Homeಅಂಕಣಗಳುಪುಟಕ್ಕಿಟ್ಟ ಪುಟಗಳುಲಜ್ಜಾಗೌರಿ ಪುಸ್ತಕ ಏನನ್ನು ಹೇಳುತ್ತದೆ? - ಯೋಗೇಶ್ ಮಾಸ್ಟರ್

ಲಜ್ಜಾಗೌರಿ ಪುಸ್ತಕ ಏನನ್ನು ಹೇಳುತ್ತದೆ? – ಯೋಗೇಶ್ ಮಾಸ್ಟರ್

ಆರ್.ಸಿ ಢೇರೆಯವರ ತಮ್ಮ ಸಂಶೋಧನಾತ್ಮಕವಾದ ಬರಹ ಲಜ್ಜಾಗೌರಿಯಲ್ಲಿ ನಮ್ಮ ತಾಯಿಮೂಲದ ಆಧ್ಯಾತ್ಮ, ಸಿದ್ಧಾಂತ, ಸಮಾಜ - ಈ ಎಲ್ಲದರ ಒಳನೋಟಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತವೆ.

- Advertisement -
- Advertisement -

ಭೂಮಿಯ ಫಲವತ್ತತೆಯನ್ನು ಸಂಕೇತಿಸುವ, ಮಾತೃತ್ವದ ಪ್ರಾಧಾನ್ಯತೆಯನ್ನು ಅನುಮೋದಿಸುವ ಲಜ್ಜಾಗೌರಿ ತೊಡೆಗಳನ್ನು ಅರಳಿಸಿಕೊಂಡು ಕಾಲುಗಳನ್ನು ಮೊಳಕಾಲಲ್ಲಿ ಮಡಿಸಿ ಯೋನಿಯನ್ನು ತೋರಿಸಿಕೊಂಡು ಕುಳಿತಿರುವ ವಿಗ್ರಹಗಳನ್ನು ನೋಡಿದಾಗ, ನಿರ್ಲಜ್ಜವಾಗಿರುವ ಈ ಶಿಲ್ಪಕ್ಕೆ ಲಜ್ಜಾಗೌರಿಯೆಂದೇಕೆ ಕರೆದರು ಎಂದು ಬಹು ಯೋಚಿಸುತ್ತೇನೆ.

