Homeಅಂಕಣಗಳುಬಹುಜನ ಭಾರತ; ತಡೆಯಬೇಕಿದೆ ಬಿಸಿಪ್ರಳಯದ ಘೋರವನು...

ಬಹುಜನ ಭಾರತ; ತಡೆಯಬೇಕಿದೆ ಬಿಸಿಪ್ರಳಯದ ಘೋರವನು…

- Advertisement -
- Advertisement -

ಶತಮಾನದ ಅಂತ್ಯದ ವೇಳೆಗೆ ಜಗತ್ತಿನ ಮೂರನೆಯ ಒಂದರಷ್ಟು ಹೊಲಗದ್ದೆಗಳು, ತೋಟತುಡಿಕೆಗಳು, ಗೋಮಾಳಗಳು ಸಾರಾಸಗಟು ಬಂಜರು ಬೀಳಲಿವೆ. ಅರ್ಥಾತ್ ಅವುಗಳಲ್ಲಿ ಆಹಾರ ಉತ್ಪಾದನೆ ಅಸಾಧ್ಯವೆನಿಸಲಿದೆ. ಮುಂದಿನ ಇಪ್ಪತ್ತೆಂಟು ವರ್ಷಗಳಲ್ಲಿ ಜಗತ್ತಿನ ಅನ್ನದ ಕಣಜಗಳು ಬೆಳೆ ವೈಫಲ್ಯ ಎದುರಿಸಲಿದ್ದು, ತೀವ್ರ ತಾಪಮಾನದಿಂದಾಗಿ ಜಾನುವಾರುಗಳು ಸಾಯಲಿವೆ. ಆಹಾರದ ಬೆಲೆಗಳು ಆಗಸಕ್ಕೆ ಜಿಗಿದು, ಈಗಾಗಲೇ ಹಸಿವನ್ನೇ ಹೊದ್ದು ಮಲಗುತ್ತಿರುವ ಜನಕೋಟಿಯೊಂದಿಗೆ ಮುಂದಿನ ಎಂಟು ವರ್ಷಗಳಲ್ಲಿ 12 ಕೋಟಿ ತುತ್ತಿನ ಚೀಲಗಳು ಹೊಸದಾಗಿ ಸೇರಿಕೊಳ್ಳಲಿವೆ.

ಜಾಗತಿಕ ತಾಪಮಾನ ಏರಿಕೆಯು ಜಗತ್ತನ್ನು ಹೆಚ್ಚುಹೆಚ್ಚು ಬರಗಾಲ, ಜಲಕ್ಷಾಮ, ಕಾಳ್ಗಿಚ್ಚು, ಉಷ್ಣೋಗ್ರತೆಯ ಗಾಳಿ ಗುಮ್ಮಟಗಳು, ಬಿಸಿಮಾರುತಗಳು, ಯರ್ರಾಬಿರ್ರಿ ಮಳೆ-ಬೆಳೆಯ ಏರುಪೇರುಗಳು, ಹಸಿವೆ, ರೋಗರುಜಿನ, ದಾರಿದ್ರ್ಯ ಅಂಧಕಾರ ಅಪಾಯಗಳತ್ತ ಒಯ್ಯಲಿದೆ. ಸಾಮಾಜಿಕ-ಆರ್ಥಿಕ ಅಸಮಾನತೆಯ ಕಂದಕಗಳು ಇನ್ನಷ್ಟು ಹಿರಿದಾಗಲಿವೆ. ಸಾಗರ ಸಮುದ್ರಗಳು ಉಕ್ಕಿ ಹರಿದು ಹೆಚ್ಚುಹೆಚ್ಚು ನೆಲವನ್ನು ನುಂಗಲಿವೆ. ಮೂರನೆಯ ಒಂದರಷ್ಟು ಮನುಕುಲ ಅಸಹನೀಯ ಉಷ್ಣೋಗ್ರತೆಯಲ್ಲಿ ಬದುಕಿ ಬಾಳುವ ಆಪತ್ತು ಎದುರಾಗಲಿದೆ. ಪ್ರತಿಕೂಲ ಪರಿಸರದ ಕಾರಣ ಮನುಕುಲವು ಮಹಾವಲಸೆಗಳಿಗೆ ಸಾಕ್ಷಿಯಾಗಲಿದೆ. ವಲಸೆಯ ಶಕ್ತಿ ಸಂಪನ್ಮೂಲಗಳಿಲ್ಲದ ಸಮುದಾಯಗಳು ಇದ್ದಲ್ಲಿಯೇ ನವೆದು ಸಾಯಲಿವೆ.

