“ರಾಯಚೂರು, ಚಿತ್ರದುರ್ಗ ಎಲ್ಲ ಕಡೆ ಸಾಹಿತ್ಯ ಸಮ್ಮೇಳನ ಆಗೇವ. ಹಾವೇರಿ ಜಿಲ್ಲೆಯೊಳಗೆ ಕನ್ನಡ ಸಾಹಿತ್ಯ ಸಮ್ಮೇಳನ ಅಂದ್ರ ಏನಂತಾನೇ ಗೊತ್ತಿರಲಿಲ್ಲ. ಇದೇ ಮೊದಲ ಸಲ ಸಮ್ಮೇಳನ ನೋಡಿ ಖುಷಿಯಾಗೈತೆ” ಎಂದರು ಹಾವೇರಿ ಜಿಲ್ಲೆಯ ಬಂಕಾಪುರ ಎಂಬ ಪುಟ್ಟ ಗ್ರಾಮದ ಗೃಹಿಣಿ ಶಿಲ್ಪಾ.
ನೇಕಾರಿಕೆಯನ್ನು ನಂಬಿ ಜೀವನ ನಡೆಸುತ್ತಿರುವ ಆ ಮಹಿಳೆಯ ಪಾಲಿಗೆ ಈ ಸಮ್ಮೇಳನವು ಕಲಿಕೆಯ ಸ್ಥಳವಾಗಿ ಕಂಡಿತ್ತು. “ಮಕ್ಕಳಿಗೆ ಕನ್ನಡ ಅಂದ್ರೆ ಏನಂತ ಗೊತ್ತಿಲ್ಲ. ಅರಣ್ಯ ಅಂದ್ರೆ ಏನಂತ ಗೊತ್ತಿಲ್ಲ. ಅದನ್ನೆಲ್ಲ ತಿಳಿಸುವ ಕೆಲಸ ಮಾಡಿದ್ದಾರೆ. ತಾಯಿ ಭುವನೇಶ್ವರಿ ನಮ್ ಊರಿನೊಳಗ ಬಂದೌಳ ಅನ್ನೋ ಅಭಿಮಾನ. ಕನ್ನಡದೊಳಗ ಹುಟ್ಟಿದಕ್ಕೂ ನಮ್ ಜೀವನ ಸಾರ್ಥಕವಾಯ್ತು” ಎಂಬ ಧನ್ಯತಾ ಭಾವ ಅವರದ್ದು.
ಇದು ಕೇವಲ ಶಿಲ್ಪಾ ಅವರೊಬ್ಬರ ಮಾತಲ್ಲ. 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಉತ್ತರ ಕರ್ನಾಟಕದ ಬಹುತೇಕ ಶ್ರೀಸಾಮಾನ್ಯರ ಮಾತು. ಸಮ್ಮೇಳನ ಅಂದರೆ ಏನೆಂಬ ಕುತೂಹಲಕ್ಕಾಗಿ ಜಿಲ್ಲೆಯ ವಿವಿಧ ಊರುಗಳಿಂದ ತಂಡೋಪತಂಡವಾಗಿ ಬಂದಿದ್ದವರ ಖುಷಿಗೆ ಪಾರವೇ ಇರಲಿಲ್ಲ. ಪ್ರಧಾನ ವೇದಿಕೆಯ ಎದುರು ನಿಲ್ಲಿಸಲಾಗಿದ್ದ ಭವನೇಶ್ವರಿ ತಾಯಿ ಕಲಾಕೃತಿ, ಪುನೀತ್ ರಾಜ್‌ಕುಮಾರ್ ಕಲಾಕೃತಿ ಎದುರು ನಿಂತು ಫೋಟೋ ತೆಗೆಸಿಕೊಂಡರು; ವಾರ್ತಾ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಅರಣ್ಯ ಇಲಾಖೆಯಿಂದ ಏರ್ಪಡಿಸಲಾಗಿದ್ದ ವಸ್ತುಪ್ರದರ್ಶನ ನೋಡಿ ತಮ್ಮದೇ ಅನುಭವ ಲೋಕ ಕಟ್ಟಿಕೊಂಡರು.
ಉತ್ತರ ಕರ್ನಾಟಕಕ್ಕೆ ಹೆಬ್ಬಾಗಿಲೆಂದೇ ಹೆಸರಾದ ಹಾವೇರಿಯಲ್ಲಿ ಮೊದಲ ಬಾರಿಗೆ ನಡೆದ ಸಾಹಿತ್ಯ ಸಮ್ಮೇಳನಕ್ಕೆ ಜನಸಾಮಾನ್ಯರ ದಂಡು ಹರಿದುಬಂದಿತ್ತು. ನಾಲ್ಕಾರು ಸಾಹಿತ್ಯ ಸಮ್ಮೇಳನಗಳನ್ನು ನೋಡಿದವರು ಹೇಳುವ ಪ್ರಕಾರ ಹಾವೇರಿ ಸಮ್ಮೇಳನಕ್ಕೆ ದಾಖಲೆಯ ಪ್ರಮಾಣದಲ್ಲಿ ಜನರು ಸೇರಿದ್ದರು. ನಗರದಿಂದ ಸುಮಾರು ನಾಲ್ಕು ಕಿ.ಮೀ. ದೂರದಲ್ಲಿ ಆಯೋಜನೆಗೊಂಡಿದ್ದ ಸಮ್ಮೇಳನ ಲಕ್ಷಾಂತರ ಜನರನ್ನು ಸೆಳೆದದ್ದು ಸುಳ್ಳಲ್ಲ.
