ಕೇಂದ್ರ ಸರ್ಕಾರದ ವಿವಾದಾತ್ಮಕ ಹೊಸ ಕೃಷಿ ಕಾನೂನುಗಳ ವಿರುದ್ಧ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗಳು ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಎಂಟನೇ ದಿನಕ್ಕೆ ಕಾಲಿಟ್ಟಿದೆ. ಈ ಹಿನ್ನೆಲೆ ಕೇಂದ್ರ ಸರ್ಕಾರವು ಇಂದು ರೈತರ ಪ್ರತಿನಿಧಿಗಳ ಜೊತೆಗೆ ನಾಲ್ಕನೇ ಸುತ್ತಿನ ಮಾತುಕತೆ ನಡೆಸಲಿದೆ.
ಸಂಸತ್ತಿನ ತುರ್ತು ಅಧಿವೇಶನವನ್ನು ಕರೆಯಲು ಮತ್ತು ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂಪಡೆಯಲು ಇಂದಿನ ಮಾತುಕತೆ ಕೇಂದ್ರ ಸರ್ಕಾರಕ್ಕೆ “ಕೊನೆಯ ಅವಕಾಶ” ಎಂದು ಆಕ್ರೋಶಗೊಂಡ ರೈತರು ಬುಧವಾರ ತಿಳಿಸಿದ್ದರು.
ಕೇಂದ್ರ ಸರ್ಕಾರ ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೇ, ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸದಿದ್ದರೇ ದೆಹಲಿಯ ಇತರ ಪ್ರಮುಖ ರಸ್ತೆಗಳನ್ನು ಬಂದ್ ಮಾಡುವುದಾಗಿ ರೈತ ಮುಖಂಡರು ಎಚ್ಚರಿಕೆ ನೀಡಿದ್ದರು.
ಜೊತೆಗೆ, ಮೊದಲ ಸುತ್ತಿನ ಮಾತುಕತೆ ವಿಫಲವಾದಾಗ, ಪ್ರತಿಭಟನೆಗಳು ಮತ್ತಷ್ಟು ತಿಂಗಳುಗಳು ಮುಂದುವರೆಯಲಿದ್ದು, ಇನ್ನಷ್ಟು ತೀವ್ರಗೊಳ್ಳಲಿವೆ ಎಂದು 32 ರೈತ ಸಂಘಟನೆಗಳು ಹೇಳಿಕೆ ನೀಡಿದ್ದವು. ದೇಶಾದ್ಯಂತ ಮತ್ತಷ್ಟು ರೈತ ಸಂಘಟನೆಗಳು ಈಗಾಗಲೇ ದೆಹಲಿಗೆ ಹೋಗಿ ಪ್ರತಿಭಟನೆಯಲ್ಲಿ ಭಾಗವಹಿಸುವುದಾಗಿ ತಿಳಿಸಿವೆ.
ಇದನ್ನೂ ಓದಿ: ಅನ್ನದ ಋಣ ತೀರಿಸಲು ಸುವರ್ಣಾವಕಾಶ- ರೈತ ಹೋರಾಟವನ್ನು ಹೀಗೂ ಬೆಂಬಲಿಸಬಹುದು
“ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ನಿರ್ಧಾರ ತೆಗೆದುಕೊಳ್ಳಲು ಸರ್ಕಾರಕ್ಕೆ ಡಿಸೆಂಬರ್ 3 ಕೊನೆಯ ಅವಕಾಶವಾಗಿದೆ. ಇಲ್ಲದಿದ್ದರೆ ಈ ಪ್ರತಿಭಟನೆ ಮತ್ತಷ್ಟು ತೀವ್ರಗೊಳ್ಳುತ್ತದೆ. ಇದರಿಂದ ಕೇಂದ್ರ ಸರ್ಕಾರ ಕೆಳಗಿಯುತ್ತದೆ” ಎಂದು ಲೋಕ ಸಂಘರ್ಷ ಮೋರ್ಚಾದ ಪ್ರತಿಭಾ ಶಿಂಧೆ ತಿಳಿಸಿದ್ದರು.
ಇಂದು, ಮಹಾರಾಷ್ಟ್ರದ ಪ್ರತಿ ಜಿಲ್ಲೆಗಳಲ್ಲಿ ಮತ್ತು ಡಿಸೆಂಬರ್ 5 ರಂದು ಗುಜರಾತ್‌ನಲ್ಲಿ ರೈತರು ಸರ್ಕಾರದ ಪ್ರತಿನಿಧಿಗಳ ಪ್ರತಿಕೃತಿಗಳನ್ನು ದಹಿಸಲಿದ್ದಾರೆ ಎಂದು ಎಚ್ಚರಿಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತು ಅವರ ಕ್ಯಾಬಿನೆಟ್ ಸಹೋದ್ಯೋಗಿ ಪಿಯೂಷ್ ಗೋಯಲ್ ಅವರನ್ನು ಬುಧವಾರ ತಮ್ಮ ಮನೆಯಲ್ಲಿ ಭೇಟಿಯಾಗಿ ರೈತ ಮುಖಂಡರ ಜೊತೆ ನಡೆಸುವ ಸಭೆ ಬಗ್ಗೆ ಚರ್ಚಿಸಿದ್ದಾರೆ.
ಪ್ರತಿಭಟನಾ ನಿರತ ರೈತರು ಇಂದಿನ ಸಭೆಯನ್ನು ಕೊನೆಯ ಅವಕಾಶ ಎಂದಿರುವ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.