ಈ ಸಂಕಟವು ಈಗಾಗಲೆ ಜಗತ್ತಿನ 330 ಕೋಟಿ ಜನರ ಮೇಲೆ ಎರಗಿದೆ. ಅವರ ದೈನಂದಿನ ಬದುಕು ದುರ್ಬರವಾಗಿದೆ. ಉಷ್ಣಮಾರುತಗಳು, ಹವಾಮಾಲಿನ್ಯ, ಹವಾಮಾನ ಅತಿರೇಕಗಳು, ರೋಗರುಜಿನಗಳಿಂದ ಸಾಯುವ ಜನರ ಸಂಖ್ಯೆ ಗಣನೀಯವಾಗಿ ಏರಲಿದೆ. ಹಸಿವಿನೊಂದಿಗೆ ಉಷ್ಣೋಗ್ರತೆಯ ಒತ್ತಡ, ಶ್ವಾಸಕೋಶದ ಸಮಸ್ಯೆಗಳು, ಸಾಂಕ್ರಾಮಿಕ ಕಾಯಿಲೆಗಳು ಮನುಷ್ಯ ಕುಲವನ್ನು ಮುತ್ತಲಿವೆ.

ಕೈಗಾರಿಕೆ ಯುಗ ಆರಂಭವಾಗುವ ಮುನ್ನ ನೆಲೆಸಿದ್ದ ತಾಪಮಾನ ಒಂದೂವರೆ ಡಿಗ್ರಿಯಷ್ಟು ಹೆಚ್ಚಿತೆಂದರೆ ಬಿಸಿಪ್ರಳಯದ ಘನಘೋರ ದುಃಸ್ವಪ್ನ ನಿಜರೂಪ ತಳೆದು ಇಳೆಯನ್ನು ಆವರಿಸಲಿದೆ. ಒಂದೂವರೆ ಡಿಗ್ರಿಯ ಪೈಕಿ 1.1ರಷ್ಟು ಡಿಗ್ರಿ ಈಗಾಗಲೆ ಹೆಚ್ಚಿಬಿಟ್ಟಿದೆ. ಕೇವಲ ಇಪ್ಪತ್ತೇ ವರ್ಷಗಳಲ್ಲಿ 1.5 ಡಿಗ್ರಿಯನ್ನು ಮುಟ್ಟುವ ನಿರೀಕ್ಷೆ ಇದೆ. ತಾಪಮಾನ ಹೆಚ್ಚಳ ಎರಡು ಡಿಗ್ರಿ ಮುಟ್ಟಿದರೆ ಕಾಳ್ಗಿಚ್ಚಿಗೆ ಸಿಗುವ ಭೂಪ್ರದೇಶ ಮೂರನೆಯ ಒಂದರಷ್ಟು ಪ್ರಮಾಣವನ್ನು ಮುಟ್ಟಿ ಮುನ್ನಡೆಯಲಿದೆ. ನಗರ-ಮಹಾನಗರಗಳ ಬದುಕು ಅಸಾಧ್ಯವೆನಿಸಲಿದೆ. ಆರ್ಥವ್ಯವಸ್ಥೆಗಳು ಮುಳುಗಿ ತಳ ಸೇರಲಿವೆ. ಆಹಾರ ಪೂರೈಕೆಯ ಸ್ಥಿತಿ ತೀರಾ ಗಂಭೀರವೆನಿಸಲಿದೆ.

ಭಾರೀ ಮಳೆ, ಉಗ್ರ ಉಷ್ಣ, ನಿಸ್ಸಾರ ಮಣ್ಣು, ಬೆಳೆಗಳ ಮೇಲೆ ಬಿರುಗಾಳಿಯಂತೆ ಎರಗಿ ನಿಮಿಷಗಳಲ್ಲಿ ಕಬಳಿಸುವ ಮಿಡತೆಗಳಂತಹ ಕೀಟಗಳ ಹೆಚ್ಚಳ, ಪರಾಗಸ್ಪರ್ಶದಂತಹ ಬಹುಮುಖ್ಯ ಕ್ರಿಯೆಯನ್ನು ಆಗು ಮಾಡುವ ಜೇನುನೊಣಗಳ ಸಂಖ್ಯೆಯ ಕುಸಿತದಿಂದ ಆಹಾರ ಧಾನ್ಯಗಳ ಉತ್ಪಾದನೆ ಇಳಿಮುಖವಾಗಲಿದೆ. ಏರುತ್ತ ಹೋಗುವ ಪ್ರತಿ ಡಿಗ್ರಿ ತಾಪಮಾನ ಭತ್ತ, ಗೋಧಿ, ಮುಸುಕಿನ ಜೋಳದ ಇಳುವರಿಯನ್ನು ಶೇ.10ರಿಂದ ಶೇ.25ರಷ್ಟು ಬಲಿ ತೆಗೆದುಕೊಳ್ಳಲಿದೆ. ವರ್ಷದ 250ಕ್ಕೂ ಹೆಚ್ಚು ದಿನಗಳಲ್ಲಿ ಹಗಲು ಹೊಲಗದ್ದೆಗಳಿಗೆ ಇಳಿದು ಕೆಲಸ ಮಾಡುವುದು ಅಸಹನೀಯವೆನಿಸಿ ಕೃಷಿಕೂಲಿಗೆ ಜನ ಮುಂದೆ ಬಾರದಿರುವ ದಿನಗಳು ಎದುರಾಗಲಿವೆ.

ಭಾರತದಂತಹ ಸಮಶೀತೋಷ್ಣ ದೇಶಗಳಲ್ಲಿ ಉಷ್ಣೋಗ್ರತೆಯು ಜಾನುವಾರುಗಳ ಸಂಖ್ಯೆಯನ್ನು ಕುಗ್ಗಿಸಲಿದ್ದು ಹಾಲು ಹೈನು, ಮಾಂಸದ ಉತ್ಪಾದನೆ ಭಾರೀ ಪ್ರಮಾಣದಲ್ಲಿ ಕುಸಿಯಲಿದೆ. ಚಂಡಮಾರುತಗಳು, ಪ್ರವಾಹಗಳು, ಬರಗಾಲಗಳು ಪೌಷ್ಠಿಕ ಆಹಾರ ಉತ್ಪಾದನೆಗೆ ದೊಡ್ಡ ಏಟು ನೀಡಲಿವೆ.

ತಾಪಮಾನ ಏರಿಕೆಯ ಈ ವಿನಾಶ ಸಮುದ್ರ ಸಾಗರಗಳನ್ನೂ ಆವರಿಸಲಿದೆ. ಅಲೆಗಳು ಬಿಸಿಯೇರಲಿವೆ. ಸಾಗರಗಳ ನೀರು ಹೆಚ್ಚುಹೆಚ್ಚು ಆಮ್ಲಮಯ ಆಗಲಿದೆ. ಕುಡಿಯುವ ನೀರಿನ ಮೂಲಗಳಿಗೆ ಉಪ್ಪು ನೀರು ಜಿನುಗಿ ಸೇರಿಕೊಳ್ಳಲಿದೆ. ಹಾನಿಕಾರಕ ಪಾಚಿಗಳು ಮೈತಳೆದು ಮೀನು ಮತ್ತಿತರೆ ಸಾಗರೋತ್ಪನ್ನ ಆಹಾರವನ್ನು ಕುಂದಿಸಲಿವೆ. ಅತೀವ ತಾಪಕ್ಕೆ ಸಿಕ್ಕಿ ನವೆಯಲಿರುವ ಹವಳದ ಬಂಡೆಗಳು ಕರಾವಳಿಯನ್ನು ಬಿರುಗಾಳಿಗಳಿಂದ ರಕ್ಷಿಸಲು ಅಸಮರ್ಥವಾಗಲಿವೆ. ಕರಾವಳಿ ಜನವಸತಿಗಳು ತೀವ್ರ ಪ್ರವಾಹಗಳಿಗೆ ಸಿಲುಕಲಿವೆ. ಮುಂದಿನ ಇಪ್ಪತ್ತು ವರ್ಷಗಳಲ್ಲಿ ಸಮುದ್ರ ಸಾಗರ ಮಟ್ಟಗಳು ಕಳೆದ ಶತಮಾನಗಳಲ್ಲಿ ಏರಿದ್ದಕ್ಕಿಂತ ರಭಸದಿಂದ ಮೇಲೇರಿ ಜನವಸತಿಗಳನ್ನು ಕಬಳಿಸಲಿವೆ.

