HomeದಿಟನಾಗರFact Check: 'ದಿಲ್ಲಿ ಚಲೋ'ಗೆ ರೈತರು ಒಂದೂವರೆ ಕೋಟಿ ರೂ. ಬೆಲೆಯ ಜೀಪ್‌ನಲ್ಲಿ ಬಂದಿದ್ದಾರೆ ಎಂಬುವುದು...

Fact Check: ‘ದಿಲ್ಲಿ ಚಲೋ’ಗೆ ರೈತರು ಒಂದೂವರೆ ಕೋಟಿ ರೂ. ಬೆಲೆಯ ಜೀಪ್‌ನಲ್ಲಿ ಬಂದಿದ್ದಾರೆ ಎಂಬುವುದು ಸುಳ್ಳು

- Advertisement -
- Advertisement -

ಡಿಸೆಂಬರ್ 2020ರಲ್ಲಿ ಕೇಂದ್ರದ ಕೃಷಿ ಕಾನೂನುಗಳ ವಿರುದ್ದ ರೈತರು ಹೋರಾಟ ನಡೆಸುತ್ತಿದ್ದ ಸಂದರ್ಭ ಮರ್ಸಿಡಿಸ್ ಬೆಂಝ್ ಜೀಪಿನ ಮೇಲೆ ಸಿಕ್ಕ್ ಸಮುದಾಯದ ಕೆಲ ವ್ಯಕ್ತಿಗಳು ಕುಳಿತು ಪತ್ರಿಕೆ ಓದುತ್ತಿದ್ದ ಫೋಟೋ ಒಂದು ಭಾರೀ ವೈರಲ್ ಆಗಿತ್ತು.

ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಆ ಫೋಟೋ ಹಂಚಿಕೊಂಡು ‘ದೆಹಲಿಯ ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಬಡ ರೈತರ ಜೀಪ್ ನೋಡಿ, 1.5 ಕೋಟಿ ರೂಪಾಯಿ ಬೆಲೆಯದ್ದು’ ಎಂದು ಬರೆದುಕೊಂಡಿದ್ದರು. ಈ ಮೂಲಕ ದೆಹಲಿ ಗಡಿಯಲ್ಲಿ ಹೋರಾಟ ನಡೆಸುತ್ತಿರುವವರು ರೈತರೇ ಅಲ್ಲ ಎಂದು ಪ್ರತಿಪಾದಿಸಿದ್ದರು.

ಅಂದು ವೈರಲ್ ಫೋಟೋವನ್ನು ಎಕ್ಸ್ ಬಳಕೆದಾರ @nishant_india ಅವರು ಹಂಚಿಕೊಂಡಿದ್ದರು. ಇವರನ್ನು ಪ್ರಧಾನಿ ನರೇಂದ್ರ ಮೋದಿ ಎಕ್ಸ್‌ನಲ್ಲಿ ಫಾಲೋ ಮಾಡುತ್ತಿದ್ದಾರೆ. ರಾಜಾ ರಾಮಮೋಹನ್ ರಾಯ್ ಲೈಬ್ರರಿ ಫೌಂಡೇಶನ್ ಅಧ್ಯಕ್ಷ ಕಾಂಚನ್ ಗುಪ್ತಾ (@KanchanGupta) ಅಂಕಣಕಾರ ಕಾರ್ತಿಕೇಯ ತನ್ನಾ(@KartikeyaTanna) ಕೂಡ ಫೊಟೋ ಶೇರ್ ಮಾಡಿದ್ದರು.

ಈಗ ಮತ್ತೆ ವಿವಿಧ ರಾಜ್ಯಗಳ ರೈತರು ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ‘ದಿಲ್ಲಿ ಚಲೋ’ ಹಮ್ಮಿಕೊಂಡಿದ್ದಾರೆ. ಹಾಗಾಗಿ, ಅದೇ ಹಳೆಯ ಫೋಟೋ ಮತ್ತೆ ವೈರಲ್ ಆಗಿದೆ. ಈ ಬಾರಿಯೂ 1.5 ಕೋಟಿ ಬೆಲೆಯ ಮರ್ಸಿಡಿಸ್ ಬೆಂಝ್ ಜೀಪ್ ರೈತರದ್ದು ಎಂದು ಹೇಳಲಾಗಿದೆ.

