ದಿ ಕ್ರಿಮಿನಲ್ ಪ್ರೊಸಿಜರ್ (ಐಡೆಂಟಿಫಿಕೇಷನ್) ಬಿಲ್, 2022 ಅಂದರೆ ಅಪರಾಧ ವಿಧಾನ (ಗುರುತಿಸುವಿಕೆ) ಮಸೂದೆಯನ್ನು ಈ ವರ್ಷ ಮಾರ್ಚ್ 28ರಂದು ಲೋಕಸಭೆಯಲ್ಲಿ ಮಂಡಿಸಲಾಯಿತು. ಹಾಗೂ ಅದನ್ನು
ಜಾರಿಗೊಳಿಸಲಾಯಿತು. ಇದು ಈಗ ಚಾಲ್ತಿಯಲ್ಲಿರುವ ಐಡೆಂಟಿಫಿಕೇಷನ್ ಆಫ್ ಪ್ರಿಸನರ್ಸ್ ಆಕ್ಟ್, 1920ನ ಜಾಗ ತುಂಬಲಿದೆ. 1920ರ ಕಾಯಿದೆಯು ಬಂಧಿತ ವ್ಯಕ್ತಿಗಳ ವೈಯಕ್ತಿಕ ವಿವರಣೆಗಳ ಸಂಗ್ರಹಣೆ, ಶೇಖರಣೆ ಹಾಗೂ ಅದನ್ನು ನಾಶಪಡಿಸುವ ಕುರಿತು ನಿರ್ದಿಷ್ಟವಾದ ಮಾರ್ಗಸೂಚಿಗಳನ್ನು ಹೊಂದಿತ್ತು. ’ಪ್ರತಿರೋಧದ ಅಭಿವ್ಯಕ್ತಿಗೆ’ ಈ ಕಾಯ್ದೆಯಿಂದ ಗಂಭೀರ ಪರಿಣಾಮಗಳು ಒದಗುವ ಸಾಧ್ಯತೆ ಇರುವುದರಿಂದ ಈ 2022ರ ಈ ಮಸೂದೆಯನ್ನು ಕಟುವಾಗಿ ಟೀಕಿಸಲಾಗಿತ್ತು.
ಪ್ರಸ್ತಾಪಿಸಲಾದ ಈ ಮಸೂದೆಯು ವ್ಯಕ್ತಿಗಳ ಖಾಸಗಿತನದ ಉಲ್ಲಂಘನೆಯ ಕಾರಣಕ್ಕಾಗಿ
ಸಮಸ್ಯಾತ್ಮಕವಾಗಿದೆ. ಈಗಿರುವ 1920ರ ಕಾನೂನಿನಲ್ಲಿ ಬೆರಳಚ್ಚು ಮತ್ತು ಕಾಲಿನ ಅಚ್ಚುಗಳನ್ನು ಮಾತ್ರ ಸಂಗ್ರಹಿಸಬಹುದಾಗಿದೆ, ಆದರೆ 2022ರ ಮಸೂದೆಯು, ಬೆರಳಿನ ಗುರುತು, ಅಂಗೈ ಗುರುತು, ಕಾಲಿನ ಗುರುತು, ಫೋಟೊಗಳು, ಐರಿಸ್ ಮತ್ತು ರೆಟಿನಾ ಸ್ಕ್ಯಾನ್‌ಗಳು, ದೈಹಿಕ, ಜೈವಿಕ ಮಾದರಿಗಳು ಮತ್ತು ಅವುಗಳ ವಿಶ್ಲೇಷಣೆ, ಹಸ್ತಾಕ್ಷರ, ಸಹಿ ಮುಂತಾದ ಆಯಾ ವ್ಯಕ್ತಿಯ ವರ್ತನೆಯ ಲಕ್ಷಣಗಳನ್ನು ಹಾಗೂ ಇತರ ವೈದ್ಯಕೀಯ ದಾಖಲೆಗಳನ್ನು ಸಂಗ್ರಹಿಸುವ ಉದ್ದೇಶ ಹೊಂದಿದೆ.