ಪುರುಷನೂ ಮಗುವಿನ ಜನನಕ್ಕೆ ಕಾರಣನು ಎಂಬ ವಿಷಯವು ಅರಿವಿಗೆ ಬರುವ ಮುನ್ನ ಹೆರುವುದು ಸ್ತ್ರೀಯ ಸ್ವಾಭಾವಿಕ ಪ್ರಕ್ರಿಯೆ ಎಂದು ಭಾವಿಸಿದ್ದ ಆದಿಮ ಕಾಲದಲ್ಲಿ ಯೋನಿಯೇ ಜೀವಸೃಷ್ಟಿಯ ಮೂಲ ಎಂದು ಭಾವಿಸಿದ್ದರು. ಆಗ ಯೋನಿಯನ್ನು ಅತ್ಯಂತ ಮಾನ್ಯತೆಯಿಂದ ಕಾಣುತ್ತಿದ್ದರು. ಮಾತೃ ಪ್ರಧಾನ ಕುಟುಂಬದ ಪದ್ಧತಿಯೂ ಆಗಿಂದಲೇ ಆರಂಭವಿದ್ದಿರುತ್ತದೆ. ಶಿಶುವಿನ ಜನನಕ್ಕೆ ಪುರುಷನ ಕೊಡುಗೆಯೂ ಮನವರಿಕೆಯಾದ ಮೇಲೆ ಪುರುಷನ ಅಂಗವಾದ ಶಿಶ್ನಕ್ಕೂ ಮಾನ್ಯತೆ ದೊರಕಿತ್ತು. ಯೋನಿ ಮತ್ತು ಶಿಶ್ನ ಈ ಎರಡೂ ಲಿಂಗಗಳಿಗೆ ಮಾನ್ಯತೆ ದೊರೆತಾದ ಮೇಲೆ ತಂತ್ರವಿದ್ಯೆಯು ತಾತ್ವಿಕವಾಗಿ ಇನ್ನೂ ಮುಂದುವರೆದಿತ್ತು. ಸ್ತ್ರೀ ಪುರುಷರ ಸಮಾಗಮದಿಂದ, ಯೋನಿ ಮತ್ತು ಲಿಂಗಗಳ ಕೂಟದಿಂದ ಉಂಟಾಗುವ ಶಕ್ತ್ಯೋತ್ಪನ್ನದ ವೈಶಿಷ್ಟ್ಯವನ್ನೂ, ಪ್ರಾಧಾನ್ಯತೆಯನ್ನೂ ಕಂಡುಕೊಂಡರು. ತಂತ್ರಸಾಧಕರು ಸ್ಮಶಾನವಾಸಿಗಳಾಗಿದ್ದವರು, ಸಂಸಾರಿಗಳಲ್ಲದವರು ತಮ್ಮ ಸಾಧನೆಗಳಲ್ಲಿ ಅವಶ್ಯವಾಗಿದ್ದ ಮೈಥುನವನ್ನು ಪಡೆಯಲು ತಮ್ಮ ಜೊತೆಗೆ ಕೂಡಲು ಮುಕ್ತವಾಗಿ ಸಮ್ಮತಿಸುವಂತಹ ಹೆಣ್ಣನ್ನು ಅವಲಂಬಿಸಲೇಬೇಕಾಗಿತ್ತು. ಆಗ ವಿವಾಹ ಪದ್ಧತಿಯಲ್ಲಿ ಬಂಧಿತರಾದಂತವರು ಅಥವಾ ಕನ್ಯತ್ವದ ಪಾವಿತ್ರ÷್ಯ ತೆಯನ್ನು ಆಚರಿಸುತ್ತಿದ್ದವರು ಈ ತಂತ್ರಸಾಧಕರಿಗೆ ಲಭ್ಯವಾಗುತ್ತಿರಲಿಲ್ಲ. ಆಗ ಅವರು ವೇಶ್ಯೆಯರನ್ನೇ ಆಶ್ರಯಿಸಬೇಕಾಗುತ್ತಿತ್ತು. ಶಿವ ಮತ್ತು ಶಕ್ತಿಯ ಐಕ್ಯ ಸಾಧನೆ ಮಾಡುತ್ತಿದ್ದಂತಹ ತಾಂತ್ರಿಕ ಪುರುಷ ಸಾಧಕರಿಗೆ ಸಹಜವಾಗಿಯೇ ಹೆಣ್ಣಿನ ಕುರಿತು, ಆಕೆಯ ಯೋನಿಯ ಬಗ್ಗೆ ಗೌರವ ಭಾವನೆಯಿತ್ತು. ಅದರಲ್ಲೂ ಅವರ ಅತ್ಯಗತ್ಯವಾದ ಮೈಥುನಕ್ಕೆ ಸಮ್ಮತಿಸುತ್ತಿದ್ದ ವೇಶ್ಯೆಯರ ಮೇಲೆ ಅವರಿಗೆ ಖಂಡಿತವಾಗಿಯೂ ಗೌರವವಿತ್ತು. ಹಾಗೆಯೇ ಅವರು ಸಾಧನೆಯ ಸಮಯದಲ್ಲಿ ವೇಶ್ಯೆಯನ್ನು ಕೂಡುವ ಮುನ್ನ ಆಕೆಯ ಯೋನಿಯನ್ನು ಪೂಜಿಸುತ್ತಿದ್ದ ಕ್ರಮವೂ ಕೂಡ ವಿವಿಧ ಗ್ರಂಥಗಳಲ್ಲಿ ಉಲ್ಲೇಖವಾಗಿವೆ. ಆಕೆಯನ್ನು ಕೂಡುವ ಆ ಸಾಧನೆಯ ಕ್ರಮದ ತಾತ್ವಿಕ ದೃಷ್ಟಿ ಅಥವಾ ಭಾವದಂತೆ ಸಾಧಕ ಸಾಕ್ಷಾತ್ ಶಿವನೇ ಅಥವಾ ಶಂಕರನೇ ಆದ ಪಕ್ಷದಲ್ಲಿ, ಸಾಧನೆಯ ಸಮಯದಲ್ಲಿ ಯೋನಿಯನ್ನು ಕರಣವನ್ನಾಗಿ ಆತನಿಗೆ ಒದಗಿಸುವ ಹೆಣ್ಣು ಅಥವಾ ವೇಶ್ಯೆ ಸಾಕ್ಷಾತ್ ದೇವಿ ಅಥವಾ ಗೌರಿಯಾಗಿರುತ್ತಿದ್ದಳು. ಆ ಹೆಣ್ಣಿನಲ್ಲಿ ಯಾವುದೇ ವರ್ಣಬೇದವಿರಲಿಲ್ಲ. ಸ್ತ್ರೀ ಎಂದರೆ ಸ್ತ್ರೀ ಅಷ್ಟೇ. ಆದರೂ ಮಾತಂಗಿಯೇ ಮೊದಲಾದ ಪಂಚಮ ವರ್ಣದ ಸ್ತ್ರೀಯರ ಉಲ್ಲೇಖಗಳು ತಂತ್ರ ಸಾಧನೆಯ ಗ್ರಂಥಗಳಲ್ಲಿ ಕಾಣುತ್ತದೆ. ಅದೂ ಕೂಡ ಲೌಕಿಕ ಸುಖಾಪೇಕ್ಷೆಗೆ ಅಲ್ಲ ಎಂಬುದರ ನೇರ ಸೂಚಕವಾಗಿ ಲಜ್ಜಾಗೌರಿಯ ಮುಖದ ಸ್ಥಳದಲ್ಲಿ ಅರಳಿರುವ ತಾವರೆಯನ್ನು ಮೂಡಿಸುತ್ತಿದ್ದರು.

