ಕಳೆದ ಎರಡು ದಿನಗಳಿಂದ ಗುಜರಾತ್‌ನ ದೇವಭೂಮಿ ದ್ವಾರಕಾ ಜಿಲ್ಲೆಯಲ್ಲಿ ಮೂವರು ವ್ಯಕ್ತಿಗಳಿಂದ 313.25 ಕೋಟಿ ರೂಪಾಯಿ ಮೌಲ್ಯದ ಹೆರಾಯಿನ್ ಮತ್ತು ಮೆಥಾಂಫೆಟಮೈನ್ (methamphetamine) ಮಾದಕ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವಶಪಡಿಸಿಕೊಂಡ ಮಾದಕ ದ್ರವ್ಯಗಳು ಪಾಕಿಸ್ತಾನದಿಂದ ಬಂದಿದ್ದು, ಸಮುದ್ರ ಮಾರ್ಗದ ಮೂಲಕ ಗುಜರಾತ್‌ಗೆ ಕಳ್ಳಸಾಗಣೆ ಮಾಡಲಾಗಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬುಧವಾರ (ನ.10) ನಡೆದ ದಾಳಿಯ ವೇಳೆ ಇಬ್ಬರಿಂದ ವಶಪಡಿಸಿಕೊಂಡ 47 ಪ್ಯಾಕೆಟ್‌ಗಳಲ್ಲಿ 225 ಕೋಟಿ ರೂಪಾಯಿ ಮೌಲ್ಯದ 45 ಕೆಜಿ ಹೆರಾಯಿನ್ ಇತ್ತು ಎಂದು ವಿಧಿವಿಜ್ಞಾನ ವರದಿಯು ದೃಢಪಡಿಸಿದೆ ಎಂದಿದ್ದಾರೆ.
ಇದಕ್ಕೂ ಮುನ್ನ, ಮಂಗಳವಾರ (ನ.9) ಪೊಲೀಸರು ಖಚಿತ ಮಾಹಿತಿ ಮೇರೆಗೆ ಖಂಬಾಲಿಯಾ ಪಟ್ಟಣದ ಅತಿಥಿ ಗೃಹದಿಂದ ಮಹಾರಾಷ್ಟ್ರದ ಥಾಣೆ ನಿವಾಸಿ ಸಜ್ಜದ್ ಘೋಸಿ ಎಂಬಾತನನ್ನು ಬಂಧಿಸಿದ್ದರು. ಆತನಿಂದ ಒಟ್ಟು 88.25 ಕೋಟಿ ಮೌಲ್ಯದ 11.483 ಕೆಜಿ ಹೆರಾಯಿನ್ ಮತ್ತು 6.168 ಕೆಜಿ ಮೆಥಾಂಫೆಟಮೈನ್ ಒಳಗೊಂಡ 19 ಪ್ಯಾಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಗುಜರಾತ್‌ನಲ್ಲಿ ಹೆರಾಯಿನ್ ವಶ: ಮೋದಿ ಮಿತ್ರ ಅದಾನಿಯ ಪಾತ್ರದ ಬಗ್ಗೆ ತನಿಖೆ ಏಕಿಲ್ಲ?- ಕಾಂಗ್ರೆಸ್
ಬಂಧಿತ ಸಜ್ಜದ್ ಘೋಸಿ ತನ್ನ ಇಬ್ಬರು ಸಹೋದರರಾದ ಸಲೀಂ ಕಾರಾ ಮತ್ತು ಅಲಿ ಕಾರಾ ಅವರಿಂದ ಡ್ರಗ್ಸ್ ತೆಗೆದುಕೊಂಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಇದಾದ ಬಳಿಕ ಬುಧವಾರ ಜಿಲ್ಲೆಯ ಸಲಾಯ ಕರಾವಳಿ ಪಟ್ಟಣದಲ್ಲಿರುವ ಕಾರಾ ಸಹೋದರರ ನಿವಾಸದ ಮೇಲೆ ಪೊಲೀಸರು ದಾಳಿ ನಡೆಸಿ ಅಪರಿಚಿತ ವಸ್ತುವನ್ನು ಒಳಗೊಂಡ 47 ಪ್ಯಾಕೆಟ್‌ಗಳನ್ನು ವಶಪಡಿಸಿಕೊಂಡಿದ್ದರು.
“ಪರೀಕ್ಷೆಗಳ ನಂತರ, 47 ಪ್ಯಾಕೆಟ್‌ಗಳಲ್ಲಿ 45 ಕೆಜಿ ಹೆರಾಯಿನ್ ಇರುವುದು ದೃಢಪಟ್ಟಿದೆ. ಡ್ರಗ್ಸ್ ವಶಪಡಿಸಿಕೊಂಡ ನಂತರ ಮೂವರನ್ನು ಬಂಧಿಸಲಾಗಿದೆ” ಎಂದು ದೇವಭೂಮಿ ದ್ವಾರಕಾದ ಪೊಲೀಸ್ ಅಧೀಕ್ಷಕ ಸುನಿಲ್ ಜೋಶಿ ಹೇಳಿದ್ದಾರೆ.
ಸಜ್ಜದ್ ಘೋಸಿ ಈ ಹಿಂದೆ ಕೊಲೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದರು. ಸಲೀಂ ಕಾರಾ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ (ಎನ್‌ಡಿಪಿಎಸ್) ಕಾಯ್ದೆ, ನಕಲಿ ಕರೆನ್ಸಿ ಮತ್ತು ಶಸ್ತ್ರಾಸ್ತ್ರ ಕಾಯ್ದೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಬಂಧಿತರಾಗಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಜಿಲ್ಲಾ ಪೊಲೀಸರು ತಿಳಿಸಿದ್ದಾರೆ.
ಈ ಹಿಂದೆ ಸೆಪ್ಟೆಂಬರ್ 15 ರಂದು ಗುಜರಾತ್‌ನ ಮುಂದ್ರಾ ಬಂದರಿನಲ್ಲಿ ಅಫ್ಘಾನಿಸ್ತಾನದಿಂದ ಬಂದಿದ್ದ ಎರಡು ಕಂಟೇನರ್‌ಗಳನ್ನು ವಶಪಡಿಸಿಕೊಂಡಿದ್ದು, ಸುಮಾರು ಮೂರು ಟನ್‌ಗಳ 20 ಸಾವಿರ ಕೋಟಿ ರೂ. ಮೌಲ್ಯದ ಹೆರಾಯಿನ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬಂದರಿನ ಅಧಿಕಾರಿಗಳು ಹೇಳಿದ್ದರು.
ಇದನ್ನೂ ಓದಿ: ಅದಾನಿ ಮಾಲಿಕತ್ವದ ಬಂದರಿನಲ್ಲಿ 20 ಸಾವಿರ ಕೋಟಿ ರೂ.ಗಳ ಹೆರಾಯಿನ್ ವಶ


