ಕಾಲೇಜಿನಲ್ಲಿ ಹಿಜಾಬ್ ನಿಷೇಧ ಪ್ರಕರಣದ ಬಗ್ಗೆ ರಾಜ್ಯ ಹೈಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿರುವ ಸಂಸದ ಅಸಾದುದ್ದೀನ್ ಓವೈಸಿ, ತೀರ್ಪು ಒಂದು ಧರ್ಮವನ್ನು ಗುರಿಯಾಗಿಸಿದ್ದು, ಧಾರ್ಮಿಕ ಆಚರಣೆಯನ್ನು ನಿಷೇಧಿಸಲಾಗಿದೆ. ಆರ್ಟಿಕಲ್ 15 ಧರ್ಮದ ಆಧಾರದ ಮೇಲೆ ತಾರತಮ್ಯವನ್ನು ನಿಷೇಧಿಸುತ್ತದೆ. ಇದು ಅದರ ಉಲ್ಲಂಘನೆಯಲ್ಲವೇ? ಎಂದು ಮಂಗಳವಾರ ಪ್ರಶ್ನಿಸಿದ್ದಾರೆ.
ಹೈಕೋರ್ಟ್‌ನ ಮೌಖಿಕ ಆದೇಶದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಹಿಜಾಬ್ ಕುರಿತ ಕರ್ನಾಟಕ ಹೈಕೋರ್ಟ್‌ನ ತೀರ್ಪನ್ನು ನಾನು ಒಪ್ಪುವುದಿಲ್ಲ. ತೀರ್ಪನ್ನು ಒಪ್ಪದಿರುವುದು ನನ್ನ ಹಕ್ಕಾಗಿದ್ದು, ವಿದ್ಯಾರ್ಥಿನಿಯರು ಸುಪ್ರೀಂಕೋರ್ಟ್ ಮುಂದೆ ಮೇಲ್ಮನವಿ ಸಲ್ಲಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
“ತೀರ್ಪು ಧರ್ಮ, ಸಂಸ್ಕೃತಿ, ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕುಗಳನ್ನು ಅಮಾನತುಗೊಳಿಸಿರುವುದರಿಂದ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಮತ್ತು ಇತರ ಧಾರ್ಮಿಕ ಗುಂಪುಗಳ ಸಂಘಟನೆಗಳು ಕೂಡಾ ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುತ್ತವೆ ಎಂದು ನಾನು ಭಾವಿಸುತ್ತೇನೆ” ಎಂದು ಓವೈಸಿ ಹೇಳಿದ್ದಾರೆ.
ಇದನ್ನೂ ಓದಿ: ಹಿಂದುತ್ವ ರಾಜಕಾರಣ; ಹಿಜಾಬಿನ ಅಪರಾಧೀಕರಣ
“ಸಂವಿಧಾನದ ಪೀಠಿಕೆಯು ಒಬ್ಬನಿಗೆ ಆಲೋಚನೆ, ಅಭಿವ್ಯಕ್ತಿ, ಧಾರ್ಮಿಕ ನಂಬಿಕೆ ಮತ್ತು ಆರಾಧನೆಯ ಸ್ವಾತಂತ್ರ್ಯವಿದೆ ಎಂದು ಹೇಳುತ್ತದೆ. ನನ್ನ ತಲೆಯನ್ನು ಮುಚ್ಚಿಕೊಳ್ಳುವುದು ಅತ್ಯಗತ್ಯ ಎಂಬುದು ನನ್ನ ಧಾರ್ಮಿಕ ನಂಬಿಕೆಯಾಗಿದ್ದರೆ, ನಾನು ಸೂಕ್ತವೆಂದು ಭಾವಿಸಿದಂತೆ ಅದನ್ನು ವ್ಯಕ್ತಪಡಿಸಲು ನನಗೆ ಹಕ್ಕಿದೆ. ಧರ್ಮನಿಷ್ಠ ಮುಸಲ್ಮಾನರಿಗೆ ಹಿಜಾಬ್ ಕೂಡ ಒಂದು ಆರಾಧನೆಯ ಕ್ರಿಯೆಯಾಗಿದೆ” ಎಂದು ಅವರು ಹೇಳಿದ್ದಾರೆ.
