“ಹತ್ರಾಸ್ ಅತ್ಯಾಚಾರ ಸಂತ್ರಸ್ತ ಯುವತಿಯನ್ನು ಏಮ್ಸ್‌ಗೆ ದಾಖಲಿಸಲು ಸೂಚಿಸಿದ್ದಾಗ್ಯೂ ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಗೆ ಯಾಕೆ ಸೇರಿಸದರೆಂದು ತಿಳಿಯುತ್ತಿಲ್ಲ” ಎಂದು ಜವಹರಲಾಲ್ ನೆಹರು ವೈದ್ಯಕೀಯ ಕಾಲೇಜು (JNMC) ಆಸ್ಪತ್ರೆಯ ಪ್ರಾಂಶುಪಾಲರು ಹೇಳಿದ್ದಾರೆ. ಸಾಮೂಹಿಕ ಅತ್ಯಾಚಾರಕ್ಕೊಳಗಾದ ನಂತರ, ಯುವತಿ JNMC ಆಸ್ಪತ್ರೆಯಲ್ಲಿ 2 ವಾರಕ್ಕಿಂತ ಹೆಚ್ಚುಕಾಲ ಚಿಕಿತ್ಸೆ ತೆಗೆದುಕೊಂಡಿದ್ದರು.
“ನಾವು ಏಮ್ಸ್‌ಗೆ ಸೂಚಿಸಿದಾಗ್ಯೂ, ಯುವತಿಯನ್ನು ಸಫ್ದರ್‌ಜಂಗ್ ಆಸ್ಪತ್ರೆಗೆ ಯಾಕೆ ಸೇರಿಸಲಾಯಿತು ಎಂಬುದನ್ನು ನಾವು ವಿವರಿಸುವ ಸ್ಥಿತಿಯಲ್ಲಿಲ್ಲ” ಎಂದು ಪ್ರೊ.ಶಾಹಿದ್ ಸಿದ್ದಿಕಿ ಹೇಳಿದ್ದಾರೆ.
“ಸೆಪ್ಟೆಂಬರ್ 28 ರ ರಾತ್ರಿ, ಸಂತ್ರಸ್ತೆಯ ಕುಟುಂಬವು ಅವಳನ್ನು ಸ್ಥಳಾಂತರಿಸಲು ಅನುಮತಿ ಕೋರಿತು. ಹಾಗಾಗಿ ನಾವು ಸ್ವಯಿಚ್ಚೆಯಿಂದ ಆಕೆಯನ್ನು ಏಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲು ಸೂಚಿಸಿದ್ದೆವು” ಎಂದು ಅವರು ಹೇಳಿದರು.
ಇದನ್ನೂ ಓದಿ: ಉತ್ತರ ಪ್ರದೇಶ: ಮತ್ತೊಬ್ಬ ದಲಿತ ಯುವತಿ ಮೇಲೆ ಅತ್ಯಾಚಾರ, ಕೊಲೆ
ಅದರೆ ಮರುದಿನ ಬೆಳಿಗ್ಗೆ, ಕುಟುಂಬ ಸದಸ್ಯರು ಯುವತಿಯೊಂದಿಗೆ ದೆಹಲಿಗೆ ತೆರಳಿದರು. ಈ ವಿಷಯದ ಬಗ್ಗೆ ಜೆಎನ್‌ಎಂಸಿ ಅಧಿಕಾರಿಗಳನ್ನು ಕೇಳಿದಾಗ, ಸುದ್ದಿಗಾರರೊಂದಿಗೆ ಮಾತನಾಡುತ್ತಾ, “ಈ ಪ್ರಶ್ನೆಗೆ ಹತ್ರಾಸ್ ಜಿಲ್ಲಾಡಳಿತವು ಪ್ರತಿಕ್ರಿಯಿಸಲು ಸಾಧ್ಯತೆಯಿದೆ. ಇದರಲ್ಲಿ ನಮ್ಮದು ಯಾವುದೇ ಪಾತ್ರವಿಲ್ಲ” ಹೇಳಿದೆ.
