Homeಮುಖಪುಟಅಭಿವೃದ್ಧಿಯಲ್ಲಿ ಮುಂದಿರುವ ಕರ್ನಾಟಕಕ್ಕೇಕೆ ಯುಪಿ ಮಾಡೆಲ್ ಎಂಬ ಟೊಳ್ಳು ಮಾದರಿ?

ಅಭಿವೃದ್ಧಿಯಲ್ಲಿ ಮುಂದಿರುವ ಕರ್ನಾಟಕಕ್ಕೇಕೆ ಯುಪಿ ಮಾಡೆಲ್ ಎಂಬ ಟೊಳ್ಳು ಮಾದರಿ?

- Advertisement -
- Advertisement -

ಒಂದು ಸನ್ನಿವೇಶ ಕಲ್ಪಿಸಿಕೊಳ್ಳಿ. ನಿಮ್ಮ ಮನೆಯ ಮಗು ಶಾಲೆಯ ಕಲಿಕೆ ಮತ್ತಿತರ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿರುತ್ತದೆ. ಒಳ್ಳೆಯ ಗ್ರೇಡ್ ಗಳಿಸಿರುತ್ತಾನೆ/ಳೆ. ಶಿಸ್ತಿನಲ್ಲಿ, ನಡವಳಿಕೆಯಲ್ಲಿ ಶಹಬ್ಬಾಸ್ ಎನಿಸಿಕೊಂಡಿರುತ್ತಾನೆ/ಳೆ ಅಂದಿಟ್ಟುಕೊಳ್ಳಿ. ಹೀಗಿದ್ದಾಗ ಆ ಶಾಲೆಯ ಮಾಸ್ತರನೊಬ್ಬ ಬಂದು, ಅದೇ ತರಗತಿಯ ಫೇಲಾಗಿರುವ, ಪುಂಡಾಟಿಕೆಯಲ್ಲಿ ತೊಡಗಿರುವ ಒಬ್ಬ ವಿದ್ಯಾರ್ಥಿಯನ್ನು ತೋರಿಸಿ ’ಇನ್ನು ಮುಂದೆ ನಿಮ್ಮ ಮಗನಿಗೆ ಈ ಫೇಲಾದ ವಿದ್ಯಾರ್ಥಿಯೇ ಮಾದರಿ, ಈ ಶಾಲೆಯಲ್ಲಿ ಆ ಫೇಲಾದ ಪುಂಡಾಟಿಕೆಯ ಹುಡುಗನ ಮಾದರಿಯನ್ನೇ ಜಾರಿಗೆ ತರುತ್ತೇವೆ’ ಅಂತ ಘೋಷಿಸಿದರೆ ನಿಮಗೆ ಹೇಗನ್ನಿಸುತ್ತದೆ? ಆ ಮಾಸ್ತರನ ದುಷ್ಟ ವಿಚಾರದ ಬಗ್ಗೆ ನಿಮಗೆ ಎಲ್ಲಿಲ್ಲದ ಕೋಪ ಬಂದು ಆ ತಲೆಕೆಟ್ಟ ಮಾಸ್ತರನನ್ನು ತರಾಟೆಗೆ ತೆಗೆದುಕೊಳ್ಳಬೇಕು ಅನಿಸುತ್ತದೆ ಅಲ್ಲವೆ?

ಹೌದು, ಇದು ಅತ್ಯಂತ ಸಹಜವಾದ ಪ್ರತಿಕ್ರಿಯೆ

ಈಗ ನಮ್ಮ ಹೆಮ್ಮೆಯ ಕರ್ನಾಟಕದ ವಿಷಯಕ್ಕೆ ಬರೋಣ. ದೇಶದ ಹಲವು ರಾಜ್ಯಗಳಿಗಿಂತಲೂ ನಮ್ಮ ನಾಡು ಹಲವು ಅಂಶಗಳಲ್ಲಿ ಮುಂದಿದೆ. ಶಿಕ್ಷಣದ ವಿಷಯದಲ್ಲಿ, ಆರೋಗ್ಯದ ವಿಷಯದಲ್ಲಿ, ಆರ್ಥಿಕ ಅಭಿವೃದ್ಧಿಯ ವಿಷಯದಲ್ಲಿ, ಉದ್ಯೋಗ ಸೃಷ್ಟಿಯ ವಿಷಯದಲ್ಲಿ ಮುಂಚೂಣಿ ಸಾಲಿನಲ್ಲಿದೆ. ಅಷ್ಟೇ ಏಕೆ? ಕಾನೂನು ಸುವ್ಯವಸ್ಥೆಯ ವಿಚಾರದಲ್ಲಿ, ಮಹಿಳೆಯರ ಸುರಕ್ಷತೆ ವಿಚಾರದಲ್ಲಿ, ಸಾಮಾಜಿಕ ಸಾಮರಸ್ಯದ ವಿಷಯದಲ್ಲಿ ಉತ್ತರದ ಎಷ್ಟೋ ರಾಜ್ಯಗಳಿಗಿಂತ ನಮ್ಮ ನಾಡು ಮುಂದಿದೆ ಎಂಬುದು ನಮಗೆ ತೃಪ್ತಿದಾಯಕ ವಿಚಾರ. ಸರ್ವಾಂಗೀಣವಾಗಿ ಇನ್ನೂ ಅಭಿವೃದ್ಧಿಯಾಗಬೇಕು ಎನ್ನುವ ವಿಚಾರ ಬೇರೆ.