ಕುಂಡಲಿನಿ ಶಕ್ತಿಯು ಲೌಕಿಕದಿಂದ ಅಲೌಕಿಕವಾದಂತಹ ಸಾಫಲ್ಯವನ್ನು ಪಡೆಯುವ ಅಥವಾ ಕಾಮ ಎಂಬ ಸಹಜ ಮೂಲ ವಾಸನೆಯಿಂದ ಸಮಾಧಿ ಎಂಬ ನಿಷ್ಕಾಮಪೂರ್ಣ ಸ್ಥಿತಿಯನ್ನು ಪಡೆಯುವ ಶಕ್ತಿ. ಇದು ಏಳು ಚಕ್ರಗಳನ್ನು ಅಥವಾ ಶರೀರದಲ್ಲಿರುವ ಕೇಂದ್ರಗಳನ್ನು ಹಾದು ಹೋಗಬೇಕಾಗುತ್ತದೆ ಎಂದು ತಂತ್ರ ಸಾಧನೆ ಅಥವಾ ರಾಜಯೋಗವು ಹೇಳುತ್ತದೆ. ಶರೀರದಲ್ಲಿರುವ ಆ ಶಕ್ತಿ ಕೇಂದ್ರಗಳೆಂದರೆ ಲೈಂಗಿಕಾಂಗದ ಕೇಂದ್ರದಲ್ಲಿ ಬೇರಿನ ಹಾಗಿರುವ ಮೂಲಾಧಾರ ಚಕ್ರ. ನಂತರ ಸ್ವಾಧಿಷ್ಟಾನ, ಮಣಿಪೂರಕ, ಅನಾಹತ, ವಿಶುದ್ಧಿ, ಅಜ್ಞಾ ಮತ್ತು ಕೊನೆಯದಾಗಿ ಸಹಸ್ರಾರ ಚಕ್ರವೆಂಬ ಅಂತಿಮ ಕೇಂದ್ರ. ಅಲ್ಲಿಗೆ ಯೋಗ ಸಾಧನೆಯ ಸಂಪೂರ್ಣ ಸಿದ್ಧಿ. ಆ ಸಹಸ್ರಾರವನ್ನು ಅರಳಿರುವ ಕಮಲದ ಸಂಕೇತದ ಮೂಲಕ ಬಿಂಬಿಸುತ್ತಾರೆ.

ಪುರುಷನೊಬ್ಬ ತಾನೇ ಶಿವನಾಗಿ ತೊಡಗುವ ಈ ಯೋಗ ಸಾಧನೆಗೆ ಅಗತ್ಯವಿರುವ ಮೈಥುನಕ್ಕೆ ಒದಗುವ ವೇಶ್ಯೆಯು ಕೇವಲ ಲೌಕಿಕ ಉಪಭೋಗದ ವಸ್ತುವಲ್ಲ, ಬದಲಿಗೆ ಪಾರಮಾರ್ಥ ಸಾಧನೆಯಾದ ಸಹಸ್ರಾರಕ್ಕೆ ತಲುಪಲಗತ್ಯವಿರುವಂತಹ ಶಕ್ತಿಯ ಭಾಗ.

ಲಂಜೆ ಎಂಬ ಪದಕ್ಕೆ ವೇಶ್ಯೆ ಎಂಬ ಅರ್ಥವಿದೆ. ಮರಾಠಿಯಲ್ಲಿಯೂ ಕೂಡ ಲಂಜೆ, ಲಂಜಾ ಪದಗಳಿಗೆ ವ್ಯಭಿಚಾರಿಣಿ ಎಂಬ ಅರ್ಥವಿದೆ. ಸಂಸ್ಕೃತದಲ್ಲಿ ಲಜ್ಜಾ ಮತ್ತು ಲಂಜಿಕಾ ಎಂಬ ಪದಗಳಿಗೆ ವೇಶ್ಯೆ ಮತ್ತು ಲಕ್ಷ್ಮಿ ಎಂದು ಅರ್ಥಗಳಿವೆ. ಅದೇ ರೀತಿ ತೆಲುಗಿನಲ್ಲಿಯೂ ಲಂಜಾ ಎಂದರೆ ಸೂಳೆಯೆಂದೇ ಅರ್ಥ.

