ಅಧೀರ್ ಬಿಸ್ವಾಸ್ ಆಗಿನ ಪೂರ್ವ ಪಾಕಿಸ್ತಾನ್ ಎಂದು ಕರೆಯಲಾಗುತ್ತಿದ್ದ, ಈಗಿನ ಬಾಂಗ್ಲಾದೇಶದ ಜೆಸೋರ್ ಜಿಲ್ಲೆಯ ಮಗೂರ ಎಂಬ ಗ್ರಾಮದಲ್ಲಿ 1955ರಲ್ಲಿ ಜನಿಸಿದರು. 1967 ರಲ್ಲಿ ಅವರು ಭಾರತಕ್ಕೆ ಬಂದರು ಹಾಗೂ ತಮ್ಮ ಶಾಲಾ ಶಿಕ್ಷಣ ಮತ್ತು ಪದವಿಯನ್ನು ಕೊಲ್ಕತ್ತಾದಲ್ಲಿ ಮುಗಿಸಿದರು.

ಪೂರ್ವ ಪಾಕಿಸ್ತಾನದಿಂದ ಬಂದ ಹೆಚ್ಚಿನ ನಿರಾಶ್ರಿತರಂತೆ ಇವರೂ ಸಣ್ಣಪುಟ್ಟ ಕೆಲಸ ಮಾಡುತ್ತ ಅನಿಶ್ಚಿತತೆಯಲ್ಲಿಯೇ ತಮ್ಮ ಬದುಕು ದೂಕಿದರು. ಆದರೆ ಅದರೊಂದಿಗೆ ಬರೆಯಬೇಕೆಂಬ ಆಸೆಯನ್ನು ಜೀವಂತವಾಗಿಟ್ಟುಕೊಂಡು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದರು. ಅನೇಕ ಸಣ್ಣ ಸಾಹಿತ್ಯಪತ್ರಿಕೆ ಮತ್ತು ವಾರಪತ್ರಿಕೆಗಳಿಗೆ ಕಥೆ ಮತ್ತು ಇತರ ಗದ್ಯ ಬರಹಗಳನ್ನು ಬರೆಯುತ್ತಿದ್ದರು.

ಇದನ್ನೂ ಓದಿ: “ಕೇಳುವಿರೇನು ನೀವು ನಾ ಹುಚ್ಚನಾದದ್ದು ಹೇಗೆಂದು?”- ಖಲೀಲ್ ಗಿಬ್ರಾನ್

2012 ರಲ್ಲಿ ‘ಅಲ್ಲಾಹ್ರ್ ಜೊಮಿತೆ ಪಾ’ (ಅಲ್ಲಾಹ್‍ನ ಭೂಮಿಯಲ್ಲಿ ಇಟ್ಟ ಹೆಜ್ಜೆ) ಎಂಬ ಪುಸ್ತಕವನ್ನು ಪ್ರಕಟಿಸಿದರು. ಈ ಪುಸ್ತಕ ನಿರಾಶ್ರಿತರ ನೆನಪುಗಳ ಬಗ್ಗೆ ಪ್ರಕಟವಾದ ಅವರ ಪುಸ್ತಕದ ಸರಣಿಯಲ್ಲಿ ಮೊದಲ ಪುಸ್ತಕವಾಗಿತ್ತು. 2014 ರಲ್ಲಿ ಪಶ್ಚಿಮ ಬಂಗಾಳ ಸರಕಾರದ ಬಾಂಗ್ಲಾ ಅಕಾಡೆಮಿಯಿಂದ ಸುಪ್ರಭ ಮಜುಮ್‍ದಾರ್ ಮೆಮೋರಿಯಲ್ ಪ್ರಶಸ್ತಿಯನ್ನು ನೀಡಲಾಯಿತು. ಬಿಸ್ವಾಸ್ ಅವರು ಬರೆದ ಕಥೆಗಳು, ಕಿರು ಕಾದಂಬರಿಗಳು ಮತ್ತು ಯುವ ಓದುಗರಿಗಾಗಿ ಬರೆದ ಕಾದಂಬರಿಗಳ ಸಂಗ್ರಹ ನಾಲ್ಕು ಸಂಪುಟಗಳ ‘ಉಡೋಜಹಾಜ್’ಗೆ (ಏರೋಪ್ಲೇನ್) ಪಶ್ಚಿಮ ಬಂಗಾಳ ಸರಕಾರದಿಂದ 2017ರಲ್ಲಿ ವಿದ್ಯಾಸಾಗರ್ ಸ್ಮರಣಾರ್ಥ ಪ್ರಶಸ್ತಿ ನೀಡಲಾಗಿದೆ.

ಅಧೀರ್ ಬಿಸ್ವಾಸ್ ಅವರು ‘ಗಂಗಾಚಿಲ್’ ಎಂಬ ಕುಶಲಕರ್ಮಿಗಳಿಗೆ ಸಂಬಂಧಿಸಿದ ಸಣ್ಣ ಪ್ರಕಟನಾಲಯವನ್ನು ನಡೆಸುತ್ತಾರೆ. ಇದು ಬಂಗಾಲಿ ಪ್ರಕಾಶನದ ಜಗತ್ತಿನಲ್ಲಿ ಒಂದು ಛಾಪು ಮೂಡಿಸುವಲ್ಲಿ ಇದು ಯಶಸ್ವಿಯಾಗಿದೆ.

ನಾನು ಅಧೀರ್ ಅವರನ್ನು ಭೇಟಿಯಾಗಿದ್ದು 2016 ರ ಮೊದಲ ಭಾಗದಲ್ಲಿ. ಬಂಗಾಲದ ಪ್ರಭುತ್ವ-ವ್ಯವಸ್ಥೆಯ ವಿರೋಧಿ ಹಾಗೂ ಪ್ರಾಯೋಗಿಕ ಬರಹಗಾರ ಸುಬಿಮಲ್ ಮಿಶ್ರ ಅವರ ಅನುವಾದಕ ಎಂದು ನನ್ನ ಬಗ್ಗೆ ಅಧೀರ್‍ಗೆ ತಿಳಿದಿತ್ತು. ಗಂಗಾಚಿಲ್ ಪ್ರಕಾಶನವು ಮಿಶ್ರ ಅವರ ಎಲ್ಲಾ ಪುಸ್ತಕಗಳನ್ನು ಒಂಭತ್ತು ಸಂಪುಟಗಳಲ್ಲಿ ಮರುಪ್ರಕಾಶನ ಮಾಡಿದ್ದಾರೆ. ಅಧೀರ್ ಅವರು ತಮ್ಮ ಕೆಲವು ಪುಸ್ತಕಗಳನ್ನು ನನಗೆ ಕೊಟ್ಟು, ಅವುಗಳನ್ನು ಓದಿ, ನನಗೆ ಸೂಕ್ತವೆನಿಸಿದರೆ ಅನುವಾದ ಮಾಡಲು ಹೇಳಿದರು.

ಬೆಂಗಾಲಿ ಸಾಹಿತ್ಯದ ಬಗ್ಗೆ ನನಗೆ ಸಲಹೆ ನೀಡುವ ನನ್ನ ಸ್ನೇಹಿತ ಮೃಣಾಲ್ ಬೋಸ್ ಅವರು ‘ಅಲ್ಲಾಹ್ರ್ ಜೊಮಿತೆ ಪಾ’ ಪುಸ್ತಕದ ಬಗ್ಗೆ ಶ್ಲಾಘನೆಯ ಮಾತುಗಳನ್ನಾಡಿದರು. 2018 ರಲ್ಲಿ ಆ ಪುಸ್ತಕವನ್ನು ಅನುವಾದ ಮಾಡಲು ಪ್ರಾರಂಭಿಸಿದೆ. ಅದರ ಅನುವಾದವನ್ನು ಮಾಡಿ ಮುಗಿಸಿದೆ ಆದರೆ, ಆ ಪುಸ್ತಕವು ನಾಲ್ಕು ಪುಸ್ತಕಗಳ ಸರಣಿಯಲ್ಲಿ ಮೊದಲನೆಯದಾಗಿತ್ತು. ಆ ಸರಣಿಯ ಇತರ ಪುಸ್ತಕಗಳು; ‘ಉದ್ಬಸ್ತು ಪೊಂಜಿಕಾ’ (ಎ ರೆಫೂಜಿ ಅಲ್ಮನಾಕ್), ‘ಚಲೋ ಇಂಡಿಯಾ!’ (ಲೆಟ್ಸ್ ಗೊ ಟು ಇಂಡಿಯಾ) ಹಾಗೂ ‘ಗೊರ್ಚುಮುಕ್’ (ಎ ಸಿಪ್ ಆಪ್ ದಿ ಕಲ್ಕತ್ತಾ ಮೈದಾನ್).