ಆದರೆ ನಮ್ಮ ದುರಾದೃಷ್ಟ ದುಷ್ಟ ರಾಜಕಾರಣದ ರೂಪದಲ್ಲಿ ಬಂದೆರಗಿದೆ. ಅತ್ಯಂತ ಕೆಟ್ಟ ಮಾದರಿಗಳನ್ನು ತಂದು ಮುಂಚೂಣಿಯಲ್ಲಿರುವ ನಮ್ಮ ಮೇಲೆ ಹೇರುವ ಕುಟಿಲ ರಾಜಕಾರಣ ನಡೀತಾ ಇದೆ. ಕರ್ನಾಟಕದ ಸಿಎಂ ಬೊಮ್ಮಾಯಿ ಆದಿಯಾಗಿ ಬಿಜೆಪಿಯ ಹಲವು ನಾಯಕರು ಅತ್ಯಂತ ಹಿಂದುಳಿದ, ಗೂಂಡಾಗಿರಿ, ನಕಲಿ ಎನ್‌ಕೌಂಟರ್, ಪುಂಡಾಟಿಕೆಗಳಿಗೆ ಕುಖ್ಯಾತವಾದ ಉತ್ತರಪ್ರದೇಶದ ಮಾದರಿಯನ್ನು ಕರ್ನಾಟಕದಲ್ಲಿ ಅಳವಡಿಸುತ್ತೇವೆ ಎಂದು ಬಹಿರಂಗವಾಗಿ ಮಾತಾಡುತ್ತಿದ್ದಾರೆ. ಇದು ಪ್ರಗತಿಯ ಹಾದಿಯಲ್ಲಿರುವ ಕರ್ನಾಟಕದ ಆರು ಕೋಟಿ ಜನರಿಗೆ ಮಾಡಿದ ಘೋರ ಅವಮಾನ. ಮೇಲೆ ಹೇಳಿದಂತೆ ಉತ್ತಮ ಅಂಕ ಪಡೆದಿರುವ ವಿದ್ಯಾರ್ಥಿಗೆ ಪೇಲಾದ ವಿದ್ಯಾರ್ಥಿಯನ್ನು ಮಾದರಿ ಮಾಡಿದಂತೆ.