“ಸಾಮಾನ್ಯವಾಗಿ, ಉತ್ತಮ ವೈದ್ಯಕೀಯ ಸೌಲಭ್ಯಗಳಿಗಾಗಿ ರೋಗಿಯನ್ನು ಸ್ಥಳಾಂತರಿಸುವ ನಿರ್ಧಾರವನ್ನು ರೋಗಿಯ ಕುಟುಂಬದೊಂದಿಗೆ ಸಮಾಲೋಚಿಸಿ ವೈದ್ಯರು ತೆಗೆದುಕೊಳ್ಳುತ್ತಾರೆ. ಆದರೆ ಕುಟುಂಬ ಸದಸ್ಯರು ತಮ್ಮ ನಿರ್ಧಾರದಂತೆ ಹೋಗಲು ಬಯಸಿದರೆ, ಅವರು ಹಾಗೆಯೂ ಮಾಡಬಹುದು. ನಾವು ಯಾವಾಗಲೂ ಅದಕ್ಕೆ ಸಹಕರಿಸುತ್ತೇವೆ” ಎಂದು ಸಿದ್ದಿಕಿ ಹೇಳಿದರು.
ಇದನ್ನೂ ಓದಿ: ದಲಿತ ಹೆಣ್ಣುಮಕ್ಕಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ, ಅತ್ಯಾಚಾರದ ಈ ಅಂಕಿ-ಅಂಶಗಳನ್ನು ನೋಡಿ: ನೀವೇ ಪ್ರಶ್ನಿಸಿಕೊಳ್ಳಿ
ಯುವತಿಯ ಗಾಯಗಳಿಗೆ ಸಂಬಂಧಿಸಿದಂತೆ ಕೆಲವು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ವರದಿಗಳ ಬಗ್ಗೆ ಪ್ರಶ್ನಿಸಿದಾಗ, “ಅದನ್ನು ತನಿಖಾಧಿಕಾರಿ ಮತ್ತು ನ್ಯಾಯಾಲಯಕ್ಕೆ ಮಾತ್ರ ಸಲ್ಲಿಸುತ್ತೇವೆ. ಊಹಾಪೂಹಗಳಿಗೆ ಅವಕಾಶವಿಲ್ಲ” ಎಂದು ಹೇಳಿದರು.
ಹತ್ರಾಸ್ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಯುವತಿ ಮಂಗಳವಾರ ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು. ಅಂದು ಮಧ್ಯರಾತ್ರಿ ಪೊಲೀಸರು ಆಕೆಯ ಕುಟುಂಬದವರಿಗೂ ತಿಳಿಸದೇ ಶವಸಂಸ್ಕಾರ ಮಾಡಿದ್ದರು. ಇದರ ವಿರುದ್ಧ ದೇಶದಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.
ಇದನ್ನೂ ಓದಿ: ದಲಿತ ಯುವತಿಯ ಅತ್ಯಾಚಾರ, ಕೊಲೆ ಪ್ರಕರಣ: ಆರೋಪಿಗಳ ಪರ ನಿಂತ ಸವರ್ಣ ಪರಿಷತ್!
ಸೆಪ್ಟೆಂಬರ್ 14 ರಂದು ದೆಹಲಿಯಿಂದ 200 ಕಿ.ಮೀ ದೂರದಲ್ಲಿರುವ ಹತ್ರಾಸ್ ಎಂಬ ಹಳ್ಳಿಯಲ್ಲಿ ಇಂತಹದ್ದೇ ದುರ್ಘಟನೆ ಸಂಭವಿಸಿತ್ತು. ಯುವತಿ ತನ್ನ ಹೊಲದಲ್ಲಿ ಕುಟುಂಬದೊಂದಿಗೆ ಹುಲ್ಲು ಕತ್ತರಿಸುತ್ತಿದ್ದ ಸ್ಥಳದಿಂದ ಆಕೆಯ ಬಟ್ಟೆಯಿಂದಲೇ ಕಟ್ಟಿ ಪಕ್ಕದ ಹೊಲಕ್ಕೆ ಎಳೆದೊಯ್ದು ಅತ್ಯಾಚಾರ ಎಸಗಲಾಗಿತ್ತು.
ಈ ಪ್ರಕರಣದ ನಾಲ್ವರು ಆರೋಪಿಗಳು ಸದ್ಯ ಜೈಲಿನಲ್ಲಿದ್ದಾರೆ. ಮೃತ ಯುವತಿ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು, ಅತ್ಯಾಚಾರ ಆರೋಪಿಗಳು ಮೇಲ್ಜಾತಿಯವರು ಎನ್ನಲಾಗಿದೆ. ಈ ಘಟನೆ ಇತ್ತೀಚಿನ ತಿಂಗಳುಗಳಲ್ಲಿ ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳಿಗೆ ಸಾಕ್ಷಿಯಾಗಿದ್ದು, ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳು: NCRB