ಮುಸ್ಲಿಂ ಸಮುದಾಯದ ಲೇಖಕರನ್ನು ಸಮ್ಮೇಳನದಿಂದ ಹೊರಗಿಟ್ಟ ಕಾರಣ ಸಾಹಿತ್ಯ ವಲಯದಲ್ಲಿ ಚರ್ಚೆಗೆ ಗ್ರಾಸವಾಯಿತು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಹೇಶ ಜೋಶಿಯವರ ಕೋಮುವಾದಿ ಕಾರ್ಯಾಚಣೆಗೆ ಪ್ರತಿರೋಧ ತೋರುವ ನಿಟ್ಟಿನಲ್ಲಿ ಜ.8ರಂದು ಬೆಂಗಳೂರಿನಲ್ಲಿ ನಡೆದ ’ಜನ ಸಾಹಿತ್ಯ ಸಮ್ಮೇಳನ’ವೂ ಯಶಸ್ಸು ಪಡೆಯಿತು. ಇದೆಲ್ಲದರ ಆಚೆಗೆ ಬೃಹತ್ ನುಡಿ ಜಾತ್ರೆಯಲ್ಲಿ ಯಾವ ಚರ್ಚೆಗಳಾಗುತ್ತವೆ, ಅದರ ನೈಜ ಉದ್ದೇಶವೇನು ಎಂಬುದು ಜನಸಾಮಾನ್ಯರಿಗೆ ಬೇಕಾಗದ ಸಂಗತಿ. ಅವರಿಗೆ ಸಮ್ಮೇಳನವೆಂದರೆ ಜಾತ್ರೆ, ಸಡಗರ. ಪ್ರಧಾನ ವೇದಿಕೆ, ಸಮಾನಾಂತರ ವೇದಿಕೆಗಳಲ್ಲಿ ಚರ್ಚೆ, ವಿಮರ್ಶೆಗಳಿಗಾಗಿ ಬರುವ ಮಂದಿ ಎರಡು ಪರ್ಸೆಂಟಾದರೆ, ನಮ್ಮೂರಲ್ಲೊಂದು ಹಬ್ಬ ನಡೆಯುತ್ತಿದೆ ಎಂದು ಅಕ್ಷರ ಜಾತ್ರೆಗೆ ಹರಿದುಬರುವ ಲಕ್ಷಾಂತರ ಶ್ರೀಸಾಮಾನ್ಯರಿದ್ದಾರೆ. ಕುಟುಂಬ ಸಮೇತ ಬಂದುಹೋಗುವ ಅವರ ಬದುಕು-ಖುಷಿಯೇ ಒಂದು ಸಾಹಿತ್ಯ.
ಕಸಾಪ ಮಾಡಿರುವ ಚಾರಿತ್ರಿಕ ಎಡವಟ್ಟಿನ ಕುರಿತು ರೂಪಿಸಲಾದ ’ನ್ಯಾಯಪಥ’ ವಾರಪತ್ರಿಕೆಯ ಸಂಚಿಕೆಯನ್ನು ಗೋಷ್ಠಿಯೊಂದರ ಆಚೆ ಹಂಚುತ್ತಿದ್ದಾಗ ಮುದುಕಿಯೊಬ್ಬಳು ಬಂದಳು. “ನನಗೂ ಒಂದು ಹಾಳೆ ಕೊಡ್ರಿ” ಎಂದು ಕೇಳಿದಳು. “ಅಜ್ಜಿ, ಪೇಪರ್ ಓದ್ತೀಯ, ಸುಮ್ನೆ ಇಸ್ಕೊಂಡು ವೇಸ್ಟ್ ಮಾಡಬೇಡ” ಅಂದ್ರೆ, “ನನ್ ಮೊಮ್ಮಕ್ಕಳು ಸಾಲಿ ಕಲಿತಾವ. ಅವಕ್ಕೆ ಕೊಡ್ತೀನಿ” ಎಂದು ನುಡಿದಳು. ಇಂತಹ ಜೀವಗಳಿಗೆ ಯಾವ ಧರ್ಮ, ಯಾವ ತಾರತಮ್ಯ?
ಬಂಕಾಪುರದ ಮತ್ತೊಬ್ಬಳು ಅಜ್ಜಿ ಲೀಲಾವತಿಯವರನ್ನು ಮಾತನಾಡಿಸಿದಾಗ, “ತುಂಬಾ ಚೆನ್ನಾಗೈತೆ. ಮಕ್ಕಳನ್ನು ಕರೆದುಕೊಂಡು ಬಂದಿದ್ದೇವೆ. ಇದೇ ಮೊದ್ಲು ಸಮ್ಮೇಳನ ನೋಡ್ತಾ ಇದ್ದೇವೆ. ಮಕ್ಕಳು ತಿಳಿದುಕೊಳ್ತಾವೊ. ಸಾಹಿತ್ಯ ಸಮ್ಮೇಳನ ಅಂದ್ರೆ ಏನಂಥ ಗೊತ್ತಿರಲಿಲ್ಲ. ನೋಡಲೇಬೇಕು ಅಂತ ಬಂದಿದ್ದೇವೆ” ಎಂದು ಸಂತಸ ವ್ಯಕ್ತಪಡಿಸಿದರು.