ಉತ್ತರಪ್ರದೇಶದ ಕೆಲವು ವಾಸ್ತವಗಳನ್ನು ನೋಡೋಣ

2020ರ ಜುಲೈನಲ್ಲಿ ಇಡೀ ದೇಶವನ್ನೇ ತಲ್ಲಣಗೊಳಿಸಿದ ಒಂದು ಪ್ರಕರಣ ಉತ್ತರಪ್ರದೇಶದಲ್ಲಿ ನಡೆಯಿತು. ವಿಕಾಸ್ ದುಬೆ ಎಂಬ ಲಕ್ನೋ ಮೂಲದ ಗ್ಯಾಂಗ್ಸ್ಟರ್ ಒಬ್ಬ ತನ್ನನ್ನು ವಿಚಾರಣೆ ಮಾಡಲು ಹೋದ ಎಂಟು ಜನ ಪೊಲೀಸರನ್ನು ಹಾಡಹಗಲು ಗುಂಡಿಟ್ಟು ಕೊಂದಿದ್ದ. ಈ ಗ್ಯಾಂಗ್ಸ್ಟರ್ ಮಾಮೂಲಿ ಆಸಾಮಿ ಅಲ್ಲ, ಅಲ್ಲಿನ ಹಲವು ಬಿಜೆಪಿ ನಾಯಕರೊಂದಿಗೆ ಸಖ್ಯದಲ್ಲಿದ್ದವನು. ಆತನ ಮೇಲೆ ಹತ್ತಾರು ಕೊಲೆ, ಸುಲಿಗೆ ಕೇಸುಗಳಿದ್ದವು. ಆತ ಅರೆಸ್ಟ್ ಆದರೂ ಕೂಡ ಶೀಘ್ರದಲ್ಲೇ ಜಾಮೀನು ಸಿಕ್ಕಿ ಹೊರಬರುತ್ತಿದ್ದ. ಹೀಗೆ ಆತನನ್ನು ಬೆಳೆಸಿದ ಪರಿಣಾಮವೇ ಪೊಲೀಸರ ಮಾರಣಹೋಮ. ಇಡೀ ದೇಶ ಈ ಘೋರ ಘಟನೆಯನ್ನು ಖಂಡಿಸಿತು. ಉತ್ತರಪ್ರದೇಶದ ಸರ್ಕಾರ ಜನರ ದೃಷ್ಟಿಯಲ್ಲಿ ಕಟಕಟೆಯಲ್ಲಿ ನಿಂತಿತ್ತು. ಅನಿವಾರ್ಯವಾಗಿ ವಿಕಾಸ್ ದುಬೆಗೆ ಶರಣಾಗುವಂತೆ ಸೂಚಿಸಲಾಯಿತು. ತನ್ನನ್ನು ಬೇಕೆಂದಾಗ ಬಳಸಿಕೊಂಡು ಬೇಡವೆಂದಾಗ ಶರಣಾಗು ಎನ್ನುತ್ತಿರುವ ರಾಜಕಾರಣದ ವಿರುದ್ಧ ದುಬೆ ತಿರುಗಿಬಿದ್ದ. ಆತ ಬಾಯಿಬಿಟ್ಟರೆ ಯಾರೆಲ್ಲರ ಬಂಡವಾಳ ಹೊರಬೀಳುತ್ತಿತ್ತೋ ದೇವರೇ ಬಲ್ಲ. ಕೊನೆಗೆ ಆತನನ್ನು ಎನ್ಕೌಂಟರ್‌ನಲ್ಲಿ ಕೊಲ್ಲಲಾಯ್ತು. ಇದು ಯಾವುದೋ ಓಬಿರಾಯನ ಕಾಲದ ಕತೆಯಲ್ಲ; ಕೇವಲ ಎರಡು ಮೂರು ವರ್ಷಗಳ ಹಿಂದಿನ ಸತ್ಯ ಘಟನೆ.

ವಿಕಾಸ್ ದುಬೆ

ಉತ್ತರಪ್ರದೇಶದಲ್ಲಿ ಉನ್ನಾವೊ ಎಂಬುದೊಂದು ಪಟ್ಟಣವಿದೆ. ಅದು ಜಿಲ್ಲಾ ಕೇಂದ್ರವೂ ಹೌದು. ಉನ್ನಾವೋ ಕ್ಷೇತ್ರಕ್ಕೆ ಮೂರು ಬಾರಿ ಶಾಸಕನಾಗಿದ್ದ ಆಸಾಮಿ ಕುಲದೀಪ್ ಸಿಂಗ್ ಸೆಂಗರ್ ಅಂತ. ಬಿಜೆಪಿ ಪಕ್ಷದವನೇ. ಮೇಲಾಗಿ ಸಿಎಂ ಯೋಗಿಯ ಠಾಕೂರ್ ಜಾತಿಯ ಬಂಧುಬಾಂಧವ ಬೇರೆ. 2017ರಲ್ಲಿ ಉದ್ಯೋಗ ಕೊಡಿಸುವ ನೆಪದಲ್ಲಿ 16 ವರ್ಷದ ಅಪ್ರಾಪ್ತ ಹುಡುಗಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಈತನ ಮೇಲೆ ಬಂತು. ಆ ಅಮಾಯಕ ಹುಡುಗಿ ಮತ್ತು ಮನೆಯವರು ಎಷ್ಟೇ ಪ್ರಯತ್ನಿಸಿದರೂ ಆತನ ಮೇಲೆ ಎಫ್‌ಐಆರ್ ದಾಖಲಾಗಲೇ ಇಲ್ಲ. ನಾನಾ ಕಚೇರಿಗಳಿಗೆ, ಉನ್ನತಾಧಿಕಾರಿಗಳ ಬಾಗಿಲಿಗೆ ಅಲೆದರೂ ಮೂರು ಕಾಸಿನ ಪ್ರಯೋಜನ ಆಗಲಿಲ್ಲ. ಕೊನೆಗೆ ಹತಾಶಗೊಂಡ ಯುವತಿ ಸಿಎಂ ಮನೆ ಎದುರು ಬೆಂಕಿ ಹಚ್ಚಿಕೊಂಡು ಅತ್ಮಾಹುತಿ ಮಾಡಿಕೊಳ್ಳುವ ಪ್ರಯತ್ನಕ್ಕೆ ಮುಂದಾದಳು. ಇದು ಇಡೀ ದೇಶದ ಗಮನ ಸೆಳೆಯಿತು. ಅಂತೂಇಂತೂ ಎಫ್‌ಐಆರ್ ದಾಖಲಾಯ್ತು. ಆದರೆ ತನಿಖೆ? ಉಹೂಂ ಅಂಥಾ ಯಾವುದೇ ಪ್ರಗತಿಯಾಗಲಿಲ್ಲ.

