ಕೇಂದ್ರದ ಲಸಿಕೆ ನೀತಿಯ ಬಗ್ಗೆ ಟೀಕಿಸುತ್ತಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರು ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕೆಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಸೋಮವಾರ ಮನವಿ ಮಾಡಿದ್ದಾರೆ.
“ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇನ್ನೂ ಲಸಿಕೆ ಹಾಕಿಸಿಕೊಂಡಿದ್ದಾರೋ ಇಲ್ಲವೋ ಎಂಬುದು ದೇಶಕ್ಕೆ ತಿಳಿದಿಲ್ಲ. ರಾಹುಲ್ ಗಾಂಧಿ ಅವರೇ, ಇನ್ನೂ ಲಸಿಕೆ ಪಡೆಯದಿದ್ದರೆ ಕೂಡಲೇ ಲಸಿಕೆ ಹಾಕಿಸಿಕೊಳ್ಳಿ. ಇದು ನನ್ನ ವಿನಮ್ರ ಮನವಿ” ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಬಿಹಾರದ ಪಾಟ್ನಾದಲ್ಲಿ ಹೇಳಿದರು ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.
‘ಕಳೆದ ವಾರ, ಕಾಂಗ್ರೆಸ್ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರು ಲಸಿಕೆಯ ಎರಡನೇ ಡೋಸ್ ತೆಗೆದುಕೊಂಡಿದ್ದಾರೆ. ರಾಹುಲ್ ಗಾಂಧಿ ಅವರು ಮೇ ತಿಂಗಳಲ್ಲಿ ಸೋಂಕಿಗೆ ಒಳಗಾಗಿ ಗುಣಮುಖರಾದ ಕಾರಣಕ್ಕೆ ಈಗಲೇ ಲಸಿಕೆ ತೆಗೆದುಕೊಳ್ಳುವ ಅಗತ್ಯವಿಲ್ಲ’ ಎಂದು ಕಾಂಗ್ರೆಸ್ ಹೇಳಿದೆ.
ಮೇ 16 ರಂದು ರಾಹುಲ್ ಗಾಂಧಿ ಲಸಿಕೆ ತೆಗೆದುಕೊಳ್ಳಲು ನಿರ್ಧರಿಸಿದ್ದರು. ಆದರೆ ಒಂದು ದಿನ ಮೊದಲು ಕೊರೊನಾ ಪಾಸಿಟಿವ್ ಫಲಿತಾಂಶ ಬಂದಿತು ಎಂದು ಪಕ್ಷದ ಹಿರಿಯ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ. “ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಲಸಿಕೆಯ ಎರಡೂ ಡೋಸ್ ತೆಗೆದುಕೊಂಡಿದ್ದಾರೆ. ರಾಹುಲ್ ಗಾಂಧಿಯವರು ಕಡ್ಡಾಯ ಕಾಯುವ ಅವಧಿ ಮುಗಿದ ನಂತರ ಲಸಿಕೆ ತೆಗೆದುಕೊಳ್ಳುತ್ತಾರೆ” ಎಂದು ಕಾಂಗ್ರೆಸ್ ನಾಯಕರೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಹಲವಾರು ಕೇಂದ್ರ ಸಚಿವರು ಮತ್ತು ಬಿಜೆಪಿ ನಾಯಕರು, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಸೇರಿದಂತೆ ಉನ್ನತ ಕಾಂಗ್ರೆಸ್ ನಾಯಕರು ಕೋವಿಡ್ ಲಸಿಕೆ ತೆಗೆದುಕೊಂಡಿದ್ದಾರೆಯೇ ಎಂಬ ವಿವರಗಳನ್ನು ಸಾರ್ವಜನಿಕವಾಗಿ ಪ್ರಕಟಿಸಲು ಕೇಳಿದ ನಂತರ ಈ ಹೇಳಿಕೆ ಬಂದಿದೆ.
ಕೊರೊನಾ ಪಾಸಿಟಿವ್‍ಗೆ ಒಳಗಾದವರು ಸಂಪೂರ್ಣವಾಗಿ ಚೇತರಿಸಿಕೊಂಡ ಮೂರು ತಿಂಗಳ ನಂತರ ಲಸಿಕೆ ತೆಗೆದುಕೊಳ್ಳಬೇಕು ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.
ಭಾನುವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರು ರಾಹುಲ್ ಗಾಂಧಿಯನ್ನು ಸಮರ್ಥಿಸಿಕೊಂಡರು. “ನಮ್ಮ ದೇಶದ ಪ್ರತಿಯೊಬ್ಬ ನಾಗರಿಕರಿಗೂ ವ್ಯಾಕ್ಸಿನೇಷನ್ ಅತ್ಯಂತ ಮುಖ್ಯವಾಗಿದೆ. ಬಿಜೆಪಿ ವಕ್ತಾರರು ಮತ್ತು ಸಚಿವರು, ‘ನಾನು ಯಾಕೆ ಲಸಿಕೆ ತೆಗೆದುಕೊಳ್ಳಲಿಲ್ಲ ಮತ್ತು ರಾಹುಲ್, ಪ್ರಿಯಾಂಕಾ ಅವರಿಗೆ ಭಾರತೀಯ ಲಸಿಕೆಗಳ ಬಗ್ಗೆ ನಂಬಿಕೆ ಇಲ್ಲ’ ಎಂಬ ಪ್ರಶ್ನೆಗಳನ್ನು ಕೇಳಿದ್ದಾರೆ. ಆದರೆ ಅವರು ಸತ್ಯಗಳನ್ನು ಸರಿಯಾಗಿ ತಿಳಿದುಕೊಳ್ಳಬೇಕು’ ಎಂದು ವಾದ್ರಾ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
‘ರಾಹುಲ್ ಗಾಂಧಿ ಅವರಿಗೆ ಸೋಂಕು ತಗುಲಿ ನಂತರ ಗುಣಮುಖರಾದರು. ಈಗ ಅವರು ಲಸಿಕೆ ಪಡೆಯಲು ನಿಗದಿತ ಸಮಯಕ್ಕಾಗಿ ಕಾಯಬೇಕಾಗಿದೆ. ತಮ್ಮ ಪತ್ನಿ ಪ್ರಿಯಾಂಕಾ ಗಾಂಧಿ ವಾದ್ರಾ ಈಗಾಗಲೇ ಲಸಿಕೆ ತೆಗೆದುಕೊಂಡಿದ್ದಾರೆ’ ಎಂದು ರಾಬರ್ಟ್ ವಾರ್ದಾ ಸ್ಪಷ್ಟಪಡಿಸಿದ್ದಾರೆ.
ಕೊರೊನಾ ನಿರ್ವಹಣೆಯಲ್ಲಿ ಕೇಂದ್ರದ ವೈಫಲ್ಯವನ್ನು ರಾಹುಲ್ ಗಾಂಧಿ ಅತ್ಯಂತ ತೀವ್ರವಾಗಿ ಟೀಕಿಸುತ್ತರ ಬಂದಿದ್ದಾರೆ. ಕೇಂದ್ರದ ಲಸಿಕಾ ನೀತಿಯ ವಿರುದ್ಧ ನಿರಂತರವಾಗಿ ದಾಳಿ ಮಾಡುತ್ತ ಬಂದಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಬಗ್ಗೆ ಅಪಪ್ರಚಾರ: ಚಕ್ರವರ್ತಿ ಸೂಲಿಬೆಲೆ ವಿರುದ್ಧ ದೂರು ದಾಖಲು