ಇದನ್ನೂ ಓದಿ: ನವ ಉದಾರವಾದಿ ಭಾರತದಲ್ಲಿ ದಲಿತರು: ಮೇಲ್ಚಲನೆಯೋ ಅಥವಾ ಮೂಲೆಗುಂಪೋ? – ಪುಸ್ತಕ ಸಂವಾದ

2018 ರಲ್ಲಿ ಸಂಪೂರ್ಣಗೊಂಡ ಈ ನಾಲ್ಕು ಪುಸ್ತಕಗಳ ಸಂಪುಟವು ನಿರಾಶ್ರಿತರ ನೆನಪುಗಳ ಬಗ್ಗೆ ಇರುವ ಸಂಪುಟವಾಗಿದೆ. ‘ಚಲೋ ಇಂಡಿಯಾ!’ ಎಂಬ ಪುಸ್ತಕವು ಒಬ್ಬ ನಿರಾಶ್ರಿತ ಬಾಲಕನ ಕಣ್ಣಲ್ಲಿ ಕಂಡಂತೆ ಬೆಂಗಾಲಿ ಸಿನೆಮಾ ಬಗ್ಗೆ ಇದೆ. ಹಾಗೂ ‘ಗೋರ್ಚುಮುಕ್’ ಪುಸ್ತಕವು ಕೊಲ್ಕತ್ತಾದ ಹೃದಯಭಾಗದಲ್ಲಿರುವ ಮೈದಾನದ ಬಗ್ಗೆ ಇದೆ, ಇದೂ ಕೂಡ ನಗರಕ್ಕೆ ಹೊಸದಾಗಿ ಬಂದ ನಿರಾಶ್ರಿತ ಬಾಲಕನ ಕಣ್ಣಲ್ಲಿ ಕಂಡಂತೆ.

“ನಾನು ಏನನ್ನೂ ಮರೆಯುವುದಿಲ್ಲ” ಎಂದು ಅಧೀರ್ ನನಗೆ ಒಮ್ಮೆ ಹೇಳಿದ್ದರು. ಈ ಪುಸ್ತಕಗಳಲ್ಲಿ ಅವರೇನೆಲ್ಲ ನೆನಪಿನಲ್ಲಿಟ್ಟುಕೊಂಡಿದ್ದಾರೋ ಅದನ್ನು ಹೇಳುತ್ತಾರೆ ಅಥವಾ ಅವರ ನೆನಪಿನ ತುಣುಕುಗಳನ್ನು ನೀಡುತ್ತಾರೆ ಎಂದು ಹೇಳಬಹುದು. ಈ ಪ್ರಕ್ರಿಯೆಯ ಮುಖಾಂತರ ಅವರೊಂದು ಬೆಸುಗೆಯ ಚಿತ್ರಣವನ್ನು ನೀಡುತ್ತಾರೆ; ಆ ಚಿತ್ರಣವನ್ನು ಒಂದಿಷ್ಟು ‘ದೂರ’ದಲ್ಲಿ ನಿಂತು ನೋಡುವುದು ಅವಶ್ಯಕ. ತನ್ನ ಬಾಲ್ಯದ ನೆನಪುಗಳು, ತನ್ನ ತಾಯಿಯನ್ನು ಕಳೆದುಕೊಂಡಾಗಿನ ನೆನಪುಗಳು, ತನ್ನ ಹದಿಹರೆಯದ ವಯಸ್ಸಿನ ನೆನಪುಗಳು ಹಾಗೂ ಕಾಲೇಜಿನ ದಿನದ ನೆನಪುಗಳು, ಇವೆಲ್ಲವುಗಳ ಮೂಲಕ ಅವರು ತಮ್ಮ ಬಡಕುಟುಂಬದ ಕಥೆ, 60 ದಶಕದಲ್ಲಿ ಆ ಕುಟುಂಬ ಭಾರತಕ್ಕೆ ವಲಸೆ ಬಂದದ್ದು ಹಾಗೂ ತದನಂತರ ಈ ದೇಶದಲ್ಲಿ ತಮಗೆ ಒದಗಿದ್ದೆಲ್ಲವನ್ನು ವಿವರಿಸುತ್ತಾರೆ.

‘ಅಲ್ಲಾಹ್ರ್ ಜೊಮಿತೆ ಪಾ’ ಪುಸ್ತಕ (PC: Bookiecart)

ಈ ಪುಸ್ತಕಗಳಲ್ಲಿ ಸೂಕ್ಷ್ಮ, ಮನಮುಟ್ಟುವ ಹಾಗೂ ಹೃದಯಸ್ಪರ್ಶಿ ಚಿತ್ರಣವನ್ನು ನೀಡುವುದರ ಜೊತೆಜೊತೆಗೆ ತಮ್ಮ ವಿಶಿಷ್ಟ ವ್ಯಕ್ತಿತ್ವ ಹಾಗೂ ಸಂವೇದನೆಯನ್ನೂ ಅನಾವರಣ ಮಾಡುತ್ತಾರೆ. ಈ ಪುಸ್ತಕಗಳ ಮೂಲಕ ಅಧೀರ್ ಬಿಸ್ವಾಸ್ ಅವರು ಸಾಮಾಜಿಕ ಇತಿಹಾಸಕ್ಕೂ ಕೊಡುಗೆ ನೀಡಿದ್ದಾರೆ. ಇವರ ಪುಸ್ತಕಗಳು, ಅಂಚಿನಲ್ಲಿರುವ ಒಬ್ಬ ವ್ಯಕ್ತಿಯ ಬದುಕಿನ ಅನುಭವಗಳ ಮೂಲಕ ಒಂದು ಕಾಲದ ಬಗ್ಗೆ ಹೇಳುತ್ತವೆ. ಸಾಹಿತ್ಯದಲ್ಲಿ ಇಂತಹ ಧ್ವನಿಗಳನ್ನು ಕೇಳುವುದು ವಿರಳ.

ಇದನ್ನೂ ಓದಿ: ಶಿಹಾಬುದ್ದೀನ್ ಪೊಯ್ತುಂಕಡವುರವರ ಮಲಯಾಳಂ ಕತೆ ’ಜವಾನ್ ರೋಡ್‌’

ನನ್ನ ಮಟ್ಟಿಗಂತೂ, ಅಧೀರ್ ಅವರ ವೈಯಕ್ತಿಕ ಜೀವನವು ಬೆಂಗಾಲಿ ಸಾಹಿತ್ಯದ ಶ್ರೇಷ್ಠ ಕಾದಂಬರಿಯಾದ ‘ಅಪರಾಜಿತೊ’ದ (ಬಿಭೂತಿ ಭೂಷಣ್ ಬಂಡೋಪಾಧ್ಯಾಯ ಅವರು ಬರೆದ) ಕಥೆಗೆ ಸಮಾನಾಂತರವಾಗಿದೆ ಅನ್ನಿಸುತ್ತದೆ. ಅಪರಾಜಿತೊ ಕಾದಂಬರಿಯನ್ನು ಸತ್ಯಜಿತ್ ರಾಯ್ ಅವರು ಅದ್ಭುತ ಸಿನೆಮಾ ಮಾಡಿದ್ದು ನಮ್ಮೆಲ್ಲರಿಗೂ ತಿಳಿದ ವಿಷಯವಾಗಿದೆ. ಅಪರಾಜಿತೊ ಕಾದಂಬರಿಯಲ್ಲಿ, ಒಬ್ಬ ಬಡಬ್ರಾಹ್ಮಣ ಬಾಲಕನು ಒಂದು ಹಳ್ಳಿಯಿಂದ ಹೊರಟು ತಿಳಿವಳಿಕೆ ಮತ್ತು ಕಲಿಕೆಯ ಜಗತ್ತಿಗೆ ತೆರೆದುಕೊಂಡ ಹಾಗೂ ಕೊಲ್ಕತ್ತ ಎಂಬ ನಗರಕ್ಕೆ ಬೆಳೆಸುವ ಪಯಣದ ಕಥೆಯಿದೆ.