ಈ ಕೇಸು ವಿಚಾರಣೆಯ ನೆಪದಲ್ಲಿ ಕುಂಟುತ್ತಿರುವಾಗಲೇ ಸಂತ್ರಸ್ತೆಗೆ ಸಹಾಯ ಮಾಡಿದ ಆಕೆಯ ಚಿಕ್ಕಪ್ಪ ಲಾಕಪ್‌ನಲ್ಲಿ ಶವವಾದ. ಆತನ ಬಂಧುಗಳ ಕೊಲೆಯಾಯಿತು. ಅಷ್ಟೇ ಏಕೆ? ಇವರ ಸಹಾಯಕ್ಕೆ ನಿಂತಿದ್ದ ವಕೀಲರ ಕಾರು ಭೀಕರ ಅಪಘಾತಕ್ಕೆ ತುತ್ತಾಯಿತು. ವಕೀಲ ತೀವ್ರವಾಗಿ ಗಾಯಗೊಂಡರು. ಇದೆಲ್ಲಾ ಏನೇ ನಡೆದರೂ ಉತ್ತರಪ್ರದೇಶದ ಪೊಲೀಸರು ಜಪ್ಪೆನ್ನಲಿಲ್ಲ. ಕಾರಣ ಆತ ಬಿಜೆಪಿ ಎಂಎಲ್‌ಎ, ಮೇಲಾಗಿ ಸಿಎಂ ಯೋಗಿಯ ಜಾತಿ ಬಂಧು. ಅಲ್ಲಿ ಠಾಕೂರ್‌ಗಳದ್ದೇ ಕಾರುಬಾರು. ಕೊನೆಗೆ ಈ ಪ್ರಕರಣ ಸುಪ್ರೀಂಕೋರ್ಟ್ ತಲುಪಿತು. ಸುಪ್ರೀಂ ಸೂಚನೆಯ ಮೇರೆಗೆ ಆತನ ಬಂಧನವಾಯ್ತು. ಅಂತಿಮವಾಗಿ ಅಲಹಾಬಾದ್ ಹೈಕೋರ್ಟ್ ಈ ಪಾತಕಿಯನ್ನು ಅಪರಾಧಿ ಎಂದು ಘೋಷಿಸಿ ಈಗ ಜೈಲಿಗಟ್ಟಿದೆ. ಈತನನ್ನು ಇನ್ನು ಕಾಪಾಡೋದು ಸಾಧ್ಯವಿಲ್ಲ; ಆತ ಜೈಲಿಗೆ ಹೋಗೋದು ಗ್ಯಾರಂಟಿ ಅನ್ನೋದು ಖಚಿತವಾಗುತ್ತಿದ್ದಂತೆ ಅಲ್ಲಿನ ಬಿಜೆಪಿ ಆತನನ್ನು ಪಕ್ಷದಿಂದ ಉಚ್ಚಾಟನೆ ಮಾಡಿ ಮುಖ ಉಳಿಸಿಕೊಳ್ಳುವ ಪ್ರಯತ್ನ ಮಾಡಿದೆ. ಹಾಲಿ ಈತ ಜೈಲಿನಲ್ಲಿದ್ದಾನೆ.

