Homeಕರ್ನಾಟಕಗುಜರಾತ್‌ ಹೈಕೋರ್ಟ್‌‌ನಲ್ಲಿ ಕನ್ನಡ ಮಾತನಾಡಿದ ಮುಖ್ಯ ನ್ಯಾಯಮೂರ್ತಿ: ಏನಿದು ಪ್ರಕರಣ? ಹೇಗೆ ನೋಡಬೇಕು?

ಗುಜರಾತ್‌ ಹೈಕೋರ್ಟ್‌‌ನಲ್ಲಿ ಕನ್ನಡ ಮಾತನಾಡಿದ ಮುಖ್ಯ ನ್ಯಾಯಮೂರ್ತಿ: ಏನಿದು ಪ್ರಕರಣ? ಹೇಗೆ ನೋಡಬೇಕು?

ಗುಜರಾತ್‌ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅರವಿಂದ್ ಕುಮಾರ್‌ ಅವರು ಗುಜರಾತ್ ಹೈಕೋರ್ಟ್‌ನಲ್ಲಿ ಕನ್ನಡದಲ್ಲಿ ಮಾತನಾಡಿದ್ದಾರೆ. ಈ ಕುರಿತು ನ್ಯಾಯಾಂಗ ತಜ್ಞರು ಇಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

- Advertisement -
- Advertisement -

ಗುಜರಾತ್‌ ಹೈಕೋರ್ಟ್‌ನಲ್ಲಿ ಮುಖ್ಯ ನ್ಯಾಯಮೂರ್ತಿ ಅರವಿಂದ ಕುಮಾರ್‌ ಅವರು ಕನ್ನಡದಲ್ಲಿ ಮಾತನಾಡಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ. ಮಾನಹಾನಿ ಆರೋಪ ಎದುರಿಸುತ್ತಿರುವ ವ್ಯಕ್ತಿಯ ವಿಚಾರಣೆಯ ವೇಳೆ ಅರವಿಂದ್‌ ಕುಮಾರ್‌‌ ಭಾಷೆಯ ಕುರಿತು ಪ್ರಸ್ತಾಪಿಸುತ್ತಾ ಕನ್ನಡದಲ್ಲಿ ಮಾತನಾಡಿದ್ದು, ವಿಡಿಯೊ ಕ್ಲಿಪ್‌ ಕೂಡ ವೈರಲ್‌ ಆಗಿದೆ.

ನ್ಯಾಯಾಲಯದ ವಿಚಾರಣೆಯ ಭಾಷೆ ಇಂಗ್ಲಿಷ್ ಆಗಿರಬೇಕು. ಪ್ರಕರಣದಲ್ಲಿ ಕಕ್ಷಿದಾರರ ಒತ್ತಾಯದ ಹೊರತಾಗಿಯೂ ಬೇರೆ ಭಾಷೆಯಲ್ಲಿ ಇರುವಂತಿಲ್ಲ ಎಂದು ವಿಚಾರಣೆ ವೇಳೆ ಅವರು ಹೇಳಿದ್ದಾರೆ ಎಂದು ‘ದಿ’ ವೈರ್‌ ವರದಿ ಮಾಡಿದೆ.

ಕಾನೂನು ಸುದ್ದಿ ವೆಬ್‌ಸೈಟ್ ‘ಲೈವ್‌ಲಾ’ ಪ್ರಕಾರ, ಗುಜರಾತ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಮತ್ತು ನ್ಯಾಯಮೂರ್ತಿ ಅಶುತೋಷ್ ಜೆ. ಶಾಸ್ತ್ರಿ ಅವರನ್ನೊಳಗೊಂಡ ವಿಭಾಗೀಯ ಪೀಠವು, ಸ್ಥಳೀಯ ಪತ್ರಕರ್ತರೊಬ್ಬರ ಪ್ರಕರಣದ ವಿಚಾರಣೆ ನಡೆಸುವಾಗ ಈ ಘಟನೆ ನಡೆದಿದೆ.

