಶ್ರಮದ ಅಡುಗೆ ಮನೆ, ಔಷಧಾಲಯ, ಕಚೇರಿ, ಆದಿವಾಸಿಗಳು ತಂಗುತ್ತಿದ್ದ ಮನೆ, ಶೌಚಾಲಯ, ಟೆಲಿಫೋನ್ ಟವರ್ ಎಲ್ಲವನ್ನೂ ನುಚ್ಚುನೂರು ಮಾಡಿತು. ಅಷ್ಟೇ ಅಲ್ಲ, ಯಾವುದೇ ಕಾರಣಕ್ಕೂ ಯಾರೂ ಆಶ್ರಮದ ಭಗ್ನಾವಶೇಷಗಳ ನಡುವೆಯೂ ವಾಸಿಸಬಾರದೆಂದು ಅಲ್ಲಿದ್ದ ಒಂದೇ ಒಂದು ಬೋರ್‌ವೆಲ್ ಅನ್ನೂ ಕಿತ್ತು ಹಾಕಿತು.

PC : Youth Ki Awaaz

ಗಾಂಧಿವಾದಿ ಹಿಮಾಂಶು ಅವರಿಗೆ ಗಾಂಧಿ ನಾಡಾದ ಭಾರತದಲ್ಲಿ ನೀಡಲಾದ ಕೊಡುಗೆ ಇದು!

ಹಿಮಾಂಶು ಅವರ ವಿರುದ್ಧ ಛತ್ತೀಸಗಡದ ಸರ್ಕಾರ ಕೆಂಡಾಮಂಡಲವಾಗುವುದಕ್ಕೆ ಕಾರಣವಿದೆ. ಅದು ಛತ್ತೀಸಗಡದ ಆದಿವಾಸಿಗಳ ಬೆಂಬಲವನ್ನು ಪಡೆದಿರುವ ಮಾವೊವಾದಿಗಳನ್ನು ನಿಗ್ರಹಿಸುವ ನೆಪದಲ್ಲಿ ರಾಜ್ಯ ಪೊಲೀಸರು ಮತ್ತು ಅವರು ಸ್ಥಾಪಿಸಿರುವ ಸಂವಿಧಾನಬಾಹಿರ ಸಲ್ವಾಜುಡುಂ ಎಂಬ ಪಡೆಯ ಹಿಂಸಾಕೃತ್ಯಗಳನ್ನು ಹಿಮಾಂಶು ವಿರೋಧಿಸಿದ್ದು.

ಆ ರಾಜ್ಯದಲ್ಲಿ ಪೊಲೀಸರು ಮತ್ತು ಸಲ್ವಾಜುಡುಂನವರು ಎಂತೆಂತಹ ಕೃತ್ಯಗಳನ್ನು ಎಸಗುತ್ತಿದ್ದಾರೆ ಎಂಬುದಕ್ಕೆ ಈ ವರ್ಷ ವ್ರೆಚ್ಚಾಪಾಲ್ ಎಂಬ ಗ್ರಾಮದಲ್ಲಾದ್ದದ್ದನ್ನೇ ಒಂದು ಉದಾಹರಣೆಯಾಗಿ ತೆಗೆದುಕೊಳ್ಳಬಹುದು.

