ಕರ್ನಾಟಕದ ಕೊಡವ ಜನಾಂಗದ ಯುವಕ ಮತ್ತು ಉತ್ತರ ಭಾರತ ಮೂಲದ ಮತ್ತೊಬ್ಬ ಯುವಕ ಸೇರಿ ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿ ಸಲಿಂಗ ವಿವಾಹ ಮಾಡಿಕೊಂಡಿದ್ದು, ವಿವಾಹಿತನನ್ನು ತಮ್ಮ ಸಮಾಜದಿಂದ ಹೊರಗಿಡಲು ಕೊಡವ ಸಮಾಜ ಮುಂದಾಗಿದೆ.
ಇತ್ತೀಚಿನ ದಿನಗಳಲ್ಲಿ ಸಲಿಂಗ ವಿವಾಹಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಈ ಸಾಲಿಗೆ ಈಗ ಈ ಘಟನೆಯೂ ಕೂಡ ಸೇರ್ಪಡೆಯಾಗಿದ್ದು, ಭಾರತೀಯ ಶೈಲಿಯಲ್ಲೇ ವಿವಾಹವಾಗಿರುವುದು ವಿಶೇಷವಾಗಿದೆ.
ಇದನ್ನೂ ಓದಿ: ಸಲಿಂಗ ವಿವಾಹವನ್ನು ನಮ್ಮ ಕಾನೂನು ಮತ್ತು ಸಮಾಜ ಒಪ್ಪುವುದಿಲ್ಲ: ಕೇಂದ್ರ ಸರ್ಕಾರ
ಇದನ್ನು ವಿರೋಧಿಸಿ ಕೊಡವ ಸಮಾಜವು, ಶರತ್ ಪೊನ್ನಪ್ಪ ಎಂಬ ಕನ್ನಡಿಗನಿಗೆ ಬಹಿಷ್ಕಾರ ಹಾಕಲು ಮುಂದಾಗಿದೆ. ಶರತ್ ಪೊನ್ನಪ್ಪ ಮೂಲತಃ ಕೊಡಗಿನ ಸಮುದಾಯಕ್ಕೆ ಸೇರಿದ್ದು, ಈತ ಮನೆಯನ್ನು ಬಿಟ್ಟು ವಿದೇಶದಲ್ಲಿ ನೆಲೆಸಿ ಹಲವು ವರ್ಷಗಳಾಗಿವೆ. ಅಲ್ಲಿ ಉತ್ತರ ಭಾರತ ಮೂಲದ ಸಂದೀಪ್ ದೋಸಾಂಜ್ ಎಂಬ ಯುವಕನೊಟ್ಟಿಗೆ ಪರಿಚಯವಾಗಿ, ಪ್ರೀತಿ ಬೆಳೆದು, ಇದೇ ಸೆ.26ರಂದು ಕೊಡಗಿನ ಸಂಪ್ರದಾಯದ ಶೈಲಿಯಲ್ಲಿಯೇ ವಿವಾಹ ಮಾಡಿಕೊಂಡಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಸಲಿಂಗ ಮದುವೆ ಸಮಾರಂಭದಲ್ಲಿ ಮದುಮಕ್ಕಳ ಸ್ನೇಹಿತರು ಭಾಗಿಯಾಗಿ ಶುಭ ಕೋರುತ್ತಿರುವ ಮದುವೆ ವಿಡಿಯೋ, ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ಕೊಡವರ ಅಸಮಾಧಾನಕ್ಕೆ ಪ್ರಮುಖ ಕಾರಣವಾಗಿದ್ದು, ಇದರಿಂದ ನಮ್ಮ ಜನಾಂಗಕ್ಕೆ ಅವಮಾನವಾಗಿದೆ ಮತ್ತು ಕೊಡವರ ಇತಿಹಾಸದಲ್ಲಿ ಇಂಥ ಘಟನೆ ನಡೆದಿರಲಿಲ್ಲ ಎಂದು ಇದನ್ನು ಖಂಡಿಸಿದೆ. ಈ ಬಗ್ಗೆ ಅಮೆರಿಕಾ ಕೊಡವ ಕೂಟಕ್ಕೆ ಪತ್ರ ಬರೆದು ವಿಚಾರ ಮಾಡಿ ಸ್ಪಷ್ಟನೆ ನೀಡುವಂತೆ ಮಡಿಕೇರಿ ಕೊಡವ ಸಮಾಜ ಕೇಳಿಕೊಂಡಿದೆ. ಕಂಡಕಂಡಲ್ಲಿ ತಮ್ಮ ಸಾಂಪ್ರದಾಯಿಕ ಉಡುಗೆಯನ್ನು ಬಳಕೆ ಮಾಡುವುದಕ್ಕೆ ಕೊಡವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಎಲ್ಜಿಬಿಟಿಕ್ಯು ಸಮುದಾಯಕ್ಕೆ ವಿಶ್ವದಾದ್ಯಂತ ಬೆಂಬಲ ಹೆಚ್ಚಾಗುತ್ತಿದೆ: ಸಮೀಕ್ಷೆ
ಕೊಡವ ಜನಾಂಗದಿಂದಲೇ ಆತನನ್ನು ಹೊರಗಿಡುವಂತೆ ಕೊಡವ ಸಮಾಜದ ಒಕ್ಕೂಟಕ್ಕೆ ಮನವಿ ಮಾಡಲಾಗುವುದು ಎಂದು ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೆ.ಎಸ್. ದೇವಯ್ಯ ಹೇಳಿದ್ದು, ಈ ಬಗ್ಗೆ ಈಗಾಗಲೇ ಮಡಿಕೇರಿ ಕೊಡವ ಸಮಾಜದಿಂದ ತುರ್ತು ಸಭೆಯನ್ನೂ ನಡೆಸಲಾಗಿದೆ.
“ಭಿನ್ನಮತೀಯರು ಇರುತ್ತಾರೆ ಎಂದು ನಮಗೆ ತಿಳಿದಿತ್ತು. ಆದರೆ ನಾವು ಹುಟ್ಟಿದ ದಿನದಿಂದ ನಮ್ಮನ್ನು ಸಮಾಜ ಅಕ್ಷರಶಃ ಸ್ವೀಕರಿಸಲಿ ಎಂದು ಹೋರಾಡುತ್ತಿದ್ದೇವೆ. ಬದುಕಲು ಹೋರಾಡುತ್ತಿದ್ದೇವೆ. ಅದಾಗ್ಯೂ, ನಾವು ಹೆಮ್ಮೆಯಿಂದ ನಮ್ಮ ವಾಸ್ತವದಲ್ಲಿ ಜೀವಿಸಲು ನಿರ್ಧರಿಸಿದ್ದೇವೆ. ಈ ಸಂಭ್ರಮವನ್ನು ನಾವು ಸಂತೋಷದಿಂದ ಆಚರಿಸಿದ್ದೇವೆ. ಭಿನ್ನಮತೀಯರು ಇದನ್ನು ಅರ್ಥಮಾಡಿಕೊಳ್ಳಲು ಪ್ರೋತ್ಸಾಹಿಸುತ್ತೇವೆ. ಎಲ್ಲಾ ಮಾನವರು ಸಮಾನವಾಗಿ ಸೃಷ್ಟಿಯಾಗಿದ್ದೇವೆ. ಜೊತೆಗೆ ಎಲ್ಲರೂ ಗೌರವ ಮತ್ತು ಪ್ರೀತಿಗೆ ಅರ್ಹರು ಎಂಬುದನ್ನು ಅರ್ಥಮಾಡಿಕೊಳ್ಳಲು ಸಕಾರಾತ್ಮಕ ಸಂವಾದದಲ್ಲಿ ತೊಡಗುತ್ತೇವೆ” ಶರತ್ ಪೊನ್ನಪ್ಪ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ನಿಜವಾದ ದೇಶಪ್ರೇಮ ಎಂದರೆ ಅಂಧಭಕ್ತಿ ಅಲ್ಲ, ನಮ್ಮ ದೇಶವನ್ನು ಸುಧಾರಿಸುವುದಾಗಿದೆ: ಆಯುಷ್ಮಾನ್ ಖುರಾನ
ಶರತ್ ಪೊನ್ನಪ್ಪ ಮೈಸೂರಿನ ರಾಮಕೃಷ್ಣಾಶ್ರಮದಲ್ಲಿ ವಿದ್ಯಾಭ್ಯಾಸ ಮಾಡಿದ್ದು, ಉನ್ನತ ಶಿಕ್ಷಣಕ್ಕಾಗಿ 13 ವರ್ಷಗಳ ಹಿಂದೆ ಅಮೇರಿಕಕ್ಕೆ ತೆರಳಿದ್ದರು. ಅವರ ತಂದೆ ಜಯಕುಮಾರ್ ಇಂಜಿನಿಯರ್ ಆಗಿ, ತಾಯಿ ನಳಿನಿ ವೈದ್ಯರಾಗಿ ದುಬೈನಲ್ಲಿ 30 ವರ್ಷ ಕಾರ್ಯ ನಿರ್ವಹಿಸಿದ್ದಾರೆ. ಬಳಿಕ ಅಲ್ಲಿಂದ ಬೆಂಗಳೂರಿಗೆ ಬಂದು ನೆಲೆಸಿದ್ದರು. ಪ್ರಸ್ತುತ ಮೈಸೂರಿನಲ್ಲಿ ನೆಲೆಸಿದ್ದಾರೆ.
2018 ರಲ್ಲಿ ಭಾರತ ದಂಡ ಸಂಹಿತೆಯ ಸಕ್ಷನ್ 377 ನ್ನು ಭಾರತದ ನ್ಯಾಯಾಲಯವು ರದ್ದುಗೊಳಿಸಿತ್ತು. ಈ ಸೆಕ್ಷನ್ ಅಸಹಜ ಲೈಂಗಿಕ ಕ್ರಿಯೆಯನ್ನು ನಿಷೇದಿಸಿತ್ತು. ಹಾಗಾಗಿ ಸಲಿಂಗ ವಿವಾಹಗಳಿಗೆ ಭಾರತದಲ್ಲಿ ಅನುಮತಿಯಿರಲಿಲ್ಲ. ಆದರೆ ಈಗ ಈ ಸೆಕ್ಷನ್ ಅನ್ನು ತೆಗೆದುಹಾಕಿದ್ದರೂ, ಭಾರತದಲ್ಲಿ ಸಲಿಂಗ ವಿವಾಹಗಳನ್ನು ಇನ್ನೂ ಕಾನೂನುಬದ್ದವಾಗಿ ಗುರುತಿಸಲಾಗಿಲ್ಲ.
ಇದನ್ನೂ ಓದಿ: ಭಾರತೀಯ ಗಣತಂತ್ರದ ಬಹುದೊಡ್ಡ ಹಬ್ಬಕ್ಕೆ ಸ್ತ್ರೀ ದ್ವೇಷಿ, ಮತಾಂಧ, ಸರ್ವಾಧಿಕಾರಿ ಪ್ರವೃತ್ತಿಯ ಮುಖ್ಯ ಅತಿಥಿ!