ಗುಜರಾತಿ ಭಾಷೆಯ ಪತ್ರಿಕೆ ‘ಸಾಮ್ನಾ ಬ್ರಷ್ಟಾಚಾರ್ ಕಾ ನ್ಯೂಸ್ ಪೇಪರ್’ ವಿರುದ್ಧ ಮಾನಹಾನಿಗೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿತ್ತು. ಪತ್ರಕರ್ತರೊಬ್ಬರು ಕೋರ್ಟ್‌ನಲ್ಲಿ ಹಾಜರಿದ್ದರು. ಗುಜರಾತಿ ಭಾಷೆಯಲ್ಲಿ ಮಾತನಾಡಲು ಅವಕಾಶ ಕೋರಿದರು. ಗುಜರಾತಿ ಭಾಷೆಯಲ್ಲಿ ಮಾತನಾಡುವುದಕ್ಕೆ ನ್ಯಾಯಮೂರ್ತಿಯವರು ಆಕ್ಷೇಪ ವ್ಯಕ್ತಪಡಿಸಿದರು.

ಮೌಖಿಕ ವಿಚಾರಣೆಯಲ್ಲಿ ಮುಖ್ಯ ನ್ಯಾಯಮೂರ್ತಿ ಕುಮಾರ್, “ಕಕ್ಷಿದಾರನು ಗುಜರಾತ್‌ನಲ್ಲಿ ಮಾತ್ರ ಮಾತನಾಡಿದರೆ ನಾನು ಕನ್ನಡದಲ್ಲಿ ಪ್ರತಿಕ್ರಿಯಿಸುತ್ತೇನೆ” ಎಂದರು. “ನೀವು ಏನು ಮಾಡ್ತಾ ಇದ್ದೀರೋ ಅದು ನನಗೆ ಅರ್ಥವಾಗುತ್ತಿಲ್ಲ. ನೀವು ಹೇಳುವುದಾದರೆ ನನಗೆ ಅರ್ಥವಾಗುವ ಭಾಷೆಯಾದ ಕನ್ನಡದಲ್ಲಿ ಹೇಳಿ. ನಾನು ನಿಮಗೆ ಕನ್ನಡದಲ್ಲಿ ಹೇಳುತ್ತೇನೆ” ಎಂದು ಅರವಿಂದ್‌ ಕುಮಾರ್‌‌ ಪ್ರತಿಕ್ರಿಯಿಸುತ್ತಾರೆ. “ಇದು ಹೈಕೋರ್ಟ್ ಆಗಿದೆ. ಜಿಲ್ಲಾ ನ್ಯಾಯಾಲಯ ಅಲ್ಲ” ಎಂದು ಜಸ್ಟೀಸ್‌ ತಿಳಿಸುತ್ತಾರೆ.

ಸ್ಥಳೀಯ ಭಾಷೆಯು ಜಿಲ್ಲಾ ನ್ಯಾಯಾಲಯಗಳಲ್ಲಿ ಮಾತ್ರ ಅನ್ವಯಿಸುತ್ತದೆ ಎಂದು ಕಕ್ಷಿದಾರರಿಗೆ ಮನವರಿಕೆ ಮಾಡಿಕೊಡುತ್ತಾರೆ. “ಇದು ಹೈಕೋರ್ಟ್. ಜಿಲ್ಲಾ ನ್ಯಾಯಾಲಯವಲ್ಲ. ಜಿಲ್ಲಾ ನ್ಯಾಯಾಲಯದಲ್ಲಿ ಮಾತ್ರ ಸ್ಥಳೀಯ ಭಾಷೆಗೆ ಅವಕಾಶವಿದೆ. ಇಲ್ಲಿ ಇಂಗ್ಲಿಷ್ ಭಾಷೆಗೆ ಮಾತ್ರ ಅವಕಾಶವಿದೆ” ಎಂದು ಸ್ಪಷ್ಟಪಡಿಸುತ್ತಾರೆ.

ವಕೀಲರನ್ನು ತೊಡಗಿಸಿಕೊಳ್ಳಲು ಸಾಧ್ಯವಾಗದಿದ್ದರೆ ಗುಜರಾತ್ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಿಂದ ಕಾನೂನು ಸಹಾಯಕ್ಕಾಗಿ ಪ್ರಸ್ತಾಪವನ್ನು ಮಾಡಲಾಗಿದೆಯೇ ಎಂದು ನ್ಯಾಯಾಲಯವು ಗಮನಿಸಿದೆ.

“ಒಂದಕ್ಕಿಂತ ಹೆಚ್ಚು ಕಾರಣಗಳಿಂದಾಗಿ ನಾವು ಅವರ ಅರ್ಜಿಗಳನ್ನು ಸ್ವೀಕರಿಸಲು ಒಲವು ತೋರುವುದಿಲ್ಲ. ಮೊದಲನೆಯದಾಗಿ, ಈ ನ್ಯಾಯಾಲಯಕ್ಕೆ (ಮುಖ್ಯ ನ್ಯಾಯಾಧೀಶರಿಗೆ) ಅರ್ಥವಾಗದ ಭಾಷೆಯಲ್ಲಿ ಮಾತನಾಡಲು ನಾವು ಕಕ್ಷಿದಾರರಿಗೆ ಅನುಮತಿಸುವುದಿಲ್ಲ. ಎರಡನೆಯದಾಗಿ, ಸಂವಿಧಾನದ 348 ನೇ ವಿಧಿಯು ಉಚ್ಚ ನ್ಯಾಯಾಲಯದ ಭಾಷೆ ಇಂಗ್ಲಿಷ್ ಆಗಿರಬೇಕು. ಹೀಗಾಗಿ ಮಾನಹಾನಿ ಆರೋಪ ಹೊತ್ತಿರುವ ವ್ಯಕ್ತಿಯ ವಾದವನ್ನು ಅಂಗೀಕರಿಸಲಾಗುವುದಿಲ್ಲ” ಎಂದು ಹೈಕೋರ್ಟ್‌ನ ಲಿಖಿತ ಆದೇಶ ಹೇಳಿದೆ. ಪ್ರಕರಣವನ್ನು ಮುಂದೂಡಲಾಗಿದೆ.

ಜಸ್ಟೀಸ್ ದಾಸ್‌ ಅವರ ವಿಶ್ಲೇಷಣೆ ಹೀಗಿದೆ:

ಈ ವಿದ್ಯಮಾನದ ಕುರಿತು ‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಸ್ಟೀಸ್‌ ಎಚ್.ಎನ್‌.ನಾಗಮೋಹನ ದಾಸ್‌ ಅವರು ಹಲವು ಒಳನೋಟಗಳನ್ನು ನೀಡಿದರು. “ನಮ್ಮ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗಳಲ್ಲಿ ಇಂಗ್ಲಿಷ್‌ ಆಡಳಿತ ಭಾಷೆ. ಜಿಲ್ಲಾ ಮತ್ತು ತಾಲ್ಲೂಕು ಕೋರ್ಟ್‌ಗಳಲ್ಲಿ ಪ್ರಾದೇಶಿಕ ಭಾಷೆ ಇರಬಹುದು. ಹೀಗೆ ನಮ್ಮ ಕಾನೂನು ಹಾಗೂ ಸಂವಿಧಾನವನ್ನು ರೂಪಿಸಿಕೊಳ್ಳಲಾಗಿದೆ” ಎಂದು ತಿಳಿಸಿದರು.

