ಕಾಂಗ್ರೆಸ್ ಬಗ್ಗೆ ಅಪಪ್ರಚಾರ ನಡೆಸಿರುವ ಆರೋಪದಲ್ಲಿ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಬೆಂಗಳೂರಿನ ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾಂಗ್ರೆಸ್ ಪಕ್ಷದ ವಿರುದ್ಧ ಸೂಲಿಬೆಲೆ ಸುಳ್ಳು ಆರೋಪ ಮಾಡಿದ್ದಾರೆ ಎಂದು ಆರೋಪಿಸಿ ಹನುಮಂತನಗರ ಬ್ಲಾಕ್ ಕಾಂಗ್ರೆಸ್ ಮುಖಂಡ ತೇಜೇಶ್ ಕುಮಾರ್ ದೂರು ನೀಡಿದ್ದಾರೆ.
ಚಕ್ರವರ್ತಿ ಸೂಲಿಬೆಲೆ ಜೂ. 7 ರಂದು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಲೇಖನವೊಂದನ್ನು ಹಂಚಿಕೊಂಡಿದ್ದರು. ’ಜನ ದಡ್ಡರಲ್ಲ: ಎಲ್ಲವನ್ನೂ ಗಮನಿಸುತ್ತಿದ್ದಾರೆ’ ಎಂದು ಶೀರ್ಷಿಕೆ ಅಡಿಯಲ್ಲಿ ಪ್ರಕಟವಾಗಿದ್ದ ಬರಹದಲ್ಲಿ, “ಮೋದಿಯನ್ನು ವಿರೋಧಿಸುವ ಭರದಲ್ಲಿ ಕಾಂಗ್ರೆಸ್ಸು ಆಕ್ಸಿಜೆನ್ ಜನರಿಗೆ ಸಿಗದಂತೆ ದಾಸ್ತಾನು ಮಾಡಿಕೊಂಡಿತು. ವ್ಯಾಕ್ಸಿನ್‌ಗಳನ್ನು ಜನರಿಗೆ ನೀಡದೇ ಕಸದಬುಟ್ಟಿಗೆಸೆಯಿತು. ಆಸ್ಪತ್ರೆಗಳಲ್ಲಿ ಬೆಡ್‌ಗಳನ್ನು ಬ್ಲಾಕ್ ಮಾಡಿಕೊಂಡು ಜನ ಸಾಯುವಂತೆ ನೋಡಿಕೊಂಡಿತು. ಕೊನೆಗೆ ಅಮಾಯಕರ ಸಾವನ್ನು ವೈಭವೀಕರಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಾನ ಹರಾಜು ಹಾಕಿತು. ರಾಷ್ಟ್ರೀಯ ಪಕ್ಷವೊಂದು ನಾಲ್ಕು ಕಾಸಿಗೆ ಈ ಹಂತಕ್ಕೆ ಇಳಿಯಬಹುದೆಂದು ಯಾರೂ ಊಹಿಸಿರಲಿಲ್ಲ” ಎಂದು ಬರೆದಿದ್ದಾರೆ.
ಹೀಗೆ ಸುಖಾ ಸುಮ್ಮನೆ ರಾಷ್ಟ್ರೀಯ ಪಕ್ಷವೊಂದರ ಬಗ್ಗೆ ಸುಳ್ಳು ಆರೋಪಗಳನ್ನು ಮಾಡುತ್ತಾ, ಪಕ್ಷದ ಬಗ್ಗೆ ಅಪ್ರಚಾರ ಮಾಡಲಾಗುತ್ತಿದೆ ಎಂದು ಹನುಮಂತನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ತೇಜೇಶ್ ಕುಮಾರ್ ದೂರು ನೀಡಿದ್ದಾರೆ.
ಇದನ್ನೂ ಓದಿ: ಇಸ್ಲಾಂ ಮತ್ತು ಅಂಬೇಡ್ಕರ್ ಬಗೆಗಿನ ಸುಳ್ಳುಗಳು; ಮಹಾ ಮಾನವತಾವಾದಿಗೆ ‘ಸೂಲಿಬೆಲೆ’ ಮಾಡಿದ ಅವಮಾನ!