ಬಿಸ್ವಾಸ್ ಅವರ ನಾಲ್ಕು ಪುಸ್ತಕಗಳ ಸರಣಿಯಲ್ಲಿ, ಒಬ್ಬ ದಲಿತ ಬಾಲಕನ ಕಥೆಯಿದೆ. ಗಡಿದಾಟಿ ಬರುವ ಆ ದಲಿತ ಬಾಲಕನು ಬಡತನ, ಸಂಕಷ್ಟ, ಅನಾರೋಗ್ಯ, ತಿರಸ್ಕಾರಗಳನ್ನು ಗಟ್ಟಿಯಾಗಿ ಎದುರಿಸುತ್ತಾನೆ. ಇದರ ಜೊತೆಜೊತೆಗೇ ಅವನು ಬರಹಗಾರನಾಗಬೇಕೆಂಬ ತನ್ನ ಬಯಕೆಯನ್ನು ಜೀವಂತವಾಗಿಡುತ್ತಾನೆ. ಈ ಪುಸ್ತಕಗಳನ್ನು ಆ ಬಯಕೆಯ ಅಭಿವ್ಯಕ್ತಿಗಳಂತೆ ಕೂಡ ಓದಬಹುದು. ಹಾಗೂ ಈ ಕಥೆಯು ಅಪರಾಜಿತೋದ ಕಥೆಗಿಂತ ತೀರಾ ಭಿನ್ನವಾಗಿರುವುದರಿಂದ ಇದನ್ನು ಅತ್ಯಂತ ಭಿನ್ನವಾದ ಶೈಲಿಯಲ್ಲಿಯೇ ಬರೆಯಲಾಗಿದೆ. ಬಿಸ್ವಾಸ್ ಅವರ ಬರವಣಿಗೆ ಒರಟಾಗಿದೆ ಹಾಗೂ ಒಗಟಾಗಿದೆ. ಇದೇ ಮಾತನ್ನು ಅವರ ವಾಕ್ಯಗಳ ಬಗ್ಗೆಯೂ ಹೇಳಬಹುದಾಗಿದೆ. ಅವರ ಪದಗಳು ಒಂದು ಕಥೆಯನ್ನು ಹೇಳಲು ಬಳಸುವ ಸಲಕರಣೆಗಳಷ್ಟೆ. ಅವುಗಳಿಂದ ಅವರೊಂದು ವಿಶಾಲವಾದ ಚಿತ್ರಣವನ್ನು ಕಟ್ಟಿಕೊಡುತ್ತಾರೆ.

ಅಧೀರ್ ಅವರು ತಳಸ್ಥರೀಯತೆಯನ್ನು (ಸಬ್‍ಆಲ್ಟರ್ನಿಟಿ) ಹಾಗೂ ಅಂಚಿಗೆ ತಳ್ಳಲ್ಪಟ್ಟ ಪ್ರಕ್ರಿಯೆಯನ್ನು (ಮಾರ್ಜಿನಾಲಿಟಿ) ವ್ಯಾಖ್ಯಾನಿಸಿ, ತಳಸ್ಥರೀಯ ಪ್ರಜ್ಞೆಯು ರೂಪುಗೊಳ್ಳುವಿಕೆಯ ಬಗ್ಗೆ ಒಂದು ಒಳನೋಟವನ್ನು ನೀಡುತ್ತಾರೆ ಹಾಗೂ ಅದರೊಂದಿಗೆ ಒಬ್ಬ ಸಾವಯವ(ಆರ್ಗಾನಿಕ್) ಬುದ್ಧಿಜೀವಿಯು ಹೇಗೆ ರೂಪುಗೊಳ್ಳುತ್ತಾಳೆ/ನೆ ಎಂಬುದರ ಬಗ್ಗೆಯೂ ಒಳನೋಟ ನೀಡುತ್ತಾರೆ. ಬರಹಗಳು ಕಥೆಯಲ್ಲದ ಗದ್ಯಬರಹಗಳ ಶೈಲಿಯಲ್ಲಿದ್ದು (ನಾನ್-ಫಿಕ್ಷನ್), ಲೇಖಕರ ಅಭಿವ್ಯಕ್ತಿಯ ನಿರಾಡಂಬರದ ಹೊರತಾಗಿಯೂ ಈ ಕೃತಿಗಳು ಅಕ್ಯಾಡೆಮಿಕ್ ಸ್ವರೂಪದ್ದಾಗಿರದೇ ‘ಸಾಹಿತ್ಯಕ’ ಸ್ವರೂಪವನ್ನು ಹೊಂದಿವೆ.

