Homeಅಂಕಣಗಳುಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್' ಅನುವಾದ; ಶತಮೂರ್ಖ (ಅಧ್ಯಾಯ-4; ಭಾಗ-4)

ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-4; ಭಾಗ-4)

- Advertisement -
- Advertisement -

ಜನರಲ್ ಎಪಾಂಚಿನ್ ಈಗ ಕುಟುಂಬದ ತಂದೆಯ ಸ್ಥಾನದಲ್ಲಿ ನಿಂತು ಮಾತನಾಡಿದ; ಅವನು ಬಹಳ ವಿವೇಚನಾಶೀಲತೆಯಿಂದ ಮಾತನಾಡಿದ. ಯಾವುದೇ ರೀತಿಯ ಭಾವಾತಿರೇಕದ ಪದಗಳನ್ನ ಉಪಯೋಗಿಸದೆ, ಈ ಸಂದರ್ಭದಲ್ಲಿ ಟೋಟ್ಸ್ಕಿಯ ಭವಿಷ್ಯದ ಬಗ್ಗೆ ನಿರ್ಣಾಯಕವಾದ ತೀರ್ಪು ನೀಡುವ ಅವಳ ಹಕ್ಕನ್ನು ತಾನೇ ಪ್ರತಿಪಾದಿಸಿ ದಾಖಲಿಸಿದ. ಅವನ ಮಗಳ ಭವಿಷ್ಯ ಮತ್ತು ಇನ್ನಿಬ್ಬರ ಮಕ್ಕಳದ್ದೂ ಕೂಡ ಅವಳ ಉತ್ತರದ ಮೇಲೆ ಅವಲಂಬಿಸಿದೆ ಎಂದು ಅವನು ನಂತರ ಹೇಳಿದ.

