ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಹೊಗಳಿದ ಸ್ಪಲ್ಪ ಸಮಯದಲ್ಲೇ ಗೋವಾ ಮಾಜಿ ಮುಖ್ಯಮಂತ್ರಿ, ಹಿರಿಯ ಕಾಂಗ್ರೆಸ್ ನಾಯಕ ಲುಯಿಜಿನೊ ಫೆಲೇರೊ ಸೋಮವಾರ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಲುಯಿಜಿನೊ ಫೆಲೇರೊ, ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್‌ಗೆ ಸೇರುವ ಸೂಚನೆಗಳಿವೆ. ಅಧಿಕೃತವಾಗಿ ಘೋಷಣೆಯೊಂದೆ ಬಾಕಿಯಿದೆ. ರಾಜೀನಾಮೆ ನೀಡುವ ಮೊದಲು, ಬಿಜೆಪಿಗೆ ಕಠಿಣ ಪೈಪೋಟೆ ನೀಡುವ ಏಕೈಕ ಪ್ರತಿಸ್ಪರ್ಧಿ ಮಮತಾ ಬ್ಯಾನರ್ಜಿ ಎಂದು ಹೊಗಳಿದ್ದರು.
ಮುಂದಿನ ವರ್ಷ ಗೋವಾ ವಿಧಾನಸಭಾ ಚುನಾವಣೆ ನಡೆಯಲಿದ್ದು, ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ತೃಣಮೂಲ ಕಾಂಗ್ರೆಸ್ ಘೋಷಿಸಿದೆ. ಮುಖ್ಯಮಂತ್ರಿ ಅಭ್ಯರ್ಥಿಯನ್ನು ಅದಷ್ಟು ಬೇಗ ಘೋಷಿಸಲಾಗುವುದು ಎಂದು ಟಿಎಂಸಿ ತಿಳಿಸಿತ್ತು. ಇದರ ಬೆನ್ನಲ್ಲೇ ಲುಯಿಜಿನೊ ಫೆಲೇರೊ ರಾಜೀನಾಮೆ ನೀಡಿರುವುದು ಅವರು ಟಿಎಂಸಿ ಸೇರುತ್ತಾರೆ ಎಂಬ ವದಂತಿಗೆ ಪುಷ್ಠಿ ನೀಡಿದೆ.
ಇದನ್ನೂ ಓದಿ: ಮುಖ್ಯಮಂತ್ರಿಯವರೇ, ರೈತ ಹೋರಾಟ ಪ್ರಾಯೋಜಿತವಾದರೆ ತಪ್ಪೇನಿದೆ?
“ನಾನು ಹಲವು ಜನರನ್ನು ಭೇಟಿಯಾಗಿದ್ದೇನೆ ಅವರೆಲ್ಲರೂ ನಾನು 40 ವರ್ಷದ ಕಾಂಗ್ರೆಸ್ಸಿಗ ಎಂದು ಹೇಳುತ್ತಾರೆ. ನಾನು ಮುಂದೆಯೂ ಕಾಂಗ್ರೆಸ್ ಕುಟುಂಬದ ಕಾಂಗ್ರೆಸ್ಸಿಗನಾಗಿ ಮುಂದುವರಿಯುತ್ತೇನೆ. ಎಲ್ಲಾ ನಾಲ್ಕು ಕಾಂಗ್ರೆಸ್ ಪಕ್ಷಗಳಲ್ಲಿ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ಮೋದಿಗೆ ಕಠಿಣ ಪೈಪೋಟಿ ನೀಡಿದ್ದಾರೆ. ಪ್ರಧಾನಿ ಮೋದಿ ಬಂಗಾಳದಲ್ಲಿ 200 ಸಭೆಗಳನ್ನು ನಡೆಸಿದ್ದರು. ಅಮಿತ್ ಶಾ 250 ಸಭೆಗಳನ್ನು ನಡೆಸಿದ್ದರು. ನಂತರ ಇಡಿ, ಸಿಬಿಐ ಕೂಡ ಅವರಿಗೆ ಸಹಾಯಕವಾಗಿದ್ದವು. ಆದರೆ ಮಮತಾ ಬ್ಯಾನರ್ಜಿ ಅವರ ಸೂತ್ರ ಗೆದ್ದಿದೆ” ಎಂದು ಮಾಜಿ ಮುಖ್ಯಮಂತ್ರಿ ಹೇಳಿದ್ದಾರೆ.
ಲುಯಿಜಿನೊ ಫಲೇರೋ ಅವರು 2019 ರ ರಾಷ್ಟ್ರೀಯ ಚುನಾವಣೆಗೆ ತ್ರಿಪುರಾದ ಕಾಂಗ್ರೆಸ್ ಉಸ್ತುವಾರಿಯಾಗಿದ್ದರು. ಇವರು ಟಿಎಂಸಿ ಸೇರುವುದರಿಂದ ಈಶಾನ್ಯ ರಾಜ್ಯದಲ್ಲಿ ತೃಣಮೂಲ ಕಾಂಗ್ರೆಸ್ ತನ್ನ ಹೆಜ್ಜೆಯಿಡಲು ಮತ್ತು ಬಿಜೆಪಿಯನ್ನು ಹಿಂದಿಕ್ಕಲು ಸಹಾಯಕವಾಗುತ್ತದೆ ಎಂಬ ಮಾತುಗಳು ಕೇಳಿ ಬಂದಿವೆ.
ಕಾಂಗ್ರೆಸ್ ಹಿರಿಯ ನಾಯಕಿಯಾಗಿದ್ದ ಮಾಜಿ ಸಂಸದೆ ಸುಶ್ಮಿತಾ ದೇವ್ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಇತ್ತಿಚೆಗೆ ಟಿಎಂಸಿ ಸೇಪ್ಡೆಯಾಗಿದ್ದರು. ಇದಾದ ಬಳಿಕ ಕಾಂಗ್ರೆಸ್‌ಗೆ ಇದು ಎರಡನೇ ದೊಡ್ಡ ಹೊಡೆತ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಅಧಿಕಾರಕ್ಕೆ ಬಂದಾಗಿನಿಂದ ಬೇರೆ ಪಕ್ಷಗಳಿಂದ ಟಿಎಂಸಿಗೆ ಸೇರ್ಪಡೆಯಾಗುವವರ ಸಂಖ್ಯೆ ಹೆಚ್ಚಾಗಿದೆ.
ಇದನ್ನೂ ಓದಿ: ಭಾರತವನ್ನು ತಾಲಿಬಾನ್, ಪಾಕಿಸ್ತಾನ ಆಗಲು ಬಿಡುವುದಿಲ್ಲ- ಮಮತಾ ಬ್ಯಾನರ್ಜಿ