“ಏನ್ ಅಜ್ಜ ಹೆಂಗೈತಿ ಸಮ್ಮೇಳನ?” ಎಂದು ಹಾವೇರಿ ಜಿಲ್ಲೆಯ ಸೋಮನಾಥಪುರದ ಜಗದೀಶ ಎಂಬವರನ್ನು ಮಾತನಾಡಿಸಿದಾಗ, “ಸಮುದ್ರ ಚೆನ್ನಾಗೈತೆ. ವ್ಯವಸ್ಥೆ ಚೆನ್ನಾಗೈತೆ, ಒಟ್ಟು ಒಂಬತ್ತು ಮಂದಿ ಬಂದಿದ್ದೇವೆ. ಊಟ ಮಾಡಿದ್ವಿ, ಕಾರ್ಯಕ್ರಮ ನೋಡಿದ್ವಿ” ಎಂದು ತಮ್ಮದೇ ಧಾಟಿಯಲ್ಲಿ ಹೇಳುತ್ತಾ ಹೋದರು.
ಇದನ್ನೂ ಓದಿ: ಪ್ರಾತಿನಿಧ್ಯ ಸಮಸ್ಯೆಗಳಿಂದ ಕಾವೇರಿದ ಹಾವೇರಿ ಸಾಹಿತ್ಯ ಸಮ್ಮೇಳನ
ಎರಡನೇ ದಿನದ ಮುಂಜಾನೆಯೇ ಮಾತಿಗೆ ಸಿಕ್ಕ ಗೋಕಾಕಿನ ವೃದ್ಧ ಸಿ.ಎ.ಪಾಟೀಲ್, “ರಾಯಚೂರು ಒಂದನ್ನು ಬಿಟ್ಟು ಉಳಿದೆಲ್ಲ ಸಮ್ಮೇಳನಗಳು ಛಲೋ ಆಗಿದ್ದವಾ. ಟೈಮ್‌ಗೆ ಕಿಮ್ಮತ್ತು ಕೊಡೋರಂತೂ ಯಾರೂ ಇಲ್ಲ. ಒಂಬತ್ತೂವರೆಗೆ ಟೈಮ್ ಕೊಟ್ಟಿದ್ದಾರ, ಒಬ್ಬರಾದ್ರೂ ವಿಐಪಿಗಳು ಬರೋರಿಲ್ಲ” ಎಂದು ತಮ್ಮದೇ ಅಳಲನ್ನು ತೋಡಿಕೊಂಡರು. ಗೋಕಾಕ್ ಚಳವಳಿ ಬಗ್ಗೆ ನೆನಪು ಮಾಡ್ಕೊತ್ತೀರಾ ಅಜ್ಜ ಎಂದರೆ, “ನಾನಾಗ ನೌಕರಿಯಲ್ಲಿದ್ದೆ. ಛಲೋ ಹೋರಾಟ ಆಯ್ತು. ಈಗಿನ ಮಕ್ಕಳು ಸಾಲಿಗೆ ಹೋಗ್ತಾವು. ಹತ್ತನೇ ಕ್ಲಾಸಾದರೂ ಅ, ಆ, ಇ, ಈ ಬರವಲ್ದು” ಎನ್ನುತ್ತಾ ಗೋಗರೆದರು.
“ಸಮ್ಮೇಳನದಲ್ಲಿ ಏನು ನೋಡಿದ್ರಿ? ಏನು ಕಲಿತ್ರಿ?” ಎಂಬ ಪ್ರಶ್ನೆಗಳಿಗೆ ಶಿಕ್ಷಿತ ಸಾಹಿತ್ಯ ವಲಯ ನಿರೀಕ್ಷಿಸುವ ಉತ್ತರ ಈ ಜನಪದರಲ್ಲಿ ಸಿಗುವುದಿಲ್ಲ. ಸಾಹಿತ್ಯದ ಹಬ್ಬದಲ್ಲಿ ಹಮ್ಮಿಕೊಂಡ ವಸ್ತುಪ್ರದರ್ಶನವೇ ಆ ಜೀವಗಳಿಗೆ ವಿಶಿಷ್ಟ ಅನುಭೂತಿ ನೀಡಿತ್ತು. ಸಾಹಿತ್ಯ ಹಬ್ಬವೆಂದರೆ ಹಾಡು, ಕತೆ, ಕವಿತೆ, ವಿಚಾರಗೋಷ್ಠಿ ಎಂಬುದಷ್ಟೇ ಅಲ್ಲ- ಮನರಂಜನೆ, ಊಟ, ವ್ಯಾಪಾರ, ಖರೀದಿ, ಸಂಭ್ರಮ ಈ ಜನಪದ ಜೀವಿಗಳಿವೆ.
ಮೊದಲ ದಿನಕ್ಕಿಂತಲೂ ಎರಡನೇ ದಿನ ಜನಸಾಗರವೇ ಹರಿದುಬಂದಿತ್ತು. ರಾತ್ರಿ 12 ಗಂಟೆಯಾದರೂ ಸಮ್ಮೇಳನ ಆಯೋಜನೆಗೊಂಡಿದ್ದ ಪ್ರದೇಶದಲ್ಲಿ ಜನಜಂಗುಳಿ ಗಿಜಿಗುಡುತ್ತಿತ್ತು. ಏಳು ಗಂಟೆಯ ನಂತರ ಆಯೋಜನೆಗೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಲು ಅವರಿಗಿದ್ದ ಕುತೂಹಲ ವರ್ಣಿಸಲು ಪದಗಳು ಸೋಲುತ್ತವೆ.
ಚಿಂತನೆಯಲ್ಲೇನಾದರೂ ಹೊಸತ್ತಿತ್ತೇ?
