ಉತ್ತರ ಪ್ರದೇಶದ ಹತ್ರಾಸ್ ಮತ್ತು ಬಲರಾಂಪುರ್ ಜಿಲ್ಲೆಗಳಲ್ಲಿನ ಅತ್ಯಾಚಾರ ಪ್ರಕರಣಗಳ ಬಗ್ಗೆ ವಿಶ್ವಸಂಸ್ಥೆಯ ಅಧಿಕಾರಿಯೊಬ್ಬರು ನೀಡಿದ ಹೇಳಿಕೆಯನ್ನು ಭಾರತದ ವಿದೇಶಾಂಗ ಸಚಿವಾಲಯ ಟೀಕಿಸಿದೆ. ಪ್ರಕರಣಗಳ ಕುರಿತು ನಡೆಯುತ್ತಿರುವ ತನಿಖೆಯ ಮಧ್ಯೆ ಬಾಹ್ಯ ಸಂಸ್ಥೆಯ ಅನಗತ್ಯ ಪ್ರತಿಕ್ರಿಯೆಗಳನ್ನು ತಪ್ಪಿಸಬೇಕು ಎಂದು ಹೇಳಿದೆ.
ಭಾರತದಲ್ಲಿ ಮಹಿಳೆಯರ ಮೇಲಿನ ಇತ್ತೀಚಿನ ಹಿಂಸಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಯುಎನ್ ರೆಸಿಡೆಂಟ್ ಕೋಆರ್ಡಿನೇಟರ್ ಹೇಳಿಕೆಯನ್ನು ಭಾರತ ‘ಅನಗತ್ಯ’ ಎಂದು ಹೇಳಿದೆ.
ಯುಎನ್ ರೆಸಿಡೆಂಟ್ ಕೋಆರ್ಡಿನೇಟರ್ ರೆನಾಟಾ ಲೋಕ್-ಡೆಸ್ಸಾಲಿಯನ್ ಅವರು ಭಾರತದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ಹೇಳಿಕೆಗೆ ಪ್ರತಿಕ್ರಿಯೆಯಾಗಿ ವಿದೇಶಾಂಗ ಸಚಿವಾಲಯದಿಂದ ಈ ಅಭಿಪ್ರಾಯ ಬಂದಿದೆ.
ಲೋಕ್-ಡೆಸ್ಸಾಲಿಯನ್ ಅವರು ಹತ್ರಾಸ್ ಮತ್ತು ಬಲರಾಂಪುರ್ ಪ್ರಕರಣಗಳು ಉಲ್ಲೇಖಿಸಿ, “ಹಿಂದುಳಿದ ಸಾಮಾಜಿಕ ಗುಂಪುಗಳ ಮಹಿಳೆಯರು ಲಿಂಗ-ಆಧಾರಿತ ಹಿಂಸಾಚಾರದ ಹೆಚ್ಚು ಅಪಾಯವನ್ನು ಹೊಂದಿದ್ದಾರೆ ಎಂಬುದನ್ನು ನೆನಪಿಸುತ್ತದೆ” ಎಂದು ಹೇಳಿದ್ದನ್ನು ಪಿಟಿಐ ವರದಿ ಮಾಡಿತ್ತು.
ಇದನ್ನೂ ಓದಿ: ಮನಿಷಾಳನ್ನು ಸುಟ್ಟ ಜಾಗದಿಂದ ಒಂದು ಹಿಡಿ ಮಣ್ಣು ತಂದು ಸ್ಮಾರಕ ನಿರ್ಮಿಸೋಣ: ದೇವನೂರು ಮಹಾದೇವ
’ಮಹಿಳೆಯರ ಮೇಲಿನ ಇತ್ತೀಚಿನ ಕೆಲವು ಹಿಂಸಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಯುಎನ್ ರೆಸಿಡೆಂಟ್ ಕೋಆರ್ಡಿನೇಟರ್ ಕೆಲವು ಅನಗತ್ಯ ಹೇಳಿಕೆಗಳನ್ನು ನೀಡಿದ್ದಾರೆ” ಎಂದು ವಿದೇಶಾಂಗ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ. “ಭಾರತದ ಸರ್ಕಾರ ಈ ಪ್ರಕರಣಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ ಎಂದು ಯುಎನ್ ರೆಸಿಡೆಂಟ್ ಕೋಆರ್ಡಿನೇಟರ್ ತಿಳಿದಿರಬೇಕು’ ಎಂದು ವಿದೇಶಾಂಗ ಸಚಿವಾಲಯದ (ಎಂಇಎ) ವಕ್ತಾರ ಅನುರಾಗ್ ಶ್ರೀವಾಸ್ತವ ಟ್ವೀಟ್ ಮಾಡಿದ್ದಾರೆ.
Our response to the UN Resident Coordinator’s statement (of 4 October 2020): pic.twitter.com/S7zboX3Esm
— Anurag Srivastava (@MEAIndia) October 5, 2020
ಪ್ರಕರಣಗಳ ಕುರಿತು ವಿಚಾರಣೆ ನಡೆಯುತ್ತಿರುವುದರಿಂದ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸುವುದನ್ನು ತಡೆಯುವಂತೆ ಭಾರತದ ವಿದೇಶಾಂಗ ಸಚಿವಾಲಯ ಬಾಹ್ಯ ಸಂಸ್ಥೆಗಳನ್ನು ಕೇಳಿದೆ.
“ತನಿಖಾ ಪ್ರಕ್ರಿಯೆಯು ಇನ್ನೂ ನಡೆಯುತ್ತಿರುವುದರಿಂದ, ಬಾಹ್ಯ ಏಜೆನ್ಸಿಯ ಯಾವುದೇ ಅನಗತ್ಯ ಕಾಮೆಂಟ್‌ಗಳನ್ನು ತಪ್ಪಿಸಬೇಕಾಗಿದೆ. ಭಾರತ ಸಂವಿಧಾನವು ಭಾರತದ ಎಲ್ಲ ನಾಗರಿಕರಿಗೆ ಸಮಾನತೆಯನ್ನು ಖಾತರಿಪಡಿಸುತ್ತದೆ. ಪ್ರಜಾಪ್ರಭುತ್ವ ರಾಷ್ಟ್ರವಾಗಿ ನಮ್ಮ ಸಮಾಜದ ಎಲ್ಲಾ ವರ್ಗದವರಿಗೆ ನ್ಯಾಯ ಒದಗಿಸುವ ಸಮಯ-ಪರೀಕ್ಷಿತ ದಾಖಲೆ ನಮ್ಮಲ್ಲಿದೆ” ಎಂದು ವಿದೇಶಾಂಗ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದೆ.
ಹತ್ರಾಸ್‌ನ ದಲಿತ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣವು ದೇಶದಲ್ಲಿ ಅಪಾರ ಆಕ್ರೋಶಕ್ಕೆ ನಾಂದಿ ಹಾಡಿತು, ದೇಶಾದ್ಯಂತ ತೀವ್ರ ಪ್ರತಿಭಟನೆಗಳು ನಡೆದಿವೆ, ಬಂಧಿತ ನಾಲ್ವರು ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಲಾಗುತ್ತಿದೆ.
ಹತ್ರಾಸ್ ಸಾಮೂಹಿಕ ಅತ್ಯಾಚಾರದ ಕೆಲವು ದಿನಗಳ ನಂತರ, ಉತ್ತರಪ್ರದೇಶದ ಬಲರಾಂಪುರ ಜಿಲ್ಲೆಯಲ್ಲಿ ಇಬ್ಬರು ಪುರುಷರಿಂದ ಅತ್ಯಾಚಾರಕ್ಕೊಳಗಾಗಿದ್ದ ಮತ್ತೊಬ್ಬ ದಲಿತ ಯುವತಿ ಸಾವನ್ನಪ್ಪಿದ್ದಳು.


