Homeಮುಖಪುಟ‘ಭಾರತದ ಜನ ಇತಿಹಾಸ ಮಾಲೆ’ಯ ಪುಸ್ತಕ ಬಿಡುಗಡೆ: ಇತಿಹಾಸಕಾರ ಪ್ರೊ. ಇರ್ಫಾನ್ ಹಬೀಬ್‌ ಜೊತೆಗೆ ಸಂವಾದ

‘ಭಾರತದ ಜನ ಇತಿಹಾಸ ಮಾಲೆ’ಯ ಪುಸ್ತಕ ಬಿಡುಗಡೆ: ಇತಿಹಾಸಕಾರ ಪ್ರೊ. ಇರ್ಫಾನ್ ಹಬೀಬ್‌ ಜೊತೆಗೆ ಸಂವಾದ

- Advertisement -
- Advertisement -

“ಅಲಿಘರ್ ಹಿಸ್ಟೋರಿಯನ್ಸ್ ಸೊಸೈಟಿ” ಪ್ರಕಟಿಸಿರುವ “ಭಾರತದ ಜನ ಇತಿಹಾಸ”ವನ್ನು ದಾಖಲಿಸಿರುವ ಇತಿಹಾಸ ಮಾಲೆಯ ಕನ್ನಡ ಅನುವಾದದ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ಮಾರ್ಚ್ 13 ರ ಶನಿವಾರ ಸಂಜೆ 5 ಕ್ಕೆ ನಡೆಯಲಿದ್ದು, ಇತಿಹಾಸಕಾರ ಪ್ರೊ. ಇರ್ಫಾನ್ ಹಬೀಬ್‌ ಸಂವಾದದಲ್ಲಿ ಭಾಗವಹಿಸಲಿದ್ದಾರೆ. ಒಟ್ಟು ಮೂರು ಅನುವಾದಿತ ಪುಸ್ತಕಗಳು ಬಿಡುಗಡೆಗೊಳ್ಳುತ್ತಿದ್ದು, ‘ಚಿಂತನ ಪುಸ್ತಕ’ ಪ್ರಕಾಶನವು ಈ ಪುಸ್ತಕಗಳನ್ನು ಪ್ರಕಟಿಸುತ್ತಿದೆ.

“ಅಲಿಘರ್ ಹಿಸ್ಟೋರಿಯನ್ಸ್ ಸೊಸೈಟಿ” ಯು ಹಲವು ವರ್ಷಗಳಿಂದ ಇತಿಹಾಸದ ಬಗ್ಗೆ ವೈಜ್ಞಾನಿಕ, ಜಾತ್ಯಾತೀತ ಕಣ್ಣೋಟವನ್ನು ಪ್ರೋತ್ಸಾಹಿಸುತ್ತಿರುವ ಹಾಗೂ ಕೋಮುವಾದಿ, ಸಂಕುಚಿತವಾದಿ ವ್ಯಾಖ್ಯೆಗಳನ್ನು ಪ್ರತಿರೋಧಿಸುತ್ತಿರುವ ಒಂದು ಸಂಸ್ಥೆಯಾಗಿದೆ. ಇತಿಹಾಸವನ್ನು ರಾಜರುಗಳ ಆಳ್ವಿಕೆಗಳ ಪಟ್ಟಿಯಾಗಿಸುವ ಬದಲು ಅದನ್ನು ನಿರ್ಮಿಸಿದ ಸಾಮಾನ್ಯ ಜನರನ್ನೇ ಕೇಂದ್ರವಾಗಿರಿಸಿಕೊಂಡು, ನಿಜವಾದ ಇತಿಹಾಸದ ವೈಜ್ಞಾನಿಕ, ವಸ್ತುನಿಷ್ಟ ಅಧ್ಯಯನದಿಂದ “ಭಾರತದ ಜನ ಇತಿಹಾಸ ಮಾಲೆ”ಯನ್ನು ಹಿಸ್ಟೋರಿನ್ಸ್ ಸೊಸೈಟಿಯು ರಚಿಸುತ್ತಿದೆ.

ಇದನ್ನೂ ಓದಿ: ಅಜಾತಶತ್ರು? ಆಹಾ ಗೆಳೆಯನೇ ಇದು ಅತ್ಯಂತ ಕೆಟ್ಟ ಬಿರುದು!- ’ಭಗತ್‌ ಸಿಂಗ್ ಜೈಲ್ ಡೈರಿ’

ಸೊಸೈಟಿಯ ಪ್ರೊ. ಇರ್ಫಾನ್ ಹಬೀಬ್ ನೇತೃತ್ವದಲ್ಲಿ ಭಾರತದ ಇತಿಹಾಸವನ್ನು ಸಮಗ್ರವಾಗಿ ನಿರೂಪಿಸುವ ಮತ್ತು ಭಾರತದ ಜನ ಇತಿಹಾಸವನ್ನು ಸಂಕಲಿಸುವ 36 ಕೃತಿಗಳನ್ನು ಪ್ರಕಟಿಸುವ ಬೃಹತ್ ಯೋಜನೆಯನ್ನು ಹಾಕಿಕೊಂಡಿದೆ. ಇದರಲ್ಲಿ 15 ಕೃತಿಗಳು ಈಗಾಗಲೆ ಪ್ರಕಟವಾಗಿದ್ದು, ಅವುಗಳಲ್ಲಿ 6 ಕೃತಿಗಳನ್ನು ‘ಚಿಂತನ ಪುಸ್ತಕ’ ಪ್ರಕಾಶನ ಕನ್ನಡದಲ್ಲಿ ಪ್ರಕಟಿಸಿದೆ. ಇದೀಗ ಮೂರು ಪುಸ್ತಕಗಳು ಬಿಡುಗಡೆಗೆ ಸಜ್ಜಾಗಿದ್ದು, ಇನ್ನೂ ಆರು ಕೃತಿಗಳು ಅನುವಾದದ ಹಂತದಲ್ಲಿದೆ ಎಂದು ‘ಚಿಂತನ ಪುಸ್ತಕ’ ಪ್ರಕಾಶನ ಹೇಳಿದೆ.

ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ‘ಭಾರತದ ಜನ ಇತಿಹಾಸ ಮಾಲೆ’ಯ ಪರಿಕಲ್ಪನೆಯ ಕುರಿತು ಪ್ರೊ. ಇರ್ಫಾನ್ ಹಬೀಬ್ ಅವರು ಮಾತನಾಡಲಿದ್ದು, ಅವರ ಜತೆ ಸಂವಾದಕ್ಕೂ ಅವಕಾಶವಿರುತ್ತದೆ. ಕಾರ್ಯಕ್ರಮದಲ್ಲಿ ಕಲಬುರ್ಗಿ ಕೇಂದ್ರೀಯ ವಿವಿಯ ಉಪಕುಲಪತಿಗಳು ಮತ್ತು ಬೆಂಗಳೂರು ವಿ ವಿ ಇತಿಹಾಸ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾಗಿರುವ ಡಾ.ಎಸ್.ಚಂದ್ರಶೇಖರ್, ಐ.ಸಿ.ಎಚ್.ಆರ್ ದಕ್ಷಿಣ ಕೇಂದ್ರದ ಡಾ.ಶಿವಶರಣ ಕೆ ಅರುಣಿ ಮತ್ತು ಕ್ರೈಸ್ಟ್ ವಿವಿ ಯ ಇತಿಹಾಸ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ಡಾ. ಎಸ್.ಪಿ.ವಾಗೀಶ‍್ವರಿ ಅವರು ಭಾಗವಹಿಸಿ ಕೃತಿಯ ಪರಿಚಯ ಮಾಡಿಕೊಡಲಿದ್ದಾರೆ. ಅಲ್ಲದೆ ಬಿಡುಗಡೆಗೊಳ್ಳುತ್ತಿರುವ ಕೃತಿಗಳ ಅನುವಾದಕರಾದ ಡಾ.ಕೆ.ಎಂ.ಲೋಕೇಶ್, ಎಸ್.ಎನ್. ಸ್ವಾಮಿ ಮತ್ತು ಟಿ.ವೆಂಕಟೇಶ ಮೂರ್ತಿ ಅನುವಾದದ ಅನುಭವದ ಕುರಿತು ಮಾತನಾಡಲಿದ್ದಾರೆ.

ಇದನ್ನೂ ಓದಿ: ಲಜ್ಜಾಗೌರಿ ಪುಸ್ತಕ ಏನನ್ನು ಹೇಳುತ್ತದೆ? – ಯೋಗೇಶ್ ಮಾಸ್ಟರ್

ಕಾರ್ಯಕ್ರಮವು ಝೂಮ್‌ ಮೂಲಕ ನಡೆಯಲಿದ್ದು, ಋತುಮಾನ.ಕಾಮ್ ಮತ್ತು ಜನಶಕ್ತಿ ಮೀಡಿಯಾದಲ್ಲಿ ನೇರ ಪ್ರಸಾರಗೊಳ್ಳಲಿದೆ. “ಪುರಾಣವನ್ನು ಇತಿಹಾಸ ಎಂದು ಪ್ರಚಾರ ಮಾಡುತ್ತಿರುವ ಇಂದಿನ ಸನ್ನಿವೇಶದಲ್ಲಿ ಇತಿಹಾಸದ ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ, ಪ್ರಾಧ್ಯಾಪಕರಿಗೆ ಹಾಗೂ ಎಲ್ಲ ಆಸಕ್ತರಿಗೆ ನಿಜವಾದ ಇತಿಹಾಸ ತಿಳಿಯಲು ಇದೊಂದು ಅಪೂರ್ವ ಅವಕಾಶ” ಎಂದು ಕಾರ್ಯಕ್ರಮ ಸಂಘಟಕರು ತಿಳಿಸಿದ್ದಾರೆ.

ಪ್ರಕಟಗೊಳ್ಳುತ್ತಿರುವ ಮೂರು ಪುಸ್ತಕಗಳ ವಿವರಗಳು ಮತ್ತು ಕಿರು ಪರಿಚಯ ಕೆಳಗಿನಂತಿವೆ:

1. ಮೌರ್ಯರ ನಂತರದ ಭಾರತ – ರಾಜಕೀಯ ಮತ್ತು ಆರ್ಥಿಕ ಇತಿಹಾಸ (ಕ್ರಿ,ಪೂ. 200 – ಕ್ರಿ.ಶ. 300) ಭಾರತದ ಜನ ಇತಿಹಾಸ ಮಾಲಿಕೆ ಸಂಪುಟ -6
ಮೂಲ : ಪ್ರೊ, ಇರ್ಫಾನ್ ಹಬೀಬ್
ಅನುವಾದ : ಎಸ್.ಎನ್. ಸ್ವಾಮಿ
ಪ್ರಕಾಶಕರು : ಚಿಂತನ ಪುಸ್ತಕ
ಬೆಲೆ: 140

2. ಮೌರ್ಯಾನಂತರದ ಭಾರತದಲ್ಲಿ ಸಮಾಜ ಮತ್ತು ಸಂಸ್ಕೃತಿ
(ಕ್ರಿ,ಪೂ. 200 – ಕ್ರಿ.ಶ. 300) ಭಾರತದ ಜನ ಇತಿಹಾಸ ಮಾಲಿಕೆ ಸಂಪುಟ -7
ಮೂಲ: ಪ್ರೊ. ಭೈರಬಿ ಪ್ರಸಾದ ಸಾಹು, ಪ್ರೊ. ಕೇಶವನ್ ವೇಲುತಾಟ್
ಅನುವಾದ: ಟಿ. ವೆಂಕಟೇಶಮೂರ್ತಿ
ಪ್ರಕಾಶಕರು : ಚಿಂತನ ಪುಸ್ತಕ
ಬೆಲೆ: 90

3. ಭಾರತದ ಆರ್ಥಿಕತೆ (ಬ್ರಿಟಿಷ್ ಆಳ್ವಿಕೆಯ ಆರಂಭಿಕ ಹಂತದಲ್ಲಿ 1757-1857)
ಭಾರತದ ಜನ ಇತಿಹಾಸ ಮಾಲಿಕೆ ಸಂಪುಟ – 25

ಮೂಲ: ಪ್ರೊ. ಇರ್ಫಾನ್ ಹಬೀಬ್
ಅನುವಾದ: ಡಾ.ಕೆ.ಎಂ.ಲೋಕೇಶ
ಪ್ರಕಾಶಕರು : ಚಿಂತನ
ಪುಸ್ತಕ ಬೆಲೆ: 140

ಇದನ್ನೂ ಓದಿ: ಅಧೀರ್ ಬಿಸ್ವಾಸ್: ತಳಸ್ಥರೀಯ ನೆನಪಿನ ಪ್ರಜ್ಞೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...