ತಾನು ಏನು ಮಾಡಬೇಕೆಂದು ನೀವು ಇಚ್ಛಿಸುತ್ತೀರ ಅನ್ನುವ ನಸ್ಟಾಸಿಯಾಳ ಪ್ರಶ್ನೆಗೆ, ಐದು ವರ್ಷದ ಹಿಂದೆ, ಅವಳ ಬಗ್ಗೆ ಅವನು ಎಷ್ಟು ಭಯಭೀತನಾಗಿದ್ದನೆಂದರೆ, ಈಗ ಅವಳು ಮದುವೆಯಾಗುವವರೆಗೂ ಅವನು ಸಂಪೂರ್ಣವಾದ ನಿರಾಳತೆಯಿಂದ ಇರುವುದು ಅಸಾಧ್ಯ ಎಂದು ಟೋಟ್ಸ್ಕಿ ಬಿನ್ನವಿಸಿಕೊಂಡ. ನಿಖರತೆಯುಳ್ಳ ಪ್ರತಿಕ್ರಿಯೆಯ ಮಾತುಗಳನ್ನು ಸೇರಿಸದ ಹೊರತು, ಅವನಿಂದ ಬರುವ ಈ ರೀತಿಯ ಸಲಹೆ ಖಂಡಿತವಾಗಿಯೂ ಅಸಂಬದ್ಧವಾದದ್ದಾಗುತ್ತದೆ ಎಂದು ಕೂಡ ಹೇಳಿದ. ಒಳ್ಳೆಯ ಕುಟುಂಬದಿಂದ ಬಂದಿರುವ ಯುವಕ, ಅವನ ಹೆಸರು ಗಾವ್ರಿಲ ಅರ್ಡಾಲಿಯೊನೊವಿಚ್ ಇವೊಲ್ಜಿನ್, ಅವಳೀಗೆ ಪರಿಚಯ ಆಗಿರುವುದನ್ನು ತಾನು ತಿಳಿದಿರುವುದಾಗಿ ಹೇಳಿದ; ಅವನು ಅವಳ ಮನೆಗೆ ಆಗಾಗ್ಗೆ ಭೇಟಿಕೊಡುತ್ತಿರುತ್ತಾನೆ, ಅವಳನ್ನು ಬಹಳ ದಿನದಿಂದ ಭಾವೋದ್ರಿಕ್ತತೆಯಿಂದ ಪ್ರೀತಿಸುತ್ತಿದ್ದಾನೆ, ಅವಳಿಂದ ಸಕಾರಾತ್ಮಕವಾದ ಉತ್ತರವೇನಾದರೂ ಬಂದರೆ ತನ್ನ ಜೀವನವನ್ನ ತ್ಯಾಗ ಮಾಡಲೂ ಸಿದ್ಧನಿದ್ದಾನೆ ಎಂದು ಕೂಡ ತಿಳಿದಿರುವುದಾಗಿ ಹೇಳಿದ. ಈ ಯುವಕ ಅವಳ ಬಗ್ಗೆಯ ತನ್ನ ಪ್ರೀತಿಯನ್ನ ಅವನ (ಟೋಟ್ಸ್ಕಿ) ಬಳಿ ನಿವೇದಿಸಿಕೊಂಡಿದ್ದು, ಅದನ್ನು ಅವನ ಹಿತೈಶಿ ಜನರಲ್ ಎಪಾಂಚಿನ್ ಜತೆ ಕೂಡ ಒಪ್ಪಿಕೊಂಡಿದ್ದಾನೆ; ಅವನು (ಟೋಟ್ಸ್ಕಿ) ಅದರ ಬಗ್ಗೆ ತಪ್ಪು ತಿಳಿಯದೇ ಇದ್ದರೆ, ತಾನು ಅವಳನ್ನು ಪ್ರೀತಿಸುತ್ತಿದ್ದುದರ ಬಗ್ಗೆ ನಸ್ಟಾಸಿಯ ಕೂಡ ತಿಳಿದಿದ್ದಾಳೆ ಎಂದು ಕೂಡ ಅವನಲ್ಲಿ ಹೇಳಿದ್ದ; ಅವಳ ಈಗಿನ ಏಕಾಂಗಿ ಜೀವನ ಅವಳಿಗೆ ಸಾಕಾಗಿ ಹೋಗಿರುವ ಕಾರಣ, ತನ್ನ ಪ್ರೀತಿಯ ಬಗ್ಗೆ ಅವಳು ಸ್ವಲ್ಪ ಒಲವನ್ನೂ ತೋರಿಸಿದ್ದಾಳೆ ಎಂದೂ ಹೇಳಿದ್ದ. ಈ ವಿಷಯಗಳ ಬಗ್ಗೆ ಎಲ್ಲರಿಗಿಂತಲೂ ಅವಳ ಜೊತೆಗೆ ಮಾತನಾಡುವುದು ತನಗೆಷ್ಟು ಕಷ್ಟಕರ ಎಂದು ಅವನು ಸೂಚಿಸಿದ ನಂತರ, ತಾನೇನಾದರೂ ಆಕೆ ಸುಖ ಜೀವನವನ್ನು ಸಾಗಿಸುವುದಕ್ಕೆ ಎಪ್ಪತ್ತೈದು ಸಾವಿರ ರೂಬಲ್ಲುಗಳನ್ನು ಉಡುಗೊರೆಯ ರೀತಿ ಕೋಡುತ್ತೇನೆಂದರೆ ನಸ್ಟಾಸಿಯಾ ಫಿಲಿಪೊವ್ನ ತನ್ನನ್ನು ತಿರಸ್ಕಾರದಿಂದ ಕಾಣುವುದಿಲ್ಲ ಎಂದು ನಂಬಿದ್ದೇನೆ ಎಂದು ಟೋಟ್ಸ್ಕಿ ತನ್ನ ಮಾತನ್ನು ಮುಗಿಸುತ್ತಾ ಹೇಳಿದ. ಏನೇ ಆದರೂ ತನ್ನ ಉಯಿಲಿನಲ್ಲಿ ಎಪ್ಪತ್ತೈದು ಸಾವಿರ ರೂಬಲ್ಲುಗಳನ್ನು ಅವಳಿಗೆ ಬರೆದೇ ತೀರುತ್ತಿದ್ದೆ ಎಂದು ತನ್ನ ಮಾತಿನ ಜೊತೆಗೆ ಸೇರಿಸಿದ; ಆದುದರಿಂದ ಈ ಹಣವನ್ನು ಯಾವುದೇ ರೀತಿಯ ನಷ್ಟಪರಿಹಾರಕ್ಕೋಸ್ಕರ ಕೊಡುತ್ತಿರುವುದಲ್ಲ ಎಂದು ಪರಿಗಣಿಸಬೇಕೆಂದು ಅವಳನ್ನು ಕೇಳಿಕೊಂಡ, ಆದರೆ ಒಬ್ಬ ಮನುಷ್ಯ ಪಾಪಪ್ರಜ್ಞೆಯಿಂದ ತುಂಬಿ ಭಾರವಾದ ತನ್ನ ಆತ್ಮಸಾಕ್ಷಿಯನ್ನ ಸ್ವಲ್ಪ ಹಗೂರ ಮಾಡಿಕೊಳ್ಳುವುದರಲ್ಲಿ ಯಾವುದೇ ರೀತಿಯ ತಕರಾರು ಇರಬಾರದು ಇತ್ಯಾದಿ ಇತ್ಯಾದಿ ಎಂದು ಹೇಳಿದ; ಈಗಿನ ಪರಿಸ್ಥಿತಿಯನ್ನ ಪರಿಗಣಿಸಿದರೆ ಇವೆಲ್ಲವೂ ಸ್ವಾಭಾವಿಕವಾಗಿ ಹೇಳುವಂತಹವೇ. ತನ್ನ ಮಾತುಗಳನ್ನು ಟೋಟ್ಸ್ಕಿ ಬಹಳ ನಿರರ್ಗಳವಾಗಿ ಹೇಳಿದ; ತನ್ನ ಮಾತನ್ನು ಮುಗಿಸುತ್ತಾ, ಪ್ರಪಂಚದಲ್ಲಿನ ಒಂದೇ ಒಂದು ಜೀವಿಗೂ, ಜನರಲ್ ಎಪಾಂಚಿನ್‌ನನ್ನೂ ಸೇರಿಸಿ, ಮೇಲೆ ಹೇಳಿದ ಎಪ್ಪತ್ತೈದು ಸಾವಿರ ರೂಬಲ್ಲಿನ ಬಗ್ಗೆ ತಿಳಿದಿಲ್ಲ, ಅದರ ಬಗೆಗಿನ ತನ್ನ ಇಚ್ಛೆಯನ್ನ ಇದೇ ಮೊದಲ ಬಾರಿಗೆ ತಾನು ಪ್ರಕಟಿಸಿದ್ದು ಎಂದು ತನ್ನ ಪ್ರಸ್ತಾವನೆಯ ಬಗ್ಗೆ ಹೇಳಿದ.