2017ರ ಪುಟ್ಟಸ್ವಾಮಿ ತೀರ್ಪಿನಲ್ಲಿ ಸರ್ಚೋಚ್ಚ ನ್ಯಾಯಾಲಯವು ಖಾಸಗಿತನದ ಹಕ್ಕನ್ನು ಸಂವಿಧಾನಾತ್ಮಕ ರಕ್ಷಣೆ ಹೊಂದಿರುವ ಮೂಲಭೂತ ಹಕ್ಕು ಎಂದು ಎತ್ತಿಹಿಡಿದಿದೆ. ಮಾಹಿತಿಯ ಖಾಸಗಿತನ ಹಾಗೂ ಖಾಸಗಿತನದ
ಉಲ್ಲಂಘನೆಗೆ ಸಂಬಂಧಿಸಿದಂತೆ ಹೆಚ್ಚುತ್ತಿರುವ ಅಪರಾಧಗಳನ್ನು ಪರಿಗಣಿಸಿ- ಇದು ಸರಕಾರ ಹಾಗೂ ಸರಕಾರೇತರ ಸಂಸ್ಥೆಗಳಿಂದಲೂ ಆಗಬಹುದು- ಡೇಟಾ ಸಂಗ್ರಹಣೆ ಮತ್ತು ಸಂಸ್ಕರಣೆ ಮತ್ತು ಅದರ ಪ್ರೊಫೈಲಿಂಗ್ ಕುರಿತು, ಹಾಗೂ ಇವೆಲ್ಲವುಗಳ ಸುತ್ತ ಆಗುತ್ತಿರುವ ಅಪರಾಧಗಳ, ಅಪರಾಧಗಳ ಹೆಚ್ಚುತ್ತಿರುವ ಸಂಖ್ಯೆಗಳನ್ನು ಪರಿಗಣಿಸುತ್ತ ಸರ್ವೋಚ್ಚ ನ್ಯಾಯಾಲಯವು, ಒಬ್ಬ ವ್ಯಕ್ತಿಯ ಮಾಹಿತಿಯ ಖಾಸಗಿತನಕ್ಕೆ ಇನ್ನೂ ಹೆಚ್ಚಿನ ರಕ್ಷಣೆ ನೀಡಬೇಕೆಂದು ಒತ್ತಾಯಿಸಿತು. ನಿರ್ದಿಷ್ಟವಾಗಿ, ಒಬ್ಬ ವ್ಯಕ್ತಿಯ ಬಯೊಮೆಟ್ರಿಕ್ ಸ್ಥಿತಿ, ಅಂದರೆ ಅವರ ಲಿಂಗ, ಎತ್ತರ, ತೂಕ, ರಕ್ತದ ಬಗೆ, ಬೆರಳಚ್ಚು, ರೆಟಿನಾ ಪ್ಯಾಟರ್ನ್, ಡಿಎನ್‌ಎ ಅಥವಾ ಆರೋಗ್ಯ ಪರಿಸ್ಥಿತಿಗಳ ಬಗ್ಗೆ ಮಾಹಿತಿಯನ್ನು ರಕ್ಷಿಸುವ ಅಗತ್ಯವಿದೆ ಎಂದೂ ನ್ಯಾಯಾಲಯವೂ ಒತ್ತುನೀಡಿ ಹೇಳಿತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಸರ್ವೋಚ್ಚ ನ್ಯಾಯಾಲಯದ ಈ ತೀರ್ಪಿಗೆ ಪ್ರತಿಕ್ರಿಯೆಯಾಗಿ, 