ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅನಿರೀಕ್ಷಿತ ಬೆಳವಣಿಗೆಯಲ್ಲಿ ರಾಜೀನಾಮೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ತವರು ರಾಜ್ಯವಾದ ಗುಜರಾತ್‌ನಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದ್ದು, ರೂಪಾನಿಯವರ ರಾಜೀನಾಮೆ ಚರ್ಚೆಗೆ ಗ್ರಾಸವಾಗಿದೆ.
ರೂಪಾನಿಯವರು ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲ ಆಚಾರ್ಯ ದೇವ್‌ರಾತ್ ಅವರಿಗೆ ಸಲ್ಲಿಸಿದ್ದಾರೆ. ರಾಜೀನಾಮೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, “ಪಕ್ಷದ ಎಲ್ಲ ಕಾರ್ಯಕರ್ತರಿಗೂ ಸಮಾನ ಆದ್ಯತೆ, ಅವಕಾಶ ಸಿಗಬೇಕೆಂಬ ನಿಟ್ಟಿನಲ್ಲಿ ರಾಜೀನಾಮೆ ನೀಡುವುದು ಬಿಜೆಪಿಯ ಸಂಪ್ರದಾಯವಾಗಿದೆ” ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಪಕ್ಷ ನೀಡಿದ ಜವಾಬ್ದಾರಿಯನ್ನು ನಿರ್ವಹಿಸಲಿದ್ದೇನೆ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಮುನ್ನಡೆಯುತ್ತೇವೆ. ಮುಂದಿನ ಚುನಾವಣೆಯನ್ನು ಮೋದಿಯವರ ನಾಯಕತ್ವದಲ್ಲೇ ಎದುರಿಸಲಿದ್ದೇವೆ ಎಂದಿದ್ದಾರೆ.
ಗುಜರಾತ್‌ನ ಕಾಂಗ್ರೆಸ್ ಕಾರ್ಯಾಧ್ಯಕ್ಷ ಹಾರ್ದಿಕ್ ಪಟೇಲ್ ಪ್ರತಿಕ್ರಿಯೆ ನೀಡಿದ್ದು, “ತಮ್ಮ ಮುಖ್ಯಮಂತ್ರಿಯ ಕುರಿತು ಬಿಜೆಪಿಗೆ ವಿಶ್ವಾಸವಿಲ್ಲ” ಎಂದು ಕುಟುಕಿದ್ದಾರೆ.