ಕುಲದೀಪ್ ಸಿಂಗ್ ಸೆಂಗರ್

ಇಡೀ ದೇಶ ತಲೆತಗ್ಗಿಸಿದ ಹತ್ರಾಸ್ ಪ್ರಕರಣವನ್ನೇ ನೋಡಿ. ಹತ್ರಾಸ್ ಜಿಲ್ಲೆಯ ಒಂದು ಹಳ್ಳಿಯಲ್ಲಿ 19 ವರ್ಷದ ದಲಿತ ಯುವತಿಯೊಬ್ಬಳು ತಮ್ಮ ಹೊಲದ ಕೆಲಸದಲ್ಲಿ ತೊಡಗಿದ್ದಾಗ ನಾಲ್ಕು ಮಂದಿ ಕಾಮುಕರ ಗುಂಪು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿತು. ಪ್ರತಿರೋಧ ತೋರಿದ ಆಕೆಗೆ ಮಾರಣಾಂತಿಕವಾಗಿ ಹಲ್ಲೆ ಮಾಡಲಾಯಿತು. ಆಕೆಯ ತಾಯಿ ಪೊಲೀಸ್ ಠಾಣೆ ಅಲೆದರೂ ಕೇಸು ರಿಜಿಸ್ಟರ್ ಆಗಲಿಲ್ಲ. ಕೊನೆಗೆ ಯಾರದೋ ಸಹಾಯದಿಂದ ದೆಹಲಿ ತಲುಪಿ ಅಲ್ಲಿ ಚಿಕಿತ್ಸೆ ಫಲಿಸದೆ ನತದೃಷ್ಟ ದಲಿತ ಯುವತಿ ಸಾವಿಗೀಡಾದಳು. ಇಷ್ಟರಲ್ಲಾಗಲೇ ಈ ಸುದ್ದಿ ಹರಡಿ ದಲಿತ ಸಮುದಾಯದ ಆಕ್ರೋಶ ಮಡುಗಟ್ಟಿತ್ತು. ಪೊಲೀಸರು ಚುರುಕಾದರು. ರಾತ್ರೋರಾತ್ರಿ ಆ ಯುವತಿಯ ಶವವನ್ನು ಪೆಟ್ರೋಲು ಸುರಿದು ಪೊಲೀಸರೇ ಸುಟ್ಟುಹಾಕಿಬಿಟ್ಟರು! ತಮ್ಮ ಮಗಳ ಮುಖದ ಅಂತಿಮ ದರ್ಶನಕ್ಕೆ ಆಕೆಯ ಪೋಷಕರಿಗೂ ಅವಕಾಶ ಕೊಡಲಿಲ್ಲ.

ಅದೇ ಊರಿನ ದಿಟ್ಟ ಯುವ ಪತ್ರಕರ್ತೆಯೊಬ್ಬಳು ಈ ಕ್ರೌರ್ಯವನ್ನು ವರದಿ ಮಾಡದೇ ಹೋಗಿದ್ದರೆ ಹೊರಜಗತ್ತಿಗೆ ಇದು ತಿಳಿಯುತ್ತಲೇ ಇರಲಿಲ್ಲ. ಇಡೀ ದೇಶದಲ್ಲಿ ಈ ಬಗ್ಗೆ ಪ್ರತಿಭಟನೆಗಳು ನಡೆದವು. ಜನರು ಪಕ್ಷ ಭೇದ ಮರೆತು ಈ ಸರ್ಕಾರ ಹಾಗೂ ಪೊಲೀಸರಿಗೆ ಛೀಮಾರಿ ಹಾಕಿದರು. ಪೊಲೀಸರು ಕೈಗೊಂಡ ಕ್ರಮ ಏನು ಗೊತ್ತೆ? ಹತ್ರಾಸ್ ದುರಂತವನ್ನು ವರದಿ ಮಾಡಲು ಹೋದ ಪತ್ರಕರ್ತರನ್ನು ಬಂಧಿಸಿ, ದೇಶದ್ರೋಹದ ಆರೋಪದಡಿ ಜೈಲಿಗಟ್ಟಿದ್ದು, ವಿರೋಧ ಪಕ್ಷಗಳ ನಾಯಕರು ಹತ್ರಾಸ್ ಭೇಟಿ ಮಾಡದಂತೆ ನಿರ್ಬಂಧಿಸಿದ್ದು, ಆ ದಲಿತ ಕುಟುಂಬವನ್ನು ಬೆದರಿಸಿ ಮಣಿಸಲು ಪ್ರಯತ್ನಿಸಿದ್ದು ಇತ್ಯಾದಿ. ಪೊಲೀಸರು ಇಷ್ಟೆಲ್ಲಾ ಪ್ರಯಾಸ ಪಟ್ಟಿದ್ದು ಯಾಕೆ ಗೊತ್ತಾ? ಈ ಅತ್ಯಾಚಾರ ಆರೋಪಿಗಳ ಹೆಸರುಗಳನ್ನು ಕೇಳಿದರೆ ನಿಮಗೆ ಅರ್ಥವಾಗಬಹುದು. ಸಂದೀಪ್ ಠಾಕೂರ್, ರಾಮು ಠಾಕೂರ್, ಲವಕುಶ ಠಾಕೂರ್ ಮತ್ತು ರವಿ ