ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರ ₹90 ಕೋಟಿಗೂ ಹೆಚ್ಚಿನ ಇಪಿಎಫ್ ಹಣ ಪಾವತಿಸುವಂತೆ ಪಾಲಿಕೆ ಆಡಳಿತಕ್ಕೆ ರಾಜ್ಯ ಹೈಕೋರ್ಟ್ ಇಂದು ಆದೇಶ ನೀಡಿದೆ.
ಪೌರಕಾರ್ಮಿಕರಿಗೆ ಕೊಡಬೇಕಾಗಿದ್ದ ಬಾಕಿ ಹಣವಾದ ₹90,18,89,719 (ತೊಂಬತ್ತು ಕೋಟಿ ಹದಿನೆಂಟು ಲಕ್ಷ ಎಂಬತ್ತೊಂಬತ್ತು ಸಾವಿರದ ಏಳುನೂರ ಹತ್ತೊಂಬತ್ತು) ಅನ್ನು ಪಾವತಿಸುವಂತೆ ಕರ್ನಾಟಕ ಉಚ್ಛ ನ್ಯಾಯಾಲಯ ಆದೇಶ ನೀಡಿ, ಪೌರಕಾರ್ಮಿಕರ ಸೇವೆಯ ಮಹತ್ವ ಮತ್ತು ಕೆಲಸದ ದುಸ್ಥಿತಿಗಳನ್ನು ಕುರಿತು ಆದೇಶದಲ್ಲಿ ಒತ್ತಿ ಹೇಳಿದೆ.
ಬಿಬಿಎಂಪಿ ಬಾಕಿ ಉಳಿಸಿಕೊಂಡಿದ್ದ ಬಾಕಿ ಪಿಎಫ್ ಹಣಕ್ಕೆ ವಾರ್ಷಿಕ 12% ಬಡ್ಡಿಯೊಂದಿಗೆ ಆದೇಶದ ದಿನಾಂಕದಿಂದ ಎಂಟು ವಾರಗಳಲ್ಲಿ ಪೌರಕಾರ್ಮಿಕರ ಇಪಿಎಫ್ ಖಾತೆಗಳಿಗೆ ಜಮಾಮಾಡಬೇಕೆಂದು ಆದೇಶ ನೀಡಿದೆ.
ಬಿಬಿಎಂಪಿ ಪೌರಕಾರ್ಮಿಕರ ಸಂಘ (ಎಐಸಿಸಿಟಿಯುನೊಂದಿಗೆ ಸಂಯೋಜಿತವಾಗಿದೆ) ಬಿಬಿಎಂಪಿಯಲ್ಲಿ ಉದ್ಯೋಗದಲ್ಲಿರುವ ಪೌರಕಾರ್ಮಿಕರಿಗೆ ಜನವರಿ 2011 ಮತ್ತು ಜುಲೈ 2017 ರ ನಡುವಿನ ಅವಧಿಗೆ ಬಾಕಿ ಉಳಿಸಿಕೊಂಡಿದ್ದ ಪಿಎಫ್ ವಂತಿಗೆಯನ್ನು ಕೋರಿ ದೂರುಗಳನ್ನು ಸಲ್ಲಿಸಿತ್ತು. ಅದರ ಮೇಲೆ ಇಪಿಎಫ್ ಪ್ರಾಧಿಕಾರವು 26.10.2017 ರಂದು ಬಿಬಿಎಂಪಿಗೆ ರೂ. 90,18,89,719/- ಪೌರಕಾರ್ಮಿಕರ ಇಪಿಎಫ್ ಖಾತೆಗಳಿಗೆ ಜಮಾಮಾಡುವಂತೆ ಆದೇಶ ಹೊರಡಿಸಿತ್ತು. ಇಪಿಎಫ್ ಪ್ರಾಧಿಕಾರದ ಆದೇಶವನ್ನು ಅನುಸರಿಸಲು ವಿಫಲವಾದ ಕಾರಣ, ಆದೇಶವನ್ನು ಪಾಲಿಸುವಂತೆ ಬಿಬಿಎಂಪಿಗೆ ನಿರ್ದೇಶನ ನೀಡುವಂತೆ ಕೋರಿ ಕಾರ್ಮಿಕ ಸಂಘಟನೆಯು ಉಚ್ಛ ನ್ಯಾಯಾಲಯದ ಮೊರೆ ಹೋಗಿತ್ತು.
ಉಚ್ಚ ನ್ಯಾಯಾಲಯವು ಪೌರಕಾರ್ಮಿಕರ ಸೇವೆಯ ಮಹತ್ವ ಮತ್ತು ಅವರ ಕೆಲಸದಲ್ಲಿನ ದುಸ್ಥಿತಿಗಳನ್ನು ಗುರುತಿಸಿದೆ. “ಈ ಕಾರ್ಮಿಕರು (ಪೌರಕಾರ್ಮಿಕರು) ಸಮಾಜಕ್ಕೆ ಉತ್ತಮ ಸೇವೆಯನ್ನು ಮಾಡುತ್ತಿದ್ದಾರೆ ಮತ್ತು ಎಲ್ಲಾ ಕಾರ್ಮಿಕರು ಸರಿಯಾದ ವೇತನವನ್ನು ಸಕಾಲಕ್ಕೆ ಪಡೆಯುವುದನ್ನು ಒಳಗೊಂಡಂತೆ ತಮ್ಮ ಬಾಕಿ ಮೊತ್ತಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಕಾರ್ಮಿಕ ಸಂಘಟನೆಯು ಹಲವಾರು ವರ್ಷಗಳಿಂದ ಕೆಲಸ ಮಾಡಿದೆ. ಪೌರಕಾರ್ಮಿಕರು ದಲಿತ ಸಮುದಾಯವರಾಗಿದ್ದು, ಅದರಲ್ಲೂ ಪ್ರಧಾನವಾಗಿ ಮಹಿಳೆಯರೇ ಇದ್ದಾರೆ. ಸಾಪ್ತಾಹಿಕ ಅಥವಾ ರಾಷ್ಟ್ರೀಯ ರಜಾದಿನಗಳು ಅಥವಾ ಯಾವುದೇ ವಿರಾಮಗಳಿಲ್ಲದೆಯೇ, ಅವರು ವೈಜ್ಞಾನಿಕ ತಂತ್ರಜ್ಞಾನವಿಲ್ಲದ ಅಮಾನವೀಯ ಮತ್ತು ಹಳೆಯ ಮಾದರಿಯಲ್ಲೆ ಕಸ-ಸಂಗ್ರಹಣೆ ಮಾಡಿ, ರಸ್ತೆ ಗುಡಿಸುವಲ್ಲಿ ವರ್ಷವಿಡೀ ಕೆಲಸ ಮಾಡುತ್ತಾರೆ. ಅವರು ತಮ್ಮ ಸ್ವಂತ ಆರೋಗ್ಯವನ್ನು ಲೆಕ್ಕಿಸದೇ ನಿರಂತರವಾಗಿ ಸಾರ್ವಜನಿಕರ ಆರೋಗ್ಯವನ್ನು ರಕ್ಷಿಸಿದ್ದಾರೆ. ಪ್ರತಿ ದಿನವೂ ಅದನ್ನು ಮುಂದುವರೆಸಿದ್ದಾರೆ. ಇದರಿಂದಾಗಿ ಅವರು ಗಂಭೀರ ಮತ್ತು ಜೀವನಾವಧಿಯನ್ನು ಕಡಿಮೆಗೊಳಿಸುವ ಉಸಿರಾಟದ ಕಾಯಿಲೆಗಳು, ಹೃದಯದ ತೊಂದರೆಗಳು, ಬೆನ್ನು ಮತ್ತು ಮೊಣಕಾಲಿನ ಸಮಸ್ಯೆಗಳಿಂದ ಬಳಲುತ್ತಿದ್ದಾರೆ’ ಎಂದು ತನ್ನ ಆದೇಶದಲ್ಲಿ ಹೇಳಿದೆ.
ಪೌರಕಾರ್ಮಿಕರಿಗೆ ಆಗಿರುವ ಅನ್ಯಾಯದ ಬಗ್ಗೆಯೂ ಗಮನಿಸಿದ ನ್ಯಾಯಲಯ, ‘ಪ್ರತಿವಾದಿ ಬಿಬಿಎಂಪಿಯ ಕೃತ್ಯಗಳು ಅತ್ಯಂತ ಬಡ ಮತ್ತು ಹಿಂದುಳಿದ ಹಿನ್ನೆಲೆಯಿಂದ ಬಂದ ಕಾರ್ಮಿಕರಿಗೆ ಆರ್ಥಿಕ ಮತ್ತು ಮಾನಸಿಕ ನೋವನ್ನುಂಟುಮಾಡಿದೆ. 26.10.2017ರ ಆದೇಶವನ್ನು ಪಾಲಿಸಲು ಮತ್ತು ಅನುಷ್ಠಾನಗೊಳಿಸಲು ಪಾಲಿಕೆ ವಿಫಲವಾಗಿದ್ದು, ಇದು ಕಾನೂನುಬಾಹಿರ ನಡೆಯಾಗಿದೆ. ಇದು ಸಾರ್ವಜನಿಕ ನೀತಿಯ ಉಲ್ಲಂಘನೆಯಾಗಿದ್ದು, ಪೌರಕಾರ್ಮಿಕರ ಮೂಲಭೂತ ಮತ್ತು ಶಾಸನಬದ್ಧ ಜೀವನಕ್ಕೆ ವಿರುದ್ಧವಾಗಿದೆ’ ಎಂದು ಪಾಲಿಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದೆ.
‘ಬಿಬಿಎಂಪಿ ಪೌರಕಾರ್ಮಿಕರ ಸಂಘವು ಪೌರಕಾರ್ಮಿಕರ ಹಕ್ಕು ಮತ್ತು ಘನತೆಗಾಗಿ ಅಚಲ ಹೋರಾಟ ನಡೆಸುತ್ತಿದ್ದು, ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸಲಿದೆ’ ಎಂದು ಪೌರಕಾರ್ಮಿಕರ ಸಮಘದ ಅಧ್ಯಕ್ಷರಾದ ನಿರ್ಮಲಾ ಎಂ ತಿಳಿಸಿದ್ದಾರೆ.
ಇದನ್ನೂ ಓದಿ; ‘ಐಕ್ಯತೆಯೇ ದೈವ; ಛಿದ್ರತೆಯೇ ದೆವ್ವ’ ಎಂಬ ನುಡಿ ಮಂಡ್ಯದ ಸುಪ್ತ ಪ್ರಜ್ಞೆಯಲ್ಲೇ ಇದೆ: ದೇವನೂರ ಮಹಾದೇವ


