ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣದ 11 ಅಪರಾಧಿಗಳ ಬಿಡುಗಡೆಗೆ ಸಂಬಂಧಿಸಿದಂತೆ ಗುಜರಾತ್ ಸರ್ಕಾರದ ನಡವಳಿಕೆಗೆ ಬಗ್ಗೆ ಸುಪ್ರೀಂಕೋರ್ಟ್ ಇತ್ತೀಚೆಗೆ ಮಾಡಿದ್ದ ವಿಮರ್ಶಾತ್ಮಕ ಟೀಕೆಗಳನ್ನು ಮರು ಪರಿಶೀಲಿಸುವಂತೆ ಗುಜರಾತ್ ಸರ್ಕಾರವು ಮಂಗಳವಾರ ಸುಪ್ರೀಂಕೋರ್ಟ್‌ಗೆ ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸಿದೆ.
ಲೈವ್ ಲಾ ವರದಿಯ ಪ್ರಕಾರ, ರಾಜ್ಯ ಸರ್ಕಾರವು ಸುಪ್ರೀಂಕೋರ್ಟ್‌ನ ಮೇ 2022ರ ತೀರ್ಪಿನ ಪ್ರಕಾರ ಕಾರ್ಯನಿರ್ವಯಿಸಿದೆ ಎಂದು ಹೇಳಿದೆ. ತೀರ್ಪಿನಲ್ಲಿ ಅಪರಾಧಿಗಳಲ್ಲಿ ಓರ್ವನ ಕ್ಷಮಾಧಾನ ಅರ್ಜಿಯನ್ನು ಪರಿಗಣಿಸಲು ನಿರ್ದೇಶಿಸಲಾಗಿತ್ತು. ರಾಜ್ಯ ಸರ್ಕಾರವು ಸುಪ್ರೀಂಕೋರ್ಟ್‌ನ ನಿರ್ದೇಶನದಂತೆ ಕಾರ್ಯನಿರ್ವಹಿಸುತ್ತಿರುವಾಗ ಮಹಾರಾಷ್ಟ್ರ ರಾಜ್ಯದ ಅಧಿಕಾರ ವ್ಯಾಪ್ತಿಯನ್ನು ಆಕ್ರಮಿಸಿಕೊಂಡಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ಗೆ ಗುಜರಾತ್ ಸರಕಾರ ಹೇಳಿದೆ.
2002ರ ಗುಜರಾತ್ ಗಲಭೆಯಲ್ಲಿ ಬಿಲ್ಕಿಸ್ ಬಾನು ಮತ್ತು ಆಕೆಯ ಕುಟುಂಬ ಸದಸ್ಯರ ಹತ್ಯೆಯ ಪ್ರಕರಣದಲ್ಲಿ 11 ಅಪರಾಧಿಗಳಿಗೆ ಕ್ಷಮೆ ನೀಡುವ ಗುಜರಾತ್ ಸರ್ಕಾರದ ನಿರ್ಧಾರವನ್ನು ಜನವರಿ 8, 2024ರಂದು ಸುಪ್ರೀಂಕೋರ್ಟ್ ರದ್ದುಗೊಳಿಸಿತ್ತು.
ಅಪರಾಧಿಯನ್ನು ವಿಚಾರಣೆಗೊಳಪಡಿಸಿ ಶಿಕ್ಷೆಗೆ ಗುರಿಪಡಿಸಿದ ರಾಜ್ಯ ಮಾತ್ರ ಅಪರಾಧಿಗಳ ಕ್ಷಮಾಧಾನ ಅರ್ಜಿಯನ್ನು ನಿರ್ಧರಿಸಲು ಅವಕಾಶವನ್ನು ಹೊಂದಿದೆ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಬಾಂಬೆ ಹೈಕೋರ್ಟಿನಲ್ಲಿ ವಿಚಾರಣೆ ಮತ್ತು ಶಿಕ್ಷೆ ನಡೆದ ಕಾರಣ ಮಹಾರಾಷ್ಟ್ರ ಸರಕಾರವು ಈ ಪ್ರಕರಣದಲ್ಲಿ ವಿನಾಯಿತಿ ನೀಡಲು ಸಮರ್ಥ ಸರ್ಕಾರವಾಗಿದೆ. ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಗುಜರಾತ್ ಸರ್ಕಾರ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಹೇಳಿತ್ತು.
ಗುಜರಾತ್ ಸರ್ಕಾರವು ಆಗಸ್ಟ್ 15, 2022ರಂದು ಬಿಲ್ಕಿಸ್‌ನ ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಕುಟುಂಬದ ಹತ್ಯೆಗೆ ಶಿಕ್ಷೆಗೊಳಗಾದ 11 ಅಪರಾಧಿಗಳನ್ನು ಉತ್ತಮ ನಡವಳಿಕೆಯನ್ನು ಉಲ್ಲೇಖಿಸಿ ಬಿಡುಗಡೆ ಮಾಡಿತ್ತು. ಈ ನಡೆ ಸಾರ್ವಜನಿಕ ಮತ್ತು ರಾಜಕೀಯ ವಲಯಗಳಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.
