Homeಮುಖಪುಟಗೌರಿ ಕೊಲೆಯೂ, ಸಿದ್ದರಾಮಯ್ಯನವರನ್ನು ಹೊಡೆದು ಹಾಕಬೇಕು ಎಂಬ ಕರೆಯೂ..

ಗೌರಿ ಕೊಲೆಯೂ, ಸಿದ್ದರಾಮಯ್ಯನವರನ್ನು ಹೊಡೆದು ಹಾಕಬೇಕು ಎಂಬ ಕರೆಯೂ..

ಕಾನೂನು ಕಟ್ಟಳೆಗಳನ್ನು ಬದಿಗಿಟ್ಟು ನೈತಿಕವಾಗಿ ನೋಡಿದರೂ, ಎಲ್ಲರನ್ನೂ ನಿರ್ನಾಮ ಮಾಡುತ್ತಾ ಹೋಗಿ ಕೊನೆಗೆ ಯಾವುದೋ ಒಂದು ಪಕ್ಷದ ಕೆಲವು ಮಂದಿ ಉಳಿದು ಯಾವ ಸಾಮ್ರಾಜ್ಯ ಕಟ್ಟಲಿದ್ದಾರೆ?

- Advertisement -
- Advertisement -

ಸೆಪ್ಟಂಬರ್ 5, 2017ರಂದು ಪರಶುರಾಮ್ ವಾಘ್ಮೋರೆ ಎಂಬ ವ್ಯಕ್ತಿ ಪತ್ರಕರ್ತೆ ಗೌರಿ ಲಂಕೇಶ್‌ರಿಗೆ ಗುಂಡು ಹೊಡೆದು ಕೊಂದ ಎಂದು ಈ ಹತ್ಯೆಯ ಪ್ರಕರಣದ ಆರೋಪ ಪಟ್ಟಿ ನುಡಿಯುತ್ತದೆ. ಸದ್ಯಕ್ಕೆ ಈ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಹಿಂದೂ ಧರ್ಮದ ಒಂದು ಪಂಗಡಕ್ಕೆ ಸೇರಿದ ಈ ತೀವ್ರವಾದಿ “ತನ್ನ ಧರ್ಮವನ್ನು ಉಳಿಸಿಕೊಳ್ಳಲು” ಗೌರಿಯನ್ನು ಕೊಂದೆ ಎಂದು ವಿಶೇಷ ತನಿಖಾ ದಳದ ಎದುರು ಒಪ್ಪಿಕೊಂಡಿದ್ದ ಎಂದು ವರದಿಯಾಗಿತ್ತು. ಗೌರಿ ಹತ್ಯೆಯ ಸ್ಕೆಚ್ ಹಾಕಿದ್ದು ಅಮೋಲ್ ಕಾಳೆ ಎಂಬ ಮಾಸ್ಟರ್ ಮೈಂಡ್ ಎನ್ನುತ್ತದೆ ಚಾರ್ಜ್ ಶೀಟ್. ಇವರಿಗೆ ಬಂಧೂಕು ಒದಗಿಸಲು ಸಹಾಯ ಮಾಡಿದ್ದು ಮಂಡ್ಯ ಭಾಗದ ಒಕ್ಕಲಿಗ ಸಮುದಾಯದ ವ್ಯಕ್ತಿ ನವೀನ್ ಕುಮಾರ್ ಎಂಬಾತ. ಈಗ 18 ಜನರ ವಿರುದ್ಧ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದು, ಈ ಕೊಲೆಯ ಪ್ರಕರಣದ ಒಬ್ಬ ಆರೋಪಿ ಇನ್ನೂ ತಲೆಮರೆಸಿಕೊಂಡಿದ್ದಾನೆ. ಸನಾತನ ಸಂಸ್ಥಾ ಎಂಬ ಸಂಘಟನೆಯ ವಿರುದ್ಧ ಕೂಡ ಪೊಲೀಸರು ಆರೋಪ ಹೊರಿಸಿದ್ದಾರೆ.

ನವೀನ್ ಕುಮಾರ್ ಮತ್ತು ಪರಶುರಾಮ್ ವಾಘ್ಮೋರೆ

ಈ ಅಪರಾಧವೆಸೆಗಲು ಈ ಆರೋಪಿಗಳ ತಲೆತಿರುಗುವಂತೆ ಮಾಡಲು ಮೊದಲು ಉಪಯೋಗಿಸಿದ ಅಸ್ತ್ರ ಒಂದು ‘ವಿಡಿಯೋ ತುಣುಕು’. ಗೌರಿ ಲಂಕೇಶ್ ಅವರು 2012ರಲ್ಲಿ ಹಿಂದೂ ಧರ್ಮದ ಬಹುತ್ವದ ಬಗ್ಗೆ ಮಾತನಾಡುತ್ತಾ, ಈ ಧರ್ಮದಲ್ಲಿರುವ ಅಸಂಖ್ಯಾತ ಜಾತಿ ಪಂಗಡಗಳ ಬಗ್ಗೆ ಹೇಳುತ್ತಾ, ಈ ಧರ್ಮಕ್ಕೆ ಅಪ್ಪ ಅಮ್ಮ ಯಾರೂ ಇಲ್ಲ ಎಂಬ ಮಾತುಗಳನ್ನಾಡಿದ್ದರು. ಆದರೆ ಕುತ್ಸಿತ ಮನಸ್ಸಿನ ಹಿಂದುತ್ವವಾದಿಗಳು ‘ಅಪ್ಪ ಅಮ್ಮ ಯಾರೂ ಇಲ್ಲ’ ಎಂದು ಹೇಳುವ ಭಾಗದ ಐದು ನಿಮಿಷದ ಭಾಗವನ್ನು ಮೂಲ ವಿಡಿಯೋದಿಂದ ಕತ್ತರಿಸಿ, ಪ್ರಚಾರ ಮಾಡಿ, ಲಕ್ಷಾಂತರ ಜನರಿಗೆ ವಿಷ ಬಿತ್ತುವ ಯೋಜನೆಗೆ ಬಳಸಿಕೊಳ್ಳಲಾಗಿತ್ತು. ಇತ್ತೀಚೆಗೆ ಪ್ಯಾರಿಸ್ ಮೂಲದ ‘Forbidden Stories’ ಎಂಬ ಸಂಸ್ಥೆ ಗೌರಿ ಕೊಲೆಯ ಬಗ್ಗೆ ವರದಿ ಮಾಡುತ್ತಾ ಈ ವಿಡಿಯೋ ವೈರಲ್ ಆದ ವಿನ್ಯಾಸವನ್ನು ಬಿಚ್ಚಿಟ್ಟಿದೆ. ಈ ತನಿಖೆಗೆ digitalwitnesslab.org ನವರು ಕೂಡ ಕೈಜೋಡಿಸಿದ್ದಾರೆ. ಈ ತನಿಖೆಯ ಪ್ರಕಾರ ಯೂಟ್ಯೂಬ್ ವೇದಿಕೆಯಲ್ಲಿ ಈ ವಿಡಿಯೋ ತುಣುಕನ್ನು ಹತ್ತಾರು ಯೂಸರ್‌ಗಳು ಕಾಪಿ ಮಾಡಿ ಹಾಕಿದ್ದರು. “ರಿಯಲ್ ಫೇಸ್ ಆಫ್ ಸೆಕ್ಯುಲರಿಸಂ” (ಜಾತ್ಯಾತೀತತೆಯ ನಿಜ ಮುಖ) ಎಂಬ ಹೆಸರಿನ ಈ ವಿಡಿಯೋ ಯೂಟ್ಯೂಬ್ ನಲ್ಲಿ ಸುಮಾರು ಎರಡೂವರೆ ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿತ್ತು (ಈಗ ವಿಡಿಯೋವನ್ನು ತೆಗೆದು ಹಾಕಲಾಗಿದೆ – ಆದರೆ ಅದನ್ನು ಆರ್ಕೈವ್ ಮಾಡಿ ಸೇವ್ ಮಾಡಲಾಗಿದೆ). ಫೇಸ್ಬುಕ್ ವೇದಿಕೆಯಲ್ಲಿ ಈ ವಿಡಿಯೋಗೆ ಸುಮಾರು 130 ದಶಲಕ್ಷ ಎಂಗೇಜ್‌ಮೆಂಟ್ ಇದೆ. ಇನ್ನು 13 ಅಕ್ಟೋಬರ್ 2014 ರಲ್ಲಿ ಈ ವಿಡಿಯೋವನ್ನು ಫೇಸ್ಬುಕ್ ನಲ್ಲಿ ಹಂಚಿಕೊಂಡಿದ್ದ ‘ಕರ್ನಾಟಕ ಬಿಜೆಪಿ’, “This is an old video but nevertheless, it will not be the last from such ‘seculars’. The next time we hear such speeches, we should give a fitting legal reply” (ಇದು ಹಳೆ ವಿಡಿಯೋ ಆದರೂ ಅಂತಹ ‘ಜಾತ್ಯಾತೀತ’ರಿಂದ ಇದು ಕೊನೆಯದೇನೂ ಆಗಿರುವುದಿಲ್ಲ. ಮುಂದಿನ ಬಾರಿ ಇಂಥ ಭಾಷಣಗಳನ್ನು ನಾವು ಕೇಳಿದಾಗ, ಇದಕ್ಕೆ ಕಾನೂನು ರೀತಿಯಲ್ಲಿ ಸರಿಯಾದ ಉತ್ತರ ಕೊಡಬೇಕು) ಎಂದಿತ್ತು. ತಮಗೆ ಬೇಕಾದಂತೆ ಕತ್ತರಿಸಿದ ವಿಡಿಯೋಗೆ ಇವರು ಕಾನೂನು ರೀತಿಯ ಉತ್ತರ ಕೊಡಬೇಕು ಅಂದರೂ ಕೂಡ ಅವರನ್ನು ಬೆಂಬಲಿಸುವ ಫ್ರಿಂಜ್ ಗಳು ‘ಕೊಲ್ಲುವ’ ಭಾಷೆಯನ್ನಾಗಲೇ ತಮ್ಮದಾಗಿಸಿಕೊಂಡಿದ್ದರು. ಅದರಲ್ಲಿ ಯಶಸ್ವಿಯಾಗಿ ಕರ್ನಾಟಕದಲ್ಲಿ ದುರಂತದ ಒಂದು ಅಧ್ಯಾಯವನ್ನು ಬರೆದಿದ್ದರು. ಈಗ ಆ ಕೊಲುವ ಭಾಷೆಯನ್ನು ಬಿಜೆಪಿಯ ಮುಖಂಡರು, ಸಚಿವರು ಸಾರ್ವಜನಿಕರೆದುರಲ್ಲಿಯೇ ರಾಜಾರೋಷವಾಗಿ ಉಪಯೋಗಿಸುತ್ತಿದ್ದಾರೆ.

