ರೈತರು ತಮ್ಮ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಖಾತರಿಪಡಿಸುವ ಕಾನೂನು, ಪಿಂಚಣಿ ಮತ್ತು ವಿಮಾ ಸೌಲಭ್ಯಗಳು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಿಲ್ಲಿ ಚಲೋ ಪ್ರತಿಭಟನೆ ಹಮ್ಮಿಕೊಂಡಿದ್ದು, ಬಿಜೆಪಿ ಆಡಳಿತದ ಹರ್ಯಾಣದಲ್ಲಿ ಪೊಲೀಸರು ಶಂಭು ಗಡಿಯಲ್ಲಿ ಪ್ರತಿಭಟನೆಗೆ ತೆರಳುತ್ತಿದ್ದ ರೈತರ ಮೇಲೆ ಅಶ್ರುವಾಯು ಪ್ರಯೋಗಿಸಿ ರೈತರ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಹರ್ಯಾಣ ಪೊಲೀಸರು ಹಲವಾರು ಪ್ರತಿಭಟನಾಕಾರರನ್ನು ಬಂಧಿಸಿದ್ದು, ಗಡಿಯಲ್ಲಿ ರೈತರ ಟ್ರಕ್‌ಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ರೈತ ಸಂಘದ ಮುಖಂಡರು ಹಾಗೂ ಕೇಂದ್ರ ಸಚಿವರಾದ ಪಿಯೂಷ್ ಗೋಯಲ್ ಮತ್ತು ಅರ್ಜುನ್ ಮುಂಡಾ ನಡೆಸಿದ ಮಾತುಕತೆ ಯಾವುದೇ ಫಲ ನೀಡದ ಹಿನ್ನೆಲೆಯಲ್ಲಿ ರೈತರು ದೆಹಲಿ ಚಲೋ ಯಾತ್ರೆಯನ್ನು ಮುಂದುವರಿಸಿದ್ದಾರೆ. ಬವಾನಾ ಕ್ರೀಡಾಂಗಣವನ್ನು ತಾತ್ಕಾಲಿಕ ಕಾರಾಗೃಹವನ್ನಾಗಿ ಪರಿವರ್ತಿಸುವಂತೆ ದೆಹಲಿ ಸರ್ಕಾರಕ್ಕೆ ಕೇಂದ್ರ ಸರ್ಕಾರ ಮನವಿ ಮಾಡಿತ್ತು. ಮನವಿಯನ್ನು ತಿರಸ್ಕರಿಸಿದ ದೆಹಲಿ ಸಚಿವ ಕೈಲಾಶ್ ಗಹ್ಲೋಟ್, ರೈತರ ಬೇಡಿಕೆಗಳು ನಿಜವಾದವು ಮತ್ತು ಶಾಂತಿಯುತ ಪ್ರತಿಭಟನೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಸಾಂವಿಧಾನಿಕ ಹಕ್ಕು. ಕೇಂದ್ರ ಸರ್ಕಾರ ವಾಸ್ತವವಾಗಿ ಅವರನ್ನು ಮಾತುಕತೆಗೆ ಆಹ್ವಾನಿಸಬೇಕು ಮತ್ತು ಅವರ ನಿಜವಾದ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಹಿಡಿಯಲು ಪ್ರಯತ್ನಿಸಬೇಕು. ನಾಡಿನ ರೈತರು ನಮ್ಮ ಅನ್ನದಾತರು, ಅವರನ್ನು ಬಂಧಿಸಿ ಈ ರೀತಿ ನಡೆಸಿಕೊಳ್ಳುವುದು ಅವರ ಗಾಯಕ್ಕೆ ಉಪ್ಪು ಸವರಿದಂತಾಗುತ್ತದೆ. ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ನಾವು ಬೆಂಬಲಿಸಲು ಸಾಧ್ಯವಿಲ್ಲ. ಹೀಗಾಗಿ ಕ್ರೀಡಾಂಗಣವನ್ನು ಜೈಲಾಗಿ ಪರಿವರ್ತಿಸಲು ಒಪ್ಪಿಗೆ ನೀಡಲಾಗದು ಎಂದು ಹೇಳಿದ್ದಾರೆ.