ಆರ್.ಸಿ ಢೇರೆಯವರ ತಮ್ಮ ಸಂಶೋಧನಾತ್ಮಕವಾದ ಬರಹ ಲಜ್ಜಾಗೌರಿಯಲ್ಲಿ ನಮ್ಮ ತಾಯಿಮೂಲದ ಆಧ್ಯಾತ್ಮ, ಸಿದ್ಧಾಂತ, ಸಮಾಜ – ಈ ಎಲ್ಲದರ ಒಳನೋಟಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತವೆ.

ತಂತ್ರ ಸಾಧಕನಾದ ಪುರುಷನಿಂದ ಆಧ್ಯಾತ್ಮಿಕ ಸಾಧನೆಗೆ ಪೂಜೆಗೊಳಗಾಗುತ್ತಿದ್ದ ವೇಶ್ಯೆಯು ಅವನಿಗೆ ಆಗ ಶಕ್ತಿ ರೂಪಿಣಿಯಾದ ಕಾರಣದಿಂದ ಲಜ್ಜಾಗೌರಿಯಾದಳು. ಅವಳು ಯೋನಿಪೂಜೆಗೊಳಗಾಗುವ ಭಂಗಿ ಪುರಾತನ ವಿಶ್ವಯೋನಿಯ ಮಾತೃಪ್ರಧಾನ ತತ್ವಕ್ಕೂ, ತಾಂತ್ರಿಕ ಪುರುಷರ ಆರಾಧ್ಯ ವಸ್ತುವಿಗೂ ಪ್ರತಿಮೆಯಾಯಿತು. ನಾನೊಮ್ಮೆ ನಮ್ಮ ಸಾಹಿತಿ ಮಿತ್ರರೊಬ್ಬರಿಂದ ಈ ಯೋನಿ ಆರಾಧನೆಗೆ ಸಂಬಂಧಪಟ್ಟ ವಿಷಯವೊಂದನ್ನು ಕೇಳ್ಪಟ್ಟೆ. ಅವರ ಪರಿಚಿತರೊಬ್ಬರ ಮನೆಯಲ್ಲಿ ವಯಸ್ಸಾದ ಕುಟುಂಬದ ಹಿರಿಯ, ಯಾವುದೇ ಒಳ್ಳೆಯ ಕೆಲಸಕ್ಕೆ ಹೋಗುವ ಮುನ್ನ ತನ್ನ ಹೆಂಡತಿಯ ಯೋನಿಯನ್ನು ದರ್ಶಿಸಿ, ಸ್ಪರ್ಶಿಸಿ, ನಮಸ್ಕರಿಸಿಕೊಂಡು ಹೋಗುವರೆಂದು. ಇದೊಂದು ಯೋನಿಯಾರಾಧನೆಯ ಪಳೆಯುಳಿಕೆಯೆಂದು ನಾನು ಭಾವಿಸುತ್ತೇನೆ.

ಸರಿ, ವೇಶ್ಯೆ ಎಂಬ ಅರ್ಥವುಳ್ಳ ಲಜ್ಜಾ ಎಂಬುದು ಸಂಕೋಚ ಅಥವಾ ನಾಚಿಕೆ ಎಂಬಂತಹ ಅರ್ಥಕ್ಕೆ ಹೇಗೆ ಸೇರಿ ಬಂತೆಂಬುದನ್ನು ಯೋಚಿಸಲು ತೊಡಗಿದರೆ ಮತ್ತೆ ವೇಶ್ಯೆಯ ಬಳಿಗೇ ಹೋಗಬೇಕಾಗುತ್ತದೆ.