“ಈ ರೀತಿಯ ಸಾಕಷ್ಟು ಪ್ರಕರಣಗಳು ನ್ಯಾಯಾಲಯದ ಮುಂದೆ ಬಂದಿವೆ. ರಾಜನಾರಾಯಣ್‌ ಅವರ ಪ್ರಕರಣವನ್ನು ನೋಡಬಹುದು. ಸುಪ್ರೀಂಕೋರ್ಟ್‌‌ನಲ್ಲಿ ಒಮ್ಮೆ ಹಿಂದಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಆಗ ಸುಪ್ರೀಂ ಕೋರ್ಟ್ ಪ್ರತಿಕ್ರಿಯಿಸಿ, ಸುಪ್ರಿಂ ಕೋರ್ಟ್ ಆಡಳಿತ ಭಾಷೆ ಸಂವಿಧಾನದ ಪ್ರಕಾರ ಇಂಗ್ಲಿಷ್‌ ಆಗಿದೆ. ಹೀಗಾಗಿ ಆಡಳಿತ ಭಾಷೆಯಲ್ಲಿಯೇ ಅರ್ಜಿ ಕೊಟ್ಟರೆ ಸ್ವೀಕರಿಸಲಾಗುತ್ತದೆ ಎಂದು ರಾಜನಾರಾಯಣ್‌ ಅವರ ಅರ್ಜಿಯನ್ನು ರಿಜೆಕ್ಟ್‌ ಮಾಡಲಾಗುತ್ತದೆ. ಮಧುಲಿಮೆಯವರಿಗೆ ಸಂಬಂಧಿಸಿದ ಇಂಥದ್ದೇ ಒಂದು ಪ್ರಕರಣವಿದೆ. ಬಹುಶಃ ಅಲಹಾಬಾದ್‌ ಹೈಕೋರ್ಟ್ ನಡೆದದ್ದೆಂದು ನೆನಪು. ಆಗಲೂ ಕೂಡ ಕೋರ್ಟ್ ಹೀಗೆಯೇ ಹೇಳಿತು” ಎಂದು ಮೆಲುಕು ಹಾಕಿದರು.

ತಮ್ಮದೇ ಅನುಭವವನ್ನು ಹಂಚಿಕೊಂಡ ಜಸ್ಟೀಸ್ ದಾಸ್‌ ಅವರು, “ಒಬ್ಬ ಕನ್ನಡಿಗ ರಿಟ್‌ ಅರ್ಜಿಯನ್ನು ಕನ್ನಡದಲ್ಲಿ ಹಾಕಿದ್ದ. ಹೈಕೋರ್ಟ್‌ ಕಚೇರಿ ಅರ್ಜಿಯನ್ನು ನಿರಾಕರಿಸಿದರು. ಕೋರ್ಟ್‌ಗೆ ಅರ್ಜಿಯನ್ನು ಕಳುಹಿಸಿ ನಾನು ಅವರಲ್ಲಿ ಕನ್ವಿನ್ಸ್‌ ಮಾಡ್ತೀನಿ ಎಂದು ಕಕ್ಷಿದಾರ ಕೋರಿದ. ಆ ಅರ್ಜಿ ನನ್ನ ಮುಂದೆ ಬಂತು. ಇದು ನನ್ನ ರಾಜ್ಯ. ಇಲ್ಲಿನ ಹೈಕೋರ್ಟ್ ನ್ಯಾಯಮೂರ್ತಿಯವರಿಗೆ ನನ್ನ ಭಾಷೆ ಗೊತ್ತಿಲ್ಲದಿದ್ದರೆ ಅದು ನನ್ನ ತಪ್ಪಾ? ಹೀಗಾಗಿ ನನ್ನ ಭಾಷೆಯಲ್ಲಿರುವ ಅರ್ಜಿಯನ್ನು ಸ್ವೀಕಾರ ಮಾಡಬೇಕು ಎಂದು ಆತ ಒತ್ತಾಯ ಮಾಡಿದ. ಆಗ ಸಂಶೋಧನೆ ಮಾಡಿದಾಗ ಈ ಹಿಂದೆ ನೀಡಿದ್ದ ತೀರ್ಪುಗಳೆಲ್ಲ ಗಮನಕ್ಕೆ ಬಂದವು. ಆತನ ಅರ್ಜಿಯನ್ನು ವಜಾ ಮಾಡಲು ನನಗೆ ಮನಸ್ಸು ಬರಲಿಲ್ಲ. ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿಯವರಿಗೆ ಆದೇಶ ಕಳುಹಿಸಿದೆ. ಅವರು ಹಾಜರಾದರು. ನೀವು ಇದನ್ನು ಇಂಗ್ಲಿಷ್‌ಗೆ ಭಾಷಾಂತರಿಸಿ ಎಂದು ಸೂಚಿಸಿದೆ. ಮತ್ತೆ ಈ ಪ್ರಕರಣಕ್ಕೆ ಜೀವ ಬಂತು” ಎಂದು ವಿವರಿಸಿದರು.

