ಕಳೆದ ಕೆಲವು ದಿನಗಳಿಂದ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಬಿಟ್ಟು ಬಿಡದೆ ಸುರಿಯುತ್ತಿರುವ ಅಕಾಲಿಕ ಮಳೆ ಆರ್ಭಟಕ್ಕೆ ರೈತ-ತೋಟಿಗರ ಬದುಕು ಹೈರಾಣಾಗಿ ಹೋಗಿದೆ. ಜೀವ ಒತ್ತೆಯಿಟ್ಟು ವರ್ಷವಿಡೀ ಬೆವರಿಳಿಸಿ ಬೆಳೆದ ಫಸಲನ್ನು ಮಳೆ ನೀರು ಆಪೋಷನ ಪಡೆದಿದೆ! ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿ ಅನ್ನದಾತ ಕಂಗಾಲಾಗಿ ಕೂತಿದ್ದಾನೆ. ಜಿಲ್ಲೆಯಲ್ಲಿ ಸುಮಾರು 1866 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದೆಯೆಂದು ಅಂದಾಜಿಸಲಾಗಿದ್ದು, ಶೀಘ್ರ ಪರಿಹಾರಕ್ಕಾಗಿ ಅಳಲಿನ ದ್ವನಿ ಕೇಳಿ ಬರಲಾರಂಭಿಸಿದೆ.
ಉತ್ತರ ಕನ್ನಡದ ವಿವಿಧ ತಾಲ್ಲೂಕುಗಳಲ್ಲಿ ಕಬ್ಬು, ಭತ್ತ, ಹತ್ತಿ, ಗೊವಿನ ಜೋಳ, ಅಡಿಕೆ ಬೆಳೆ ಮಳೆ ಹೊಡೆತ ತಾಳಲಾಗದೆ ನೆಲಕಚ್ಚಿದೆ. ಭತ್ತದ ಪೈರಂತೂ ಮಣ್ಣು ಪಾಲಾಗಿದ್ದು, ಅರ್ಧದಷ್ಟು ಉಳಿಸಿಕೊಳ್ಳಲಾಗದೆ ರೈತರು ಹೈರಾಣಾಗಿದ್ದಾರೆ. ಜಿಲ್ಲೆಯಲ್ಲಿ 1840 ಹೆಕ್ಟೇರ್ ಭತ್ತ, 21.4 ಹೆಕ್ಟೇರ್ ಹತ್ತಿ, 4 ಹೆಕ್ಟೇರ್ ಕಬ್ಬು ಬೆಳೆ ಮಳೆಗೆ ಬಲಿಯಾಗಿದೆ.
ಈ ಹಂಗಾಮು ರೈತ ಸಮುದಾಯದ ಭವಿಷ್ಯದ ಬದುಕನ್ನು ಅಯೋಮಯವಾಗಿಸಿದ್ದು, ಮುಂಡಗೋಡಿನಂತ ಪ್ರದೇಶದ ರೈತರು ಕಣ್ಣೀರಲ್ಲಿ ಕೈತೊಳೆಯುವಂತೆ ಮಾಡಿದೆ. ಮಳೆ ನಿಲ್ಲುವ ಅಂದಾಜಿನಲ್ಲಿ ಗೋವಿನ ಜೋಳದ ತೆನೆ ಕೊಯ್ದು ಒಣಗಿಸಲು ಅಣಿಯಾಗುತ್ತಿದ್ದಂತೆಯೆ ಸುರಿಯಲು ಶುರುವಾದ ಮಳೆಯಿಂದ ಗೋವಿನ ಜೋಳದ ಕಾಳುಗಳು ಮೋಳಕೆಯೋಡೆಯುತ್ತಿದ್ದರೆ, ಕಟಾವಿಗೆ ಬಂದ ಮತ್ತು ಕಟಾವಾದ ಭತ್ತ ನೀರು ಪಾಲಾಗಿದೆ. ದುಬಾರಿ ಕೃಷಿ ಕಾರ್ಮಿಕ ಮಜೂರಿ, ಔಷಧ-ಗೊಬ್ಬರ-ಬೀಜ ಸರಿಯಾಗಿ ಸಿಗದಿರುವುದು, ಕಾಳ ಸಂತೆಯಲ್ಲಿ ಹೆಚ್ಚಿನ ಬೆಲೆಗೆ ಖರೀದಿಸಬೇಕಾದ ಅನಿವಾರ್ಯತೆಯಂಥ ಹಲವು ಅಡ್ಡಿ-ಆತಂಕದ ನಡುವೆ ಸಾಲ ಮಾಡಿ ಮನೆಯ ಸಣ್ಣ ಮಕ್ಕಳು, ಹೆಂಗಸರೆಲ್ಲ ಜಮೀನಿನಲ್ಲಿ ದುಡಿದು ಬೆಳೆದ ಬೆಳೆ ಕೊನೆಘಳಿಗೆಯಲ್ಲಿ ಕೈಗೆ ಸಿಗದ ಘೋರ ದುರಂತ ಆಗಿಹೋಗಿದೆ ಎಂದು ರೈತರು ಹೇಳುವುದು ಕರುಣಾಜನಕವಾಗಿದೆ.