ಅಮೋಲ್ ಕಾಳೆಯನ್ನು ರ್‍ಯಾಡಿಕಲೈಸ್‌ ಮಾಡಲು ಆತನ ಲ್ಯಾಪ್‌ಟಾಪ್ ನಲ್ಲಿ ಈ ವಿಡಿಯೋವನ್ನು ಡೌನ್‌ಲೋಡ್ ಮಾಡಿ ಪದೇಪದೇ ತೋರಿಸಲಾಗಿತ್ತಂತೆ. ಗೌರಿ ಕೊಲೆಯ ಆರೋಪಿಗಳಲ್ಲಿ ಎಷ್ಟೋ ಜನಕ್ಕೆ ಗೌರಿ ಏನು ಕೆಲಸ ಮಾಡುತ್ತಿದ್ದಾರೆ ಎಂಬುದು ಕೂಡ ತಿಳಿದಿರಲಿಲ್ಲ. ಹೀಗೆ ನಿಜ ಸಂಗತಿಗಳನ್ನು ಧರ್ಮಾಂಧತೆಯಿಂದ ಮುಚ್ಚಿಹಾಕಿ ಕೊಲೆ ಮಾಡಲು ಪ್ರೇರೇಪಿಸಲಾಗಿತ್ತು. ಎಸ್ ಐ ಟಿ ತನಿಖೆಯ ನಂತರ ಈ ಹಿಂದುತ್ವವಾದಿಗಳ ಹಿಟ್ ಲಿಸ್ಟ್ ನಲ್ಲಿ ಗಿರೀಶ್ ಕಾರ್ನಾಡ್, ಭಗವಾನ್ ಸೇರಿದಂತೆ ಇನ್ನೂ ಹಲವರಿರುವ ಸಂಗತಿ ಬಯಲಾಗಿತ್ತು. ಈ ಹಿಂದೆ ಈ ಕೆಲಸವನ್ನು ಇಂತಹ್ ಫ್ರಿಂಜ್ ಸಂಘಟನೆಗಳು ಮಾಡುತ್ತಿದ್ದರೆ ಈಗ ಮುಖ್ಯವಾಹಿನಿ ಪಕ್ಷವಾಗಿರುವ ಬಿಜೆಪಿ ಪಕ್ಷದ ಮುಖಂಡರು ಬಹಿರಂಗವಾಗಿ, ಸಾರ್ವಜನಿಕ ಸಮಾವೇಶದಲ್ಲಿ ಹೊಡೆದುಹಾಕುವ ಕರೆ ಕೊಡುತ್ತಿದ್ದಾರೆ. ಫೆಬ್ರವರಿ 15ರಂದು ಮಂಡ್ಯದಲ್ಲಿ ನಡೆದ ಒಂದು ಸಾರ್ವಜನಿಕ ಸಭೆಯಲ್ಲಿ ಉನ್ನತ ಶಿಕ್ಷಣ ಸಚಿವ ಸಿ.ಎನ್. ಅಶ್ವತ್ಥ ನಾರಾಯಣ “ಮನಸ್ಸು ಮಾಡಿದ್ರೆ ಏನು ಬೇಕಾದ್ರೂ ಸಾಧಿಸ್ತಾರೆ.. ರಾಜಕೀಯ ದಿಕ್ಸೂಚಿ ಮಂಡ್ಯದಿಂದಲೇ ಕಾಣಬೇಕು. ಇಲ್ಲದಿದ್ರೆ, ಟಿಪ್ಪು ಜಾಗಕ್ಕೆ ಸಿದ್ದರಾಮಯ್ಯ ಬಂದುಬಿಡ್ತಾರೆ. ಟಿಪ್ಪು ಬೇಕಾ? ಸಾವರ್ಕರ್ ಬೇಕಾ? ಉರಿಗೌಡ ನಂಜೇಗೌಡ ಟಿಪ್ಪುವನ್ನು ಹೊಡದಾಕಿದ ಹಾಗೆ ಸಿದ್ದರಾಮಯ್ಯರನ್ನು ನೀವು ಹೊಡದಾಕಬೇಕು”. ಹೀಗೆ ಇತಿಹಾಸದಲ್ಲಿ ಇಲ್ಲದ ಉರಿ ಗೌಡ, ನಂಜೇಗೌಡರನ್ನ ಸೃಷ್ಟಿ ಮಾಡಿ ಬಿಜೆಪಿ ಮುಖಂಡರು ಇಷ್ಟು ದಿನ ನಂಜು ಹುಟ್ಟಿಹಾಕುತ್ತಿದ್ದರೆ ಅಶ್ವತ್ಥ ನಾರಾಯಣ ಒಂದು ಹೆಜ್ಜೆ ಮುಂದೆ ಹೋಗಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಹೊಡೆದು ಹಾಕುವ ಕರೆ ಕೊಟ್ಟಿದ್ದಾರೆ. ಹಲವು ವಲಯಗಳಿಂದ ಆಕ್ರೋಶ ವ್ಯಕ್ತವಾದ ಮೇಲೆ, “ಇದೊಂದು ರಾಜಕೀಯ ವಾಗ್ದಾಳಿ ಅಷ್ಟೇ, ಇದರಿಂದ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ” ಎಂದಿದ್ದಾರೆ.