11 ಅಪರಾಧಿಗಳ ಬಿಡುಗಡೆಯ ನಂತರ ಬಿಲ್ಕಿಸ್ ಬಾನು ಅವರು ಅಪರಾಧಿಗಳಿಗೆ ನೀಡಲಾದ ವಿನಾಯಿತಿಯನ್ನು ವಿರೋಧಿಸಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಕರಿತು ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಪೀಠ 11 ಅಪರಾಧಿಗಳನ್ನು ಬಿಡುಗಡೆ ಮಾಡುವ ಗುಜರಾತ್ ಸರಕಾರದ ಆದೇಶವನ್ನು ರದ್ದುಗೊಳಿಸಿ, ಜೀವಾವಧಿ ಶಿಕ್ಷೆಗೊಳಗಾಗಿದ್ದ ಅಪರಾಧಿಗಳ ಶಿಕ್ಷೆ ಕಡಿತಗೊಳಿಸಿ ಅವರನ್ನು ಬಿಡುಗಡೆಗೊಳಿಸುವ ಹಕ್ಕು ಗುಜರಾತ್ ಸರ್ಕಾರಕ್ಕಿಲ್ಲ ಎಂದು ಹೇಳಿತ್ತು. ಅಪರಾಧಿಗಳಾದ ಜಸ್ವಂತ್ ನಾಯ್, ಗೋವಿಂದ್ ನಾಯ್, ಶೈಲೇಶ್ ಭಟ್, ರಾಧೇಶಾಮ್ ಶಾ, ಬಿಪಿನ್ ಚಂದ್ರ ಜೋಶಿ, ಕೇಸರಭಾಯಿ ವೋಹಾನಿಯಾ, ಪ್ರದೀಪ್ ಮೋರ್ಧಿಯಾ, ಬಕಾಭಾಯ್ ವೋಹಾನಿಯಾ, ರಾಜುಭಾಯ್ ಸೋನಿ, ಮಿತೇಶ್ ಭಟ್ ಮತ್ತು ರಮೇಶ್‌ನನ್ನು ಮತ್ತೆ ಜೈಲಿಗೆ ಕಳುಹಿಸಲಾಗಿತ್ತು.
ಜನವರಿ 8 ರಂದು ತನ್ನ ಆದೇಶದಲ್ಲಿ ನ್ಯಾಯಮೂರ್ತಿಗಳಾದ ಬಿವಿ ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರ ಸುಪ್ರೀಂಕೋರ್ಟ್ ಪೀಠವು, ಗುಜರಾತ್ ರಾಜ್ಯವು ಈ ನ್ಯಾಯಾಲಯವು ನೀಡಿದ ನಿರ್ದೇಶನದ ಆಧಾರದ ಮೇಲೆ ಕಾರ್ಯನಿರ್ವಹಿಸಿದೆ, ಕ್ಷಮಾಧಾನಕ್ಕೆ ಅರ್ಜಿ ಸಲ್ಲಿಸಿದ ಅಪರಾಧಿಗಳು ಮೋಸ ಮತ್ತು ನಿಜಾಂಶಗಳನ್ನು ಮುಚ್ಚಿಡುವ ವಿಧಾನವನ್ನು ಅನುಸರಿಸಿ ನ್ಯಾಯಾಲಯದ ದಿಕ್ಕು ತಪ್ಪಿಸಿದ್ದರು ಎಂದು ಹೇಳಿತ್ತು.
2002ರಲ್ಲಿ ಗೋಧ್ರಾ ರೈಲಿಗೆ ಬೆಂಕಿ ಹಚ್ಚಿದ ಘಟನೆಯ ನಂತರ ನಡೆದ ಹಿಂಸಾಚಾರದ ವೇಳೆ ಬಿಲ್ಕೀಸ್ ಬಾನು ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದರು. ಈ ವೇಳೆ ಅವರು ಐದು ತಿಂಗಳ ಗರ್ಭಿಣಿಯಾಗಿದ್ದರು. ಗಲಭೆಯಲ್ಲಿ ಮೃತಪಟ್ಟ ಆಕೆಯ ಏಳು ಕುಟುಂಬ ಸದಸ್ಯರಲ್ಲಿ ಅವಳ ಮೂರು ವರ್ಷದ ಮಗು ಕೂಡ ಸೇರಿತ್ತು.
ಇದನ್ನು ಓದಿ: ನಿರಾಶ್ರಿತರ ಶಿಬಿರವನ್ನು ಟಾರ್ಗೆಟ್ ಮಾಡಿ ಇಸ್ರೇಲ್‌ನಿಂದ ದಾಳಿ: ಮಕ್ಕಳು, ಮಹಿಳೆಯರು ಸೇರಿ 100ಕ್ಕೂ ಅಧಿಕ ಮಂದಿ ಸಾವು