ಬದುಕಿಗಾಧಾರವಾಗಿದ್ದ ಬೆಳೆ ಮಳೆಗೆ ನಾಶವಾದ ಹತಾಶೆಯಿಂದ ಶಿರಸಿಯಲ್ಲಿ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬನವಾಸಿ ಬಳಿಯ ನರೂರು ಗ್ರಾಮದ ಗಂಗಾಧರ ಫಕೀರಣ್ಣ ಶೇಷಣ್ಣನವರ್ [58] ಬೆಳೆದ ಶುಂಠಿ, ಭತ್ತ ಮಳೆಗೆ ಹಾಳಾದ್ದರಿಂದ ನೊಂದು ನ.17ರಂದು ಕ್ರಿಮಿ ನಾಶಕ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಅವರು ನ.19ರಂದು ಮೃತಪಟ್ಟಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಭವಿಷ್ಯದ ಬದುಕಿನ ನಿರೀಕ್ಷೆಗಳೆಲ್ಲ ಮಳೆ ಪಾಲಾಗಿ ಹತಾಶವಾಗಿರುವ ರೈತ ಸುಮುದಾಯದ ನೆರವಿಗೆ ನಿಷ್ಟೆ-ಬದ್ದತೆಯಿಂದ ಸರ್ಕಾರ ಮತ್ತು ಜನಪ್ರತಿನಿಧಿಗಳು ಧಾವಿಸಬೇಕಾಗಿದೆ. ಈ ವರ್ಷ ಪೂರ್ಣ ಪ್ರಮಾಣದ ಬೆಳೆ ವಿಮೆಗೆ ತಾವು ಅರ್ಹರೆಂದು ರೈತರು ಹೇಳುತ್ತಿದ್ದಾರೆ. ಇದನ್ನು ಜನಪ್ರತಿನಿಧಿಗಳು ಅರ್ಥಮಾಡಿಕೊಂಡು ನೆರವು ನೀಡಲು ಅಡ್ಡಿಯಾಗಿರುವ ವಿಮೆ ಕಂಪನಿಗಳ ಮಾನದಂಡಗಳಿಗೆ ಮೂಗುದಾರ ಹಾಕಬೇಕಿದೆ. ಕಾಟಾಚಾರದ ಪರಿಹಾರ ನೊಂದ ರೈತರಲ್ಲಿ ಆಕ್ರೋಶ ಮೂಡಿಸುವ ಸಾಧ್ಯತೆಯಿದ್ದು, ಗರಿಷ್ಟ ಪರಿಹಾರ ಸಿಗುವಂತೆ ಪ್ರಯತ್ನಿಸುವ ಇಚ್ಛಾ ಶಕ್ತಿಯನ್ನು ಜನಪ್ರತಿನಧಿಗಳು ಪ್ರದರ್ಶಿಸಬೇಕಿದೆ ಎಂದು ರೈತ ಮುಂಖಡರು ಹೇಳುತ್ತಿದ್ದಾರೆ. ಹುಸಿ ಆಸ್ವಾಸನೆಗಳಿಗೆ ಸೀಮಿತವಾಗದೆ ಆತಂಕಿತ ರೈತ ಸಮುದಾಯದಲ್ಲಿ ಬದುಕಿನ ಭರವಸೆ ಮೂಡಿಸಬೇಕಿದೆ.
ಇದನ್ನೂ ಓದಿ: ಆಂಧ್ರಪ್ರದೇಶ: ಮಹಾಮಳೆಗೆ 29 ಮಂದಿ ಸಾವು, 50 ಮಂದಿ ನಾಪತ್ತೆ