“ಪ್ರಾದೇಶಿಕ ಭಾಷೆಗಳು ಹೈಕೋರ್ಟ್‌‌ಗೆ ಬರಬೇಕು ಅನ್ನುವ ವಿಷಯ ಬಹಳ ವರ್ಷಗಳಿಂದ ಚರ್ಚೆಯಾಗುತ್ತಿದೆ. ಒಂದು ಹೈಕೋರ್ಟ್‌ನಲ್ಲಿ ಇದ್ದ ಪ್ರಕರಣವನ್ನು ಮತ್ತೊಂದು ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಸುವಾಗ ಭಾಷೆ ಬೇರೆ ಬೇರೆ ಇದ್ದರೆ ಗೊತ್ತಾಗುವುದಿಲ್ಲ ಎಂಬುದು ಪ್ರಾಯೋಗಿಕ ಸಮಸ್ಯೆ. ಕರ್ನಾಟಕ ಹೈಕೋರ್ಟ್‌ನಲ್ಲಿರುವ ಮುಖ್ಯ ನ್ಯಾಯಾಧೀಶರು ಉತ್ತರ ಪ್ರದೇಶದವರು. ಹಾಗೆಯೇ ನಮ್ಮವರು ಬೇರೆ ರಾಜ್ಯಗಳಲ್ಲಿ ಇದ್ದಾರೆ. ಈ ರೀತಿ ವರ್ಗಾವಣೆಯಾದಾಗ ಅವರವರ ಮಾತೃ ಭಾಷೆಯನ್ನು ಮುಂದುವರಿಸಿಕೊಂಡು ಹೋಗಲು ಸಾಧ್ಯವಿಲ್ಲ. ಹೀಗಾಗಿ ಸಂವಿಧಾನ ರಚನಾಕಾರರು ಇಂಗ್ಲಿಷ್‌ ಭಾಷೆಯನ್ನು ನ್ಯಾಯಾಂಗದ ಆಡಳಿತ ಭಾಷೆ ಮಾಡಿದ್ದಾರೆ. ಪ್ರಾದೇಶಿಕ ಭಾಷೆ ಹೈಕೋರ್ಟ್‌ಗೆ ಬರಬೇಕಾದರೆ ಸೀಮಿತ ವ್ಯಾಪ್ತಿಗೆ ಒಂದು ಭಾಷಾಂತರ ವಿಭಾಗವನ್ನೇ ಮಾಡಬೇಕಾಗುತ್ತದೆ” ಎಂದರು.