ಪ್ರಜಾಪ್ರಭುತ್ವ ಕಾಲದಲ್ಲಿಯೂ ಊಳಿಗಮಾನ್ಯ ಕಾಲದ ಪಳೆಯುಳಿಕೆಯಾಗಿ ಮುಂದುವರಿಯುತ್ತಿರುವ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಪುರಸಿದ್ಧೇಶ್ವರ ದೇವಸ್ಥಾನದಿಂದ ಆರಂಭವಾಗಿ ಸುಮಾರು ನಾಲ್ಕು ಕಿ.ಮೀ. ದೂರದಲ್ಲಿ ಸಜ್ಜಾಗಿದ್ದ ವೇದಿಕೆಯ ಬಳಿ ತಲುಪಿದಾಗ ಹನ್ನೊಂದು ಗಂಟೆಯಾಗಿತ್ತು. ಮುಖ್ಯಮಂತ್ರಿಗಳು ನಿಗದಿತ ಸಮಯಕ್ಕೆ ಬಾರದ ಕಾರಣ ಕೊಂಚ ತಡವಾಗಿ ಉದ್ಘಾಟನಾ ಕಾರ್ಯಕ್ರಮ ಆರಂಭವಾಗಿತು. ಯಾವುದೇ ಜಾತಿ, ಮತವೆನ್ನದೆ ಭಾಗಿಯಾಗುವ ಈ ಸಮ್ಮೇಳನದ ಮೆರವಣಿಗೆಯಲ್ಲಿ ’ಓಂ ಎಂದು ಬರೆದ ಕೇಸರಿ ಧ್ವಜ’ವನ್ನು ಹಿಡಿದು ತಂಡವೊಂದು ನಡೆದಿತ್ತು. ಕನ್ನಡ ಭಾವುಟಕ್ಕಿಂತ ಕೇಸರಿ ಬಾವುಟವೇ ಎತ್ತರದಲ್ಲಿ ಕಾಣುತ್ತಿತ್ತು. ಹುತಾತ್ಮ ಮಹದೇವ ಮೈಲಾರ ಮಹಾದ್ವಾರದ ಮೂಲಕ ಕೇಸರಿ ಧ್ವಜಗಳು ಸಮ್ಮೇಳನದ ಆವರಣಕ್ಕೆ ಪ್ರವೇಶ ಪಡೆದಿದ್ದು ನೋಡಿದರೆ, ಕಸಾಪ ಅಧ್ಯಕ್ಷರ ಹಿಂದುತ್ವ ರಾಜಕಾರಣ ಸಾಹಿತ್ಯ ಸಂಭ್ರಮದೊಳಗೆ ನುಸುಳಿದ ರೂಪಕದಂತೆ ಕಂಡಿತು.

ಸಮ್ಮೇಳನದ ಸರ್ವಾಧ್ಯಕ್ಷರ ಭಾಷಣ ಸಾಮಾಜಿಕ, ಸಾಂಸ್ಕೃತಿಕ ಪಲ್ಲಟಗಳ ಮೇಲೇನಾದರೂ ಗಂಭೀರವಾಗಿ ಚರ್ಚೆ ಮಾಡುತ್ತದೆಯೇ ಎಂಬ ಆಶಾವಾದದ ಕುತೂಹಲವೇನೂ ಉಳಿದಿರಲಿಲ್ಲ. ಆದರೆ ಪ್ರಧಾನಿ ಮೋದಿಯವರನ್ನು ಮುಖಸ್ತುತಿ ಮಾಡಿ ಪದ್ಯ ಬರೆದು ಟೀಕೆಗೆ ಒಳಗಾಗಿದ್ದ ದೊಡ್ಡರಂಗೇಗೌಡರು, “ಡಬ್ಬಲ್ ಇಂಜಿನ್ ಸರ್ಕಾರದ ಕನ್ನಡ ತಾರತಮ್ಯ” ನೀತಿಯನ್ನು ಉಲ್ಲೇಖಿಸಿ ಕನ್ನಡ ಭಾಷೆಯ ಶಾಸ್ತ್ರೀಯ ಸ್ಥಾನಮಾನದ ಬಗ್ಗೆ ಮಾತನಾಡಿದ್ದು ಒಂದು ಮಟ್ಟಕ್ಕೆ ಅಚ್ಚರಿಯನ್ನುಂಟು ಮಾಡಿದ್ದು ಸುಳ್ಳಲ್ಲ.
ಶಾಸ್ತ್ರೀಯ ಸ್ಥಾನಮಾನ ದೊರೆತರೂ ಕನ್ನಡಕ್ಕೆ ಆಗಿರುವ ಅನ್ಯಾಯದ ಕುರಿತು ಅಧ್ಯಕ್ಷೀಯ ಭಾಷಣದಲ್ಲಿ ಪ್ರಸ್ತಾಪಿಸಿದ ದೊಡ್ಡರಂಗೇಗೌಡರು, “ಈ ಆಕ್ಷೇಪಣೆ ಕನ್ನಡ ಭಾಷೆಯೊಂದರದ್ದು ಮಾತ್ರವಲ್ಲ, ಶಾಸ್ತ್ರೀಯ ಭಾಷೆಯ ಸ್ಥಾನಮಾನ ಪಡೆದಿರುವ ತಮಿಳು, ತೆಲುಗು, ಮಲಯಾಳಂ, ಒಡಿಯಾ ಭಾಷೆಗಳ ಆಕ್ಷೇಪಣೆಯೂ ಆಗಿದೆ” ಎಂದು ಉಲ್ಲೇಖಿಸಿದರು.
“ಇತರ ಶಾಸ್ತ್ರೀಯ ಭಾಷೆಗಳ ಹೋಲಿಕೆಯಲ್ಲಿ 2017ರಿಂದ 2020ರ ಅವಧಿಯಲ್ಲಿ ಸಂಸ್ಕೃತ ಭಾಷೆಗೆ ಕೇಂದ್ರ ಸರ್ಕಾರ ನೀಡಿದ ಅನುದಾನದ ಮೊತ್ತ ರೂ.643 ಕೋಟಿ ಆಗಿದೆ. ಇದೇ ಅವಧಿಯಲ್ಲಿ ಶಾಸ್ತ್ರೀಯಭಾಷಾ ಸ್ಥಾನಮಾನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ಕನ್ನಡದ ಅಧ್ಯಯನ, ಸಂಶೋಧನೆಗಳಿಗೆ ಬಿಡುಗಡೆಯಾದ ಹಣ ಕೇವಲ ರೂ.3 ಕೋಟಿ. ನೆರೆಯ ತಮಿಳು ಭಾಷೆಗೆ ಈ ಅವಧಿಯಲ್ಲಿ ದೊರೆತ ಹಣ ರೂ.23 ಕೋಟಿ. ತಮಿಳು ಭಾಷೆಗೆ 2017ರಿಂದ 2021ರವರೆಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾದ ಹಿನ್ನೆಲೆಯಲ್ಲಿ ಬಿಡುಗಡೆಯಾದ ಒಟ್ಟು ಹಣ ರೂ. 42 ಕೋಟಿ ಎನ್ನುವ ಮಾಹಿತಿ ಇದೆ. ಕನ್ನಡಕ್ಕೆ ನೀಡಲಾಗಿರುವ ಅನುದಾನ ಪರಿಸ್ಥಿತಿಯಲ್ಲಿ ಕಳೆದ ಎರಡು ವರ್ಷದ ಅವಧಿಯಲ್ಲಿಯೂ ಗಣನೀಯ ಸುಧಾರಣೆಯೇನೂ ಆಗಿಲ್ಲ ಎನ್ನುವುದು ನನಗಿರುವ ಮಾಹಿತಿ. ಹೆಚ್ಚೆಂದರೆ 2017ರಿಂದ ಇಲ್ಲಿಯವರೆಗೆ ಐದಾರು ಕೋಟಿ ರೂಪಾಯಿ ಅನುದಾನ ಸಿಕ್ಕಿರಬಹುದು. ಹೀಗಾದರೆ, ಶಾಸ್ತ್ರೀಯ ಭಾಷೆಯ ಸ್ಥಾನಮಾನ ಪಡೆದೂ ನಾವು ಏನು ಸಾಧಿಸಲು ಸಾಧ್ಯ? ಡಬ್ಬಲ್ ಎಂಜಿನ್ ಸರ್ಕಾರದ ಅನುಕೂಲತೆಗಳ ಬಗ್ಗೆ ಪದೇಪದೇ ಹೇಳುವ ಕೇಂದ್ರದ ಸರ್ಕಾರವು ಕನ್ನಡಕ್ಕೆ ಮಾಡಿರುವ ಅನುಕೂಲ ಇದೆ ಏನು?” ಎಂದು ಪ್ರಶ್ನಿಸಿ ತುಸು ಹುಬ್ಬೇರಿಸುವಂತೆ ಮಾಡಿದರು.
ಕನ್ನಡವನ್ನು ತಾಂತ್ರೀಕರಣಗೊಳಿಸುವುದು, ಕನ್ನಡದಲ್ಲಿ ವಿಜ್ಞಾನ, ತಂತ್ರಜ್ಞಾನ ಕಲಿಕೆ ಆರಂಭಿಸುವುದು, ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡವನ್ನು ಕಡ್ಡಾಯಗೊಳಿಸುವುದು, ಗಡಿ ಸಮಸ್ಯೆಯನ್ನು ಬಗೆಹರಿಸುವುದು- ಇವೆಲ್ಲವೂ ಪ್ರತಿ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷರು ಪುನರುಚ್ಚರಿಸುವ ವಾಕ್ಯಗಳು. ಸಮ್ಮೇಳನದ ಸಮಯದಲ್ಲಿ ಅಂಗಳದಲ್ಲಿ ಎದ್ದ ಧೂಳು, ಸಮ್ಮೇಳನ ಮುಗಿದ ಮೇಲೆ ಹುದುಗುವಂತೆ, ಈ ಚರ್ಚೆಗಳು ಸಮ್ಮೇಳನದಲ್ಲಿಯೇ ಸಾಯುವುದು ಹೊಸದೇನೂ ಅಲ್ಲ.
ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದವರನ್ನು ದೊಡ್ಡರಂಗೇಗೌಡರು ಸ್ಮರಿಸಿದರು. ಆದರೆ ಪ್ರಸ್ತುತ ಸಾಮಾಜಿಕ ಪರಿಸರದಲ್ಲಿ ಉಂಟಾಗಿರುವ ತಾರತಮ್ಯ, ಕೋಮುವಾದ- ಇದ್ಯಾವುದರ ಬಗ್ಗೆಯೂ ಭಾಷಣದಲ್ಲಿ ಪ್ರಸ್ತಾಪಿಸಲಿಲ್ಲ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಭಾಷಣ ಕೊಂಕಣ ಸುತ್ತಿ ಮೈಲಾರಕ್ಕೆ ಬಂದಂತಿತ್ತು. ಇತ್ತೀಚೆಗೆ ರಾಜ್ಯದ ಶಾಸನಸಭೆಯಲ್ಲಿ ’ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಮಸೂದೆ’ ಮಂಡಿಸಿದ್ದನ್ನು ಅವರು ಪ್ರಸ್ತಾಪಿಸಿದರು. ಸಿಎಂ ಈ ಕುರಿತು ಮಾತನಾಡುವ ಮೊದಲೇ ಮಹೇಶ ಜೋಶಿಯವರು ತಮ್ಮ ಭಾಷಣದಲ್ಲಿ ಅದನ್ನು ಉಲ್ಲೇಖಿಸಿಬಿಟ್ಟಿದ್ದರು.
