ವಿವಾದಿತ ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರನ್ನು ಮತ್ತೊಮ್ಮೆ ಬೆಂಬಲಿಸಿರುವ ಮೇಘಾಲಯ ರಾಜ್ಯಪಾಲ ಸತ್ಯಪಾಲ್ ಮಲಿಕ್, ಕರ್ನಾಲ್‌ನಲ್ಲಿ ಹರಿಯಾಣ ಸರ್ಕಾರ ನಡೆಸಿರುವ ಕ್ರೂರ ಲಾಠಿಚಾರ್ಜ್‌ಗೆ ಹರಿಯಾಣ ಸಿಎಂ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.
ಮತ್ತೊಮ್ಮೆ ಆಡಳಿತಾರೂ ಬಿಜೆಪಿಯನ್ನು ಟೀಕಿಸಿರುವ ಸತ್ಯಪಾಲ್ ಮಲಿಕ್, ರೈತರ ತಲೆ ಒಡೆಯಲು ಆದೇಶ ನೀಡಿದ ಅಧಿಕಾರಿಯನ್ನು ತಕ್ಷಣ ವಜಾ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಶನಿವಾರ ಕರ್ನಾಲ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಪೊಲೀಸರು ಕ್ರೂರವಾಗಿ ಥಳಿಸಿದ್ದರು. ಇದರಲ್ಲಿ 10 ಜನರು ಗಾಯಗೊಂಡಿದ್ದರು ಎಂದು ವರದಿಯಾಗಿದೆ.
ಶನಿವಾರದಂದು ಹರಿಯಾಣದ ಕರ್ನಲ್ ಬಳಿ ಪ್ರತಿಭಟನೆ ನಡೆಸುತ್ತಿದ್ದ ರೈತರ ತಲೆ ಬುರುಡೆ ಹೊಡೆಯಿರಿ ಎಂದು ಆದೇಶ ನೀಡಿದ್ದ ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಆಗಿರುವ ಆಯುಷ್ ಸಿನ್ಹಾ ಅವರ ವಿಡಿಯೋ ವೈರಲ್ ಆದ ಬಳಿಕ ವಿರೋಧ ಪಕ್ಷಗಳು, ಸಾಮಾಜಿಕ ಕಾರ್ಯಕರ್ತರು ತೀವ್ರ ಪ್ರತಿಭಟನೆ ನಡೆಸಿದ್ದಾರೆ.
ಇದನ್ನೂ ಓದಿ: ರೈತರ ಮೇಲೆ ಪೊಲೀಸರ ಹಲ್ಲೆ: ಆಯುಷ್ ಸಿನ್ಹಾ ಸರ್ಕಾರಿ ತಾಲಿಬಾನ್ ಕಮಾಂಡರ್- ರಾಕೇಶ್ ಟಿಕಾಯತ್ ಕಿಡಿ
“ಮನೋಹರ್ ಲಾಲ್ ಖಟ್ಟರ್ ರೈತರ ಕ್ಷಮೆ ಕೇಳಬೇಕು … ಹರಿಯಾಣ ಮುಖ್ಯಮಂತ್ರಿ ರೈತರ ಮೇಲೆ ಲಾಠಿ ಪ್ರಹಾರ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರಕ್ಕೆ ಪೊಲೀಸರನ್ನು ಬಳಸಬೇಡಿ ಎಂದು ನಾನು ಉನ್ನತ ನಾಯಕತ್ವಕ್ಕೆ ಹೇಳಿದ್ದೇನೆ” ಎಂದು ಮಲಿಕ್ ಹೇಳಿದ್ದಾರೆ. ಜೊತೆಗೆ ತನ್ನನ್ನು ತಾನು ರೈತರ ಮಗ ಎಂದು ಕರೆದುಕೊಂಡಿದ್ದಾರೆ.
“ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ ಆಯುಷ್ ಸಿನ್ಹಾ (ಎಸ್‌ಡಿಎಂ) ಅವರನ್ನು ತಕ್ಷಣವೇ ವಜಾ ಮಾಡಬೇಕು. ಅವರು ಎಸ್‌ಡಿಎಂ ಹುದ್ದೆಗೆ ಅರ್ಹರಲ್ಲ. ಆದರೆ, ಸರ್ಕಾರವು ಅವರನ್ನು ಬೆಂಬಲಿಸುತ್ತಿದೆ” ಎಂದು ಹೇಳಿದ್ದಾರೆ.
ಈ ಪ್ರತಿಭಟನೆಗಳಲ್ಲಿ ಸಾವನ್ನಪ್ಪಿದ ರೈತರ ಕುಟುಂಬಗಳಿಗೆ ಸರ್ಕಾರವು ಯಾವುದೇ ಸಾಂತ್ವನವನ್ನು ನೀಡಿಲ್ಲ. ಇದರಿಂದ ನಾನು ತುಂಬಾ ನಿರಾಶೆಗೊಂಡಿದ್ದೇನೆ ಎಂದು ಮೇಘಾಲಯ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ಎನ್‌ಡಿಟಿವಿಗೆ ತಿಳಿಸಿದ್ದಾರೆ.
“ವಿವಾದಿತ ಕೃಷಿ ಕಾನೂನುಗಳ ವಿರುದ್ಧದ ಪ್ರತಿಭಟನೆಗಳಲ್ಲಿ 600 ರೈತರು ಸಾವನ್ನಪ್ಪಿದ್ದಾರೆ. ಆದರೆ ಸರ್ಕಾರದಿಂದ ಯಾರೂ ಸಮಾಧಾನದ ಮಾತನ್ನೂ ಹೇಳಲಿಲ್ಲ” ಎಂದಿದ್ದಾರೆ.
ತಮ್ಮ ಹೇಳಿಕೆ ವಿರುದ್ಧ ಸರ್ಕಾರ ಏನು ಪ್ರತಿಕ್ರಿಯೆ ನೀಡಿದರೂ ನಾನು ಹೆದರುವುದಿಲ್ಲ ಎಂದಿದ್ದಾರೆ. “ನಾನು ಈ ರಾಜ್ಯಪಾಲರ ಹುದ್ದೆಯನ್ನು ಪ್ರೀತಿಸುತ್ತಿಲ್ಲ. ನಾನು ಏನೇ ಹೇಳಿದರೂ ನನ್ನ ಮನಸ್ಸಿನಿಂದ ಮಾತನಾಡುತ್ತೇನೆ. ನಾನು ರೈತರ ಬಳಿಗೆ ಮರಳಬೇಕು ಎಂದು ಅನಿಸುತ್ತಿದೆ” ಎಂದಿದ್ದಾರೆ.
ಈ ಮೊದಲು ಕೂಡ ರೈತ ಹೋರಾಟವನ್ನು ಬೆಂಬಲಿಸಿದ್ದ ಇವರು, “ಈ ರೈತ ಚಳುವಳಿ ಹೀಗೇ ಮುಂದುವರೆದರೆ, ಮುಂದೆ ಪಶ್ಚಿಮ ಯುಪಿ, ರಾಜಸ್ಥಾನ ಮತ್ತು ಹರಿಯಾಣದಲ್ಲಿ ಬಿಜೆಪಿ ಸೋಲುತ್ತದೆ” ಎಂದು ಹೇಳಿದ್ದರು.
ಮೇಘಾಲಯ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ಜಮ್ಮು ಮತ್ತು ಕಾಶ್ಮೀರ, ಗೋವಾ, ಬಿಹಾರ ಮತ್ತು ಒಡಿಶಾದ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ‘ರೈತರ ತಲೆ ಒಡೆಯಿರಿ’ ಎಂದು ಆದೇಶಿಸಿದ ಅಧಿಕಾರಿಯ ವಿರುದ್ಧ ಕ್ರಮ: ಹರಿಯಾಣ ಡಿಸಿಎಂ ಹೇಳಿಕೆ