2019ರ ಡಿಸೆಂಬರ್‌ನಲ್ಲಿ ಪರ್ಸನಲ್ ಡೇಟಾ ಪ್ರೊಟೆಕ್ಷನ್ ಬಿಲ್ 2019 (ವೈಯಕ್ತಿಕ ದತ್ತಾಂಶ ರಕ್ಷಣೆ ಮಸೂದೆ)ಯನ್ನು ಮಂಡಿಸಲಾಯಿತು. ಈ ಮಸೂದೆಯು ಭಾರತದಲ್ಲಿ ದತ್ತಾಂಶ ರಕ್ಷಣೆಯ ಮುನ್ನೋಟ ಹೊಂದಿತ್ತು; ತನಿಖೆ ಮತ್ತು ತಿದ್ದುಪಡಿಸುವ ಅಧಿಕಾರಗಳ ಮೂಲಕ ದತ್ತಾಂಶ ರಕ್ಷಣೆಯ ಪ್ರಾಧಿಕಾರವು ಮೇಲ್ವಿಚಾರಣೆ ಮಾಡಬಹುದಾಗಿತ್ತು. ಆದರೆ ಈ ಮಸೂದೆಯಲ್ಲಿ ಒಬ್ಬ ವ್ಯಕ್ತಿಯ ಖಾಸಗಿತನಕ್ಕಿಂತ ರಾಷ್ಟ್ರೀಯ ಭದ್ರತೆಗೇ ತರ್ಕರಹಿತ ಮಹತ್ವ ನೀಡಿದ್ದರ ಕಾರಣದಿಂದ ಕಟುವಾಗಿ ಟೀಕಿಸಲಾಗಿದೆ. ಇದರಿಂದ ದತ್ತಾಂಶ ರಕ್ಷಣೆಯ ಪ್ರಾಧಿಕಾರವು ಹಲ್ಲಿಲ್ಲದ ಆಯೋಗವಾಗುತ್ತದೆ, ಅದಕ್ಕೆ ನೀಡಿರುವ ಸೀಮಿತ ಅಧಿಕಾರ ಹಾಗೂ ಪ್ರಾಧಿಕಾರದಲ್ಲಿ ಆಗುವ ನೇಮಕಾತಿಯಲ್ಲಿ ಸರಕಾರದ ಹಸ್ತಕ್ಷೇಪಗಳಿಂದ ಅದು ಏನೂ ಮಾಡದ ಪರಿಸ್ಥಿತಿಗೆ ತಲುಪುತ್ತದೆ. ಹಾಗಾಗಿ, ಒಂದು ಸಮಗ್ರವಾದ ಡೇಟಾ ರಕ್ಷಣೆಯ ಕಾನೂನಿನ ಅನುಪಸ್ಥಿತಿಯಲ್ಲಿ, ಈ ಕ್ರಿಮಿನಲ್ ಪ್ರೊಸಿಜರ್ (ಐಡೆಂಟಿಫಿಕೇಷನ್) ಬಿಲ್ 2022, ಮೂಲಕ ಒಬ್ಬ ವ್ಯಕ್ತಿಯ ಖಾಸಗಿತನದೊಂದಿಗೆ ಹಸ್ತಕ್ಷೇಪ ಮಾಡುವ ಸರಕಾರದ ಯಾವುದೇ ಕ್ರಮವು ಮೂಲಭೂತ ಹಕ್ಕುಗಳ ಚ್ಯುತಿಯಾಗುತ್ತದೆ ಹಾಗೂ ಸರಕಾರದಿಂದ ಆಗುವ ಕಣ್ಗಾವಲಿನ ಪ್ರಕ್ರಿಯೆ ಹೆಚ್ಚಿಸಲು ಕಾರಣವಾಗುತ್ತದೆ.