ಹತ್ಯೆಯ ಕರೆಕೊಟ್ಟು ಅದನ್ನು ರಾಜಕೀಯ ವಾಗ್ದಾಳಿ ಎಂದು ಕರೆದು ನುಣುಚಿಕೊಂಡುಬಿಡುವುದು ಅಷ್ಟು ಸುಲಭವಾಗಿ ಹೋಗಿದೆಯೇ? ಈ ಕರೆಯಿಂದ ಎಷ್ಟೋ ಜನ ಧರ್ಮಾಂಧ ರ್‍ಯಾಡಿಕಲ್‌ಗಳು ಸ್ಫೂರ್ತಿ ಪಡೆದುಕೊಂಡು, ಗೌರಿ, ಕಲ್ಬುರ್ಗಿ ಮುಂತಾದವರನ್ನು ಹತ್ಯೆ ಮಾಡಿದಂತೆ ರಾಜಕೀಯ ಮುಖಂಡರ ಹತ್ಯೆಗೂ ಪ್ರಯತ್ನ ಪಡುವುದಿಲ್ಲ ಎಂಬುದಕ್ಕೆ ಆಶ್ವತ್ಥ ನಾರಾಯಣರವರು ಏನು ಖಾತ್ರಿ ಕೊಡಬಲ್ಲರು? ಗೌರಿ ಹತ್ಯೆಯಲ್ಲಿ ಒಕ್ಕಲಿಗ ಜನಾಂಗಕ್ಕೆ ಸೇರಿದ ನವೀನ್ ಕುಮಾರ್ ಆರೋಪ ಪಟ್ಟಿಯಲ್ಲಿದ್ದಾನೆ. ಒಕ್ಕಲಿಗ ಜನಾಂಗದ ಯುವಕರನ್ನು ದಾರಿ ತಪ್ಪಿಸಲು ಸಂಘ ಪರಿವಾರ ಇಂತಹ ಆಟಗಳನ್ನು ಆಡುತ್ತಿದೆಯೇ? ಬಿಜೆಪಿಯ ಇತರ ಹಿರಿಯ ಮುಖಂಡರು ಮೌನವಾಗಿರುವುದೇಕೆ? ಜನರ ಪ್ರಾಣವನ್ನು ಪಣಕ್ಕಿಟ್ಟು ಇಂತಹ ದ್ವೇಷದ ವಾತಾವಾರಣ ಬೆಳೆದು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಅವರು ಕಾತರರಾಗಿದ್ದಾರೆಯೇ? ಮುಂತಾದ ಪ್ರಶ್ನೆಗಳನ್ನು ಸದರಿ ಸರ್ಕಾರ ಕರ್ನಾಟಕದ ನಾಗರಿಕರಿಗೆ ಉತ್ತರಿಸಬೇಕಿದೆ.