ಸಂಕೋಚ, ಸಂಕೋಚನ ಎಂದರೆ ಕುಗ್ಗುವುದು, ಮುದುಡುವುದು. ನಾಚುವುದು ಎನ್ನುವುದನ್ನು ಸಕಾರಾತ್ಮಕವಾಗಿಯೂ ಮತ್ತು ನಕಾರಾತ್ಮಕವಾಗಿಯೂ ಬಳಸುತ್ತೇವೆ. ನಾಚಿಕೆ ಇಲ್ಲದವನು ಎಂದಾಗ ನಕಾರಾತ್ಮಕವಾಗಿ ಕಂಡರೆ, ನಾಚುವುದು ತನಗಿಂತ ಮೇಲಾಗಿರುವುದಕ್ಕೆ ಬಾಗುವ ರೀತಿಯೂ ಆಗುತ್ತದೆ. ಅವಳ ಕೆಂಪು ಕೆನ್ನೆಗಳನ್ನು ಕಂಡು ತಾವರೆಯ ಕೆಂಪು ನಾಚಿತೆಂದಾಗ, ತಾವರೆಯ ಬಣ್ಣದ ಸಹಜವಾದ ವೈಭವವು ಆಕೆಯ ಕೆಂಪಾದ ಕೆನ್ನೆಗಳ ಮುಂದೆ ಮಂಕಾಯಿತು ಎಂದು ರೂಪಕದಲ್ಲಿ ಬಣ್ಣಿಸಲಾಗುತ್ತದೆ. ಅದೇ ರೀತಿ ಒಬ್ಬನ ಘನತೆ ಮತ್ತು ಆತ್ಮಗೌರವವನ್ನು ಕುಗ್ಗಿಸುವಂತಹ ಅಪಮಾನಕ್ಕೆ ಒಳಗಾಗುವುದೋ ಅಥವಾ ಒಳಪಡಿಸುವುದೋ ಆದಾಗಲೂ ನಾಚಿಗೆಟ್ಟ ಸ್ಥಿತಿ ನಿರ್ಮಾಣವಾಗುತ್ತದೆ.

ವೇಶ್ಯೆಯು ನಾಚಿಕೊಂಡರೂ ಅದನ್ನು ಸಂಕೋಚವೆಂದೆನ್ನಲಾಗದೇ ಅದನ್ನು ವಯ್ಯಾರವಾಗಿ ವರ್ಣಿಸುವಷ್ಟು ಆಕೆಯ ಮುಕ್ತತೆಯನ್ನು ಗುರುತಿಸಲಾಗುತ್ತದೆ. ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಅತ್ಯಂತ ನಾಚಿಕೆಗೊಳಗಾಗುವ ಅಂಶವೆಂದರೆ ಲೈಂಗಿಕತೆಯ ವಿಷಯ. ಅಂತಹ ಲೈಂಗಿಕತೆಯಲ್ಲಿಯೇ ನಾಚಿಕೆಗೆ ಒಳಗಾಗದ ಆಕೆಯ ಮುಂದೆ ಮಿಕ್ಕವರೆಲ್ಲರೂ ಅಂತಹ ಮುಕ್ತತೆಯ ವಿಷಯದಲ್ಲಿ ನಾಚಬೇಕು. ಹಾಗಾಗಿ ಅಂತಹ ನಾಚುವಿಕೆಗೆ ಸಮಾನಾರ್ಥಕವಾಗಿ ಲಜ್ಜಾ ಅಥವಾ ಲಜ್ಜೆಯೆಂಬುದೇ ಬಂದಿತೇ? ಒಂದು ಜಿಜ್ಞಾಸೆ. ಒಟ್ಟಾರೆ ಈಗ ನಾವು ಲಜ್ಜೆಯನ್ನು ಸಂಕೋಚ ಮತ್ತು ನಾಚಿಕೆಗೆ ಸಮಾನಾರ್ಥಕವಾಗಿ ಬಳಸುತ್ತೇವೆ ಎಂಬುದು ನಿರ್ವಿವಾದ ಮತ್ತು ರೂಢಿ.

