ಕೋಲಾರ ಜಿಲ್ಲೆಯಲ್ಲಿ ಮತ್ತೊಂದು ಮರ್ಯಾದೆಗೇಡು ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಪರಿಶಿಷ್ಟ ಪಂಗಡದ ಯುವಕನನ್ನು ಪ್ರೀತಿಸುತ್ತಿದ್ದ ಪುತ್ರಿಯನ್ನು ತಂದೆಯೇ ಹತ್ಯೆ ಮಾಡಿ, ಸದ್ದಿಲ್ಲದೇ ಆಕೆಯನ್ನು ಅಂತ್ಯಕ್ರಿಯೆ ನಡೆಸಿರುವ ಘಟನೆ ನಡೆದಿದೆ.
ಈ ಘಟನೆ ಕೋಲಾರ ತಾಲ್ಲೂಕಿನ ತೊಟ್ಟಿ ಗ್ರಾಮದಲ್ಲಿ ನಡೆದಿದೆ. ರಮ್ಯಾ (19) ಕೊಲೆಯಾದ ಯುವತಿ. ಒಕ್ಕಲಿಗ ಸಮುದಾಯಕ್ಕೆ ಸೇರಿದ್ದು, ಯುವಕ ಪರಿಶಿಷ್ಟ ಪಂಗಡಕ್ಕೆ ಸೇರಿದ್ದಾನೆ. ಇಬ್ಬರು ಪ್ರೀತಿಸುತ್ತಿದ್ದರು ಆದರೆ ಇದಕ್ಕೆ ಯುವತಿಯ ತಂದೆ ವೆಂಕಟೇಶಗೌಡ ವಿರೋಧ ವ್ಯಕ್ತಪಡಿಸಿದ್ದನು.
ಆ ಯುವಕನ ತೊಟ್ಟಿ ಗ್ರಾಮ ಸಮೀಪದ ಆಲೇರಿ ಗ್ರಾಮದವನಾಗಿದ್ದಾನೆ. ರಮ್ಯಾ ಹಾಗೂ ಆ ಯುವಕ ಮಧ್ಯ ರಾತ್ರಿ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರು. ಅದನ್ನು ಗಮನಿಸಿದ ತಂದೆ ಈ ಕೃತ್ಯ ಎಸಗಿರುವುದು ಗೊತ್ತಾಗಿದೆ.
ಪರಿಶಿಷ್ಟ ಪಂಗಡಕ್ಕೆ ಸೇರಿದ ಯುವಕನನ್ನು ಪ್ರೀತಿಸಬೇಡ ಎಂದು ವೆಂಕಟೇಶಗೌಡ ಮಗಳಿಗೆ ಹೇಳಿದ್ದಾನೆ. ಆದರೆ ಅದಕ್ಕೆ ಒಪ್ಪದಿದ್ದಾಗ ಮಗಳನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಗಳು ರಮ್ಯಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿ ಆಗಸ್ಟ್ 25ರಂದು ಹೆತ್ತವರು ಆಕೆಯ ಅಂತ್ಯಸಂಸ್ಕಾರ ನಡೆಸಿದ್ದರು. ಆ ಬಳಿಕ ಯುವತಿಯನ್ನು ಕೊಲೆ ಮಾಡಿರುವ ವಿಚಾರ ಊರಿನಲ್ಲಿ ಹಬ್ಬಿದ್ದರಿಂದ ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಆಕೆಯ ತಂದೆಯನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ.
ಈ ವೇಳೆ ಮರ್ಯಾದೆಗೇಡು ಹತ್ಯೆ ನಡೆದಿರುವುದು ಗೊತ್ತಾಗಿದೆ. ವೆಂಕಟೇಶಗೌಡ ಹಾಗೂ ಸಹೋದರರಾದ ಮೋಹನ್ ಹಾಗೂ ಚೌಡೇಗೌಡ ಎಂಬುವರನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
ಕೊಲೆಯಾದ ಯುವತಿಯ ಶವವನ್ನು ಭಾನುವಾರ ಬೆಳಿಗ್ಗೆ ತಹಶೀಲ್ದಾರ್ ಹರ್ಷವರ್ಧನ್ ಅವರ ಸಮ್ಮುಖದಲ್ಲಿ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಸ್ಥಳದಲ್ಲಿ ಸರ್ಕಲ್ ಇನ್‌ಸ್ಪೆಕ್ಟರ್ ಲೋಕೇಶ್ ಇದ್ದರು.
ಈ ಬಗ್ಗೆ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕೋಲಾರದಲ್ಲಿ ಮರ್ಯಾದೆಗೇಡು ಹತ್ಯೆ: ಪರಿಶಿಷ್ಟ ಜಾತಿಯವನನ್ನು ಪ್ರೀತಿಸಿದ್ದಕ್ಕೆ ಮಗಳನ್ನೇ ಕೊಂದ ತಂದೆ; ಯುವಕ ಆತ್ಮಹತ್ಯೆ
ಇತ್ತೀಚೆಗೆ ಕೋಲಾರ ಜಿಲ್ಲೆಯಲ್ಲಿಯೇ ಒಂದು ಮರ್ಯಾದೆಗೇಡು ಹತ್ಯೆ ನಡೆದಿತ್ತು. ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಬೋಡಗುರ್ಕಿ ಗ್ರಾಮದಲ್ಲಿ ತನ್ನ ಮಗಳು ದಲಿತ ಸಮುದಾಯಕ್ಕೆ ಸೇರಿದ ಯುವಕನನ್ನು ಪ್ರೀತಿಸಿದಳು ಎನ್ನುವ ಏಕೈಕ ಕಾರಣಕ್ಕೆ ತಂದೆಯೇ ಮಗಳ ಕತ್ತು ಹಿಸುಕಿ ಕೊಲೆ ಮಾಡಿದ ಅಮಾನುಷ ಮರ್ಯಾದೆಗೇಡು ಹತ್ಯೆ ನಡೆದಿತ್ತು. ಪ್ರೇಯಸಿಯ ಸಾವಿನ ಸುದ್ದಿ ತಿಳಿದ ಪ್ರಿಯಕರ ರೈಲಿನ ಹಳಿಗೆ ತಲೆ ಕೊಟ್ಟು ಆತನೂ ಸಾವಿಗೀಡಾಗಿರುವ ಹೃದಯವಿದ್ರಾವಕ ಘಟನೆಗೆ ಕೋಲಾರ ಸಾಕ್ಷಿಯಾಗಿತ್ತು.
ಬೋಡಗುರ್ಕಿ ಗ್ರಾಮದ ದಲಿತ ಸಮುದಾಯಕ್ಕೆ ಸೇರಿದ ಯುವಕ ಗಂಗಾಧರ (23) ಮತ್ತು ಗೊಲ್ಲ ಸಮುದಾಯಕ್ಕೆ ಸೇರಿದ ಕೀರ್ತಿ (20) ಪರಸ್ಪರ ಪ್ರೀತಿಸುತ್ತಿದ್ದರು. ದಲಿತ ಸಮುದಾಯದ ಹುಡುಗನನ್ನು ಮಗಳು ಪ್ರೀತಿಸಿದ್ದಾಳೆ ಎನ್ನುವ ಕಾರಣಕ್ಕೆ ಕುಪಿತಗೊಂಡ ಹೀನ ಜಾತಿವಾದಿ ಮನಸ್ಥಿತಿಯ ತಂದೆ ಕೃಷ್ಣಮೂರ್ತಿ ಜೂನ್ 26ರಂದು ಮಗಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿತ್ತು. ಈ ವಿಷಯ ತಿಳಿದ ಯುವಕ ಜೂನ್ 27ರಂದು ಬಂಗಾರಪೇಟೆ ಬಳಿಯ ಪುರ ಎಂಬಲ್ಲಿ ಮೈಸೂರು-ಚೆನ್ನೈ ಎಕ್ಸ್‌ಪ್ರೆಸ್ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಕೃಷ್ಣಮೂರ್ತಿಯನ್ನು ಬಂಧಿಸಿದ್ದು ಕಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಾಗಿತ್ತು.