ಇಷ್ಟು ಸಾಲದೆಂಬಂತೆ 14ನೇ ಫೆಬ್ರವರಿಯಂದು ಬಿಜೆಪಿಯ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತೆ ಇಂತಹುದೇ ಕರೆಯನ್ನು ಕೊಟ್ಟಿರುವುದು ಆತಂಕಕಾರಿಯಾಗಿದೆ. ಕೊಪ್ಪಳ ಜಿಲ್ಲೆಯ ಯಲಬುರ್ಗದಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡುತ್ತಾ “ಟಿಪ್ಪು ಅನುಯಾಯಿಗಳು ಈ ನೆಲದಲ್ಲಿ ಇರಬಾರದು” ಎಂದು ದ್ವೇಷದ ಮಾತಾಡಿ ಪರೋಕ್ಷವಾಗಿ ನಿರ್ಮೂಲನೆಯ ಕರೆಕೊಟ್ಟಿದ್ದಾರೆ. ಹೀಗೆ ಆಳುವ ಪಕ್ಷದ ಇಬ್ಬರು ರಾಜಕೀಯ ಮುಖಂಡರು ಸಮಾಜ ಮತ್ತು ಜನವಿರೋಧಿ ಹೇಳಿಕೆಗಳನ್ನು ನೀಡುತ್ತಾ ಚುನಾವಣಾ ಧ್ರುವೀಕರಣದ ತಳಪಾಯವನ್ನು ಗಟ್ಟಿ ಮಾಡಿಕೊಳ್ಳುತ್ತಿದ್ದರೆ, ಎಲ್ಲೋ ಧರ್ಮಾಂಧತೆಯಲ್ಲಿ ಮುಳುಗಿರುವ ಯಾರೋ ಫ್ರಿಂಜ್‌ಗಳು ಬಹುಷಃ ಕೊಲೆಗೆ ಸಿದ್ಧವಾಗುತ್ತಲೂ ಇರಬಹುದು!