ಈ ಸುದೀರ್ಘವಾದ ಭಾಷಣಕ್ಕೆ ನಸ್ಟಾಸಿಯ ಫಿಲಿಪೊವ್ನ ಕೊಟ್ಟ ಉತ್ತರ ಇಬ್ಬರೂ ಸ್ನೇಹಿತರನ್ನ ಸಾಕಷ್ಟು ಆಶ್ಚರ್ಯಗೊಳಿಸಿತು.

ಅವಳ ಹಿಂದಿನ ವ್ಯಂಗ್ಯದ ಭಾವ ಸುಳಿವಿಲ್ಲದಿರುವುದೊಂದೇ ಅಲ್ಲ, ಅವಳ ಹಳೆಯ ದ್ವೇಷ ಮತ್ತು ವೈರತ್ವ, ಆ ವಿಕಟವಾದ ನಗು- ಯಾವುದೆಲ್ಲದರ ಬರಿಯ ಸ್ಮರಣೆಯೊಂದೇ ಟೋಟ್ಸ್ಕಿಯ ಇಡೀ ದೇಹದಲ್ಲಿ ಈ ದಿನದವರೆಗೂ ನಡುಕ ಹುಟ್ಟಿಸುತ್ತಿತ್ತೊ ಅದ್ಯಾವುದರ ಕುರುಹೂ ಇರಲಿಲ್ಲ; ಅವಳೀಗ ಮುದಗೊಂಡಂತಿದ್ದಳು ಮತ್ತು ಯಾವಾಗಲೋ ಒಮ್ಮೆ ಆತನೊಂದಿಗೆ ಗಂಭೀರವಾಗಿ ಮಾತನಾಡುವುದಕ್ಕೆ ಅವಕಾಶ ಸಿಕ್ಕಿದ್ದಕ್ಕೆ ಸಂತೋಷಗೊಂಡಿದ್ದಳು. ತಾನು ಬಹಳ ದಿನಗಳಿಂದ ಮನಬಿಚ್ಚಿ ಸಂಭಾಷಿಸಬೇಕು ಮತ್ತು ಸ್ನೇಹಪರವಾದ ಸಲಹೆಗಳನ್ನ ಕೇಳಬೇಕೆಂದು ಇಚ್ಛಿಸಿದ್ದೆ ಎಂದೂ, ಅವಳ ಅಹಂ ಅವಳನ್ನು ತಡೆದಿತ್ತೆಂದೂ ಅವಳು ನಿವೇದಿಸಿಕೊಂಡಳು. ಈಗ ಏನೇ ಆದರೂ ಅವರಿಬ್ಬರಲ್ಲಿದ್ದ ತಡೆಗೋಡೆ ಉರುಳಿಹೋದ ನಂತರ, ಅವಳಿಗೆ ಈ ಅವಕಾಶವನ್ನು ಬಿಟ್ಟು ಇನ್ನ್ಯಾವುದೂ ಕೂಡ ಸ್ವಾಗತಾರ್ಹವಾಗಿರಲಿಲ್ಲ.

ಇದನ್ನೂ ಓದಿ: ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-4; ಭಾಗ-3)

ಮೊದಲು, ದುಃಖದಿಂದ ಕೂಡಿದ ನಗುವಿನೊಂದಿಗೆ ಮತ್ತು ನಂತರ ಕಣ್ಣಿನಲ್ಲಿನ ಉಲ್ಲಾಸದ ಮಿನುಗಿನೊಂದಿಗೆ, ಐದು ವರ್ಷದ ಹಿಂದೆ ಉಂಟಾದಂತಹ ಚಂಡಮಾರುತ ಪುನಃ ಏಳುವುದು ಅಸಾಧ್ಯ ಎಂದು ಅವಳು ಒಪ್ಪಿಕೊಂಡಳು. ತಾನು ಬಹಳ ಹಿಂದಿನಿಂದಲೇ ಅನೇಕ ವಿಷಯಗಳ ಬಗ್ಗೆ ತನ್ನ ಅಭಿಪ್ರಾಯಗಳನ್ನ ಬದಲಾಯಿಸಿಕೊಂಡಿದ್ದೇನೆಂದು, ಅವಳು ಗುರುತಿಸಿದ್ದ ಸತ್ಯಗಳನ್ನ ಪರಿಗಣನೆಗೆ ತೆಗೆದುಕೊಳ್ಳಬೇಕೇ ಹೊರತು ಹೃದಯದಲ್ಲಿನ ಭಾವನೆಗಳನ್ನಲ್ಲ ಎಂದು ಕೂಡ ಅವಳು ಹೇಳಿದಳು. ಆದದ್ದೆಲ್ಲಾ ಆಗಿಹೋಯಿತು ಮತ್ತು ಕೊನೆಗೊಂಡಿತು, ಇನ್ನೂ ಯಾಕೆ ಟೋಟ್ಸ್ಕಿ ಸದಾಕಾಲ ಎಚ್ಚರಿಕೆಯ ಮನಸ್ಸಿನಿಂದ ತೊಳಲಾಡುತ್ತಾ ಇರಬೇಕು ಎನ್ನುವುದು ತನಗೆ ಅರ್ಥವಾಗುತ್ತಿಲ್ಲವೆಂದಳು.

ಅವಳು ನಂತರ ಜನರಲ್ ಎಪಾಂಚಿನ್ ಕಡೆಗೆ ತಿರುಗಿ ಅವಲೋಕಿಸಿದಳು; ಬಹಳವಾದ ಸೌಜನ್ಯದಿಂದ, ಅವಳು ಅವನ ಹೆಣ್ಣುಮಕ್ಕಳ ಬಗ್ಗೆ ಮೊದಲಿನಿಂದಲೇ ಬಲ್ಲಳೆಂದು, ಅವರ ಬಗ್ಗೆ ಒಳ್ಳೆಯ ಸಕಾರಾತ್ಮಕವಾದ ವರದಿಗಳನ್ನಲ್ಲದೇ ಬೇರೇನನ್ನೂ ಕೇಳಿಲ್ಲವೆಂದು; ಅವರುಗಳ ಬಗ್ಗೆ ಆಳವಾದ ಗೌರವವನ್ನ ಬೆಳೆಸಿಕೊಂಡಿದ್ದಾಳೆಂದು ಹೇಳಿದಳು. ಅವರಿಗೆ ಯಾವುದೇ ರೀತಿಯಲ್ಲಿ ತನ್ನ ಸೇವೆ ಸಲ್ಲಿಸುವುದು ತನಗೆ ಹೆಮ್ಮೆಯ ಸಂಗತಿ ಮತ್ತು ನಿಜವಾದ ಸಂತೊಷದ ಮೂಲವೆಂದಳು.

ಕೆ. ಶ್ರೀನಾಥ್

ಕೆ. ಶ್ರೀನಾಥ್
ಮಾಜಿ ಕೈಗಾರಿಕೋದ್ಯಮಿ ಮತ್ತು ಹಾಲಿ ನಟ ಶ್ರೀನಾಥ್ ಈಗ ಸಾಹಿತ್ಯ ಕೃಷಿಯಲ್ಲಿ ನಿರತರಾಗಿದ್ದು, ಇತ್ತೀಚೆಗಷ್ಟೇ ಅವರು ಅನುವಾದಿಸಿರುವ ದಾಸ್ತೋವ್‌ಸ್ಕಿಯ ’ಕರಮಜೋವ್ ಸಹೋದರರು’ ಪ್ರಕಟವಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...