ಅದೇನೇ ಇರಲಿ, ಲಜ್ಜೆ ಎಂಬುದು ಸಾಮೂಹಿಕವಾಗಿಯೂ ಮತ್ತು ವ್ಯಕ್ತಿಗತವಾಗಿಯೂ ಇರುವುದನ್ನು ಗಮನಿಸಿದರೆ, ವ್ಯಕ್ತಿಯಿಂದ ಸಮೂಹಕ್ಕೆ ಬಂತು ಎನ್ನುವುದಕ್ಕಿಂತ ಸಮೂಹದಿಂದಲೇ ವ್ಯಕ್ತಿಗೆ ಆರೋಪಿತವಾಗಿದೆ ಎಂದೇ ಅನ್ನಿಸುತ್ತದೆ. ಮುಕ್ತವಾಗಿ ಮಕ್ಕಳು ನಗ್ನಾವಸ್ಥೆಯಲ್ಲಿರುವಾಗ ಅದನ್ನು ನಾಚಿಗೇಡು, ಎಂದೆನ್ನುವಂತೆ ಶೇಮ್ ಶೇಮ್ ಎಂದಾಗ ಪ್ರಕೃತಿಯನ್ನೇ ಅಪಮಾನಿಸುವವರನ್ನು ನೋಡುವ ಹಾಗೆ ನನಗೆ ಭಾಸವಾಗುತ್ತದೆ. ತಮ್ಮ ನಗ್ನತೆಯನ್ನು ನಾಚಿಗೇಡಿನ ವಿಷಯವೆಂದು ಭಾವಿಸಿ ನಿಧಾನವಾಗಿ ನಾಚಿಕೆಯನ್ನು ಅಭ್ಯಾಸ ಮಾಡಿಕೊಳ್ಳುತ್ತಾರೆ. ಹೆಣ್ಣಿಗೆ ನಾಚಿಕೆ ಭೂಷಣವೆಂದೋ, ಲಜ್ಜೆಯು ಸಹಜವೆಂದೋ ಹೇಳಿದಾಗ ಪ್ರಕೃತಿಯ ತತ್ವವನ್ನು ಆರೋಪಿಸಲ್ಪಡುವಂತ ಅವಳು ಹುಟ್ಟುವಾಗಲೇ ಹೇಗೆ ಲಜ್ಜಿತಳಾಗಿರುತ್ತಾಳೆ ಎಂಬ ಪ್ರಶ್ನೆಯೇಳುತ್ತದೆ.

ಪ್ರಕೃತಿ ಖಂಡಿತವಾಗಿಯೂ ನಿರ್ಲಜ್ಜವಾದದ್ದು. ನಾಚಿಕೆ ಎಂಬುದರ ಲವಲೇಶವೂ ಇಲ್ಲದಿರುವುದು. ಆದರೂ ಹೆಣ್ಣಿಗೆ ನಾಚಿಕೆಯನ್ನು ಗಂಡು ಕವಿಗಳೇಕೆ ಹೊರಿಸಿದರು ಎಂದು ನಾನಾ ಬಗೆಯಲ್ಲಿ ಯೋಚಿಸುವ ಅಗತ್ಯವಿಲ್ಲದೇ ಹೇಳಬಹುದಾದರೂ, ಹೆಣ್ಣುಗಳೇಕೆ ಲಜ್ಜೆಯನ್ನು ಅಭಿನಯಿಸುವ ಕಲಾವಿದೆಯಾದರು ಎಂದು ಹೇಳುವುದು ಬಹು ಕಠಿಣವಾಗಿ ತೋರುವುದು. ಪ್ರಾಣಿಗಳಿಗೆ ಇಲ್ಲದ ಲಜ್ಜೆ ಮನುಷ್ಯನಿಗೆ ಎಂದರೆ ಇದು ಮಾನವ ನಿರ್ಮಿತವೇ ಹೊರತು ನೈಸರ್ಗಿಕವಲ್ಲ.

ಈ ರೀತಿಯಲ್ಲಿ ಆಲೋಚನೆಗೆ ಹಚ್ಚುವಂತೆ ಢೇರೆಯವರು ನಾನಾ ಆಯಾಮಗಳ ವಿಶ್ಲೇಷಣೆ ಪ್ರೇರೇಪಿಸುತ್ತದೆ.

ಬೈಬಲ್ಲಿನ ಹಳೆಯ ಒಡಂಬಡಿಕೆಯಲ್ಲಿನ ಜೆನಿಸಿಸ್ ಅಥವಾ ಆದಿಕಾಂಡದಲ್ಲಿನ ಆ್ಯಡಂ ಮತ್ತು ಈವ್ ಪ್ರಕರಣವು ನಿರ್ಲಜ್ಜೆಯಿಂದ ಕೂಡಿರುವುದು ನೈಸರ್ಗಿಕ ಎಂದು ಬಹು ಸರಳವಾಗಿ ವಿವರಿಸುತ್ತದೆ. ದೇವರ ಸೃಷ್ಟಿಯಾದ ಆದಾಮನೂ ಮತ್ತು ಹವ್ವ ಸಂಪೂರ್ಣ ನಗ್ನವಾಗಿದ್ದು ಸಹಜವಾಗಿ ಸ್ವರ್ಗದ ತೋಟದಲ್ಲಿ ತಿರುಗಾಡಿಕೊಂಡಿರುತ್ತಾರೆ. ನಗ್ನತೆಯು ನಗ್ನವಾಗಿರುವುದು ಎಂದು ತಿಳಿಯುವ ಜ್ಞಾನವೇ ಅನೈಸರ್ಗಿಕ ಅಥವಾ ಮುಗ್ಧತೆಗೆ ವಿರುದ್ಧ ಎಂಬುದನ್ನು ಆ ಕಥೆ ಧ್ವನಿಸುತ್ತದೆ. ಅಂತಹುದ್ದೊಂದು ಜ್ಞಾನವು ಬೇಕಿಲ್ಲದ್ದು. ಮುಗ್ಧತೆಯ ಹೊರತಾದದ್ದು. ಮುಗ್ಧತೆಯ ಹೊರತಾದ ಅದು ಎಂತಹ ಜ್ಞಾನವಾದರೂ ಕಶ್ಮಲವೇ ಅಥವಾ ಕಳಂಕಿತವೇ ಎಂದೂ ಅದು ಧ್ವನಿಸುತ್ತದೆ. ಆದರೆ ಸರ್ಪವು ಅವರನ್ನು ಪ್ರಚೋದಿಸುತ್ತದೆ. ಜ್ಞಾನವೃಕ್ಷದ ಫಲವನ್ನು ತಿಂದರೆ ಒಳಿತು ಕೆಡಕುಗಳ ಅರಿವನ್ನು ಪಡೆಯುವಿರಿ ಎಂದು ಹಣ್ಣನ್ನು ತಿನ್ನಲು ಪ್ರೇರೇಪಿಸುತ್ತದೆ. ಅದರಂತೆ ಹವ್ವ ಅದನ್ನು ತಿನ್ನುವಳು. ತಾನು ಮೊದಲು ನಾಚಿಕೆ ಹೊಂದುವಳು. ನಂತರ ಆದಾಮನೂ ಅದನ್ನು ಸೇವಿಸಿ ತಾನು ಬೆತ್ತಲಾಗಿರುವುದರ ಬಗ್ಗೆ ಸಂಕೋಚಕ್ಕೆ ಒಳಗಾಗುವನು. ದೇವರು ಕರೆದಾಗ ಬೆತ್ತಲಾಗಿದ್ದೇವೆಂದು ಅವಿತುಕೊಳ್ಳುತ್ತಾರೆ. ದೇವರಿಗೆ ಇವರಿಗೆ ಬೆತ್ತಲಾಗಿದ್ದಾರೆಂದು ಹೇಗೆ ತಿಳಿಯಿತು ಎಂಬ ಪ್ರಶ್ನೆ ಮೂಡುತ್ತದೆ. ತಾನು ಬೆತ್ತಲಾಗಿದ್ದೇವೆ ಎಂದು ತಿಳಿಯುವ ಕಾಲಕ್ಕೆ ಅಲ್ಲಿ ಮುಗ್ಧತೆಯೆಂಬುದು ಹೋಯಿತೆಂಬಂತೆ ಕಥೆ ತಿಳಿಸುತ್ತದೆ. ಮುಂದೆ ಯೇಸುವೂ ಕೂಡ ನೀವು ಮಕ್ಕಳಂತಾಗದಿದ್ದರೆ ನಿಮಗೆ ಸ್ವರ್ಗ ಎನ್ನುವುದಿಲ್ಲ ಎಂದು ಬೋಧಿಸುತ್ತಾನೆ.

ನಿರ್ಲಜ್ಜ ಸ್ಥಿತಿಯಲ್ಲಿರುವಂತಹ ಮುಕ್ತತೆ ಮತ್ತು ಮುಗ್ಧತೆಗಳು ಮಕ್ಕಳಿಗೆ ಸಹಜ ಮತ್ತು ಪ್ರಕೃತಿಯಲ್ಲಿ ಸ್ವಾಭಾವಿಕ.
ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರ ಅನುಭವ ಮಂಟಪದ ಗರಡಿಯಲ್ಲಿ ಸೂಳೆ ಸಂಕವ್ವ ಎಂಬ ಶಿವಶರಣೆಯು ನಿರ್ಲಜ್ಜೇಶ್ವರನನ್ನು ತನ್ನ ಇಷ್ಟದೈವವನ್ನಾಗಿ ಕಾಣುತ್ತಾಳೆ. ಸಂಕವ್ವ ಎಂಬ ವೇಶ್ಯೆ ಲಜ್ಜಾಗೌರಿಯಾಗಿದ್ದು, ಲೋಕಾರೂಢಿಯಲ್ಲಿರುವ ತನ್ನ ಲಜ್ಜೆಯನ್ನೇ ತೊರೆದು ನಿರ್ಲಜ್ಜೇಶ್ವರನ ಪ್ರತಿಬಿಂಬಿಸುತ್ತಾಳೆ.

ನಿರ್ಲಜ್ಜೆಯೆಂದಾಕ್ಷಣವೇ ಮುಕ್ತತೆ ಮತ್ತು ಮುಗ್ಧತೆ ಎಂಬ ಸಹಜವಾದ ಮನಸ್ಥಿತಿಯ ಪರಿಕಲ್ಪನೆಯೇ ಮೂಡಲಿದ್ದು, ಈ ಸಮಾಜವು ಮುಕ್ತ ಮತ್ತು ತಾನು ಬೆತ್ತಲಾಗಿದ್ದೇನೆಂಬ ಅರಿವೇ ಇಲ್ಲದಂತಹ ಭಾವವಿದ್ದಲ್ಲಿ ಅದೇ ನಿರ್ಲಜ್ಜೇಶ್ವರನ ಸಮಾಜವೆಂದು ಭಾಸವಾಗುತ್ತದೆ. ಹಾಗೊಂದು ಕಲ್ಪನೆಯೇ ಅದ್ಭುತ!

ಮೈ ಮುಚ್ಚುವ ಬಟ್ಟೆಯಂತೆ, ಯಾವುದೇ ಮನಸ್ಥಿತಿಗೆ ಮತ್ತು ಸಹಜ ಭಾವನೆಗೆ ಲೋಕಾರೂಢಿಯ ಒಂದು ಸಮವಸ್ತ್ರವನ್ನು ಧರಿಸುವುದಾದರೂ ಏಕೆಂದರೆ ಕಂಡವರು ಅದೇನೆಂದಾರೋ ಎಂಬ ನಾಚಿಕೆಗೆ. ಕಾಣುವರ ಕಣ್ಣಿಗೆ ಇಂತೆಯೇ ಕಾಣಬೇಕೆಂಬ ಇರಾದೆಯೇ ಕೃತಕತೆಯನ್ನು ಹುಟ್ಟುಹಾಕುವುದು. ಅಂತಹ ಆಷಾಢಭೂತಿಗಳೊಂದು ಕಡೆಯಾದರೆ, ತಮ್ಮ ಮಾನಸಿಕ, ಭಾವನಾತ್ಮಕ ಮತ್ತು ಶಾರೀರಿಕ ಬೆತ್ತಲನ್ನು ಎಂತದ್ದೋ ಒಂದು ಅಮಲಿನಲ್ಲಿ ಬಹಿರಂಗಗೊಳಿಸುವ ಮಂದಿಯಿನ್ನೊಂದು ಕಡೆ. ಒಟ್ಟಾರೆ ಮುಗ್ಧತೆ ಮತ್ತು ಮುಕ್ತತೆ ಮಾತ್ರ ಎರಡೂ ಕಡೆ ನಾಪತ್ತೆ.

ಕರಗಳಿಗೆಟಕುವ ಕರಣಂಗಳ ಕರುಣದಿಂದುಪಯೋಗಿಸುತ್ತಾ, ಕಂದದ ಪ್ರಭೆಯುಳ್ಳ ಕಂದನಾಗಿಯುಳಿಯುತ್ತಾ, ಕಮರದ ಕೈಮರವಾಗುವಂತ ಜೀವ ತಾನಾಗಿರಲು ಅದೆಷ್ಟು ಸೊಗಸು! ಆಗಾದರೂ ಕಂಡೀತೇ ಲಜ್ಜಾಗೌರಿಯ ನಿಜ ಪ್ರತಿಮೆಯು?

ಲಜ್ಜಾಗೌರಿ
ಮರಾಠಿ ಮೂಲ: ಡಾ ರಾಮಚಂದ್ರ ಚಿಂತಾಮಣ ಢೇರೆ
ಕನ್ನಡಕ್ಕೆ: ವಿಠಲರಾವ್ ಟಿ ಗಾಯಕ್ವಾಡ್
ಪ್ರಕಟಣೆ: ಕನ್ನಡ ವಿಶ್ವವಿದ್ಯಾಲಯ, ಹಂಪಿ


ಇದನ್ನೂ ಓದಿ: ಕಠೋಪನಿಷತ್ತು – ಬಾಲಕನೊಬ್ಬನ ಬಂಡಾಯದ ಕತೆ: ಯೋಗೇಶ್ ಮಾಸ್ಟರ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಭಾವನೆಗಳ ಶೂನ್ಯಕ್ಕೆ ಇಳಿದಂತೆ ಭಾಸವಾಗುತ್ತದೆ. ಎಲ್ಲಾ ಮಾನವರೂ ಸಮುದ್ರದಲ್ಲಿ ಸ್ವಚ್ಛಂದವಾಗಿ ಈಜುವ ಮೀನಿನಂತೆ ಭಾಸವಾಗುತ್ತದೆ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...