2019ಸೆಪ್ಟೆಂಬರ್‌ನಲ್ಲಿ ಇಡೀ ದಕ್ಷಿಣ ಏಷಿಯಾಗೆ ಸಂಬಂಧಿಸಿದ ಮಹತ್ವಪೂರ್ಣವಾದ ಒಂದು ಸಂಶೋಧನಾ ಬರಹವನ್ನು ಸೈನ್ಸ್ ಪತ್ರಿಕೆಯಲ್ಲಿ ಪ್ರಕಟಿಸಲಾಯಿತು; ಅದರ ಶೀರ್ಷಿಕೆ- The formation of human populations in South and Central Asia ಅಂದರೆ, ದಕ್ಷಿಣ ಮತ್ತು ಮಧ್ಯ ಏಷಿಯಾದಲ್ಲಿ ಮನುಷ್ಯ ಸಮೂಹದ ಸಂರಚನೆ. ನೂರಾರು ’ಪ್ರಾಚೀನ ಮನುಷ್ಯರ’ ಜೆನೆಟಿಕ್ ಅಧ್ಯಯನದ ಆಧಾರದ ಮೇಲೆ ಈ ಬರಹವನ್ನು 108 ವಿಜ್ಞಾನಿಗಳು ಜೊತೆಗೂಡಿ ಬರೆದಿದ್ದರು. ಉತ್ಕೃಷ್ಟ ವೈಜ್ಞಾನಿಕ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ 20ಕ್ಕೂ ಹೆಚ್ಚು ದೇಶಗಳ ವಿಜ್ಞಾನಿಗಳು ಇದನ್ನು ಬರೆದಿದ್ದರು. ಅದರ ಅನುಗುಣವಾಗಿ, ’ಆಧುನಿಕ ದಕ್ಷಿಣ ಏಷಿಯಾದ ಮೂಲ ಪ್ರಾಚೀನ ಜನಸಮೂಹವು ಇರಾನ್ ಮತ್ತು ದಕ್ಷಿಣ ಏಷಿಯಾದ ಪ್ರಾಚೀನ ಹೊಲೊಸೀನ್ ಜನಸಮೂಹಕ್ಕೆ ಸಂಬಂಧಿಸಿದ ಜನರ ಮಿಶ್ರಣವಾಗಿದೆ. ಸಿಂಧೂ ನಾಗರಿಕತೆಯೊಂದಿಗೆ (ಇಂಡಸ್ ವ್ಯಾಲಿ ಸಿವಿಲೈಜೇಷನ್) ಸಾಂಸ್ಕೃತಿಕ ಸಂಬಂಧ ಹೊಂದಿದ್ದ ಎರಡು ಸ್ಥಳಗಳಿಂದ ಬಂದ ಔಟ್‌ಲಯರ್ ವ್ಯಕ್ತಿಗಳಲ್ಲಿ (ಒಂದು ವ್ಯವಸ್ಥೆಯ ಹೊರಗಿರುವವರು) ನಾವು ಅದನ್ನು ಪತ್ತೆ ಮಾಡಿದ್ದೇವೆ. ಸಿಂಧೂ ನಾಗರಿಕತೆಯ ಪತನದ ನಂತರ, ಈ ಜನಸಮೂಹವು ಸ್ಟೆಪ್ ಪೂರ್ವಜರೊಂದಿಗೆ ಮತ್ತು ವಾಯುವ್ಯ ಗುಂಪುಗಳೊಂದಿಗೆ ಬೆರೆತು ’ಪ್ರಾಚೀನ ಉತ್ತರ ಭಾರತೀಯರು’ ಎಂಬ ಗುಂಪನ್ನು ರಚಿಸಿತು. ಈ ವರದಿಯು ಪುರಾತತ್ವ ಶಾಸ್ತ್ರದ ಮತ್ತು ಜೆನೆಟಿಕ್ಸ್‌ನ ಇತರ ವಿದ್ವಾಂಸರು ಈ ವಿಷಯದಲ್ಲಿ ಹೆಚ್ಚಿನ ಅಧ್ಯಯನ ಮಾಡುವಂತೆ ಪ್ರೇರೇಪಿಸಿತು.
