Homeಮುಖಪುಟಪಾಕಿಸ್ತಾನ: ಪ್ರಧಾನಿ ಅಭ್ಯರ್ಥಿಯಾಗಿ ಶೆಹಬಾಝ್ ಶರೀಫ್ ನಾಮನಿರ್ದೇಶನ

ಪಾಕಿಸ್ತಾನ: ಪ್ರಧಾನಿ ಅಭ್ಯರ್ಥಿಯಾಗಿ ಶೆಹಬಾಝ್ ಶರೀಫ್ ನಾಮನಿರ್ದೇಶನ

- Advertisement -
- Advertisement -

ಪಾಕಿಸ್ತಾನದ ಮಾಜಿ ಪ್ರಧಾನಿ ಶೆಹಬಾಝ್ ಷರೀಫ್ ಅವರನ್ನು ಮತ್ತೊಮ್ಮೆ ಪ್ರಧಾನಿ ಅಭ್ಯರ್ಥಿಯಾಗಿ ನಾಮನಿರ್ದೇಶನ ಮಾಡಲಾಗಿದೆ. ಕಳೆದ ವಾರ ನಡೆದ ಸಾರ್ವತ್ರಿಕ ಚುನಾವಣೆಯ ಬಳಿಕ ವಿವಿಧ ಪಕ್ಷಗಳ ನಡುವೆ ರಚಿಸಲಾಗಿರುವ ಹೊಸ ಮೈತ್ರಿಕೂಟ ಈ ಘೋಷಣೆ ಮಾಡಿದೆ.

ಈ ಕುರಿತು ಮಾಹಿತಿ ನೀಡಿರುವ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್‌-ಎನ್‌) ವಕ್ತಾರೆ ಮರಿಯಂ ಔರಂಗಜೇಬ್ ಅವರು, “ಪಿಎಂಎಲ್‌-ಎನ್‌ ಮುಖ್ಯಸ್ಥ ನವಾಝ್ ಷರೀಫ್ ಅವರು, ತನ್ನ ಕಿರಿಯ ಸಹೋದರ, ಮಾಜಿ ಪ್ರಧಾನಿ ಶೆಹಬಾಝ್ ಷರೀಫ್ ಅವರನ್ನು ಮತ್ತೊಮ್ಮೆ ಪ್ರಧಾನಿ ಸ್ಥಾನಕ್ಕೆ ಮತ್ತು ಅವರ ಮಗಳು ಮರಿಯಂ ನವಾಝ್ ಅವರನ್ನು ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿಯಾಗಿ ನಾಮ ನಿರ್ದೇಶನ ಮಾಡಿದ್ದಾರೆ” ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

“ಪಿಎಂಎಲ್‌-ಎನ್‌ಗೆ ಹೊಸ ಸರ್ಕಾರ ರಚನೆಗೆ ಬೆಂಬಲ ನೀಡಿರುವ ರಾಜಕೀಯ ಪಕ್ಷಗಳಿಗೆ ನವಾಝ್ ಷರೀಫ್ ಧನ್ಯವಾದ ಸಲ್ಲಿಸಿದ್ದಾರೆ. ಈ ಪಕ್ಷಗಳ ನಿರ್ಧಾರದಿಂದ ಪಾಕಿಸ್ತಾನವು ಬಿಕ್ಕಟ್ಟಿನಿಂದ ಹೊರಬಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ” ಎಂದು ಮರಿಯಂ ಔರಂಗಜೇಬ್ ತಿಳಿಸಿದ್ದಾರೆ.

ಶೆಹಬಾಝ್ ಷರೀಫ್ ಸಹೋದರ ನವಾಝ್ ಷರೀಫ್ ನೇತೃತ್ವದ ಪಿಎಂಎಲ್‌-ಎನ್‌ ನಾಯಕರಾಗಿದ್ದಾರೆ. ಈ ಪಕ್ಷ ಚುನಾವಣೆಯಲ್ಲಿ 75 ಸಂಸತ್‌ ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿ ಹೆಚ್ಚು ಸ್ಥಾನಗಳನ್ನು ಪಡೆದ ಪಕ್ಷವಾಗಿ ಹೊರ ಹೊಮ್ಮಿದೆ. ಬಿಲಾವಲ್ ಭುಟ್ಟೊ ಜರ್ದಾರಿ ನೇತೃತ್ವದ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) 54 ಸ್ಥಾನಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಒಟ್ಟಾರೆಯಾಗಿ, ಈ ಎರಡು ಪಕ್ಷಗಳು 266 ಸ್ಥಾನಗಳ ಸಂಸತ್‌ನಲ್ಲಿ ಸರಳ ಬಹುಮತ ಸಾಧಿಸಿದೆ.

ಮಂಗಳವಾರ, ಬಿಲಾವಲ್ ಭುಟ್ಟೊ ಜರ್ದಾರಿ ಅವರು ಪ್ರಧಾನಮಂತ್ರಿ ಸ್ಥಾನದ ವಿವಾದದಿಂದ ಹಿಂದೆ ಸರಿದಿದ್ದು, ನವಾಜ್ ಷರೀಫ್ ನೇತೃತ್ವದ ಪಿಎಂಎಲ್-ಎನ್ ನಾಮ ನಿರ್ದೇಶನ ಮಾಡುವ ಯಾವುದೇ ಅಭ್ಯರ್ಥಿಯನ್ನು ನಮ್ಮ ಪಕ್ಷ ಬೆಂಬಲಿಸಲಿದೆ ಎಂದು ಘೋಷಿಸಿದ್ದಾರೆ. ಅಲ್ಲದೆ ಯಾವುದೇ ಸಚಿವ ಬೇಡಿಕೆ ಇಲ್ಲ ಎಂದಿದ್ದಾರೆ.