ಭೈರಪ್ಪನವರ ಸಂಸ್ಕೃತ ಭಜನೆ
ಸಾಹಿತಿ ಎಸ್.ಎಲ್.ಭೈರಪ್ಪ ಅವರು ’ಭಾರತ ಜನನಿಯ ತನುಜಾತೇ ಜಯಹೇ ಕರ್ನಾಟಕ ಮಾತೆ’ ವಿಶೇಷ ಉಪನ್ಯಾಸದಲ್ಲಿ ಮಾತನಾಡಬೇಕಿತ್ತು. ಆದರೆ ಆರೋಗ್ಯ ಸಮಸ್ಯೆಯೆಂದು ಮನೆಯಲ್ಲೇ ಉಳಿದು, ಅಲ್ಲಿಂದ ಒಂದು ಸಂದೇಶವನ್ನು ಕಳಿಸಿದ್ದರು. ಅದರಲ್ಲಿ ಸಂಸ್ಕೃತದ ಭಜನೆ ಮಾಡಿದ್ದರು.
ಭೈರಪ್ಪನವರ ಸಂದೇಶವನ್ನು ಡಾ.ಪ್ರಧಾನ ಗುರುದತ್ ಓದಿದರು: “ಭಾರತದ ಬಹುತೇಕ ಎಲ್ಲ ಭಾಷೆಗಳೂ ಭಾರತ ಮಾತೆಯ ತನುಜಾತೆಯರೇ ಆಗಿದ್ದಾರೆ. ಇಲ್ಲಿನ ಎಲ್ಲ ಭಾಷೆಗಳಿಗೂ ಸಂಸ್ಕೃತ ಮಾತೃಸ್ಥಾನದಲ್ಲಿದೆ. ಸಾಹಿತ್ಯದ ಸಂವರ್ಧನೆ, ಸಮೃದ್ಧಿಗೆ ಸಂಸ್ಕೃತ ಕಾರಣವಾಗಿದೆ. ರಾಮಾಯಣ, ಮಹಾಭಾರತ ಸೇರಿ ವಿವಿಧ ಸಾಹಿತ್ಯ ಕೃತಿಗಳು ಸಂಸ್ಕೃತದಿಂದ ಭಾರತೀಯ ಭಾಷೆಗೆ ಅನುವಾದವಾದವು” ಎಂದು ಬರೆದು ಕಳುಹಿಸಿದ್ದರು ಭೈರಪ್ಪ.

“ಭಾರತದ ಭಾಷೆಗಳ ಶಬ್ದ ಸಂಪತ್ತು ಸಂಸ್ಕೃತದಿಂದಲೇ ಬಂದಿದೆ. ಕನ್ನಡ ಶಬ್ದಕೋಶದ ಶೇ.60ರಷ್ಟು ಶಬ್ದ ಸಂಪತ್ತು ಸಂಸ್ಕೃತದ್ದಾಗಿದೆ. ಈಗ ಎರಡನೇ ಹಂತದಲ್ಲಿ ಸಂಸ್ಕೃತದ ಸಂವರ್ಧನೆಗೆ ಭಾರತೀಯ ಭಾಷೆಗಳು ಕಾರಣವಾಗಿರುವುದು ವಿಶೇಷ ವಿದ್ಯಮಾನ. ನನ್ನ ಏಳು ಕಾದಂಬರಿಗಳು ಸಂಸ್ಕೃತಕ್ಕೆ ಅನುವಾದಗೊಂಡಿವೆ” ಎಂದು ಹೇಳಿದ್ದರು. ಮೃತ ಭಾಷೆ ಎಂದೇ ಪರಿಗಣಿಸಲಾಗಿರುವ ಸಂಸ್ಕೃತವನ್ನು ಕನ್ನಡ ನುಡಿಹಬ್ಬದಲ್ಲಿ ಕೊಂಡಾಡುವ ವಿದ್ಯಮಾನ ಬಲಪಂಥೀಯರ ಎಂದಿನ ಅಜೆಂಡಾವನ್ನು ನೆನಪಿಸುತ್ತಿತ್ತು. ಆಧುನಿಕತೆಯಿಂದ ಪುರಾಣ ಕಾಲಕ್ಕೆ ದೇಶವನ್ನು ಕೊಂಡೊಯ್ಯುವ ಭಾಗವಾಗಿ ಸಂಸ್ಕೃತ ಪುನರುತ್ಥಾನದ ಭಜನೆ ಕನ್ನಡಿಗರನ್ನು ಕೆರಳಿಸಿತು.