ಇಷ್ಟೊಂದು ತಾಂತ್ರಿಕ ಸಂಕೀರ್ಣತೆ ಮತ್ತು ವೈಜ್ಞಾನಿಕ ಆಳವನ್ನು ಹೊಂದಿರುವ ಒಂದು ವರದಿ ಸಾಮಾನ್ಯವಾಗಿ ಸಾಮಾನ್ಯ ಪ್ರಜೆಗಳ ಆಸಕ್ತಿಯ ಪರಿಧಿಯ ಹೊರಗೇ ಇರುತ್ತದೆ. ಆದರೂ, ಇದು ಇಂದು ಗಣನೀಯ ಮಹತ್ವ ಪಡೆದುಕೊಳ್ಳುವುದು ಏಕೆಂದರೆ, ಭಾರತದಲ್ಲಿ ನಾಗರಿಕ ಸಮಾಜ ಎಂದೋ ತಿರಸ್ಕರಿಸಿದ್ದ, ನಿರ್ಮೂಲನೆ ಮಾಡಿದ್ದ, ಸಮಾಜವನ್ನು ಕ್ಷೆಭೆಗೊಳಪಡಿಸಬಹುದಾದ ಕೆಲವು ಪದಗಳು ಮತ್ತೆ ಹುಟ್ಟಿಸಲಾಗಿ, ಅವುಗಳಿಗೆ ಮರುಜೀವ ಕೊಡುತ್ತಿರುವುದರಿಂದ. ಇದರಲ್ಲಿ ಅತ್ಯಂತ ನಿರ್ಣಾಯಕ ಪದ: ಶುದ್ಧತೆ (ಪ್ಯೂರ್). ಹಾಗೆ ನೋಡಿದರೆ, ಈ ಪದ ಯಾರಿಗೂ ನೋವುಂಟುಮಾಡುವ ಪದ ಅಲ್ಲ. ಇದನ್ನು ಕಲಬೆರಕೆಯಾಗಬಹುದಾದ ಆಹಾರ ಅಥವಾ ಪಾನೀಯ ಅಥವಾ ಆಭರಣದ ಲೋಹಗಳಿಗೆ ಬಳಸಲಾಗುತ್ತದೆ. ಹಾಗೂ ಒಂದು ಭಾಷೆಯನ್ನು ಹೊರತುಪಡಿಸಿ, ಎಲ್ಲಾ ಭಾಷಗಳಲ್ಲೂ ಅದಕ್ಕೆ ಅದೊಂದೇ ಅರ್ಥವಿದೆ. ಆ ಅಪವಾದ ಯುಜೆನಿಕ್ಸ್. ಈ ಸಿದ್ಧಾಂತವನ್ನು ಅನೈತಿಕ ವಿಜ್ಞಾನ ಎಂದು ತೀವ್ರವಾಗಿ ಖಂಡಿಸಲಾಗಿದೆ. ಅದರಲ್ಲಿ ’ಶುದ್ಧ’ ಎಂಬ ಪದ ಮತ್ತು ಅದರ ವಿರುದ್ಧ ಪದವಾದ ’ಆಶುದ್ಧ’ಗಳನ್ನು ’ರಕ್ತ’ಕ್ಕೆ ವಿಶೇಷಣಗಳನ್ನಾಗಿ ಬಳಸಲಾಗಿ ಜನಾಂಗೀಯತೆಗೆ ಅಡಿಪಾಯವನ್ನು ಒದಗಿಸಲಾಗುತ್ತದೆ.