“ಇದು ಅಗತ್ಯ ಧಾರ್ಮಿಕ ಆಚರಣೆ ಪರೀಕ್ಷೆಯನ್ನು ಪರಿಶೀಲಿಸುವ ಸಮಯ. ಒಬ್ಬ ಧರ್ಮನಿಷ್ಠ ವ್ಯಕ್ತಿಗೆ, ಎಲ್ಲವೂ ಅತ್ಯಗತ್ಯ. ನಾಸ್ತಿಕನಿಗೆ ಯಾವುದೂ ಅತ್ಯಗತ್ಯವಲ್ಲ. ಶ್ರದ್ಧಾವಂತ ಹಿಂದೂ ಬ್ರಾಹ್ಮಣರಿಗೆ, ಜನಿವಾರ ಅತ್ಯಗತ್ಯ ಆದರೆ ಬ್ರಾಹ್ಮಣೇತರರಿಗೆ ಅದು ಇಲ್ಲದಿರಬಹುದು. ನ್ಯಾಯಾಧೀಶರು ಅತ್ಯಗತ್ಯ ಆಚರಣೆಯನ್ನು ನಿರ್ಧರಿಸಬಹುದು ಎಂಬುದು ಅಸಂಬದ್ಧವಾಗಿದೆ” ಎಂದು ಅವರು ಹೇಳಿದ್ದಾರೆ.
12. Lastly, this means that one religion has been targeted & its religious practice has been banned. Article 15 prohibits discrimination based on religion. Is this not a violation of the same? In short HC order has forced kids to choose between education & Allah’s commands
— Asaduddin Owaisi (@asadowaisi) March 15, 2022
“ಒಬ್ಬ ವ್ಯಕ್ತಿ ಒಂದು ಧರ್ಮವನ್ನು ಆಚರಿಸುತ್ತಿದ್ದರೆ, ಅದೇ ಧರ್ಮವನ್ನು ಆಚರಿಸುವ ಇನ್ನೊಬ್ಬ ವ್ಯಕ್ತಿಯ ಅತ್ಯಗತ್ಯ ಧಾರ್ಮಿಕ ಆಚರಣೆಯ ಬಗ್ಗೆ ನಿರ್ಧರಿಸುವ ಹಕ್ಕಿಲ್ಲ. ಆಚರಣೆಗಳು ವ್ಯಕ್ತಿ ಮತ್ತು ದೇವರ ನಡುವೆ ಇರುವಂತಹದ್ದು. ಆಚರಣೆಗಳು ಇತರರಿಗೆ ಹಾನಿಯಾದರೆ ಮಾತ್ರ ಧಾರ್ಮಿಕ ಹಕ್ಕುಗಳಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಲು ಅವಕಾಶ ನೀಡಬೇಕು. ತಲೆಗೆ ಹಿಜಾಬ್ ಧರಿಸುವುದು ಯಾರಿಗೂ ಹಾನಿ ಮಾಡುವುದಿಲ್ಲ” ಎಂದು ಅವರು ಹೇಳಿದ್ದಾರೆ.
“ಸ್ಕಾರ್ಫ್ ನಿಷೇಧಿಸುವುದರಿಂದ ಧರ್ಮನಿಷ್ಠ ಮುಸ್ಲಿಂ ಮಹಿಳೆಯರು ಮತ್ತು ಅವರ ಕುಟುಂಬಗಳಿಗೆ ಖಂಡಿತವಾಗಿಯೂ ಹಾನಿ ಮಾಡುತ್ತದೆ. ಯಾಕೆಂದರೆ ಇದು ಅವರು ಶಿಕ್ಷಣವನ್ನು ಪಡೆಯುವುದನ್ನು ತಡೆಯುತ್ತದೆ” ಎಂದು ಓವೈಸಿ ಹೇಳಿದ್ದಾರೆ.
“ಸಮವಸ್ತ್ರವು ಏಕರೂಪತೆಯನ್ನು ಖಚಿತಪಡಿಸುತ್ತದೆ ಎಂಬುದು ಹೇಗೆ? ಶ್ರೀಮಂತ ಹಾಗೂ ಬಡ ಕುಟುಂಬದಿಂದ ಬಂದವರು ಯಾರೆಂದು ಮಕ್ಕಳಿಗೆ ತಿಳಿಯುವುದಿಲ್ಲವೇ? ಜಾತಿಯ ಹೆಸರುಗಳು ಅವರ ಹಿನ್ನೆಲೆಯನ್ನು ಸೂಚಿಸುವುದಿಲ್ಲವೇ?” ಎಂದು ಅವರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಹಿಜಾಬ್: ನ್ಯಾಯ ವ್ಯವಸ್ಥೆಯ ಬಗ್ಗೆ ವಿಶ್ವಾಸವಿದೆ, ಆದರೆ ಸರಕಾರ, ಶಿಕ್ಷಣ ಸಂಸ್ಥೆಗಳ ಮೇಲಿಲ್ಲ – ರಾಜೇಂದ್ರ ಚೆನ್ನಿ
“ಶಿಕ್ಷಕರು ತಾರತಮ್ಯ ಮಾಡುವುದನ್ನು ತಡೆಯಲು ಸಮವಸ್ತ್ರದ ಕೊಡುಗೆ ಏನು? ವೈವಿಧ್ಯತೆಯನ್ನು ಪ್ರತಿಬಿಂಬಿಸಲು ಶಾಲೆ, ಪೊಲೀಸ್ ಮತ್ತು ಸೇನೆಯ ಸಮವಸ್ತ್ರಗಳಲ್ಲಿ ಸಮಂಜಸವಾದ ಅವಕಾಶಗಳನ್ನು ಜಾಗತಿಕವಾಗಿ ನೀಡಲಾಗಿದೆ. ಹಿಜಾಬ್ ಮತ್ತು ಸಿಖ್ ಪೇಟವನ್ನು ಅನುಮತಿಸಲು ಬೇಕಾಗಿ ಐರ್ಲೆಂಡ್ ಸರ್ಕಾರವು ಪೊಲೀಸ್ ಸಮವಸ್ತ್ರದ ನಿಯಮಗಳನ್ನು ಬದಲಾಯಿಸಿದಾಗ, ಮೋದಿ ಸರ್ಕಾರ ಅದನ್ನು ಸ್ವಾಗತಿಸಿತು. ಹಾಗಾದರೆ ನಮ್ಮ ದೇಶದಲ್ಲಿ ಮತ್ತು ವಿದೇಶದಲ್ಲಿ ಎರಡು ಮಾನದಂಡಗಳು ಯಾಕೆ? ಸಮವಸ್ತ್ರದ್ದೇ ಬಣ್ಣಗಳ ಹಿಜಾಬ್ ಮತ್ತು ಪೇಟಗಳನ್ನು ಧರಿಸಲು ಅನುಮತಿಸಬಹುದಲ್ಲವೆ” ಎಂದು ಓವೈಸಿ ಬಿಜೆಪಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
“ಇದೆಲ್ಲದರ ಪರಿಣಾಮ ಏನಾಗಲಿದೆ? ಮೊದಲನೆಯದಾಗಿ, ಸರ್ಕಾರವು ಅಸ್ತಿತ್ವದಲ್ಲಿಲ್ಲದ ಸಮಸ್ಯೆಯನ್ನು ಸೃಷ್ಟಿಸಿತು. ಈ ಹಿಂದೆ ಮಕ್ಕಳು ಹಿಜಾಬ್, ಬಳೆ ಇತ್ಯಾದಿ ಧರಿಸಿ ಶಾಲೆಗೆ ಹೋಗುತ್ತಿದ್ದರು. ಎರಡನೆಯದಾಗಿ, ಹಿಂಸಾಚಾರವನ್ನು ಪ್ರಚೋದಿಸಿ, ಕೇಸರಿ ಪೇಟಗಳೊಂದಿಗೆ ಹಿಜಾಬ್ ವಿರುದ್ದ ಪ್ರತಿಭಟನೆಗಳನ್ನು ನಡೆಸಲಾಯಿತು. ಕೇಸರಿ ಪೇಟಗಳು ‘ಅಗತ್ಯ’ವೇ? ಅಥವಾ ಹಿಜಾಬ್‌ಗೆ ‘ಪ್ರತಿಕ್ರಿಯೆ’ಯಾಗಿ ಮಾತ್ರವೆ ಧರಿಸಲಾಯಿತೆ?” ಎಂದು ಅವರು ಪ್ರಶ್ನಿಸಿದ್ದಾರೆ.
“ಮೂರನೆಯದಾಗಿ, ಸರ್ಕಾರಿ ಆದೇಶ ಮತ್ತು ಹೈಕೋರ್ಟ್ ಆದೇಶವು ಮೂಲಭೂತ ಹಕ್ಕುಗಳನ್ನು ಅಮಾನತುಗೊಳಿಸಿದೆ. ಮಾಧ್ಯಮಗಳು, ಪೊಲೀಸರು ಮತ್ತು ಆಡಳಿತ ಮಂಡಳಿ ಹಿಜಾಬ್ ಧರಿಸಿದ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಕಿರುಕುಳ ನೀಡುವುದನ್ನು ನಾವು ನೋಡಿದ್ದೇವೆ. ಮಕ್ಕಳು ಪರೀಕ್ಷೆ ಬರೆಯುವುದನ್ನು ಸಹ ನಿಷೇಧಿಸಲಾಗಿದೆ. ಇದು ನಾಗರಿಕ ಹಕ್ಕುಗಳ ಸಾಮೂಹಿಕ ಉಲ್ಲಂಘನೆಯಾಗಿದೆ” ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
“ಕೊನೆಯದಾಗಿ, ಇದರರ್ಥ ಒಂದು ಧರ್ಮವನ್ನು ಗುರಿಯಾಗಿಸಲಾಗಿದ್ದು, ಧಾರ್ಮಿಕ ಆಚರಣೆಯನ್ನು ನಿಷೇಧಿಸಲಾಗಿದೆ. ಆರ್ಟಿಕಲ್ 15 ಧರ್ಮದ ಆಧಾರದ ಮೇಲೆ ತಾರತಮ್ಯವನ್ನು ನಿಷೇಧಿಸುತ್ತದೆ. ಇದು ಅದುವೆ ಉಲ್ಲಂಘನೆಯಲ್ಲವೇ? ಸಂಕ್ಷಿಪ್ತವಾಗಿ ಹೈಕೋರ್ಟ್ ಆದೇಶವು ಮಕ್ಕಳನ್ನು ಶಿಕ್ಷಣ ಮತ್ತು ಅಲ್ಲಾಹನ ಆಜ್ಞೆಗಳ ನಡುವೆ ಆಯ್ಕೆ ಮಾಡುವಂತೆ ಒತ್ತಾಯಿಸಿದೆ” ಎಂದು ಅವರು ಹೇಳಿದ್ದಾರೆ.
“ನಮಾಜ್, ಹಿಜಾಬ್, ರೋಜಾ ಇತ್ಯಾದಿ ಕಟ್ಟುಪಾಡುಗಳ ಜೊತೆಗೆ ಶಿಕ್ಷಣ ಪಡೆಯಬೇಕು ಎಂಬುವುದು ಮುಸ್ಲಿಮರಿಗೆ ಅಲ್ಲಾಹನ ಆಜ್ಞೆಯಾಗಿದೆ. ಈಗ ಸರ್ಕಾರ ಮುಸ್ಲಿಂ ಹುಡುಗಿಯರಿಗೆ ಅವುಗಳ ನಡುವೆ ಆಯ್ಕೆ ಮಾಡಲು ಒತ್ತಾಯಿಸುತ್ತಿದೆ. ಇಲ್ಲಿಯವರೆಗೆ ನ್ಯಾಯಾಂಗವು ಮಸೀದಿ ಮತ್ತು ಗಡ್ಡವನ್ನು ಇಟ್ಟುಕೊಳ್ಳುವುದು ಅತ್ಯಗತ್ಯವಲ್ಲ ಎಂದು ತೀರ್ಪು ನೀಡಿದೆ. ಈಗ ಹಿಜಾಬ್ ಅನಿವಾರ್ಯವಲ್ಲ ಎಂದು ತೀರ್ಪು ನೀಡಿದೆ. ನಂಬಿಕೆಗಳನ್ನು ಮುಕ್ತವಾಗಿ ಆಚರಿಸುವುದರಲ್ಲಿ ಇನ್ನು ಯಾವುದು ಉಳಿದಿದೆ? ಹಿಜಾಬ್ ಧರಿಸುವ ಮಹಿಳೆಯರಿಗೆ ಕಿರುಕುಳ ನೀಡುವುದನ್ನು ಕಾನೂನುಬದ್ಧಗೊಳಿಸಲು ಈ ತೀರ್ಪು ಬಳಸಲ್ಪಡುವುದಿಲ್ಲ ಎಂದು ನಾನು ಭಾವಿಸುತ್ತೇನೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಮುಸ್ಲಿಂ ವಿದ್ಯಾರ್ಥಿನಿಯರ ರಿಟ್ ಅರ್ಜಿ ವಜಾ; ಹಿಜಾಬ್ ನಿಷೇಧ ಎತ್ತಿ ಹಿಡಿದ ಹೈಕೋರ್ಟ್