“ನಾವು ಸಾಮಾನ್ಯವಾಗಿ ಕೆಳಗಿನ ಕೋರ್ಟ್‌ನಿಂದ ಮೇಲಿನ ಕೋರ್ಟ್‌ಗೆ ಅಪೀಲು ಹೋಗುತ್ತೇವೆ. ಕರ್ನಾಟಕದ ಹೈಕೋರ್ಟ್‌ನಲ್ಲಿ ಕನ್ನಡದವರೇ ಇದ್ದರೆ ಓದಿಕೊಳ್ಳಬಹುದು. ಕೆಳಗಿನ ನ್ಯಾಯಾಲಯದಲ್ಲಿ ‘ಸೇಲ್‌ ಅಗ್ರಿಮೆಂಟ್‌’ ಎಂಬುದನ್ನು ‘ಕರಾರು ಪತ್ರ’ ಎಂದೇ ಬರೆದಿರುತ್ತಾರೆ. ಕೆಳ ನ್ಯಾಯಾಲಯಗಳಲ್ಲಿ ‘ವಿಭಾಗಪತ್ರ’, ‘ದಾನಪತ್ರ’, ‘ವಿಲ್‌’ ಎಂಬುದನ್ನೆಲ್ಲ ಕನ್ನಡದಲ್ಲೇ ಇರಬಹುದು. ಸಾಕ್ಷಿಯೆಲ್ಲ ಕನ್ನಡದಲ್ಲೇ ದಾಖಲಾಗಿರುತ್ತದೆ. ಕೆಲವು ನ್ಯಾಯಾಧೀಶರು ಕನ್ನಡದಲ್ಲೇ ತೀರ್ಪು ನೀಡಿರುತ್ತಾರೆ. ಅವು ಹೈಕೋರ್ಟ್‌‌ಗೆ ಬಂದಾಗ ನ್ಯಾಯಮೂರ್ತಿಗಳು ಕನ್ನಡದವರೇ ಇದ್ದರೆ ತೊಂದರೆಯಾಗದು. ಆದರೆ ಹೊರಗಿನ ರಾಜ್ಯದವರು ನ್ಯಾಯಮೂರ್ತಿಯಾಗಿದ್ದರೆ ತೊಂದರೆಯಾಗುತ್ತದೆ. ಆಗ ಭಾಷಾಂತರ ಮಾಡಿ ಕೊಡಬೇಕು. ಆ ವ್ಯವಸ್ಥೆ ಇದೆ. ಬೇರೆ ರಾಜ್ಯದ ನ್ಯಾಯಮೂರ್ತಿಗಳು ಇದ್ದಾಗ ನಾವು ಭಾಷಾಂತರದ ಕಾಪಿಗಳನ್ನು ನೀಡಬೇಕು. ಆ ಭಾಷಾಂತರಕ್ಕೆ ಹೆಚ್ಚುವರಿ ಶುಲ್ಕ ನೀಡಬೇಕು. ಈ ಖರ್ಚುವೆಚ್ಚವನ್ನು ಕಕ್ಷಿದಾರನೇ ಭರಿಸಬೇಕು. ಈ ಥರದ ಸಮಸ್ಯೆ ಆಗುತ್ತದೆ” ಎಂದು ವಿಶ್ಲೇಷಿಸಿದರು.

“ಗುಜರಾತಿ ಭಾಷೆಯಲ್ಲಿ ಕಕ್ಷಿದಾರ ವಾದ ಮಂಡಿಸಿದಾಗ ಪಕ್ಕದಲ್ಲೇ ಕೂತ ಗುಜರಾತಿ ಜಡ್ಜ್‌ ಗ್ರಹಿಸಬಹುದು. ಕಾನೂನು ಸೇವಾ ಪ್ರಾಧಿಕಾರಕ್ಕೆ ಸೂಚಿಸಬಹುದು. ಸಾಧಾರಣಾ ವ್ಯಕ್ತಿಗೆ ನ್ಯಾಯ ದೊರಕಬೇಕು. ಇಂಥದ್ದನ್ನೆಲ್ಲ ತಾಂತ್ರಿಕವಾಗಿ ನೋಡಲಾಗದು. ಪ್ರಾಯೋಗಿಕವಾಗಿ ಸಮಸ್ಯೆ ಇದೆ ಎಂಬುದು ನನಗೆ ಗೊತ್ತಿದೆ” ಎಂದರು.

ಅಭಿಯಾನ ನಡೆಸುತ್ತೇವೆ: ಅರುಣ್ ಜಾವಗಲ್‌

ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್‌ ಜಾವಗಲ್‌ ಪ್ರತಿಕ್ರಿಯಿಸಿ, “ಮುಖ್ಯವಾಗಿ ಆಯಾ ರಾಜ್ಯದಲ್ಲಿ ಆಯಾ ರಾಜ್ಯದ ಭಾಷೆ ಬಳಸಲು ಹೈಕೋರ್ಟ್‌ನಲ್ಲಿ ಅವಕಾಶ ಇರಬೇಕು. ಈಗ ಹಿಂದಿ, ಇಂಗ್ಲಿಷ್‌ ಭಾಷೆಗೆ ಮಾತ್ರ ಅವಕಾಶ ನೀಡಲಾಗಿದೆ. ಪ್ರಾದೇಶಿಕ ಭಾಷೆ ಬಳಕೆಗೂ ಅನುಮತಿ ಕೊಡಬಹುದು. ಹಿಂದಿ ರಾಜ್ಯಗಳಲ್ಲಿ ಹಿಂದಿ ಬಳಸಲು ಅವಕಾಶ ನೀಡಿದ್ದಾರೆ. ಹಿಂದಿಯೇತರ ರಾಜ್ಯಗಳಲ್ಲಿ ಈ ಅವಕಾಶ ಇಲ್ಲ. ಈ ಕುರಿತು ಹಲವು ರಾಜ್ಯಗಳು ಅರ್ಜಿ ಸಲ್ಲಿಸಿದ್ದವು. ಕರ್ನಾಟಕ ಹೈಕೋರ್ಟ್‌ನಲ್ಲಿ ಕನ್ನಡ ಮಾತನಾಡಲು ಅವಕಾಶವಿರದಿದ್ದಾಗ, ಗುಜರಾತ್‌ ಹೈಕೋರ್ಟ್‌ನಲ್ಲಿ ಕನ್ನಡ ಮಾತನಾಡಿದ್ದನ್ನು ಒಪ್ಪಲಾಗದು. ಹಾಗೆಯೇ ಗುಜರಾತಿಯವರೊಬ್ಬರು ಕರ್ನಾಟಕ ಹೈಕೋರ್ಟ್‌ನಲ್ಲಿ ಗುಜರಾತಿಯಲ್ಲಿ ಮಾತನಾಡುತ್ತೇನೆ ಎಂಬುದನ್ನು ಒಪ್ಪಲಾಗದು. ಕರ್ನಾಟಕ ಹೈಕೋರ್ಟ್‌ನಲ್ಲಿ ಕನ್ನಡ ಬಳಸಲು ಅವಕಾಶ ನೀಡಬೇಕೆಂದು ಸಮಾನ ಮನಸ್ಕರೆಲ್ಲ ಸೇರಿ ಒಂದು ಅಭಿಯಾನ ಶುರು ಮಾಡಿದ್ದೆವು. ಕೊರೊನಾ ಬಂದ ಮೇಲೆ ಅಭಿಯಾನಕ್ಕೆ ಹಿನ್ನಡೆಯಾಯಿತು. ಮತ್ತೆ ಅದನ್ನು ಮುಂದಕ್ಕೆ ತೆಗೆದುಕೊಂಡು ಹೋಗುತ್ತೇವೆ” ಎಂದು ತಿಳಿಸಿದರು.