ಫ್ಯಾಕ್ಟ್‌ ಚೆಕ್ : ರೈತ ಹೋರಾಟದ ಸಂದರ್ಭದಲ್ಲೇ ಮತ್ತೊಮ್ಮೆ ಮುನ್ನೆಲೆಗೆ ಬಂದಿರುವ ಹಳೆಯ ಫೋಟೋದ ಬಗ್ಗೆ ಖ್ಯಾತ ಫ್ಯಾಕ್ಟ್‌ ಚೆಕ್ ವೆಬ್‌ಸೈಟ್‌ ಆಲ್ಟ್‌ ನ್ಯೂಸ್‌ 2020ರಲ್ಲೇ ಸತ್ಯಾಸತ್ಯತೆ ಪರಿಶೀಲನೆ ನಡೆಸಿತ್ತು.

ಆಲ್ಟ್ ನ್ಯೂಸ್‌ ಪ್ರಕಾರ, ಈ ಜೀಪ್ ಪಂಜಾಬ್‌ನ ಉದ್ಯಮಿ ಮನ್‌ಪ್ರೀತ್ ಸಿಂಗ್ ಎಂಬವರಿಗೆ ಸೇರಿದ್ದಾಗಿದೆ. ವಾಹನದ ನೋಂದಣಿ ಸಂಖ್ಯೆ PB 12Z 8282 ಎಂದಾಗಿದ್ದು, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಪೋರ್ಟಲ್ ‘ವಾಹನ್‌’ನಲ್ಲಿ ಜೀಪ್‌ನ RTO ವಿವರಗಳನ್ನು ಪರಿಶೀಲಿಸಿದಾಗ, ‘ಈ ವಾಹನವು ಫೋರ್ಸ್ ಮೋಟಾರ್ಸ್‌ನ ಎಸ್‌ಯುವಿ ಗೂರ್ಖಾ ಆಗಿದೆ. ಫೋರ್ಸ್ ಗೂರ್ಖಾ ವೆಬ್‌ಸೈಟ್ ಪ್ರಕಾರ, ಕಾರಿನ ಆವೃತ್ತಿಯು 2.6/4×2 ಆಗಿದ್ದು, ಇವುಗಳು ಎರಡು ಮಾಡೆಲ್‌ಗಳನ್ನು ಹೊಂದಿವೆ. ಇದರ ಬೆಲೆ 9.75 ರಿಂದ 10 ಲಕ್ಷ ರೂ. ಆಗಿದೆ.

2017 ರಲ್ಲಿ, CNN News18 ಈ ಜೀಪ್ ಕುರಿತು ವರದಿ ಮಾಡಿದ್ದು, ‘ಕಲರ್ ಗ್ಲೋ ಕೇರಳ ಕಾರು ಮೋಡಿಫೈಯರ್’ ಎಂಬ ಸಂಸ್ಥೆ ಫೋರ್ಸ್ ಗೂರ್ಖಾ ಎಸ್‌ಯುವಿ ಕಾರನ್ನು ಥೇಟ್ ಮರ್ಸಿಡಿಸ್ ಜಿ ವ್ಯಾಗನ್‌ ಜೀಪ್ ರೀತಿ ಕಾಣುವಂತೆ ಮಾರ್ಪಡಿಸಿದೆ. ಇದರ ಮಾರ್ಪಾಡು ವೆಚ್ಚ ಆ ಸಮಯದಲ್ಲಿ 8.5 ಲಕ್ಷ ರೂ. ಎಂದು CNN News 18 ಹೇಳಿತ್ತು.

