ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ 19 ವರ್ಷದ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಸಂತ್ರಸ್ತೆ ಮನೆಯ ಸುತ್ತ 60 ಮಂದಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜೊತೆಗೆ 8 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಸಂತ್ರಸ್ತ ಕುಟುಂಬ ಸದಸ್ಯರ ಸುರಕ್ಷತೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಗತ್ಯವಿದ್ದರೆ ಅಲ್ಲಿ ಕಂಟ್ರೋಲ್ ರೂಮ್ ಕೂಡ ಸ್ಥಾಪಿಸಲಾಗುವುದು ಎಂದು ನೋಡಲ್ ಅಧಿಕಾರಿಯಾಗಿ ಲಖನೌದಿಂದ ಹತ್ರಾಸ್‌ಗೆ ಬಂದಿರುವ ಡಿಐಜಿ ಶಲಾಭ್ ಮಾಥೂರ್ ತಿಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
60 security personnel deployed in shifts, 8 CCTV cameras installed to ensure safety of #Hathras victim's family members: Police
— Press Trust of India (@PTI_News) October 9, 2020
“ಸಂತ್ರಸ್ತೆಯ ಕುಟುಂಬದ ಸುರಕ್ಷತೆಗಾಗಿ ಮಹಿಳೆಯರು ಸೇರಿದಂತೆ 60 ಪೊಲೀಸ್ ಸಿಬ್ಬಂದಿಯನ್ನು 12 ಗಂಟೆಗಳಿಗೆ ಒಂದು ಪಾಳಿಯಂತೆ ನಿಯೋಜಿಸಲಾಗಿದೆ. ಈ ಸಿಬ್ಬಂದಿಯನ್ನು ಮೇಲ್ವಿಚಾರಣೆ ಮಾಡಲು ಗೆಜೆಟೆಡ್ ಅಧಿಕಾರಿಯನ್ನು ಸಹ ನೇಮಿಸಲಾಗಿದೆ. ಸಿಸಿಟಿವಿ ಕ್ಯಾಮೆರಾಗಳ ಸಹಾಯದಿಂದ ಸಂತ್ರಸ್ತೆಯ ಮನೆಯ ಸುತ್ತ ದಿನದ ಇಪ್ಪತ್ನಾಲ್ಕು ಗಂಟೆಯೂ ನಿಗಾ ಇಡಲಾಗುತ್ತಿದೆ‘ ಎಂದು ಡಿಐಜಿ ಶಲಾಭ್ ಮಾಥೂರ್ ತಿಳಿಸಿದ್ದಾರೆ.
ಇದನ್ನೂ ಓದಿ: ನಮ್ಮಿಬ್ಬರ ಸ್ನೇಹದ ವಿರುದ್ಧವಿದ್ದ ಕುಟುಂಬವೇ ಆಕೆಯ ಕೊಲೆ ಮಾಡಿದೆ: ಪೊಲೀಸರಿಗೆ ಪತ್ರ ಬರೆದ ಹತ್ರಾಸ್ ಆರೋಪಿ
’ ಮೃತ ಸಂತ್ರಸ್ತ ಯುವತಿ ಮನೆ ಹೊರಗಡೆ ಒಬ್ಬ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಅವರು ಸಂತ್ರಸ್ತೆಯ ಮನೆಗೆ ಭೇಟಿ ನೀಡುವವರ ಹೆಸರು ಮತ್ತಿತರ ವಿವರಗಳನ್ನು ದಾಖಲಿಸಿಕೊಳ್ಳುತ್ತಾರೆ‘ ಎಂದು ಹಾಥರಸ್‌ನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನೀತ್ ಜೈಸ್ವಾಲ್ ತಿಳಿಸಿದ್ದಾರೆ.

ಸಂತ್ರಸ್ತ ಕುಟುಂಬದ ಪ್ರತಿ ಸದಸ್ಯರಿಗೆ ಇಬ್ಬರು ಭದ್ರತಾ ಸಿಬ್ಬಂದಿಯನ್ನು ಒದಗಿಸಲಾಗಿದೆ. ಜೊತೆಗೆ ಅಗ್ನಿಶಾಮಕ ಇಲಾಖೆ ಮತ್ತು ಇಬ್ಬರು ಸ್ಥಳೀಯ ಗುಪ್ತಚರ ಘಟಕದ ಸಿಬ್ಬಂದಿಯನ್ನು ಸಹ ಅಲ್ಲಿ ನಿಯೋಜಿಸಲಾಗಿದೆ. ಮನೆಯ ಮುಖ್ಯ ದ್ವಾರದಲ್ಲಿ, ಮೆಟಲ್ ಡಿಟೆಕ್ಟರ್ ಅಳವಡಿಸಲಾಗಿದೆ. ಎಂಟು ಸಿಸಿಟಿವಿ ಕ್ಯಾಮೆರಾಗಳ ಸಹಾಯದಿಂದ ಭದ್ರತೆಯನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ ಎಂದು ವಿನೀತ್ ಜೈಸ್ವಾಲ್ ಹೇಳಿದ್ದಾರೆ.
ಸೆಪ್ಟೆಂಬರ್ 14 ರಂದು ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ 19 ವರ್ಷದ ಯುವತಿಯ ಮೇಲೆ ನಾಲ್ವರು ಮೇಲ್ಜಾತಿಯ ಪುರುಷರು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಸೆಪ್ಟೆಂಬರ್ 29 ರಂದು ಯುವತಿ ಸಾವನ್ನಪ್ಪಿದರು, ಮೃತ ಯುವತಿಯ ದೇಹವನ್ನು ಕುಟುಂಬಕ್ಕೆ ಒಪ್ಪಿಸದೇ ಪೊಲೀಸರು ಸುಟ್ಟುಹಾಕಿದ್ದರು. ತಮ್ಮ ಒಪ್ಪಿಗೆಯಿಲ್ಲದೇ ಶವಸಂಸ್ಕಾರ ಬಲವಂತವಾಗಿ ಮಾಡಲಾಯಿತು ಎಂದು ಕುಟುಂಬವು ಆರೋಪಿಸಿದೆ. ಕುಟುಂಬದ ಆರೋಪವನ್ನು ಪೊಲೀಸರು ತಳ್ಳಿ ಹಾಕಿದ್ದಾರೆ. ರಾಜ್ಯ ಸರ್ಕಾರ ಈಗಾಗಲೇ ಈ ವಿಷಯದಲ್ಲಿ ಸಿಬಿಐ ತನಿಖೆಗೆ ಶಿಫಾರಸು ಮಾಡಿದೆ.
ಪ್ರಕರಣವನ್ನು ಸುಪ್ರೀಂ ಕೋರ್ಟ್ “ಅಸಾಧಾರಣ ಮತ್ತು ಆಘಾತಕಾರಿ” ಎಂದು ಕರೆದಿದ್ದು, ಪ್ರಕರಣದಲ್ಲಿ ಸಾಕ್ಷಿಗಳನ್ನು ಹೇಗೆ ರಕ್ಷಿಸಲಾಗುತ್ತಿದೆ ಎಂಬ ಬಗ್ಗೆ ಅಫಿಡವಿಟ್ ಸಲ್ಲಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಆದೇಶಿಸಿತ್ತು.
ಉತ್ತರ ಪ್ರದೇಶ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ನೀಡಿದ ಅಫಿಡವಿಟ್‌ನಲ್ಲಿ, “ಬಾಬರಿ ಮಸೀದಿ ತೀರ್ಪು ಬರುತ್ತಿದ್ದರಿಂದ ಜಿಲ್ಲೆಯಲ್ಲಿ ಹೈಅಲರ್ಟ್ ಘೋಷಣೆಯಾಗಿತ್ತು. ಹಾಗಾಗಿ ಮುಂಜಾನೆ 2.30ಕ್ಕೆ ಅಂತ್ಯಕ್ರಿಯೆ ನಡೆಸಿದ್ದೇವೆ” ಎಂದು ಸಂತ್ರಸ್ತೆಯ ಮೃತದೇಹವನ್ನು ಸುಟ್ಟುಹಾಕಿದ್ದನ್ನು ಸಮರ್ಥನೆ ಮಾಡಿಕೊಂಡಿತ್ತು.


