ಲೋಕಸಭಾ ಸಚಿವಾಲಯದ ಪ್ರೈಡ್(PRIDE) ಆನ್‌ಲೈನ್ ತರಗತಿಯಲ್ಲಿ ಕನ್ನಡ ಸೇರ್ಪಡೆ

ಲೋಕಸಭಾ ಸಚಿವಾಲಯದ ಅಡಿಯಲ್ಲಿ ಬರುವ ‘ಪಾರ್ಲಿಮೆಂಟರಿ ರಿಸರ್ಚ್ ಆ್ಯಂಡ್ ಟ್ರೈನಿಂಗ್ ಇನ್ಸ್‌ಟಿಟ್ಯೂಟ್ ಫಾರ್ ಡೆಮಾಕ್ರಸಿ’ ಸಂಸ್ಥೆಯು ಕನ್ನಡವನ್ನು ಕಡೆಗಣಿದ್ದ ಬಗ್ಗೆ ರಾಜ್ಯದಲ್ಲಿ ಆಕ್ರೋಶ  ವ್ಯಕ್ತವಾಗಿತ್ತು. ಕನ್ನಡ ಸಾಹಿತಿಗಳು, ಕನ್ನಡಪರ ಹೋರಾಟಗಾರರು, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ರಾಜ್ಯ ಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್‌, ರಾಜಕೀಯ ನಾಯಕರ ಟೀಕೆಯಿಂದ ಎಚ್ಚೆತ್ತಿರುವ ಒಕ್ಕೂಟ ಸರ್ಕಾರ ಈಗ ಕನ್ನಡವನ್ನು ಆನ್‌ಲೈನ್‌ ತರಗತಿಯಲ್ಲಿ ಸೇರಿಸಿದೆ.

ಪಾರ್ಲಿಮೆಂಟರಿ ರಿಸರ್ಚ್ ಆ್ಯಂಡ್ ಟ್ರೈನಿಂಗ್ ಇನ್ಸ್‌ಟಿಟ್ಯೂಟ್ ಫಾರ್ ಡೆಮಾಕ್ರಸಿ’ ಸಂಸ್ಥೆಯು ಇದೇ 22ರಿಂದ ಭಾಷೆಗಳ ಕಲಿಕಾ ಆನ್‌ಲೈನ್‌ ತರಬೇತಿ ಆರಂಭ ಮಾಡುತ್ತಿದ್ದು, ಇದರಲ್ಲಿ ವಿವಿಧ ರಾಜ್ಯಗಳ ಸಂಸದರು, ಶಾಸಕರು, ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಫ್ರೆಂಚ್, ಜರ್ಮನ್, ಜಪಾನೀಸ್, ಪೊರ್ಚುಗೀಸ್, ರಷ್ಯನ್‌, ಸ್ಪ್ಯಾನಿಷ್ ಭಾಷೆಯನ್ನು ಇದರಲ್ಲಿ ಸೇರಿಸಲಾಗಿತ್ತು. ಆದರೆ ಕನ್ನಡವನ್ನು ಕಡೆಗಣಿಸಲಾಗಿತ್ತು.

ಈ ಕುರಿತು ರಾಜ್ಯಸಭಾ ಸದಸ್ಯರಾದ ಜಿ.ಸಿ. ಚಂದ್ರಶೇಖರ್‌, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ಪತ್ರ ಬರೆದು ಆನ್‌ಲೈನ್‌ ತರಗತಿಗಳಲ್ಲಿ ಕನ್ನಡವನ್ನು ಪರಿಗಣಿಸುವಂತೆ ಮನವಿ ಮಾಡಿದ್ದರು. ಇದರಂತೆ ಜುಲೈ 5 ರಿಂದ ಕನ್ನಡವನ್ನು ಪರಿಗಣಿಸುವುದಾಗಿ ವೆಂಕಯ್ಯ ನಾಯ್ಡು ಆದೇಶಿಸಿದ್ದಾರೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ: ಲೋಕಸಭಾ ಸಚಿವಾಲಯದಿಂದ ಕನ್ನಡ ಕಡೆಗಣನೆ: ಬಿಜೆಪಿ ಮೂಲಭೂತವಾಗಿ ಕನ್ನಡ ವಿರೋಧಿ ಎಂದ ಕುಮಾರಸ್ವಾಮಿ

ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಕಾಂಗ್ರೆಸ್ ರಾಜ್ಯಸಭಾ ಸದಸ್ಯರಾದ ಜಿ.ಸಿ. ಚಂದ್ರಶೇಖರ್‌, ’ಕನ್ನಡ ಭಾಷೆಯನ್ನು ಆನ್‌ಲೈನ್ ತರಗತಿಯಲ್ಲಿ ಪರಿಗಣಿಸುವಂತೆ ಮಾಡಿದ್ದ ಮನವಿಯನ್ನು ಪರಿಗಣಿಸಿದ್ದಾರೆ. ಧನ್ಯವಾದಗಳು ಎಂದು ತಿಳಿಸಿದ್ದಾರೆ.

ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, “ಕನ್ನಡಿಗರ ಎಚ್ಚರಿಕೆಗೆ ಮಣಿದ‘ಪಾರ್ಲಿಮೆಂಟರಿ ರಿಸರ್ಚ್ ಆ್ಯಂಡ್ ಟ್ರೈನಿಂಗ್ ಇನ್ಸ್‌ಟಿಟ್ಯೂಟ್ ಫಾರ್ ಡೆಮಾಕ್ರಸಿ’ (ಪ್ರೈಡ್) ಸಂಸ್ಥೆ ಭಾಷೆ ಕಲಿಕೆ ತರಬೇತಿಯಲ್ಲಿ ಕನ್ನಡವನ್ನೂ ಸೇರಿಸಿದೆ. ಭಾಷಾಭಿಮಾನದ ಮೂಲಕ ಎಚ್ಚರಿಕೆ ರವಾನಿಸಿದ ಸ್ವಾಭಿಮಾನಿ ಕನ್ನಡಿಗರನ್ನು ನಾನು ಅಭಿನಂದಿಸುತ್ತೇನೆ. ಕನ್ನಡಕ್ಕಾಗಿ ನಾವೆಲ್ಲರೂ ಹೀಗೆ ಒಗ್ಗಟ್ಟಾಗಿರೋಣ” ಎಂದು ಟ್ವೀಟ್ ಮಾಡಿದ್ದಾರೆ.


ಇದನ್ನೂ ಓದಿ: ಕೊರೊನಾ 3ನೇ ಅಲೆಯಲ್ಲಿ ರಾಜ್ಯದಲ್ಲಿ 3.4 ಲಕ್ಷ ಮಕ್ಕಳಿಗೆ ಸೋಂಕು ಸಾಧ್ಯತೆ: ತಜ್ಞರ ಸಮಿತಿ

LEAVE A REPLY

Please enter your comment!
Please enter your name here