ಸೆಪ್ಟೆಂಬರ್ 22ರಂದು ಪ್ರಾರಂಭವಾಗುವ ಮೈಸೂರು ದಸರಾ ಉತ್ಸವ-2025 ಅನ್ನು ಉದ್ಘಾಟಿಸಲು ಅಂತಾರಾಷ್ಟ್ರೀಯ ಬೂಕರ್ ವಿಜೇತ ಲೇಖಕಿ ಮತ್ತು ಹೋರಾಟಗಾರ್ತಿ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವ ರಾಜ್ಯ ಸರ್ಕಾರದ ನಿರ್ಧಾರದಲ್ಲಿ ಮಧ್ಯಪ್ರವೇಶಿಸಲು ಕರ್ನಾಟಕ ಹೈಕೋರ್ಟ್ ಸೆಪ್ಟೆಂಬರ್ 15ರಂದು ನಿರಾಕರಿಸಿದೆ.
ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪ್ರತಾಪ್ ಸಿಂಹ, ಬೆಂಗಳೂರಿನ ನಿವಾಸಿಗಳಾದ ಗಿರೀಶ್ ಕುಮಾರ್ ಟಿ, ಸೌಮ್ಯ ಆರ್. ಮತ್ತು ಎಚ್.ಎಸ್. ಗೌರವ್ ಎಂಬವರು ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ.ಎಂ ಜೋಶಿ ಅವರಿದ್ದ ವಿಭಾಗೀಯ ಪೀಠ ಆದೇಶ ನೀಡಿದೆ.
“ವಿಭಿನ್ನ ನಂಬಿಕೆಯ ವ್ಯಕ್ತಿಗೆ ಆಹ್ವಾನ ನೀಡುವುದು ಸಾಂವಿಧಾನಿಕ ಅಥವಾ ಕಾನೂನುಬದ್ಧ ಹಕ್ಕನ್ನು ಉಲ್ಲಂಘಿಸುತ್ತದೆ ಎಂಬ ವಾದಗಳನ್ನು ನಾವು ಒಪ್ಪಿಕೊಳ್ಳಲು ಸಾಧ್ಯವಿಲ್ಲ” ಎಂದು ನ್ಯಾಯ ಪೀಠ ಹೇಳಿದೆ.
2023ರಲ್ಲಿ ನಡೆದ ಸಾಹಿತ್ಯ ಕಾರ್ಯಕ್ರಮವೊಂದರಲ್ಲಿ ಬಾನು ಮುಷ್ತಾಕ್ ಅವರು ಹಿಂದೂ ವಿರೋಧಿ ಮತ್ತು ಕನ್ನಡ ವಿರೋಧಿ ಹೇಳಿಕೆಗಳನ್ನು ನೀಡಿದ್ದಾರೆ. ಅಲ್ಲದೆ, ಮೈಸೂರು ರಾಜಮನೆತನದ ಪ್ರತಿನಿಧಿಗಳ ಜೊತೆ ಚರ್ಚಿಸದೆ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಲಾಗಿದೆ ಎಂದು ಪ್ರತಾಪ್ ಸಿಂಹ ತನ್ನ ಅರ್ಜಿಯಲ್ಲಿ ವಾದಿಸಿದ್ದರು.
“ಕನ್ನಡವನ್ನು ಭಾಷೆಯಾಗಿ ಬಳಸುವ ಬದಲು ಭಾವುಕವಾಗಿ ಬಳಸುತ್ತಿದ್ದೀರಿ. ದೇವತೆಯನ್ನಾಗಿ ಮಾಡಿ, ಮಂದಹಾಸದಲ್ಲಿದ್ದಾಗ ಅದಕ್ಕೆ ಕೈ ಮುಗಿದು ಬಂದರೆ ನಮ್ಮ ಕೆಲಸ ಮುಗಿಯಿತು ಎಂಬ ಭಾವನೆಯಲ್ಲಿ ಇದ್ದೀರಿ. ಭಾಷೆಯನ್ನು ಭಾಷೆಯಾಗಿ ಪರಿಗಣಿಸಿದಾಗ ನಾನೂ ಓದಬೇಕಾಗುತ್ತದೆ, ನೀವು ಓದಬೇಕಾಗುತ್ತದೆ. ನಮ್ಮ ಮಕ್ಕಳು ಕೂಡ ಓದಬೇಕಾಗುತ್ತದೆ. ಪ್ರತಿಯೊಬ್ಬರು ಓದಬೇಕಾಗುತ್ತದೆ” ಎಂದು 2023ರ ಜನ ಸಾಹಿತ್ಯ ಸಮ್ಮೇಳನದಲ್ಲಿ ಬಾನು ಮುಷ್ತಾಕ್ ಹೇಳಿದ್ದರು.
ಇತ್ತೀಚೆಗೆ ಅವರನ್ನು ದಸರಾ ಉದ್ಘಾಟನೆಗೆ ಸರ್ಕಾರ ಆಯ್ಕೆ ಮಾಡಿದ ಬಳಿಕ ಹಳೆಯ ಭಾಷಣದ ತುಣುಕನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿತ್ತು. ಈ ಕುರಿತು ಆಗಸ್ಟ್ 26ರಂದು ಪ್ರತಿಕ್ರಿಯೆ ನೀಡಿದ್ದ ಬಾನು ಮುಷ್ತಾಕ್ ಅವರು, “ಹಾವೇರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಸ್ಲಿಂ ಸಾಹಿತಿಗಳನ್ನು ದೂರ ಇಟ್ಟಿದ್ದಕ್ಕೆ ಪ್ರತಿರೋಧವಾಗಿ ಜನ ಸಾಹಿತ್ಯ ಸಮ್ಮೇಳನ ಮಾಡಲಾಗಿತ್ತು. ಆ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ನಾನು ಮಹಿಳೆಯರು, ಅಲ್ಪ ಸಂಖ್ಯಾತರು ಮತ್ತು ತುಳಿತಕ್ಕೊಳಗಾದವರ ಪರ ಮಾತನಾಡಿದ್ದೆ” ಎಂದು ಸ್ಪಷ್ಟಪಡಿಸಿದ್ದರು.
ಬಾನು ಮುಷ್ತಾಕ್ ಅವರ ಜನ ಸಾಹಿತ್ಯ ಸಮ್ಮೇಳನದ ಭಾಷಣವನ್ನು ಪ್ರತಾಪ್ ಸಿಂಹ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.
“ಬಾನು ಮುಷ್ತಾಕ್ ಹೇಳಿಕೆಯು ಹಿಂದೂ ದೇವತೆಯನ್ನು ಪೂಜಿಸುವುದರಲ್ಲಿ ಅವರಿಗೆ ನಂಬಿಕೆ ಇಲ್ಲ ಎಂಬುವುದನ್ನು ಸ್ಪಷ್ಟಪಡಿಸುತ್ತದೆ. ಅವರು ತಮ್ಮ ಹಿಂದೂ ವಿರೋಧಿ ಮತ್ತು ಕನ್ನಡ ವಿರೋಧಿ ಹೇಳಿಕೆಗಳನ್ನು ಹಿಂತೆಗೆದುಕೊಂಡರೆ ದಸರಾ ಉದ್ಘಾಟನೆಗೆ ಆಹ್ವಾನಿಸುವುದಕ್ಕೆ ಯಾವುದೇ ಅಭ್ಯಂತರವಿಲ್ಲ” ಎಂದಿದ್ದರು.
“ಹಿಂದೂ ದೇವತೆಯನ್ನು ಪೂಜಿಸುವುದರಲ್ಲಿ ನಂಬಿಕೆ ಇಲ್ಲದ ವ್ಯಕ್ತಿಯನ್ನು ರಾಜ್ಯ ಸರ್ಕಾರವು ಹಿಂದೂ ಆಚರಣೆಗಳ ಪ್ರಕಾರ ದೇವತೆಯನ್ನು ಪೂಜಿಸುವ ಮೂಲಕ ಪ್ರಾರಂಭವಾಗುವ ದಸರಾ ಉತ್ಸವ ಉದ್ಘಾಟಿಸಲು ಆಹ್ವಾನಿಸಲು ಹೇಗೆ ಸಾಧ್ಯ?” ಎಂದು ಪ್ರತಾಪ್ ಸಿಂಹ ಪರ ವಕೀಲರು ನ್ಯಾಯಾಲಯದಲ್ಲಿ ವಾದಿಸಿದ್ದರು.
ಮತ್ತೊಂದೆಡೆ, ರಾಜ್ಯ ಅಡ್ವೊಕೇಟ್ ಜನರಲ್ (ಎಜಿ) ಶಶಿ ಕಿರಣ್ ಶೆಟ್ಟಿ ಅವರು ಪ್ರತಾಪ್ ಸಿಂಹ ಅವರು ಸಂಸತ್ ಸದಸ್ಯರಾಗಿದ್ದಾಗ, 2017ರಲ್ಲಿ ದಸರಾ ಉತ್ಸವವನ್ನು ಉದ್ಘಾಟಿಸಿದ ಕವಿ ನಿಸಾರ್ ಅಹ್ಮದ್ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದರು ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದರು.
ಮುಜರಾಯಿ ಇಲಾಖೆ ಅಡಿ ಬರುವ ದೇವಾಲಯವಾಗಲಿ ಅಥವಾ ಖಾಸಗಿ ದೇವಾಲಯವಾಗಲಿ, ಅವುಗಳಿಗೆ ಜಾತಿ, ಧರ್ಮ ಬೇಧವಿಲ್ಲದೆ ಯಾರು ಬೇಕಾದರು ಪ್ರವೇಶಿಸಬಹುದು. ಅದನ್ನು ತಡೆಯಬಾರದು ಎಂದು ರಾಜ್ಯ ಸರ್ಕಾರ ಈಗಾಗಲೇ ಅಧಿಸೂಚನೆ ಹೊರಡಿಸಿದೆ ಎಂದು ತಿಳಿಸಿದ ಎಜಿ, ಮೈಸೂರಿನಲ್ಲಿ ದಸರಾ ಉತ್ಸವವನ್ನು ಆಯೋಜಿಸುವಲ್ಲಿ ಸರ್ಕಾರ ತನ್ನ ಜಾತ್ಯತೀತ ಕರ್ತವ್ಯವನ್ನು ನಿರ್ವಹಿಸುತ್ತಿದೆ ಎಂದು ಹೇಳಿದ್ದರು.
ದಸರಾ ಉದ್ಘಾಟಿಸಲು ಆಯ್ಕೆ ಮಾಡಿದ್ದಕ್ಕೆ ಕೋಮುವಾದಿಗಳಿಂದ ವಿರೋಧ: ಬಾನು ಮುಷ್ತಾಕ್ ಏನಂದ್ರು?