2022ರ ಮಸೂದೆಯು ಯಾವ್ಯಾವ ವ್ಯಕ್ತಿಗಳ ಮಾಹಿತಿಯನ್ನು ಸಂಗ್ರಹಿಸಬಹುದು ಎಂಬುದರ ವ್ಯಾಪ್ತಿಯನ್ನು ವಿಸ್ತರಿಸುತ್ತದೆ; ಇದರ ಅನುಗುಣವಾಗಿ ಯಾವುದೇ ಪ್ರಿವೆಂಟಿವ್ ಡೆಟೆನ್ಷನ್ (ತಡೆಗಟ್ಟುವ ಅಥವಾ ಮುಂಜಾಗ್ರತೆಯ ಬಂಧನ) ಕಾನೂನುಗಳ ಅಡಿಯಲ್ಲಿ ಬಂಧಿಸಲಾದ ವ್ಯಕ್ತಿಗಳನ್ನೂ ಒಳಗೊಂಡಿದೆ. ಆದರೆ 1920ರ ಕಾನೂನಿನ ಅಡಿಯಲ್ಲಿ ಕೇವಲ ದೋಷ ಸಾಬೀತಾದ ಅಪರಾಧಿಗಳ ಅಥವಾ ಒಂದು ತನಿಖೆಗೆ ಸಂಬಂಧಪಟ್ಟಂತೆ ಒಂದು ವೇಳೆ ಮ್ಯಾಜಿಸ್ಟ್ರೇಟ್‌ಗೆ ಅಗತ್ಯ ಎನಿಸಿದಲ್ಲಿ ಮಾತ್ರ ಆ ವ್ಯಕ್ತಿಗಳ ಮಾಹಿತಿಯನ್ನು (ಕೇವಲ ಬೆರಳಚ್ಚು ಮತ್ತು ಕಾಲಿನ ಗುರುತು) ಸಂಗ್ರಹಿಸಬಹುದಾಗಿದೆ. ಇಲ್ಲಿರುವ ಮಹತ್ವದ ಸಂಗತಿಯೇನೆಂದರೆ, ಮುಂಜಾಗ್ರತೆಯ ಬಂಧನದ ಕಾನೂನುಗಳ ಅಡಿಯಲ್ಲಿ ಬಂಧಿತ ವ್ಯಕ್ತಿಗಳು ಕೇವಲ ಶಂಕಿತರಾಗಿರುತ್ತಾರೆ, ಅವರ ವಿರುದ್ಧ ಪೊಲೀಸರ ಬಳಿ ಯಾವುದೇ ಸಾಕ್ಷ್ಯಾಧಾರಗಳು ಇರುವುದಿಲ್ಲ. ಹಾಗೂ ಈ ಕಾನೂನುಗಳ ಅಡಿಯಲ್ಲಿ ಬಂಧಿತರಾಗುವ ಹೆಚ್ಚಿನವರು ಪ್ರತಿಭಟನೆ ಮಾಡುವವರು ಹಾಗೂ ಸರಕಾರದ ಜನವಿರೋಧಿ ನೀತಿಗಳ ವಿರುದ್ಧ ಗಟ್ಟಿಯಾಗಿ ಮಾತನಾಡುವವರು ಆಗಿರುತ್ತಾರೆ. ಹೊಸ ಮಸೂದೆಯ ಅಡಿಯಲ್ಲಿ ಈ ವ್ಯಕ್ತಿಗಳೂ ಡಿಎನ್‌ಎನಂತಹ ತುಂಬಾ ಪ್ರಮುಖವಾದ ವೈಯಕ್ತಿಕ ಮಾಹಿತಿಯನ್ನು ಪೊಲೀಸರಿಗೆ ನೀಡಬೇಕಾದ ಪರಿಸ್ಥಿತಿ ಬರುತ್ತದೆ.