ಇತ್ತೀಚೆಗೆ ಹೊರಬಿದ್ದಿರುವ ಐ.ಪಿ.ಸಿ.ಸಿ. ವರದಿಯು ಈ ವಿನಾಶ ಕುರಿತು ನೀಡಿರುವ ಎಚ್ಚರಿಕೆಯು
ಮನುಕುಲದ ಮರಣದ ಗಂಟೆಯೆಂದೇ ಪರಿಗಣಿಸಬೇಕಿದೆ. ತಡ ಮಾಡಿದರೆ ಮಾನವ ಜನಾಂಗ ಮತ್ತೊಂದು ಪ್ರಳಯದೊಳಕ್ಕೆ ನಡೆಯತ್ತಿರುವ ಈ ದುರಂತವನ್ನು ತಡೆಯುವ ಅವಕಾಶ ಕೂಡ ಇಲ್ಲವಾಗಲಿದೆ. 67 ದೇಶಗಳ 200 ವಿಜ್ಞಾನಿಗಳ ಆಳ ಅಧ್ಯಯನ ಫಲ ಈ ವರದಿ. ತಾಪಮಾನ ಹೆಚ್ಚಳವನ್ನು 1.5 ಡಿಗ್ರಿಗಳಿಗೇ ಹಿಡಿದು ನಿಲ್ಲಿಸಿದರೂ ಹಲವು ಅವಘಢಗಳು ಈಗಾಗಲೆ ಕೈ ಮೀರಿವೆಯಂತೆ. 1.5 ಡಿಗ್ರಿಯನ್ನು ಹಂಗಾಮಿಯಾಗಿ ಮೀರಿದರೂ ಸಾಧಕ ಬಾಧಕಗಳು ತೀರಾ ಗಂಭೀರ. ಇವುಗಳನ್ನು ಸರಿಪಡಿಸುವುದು ಸಾಧ್ಯವೇ ಇಲ್ಲ. ಜಾಗತಿಕ ತಾಪಮಾನ ಈಗಾಗಲೆ ಅಂತಹ ಹಲವು ಬದಲಾವಣೆಗಳನ್ನು ಮಾಡಿದ್ದು, ಅವುಗಳ ದುಷ್ಪರಿಣಾಮಗಳು ಈಗಾಗಲೆ ಅನುಭವಗೋಚರವಾಗಿವೆ.

ಮುಂಬರುವ ದಶಕಗಳಲ್ಲಿ ತಾಪಮಾನ ಏರುತ್ತ ಹೋದಂತೆ ಪ್ರವಾಹಗಳು, ಉಷ್ಣಮಾರುತಗಳು, ಬರಗಾಲಗಳು, ಜಲಕ್ಷಾಮಗಳು ಜಗತ್ತಿನ ನೂರಾರು ಕೋಟಿ ಜನರನ್ನು ಕಡು ಸಂಕಟಕ್ಕೆ ಗುರಿ ಮಾಡಲಿವೆ. ಇಂತಹ ಜನಕೋಟಿಯ ಪ್ರಮಾಣ ಕನಿಷ್ಠ ಮುನ್ನೂರು ಕೋಟಿ ಎಂದು ಅಂದಾಜು ಮಾಡಲಾಗಿದೆ. ಸೊಳ್ಳೆಗಳಿಂದ ಹಬ್ಬುವ ಡೆಂಘೀ, ಮಲೇರಿಯಾದಂತಹ ಸಾಂಕ್ರಾಮಿಕಗಳು ಹೊಸಹೊಸ ಪ್ರದೇಶಗಳಿಗೆ ಲಗ್ಗೆ ಇಕ್ಕಲಿವೆ. ವ್ಯಾಪಕ ಬೆಳೆ ವೈಫಲ್ಯಗಳು ಆಫ್ರಿಕಾ ಮತ್ತು ಏಷ್ಯಾದ ಜನರನ್ನು ಹಸಿವು-ಅಪೌಷ್ಟಿಕತೆಯ ದವಡೆಗೆ ನೂಕಲಿವೆ.

ತಾಪಮಾನ ಮೂರು ಡಿಗ್ರಿಯಷ್ಟು ಹೆಚ್ಚಿತೆಂದರೆ ಶತಮಾನದ ಅಂತ್ಯದ ವೇಳೆಗೆ ಹವಾಮಾನ
ವೈಪರೀತ್ಯದ ಅಪಾಯಗಳು ಐದು ಪಟ್ಟು ಹೆಚ್ಚಲಿವೆ. ಶೇ.29ರಷ್ಟು ಸಸ್ಯ ಮತ್ತು ಪ್ರಾಣಿ ಸಂಕುಲಗಳು ಇಳೆಯಿಂದ ಅಳಿಸಿ ಹೋಗುವ ಅಪಾಯ ಎದುರಿಸಲಿವೆ.