ಇದನ್ನೂ ಓದಿ: ಸಾಮಾಜಿಕ ನ್ಯಾಯ ಮತ್ತು ಪ್ರಾದೇಶಿಕ ಪ್ರಾತಿನಿಧ್ಯವಿರಲಿ: ಜನಸಾಹಿತ್ಯ ಸಮ್ಮೇಳನದ ನಿರ್ಣಯಗಳು
ಭೈರಪ್ಪ ಅವರ ತದ್ರೂಪವೆಂಬಂತೆ ವರ್ತಿಸುವ ಪ್ರ.ಗುರುದತ್ ಅವರು, “ಹಿಂದುತ್ವ ಮತ್ತು ಭಾರತೀಯತೆ ಅಪಾಯದ ಸ್ಥಿತಿಯಲ್ಲಿದೆ. ಇದನ್ನು ನಾವೆಲ್ಲ ಅರಿತು, ಗುರುತಿಸಬೇಕು” ಎನ್ನುವುದಕ್ಕೆ ಈ ವೇದಿಕೆಯನ್ನು ಬಳಸಿಕೊಂಡರು. ಹಿಂದುತ್ವ ಸಿದ್ಧಾಂತವನ್ನು ಪ್ರತಿಪಾದಿಸುವ ಪಕ್ಷ ಕಳೆದ ಎಂಟು ವರ್ಷಗಳಿಂದ ಅಧಿಕಾರದಲ್ಲಿರುವಾಗ ಏಕೆ ಯಾವಾಗಲೂ ’ಹಿಂದೂಗಳು ಅಪಾಯದಲ್ಲಿದ್ದಾರೆ, ಹಿಂದುತ್ವ ಅಪಾಯದಲ್ಲಿದೆ’ ಎಂದು ಅಬ್ಬರಿಸುತ್ತಾರೋ ತಿಳಿಯದ ಸಂಗತಿ. ಯಾವ ಅಪಾಯವೂ ಇಲ್ಲದೆ, ಯಾವ ಗೋಷ್ಠಿಯ ಭಾಷಣವನ್ನೂ ಕೇಳದೆ ಸಂಭ್ರಮಪಟ್ಟ ಸೋಮನಾಥಪುರದ ಜಗದೀಶ ಅಂಥವರು ಗುರುದತ್ ಅಂಥವರಿಗೆ ಕಂಡಿದ್ದರೆ ಈ ಮಾತು ಆಡುತ್ತಿರಲಿಲ್ಲವೇನೋ.
ಪುಸ್ತಕ ಪ್ರೀತಿಗೆ ಸಲಾಂ
ಚರ್ವಿತ-ಚರ್ವಣ ವಿಚಾರಗೋಷ್ಠಿಗಳಲ್ಲಿ ಎಲೈಟ್ ವರ್ಗವನ್ನು ಪ್ರತಿನಿಧಿಸುವ ಹೆಚ್ಚಿನ ಸಂಖ್ಯೆಯ ಸಾಹಿತಿಗಳು ರಾರಾಜಿಸಿದರು. ಇದರಾಚೆಗೆ ಹೇಳುವುದಾದರೆ ಒಂದಿಷ್ಟು ಪುಸ್ತಕ ಪ್ರಕಾಶಕರಿಗೆ ಒಳ್ಳೆಯ ಮಾರಾಟವಾಗಿದೆ. ಪ್ರಕಾಶಕರು ಗುರುತಿಸಿದಂತೆ ಜನರ ಆಸಕ್ತಿಯ ವಿಚಾರಗಳು ಒಂದೆರಡಲ್ಲ. ರಾಮಾಯಣ, ಮಹಾಭಾರತ, ಪಂಚಾಂಗವನ್ನು ಹುಡುಕಿಕೊಂಡು ಬರುವ ವೃದ್ಧರು, ಮಕ್ಕಳ ಕಲಿಕೆಗೆ ಬೇಕಾದ ಸಾಮಗ್ರಿ ಕೇಳಿಕೊಂಡು ಬರುವ ಪೋಷಕರು, ವಿಚಾರ ಸಾಹಿತ್ಯ, ಸಂಶೋಧನೆಗಾಗಿ ಹುಡುಕಾಡುವ ಸಾಹಿತ್ಯಾಸಕ್ತರು- ಹೀಗೆ ತರಹೇವಾರಿ ಅಭಿರುಚಿಯ ಜನರು ಪುಸ್ತಕ ಮಳಿಗೆಗಳಲ್ಲಿ ನೆರೆದರು.
“ಇಂಟರ್‌ನೆಟ್ ಸಮಸ್ಯೆ ಇಲ್ಲದಿದ್ದರೆ ಗೂಗಲ್ ಪೇ, ಫೋನ್ ಪೇ ಮೂಲಕ ಮತ್ತಷ್ಟು ವ್ಯಾಪಾರ ನಡೆಯುತ್ತಿತ್ತು. ಕಸಾಪ ಪ್ರತಿನಿಧಿಗಳು ಮಳಿಗೆಗಳತ್ತ ಸುಳಿಯಬೇಕಿತ್ತು. ವಾಣಿಜ್ಯ ಮಳಿಗೆಯಲ್ಲಿ ಪುಸ್ತಕ ಮಾರಾಟ ಮಾಡಲು ಕೆಲವರಿಗೆ ಜಾಗ ಸಿಕ್ಕಿರುವುದರಿಂದ ನಿರೀಕ್ಷಿತ ವ್ಯಾಪಾರವಾಗಿಲ್ಲ” ಎಂದು ಕೆಲವು ಪ್ರಕಾಶಕರು ಬೇಸರ ವ್ಯಕ್ತಪಡಿಸಿದರು.
“ಮಹೇಶ ಜೋಶಿಯವರು ಯಾವುದೇ ಹೊಸ ನಿಯಮವನ್ನು ಜಾರಿಗೆ ತರುವಾಗ ಸೂಕ್ತ ಮಾಹಿತಿಯನ್ನು ನೀಡಬೇಕಿತ್ತು. ಪರಿಷತ್ ಸದಸ್ಯರಾಗಿದ್ದರಷ್ಟೇ ಪುಸ್ತಕ ಮಳಿಗೆ ಹಾಕಲು ಅವಕಾಶ ನೀಡುವುದಾಗಿ ನಿಯಮ ತಂದರು. ಆಪ್ ಮೂಲಕ ನೊಂದಣಿ ಮಾಡಿಕೊಳ್ಳಬೇಕಿತ್ತು. ಎಷ್ಟೋ ಮಂದಿ ಪ್ರಕಾಶಕರಿಗೆ ಮಾಹಿತಿ ಇರಲಿಲ್ಲ. ಹೊಸದಾಗಿ ತಯಾರಿ ಮಾಡಿರುವ ಆಪ್ ಸರಿಯಾಗಿ ಅಭಿವೃದ್ಧಿಪಡಿಸಲಾಗಿಲ್ಲ. ಬಹುತೇಕ ಮಾರಾಟಗಾರರು ಬಂದಿಲ್ಲ. ನಿಮಗೆ ವೇದಿಕೆ ಮತ್ತು ನಿಮ್ಮ ಹೆಸರು ಮುಖ್ಯವಷ್ಟೇ. ಜನಸಾಮಾನ್ಯರು ಮತ್ತು ಪುಸ್ತಕ ವ್ಯಾಪಾರಿಗಳು ಏನು ಮಾಡಬೇಕು?” ಎಂದು ಪ್ರಶ್ನಿಸಿದರು.
ಕೊನೆಯ ಮಾತು
ಪುಸ್ತಕ ಮಳಿಗೆಯಲ್ಲಿ ಒಬ್ಬಾತ ಮಧ್ಯಮ ಪಂಥೀಯ ಯುವಕ ಸಿಕ್ಕ. ಆತ್ಮೀಯವಾಗಿ ಮಾತನಾಡುತ್ತಾ, “ಅಲ್ರೀ, ಮುಸ್ಲಿಮರಿಗೆ ಅವಕಾಶ ನೀಡಿಲ್ಲ ಎನ್ನುತ್ತೀರಿ, ಶರೀಫರ ಹೆಸರಲ್ಲಿ ಪ್ರಧಾನ ವೇದಿಕೆಯೇ ಇದೆಯಲ್ಲ ಎಂದ. “ಆ ವೇದಿಕೆಗೆ ಗುರು ಗೋವಿಂದ ಭಟ್ಟರ ಹೆಸರಿಟ್ಟು, ಒಬ್ಬನೇ ಒಬ್ಬ ಬ್ರಾಹ್ಮಣ ಲೇಖಕನಿಗೆ ಇಲ್ಲಿ ಅವಕಾಶ ನೀಡಬಾರದಿತ್ತು. ಆಗ ನಿಮ್ಮ ಅಭಿಪ್ರಾಯವೇನಾಗುತ್ತಿತ್ತು?” ಎಂದು ಕೇಳಿದಾಗ ಆತನ ಬಳಿ ಉತ್ತರವಿರಲಿಲ್ಲ.
ಅಂದಹಾಗೆ, ಪ್ರಾತಿನಿಧ್ಯದ ಕೊರತೆಯಿಂದ ಸೊರಗಿದ ಸಮ್ಮೇಳನದ ಗೋಷ್ಠಿಗಳಾಚೆ, ಹಿಂದೂ, ಮುಸ್ಲಿಂ, ಕ್ರೈಸ್ತ ಸಮುದಾಯದ ಜನಸಾಮಾನ್ಯರು ಅಕ್ಷರ ಜಾತ್ರೆಯಲ್ಲಿ ಖುಷಿಪಟ್ಟಿದ್ದಾರೆ. ಇದನ್ನು ಕಸಾಪ ಅರ್ಥ ಮಾಡಿಕೊಂಡು, ಮುಂದಿನ ಸಮ್ಮೇಳನದಲ್ಲಾದರೂ ತನ್ನ ತಪ್ಪನ್ನು ತಿದ್ದಿಕೊಳ್ಳುವ ಕೆಲಸ ಮಾಡಬೇಕೆಂಬ ಅಭಿಪ್ರಾಯವನ್ನು ಸಮ್ಮೇಳನದಲ್ಲಿ ಭಾಗಿಯಾದ ಹಲವು ಮನಸ್ಸುಗಳು ವ್ಯಕ್ತಪಡಿಸಿವೆ.
’ನ್ಯಾಯಪಥ’ದೊಂದಿಗೆ ಮಾತನಾಡಿದ ದೇವನಹಳ್ಳಿಯ ಎಂ.ಸುಬ್ರಮಣಿ ಎಂಬವರು, “ಕಳೆದ ಹದಿನೈದು ವರ್ಷಗಳಿಂದ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದೇನೆ. ಈ ಸಮ್ಮೇಳನದ ಆಯೋಜನೆ ಚೆನ್ನಾಗಿದೆ. ಆರೋಪಗಳು ಇದ್ದೇ ಇರುತ್ತವೆ. ಬಂದಿರುವ ಆರೋಪಗಳನ್ನು ಗಣನೆಗೆ ತೆಗೆದುಕೊಂಡು ಮುಂದಿನ ಸಮ್ಮೇಳನದಲ್ಲಿ ಸರಿಪಡಿಸಿಕೊಳ್ಳಬೇಕು” ಎಂದು ಆಶಿಸಿದರು.