ಈ ಕುರಿತು ನಾನುಗೌರಿ.ಕಾಂಗೆ ಪ್ರತಿಕ್ರಿಯೆ ನೀಡಿರುವ ತೇಜೇಶ್ ಕುಮಾರ್, ’ಚಕ್ರವರ್ತಿ ಸೂಲಿಬೆಲೆ ಸುಳ್ಳು ಹೇಳುತ್ತಿರುವುದು ಇದು ಮೊದಲನೇ ಬಾರಿಯಲ್ಲ. 7 ವರ್ಷಗಳಿಂದ ಸುಳ್ಳು ಹೇಳಿಕೊಂಡು ಬರುತ್ತಿದ್ದಾರೆ. ಚಿನ್ನದ ರಸ್ತೆಯಿಂದ ಹಿಡಿದು ಮೋದಿಯವರು ಲ್ಯಾಪ್‌ಟಾಪ್ ಮುಂದೆ ಕುಳಿತು ಕೊರೊನಾ ಮಾಹಿತಿ ಪಡೆಯುತ್ತಿದ್ದಾರೆ. ಡಾಲರ್ ಬೆಲೆ, ಪೆಟ್ರೋಲೆ ಬೆಲೆ, ಬುಲೆಟ್ ಟ್ರೈನ್‌ನಗಳ ಬಗ್ಗೆ ಸುಳ್ಳಿನ ಸರಮಾಲೆಗಳನ್ನು ಪೋಣಿಸುತ್ತಲೇ ಇದ್ದಾರೆ. ಪರೋಕ್ಷವಾಗಿ ಬಿಜೆಪಿಗೆ ಅನುಕೂಲ ಮಾಡುತ್ತಿದ್ದು, ಕಾಂಗ್ರೆಸ್ ಬಗ್ಗೆ ಅಪಪ್ರಚಾರ ಮಾಡುತ್ತಲೆ ಇದ್ದಾರೆ. ಹೀಗೆ ಜೂನ್ 7 ರಂದು ತಮ್ಮ ಫೇಸ್‌ಬುಕ್‌ನಲ್ಲಿ ಕಾಂಗ್ರೆಸ್ ಬಗ್ಗೆ ತುಂಬಾ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಜೊತೆಗೆ ವಿಜಯವಾಣಿಯಲ್ಲಿ ನಮ್ಮ ರೈತರು ಮತ್ತು ಮುಸಲ್ಮಾನ ಬಂಧುಗಳ ಬಗ್ಗೆಯೂ ಕೆಟ್ಟದಾಗಿ ಬರೆದಿದ್ದಾರೆ. ಹಾಗಾಗಿ ಈ ಆರೋಪಗಳಿಗೆ ಸಾಕ್ಷಿ, ದಾಖಲಾತಿ ನೀಡುವಂತೆ ಕೇಳಿದ್ದೇವೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುವಂತೆ ಮತ್ತು ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದೇವೆ. ನಾವು ಇಲ್ಲಿಗೆ ಇದನ್ನು ಬಿಡುವುದಿಲ್ಲ. ಕಾನೂನು ಕ್ರಮ ಜರುಗಿಸುವವರೆಗು ಹೋರಾಟ ಮುಂದುವರೆಸುತ್ತೇವೆ.” ಎಂದಿದ್ದಾರೆ.
’ಇರುವ ಸತ್ಯವನ್ನು ಬರೆಯಲಿ. ತಪ್ಪುನ್ನು ತೋರಿಸಿದರೇ ತಪ್ಪು ತಿದ್ದಿಕೊಳ್ಳುತ್ತೇವೆ. ಆದರೆ ನಡೆಯದೇ ಇರುವ ವಿಷಯದ ಬಗ್ಗೆ, ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ರಾಷ್ಟ್ರೀಯ ಪಕ್ಷದ ಬಗ್ಗೆ ಸುಳ್ಳು ಹೇಳುವುದು, ಅಪಪ್ರಚಾರ ಮಾಡುವುದು ಎಷ್ಟು ಸರಿ? ಇಷ್ಟು ದಿನ ನಾವು ಇದನ್ನು ಸುಮ್ಮನೆ ಕಡೆಗಣಿಸಿದ್ದೇವೆ. ಆದರೆ, ಈಗಲೂ ಇಂತಹದ್ದೇ ಸುಳ್ಳುಗಳನ್ನು ಹೇಳುತ್ತಿದ್ದಾರೆ. ಹೀಗಾಗಿ ನಾವು ಇದನ್ನು ಸುಮ್ಮನೆ ಬಿಡುವುದಿಲ್ಲ’ ಎಂದು ತೇಜೇಶ್ ಕುಮಾರ್ ಹೇಳಿದ್ದಾರೆ.
“ಬೆಡ್ ಬ್ಲಾಕಿಂಗ್ ದಂಧೆ ಬಗ್ಗೆ ಕೂಡ ಕಾಂಗ್ರೆಸ್ ಅನ್ನು ಅನುಮಾನಿಸಿದ್ದರು. ಆದರೆ, ಕೊನೆಗೆ ಯಾರು ಸಿಕ್ಕಿಹಾಕಿಕೊಂಡಿದ್ದು, ಯಾರು ಯಾರು ಅದರಲ್ಲಿ ನಂಟು ಹೊಂದಿದ್ದರು ಎಂಬುದು ಎಲ್ಲರಿಗೂ ಗೊತ್ತಾಯಿತು. ಚಕ್ರವರ್ತಿ ಸೂಲಿಬೆಲೆಯವರು ಸುಳ್ಳಿನ ಸರಮಾಲೆಯಲ್ಲಿ ಜನರಿಗೆ ಮಂಕು ಬೂದಿ ಎರಚುತ್ತಿದ್ದಾರೆ. ಹಾಗಾಗಿ ಜನರಿಗೆ ಈ ಸುಳ್ಳುಗಳ ಬಗ್ಗೆ ಅರಿವು ಮೂಡಬೇಕು. ಅವರ ವಿರುದ್ಧ ಬರೀ ದೂರು ನೀಡಿ ಸುಮ್ಮನಾಗುವುದಿಲ್ಲ. ಜನರಿಗೆ ಈ ಬಗ್ಗೆ ತಿಳಿಸುವ ಪ್ರಯತ್ನ ಮಾಡುತ್ತೇವೆ” ಎಂದು ತೇಜೇಶ್ ಕುಮಾರ್ ನಾನುಗೌರಿ.ಕಾಂಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಕೊರೊನಾ 3ನೇ ಅಲೆಯಲ್ಲಿ ರಾಜ್ಯದಲ್ಲಿ 3.4 ಲಕ್ಷ ಮಕ್ಕಳಿಗೆ ಸೋಂಕು ಸಾಧ್ಯತೆ: ತಜ್ಞರ ಸಮಿತಿ
ಇದೊಂದು ಒಳ್ಳೆಯ ಕೆಲಸ. ಇವನು ಮತ್ತು ಇವನಂತಹ ಅವಿವೇಕಿಗಳಿಗೆ ಕಾನೂನಿನ ವ್ಯಾಪ್ತಿಯಲ್ಲಿಯೇ ಬುದ್ದಿ ಕಲಿಸಬೇಕು.