ಫೆ.8ರಂದು ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಪ್ರಕಟಗೊಂಡಾಗ ಅತಂತ್ರ ಸ್ಥಿತಿ ನಿರ್ಮಾಣವಾಗಿತ್ತು. ಈ ಬೆನ್ನಲ್ಲೆ ವಿವಿಧ ಪಕ್ಷಗಳು ಸರ್ಕಾರ ರಚನೆಯ ಕಸರತ್ತು ನಡೆಸಿತ್ತು. ಅಂತಿಮವಾಗಿ ನವಾಝ್ ಶರೀಫ್ ನೇತೃತ್ವದ ಪಿಎಂಎಲ್‌-ಎನ್‌ ಮತ್ತು ಬಿಲಾವಲ್ ಭುಟ್ಟೊ ನೇತೃತ್ವದ ಪಿಪಿಪಿ ಇತರ ಕೆಲ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಲು ಅಣಿಯಾಗಿದೆ.

ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬೆಂಬಲಿತ ಸ್ವತಂತ್ರ ಅಭ್ಯರ್ಥಿಗಳು 92 ಸ್ಥಾನಗಳನ್ನು ಗೆದ್ದಿದ್ದಾರೆ. ಆದರೆ, ಅವರು ಸ್ವತಂತ್ರವಾಗಿ ಸರ್ಕಾರ ರಚಿಸಲು ಸಾಧ್ಯವಿಲ್ಲ. ಪಿಎಂಎಲ್‌-ಎನ್‌ ಅಥವಾ ಪಿಪಿಪಿ ಜೊತೆ ಮೈತ್ರಿ ಮಾಡಿಕೊಳ್ಳಬೇಕಿದೆ. ಈಗಾಗಲೇ ಆ ಎರಡು ಪಕ್ಷಗಳು ಒಂದಾಗಿರುವುದರಿಂದ, ಇಮ್ರಾನ್ ಖಾನ್ ಪಡೆ ವಿರೋಧ ಪಕ್ಷದ ಸ್ಥಾನದಲ್ಲಿ ಕೂರಬೇಕಾದ ಅನಿವಾರ್ಯತೆ ಎದುರಾಗಿದೆ.

ಇಮ್ರಾನ್ ಖಾನ್ ಅವರ ಪಕ್ಷದ ಅಭ್ಯರ್ಥಿಗಳು ಮತ್ತು ಸ್ವತಂತ್ರರು ಸೇರಿ ನಮಗಿಂತ ಹೆಚ್ಚಿನ ಸ್ಥಾನಗಳನ್ನು ಪಡೆದಿದ್ದಾರೆ. ಆದರೆ, ಅವರು ನಮ್ಮ ಪಿಪಿಪಿ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಲು ನಿರಾಕರಿಸಿದ್ದಾರೆ. ಹಾಗಾಗಿ, ನಾವು ನವಾಝ್ ಶರೀಫ್ ಬಣ ಬೆಂಬಲಿಸಿದೆವು ಎಂದು ಪಿಪಿಪಿ ಮುಖ್ಯಸ್ಥ ಬಿಲಾವಲ್‌ ಭುಟ್ಟೋ ತಿಳಿಸಿದ್ದಾರೆ.

ಪಾಕಿಸ್ತಾನದ ಚುನಾವಣಾ ಆಯೋಗದ ಪ್ರಕಾರ, ಇಮ್ರಾನ್ ಖಾನ್‌ ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷ ಬೆಂಬಲಿತ ಸ್ವತಂತ್ರ ಅಭ್ಯರ್ಥಿಗಳು 101 ಸ್ಥಾನಗಳನ್ನು ಗಳಿಸಿದ್ದಾರೆ. ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) 75 ಸ್ಥಾನಗಳನ್ನು ಪಡೆದಿದೆ. ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) 54 ಸ್ಥಾನ ಮತ್ತು ಮುತ್ತಹಿದಾ ಕ್ವಾಮಿ ಮೂವ್‌ಮೆಂಟ್-ಪಾಕಿಸ್ತಾನ (ಎಂಕ್ಯೂಎಂ-ಪಿ) 17 ಸ್ಥಾನಗಳನ್ನು ಪಡೆದುಕೊಂಡಿದೆ.

ಇದನ್ನೂ ಓದಿ : ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಎಂಎಸ್‌ಪಿಗೆ ಕಾನೂನು ಖಾತರಿ: ಮಲ್ಲಿಕಾರ್ಜುನ ಖರ್ಗೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಣಿಪುರ ಹಿಂಸಾಚಾರಕ್ಕೆ ಬಲಿಯಾದವರ ಬಗ್ಗೆ ಮೋದಿ ಸರ್ಕಾರಕ್ಕೆ ಸ್ವಲ್ಪವೂ ಸಹಾನುಭೂತಿ ಇಲ್ಲ: ಮಲ್ಲಿಕಾರ್ಜುನ ಖರ್ಗೆ

0
ಮಣಿಪುರದ ಪರಿಸ್ಥಿತಿಯ ಬಗ್ಗೆ ಮೋದಿ ಸರಕಾರ ನಿರಾಸಕ್ತಿಯನ್ನು ಹೊಂದಿದ್ದು, ಪಶ್ಚಾತ್ತಾಪವಿಲ್ಲದಂತೆ ವರ್ತಿಸುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿಯನ್ನು ನಡೆಸಿದೆ. ಈ ಕುರಿತು ಎಕ್ಸ್‌ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ...