ದೇವಾಲಯದಲ್ಲಿ ದಲಿತರಿಗೆ ಪ್ರವೇಶ ನಿರಾಕರಿಸಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಸ್ಥಳೀಯ ದಲಿತರೊಂದಿಗೆ ಸೋಮವಾರ ಕಛ್‌ನ ರಾಪರ್ ತಾಲೂಕಿನ ವರ್ನು ಗ್ರಾಮದ ದೇವಸ್ಥಾನದ ಗರ್ಭಗುಡಿಗೆ ಪ್ರವೇಶಿಸಿದ್ದಾರೆ.
ಕಛ್ ಜಿಲ್ಲೆಯ ನೇರ್ ಗ್ರಾಮದಲ್ಲಿನ ಗ್ರಾಮದ ದೇವಸ್ಥಾನವನ್ನು ಪ್ರವೇಶಿಸಿದ ಆರೋಪದ ಮೇಲೆ ಇತ್ತೀಚೆಗೆ ಮೇಲ್ಜಾತಿಯ ಜನರು ದಲಿತರ ಮೇಲೆ ಹಲ್ಲೆ ಮಾಡಿದ್ದರು. ಹಲ್ಲೆಗೊಳಗಾದ ಸಂತ್ರಸ್ತರನ್ನು ಭೇಟಿ ಮಾಡಲು ಕಚ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಶಾಸಕ ಜಿಗ್ನೇಶ್ ಮೇವಾನಿ ಈ ಕ್ರಮ ಕೈಗೊಂಡಿದ್ದಾರೆ.
ಗ್ರಾಮದ ದೇವಸ್ಥಾನದ ಗರ್ಭಗುಡಿಗೆ ದಲಿತರ ಪ್ರವೇಶವನ್ನು ನಿರಾಕರಿಸುವ ಬಗ್ಗೆ ಮಾಹಿತಿ ಪಡೆದ ಬಳಿಕ ದೇವಾಲಯಕ್ಕೆ ಭೇಟಿ ನೀಡಲು ನಿರ್ಧರಿಸಿದ್ದೇನೆ ಎಂದು ಮೇವಾನಿ ಹೇಳಿದ್ದರು. ಯಾವುದೇ ಪೂರ್ವಾಗ್ರಹವಿಲ್ಲದೆ ಪರಿಸ್ಥಿತಿಯನ್ನು ಪರಿಶೀಲಿಸಬೇಕೆಂದು ಎಲ್ಲರಲ್ಲಿ ಮನವಿ ಮಾಡಿದ್ದರು.
ಇದನ್ನೂ ಓದಿ: ರಾಜಸ್ಥಾನದಲ್ಲಿ ದಲಿತ ವ್ಯಕ್ತಿಯ ಬರ್ಬರ ಹತ್ಯೆ: ತ್ವರಿತ ಕ್ರಮಕ್ಕೆ ಜಿಗ್ನೇಶ್ ಮೇವಾನಿ ಆಗ್ರಹ
आज दलितों का एक तबका बुद्ध, रै दास, नानक और कबीर में मानता है, लेकिन आप केवल दलित हो इस कारण मंदिर में प्रवेश निषेध हो वह उनके नागिरक अधिकारों का हनन है। इसलिए आज हमारी टीम ने गुजरात के कच्छ जिले के रापर तहसील के वरनु गांव के मंदिर के गर्भगृह तक दलितों को ले जाकर प्रवेश करवाया। pic.twitter.com/SSNKITvWJI
— Jignesh Mevani (@jigneshmevani80) November 1, 2021
ಶಾಸಕ ಜಿಗ್ನೇಶ್ ಮೇವಾನಿ ತಮ್ಮ ತಂಡ ಮತ್ತು ಸ್ಥಳೀಯ ದಲಿತರೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿದರು. ದೇವಸ್ಥಾನದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ತಮ್ಮ ರಾಷ್ಟ್ರೀಯ ದಲಿತ್ ಅಧಿಕಾರ್ ಮಂಚ್ ತಂಡವು ಎಲ್ಲೆಲ್ಲಿ ದಲಿತರಿಗೆ ದೇವಾಲಯ ಪ್ರವೇಶವನ್ನು ತಡೆಯಲಾಗುತ್ತದೊ ಅಲೆಲ್ಲಾ ದೇವಾಲಯಗಳನ್ನು ಪ್ರವೇಶಿಸುವ ಹಕ್ಕುಗಳಿಗಾಗಿ ಗುಜರಾತ್ ರಾಜ್ಯದಲ್ಲಿ ಶೀಘ್ರದಲ್ಲೇ ಚಳವಳಿಯನ್ನು ಪ್ರಾರಂಭಿಸುತ್ತದೆ ಎಂದು ತಿಳಿಸಿದ್ದಾರೆ.
“ಭಾವನಗರ ಜಿಲ್ಲೆಯ ಆರು ಸ್ಥಳಗಳಲ್ಲಿ ದಲಿತರಿಗೆ ಪ್ರವೇಶ ನಿರಾಕರಿಸಲಾಗುತ್ತಿದೆ ಎಂಬ ವರದಿಗಳು ನಮಗೆ ಸಿಕ್ಕಿವೆ. ನಾವು ಶೀಘ್ರದಲ್ಲೇ ಆ ಸ್ಥಳಗಳಲ್ಲಿ ಇದೇ ರೀತಿಯ ಕ್ರಮವನ್ನು ತೆಗೆದುಕೊಳ್ಳುತ್ತೇವೆ” ಎಂದು ಶಾಸಕ ಮೇವಾನಿ ಹೇಳಿದ್ದಾರೆ.
ದೇವಾಲಯಕ್ಕೆ ಪ್ರವೇಶಿಸಿದ ನಂತರ ಅವರು ಗ್ರಾಮದ ಇತರ ಸಮುದಾಯಗಳ ಜನರೊಂದಿಗೆ ಸಭೆ ನಡೆಸಿದರು ಎಂದು ಮೇವಾನಿ ಅವರ ಕಚೇರಿಯ ಪ್ರಕಟಣೆ ತಿಳಿಸಿದೆ. ಇದರ ಜೊತೆಗೆ ಜಿಲ್ಲೆಯಲ್ಲಿ ದಲಿತರಿಗೆ ಮಂಜೂರಾದ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಂಡಿರುವ ಬಗ್ಗೆ ಮೇವಾನಿ ಕಚ್ ಪೊಲೀಸ್ ಅಧೀಕ್ಷಕರನ್ನು ಭೇಟಿಯಾಗಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ವಿಡಿಯೊ ವರದಿ: ಬ್ಯಾಲಹಳ್ಳಿ ದಲಿತರಿಂದ ದೇವಾಲಯ ಪ್ರವೇಶ; ಸವರ್ಣೀಯರ ಅಸಹನೆ