ಈ 2022 ಮಸೂದೆಯು ಮತ್ತೊಂದು ಸಂಗತಿಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ; ಅದು ಭಾರತೀಯ ಅಪರಾಧ ನ್ಯಾಯಶಾಸ್ತ್ರದ ವ್ಯವಸ್ಥೆಯಲ್ಲಿ ಜಾತಿ ಪದ್ಧತಿಯನ್ನು ಗಟ್ಟಿಗೊಳಿಸುವ ಕೆಲಸ ಮಾಡಲಿದೆ. ಮಾಹಿತಿ ರಕ್ಷಣೆಯ ಕಾನೂನುಗಳು ಇಲ್ಲದಿರುವ ಸಂದರ್ಭದಲ್ಲಿ, ಸರಕಾರಕ್ಕೆ ಪೊಲೀಸ್ ದಾಖಲೆಗಳನ್ನು ಡಿಜಿಟಲ್ ರೂಪಕ್ಕೆ ತರಲು ಖಾಸಗಿ ತಂತ್ರಜ್ಞಾನದ ಕಂಪನಿಗಳು ಸಹಾಯ ಮಾಡುತ್ತಿರುವ ಉದಾಹರಣೆಗಳು ಹೆಚ್ಚುತ್ತಿವೆ ಹಾಗೂ ಅಪರಾಧಗಳು ಮಾಡುವ ’ಸಾಧ್ಯತೆ ಇರುವ’ ಮತ್ತು ರೂಢಿಗತವಾಗಿ ಅಪರಾಧ ಮಾಡುವವರ (ಹ್ಯಾಬಿಚುವಲ್ ಆಫೆಂಡರ್ಸ್) ಕಣ್ಗಾವಲು ಹೆಚ್ಚಿಸಲೂ ಈ ಖಾಸಗಿ ಕಂಪನಿಗಳ ಮೊರೆಹೋಗುತ್ತವೆ ಸರಕಾರಗಳು. ಇದರಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೇನೆಂದರೆ, ಈ ಪೊಲೀಸ್ ದಾಖಲೆಗಳು ಆಯಾ ವ್ಯಕ್ತಿಯ ಜಾತಿಯಿಂದ ಬಲವಾಗಿ ಪ್ರಭಾವಿತವಾಗಿರುತ್ತವೆ. ಭಾರತೀಯ ಸಂಸ್ಕೃತಿಯ ಹಿಂದೂ ಮೇಲ್ಜಾತಿಯ ಪರಿಕಲ್ಪನೆಯು ಅಪರಾಧ ಮತ್ತು ಅಪರಾಧೀ ಪ್ರಕ್ರಿಯೆಯಲ್ಲಿ ಗಟ್ಟಿಯಾಗಿ ಬೇರೂರಿವೆ. ಇದನ್ನು ನಾವು 1871ರ ಕ್ರಿಮಿನಲ್ ಟ್ರೈಬ್ಸ್ ಆಕ್ಟ್ (ಅಪರಾಧಿ ಬುಡಕಟ್ಟುಗಳ ಕಾಯಿದೆ)ನ ವಸಾಹತುಶಾಹಿ ಕಾನೂನಿನಲ್ಲಿ ನೋಡಬಹುದು.
ಈ ಕಾನೂನು ಕೆಲವು ನಿರ್ದಿಷ್ಟ ಜಾತಿಗಳನ್ನು ಅಪರಾಧಿಗಳೆಂದು ಪರಿಗಣಿಸಿ, ಅವರ ಮೇಲೆ ಕಣ್ಗಾವಲು ಇರಿಸಿ ಗುರಿ ಮಾಡಲಾಗಿತ್ತು. ಈ ಕಾನೂನನ್ನು ಹಿಂಪಡೆಯಲಾಗಿದ್ದರೂ, ಅದರ ಬದಲಿಗೆ 1952ರ ಹ್ಯಾಬಿಚುವಲ್ ಆಫೆಂಡರ್ಸ್ ಆಕ್ಟ್‌ಅನ್ನು ತರಲಾಯಿತು. ಈ ಹೊಸ ಕಾನೂನು ಕೂಡ ಸಮಾಜದ ಅಂಚಿನಲ್ಲಿರುವ ಕೆಲವು ಜಾತಿಗಳನ್ನು ಮತ್ತು ಬುಡಕಟ್ಟುಗಳನ್ನು ಅಪರಾಧೀಕರಿಸಲು, ಗುರಿ ಮಾಡಲು ಮತ್ತು ಕಳಂಕಿತರನ್ನಾಗಿಸುವ ಮಾಡುವ ಕೆಲಸವನ್ನು ಮುಂದುವರೆಸಿತು. ಈ ಜಾತಿವಾದಿ ಮಾದರಿಯನ್ನು ಬಳಸಿ ಮಾಡಿದ ಡೇಟಾಬೇಸ್ ಮೂಲಕ, ಈ ಹೊಸ 2022ರ ಕ್ರಿಮಿನಲ್ ಪ್ರೊಸಿಜರ್ (ಐಡೆಂಟಿಫಿಕೇಷನ್) ಮಸೂದೆಯು ಭಾರತೀಯ ಪೊಲೀಸ್ ವ್ಯವಸ್ಥೆಯು ಅಂಚಿನಲ್ಲಿರುವ ಸಮುದಾಯಗಳ ವಿರುದ್ಧ ಮಾಡುವ ತನ್ನ ಜಾತಿ ಆಧಾರಿತ ಅಪರಾಧೀಕರಣದ ಪ್ರಕ್ರಿಯೆಯನ್ನು ಇನ್ನಷ್ಟು ಗಟ್ಟಿಗೊಳಿಸಲಿದೆ; ಏಕೆಂದರೆ ಇದು ಈ ಅಂಚಿನಲ್ಲಿರುವ ಸಮುದಾಯಗಳ ಜನರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಲು ಹಾಗೂ ಅವರುಗಳ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿ ಸುಳ್ಳು ಪ್ರಕರಣಗಳಲ್ಲಿ ಅಡೆತಡೆಯಿಲ್ಲದೇ ಸಿಕ್ಕಿಸಲು ಇದೊಂದು ಸಾಧನವಾಗಲಿದೆ.
2022ರ ಮಸೂದೆಯಲ್ಲಿ ಈ ಸಮಸ್ಯೆಗಳೊಂದಿಗೆ, ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಲು ಕೆಳಸ್ತರದ ಪೊಲೀಸ್ ಅಧಿಕಾರಿಗಳಾದ ಹೆಡ್ ಕಾನ್‌ಸ್ಟೇಬಲ್‌ನಂತವರಿಗೆ ಈ ಮಸೂದೆಯಲ್ಲಿ ಅಧಿಕಾರ ನೀಡಲಾಗಿದೆ, ಪ್ರಸಕ್ತ 1920ರ ಐಡೆಂಟಿಫಿಕೇಷನ್ ಆಫ್ ಪ್ರಿಸನರ್ಸ್ ಆಕ್ಟ್‌ನಲ್ಲಿ ಪೊಲೀಸ್ ಸಬ್‌ಇನ್ಸ್ಪೆಕ್ಟರ್‌ಗಿಂತ ಮೇಲಿನ ರ್‍ಯಾಂಕ್‌ನವರು ಮಾತ್ರ ಮಾಹಿತಿ ಸಂಗ್ರಹಿಸಬಹುದಾಗಿದೆ. ಹಾಗೂ ಎನ್‌ಸಿಆರ್‌ಬಿ (ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ)ಗೆ ರಾಜ್ಯಗಳಿಂದ, ಕೇಂದ್ರಾಡಳಿತ ಪ್ರದೇಶಗಳಿಂದ ಈ ಮಸೂದೆಯಲ್ಲಿ ಅವಕಾಶ ನೀಡಲಾಗಿರುವ ಎಲ್ಲಾ ವ್ಯಕ್ತಿಗಳ ಮಾಹಿತಿಯನ್ನು ಸಂಗ್ರಹಿಸುವ ಮತ್ತು ಅದನ್ನು ಸಂಗ್ರಹಿಸಿದ ದಿನದಿಂದ 75 ವರ್ಷಗಳವರೆಗೆ (ಅದಕ್ಕಿಂತ ಮುಂಚೆ ಯಾವುದೇ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗದಿರುವ ಹಾಗೂ ಆ ಪ್ರಕರಣದಲ್ಲಿ ದೋಷಮುಕ್ತ ಎಂದು ಸಾಬೀತಾದರೆ ನಾಶಪಡಿಸಬಹುದಾಗಿದೆ.) ಸಂರಕ್ಷಿಸುವ ಅಧಿಕಾರ ನೀಡಲಾಗಿದೆ. 1920ರ ಕಾಯಿದೆಯಲ್ಲಿ ಮಾಹಿತಿಯನ್ನು ಸಂಗ್ರಹಿಸುವುದರ ಬಗ್ಗೆ, ಸುರಕ್ಷಿತವಾಗಿ ಇಡುವುದರ ಬಗ್ಗೆ, ದಾಖಲೆಗಳನ್ನು ನಾಶಪಡಿಸುವ, ಇತ್ಯಾದಿ ವಿಷಯಗಳ ಬಗ್ಗೆ ರಾಜ್ಯ ಸರಕಾರಗಳು ಮಾತ್ರ ನಿಯಮಗಳನ್ನು ಮಾಡುವ ಅಧಿಕಾರ ಹೊಂದಿವೆ. ಆದರೆ 2022ರ ಮಸೂದೆಯು ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡಕ್ಕೂ ನಿಯಮಗಳನ್ನು ರೂಪಿಸಲು ಅಧಿಕಾರ ನೀಡುತ್ತದೆ. ಇದರಿಂದಾಗಿ ಹಲವು ಅಸಮಂಜಸ ಮತ್ತು ಗಂಭೀರ ಸಮಸ್ಯೆಗಳು ತಲೆದೋರಬಹುದು ಹಾಗೂ ಆ ರೀತಿ ಆದಾಗ ಕೇಂದ್ರದ ನಿಯಮಗಳೇ ರಾಜ್ಯ ಸರಕಾರಗಳ ನಿಯಮಗಳ ಮೇಲೆ ಸವಾರಿ ಮಾಡಬಹುದು.
1920ರ ಐಡೆಂಟಿಫಿಕೇಷನ್ ಆಫ್ ಪ್ರಿಸನರ್ಸ್ ಆಕ್ಟ್‌ನಲ್ಲಿಯೂ ಪ್ರಜಾಪ್ರಭುತ್ವವಿರೋಧಿಯಾಗಿರುವ ಹಾಗೂ ಖಾಸಗಿತನಕ್ಕೆ ಧಕ್ಕೆ ತರುವ ಅವಕಾಶಗಳಿವೆ ಆದರೆ, ಲೋಕಸಭೆಯು ಈ ಸಮಸ್ಯೆಗಳನ್ನು ಚರ್ಚಿಸಿ, ಪರಿಹಾರ ಹುಡುಕದೆ 2022ರ ಕ್ರಿಮಿನಲ್ ಪ್ರೊಸಿಜರ್ (ಐಡೆಂಟಿಫಿಕೇಷನ್) ಮಸೂದೆಯನ್ನು ಮಂಡಿಸಿದೆ. ಇದು ಒಂದು ವೇಳೆ ನಿಜವಾದ ಕಾನೂನಾದರೆ, ಖಾಸಗಿತನಕ್ಕೆ ಸಂಬಂಧಿಸಿದಂತೆ ಭಾರತೀಯ ನ್ಯಾಯಶಾಸ್ತ್ರಕ್ಕೆ ಕಪ್ಪುದಿನವಾಗಿ ಪರಿಣಮಿಸುತ್ತದೆ ಹಾಗೂ ಪೊಲೀಸ್ ಕಣ್ಗಾವಲಿನ ಆಡಳಿತ ವ್ಯವಸ್ಥೆಯನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ.
ಅನುವಾದ: ರಾಜಶೇಖರ ಅಕ್ಕಿ

ಬಸವ ಪ್ರಸಾದ್
ಪ್ರಸಕ್ತ ಆಲ್ಟರ್ನೇಟಿಲ್ ಲಾ ಫೋರಂನಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಬಸವ ಅವರು, ಜಾತಿ ದೌರ್ಜನ್ಯಗಳ ಬಗ್ಗೆ ಅಧ್ಯಯನದಲ್ಲಿ ತೊಡಗಿಸಿಕೊಂಡು ಅವುಗಳ ವಿರುದ್ಧದ ಜನಾಂದೋಲನಗಳಲ್ಲಿಯೂ ಸಕ್ರಿಯವಾಗಿ ಭಾಗಿಯಾಗಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇದನ್ನೂ ಓದಿ: ಕೇಡು ನಮ್ಮ ಹೊಸ್ತಿಲನ್ನೇ ತುಳಿದಾಗ…