ತಳಸ್ಥರೀಯರು ಈಗ ಮಾತನಾಡಲು ಆರಂಭಿಸಿರುವುದರಿಂದ (ಸಬ್‍ಆಲ್ಟರ್ನ್ ಸ್ಪೀಕಿಂಗ್) ಭಾರತೀಯ ಸಾಹಿತ್ಯ ತಲೆಕೆಳಗಾಗುತ್ತಿದೆ ಹಾಗೂ ಈ ವಿದ್ಯಮಾನವನ್ನು ಇಂಗ್ಲಿಷ್ ಅನುವಾದದ ಮೂಲಕ ಸೆರೆಹಿಡಿಡುವುದು ಅತ್ಯವಶ್ಯಕ ಎಂದು ನಾನು ಭಾವಿಸಿದ್ದೇನೆ. ನಾಲ್ಕು ಪುಸ್ತಕಗಳ ಸರಣಿಯಲ್ಲಿ ಕೊನೆಯ ಪುಸ್ತಕದ ಅನುವಾದವನ್ನು 2019ರ ಕೊನೆಯಲ್ಲಿ ಮುಗಿಸಿದೆ, ಈಗ ಹಸ್ತಪ್ರತಿಯ ಸಂಪಾದನೆಯಲ್ಲಿ ತೊಡಗಿದ್ದೇನೆ. ಈ ಪುಸ್ತಕಗಳು ಒಂದೇ ಸಂಪುಟದಲ್ಲಿ ಪ್ರಕಟವಾಗಲಿವೆ ಹಾಗೂ ಸ್ತ್ರೀ-ಸಾಮ್ಯ ಬುಕ್ಸ್ ಪ್ರಕಾಶನ ಇದನ್ನು ಪ್ರಕಟಿಸಲಿದೆ.

 

ವಿ. ರಾಮಸ್ವಾಮಿ:

ಕೊಲ್ಕತ್ತಾದಲ್ಲಿ ನೆಲೆಸಿರುವ ಇವರು ಸುಬಿಮಲ್ ಮಿಶ್ರ ಅವರ ಅನೇಕ ಪುಸ್ತಕಗಳನ್ನು ಇಂಗ್ಲಿಷಿಗೆ ಅನುವಾದಿಸಿದ್ದಾರೆ. ಅವುಗಳಲ್ಲಿ ಕೆಲವು ‘ದ ಗೋಲ್ಡನ್ ಗಾಂಧಿ ಸ್ಟಾಚ್ಯು ಆಫ್ ಅಮೆರಿಕ’, ‘ವೈಲ್ಡ್ ಅನಿಮಲ್ಸ್ ಪ್ರಾಹಿಬಿಟೆಡ್’ ಮತ್ತು ‘ದಿಸ್ ಕುಡ್ ಹ್ಯಾವ್ ಬಿಕಮ್ ರಾಮಾಯಣ ಚಮಾರ್ಸ್ ಟೇಲ್: ಟು ಆ್ಯಂಟಿ-ನಾವೆಲ್ಸ್’.

ಕನ್ನಡಕ್ಕೆ: ರಾಜಶೇಖರ್ ಅಕ್ಕಿ


ಇದನ್ನೂ ಓದಿ: ಬಾಬರಿ ಮಸೀದಿ ದ್ವಂಸ ತೀರ್ಪು ಪ್ರಕಟಿಸಿದ ನ್ಯಾಯಾಲಯ: ಆರೋಪಿಗಳು ದೋಷಮುಕ್ತ

LEAVE A REPLY

Please enter your comment!
Please enter your name here