ಕಾಡಿನ ಮಧ್ಯದಲ್ಲಿರುವ ವ್ರೆಚ್ಚಾಪಾಲ್ ಗ್ರಾಮದಲ್ಲಿ ಸುಮಾರು 140 ಆದಿವಾಸಿ ಕುಟುಂಬಗಳು ವಾಸಿಸುತ್ತಿವೆ. ಈ ಗ್ರಾಮದ ಹತ್ತಿರವೇ ಕಬ್ಬಿನ ಅದಿರಿಗೆ ಅನ್ವೇಷಣೆ ನಡೆಸಲು ಟಾಟಾ ಮತ್ತು ಎಸ್ಸಾರ್ ಕಂಪನಿಗಳಿಗೆ ಸರ್ಕಾರ ಅನುಮತಿ ನೀಡಿದೆ. ಸಹಜವಾಗಿಯೇ ಗ್ರಾಮದ ಜನ ಅದನ್ನು ವಿರೋಧಿಸಿದರು. ಆಗ ಈ ಗ್ರಾಮದ ಮೇಲೆ ಪೊಲೀಸರು ಮತ್ತು ಸಲ್ವಾಜುಡುಂ ಪಡೆಗಳು ಮುಗಿಬಿದ್ದವು. ಕಳೆದ ನಾಲ್ಕು ವರ್ಷಗಳಲ್ಲಿ ಈ ಗ್ರಾಮವನ್ನು ಹಲವಾರು ಬಾರಿ ನೆಲಸಮ ಮಾಡಲಾಗಿದೆ. ಆದರೂ ಧೃತಿಗೆಡದ ಆದಿವಾಸಿಗಳು ಮತ್ತೆಮತ್ತೆ ತಮ್ಮ ಹಳ್ಳಿಗೆ ವಾಪಸ್ ಬಂದು ತಮ್ಮ ಬದುಕನ್ನು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದಾರೆ.

ಟಾಟಾ ಮತ್ತು ಎಸ್ಸಾರ್ ಕಂಪನಿಗಳ ಕೈಗಳಿಗೆ ಈ ಭೂಮಿ ಸಿಗಬೇಕೆಂದರೆ ಆದಿವಾಸಿಗಳು ಆ ಜಾಗವನ್ನು ಬಿಟ್ಟು ತೊಲಗಬೇಕು. ಆದರೆ ಹಠ ಬಿಡದ ಆದಿವಾಸಿಗಳೋ ಕದಲುತ್ತಿಲ್ಲ. ಪೊಲೀಸರು ಮತ್ತಷ್ಟು ಕ್ರೂರಿಗಳಾದರು. ಕಳೆದ ಜೂನ್ ತಿಂಗಳಲ್ಲಿ ಆ ಗ್ರಾಮದ ಮೇಲೆ ಪೊಲೀಸರು ಮತ್ತು ಸಲ್ವಾಜುಡುಂ ಗೂಂಡಾಗಳು ಮತ್ತೆ ದಾಳಿ ಮಾಡಿ ಒಬ್ಬನನ್ನು ಕೊಂದು, ಓರ್ವ ಮಹಿಳೆಯ ಮೇಲೆ ಅತ್ಯಾಚಾರವೆಸಗಿ, ಸುಮಾರು ನಲವತ್ತು ಮನೆಗಳಿಗೆ ಬೆಂಕಿ ಇಟ್ಟು, ಹೊಲಗಳಲ್ಲಿ ಬೆಳೆದುನಿಂತಿದ್ದ ಭತ್ತದ ಬೆಳೆಯನ್ನು ನಾಶ ಮಾಡಿದರು.

ಆಗ ಆ ಗ್ರಾಮದ ಜನರ ನೆರವಿಗೆ ಧಾವಿಸಿದ್ದು ಹಿಮಾಂಶು ಮತ್ತು ಅವರ ತಂಡ. ಗ್ರಾಮದ ಮೇಲಿನ ದಾಳಿ ಮತ್ತು ಅಮಾಯಕನ ಕೊಲೆಯನ್ನು ಖಂಡಿಸಿದ ಹಿಮಾಂಶು ಅಲ್ಲಿನ ಜನರಿಗೆ ಅಕ್ಕಿ ಬೇಳೆ ಕೊಟ್ಟರು. ಇದು ಸರ್ಕಾರವನ್ನು ಮತ್ತಷ್ಟು ಉಗ್ರವಾಗಿಸಿತು. ಆಗಸ್ಟ್ 9ರಂದು ವ್ರೆಚ್ಚಾಪಾಲ್ ಮತ್ತು ಸುತ್ತಮುತ್ತಲಿನ ಗ್ರಾಮಗಳ ಮೇಲೆ ಮತ್ತೊಂದು ದಾಳಿ ನಡೆಯಿತು. ಆ ದಾಳಿ ಎರಡು ದಿನಗಳ ಕಾಲ ನಡೆದು, ಆರು ಆದಿವಾಸಿಗಳು ಕೊಲ್ಲಲ್ಪಟ್ಟರು. ದಾಂತೆವಾಡದ ಎಸ್‌ಪಿ ಪ್ರಕಾರ ಆ ಆರು ಜನರೂ ನಕ್ಸಲರಾಗಿದ್ದು ಅವರೆಲ್ಲರನ್ನು ’ಎನ್‌ಕೌಂಟರ್’ನಲ್ಲಿ ಪೊಲೀಸರು ಕೊಂದಿದ್ದರು. ಆದರೆ ಪತ್ರಿಕೆಗಳಲ್ಲಿ ಪ್ರಕಟವಾದ ಫೋಟೋಗಳಲ್ಲಿ ಸತ್ತ ಐವರ ಕೈಕಾಲುಗಳನ್ನು ಹಗ್ಗದಲ್ಲಿ ಕಟ್ಟಿ ಹಾಕಿದ್ದು ಸ್ಪಷ್ಟವಾಗಿ ಕಾಣಿಸುತ್ತಿತ್ತು. ಅಂದು ಮಡಿದವರಲ್ಲಿ ಓರ್ವ ಮಹಿಳೆಯೂ ಇದ್ದು ಆಕೆಯ ಕೊರಳಿಗೆ ದೊಡ್ಡ ಕಲ್ಲನ್ನು ಕಟ್ಟಿಹಾಕಿದ್ದೂ ಆನಂತರದ ದಿನಗಳಲ್ಲಿ ಗೊತ್ತಾಯಿತು. “ಸರ್ಕಾರ ಯಾಕೆ ಹೀಗೆ ಅಮಾಯಕರನ್ನು ಕೊಲ್ಲುತ್ತಿದೆ?” ಎಂದು ಹಿಮಾಂಶು ಅವರು ಪ್ರಶ್ನಿಸಿದ್ದು ಸರ್ಕಾರಕ್ಕೆ ಮುಜುಗರದ ವಿಷಯವಾಗಿ ಪರಿಣಮಿಸಿತು.

ಇದು ಛತ್ತೀಸಗಡದ ಒಂದು ಗ್ರಾಮದ ಕತೆಯಷ್ಟೇ. ಇಂತಹದ್ದೇ ದೌರ್ಜನ್ಯ ಇತರೆ ಗ್ರಾಮಗಳಲ್ಲೂ ಪುನರಾವರ್ತನೆಯಾಗುತ್ತಿದೆ.

ಇನ್ನು ಅತ್ಯಾಚಾರಕ್ಕೊಳಗಾಗಿರುವ ಅಲ್ಲಿನ ಮಹಿಳೆಯರ ಪರಿಸ್ಥಿತಿಯಂತೂ ಕೇಳಲಸಾಧ್ಯ. ಪೊಲೀಸ್ ಮತ್ತು ಸಲ್ವಾಜುಡುಂನ ಗೂಂಡಾಗಳಿಂದ ಅತ್ಯಾಚಾರಕ್ಕೊಳಗಾಗಿದ್ದ ಆರು ಮಹಿಳೆಯರು ಹಿಮಾಂಶು ಅವರ ಆಶ್ರಮದಲ್ಲಿ ಆಶ್ರಯ ಪಡೆದಿದ್ದರು. ಹಿಮಾಂಶು ಅವರ ನೆರವಿನಿಂದ ಆ ಮಹಿಳೆಯರು ತಮ್ಮ ಮೇಲೆ ಅತ್ಯಾಚಾರವೆಸಗಿದ್ದವರ ವಿರುದ್ಧ ದೂರು ಕೊಡಲು ಯತ್ನಿಸಿದರು. ಕಾನೂನಿನ ಪ್ರಕಾರ ಮಹಿಳೆಯೊಬ್ಬಳು ತಮ್ಮ ಮೇಲೆ ಅತ್ಯಾಚಾರ ನಡೆದಿದೆ ಎಂದು ಹೇಳಿದರೂ ಸಾಕು ಕೇಸನ್ನು ದಾಖಲಿಸಿಕೊಳ್ಳಲು. ಆದರೆ ದಾಂತೆವಾಡದ ಎಸ್‌ಪಿ ಅವರ ದೂರನ್ನು ದಾಖಲಿಸಿಕೊಳ್ಳಲಿಲ್ಲ. ಅಷ್ಟೇ ಅಲ್ಲ, ಅಲ್ಲಿನ ಮ್ಯಾಜಿಸ್ಟ್ರೇಟ್, ಜಿಲ್ಲಾ ಜಡ್ಜ್ ಮತ್ತು ಚೀಫ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್‌ಗಳು ಕೂಡ ಅವರ ದೂರನ್ನು ದಾಖಲಿಸಿಕೊಳ್ಳಲು ನಿರಾಕರಿಸಿದರು.

ಹಿಮಾಂಶು ಇದನ್ನು ಪ್ರಶ್ನಿಸಿ ಸರ್ಕಾರಕ್ಕೆ ಇನ್ನಷ್ಟು ಮುಜುಗರ ಆಗುವಂತೆ ಮಾಡಿದರು.

ಆದ್ದರಿಂದ ಅವರನ್ನು ಒದ್ದೋಡಿಸಲು ಅವರ ಆಶ್ರಮವನ್ನೇ ನಾಶಗೊಳಿಸಲಾಯಿತು. ಅಷ್ಟೇ ಅಲ್ಲ, ಹಿರಿಯ ಪೊಲೀಸ್ ಅಧಿಕಾರಿಯೊಬ್ಬ ಅವರಿಗೆ ಉಚಿತ ಸಲಹೆಯನ್ನು ನೀಡಿದ. “ನೀನು ಈ ಆಶ್ರಮವನ್ನು ಮಾತ್ರವಲ್ಲ, ಈ ಜಿಲ್ಲೆಯನ್ನೇ ತೊರೆದರೆ ನಿನಗೆ ಕ್ಷೇಮ” ಎಂದ ಆ ಪೊಲೀಸ್.

PC : Human Rights Watch

ಆದರೆ ಹಿಮಾಂಶು ಅಲ್ಲಿಂದ ಹೊರಟಿಲ್ಲ. “ನಾನು ಆದಿವಾಸಿ ಅಲ್ಲ. ಆದರೆ ಮಹಾತ್ಮಾ ಗಾಂಧಿ ಹೇಳಿದ್ದಂತೆ ಆದಿವಾಸಿಗಳೊಂದಿಗೆ ಬದುಕಲು ಇಲ್ಲಿಗೆ ಬಂದಿದ್ದೇನೆ. ಇಲ್ಲಿನ ಜನ ಹೇಗೆ ಇಲ್ಲೇ ಮಣ್ಣಾಗುತ್ತಾರೋ, ನಾನೂ ಅವರಂತೆಯೇ ಇಲ್ಲೇ ಸಾಯುತ್ತೇನೆ, ಅಷ್ಟೇ ಅಲ್ಲ, ನಾನು ಬದುಕಿರುವವರೆಗೂ ನಿರಾಯುಧ ಆದಿವಾಸಿಗಳ ಮೇಲೆ ಸರ್ಕಾರ ನಡೆಸುತ್ತಿರುವ ಈ ಅಮಾನುಷ ಯುದ್ಧವನ್ನು ವಿರೋಧಿಸುತ್ತಲೇ ಇರುತ್ತೇನೆ” ಎಂದು ಅವರು ಹೇಳುತ್ತಾರೆ.

ಸದ್ಯದಲ್ಲೇ ಪ್ರಾರಂಭವಾಗಲಿರುವ ’ಆಪರೇಷನ್ ಗ್ರೀನ್ ಹಂಟ್’ ಬಗ್ಗೆ ಹಿಮಾಂಶು ಹೀಗೆ ಹೇಳುತ್ತಾರೆ: “ನಕ್ಸಲಿಸಂ ಒಂದು ಸಮಸ್ಯೆ ಎಂಬುದರ ಬಗ್ಗೆ ಯಾರಲ್ಲೂ ಭಿನ್ನಾಭಿಪ್ರಾಯವಿಲ್ಲ. ಆದರೆ ಸಾವಿನಲ್ಲಿ ಅಂತ್ಯಗೊಳ್ಳುವ ಅವರ ರಾಜಕೀಯದತ್ತ ಈ ಬಡಜನತೆ ಯಾಕೆ ಆಕರ್ಷಿತರಾಗುತ್ತಿದ್ದಾರೆ? ನಮ್ಮ ವ್ಯವಸ್ಥೆಯಿಂದಾಗುವ ಅವಮಾನ ಮತ್ತು ಅನ್ಯಾಯಗಳನ್ನು ಸಹಿಸುವುದಕ್ಕಿಂತ ಮರಣವೇ ಆಕರ್ಷಿಕವಾಗಿ ಕಾಣಿಸುವಂತಹ ಘೋರ ವ್ಯವಸ್ಥೆಯನ್ನು ಸೃಷ್ಟಿಸಿದ್ದೇವೆಯೇ? ಹಾಗಿದ್ದರೆ ಅಂತಹ ವ್ಯವಸ್ಥೆಯನ್ನು ಹೇಗೆ ಸಮರ್ಥಿಸಿಕೊಳ್ಳುವುದು? ಇಲ್ಲಿನ ಜನರಿಗೆ ಬೇಕಿರುವುದು ಆಹಾರ, ಆರೋಗ್ಯ ವ್ಯವಸ್ಥೆ, ಶಾಲೆ, ಬಟ್ಟೆ ಮತ್ತು ತಮ್ಮ ಭೂಮಿಯ ಮೇಲಿನ ನ್ಯಾಯಬದ್ಧವಾದ ಹಕ್ಕು ಮಾತ್ರ. ಅದನ್ನು ನೀಡಿ ಅವರನ್ನೆಲ್ಲ ಮುಖ್ಯವಾಹಿನಿಗೆ ತರುವ ಬದಲು, ಬಂದೂಕುಗಳ ಮೂಲಕವೇ ಪ್ರಜಾಪ್ರಭುತ್ವವನ್ನು ನಡೆಸುತ್ತೇವೆ ಎಂದು ಭಾವಿಸಿದರೆ, ನಾವು ಭಯಾನಕ ಮತ್ತು ರಿಪೇರಿ ಮಾಡಲಾಗದಂತಹ ಸ್ಥಿತಿಯನ್ನು ಪ್ರವೇಶಿಸುತ್ತೇವೆ”.

ಅವರ ಈ ಮಾತುಗಳು ಯಾರ ಕಿವಿಗೂ ಬೀಳುತ್ತಿಲ್ಲ.

ಗಾಂಧಿವಾದಿ ಹಿಮಾಂಶು ಅವರ ಆಶ್ರಮವನ್ನು ಕೆಡವಿದ ನಂತರದ ಒಂದು ವಿಡಿಯೋಅನ್ನು ಇಂಟರ್‌ನೆಟ್‌ನಲ್ಲಿ ನೋಡಿದೆ. ಅದರಲ್ಲಿನ ಒಂದು ದೃಶ್ಯ ನನ್ನ ಕಣ್ಣಿಗೆ ಈಗಲೂ ಕಟ್ಟಿದಂತಿದೆ. ಅದು ಪಾಳುಬಿದ್ದಿರುವ ಔಷಧಾಲಯ. ಔಷಧಿಗಳು, ಕಾಗದ ಪತ್ರಗಳು ನೆಲದ ಮೇಲೆ ಹರಡಿ ಬಿದ್ದಿವೆ. ಮಳೆ ಬಿದ್ದಿದ್ದರಿಂದ ಆ ಹಾಳೆಗಳಿಗೆ ಕೆಸರು ಅಂಟಿದೆ.

ಆ ಹಾಳೆಗಳ ನಡುವೆ ಕೆಸರು ಮೆತ್ತಿಕೊಂಡು ಬಿದ್ದಿತ್ತು ನಗುಮುಖದ ಬಾಪುವಿನ ಚಿತ್ರ॒

(ಅಕ್ಟೋಬರ್ 14, 2009ರಂದು ಗೌರಿಯವರು ಬರೆದಿದ್ದ ’ಕಂಡಹಾಗೆ’ ಅಂಕಣದ ಸಂಗ್ರಹ ಭಾಗ ಇದು)


ಇದನ್ನೂ ಓದಿ: ಗೌರಿ ಕಾರ್ನರ್; ರೇವತಿ ಎಂಬ ತಂಗಿಯ ಆತ್ಮಕಥನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...