1930ರ ದಶಕದಲ್ಲಿ ಜರ್ಮನ್ ಭಾಷೆಯಲ್ಲಿ ಉಪಮಾನವರು (untermenschen—subhumans) ಎಂಬ ಪದವನ್ನು ಯಥೇಚ್ಛವಾಗಿ ಬಳಸಲಾಗುತ್ತಿತ್ತು. ಶುದ್ಧ ಆರ್ಯನ್ ರಕ್ತವನ್ನು ಹೊಂದದೇ ಇರುವ ವ್ಯಕ್ತಿಗಳಿಗಾಗಿ ಈ ಪದವನ್ನು ಬಳಸಲಾಯಿತು. ಇದಾದ ಒಂಬತ್ತು ದಶಕಗಳ ನಂತರವೂ (untermenschen—subhumans) ಉಪಮಾನವರ ಸಮಾಜಶಾಸ್ತ್ರದಿಂದಾಗಿರುವ ಭಯಾನಕ ದುರಂತಗಳಿಂದ ಜಗತ್ತು ಇನ್ನೂ ಹೊರಬರಲು ಸಾಧ್ಯವಾಗಿಲ್ಲ. ಅದು ಕೇವಲ ಒಂದು ಅವೈಜ್ಞಾನಿಕ ಪರಿಕಲ್ಪನೆ ಅಥವಾ ಅನೈತಿಕ ರಾಜಕಾರಣವಷ್ಟೇ ಆಗಿರಲಿಲ್ಲ, ಅದು ಕಾನ್ಸಂಟ್ರೇಷನ್ ಕ್ಯಾಂಪ್ ಮತ್ತು ಸಾಮೂಹಿಕ ಗೋರಿಗಳಿಗೆ ಲಕ್ಷಾಂತರ ಅಮಾಯಕರನ್ನು ತಳ್ಳುವ ಸೈದ್ಧಾಂತಿಕ ಸಾಧನವಾಯಿತು. 19ನೆಯ ಶತಮಾನದ ಜೊಹಾನ್ ಫಿಟ್ಷೆಯ ವೋಕಿಶ್ ರಾಷ್ಟ್ರೀಯತೆಯ ಪರಿಕಲ್ಪನೆ, ಸಾಮಾಜಿಕ ಪುನರ್‌ರಚನೆಗೆ ಅನ್ವಯಿಸಲಾದ ಯುಜೆನಿಕ್ಸ್, ಯಾವುದೇ ನಾಗರಿಕ ಕಾನೂನುಗಳ ಅಪಹಾಸ್ಯ ಮಾಡುವಂತೆ ನಡೆದುಕೊಂಡ ಹಿಟ್ಲರ್‌ನ ಸ್ಟಾರ್ಮ್‌ಸ್ಟೂಪರ್ಸ್‌ಗಳು ಹಾಗೂ ಜರ್ಮನಿಯ ತಾಂತ್ರಿಕ ಶಕ್ತಿಯು ಹಿಟ್ಲರಿಸಂಅನ್ನು ಸೃಷ್ಟಿಸಿದ ನಾಲ್ಕು ಸ್ತಂಭಗಳಾಗಿದ್ದವು.
ತನ್ನ ಹಿಂಸೆ ಮತ್ತು ಕ್ರೌರ್ಯಕ್ಕೆ ಹಿಟ್ಲರ್ ನೀಡಿದ ಸಮರ್ಥನೆಯೇನೆಂದರೆ, ಸರ್ಬ್‌ರು, ಪೋಲಿಸ್ ಜನರು, ಯಹೂದಿಗಳು, ಜಿಪ್ಸಿಗಳು, ಏಷಿಯನ್ನರು ’ಶುದ್ಧ ಆರ್ಯನ್ ರಕ್ತ’ದವರಲ್ಲ ಹಾಗೂ ಅದೇ ಕಾರಣಕ್ಕಾಗಿ ಅವರು ಬದುಕುಳಿಯಲು ಅರ್ಹರಲ್ಲ ಎಂದು. ಹಿಟ್ಲರ್ ಅಧಿಕಾರಕ್ಕೆ ಬಂದು ಎರಡು ವರ್ಷಗಳಲ್ಲಿ, 1935ರಲ್ಲಿ ಯಹೂದಿಗಳನ್ನು ಸೈನ್ಯ ಸೇರಲು ನಿರ್ಬಂಧಿಸಲಾಯಿತು ಹಾಗೂ ಅದೇ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಅತ್ಯಂತ ನಾಚಿಕೆಗೇಡಿನ ಕಾಯಿದೆಯಾದ ’ಜರ್ಮನ್ ರಕ್ತದ ಮತ್ತು ಮರ್ಯಾದೆಯ ರಕ್ಷಣೆ’ಯ ಕಾಯಿದೆಯನ್ನು ಜಾರಿಗೊಳಿಸಲಾಯಿತು. ಅದು ’ಶುದ್ಧ ರಕ್ತದ ಜರ್ಮನ್ನರು’ ಮತ್ತು ’ಮಾಲಿನ್ಯಕಾರಕ’ ಯಹೂದಿಗಳ ನಡುವೆ ಅಂತರವಿವಾಹ ಮತ್ತು ಲೈಂಗಿಕ ಸಂಬಂಧಗಳನ್ನು ನಿಷೇಧಿಸಿತು.