CNN News18 ಸುದ್ದಿ ಲಿಂಕ್ ಇಲ್ಲಿದೆ 

ಮಾರ್ಪಾಡು ಮಾಡಲಾದ ಕಾರಿನ ಮಾಲೀಕ ಪಂಜಾಬ್‌ನ ಆನಂದಪುರದ ನಿವಾಸಿ ಮನ್‌ಪ್ರೀತ್ ಸಿಂಗ್ ಅವರೊಂದಿಗೆ ನಾವು ಮಾತನಾಡಿದ್ದು ಅವರು, ನಾನೋರ್ವ ಉದ್ಯಮಿ. ನನ್ನ ಕುಟುಂಬ ಸದಸ್ಯರು ಕೃಷಿಕರು. ಕೃಷಿ ಕಾನೂನುಗಳ ವಿರುದ್ದ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸುವ ಸಲುವಾಗಿ ಡಿಸೆಂಬರ್ 5 ರಂದು ನಾನು ನನ್ನ ಜೀಪ್‌ನೊಂದಿಗೆ ಹೋರಾಟದ ಸ್ಥಳಕ್ಕೆ ಭೇಟಿ ನೀಡಿದ್ದೆ. ರೈತರನ್ನು ಬೆಂಬಲಿಸಲು ಎಲ್ಲಾ ವರ್ಗಗಳ ಜನರು ಗಡಿಯಲ್ಲಿದ್ದಾರೆ. ವೈರಲ್ ಆಗಿರುವ ಫೋಟೋ ಕಾರು ನನ್ನದು. ಇದು ಮರ್ಸಿಡಿಸ್ ಬೆಂಝ್-ಜಿ ವ್ಯಾಗನ್‌ನ ಪ್ರತಿರೂಪವಾಗಿದೆ. ಈ ವಿಚಾರದಲ್ಲಿ ನನಗೆ ಮುಚ್ಚಿಡಲು ಏನೂ ಇಲ್ಲ. ನಾನು ಸಾಮಾನ್ಯ ತೆರಿಗೆದಾರ. ರೈತರ ಪ್ರತಿಭಟನೆಯನ್ನು ಕುರಿತು ತಪ್ಪು ಕಲ್ಪನೆ ಮೂಡಿಸಲು ನನ್ನ ಕಾರಿನ ಫೋಟೋವನ್ನು ಬಳಸಿಕೊಳ್ಳಲಾಗಿದೆ. ಇದು ತುಂಬಾ ಬೇಸರದ ಸಂಗತಿ. ನನ್ನ ಜೀಪ್‌ನ ವೈರಲ್ ಫೋಟೋ ಮುಂದಿಟ್ಟುಕೊಂಡು ನಡೆಯುತ್ತಿರುವ ಆನ್‌ಲೈನ್ ದಾಳಿಗಳು ರೈತರ ಪ್ರತಿಭಟನೆಯನ್ನು ಬೆಂಬಲಿಸುವ ನನ್ನ ಉತ್ಸಾಹದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದರು ಎಂದು ಆಲ್ಟ್ ನ್ಯೂಸ್‌ 2020ರಲ್ಲೇ ತಿಳಿಸಿತ್ತು.

ಒಟ್ಟಿನಲ್ಲಿ ಹೋರಾಟ ನಿರತ ರೈತರು ಕೋಟಿ ಬೆಲೆಯ ಮರ್ಸಿಡಿಸ್ ಬೆಂಝ್ ಜೀಪ್ ಹೊಂದಿದ್ದಾರೆ ಎಂಬುವುದು ಸುಳ್ಳು ಪ್ರತಿಪಾದನೆಯಾಗಿದೆ. ಅಸಲಿಗೆ ವೈರಲ್‌ ಫೋಟೋದಲ್ಲಿರುವುದಯ ಬೆಂಝ್ ಜೀಪೇ ಅಲ್ಲ. ಅದು ಫೋರ್ಸ್ ಗೂರ್ಖಾ ಎಸ್‌ಯುವಿ ಕಾರನ್ನು ಮಾರ್ಪಡಿಸಿ ಬೆಂಝ್ ರೀತಿ ಮಾಡಿರುವುದಾಗಿದೆ. ಸುಳ್ಳು ಸುದ್ದಿ, ಫ್ಯಾಕ್ಟ್‌ ಚೆಕ್ ಇವೆಲ್ಲದರ ಹೊರತಾಗಿಯೂ ನೋಡುವುದಾದರೆ, ರೈತರು ಒಂದೂವರೆ ಕೋಟಿ ಬೆಲೆಯ ಬೆಂಝ್ ಜೀಪ್ ಹೊಂದುವುದು ಅಪರಾಧವೇನಲ್ಲ. ಲಕ್ಷಾಂತರ ರೂಪಾಯಿ ಸುರಿದು ಕೃಷಿ ಮಾಡುವ ರೈತರು ದುಬಾರಿ ಬೆಲೆಯ ಜೀಪ್ ಕೊಳ್ಳಲು ಸಾಮಾರ್ಥ್ಯ ಇಲ್ಲದವರೂ ಅಲ್ಲ. ಜೀಪ್‌ ಹೊಂದಿದವರು ಹೋರಾಟ ಮಾಡಬಾರದೆಂದೂ ಇಲ್ಲ. ಅಲ್ಲದೆ, ರೈತರೆಂದರೆ ಬಡವರು ಮಾತ್ರ ಎಂಬುವುದು ಒಂದು ತಪ್ಪು ಕಲ್ಪನೆಯಾಗಿದೆ.

ಇದನ್ನೂ ಓದಿ : Fact Check: ರಾಹುಲ್ ಗಾಂಧಿ ರಹಸ್ಯವಾಗಿ ಮದುವೆಯಾಗಿದ್ದಾರೆ ಎಂಬುದು ಸುಳ್ಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...