ಇದನ್ನೂ ಓದಿ: ಟಿಪ್ಪು ಅನುಯಾಯಿಗಳನ್ನು ಕೊಲ್ಲಿರಿ: ನಳಿನ್ ಕುಮಾರ್‌‌ ಪ್ರಚೋದನಾತ್ಮಕ ಹೇಳಿಕೆ

ಬಸವಣ್ಣ, ಕುವೆಂಪು, ನಾಲ್ವಡಿ ಕೃಷ್ಣರಾಜ ಒಡೆಯರ್, ಬಿ ಕೃಷ್ಣಪ್ಪನಂತಹ ಸಾವಿರಾರು ಮಹನೀಯರು ಕಟ್ಟಿಕೊಟ್ಟ ವಿವೇಕದಲ್ಲಿ ರೂಪುಗೊಂಡ ಈ ಕನ್ನಡ ನಾಡಿನಲ್ಲಿ ಕೊಲೆಗೆ ಕರೆ ಕೊಡುವಂತಹ, ಅದು ಸಾಧ್ಯವಾಗುವ ದ್ವೇಷದ ಮತ್ತು ಧ್ರುವೀಕರಣದ ಪರಿಸ್ಥಿತಿಯನ್ನು ನಿರ್ಮಾಣ ಮಾಡುವಂತಹ ಕೆಲಸಕ್ಕೆ ಸಂಘ ಪರಿವಾರಕ್ಕೆ ಸೇರಿದ ಹಲವರು ಹುನ್ನಾರ ನಡೆಸುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಹೀಗೆ ಮತ್ತೊಬ್ಬನನ್ನು ನಿರ್ಮೂಲನೆ ಮಾಡಲು ಕರೆ ಕೊಡುವುದು ಮಹಾಪರಾಧ. ನಮ್ಮ ಸಂವಿಧಾನ ಕೂಡ ಇಂತಹ ದ್ವೇಷದ ಮಾತುಗಳನ್ನು ಮನ್ನಿಸುವುದಿಲ್ಲ. ಕಾನೂನು ಕಟ್ಟಳೆಗಳನ್ನು ಬದಿಗಿಟ್ಟು ನೈತಿಕವಾಗಿ ನೋಡಿದರೂ, ಎಲ್ಲರನ್ನೂ ನಿರ್ನಾಮ ಮಾಡುತ್ತಾ ಹೋಗಿ ಕೊನೆಗೆ ಯಾವುದೋ ಒಂದು ಪಕ್ಷದ ಕೆಲವು ಮಂದಿ ಉಳಿದು ಯಾವ ಸಾಮ್ರಾಜ್ಯ ಕಟ್ಟಲಿದ್ದಾರೆ?

ಈ ಎಲ್ಲಾ ಪ್ರಹಸನಗಳ ಹಿನ್ನೆಲೆಯಲ್ಲಿ, ಕರ್ನಾಟಕ ಹಿಂದೆಂದೂ ಕಾಣದಂತಹ ಕ್ಷೋಭೆಗೆ ತುತ್ತಾಗಿರುವುದು ಸ್ಪಷ್ಟವಾಗಿದ್ದು, ಇಲ್ಲಿಯವರೆಗೂ ಕಟ್ಟಿಕೊಂಡಿದ್ದ ವಿವೇಕ ನಿರ್ನಾಮವಾಗುವುದರೊಳಗೆ ನಾಗರಿಕರು ಎಚ್ಚೆತ್ತುಕೊಳ್ಳಬೇಕಿದೆ.

ಇದನ್ನೂ ಓದಿ: ಭಾರತದಲ್ಲಿ ಹೆಚ್ಚುತ್ತಿರುವ ಮುಸ್ಲಿಂ ವಿರೋಧಿ ಹಾಡುಗಳು: ಇಸ್ಲಾಮೋಫೋಬಿಯ ಹರಡುವ ಪ್ರಯತ್ನ ತೆರೆದಿಟ್ಟ ಜರ್ಮನ್ ಸಾಕ್ಷ್ಯಚಿತ್ರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...