ಕೊರೊನಾ ಪ್ರಕರಣಗಳು ಮತ್ತು ಸಾವುಗಳು ದೇಶಾದ್ಯಂತ ಹೆಚ್ಚಾಗುತ್ತಿರುವುದರಿಂದ ಬಾಂಗ್ಲಾದೇಶ ಸರ್ಕಾರ ಸೋಮವಾರದಿಂದ ಒಂದು ವಾರದವರೆಗೆ ರಾಷ್ಟ್ರವ್ಯಾಪಿ ಲಾಕ್‌ಡೌನ್ ವಿಧಿಸಲು ನಿರ್ಧರಿಸಿದೆ. ಶನಿವಾರ ಡಾಕಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರಸ್ತೆ ಸಾರಿಗೆ ಸಚಿವ ಒಬೈದುಲ್ ಖಾದರ್ ಈ ಘೋಷಣೆಯನ್ನು ಮಾಡಿದ್ದಾರೆ ಎಂದು ಡಾಕಾ ಟ್ರಿಬ್ಯೂನ್ ಪತ್ರಿಕೆ ವರದಿ ಮಾಡಿದೆ.
ಬಾಂಗ್ಲಾದೇಶ ಶುಕ್ರವಾರ 6,830 ಹೊಸ ಕೊರೊನಾ ಪ್ರಕರಣಗಳನ್ನು ದಾಖಲಿಸಿದೆ. ಇದು ದೇಶದಲ್ಲಿ ದಾಖಲಾದ ಒಂದು ದಿನದ ಅತಿ ಹೆಚ್ಚು ಏರಿಕೆಯಾಗಿದೆ. ದೇಶದಲ್ಲಿ ಇದುವರೆಗೂ ಒಟ್ಟು 624,594 ಜನರು ಸೋಂಕಿಗೆ ಒಳಗಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 50 ಜನರು ಸೋಕಿನಿಂದಾಗಿ ಮೃತಪಟ್ಟಿದ್ದು, ದೇಶದ ಒಟ್ಟು ಸಾವಿನ ಸಂಖ್ಯೆ 9,155 ಕ್ಕೆ ತಲುಪಿದೆ ಎಂದು ಸರ್ಕಾರ ಬಿಡುಗಡೆ ಮಾಡಿದ ಅಂಕಿ ಅಂಶಗಳು ತಿಳಿಸಿವೆ.
ಇದನ್ನೂ ಓದಿ: ಸಿಡಿ ಪ್ರಕರಣ: ಸಂತ್ರಸ್ತೆ ಪರ ವಕೀಲ ಜಗದೀಶ್ ವಿರುದ್ಧವೇ ದೂರು ನೀಡಿದ ಎಸ್‌ಐಟಿ!
ವೈರಸ್ ಹರಡುವುದನ್ನು ತಡೆಗಟ್ಟುವ ಪ್ರಯತ್ನದಲ್ಲಿ, ದೇಶಾದ್ಯಂತ ಕೊರೊನಾ ವೈರಸ್ ಪ್ರಕರಣಗಳು ಮತ್ತು ಸಾವುಗಳು ಹೆಚ್ಚಾಗುತ್ತಿರುವುದರಿಂದ ಸೋಮವಾರದಿಂದ ಏಳು ದಿನಗಳು ಲಾಕ್‌ಡೌನ್ ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ ಎಂದು ಆಡಳಿತಾರೂಢ ಅವಾಮಿ ಲೀಗ್‌ನ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಖಾದರ್ ಹೇಳಿದ್ದಾರೆ.
ಆದಾಗ್ಯೂ, ಅತ್ಯಗತ್ಯ ಮತ್ತು ತುರ್ತು ಸೇವೆಗಳಿಗೆ ಈ ಆದೇಶವು ಅನ್ವಯಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಈ ಅವಧಿಯಲ್ಲಿ ಕಾರ್ಖಾನೆಗಳು ತೆರೆದಿರುತ್ತವೆ ಮತ್ತು ನೈರ್ಮಲ್ಯ ನಿಯಮಗಳನ್ನು ಅನುಸರಿಸುವ ಮೂಲಕ ಕಾರ್ಮಿಕರು ಪಾಳಿಯಲ್ಲಿ ಕೆಲಸ ಮಾಡಬಹುದಾಗಿದೆ.
“ಈ ಲಾಕ್‌ಡೌನ್ ಸಮಯದಲ್ಲಿ ಪ್ರತಿಯೊಂದು ಕಚೇರಿ ಮತ್ತು ನ್ಯಾಯಾಲಯವನ್ನು ಮುಚ್ಚಲಾಗುವುದು ಆದರೆ ಕೈಗಾರಿಕೆಗಳು ಮತ್ತು ಕಾರ್ಖಾನೆ ತಮ್ಮ ಕಾರ್ಯಾಚರಣೆಯನ್ನು ಮುಂದುವರಿಸುತ್ತವೆ” ಎಂದು ರಾಜ್ಯ ಸಾರ್ವಜನಿಕ ಆಡಳಿತ ಸಚಿವ ಫರ್ಹಾದ್ ಹುಸೇನ್ ಅವರು ಡಾಕಾ ಟ್ರಿಬ್ಯೂನ್‌ಗೆ ಹೇಳಿದ್ದಾರೆ.
ಇದನ್ನೂ ಓದಿ: ಗಂಡಾಳಿಕೆಯನ್ನು ಬಿಂಬಿಸುವ ಕೋರ್ಟುಗಳಿಗೆ ’ಸುಪ್ರೀಮ್’ ಕಡಿವಾಣ


