ಜಿಎಸ್‌ಟಿ ಅಧಿಕಾರಿಗಳು ಕೈಗೊಂಡ ಮಹತ್ವದ ಕಾರ್ಯಚರಣೆಯಲ್ಲಿ 21,791 ನಕಲಿ ಜಿಎಸ್‌ಟಿ ನೋಂದಣಿಗಳು ಪತ್ತೆಯಾಗಿದೆ. ಇದರಿಂದ ಸುಮಾರು 24,000 ಕೋಟಿ ರೂ.ಗೂ ಅಧಿಕ ತೆರಿಗೆ ವಂಚನೆ ಬಯಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಸಚಿವರು, ಪ್ರಾಮಾಣಿಕ ತೆರಿಗೆದಾರರ ಹಿತಾಸಕ್ತಿ ಕಾಪಾಡಲು ಮತ್ತು ತೆರಿಗೆದಾರರಿಗೆ ತೀವ್ರ ತೊಂದರೆಯಾಗದಂತೆ ಕಾಲಕಾಲಕ್ಕೆ ಸೂಚನೆಗಳನ್ನು ನೀಡಲಾಗಿದ್ದು, ಅಧಿಕಾರಿಗಳು ಈ ಬಗ್ಗೆ ಅಧಿಕಾರ ಚಲಾಯಿಸುವಾಗ ಎಚ್ಚರಿಕೆಯಿಂದ ಮತ್ತು ಕಾಳಜಿ ವಹಿಸುವಂತೆ ಸೂಚಿಸಿದ್ದಾರೆ.
ಜಿಎಸ್‌ಟಿ ನೋಂದಣಿ ಹೊಂದಿರುವ ಒಟ್ಟು 21,791 ಘಟಕಗಳು ಅಸ್ತಿತ್ವದಲ್ಲಿಲ್ಲ ಎಂದು ಪತ್ತೆ ಮಾಡಲಾಗಿದೆ. ಇದರಲ್ಲಿ ರಾಜ್ಯ ತೆರಿಗೆ ವ್ಯಾಪ್ತಿಗೆ ಸಂಬಂಧಿಸಿದ 11,392 ಘಟಕಗಳು ಮತ್ತು ಸಿಬಿಐಸಿ ಅಧಿಕಾರ ವ್ಯಾಪ್ತಿಗೆ ಸಂಬಂಧಿಸಿದ 10,399 ಘಟಕಗಳು ಸೇರಿದೆ. ಇದರಿಂದ 24,010 ಕೋಟಿ ರೂ. ವಂಚನೆ ನಡೆದಿರುವುದು ಪತ್ತೆಯಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ) ನಡೆಸಿದ ನಕಲಿ ಜಿಎಸ್‌ಟಿ ನೋಂದಣಿಗಳ ವಿರುದ್ಧ ವಿಶೇಷ ಅಭಿಯಾನದ ವೇಳೆ ನಕಲಿ ನೋಂದಣಿ ಹೊಂದಿರುವ ಸಂಸ್ಥೆಗಳ ಸಂಖ್ಯೆ ಮತ್ತು ಪತ್ತೆಯಾದ ಒಟ್ಟು ಮೊತ್ತದ ಕುರಿತ ಪ್ರಶ್ನೆಗೆ ಸಚಿವರು ಉತ್ತರಿಸುತ್ತಾ ಈ ಅಂಕಿ ಅಂಶವನ್ನು ಬಹಿರಂಗಪಡಿಸಿದ್ದಾರೆ. ಮೇ 16 ರಿಂದ ಜು.15ರವೆರೆಗೆ ಸಿಬಿಐಸಿ ಈ ಕುರಿತು ವಿಶೇಷ ಕಾರ್ಯಾಚರಣೆ ನಡೆಸಿತ್ತು.
ಇ–ವಾಣಿಜ್ಯ ಸಂಸ್ಥೆಗಳಿಗೆ ಜಿಎಸ್‌ಟಿ ನೋಂದಣಿಗೆ ಸರಳೀಕೃತ ವಿಧಾನವನ್ನು ಈಗಾಗಲೇ ಅಧಿಸೂಚನೆಯಲ್ಲಿ ಪ್ರಕಟಿಸಲಾಗಿದೆ. ಇದರ ಅಡಿಯಲ್ಲಿ, ಇ–ವಾಣಿಜ್ಯ ಸಂಸ್ಥೆಗಳು ನೋಂದಣಿಗೆ ಅರ್ಜಿ ಸಲ್ಲಿಸಿದಾಗ, ಅರ್ಜಿ ಸಲ್ಲಿಕೆಯಾದ ರಾಜ್ಯದಲ್ಲಿ ಆ ಸಂಸ್ಥೆಯು ಭೌತಿಕವಾಗಿ ಅಸ್ತಿತ್ವ ಹೊಂದಿಲ್ಲದಿದ್ದರೆ, ತನ್ನ ಭೌತಿಕ ಅಸ್ತಿತ್ವ ಇರುವ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದ ವಿಳಾಸ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವರು ಇದೇ ವೇಳೆ ಹೇಳಿದ್ದಾರೆ.
ಇದಲ್ಲದೆ ನೋಂದಣಿ ಪ್ರಕ್ರಿಯೆಯನ್ನು ಬಲಪಡಿಸಲು ಜಿಎಸ್‌ಟಿ ನಿಯಮಗಳಲ್ಲಿ ತಿದ್ದುಪಡಿಗಳನ್ನು ಮಾಡಲಾಗಿದೆ. ನೋಂದಣಿದಾರರಿಗೆ ಬಯೋಮೆಟ್ರಿಕ್ ಆಧಾರಿತ ಆಧಾರ್ ದೃಢೀಕರಣ, ದಾಖಲೆಗಳ ಮೂಲ ಪ್ರತಿಯ ಪರಿಶೀಲನೆಯನ್ನು ಕೂಡ ಮಾಡಲಾಗುತ್ತದೆ. ನೋಂದಾಯಿತ ವ್ಯಕ್ತಿಯ ಬ್ಯಾಂಕ್ ಖಾತೆ, ಹೆಸರು ಮತ್ತು PAN ನ ವಿವರಗಳನ್ನು ನೋಂದಣಿಯ 30 ದಿನಗಳ ಒಳಗೆ ಒದಗಿಸಬೇಕಾಗುತ್ತದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ.
ಇದನ್ನು ಓದಿ: ‘ಗೋರಕ್‌ಪುರ ಆಸ್ಪತ್ರೆ ದುರಂತ’ ಪುಸ್ತಕ ಬರೆದ ಡಾ.ಕಫೀಲ್ ಖಾನ್ ವಿರುದ್ದ ಪ್ರಕರಣ ದಾಖಲು