ಈ ಅನಾಹುತಗಳನ್ನು ಭಾಗಶಃವಾಗಿಯಾದರೂ ತಡೆಯಬೇಕಿದ್ದರೆ ಮನುಕುಲ ’ಇಂಗಾಲಶಾಹಿ’ಯ ಹಿಡಿತದಿಂದ ಹೊರಬರಬೇಕು. ಭೂಗೋಳವನ್ನು ಬಿಸಿಯಾಗಿಸಿ ಕುದಿಬಿಂದುವಿನ ವಿನಾಶದತ್ತ ಒಯ್ಯುತ್ತಿರುವ ಇಂಗಾಲದ ಡೈ ಆಕ್ಸೈಡು, ಮೀಥೇನ್ ಮುಂತಾದ ಅಪಾಯಕಾರಿ ಅನಿಲಗಳ ಬಿಡುಗಡೆಯನ್ನು ತಕ್ಷಣವೇ ನಿಲ್ಲಿಸಬೇಕು. ಪಳೆಯುಳಿಕೆ ಮೂಲಗಳಾದ ಕಲ್ಲಿದ್ದಲು, ಪೆಟ್ರೋಲಿಯಂ ಉತ್ಪನ್ನಗಳ ಉರಿಸುವಿಕೆಯನ್ನು ಕೂಡಲೇ ನಿಲ್ಲಿಸಬೇಕು. ಅರಣ್ಯನಾಶವನ್ನು ಅಕ್ಷರಶಃ ತಡೆಯಬೇಕು. 2050ರ ವೇಳೆಗಾದರೂ ಈ ಆತ್ಮಹತ್ಯೆಯ ಕೃತ್ಯವನ್ನು ಸಂಪೂರ್ಣವಾಗಿ ಅಂತ್ಯಗೊಳಿಸಬೇಕು. ನಾವು ಮನೆ ಕಟ್ಟುವ, ಆಹಾರ ಬೆಳೆಯುವ, ಊರ್ಜೆಯನ್ನು ಉತ್ಪಾದಿಸುವ, ಹಾಗೂ ನಿಸರ್ಗವನ್ನು ಸಂರಕ್ಷಿಸುವ ಬಗೆಗಳಲ್ಲಿ ಭಾರೀ ರೂಪಾಂತರವೇ ಆಗಬೇಕಿದೆ.

ಈ ವಿನಾಶವನ್ನು ತಡೆಯುವ ಈವರೆಗಿನ ಪ್ರಯತ್ನಗಳು ಕೇವಲ ಕಾಟಾಚಾರದವು. ಈ ಅವಘಢವನ್ನು ಬಲು ವೇಗದಿಂದ ಹತ್ತಿರ ಕರೆದುಕೊಳ್ಳಲು ಕಾರಣವಾಗಿರುವ ಜಗತ್ತಿನ ಸಿರಿವಂತ ದೇಶಗಳು ತಮ್ಮ ಹೊಣೆಗೇಡಿತನವನ್ನು ಒಪ್ಪಿ ಪರಿಹಾರ ರೂಪಿಸಲು ಈಗಲೂ ಮನಸು ಮಾಡಿಲ್ಲ.

ವಿನಾಶದ ಭಾರೀ ಭಾರವನ್ನು ವಿನಾಶಕ್ಕೆ ಕಾರಣರಲ್ಲದ ಜನಸಮುದಾಯಗಳ ಮೇಲೆ ಬೀಳುತ್ತಿರುವುದು ದುರಂತದ ಸಂಗತಿ. ಆಫ್ರಿಕಾದ ಮುಸುಕಿನ ಜೋಳ ಬೆಳೆಯುವ ಶೇ.30ರಷ್ಟು ಭೂಪ್ರದೇಶ ಈ ಅವಗಢಕ್ಕೆ ಬಲಿಯಾಗಲಿದೆ. ಬೀನ್ಸ್ ಬೆಳೆಯುವ ಶೇ.50ರಷ್ಟು ಭೂಪ್ರದೇಶ ಕೈ ತಪ್ಪಲಿದೆ.

ತಾಪಮಾನ ಏರಿಕೆ ಬಹುತೇಕರು ಭಾವಿಸಿರುವಂತೆ ದೂರ ಭವಿಷ್ಯದ ವಿದ್ಯಮಾನವಲ್ಲ. ಬದಲಾಗಿ ಅಂಗಳಕ್ಕೆ ಬಂದು ನಿಂತು ಬಾಗಿಲು ಬಡಿಯುತ್ತಿರುವ ಬಹುದೊಡ್ಡ ಆತಂಕ.

ಕಳೆದ ವರ್ಷ ಅಮೆರಿಕ ಮತ್ತು ಕೆನಡಾದ ಪೆಸಿಫಿಕ್ ಕರಾವಳಿ ತೀರದಲ್ಲಿ ಬೀಸಿದ ಬಿಸಿ ಉರಿಮಾರುತ ಐನೂರು ಮಂದಿಯನ್ನು ಕೊಂದುಹಾಕಿತು. ಕೆನಡಾದ ರೋಗಿಯೊಬ್ಬಾಕೆಯನ್ನು ಅಲ್ಲಿನ ವೈದ್ಯರು ಜಾಗತಿಕ ತಾಪಮಾನ ಏರಿಕೆಯ ರೋಗಿ ಎಂದು ಬಣ್ಣಿಸಿದರು.

ದಕ್ಷಿಣ ಆಫ್ರಿಕಾ ಈಗಾಗಲೆ ತೀವ್ರ ಬರಗಾಲಗಳು, ಉಗ್ರ ಉಷ್ಣ ಮಾರುತಗಳು, ಉಷ್ಣಗಾಳಿಯ ಗುಮ್ಮಟಗಳು, ಆಹಾರ ಅಭದ್ರತೆಗಳ ಅವಘಢಗಳಿಗೆ ಮುಖಾಮುಖಿಯಾಗಿಬಿಟ್ಟಿದೆ. ಹವಾಮಾನ ವೈಪರೀತ್ಯದ ಪರಿಣಾಮಗಳನ್ನು ಎದುರಿಸಲು ಸಬ್ ಸಹಾರ ಅಫ್ರಿಕಾ ಮಾಡಬೇಕಿರುವ ವಾರ್ಷಿಕ ವೆಚ್ಚ ಏಳರಿಂದ 15 ಶತಕೋಟಿ ಡಾಲರುಗಳಂತೆ!

ಈಗಲೇ ಎಚ್ಚೆತ್ತುಕೊಂಡು ಕಾರ್ಯಪ್ರವೃತ್ತರಾದರೆ ಹಲವು ಆಯ್ಕೆಗಳು ನಮಗೆ ಉಳಿಯುತ್ತವೆ. ವಿಳಂಬ ಮಾಡಿದಷ್ಟೂ ಆಯ್ಕೆಗಳು ತಗ್ಗುತ್ತವೆ ಮಾತ್ರವಲ್ಲ, ಕಡು ಕಠಿಣವೂ ಆಗುತ್ತವೆ. ಬದುಕಲು ಯೋಗ್ಯವಾದ ಪರಿಸರವನ್ನು ಉಳಿಸಿಕೊಳ್ಳಲು ತೆರೆದಿರುವ ಕಿಟಕಿ ಅಥವಾ ಬಾಗಿಲು ಅತಿ ತ್ವರೆಯಿಂದ ಮುಚ್ಚತೊಡಗಿದೆ. ಮುಚ್ಚುವುದರೊಳಗಾಗಿ ಎಚ್ಚೆತ್ತು ತಪ್ಪು ತಿದ್ದಿಕೊಳ್ಳಬೇಕಿದೆ. ತಡ ಮಾಡಿದಷ್ಟೂ ದುಬಾರಿ ದಂಡ ತೆರಬೇಕಾಗುತ್ತದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.


ಇದನ್ನೂ ಓದಿ: ಹವಾಮಾನ ಬಿಕ್ಕಟ್ಟು; ಇಡೀ ಭೂಮಿ ಧಗಿಸುವ ಮೊದಲು ಎಚ್ಚೆತ್ತುಕೊಳ್ಳಬೇಕಿದೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಧಾನಿ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾಗರಿಕ ಸಂಸ್ಥೆಗಳು, ಕಾಳಜಿಯುಳ್ಳ ನಾಗರಿಕರಿಂದ ಚುನಾವಣಾ ಆಯೋಗಕ್ಕೆ...

0
ರಾಜಸ್ಥಾನದಲ್ಲಿ ಭಾನುವಾರ (ಏ.21) ನಡೆದ ಚುನಾವಣಾ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸುಳ್ಳು ಸುದ್ದಿ ಮತ್ತು ದ್ವೇಷ ಹರಡಿದ್ದಾರೆ. ಈ ಹಿನ್ನೆಲೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನಾಗರಿಕ ಸಂಸ್ಥೆಗಳು...