ನಿಯಮ ಬದಲಿಸಬೇಕಿದೆ: ವಿನಯ್‌ ಶ್ರೀನಿವಾಸ್‌

ಪರ್ಯಾಯ ಕಾನೂನು ವೇದಿಕೆಯಲ್ಲಿ ಸಕ್ರಿಯರಾಗಿರುವ ವಕೀಲರಾದ ವಿನಯ್‌ ಶ್ರೀನಿವಾಸ್‌ ಮಾತನಾಡಿ, “ಆಯಾ ರಾಜ್ಯದ ಹೈಕೋರ್ಟ್‌ನಲ್ಲಿ ಆಯಾ ರಾಜ್ಯದ ಭಾಷೆಯಲ್ಲಿಯೇ ಮಾತನಾಡುವ ಸ್ವಾತಂತ್ರ್ಯ ಇರಬೇಕು. ಹೈಕೋರ್ಟ್‌ಗಳಲ್ಲಿ ಇಂಗ್ಲಿಷ್‌ ಮತ್ತು ಹಿಂದಿ ಭಾಷೆಯನ್ನು ಮಾತ್ರ ಅನುಮತಿಸಲಾಗಿದೆ. ಪ್ರಾದೇಶಿಕ ಭಾಷೆಗೆ ಅವಕಾಶವಿರದಿದ್ದರೆ ಎಷ್ಟೋ ಮಂದಿ ನ್ಯಾಯ ಪಡೆಯುವುದು ಕಷ್ಟವಾಗುತ್ತದೆ. ಎಷ್ಟೋ ವಕೀಲರಿಗೆ ವಾದ ಮಾಡುವುದೂ ಕಷ್ಟವಾಗುತ್ತದೆ. ಏಕೆಂದರೆ ಎಲ್ಲರೂ ಇಂಗ್ಲಿಷ್‌ ಕಲಿತಿರುವುದಿಲ್ಲ. ಈ ನಿಯಮವನ್ನು ಬದಲಿಸಬೇಕೆಂದು ಅನೇಕರು ಒತ್ತಾಯಿಸುತ್ತಿದ್ದೇವೆ. ಆಯಾ ರಾಜ್ಯದಲ್ಲಿ ಆಯಾ ರಾಜ್ಯದ ಭಾಷೆಯನ್ನು ಅನುಮತಿಸಬೇಕೆಂದು ಹೋರಾಡುತ್ತಿದ್ದೇವೆ” ಎಂದು ಹೇಳಿದರು.

ಸ್ಥಳೀಯ ಭಾಷೆಯಿಂದ ನ್ಯಾಯದಾನ ಪರಿಣಾಮಕಾರಿ: ಕೆ.ಬಿ.ಕೆ.ಸ್ವಾಮಿ

ವಕೀಲರಾದ ಕೆ.ಬಿ.ಕೆ.ಸ್ವಾಮಿ ಪ್ರತಿಕ್ರಿಯಿಸಿ, “ಸಂವಿಧಾನದ 348 ವಿಧಿಯನ್ನು ಬಳಸಿ ಹೈಕೋರ್ಟ್‌ಗಳಲ್ಲಿ ಸ್ಥಳೀಯ ಭಾಷೆಯನ್ನು ಕಲಾಪದ ಭಾಷೆಯನ್ನಾಗಿ ಅನುಸರಿಸಲು ಅವಕಾಶವಿದೆ. ಸ್ಥಳೀಯ ಭಾಷೆಯಲ್ಲಿ ಕಲಾಪಗಳು ನೆಡೆದಾಗ ನ್ಯಾಯ ವಿತರಣಾ ವ್ಯವಸ್ಥೆಯು ಹೆಚ್ಚು ಪರಿಣಾಮಕಾರಿಯಾಗಿ ಜನರನ್ನು ತಲುಪುವುದು. ಜನರಿಗೆ ಅವರ ಭಾಷೆಯಲ್ಲೇ ನ್ಯಾಯ ವಿತರಣೆ ಮಾಡುವುದು ಹಿಂದೆಂದಿಗಿಂತಲೂ ಹೆಚ್ಚು ಅನಿವಾರ್ಯವಾಗಿದೆ” ಎಂದು ಅಭಿಪ್ರಾಯಟ್ಟರು.


ಇದನ್ನೂ ಓದಿರಿ: ನಕಲಿ ಅಬಿಯಾನ, ದ್ವೇಶ ರಾಜಕಾರಣಕ್ಕೆ ಬಿಜೆಪಿ ಬಳಸಿದ ಅಪ್ಲಿಕೇಶನ್‌ ಹೆಸರು ‘Tek Fog’: ‘ದಿ ವೈರ್‌’ ಸ್ಪೋಟಕ ವರದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...