ಹರ್ಯಾಣ ಮತ್ತು ಉತ್ತರಪ್ರದೇಶದ ಗಡಿ ಪ್ರದೇಶಗಳಲ್ಲಿ ಭಾರಿ ಟ್ರಾಫಿಕ್ ಜಾಮ್ ಕಂಡುಬಂದಿದ್ದು, ಪೊಲೀಸರು ಮತ್ತು ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ. ಬ್ಯಾರಿಕೇಡ್‌ಗಳು, ಕಾಂಕ್ರೀಟ್ ಬ್ಲಾಕ್‌ಗಳು, ಕಬ್ಬಿಣದ ಮೊಳೆಗಳನ್ನು ಹಾಕಿ ರೈತರು ರಾಜಧಾನಿಗೆ ಪ್ರವೇಶಿಸದಂತೆ ನಿರ್ಬಂಧವನ್ನು ವಿಧಿಸಲಾಗಿದೆ. ದೆಹಲಿ ಪೊಲೀಸರು ಸೋಮವಾರ ನಗರದಾದ್ಯಂತ ಸೆಕ್ಷನ್ 144ನ್ನು ಜಾರಿಗೊಳಿಸಿದ್ದಾರೆ ಮತ್ತು ಮುನ್ನೆಚ್ಚರಿಕೆ ಕ್ರಮವಾಗಿ ಗಡಿಗಳನ್ನು ಭದ್ರಪಡಿಸಿದ್ದಾರೆ. ಹೆಚ್ಚುವರಿಯಾಗಿ ಯಾವುದೇ ಚಟುವಟಿಕೆಗಳ ಬಗ್ಗೆ ನಿಗಾ ಇಡಲು ಡ್ರೋನ್‌ಗಳು ಮತ್ತು ಸಿಸಿಟಿವಿ ಕ್ಯಾಮೆರಾಗಳಂತಹ ಕಣ್ಗಾವಲು ತಂತ್ರಜ್ಞಾನಗಳನ್ನು ಬಳಸಿಕೊಳ್ಳಲಾಗುತ್ತಿದೆ.
ರಾಜೀವ್ ಚೌಕ್, ಮಂಡಿ ಹೌಸ್, ಸೆಂಟ್ರಲ್ ಸೆಕ್ರೆಟರಿಯೇಟ್, ಪಟೇಲ್ ಚೌಕ್, ಉದ್ಯೋಗ ಭವನ, ಜನಪಥ್ ಮತ್ತು ಬರಾಖಂಬಾ ರಸ್ತೆಯ ಮೆಟ್ರೋ ನಿಲ್ದಾಣಗಳ ಕೆಲವು ಗೇಟ್‌ಗಳನ್ನು ಮುಚ್ಚಲಾಗಿದೆ. ಬೃಹತ್ ಭದ್ರತೆಗೆ ಬೆದರದ ರೈತರು ದೆಹಲಿಯತ್ತ ಸಾಗಿದ್ದಾರೆ. ರಾಜ್ಯ ಸರ್ಕಾರಗಳು ದೆಹಲಿಗೆ ತೆರಳದಂತೆ ತಡೆದರೆ ಅನಿರ್ದಿಷ್ಟಾವಧಿವರೆಗೆ ಧರಣಿ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ.
ಪಂಜಾಬ್ ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ ಪ್ರಧಾನ ಕಾರ್ಯದರ್ಶಿ ಸರ್ವಾನ್ ಸಿಂಗ್ ಪಂಧೇರ್ ಅವರು ರೈತರೊಂದಿಗೆ ಚರ್ಚೆಗೆ ಸರ್ಕಾರ ಏಕೆ ಸಿದ್ಧವಾಗಿಲ್ಲ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಬೇಕು. ನಾವು ಭಾರತದ ಜನರಿಗೆ ಹೇಳಲು ಬಯಸುತ್ತೇವೆ, ನಾವು ಸರ್ಕಾರದ ವಿರುದ್ಧವಲ್ಲ, ನಾವು ಪರಿಹಾರವನ್ನು ಕಂಡುಹಿಡಿಯಲು ಪ್ರಯತ್ನಿಸಿದ್ದೇವೆ. ಅವರು ಪೊಲೀಸರನ್ನು ಕಳುಹಿಸುತ್ತಿದ್ದಾರೆ ಮತ್ತು ಹರಿಯಾಣದ ಪ್ರತಿಯೊಂದು ಹಳ್ಳಿಗಳಲ್ಲಿ ಜಲಫಿರಂಗಿಗಳನ್ನು ಬಳಸುತ್ತಿದ್ದಾರೆ. ಹರ್ಯಾಣದಲ್ಲಿ ರೈತರಿಗೆ ಹಿಂಸೆ ನೀಡುತ್ತಿದ್ದಾರೆ. ಈ ಎರಡೂ ರಾಜ್ಯಗಳು ಗಡಿಯನ್ನು ಬಂದ್ ಮಾಡಿರುವ ರೀತಿ ನೋಡಿದರೆ ಅದು ಭಾರತದ ಭಾಗವಾಗಿಲ್ಲದಂತೆ ತೋರುತ್ತದೆ ಎಂದು ಹೇಳಿದ್ದಾರೆ.
#WATCH | Police fire tear gas to disperse protesting farmers at Punjab-Haryana Shambhu border. pic.twitter.com/LNpKPqdTR4
— ANI (@ANI) February 13, 2024
VIDEO | Farmers' 'Delhi Chalo' march: Farmers detained at Delhi-Shambhu border.#FarmersProtests pic.twitter.com/EKsxSHnbl5
— Press Trust of India (@PTI_News) February 13, 2024
ಇದನ್ನು ಓದಿ: 17ನೇ ಲೋಕಸಭೆ: ಸಂಸತ್ತಿನಲ್ಲಿ ಒಂದೇ ಒಂದು ಮಾತನ್ನಾಡದ ಕರ್ನಾಟಕದ ನಾಲ್ವರು ಸೇರಿ 6 ಮಂದಿ ಬಿಜೆಪಿ ಸಂಸದರು!