ಆಘಾತಕಾರಿಯಾಗಿ, 2022ರ ಭಾರತದಲ್ಲಿ ’ಜನಾಂಗೀಯ ಶುದ್ಧತೆ’ ಎಂಬ ಅಸಹ್ಯ ಪದವು ಮರುಜನ್ಮ ಪಡೆದಿದೆ. ಜೂನ್ 1ರ ’ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ನ ವರದಿಯ ಪ್ರಕಾರ, ಒಕ್ಕೂಟ ಸರಕಾರದ ಸಂಸ್ಕೃತಿ ಸಚಿವಾಲಯವು ’ಭಾರತದಲ್ಲಿ ಜೆನೆಟಿಕ್ ಇತಿಹಾಸ ಮತ್ತು ಶುದ್ಧತೆಯ ಕುರುಹುಗಳನ್ನು ಸ್ಥಾಪಿಸಲು’ ಡಿಎನ್‌ಎ ಪ್ರೊಫೈಲಿಂಗ್ ಕಿಟ್‌ಗಳು ಹಾಗೂ ಸಾಧನಗಳಿಗೆ ಅನುದಾನ ನೀಡುತ್ತಿದೆ. ಈ ಯೋಜನೆಯನ್ನು ಶುರುಮಾಡಲು ಕಾರಣರಾದ ವಿಜ್ಞಾನಿಯು ಹೇಳಿದ್ದು, ’ಕಳೆದ 10,000 ವರ್ಷಗಳಲ್ಲಿ ಭಾರತೀಯ ಜನಸಮೂಹದಲ್ಲಿ ಜೀನ್‌ಗಳ ರೂಪಾಂತರ ಮತ್ತು ಮಿಶ್ರಣ ಹೇಗೆ ಆಗಿದೆ ಎಂಬುದನ್ನು ನಾವು ನೋಡಲಿಚ್ಛಿಸುತ್ತೇವೆ.’ ಹಾಗೂ ಇನ್ನೂ ಮುಂದುವರೆದು, ’ಆಗ ನಮ್ಮ ಬಳಿ ಭಾರತದ ಜೆನೆಟಿಕ್ ಇತಿಹಾಸದ ಸ್ಪಷ್ಟವಾದ ಪರಿಕಲ್ಪನೆ ಇರುತ್ತೆ, ಇದನ್ನು ನೀವು ಭಾರತದಲ್ಲಿ ಜನಾಂಗಗಳ ಶುದ್ಧತೆಯನ್ನು ಪತ್ತೆ ಹಚ್ಚುವ ಪ್ರಯತ್ನ ಎನ್ನಬಹುದು.’ ಸಂಸ್ಕೃತಿ ಸಚಿವಾಲಯವು ಈ ಸುದ್ದಿ ಸುಳ್ಳು ಎಂದು ತಕ್ಷಣವೇ ಘೋಷಿಸಿತು. ಆ ಹೇಳಿಕೆ ನೀಡಿದ್ದ ವಿಜ್ಞಾನಿಯು ಪತ್ರಿಕೆಯಲ್ಲಿ ಬಂದ ವರದಿಯಿಂದ ಅಂತರ ಕಾಯ್ದುಕೊಂಡು, ತನ್ನ ಮಾತುಗಳನ್ನು ತಪ್ಪಾಗಿ ವರದಿ ಮಾಡಲಾಗಿದೆ ಎಂದು ಹೇಳಿದರು. ಆದರೆ ಇದಾದನಂತರ, ಭಾರತದ ಗಣ್ಯ ವಿಜ್ಞಾನಿಗಳ ಒಂದು ಗುಂಪು ಒಂದು ಹೇಳಿಕೆಯನ್ನು ನೀಡಿ, ಈ ’ಜನಾಂಗ’ ಎಂಬ ಪರಿಕಲ್ಪನೆ ಎಷ್ಟು ಅಪಾಯಕಾರಿಯಾದದ್ದು ಮತ್ತು ಹಳತಾದದ್ದು ಎಂದು ಎಚ್ಚರಿಕೆ ನೀಡಿದರು ಹಾಗೂ ಜೆನೆಟಿಕ್ಸ್ ವಿಜ್ಞಾನವು ಜನಾಂಗವನ್ನು ಹೇಗೆ ವೈಜ್ಞಾನಿಕ ಪರಿಕಲ್ಪನೆ ಎಂದು ಪರಿಗಣಿಸುವುದಿಲ್ಲ ಎಂಬುದನ್ನು ವಿವರಿಸಿದರು. ಈ ಹೇಳಿಕೆ ನೀಡಿದ ಗುಂಪು ಕೆಲವು ಪ್ರಖ್ಯಾತ ಭಾರತೀಯ ವೈದ್ಯರು ಮತ್ತು ಇತಿಹಾಸಕಾರರನ್ನು ಒಳಗೊಂಡಿತ್ತು. ಭಾರತೀಯ ಸಂವಿಧಾನಕ್ಕೆ ಸಂಪೂರ್ಣವಾಗಿ
ವ್ಯತಿರಿಕ್ತವಾಗಿ ಹಾಗೂ ಅಪಾಯಕಾರಿಯಾಗಿರುವ ಈ ಪರಿಕಲ್ಪನೆಯ ಪ್ರಕಾರ, ಭಾರತೀಯ ಸಂದರ್ಭದಲ್ಲಿ ’ಜನಾಂಗೀಯ ಶುದ್ಧತೆ’ ಎಂಬುದರ ಅರ್ಥವಾದರೂ ಏನು? ಇದು ಮಾಲಿನ್ಯದ ಆತಂಕದ ಆಧಾರದ ಮೇಲೆ ಇರುವ,ಪುರಾತನಕಾಲದಿಂದಲೂ ಇರುವ ಜಾತಿಪದ್ಧತಿಗೆ ತಳಕುಹಾಕಿಕೊಂಡಿದೆಯೇ ಅಥವಾ ಮಧ್ಯಕಾಲೀನ ಸಮಯದಲ್ಲಿ ಭಾರತಕ್ಕೆ ವಲಸೆ ಬಂದವರನ್ನು ಗುರಿಮಾಡಲು ಪ್ರಯತ್ನಿಸುತ್ತಿದೆಯೇ? ಈ ಪ್ರಸಕ್ತ ಆಳ್ವಿಕೆಗೆ ಎರಡನೆಯ ದರ್ಜೆಯ ನಾಗರಿಕರನ್ನು ಸೃಷ್ಟಿಸಲು ಯಾವುದೇ ಜೆನೆಟಿಕ್ ಅಧ್ಯಯನಗಳು ಬೇಕಿಲ್ಲ; ಅದು ಈಗಾಗಲೇ ಸಮಾಜವನ್ನು ಒಡೆಯಲು ಹಲವಾರು ದಾರಿಗಳನ್ನು ಕಂಡುಕೊಂಡಿದೆ.
ಈ ಯೋಜನೆಯ ಹೃದಯಕ್ಕೆ ತಲುಪಬೇಕಾದರೆ, ಜೆನೆಟಿಕ್ ಪರೀಕ್ಷೆಗೆ ಒಳಪಡುವ ಸಮುದಾಯಗಳ ಪಟ್ಟಿಯನ್ನು ನೋಡಿದರೆ ಸಾಕು. ಅವರೆಲ್ಲ ನಿರ್ದಿಷ್ಟವಾಗಿ ’ಭಾಷಿಕ ದ್ವೀಪ’ಗಳಾಗಿ ಉಳಿದಿದ್ದವರು; ಮಹಾರಾಷ್ಟ್ರದ ಬುಲಧಾನಾ ಜಿಲ್ಲೆಯ ನೆಹಾಲಿಯರು ಅಥವಾ ಅಂಡಮಾನ್ ದ್ವೀಪಗಳ ಜರವಾ ಮತ್ತು ನಿಕೊಬಾರಿಯರು ಅಥವಾ ಒರಿಸ್ಸಾದ ಮಲಪಹಾಡಿಯರು ಮತ್ತು ಕೊಂಢರು. ಎರಡು ದಶಕಗಳ ಹಿಂದೆ ಬಹುರಾಷ್ಟ್ರೀಯ ಔಷಧಿ ಕಂಪನಿಗಳು ’ಅನ್ ಅಡಲ್ಟ್ರೇಟೆಡ್ ಸೆಲ್’ಗಳು ಅಂದರೆ ಕಲುಷಿತಗೊಳ್ಳದ ಕೋಶಗಳ ಹುಡುಕಾಟದಲ್ಲಿದ್ದಾಗ ಗುರಿ ಮಾಡಿದ ಸಮುದಾಯಗಳು ಯಾವು ಎಂದು ನೋಡಿದಾಗ, ಅವು ನಿರ್ದಿಷ್ಟವಾಗಿ ಇವೇ ಸಮುದಾಯಗಳು ಎಂದು ಗೊತ್ತಾಗುತ್ತದೆ. ಆ ಶೋಧ ಕೇವಲ ಒಂದು ಹುಚ್ಚು ಕಲ್ಪನೆ ಎಂದು ಸಾಬೀತಾಯಿತು. ಒಂದು ವೇಳೆ ಜೆನೆಟಿಕ್ಸ್‌ಗೆ ಅದು ಗೊತ್ತಿದ್ದರೆ, ಮತ್ತೆ ಆದಿವಾಸಿಗಳ ಬಳಿ ಏಕೆ ಹೋಗಬೇಕು? ಅದಕ್ಕೆ ಉತ್ತರವೇನೆಂದರೆ, ಭಾರತದಲ್ಲಿಯ ಭಿನ್ನಭಿನ್ನ ಜನಸಮೂಹಗಳು ಹಂಚಿಕೊಳ್ಳಲಾದ ಒಂದು ಮೈಟೊಕಾಂಡ್ರಿಯಲ್ ಡಿಎನ್‌ಎ ತಮ್ಮದು ಎಂದು ಹೇಳಿಕೊಳ್ಳುವುದು ಈಗಾಗಲೇ ಸ್ಪಷ್ಟವಾಗಿ ಸಾಬೀತಾಗಿದೆ, ಆ ಡಿಎನ್‌ಎ ತಾಯಿಯ ಕಡೆಯಿಂದ ಬರುತ್ತದೆ. ಈಗಾಗಲೇ ಎಲ್ಲರಿಗೂ ಗೊತ್ತಿರುವ ವೈಜ್ಞಾನಿಕ ತಥ್ಯವನ್ನು ಬಳಸಿಕೊಂಡು, ಸಂಸ್ಕೃತಿ ಸಚಿವಾಲಯದ ಯೋಜನೆಯು ಸುಲಭವಾಗಿ ಆದಿವಾಸಿಗಳನ್ನು ಈ ಉಪಖಂಡದ ಏಕೈಕ ಮೂಲವಾಸಿಗಳೆಂಬ ವಾದವನ್ನು ತಳ್ಳಿಹಾಕಬಹುದು. ಇದರಿಂದ, ಹರಪ್ಪನ ನಾಗರಿಕತೆಗೆ ಮುನ್ನ ಇದ್ದ ಸಂಸ್ಕೃತ ಮಾತನಾಡುವ ಜನರು ಭಾರತದಿಂದ ಪಶ್ಚಿಮ ದಿಕ್ಕಿನಲ್ಲಿ ಏಷಿಯಾದ ಇತರ ಕಡೆಗೆ ಹಾಗೂ ಉತ್ತರದ ಸ್ಟೆಪ್ ಕಡೆಗೆ ವಲಸೆ ಹೋದರು ಎಂಬ ಕಪೊಕಲ್ಪಿತ ಮತ್ತು ಅವೈಜ್ಞಾನಿಕ ತಥ್ಯವನ್ನು ಪ್ರಚಾರ ಮಾಡಲು ಅವರಿಗೆ ದಾರಿ ಸುಲಭವಾಗುವುದು. ಇತಿಹಾಸದ ಆರ್‌ಎಸ್‌ಎಸ್‌ನ ನೋಟವು ಸಿಂಧು ಕಣಿವೆ ನಾಗರಿಕತೆಯ ಸಮಯದಲ್ಲಿ ಸಂಸ್ಕೃತದ ಬಳಕೆ ಇತ್ತು ಎಂದು ಸಾಬೀತುಪಡಿಸುವಲ್ಲಿ ಅತೀವ ಆಸಕ್ತಿ ಹೊಂದಿದೆ. ಈ ದೃಷ್ಟಿಕೋನವು ಸಂಪೂರ್ಣವಾಗಿ ಪೊಳ್ಳಾಗಿದ್ದು, ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ. ಇದು ಸಂಸ್ಕೃತವು ಭಾರತದಲ್ಲಿ ಮೊದಲು ಅಭಿವೃದ್ಧಿ ಹೊಂದಿ, ನಂತರ ಭಾರತದ ಹೊರಗೆ ಬಹಳಷ್ಟು ಭಾಷೆಗಳ ಪೂರ್ವಜರಾಗಿ ವಿಶ್ವದ ಇತರೆಡೆ ಹರಡಿತು ಎಂಬ ಅವೈಜ್ಞಾನಿಕ ವಾದವನ್ನು ಹರಡಿಸುವ ಆಸಕ್ತಿ ಹೊಂದಿದೆ.
ಹಿಟ್ಲರ್ ಅಧಿಕಾರಕ್ಕೆ ಬರುವ ಅರ್ಧ ಶತಕ ಮುನ್ನ, ಆರ್ಯನ್ನರ ಕಪೊಕಲ್ಪಿತ ಇತಿಹಾಸಪೂರ್ವ ನಾಡಿನ ಬಗ್ಗೆ ಇಂತಹದೇ ವಾದಗಳನ್ನು ಮುಂದಿಡಲಾಗಿತ್ತು. ಈಗ ಕೂಡ ಆಟ ಅದೇ! ಈ ವಾದದಲ್ಲಿ ಹುರುಳಿಲ್ಲ ಎಂದು ನೂರಕ್ಕಿಂತ ಹೆಚ್ಚು ಅತ್ಯುತ್ತಮ ವಿಜ್ಞಾನಿಗಳ ಗುಂಪೊಂದು ಬಹಿರಂಗಪಡಿಸಿದ್ದರೂ ಈ ಆಟ ನಡೆದಿದೆ. ಆರ್‌ಎಸ್‌ಎಸ್ ಸಂಘಟನೆಯು ತನ್ನ ಸಾಂಸ್ಕೃತಿಕ ನಿರೂಪಣೆಗಾಗಿ ಒಂದು ಮರಳಿನ ಕೋಟೆಯನ್ನೇ ನಿರ್ಮಿಸಿದೆ. ಸಂಸ್ಕೃತಿ ಸಚಿವಾಲಯವು ಇದಕ್ಕೆ ಒಂದು ಹುಸಿ ವೈಜ್ಞಾನಿಕ ಶೋಕೇಸ್ ನಿರ್ಮಿಸುತ್ತಿದೆಯೇ? ಇದರಿಂದ ಆಗುವ ಪರಿಣಾಮವೇನೆಂದರೆ, ಆದಿವಾಸಿಗಳಿಗೆ ತಮ್ಮ ಸಾಂಸ್ಕೃತಿಕ ಸ್ಥಾನವನ್ನು ನಿರಾಕರಿಸುವುದಷ್ಟೇ ಅಲ್ಲ, ವಿಜ್ಞಾನಕ್ಕೆ ಅದರ ನ್ಯಾಯಸಮ್ಮತೆಯನ್ನು ನಿರಾಕರಿಸುವುದಷ್ಟೇ ಅಲ್ಲ, ಅದರೊಂದಿಗೆ ಅವರು ಹೇಳಿಕೊಳ್ಳುವ ಈ ’ಶುದ್ಧ’ ಮತ್ತು ’ಅಶುದ್ಧ’ ನಾಗರಿಕರ ನಡುವೆ ಸಾಮಾಜಿಕ ಅಸಾಮರಸ್ಯಕ್ಕೆ ನ್ಯಾಯಸಮ್ಮತೆ ನೀಡುತ್ತದೆ. ಜೀನ್ಸ್‌ಗಳನ್ನು ಪರೀಕ್ಷಿಸುತ್ತ ಹಾಗೂ ಪದಗಳಿಗೆ ಮರುಜೀವ ನೀಡುತ್ತಿರುವಾಗ, ಭಾರತೀಯ ಸಂವಿಧಾನ ನೀಡಿರುವ ಸಮಾನ ಪೌರತ್ವದ ಖಾತ್ರಿಯು ದ್ವೇಷ ಮತ್ತು ಅನ್ಯಾಯದಲ್ಲಿ ಮುಳುಗಿಹೋಗಬಹುದು. ’ಶುದ್ಧ’ ಎಂಬುದು ಕೇವಲ ಒಂದು ಮುಗ್ಧ ವಿಶೇಷಣವಲ್ಲ. ಅದನ್ನು ಜನಾಂಗಕ್ಕೆ ಅನ್ವಯಿಸಿದಾಗ ಅದು ವಿಷಕಾರಿಯಾಗಬಹುದು. ಒಂದು ನಾಗರಿಕ ಸಮಾಜದಲ್ಲಿ ಯಾವುದೇ ಸ್ಥಾನ ಇರಬಾರದಂತಹ ಪರಿಕಲ್ಪನೆಗೆ ಭಾರತೀಯರು ಜೊತೆಗೂಡುವುದಿಲ್ಲ ಎಂದು ಸಂಸ್ಕೃತಿ ಸಚಿವಾಲಯ ಭರವಸೆ ನೀಡುತ್ತದೆ ಎಂದು ಆಶಿಸುವ.
(ಕನ್ನಡಕ್ಕೆ): ರಾಜಶೇಖರ ಅಕ್ಕಿ

ಪ್ರೊ ಜಿ ಎನ್ ದೇವಿ
ಭಾರತದ ಖ್ಯಾತ ಚಿಂತಕರಲ್ಲಿ ಒಬ್ಬರಾದ ದೇವಿ ಅವರು, ಪೀಪಲ್ ಲಿಂಗ್ವಿಸ್ಟಿಕ್ಸ್ ಸರ್ವೆ ಮೂಲಕ ಚಿರಪರಿಚಿತರು. ‘ಆಫ್ಟರ್ ಅಮ್ನೇಶಿಯಾ’ ಪುಸ್ತಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಚಳವಳಿಗಳ ಸಂಗಾತಿಯಾಗಿರುವ ದೇವಿ ಸದ್ಯಕ್ಕೆ ದಿ ಸೌತ್ ಫೋರಮ್‌ನ ಸಂಚಾಲಕರು.
ಇದನ್ನೂ ಓದಿ: ದಿ ಕ್ರಿಮಿನಲ್ ಪ್ರೊಸಿಜರ್ (ಐಡೆಂಟಿಫಿಕೇಷನ್) ಬಿಲ್; ಪೊಲೀಸ್ ಕಣ್ಗಾವಲಿನ ಕರಾಳ ವ್ಯವಸ್ಥೆಗೆ ಇನ್ನಷ್ಟು ಪುಷ್ಠಿ


