ದೀಪಾವಳಿ ಹಬ್ಬಕ್ಕೆ ಕೆಲವು ದಿನಗಳಿರುವಾಗ ದೆಹಲಿ ಸಮೀಪದ 14 ಜಿಲ್ಲೆಗಳಲ್ಲಿ ಪಟಾಕಿ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿದೆ ಎಂದು ಹರಿಯಾಣ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಅಂಗಡಿಗಳಲ್ಲಿ ಮಾತ್ರವಲ್ಲ, ಆನ್‌ಲೈನ್ ಶಾಪಿಂಗ್ ಸೈಟ್‌ಗಳು ಸಹ ಅಂತಹ ರೀತಿಯ ಯಾವುದೇ ವಸ್ತುಗಳನ್ನು ಮಾರಾಟವನ್ನು ಮಾಡುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದೆ.
ಪಟಾಕಿಗಳನ್ನು ಸಿಡಿಸುವುದು ಹಲವರ ಉಸಿರಾಟದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಜೊತೆಗೆ ಮನೆಯಲ್ಲಿ ಪ್ರತ್ಯೇಕವಾಗಿರುವ ಕೊರೊನಾ ಪಾಸಿಟಿವ್ ವ್ಯಕ್ತಿಗಳ ಆರೋಗ್ಯ ಸ್ಥಿತಿಯನ್ನು ಇದು ಉಲ್ಬಣಗೊಳಿಸುತ್ತದೆ. ಇನ್ನು ಈ ಕ್ರಮಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಮತ್ತು ಸುಪ್ರೀಂ ಕೋರ್ಟ್‌ನ ತೀರ್ಪುಗಳನ್ನೂ ರಾಜ್ಯ ಸರ್ಕಾರ ಉಲ್ಲೇಖಿಸಿದೆ.
ಇದನ್ನೂ ಓದಿ: ಯುಪಿ ಚುನಾವಣೆ: 30 ಲಕ್ಷ ಕಾರ್ಯಕರ್ತರಿಗೆ ದೀಪಾವಳಿ ಉಡುಗೊರೆ ನೀಡಿದ ಬಿಜೆಪಿ
ಭಿವಾನಿ, ಚಾರ್ಖಿ ದಾದ್ರಿ, ಫರಿದಾಬಾದ್, ಗುರುಗ್ರಾಮ್, ಜಜ್ಜರ್, ಜಿಂದ್, ಕರ್ನಾಲ್, ಮಹೇಂದ್ರಗಢ, ನುಹ್, ಪಲ್ವಾಲ್, ಪಾಣಿಪತ್, ರೇವಾರಿ, ರೋಹ್ಟಕ್ ಮತ್ತು ಸೋನಿಪತ್ ಎಂಬ 14 ಜಿಲ್ಲೆಗಳಲ್ಲಿ ಪಟಾಕಿ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಲಾಗಿದೆ.
“ಗಾಳಿಯ ಗುಣಮಟ್ಟ ಮಧ್ಯಮ ಅಥವಾ ಕಡಿಮೆ ಇರುವ ನಗರಗಳು, ಪಟ್ಟಣ, ಪ್ರದೇಶಗಳಲ್ಲಿ ದೀಪಾವಳಿ ಮತ್ತು ಗುರುಪುರಬ್‌ನಂತಹ ಹಬ್ಬದ ದಿನದಲ್ಲಿ ಕಟ್ಟುನಿಟ್ಟಾಗಿ ರಾತ್ರಿ 8 ರಿಂದ ರಾತ್ರಿ 10 ರವರೆಗೆ ಮಾತ್ರ ಪಟಾಕಿ ಬಳಕೆ ಮಾಡಬಹುದು. ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಮಧ್ಯರಾತ್ರಿ 11:55 ರಿಂದ 12:30 ರವರೆಗೆ ಮಾತ್ರ ಪಟಾಕಿ ಬಳಕೆ ಇರುತ್ತದೆ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.
ಮದುವೆ ಮತ್ತು ಇತರ ಸಂದರ್ಭಗಳಲ್ಲಿ, ಹಸಿರು ಪಟಾಕಿಗಳನ್ನು ಮಾತ್ರ ಅನುಮತಿಸಲಾಗಿದೆ ಎಂದು ಸರ್ಕಾರ ಹೇಳಿದೆ.
ಪಟಾಕಿಗಳನ್ನು ಸಿಡಿಸಲು ಅನುಮತಿ ನೀಡುವ ಪ್ರದೇಶಗಳಲ್ಲಿ ಅದರ ಪರಿಣಾಮವನ್ನು ಕಡಿಮೆ ಮಾಡಲು ಗುಂಪು ಗುಂಪುಗಳಲ್ಲಿ ಪಟಾಕಿಗಳನ್ನು ಸಿಡಿಸಲು ಜನರನ್ನು ಪ್ರೋತ್ಸಾಹಿಸಲಾಗುವುದು ಎಂದು ರಾಜ್ಯ ಸರ್ಕಾರ ಹೇಳಿದೆ.
ನೆರೆಯ ದೆಹಲಿಯಲ್ಲಿಯೂ ದೀಪಾವಖೆ ಸಮಯದಲ್ಲಿ ಪಟಾಕಿ ಬಳಕೆಯಿಂದ ಅಪಾಯಕಾರಿ ವಾಯು ಮಾಲಿನ್ಯದ ಕಳವಳ ವ್ಯಕ್ತಪಡಿಸಿರುವ ದೆಹಲಿ ಸರ್ಕಾರ ಕಲೆದ ತಿಂಗಳು ಪಟಾಕಿಗಳ ಸಂಗ್ರಹಣೆ, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿದೆ.
ಇದನ್ನೂ ಓದಿ: ದೀಪಾವಳಿ: ದೇವಾಲಯಗಳಾದ್ಯಂತ ‘ಗೋ ಪೂಜೆ’ ಮಾಡಲು ಆದೇಶಿಸಿದ ರಾಜ್ಯ ಸರ್ಕಾರ


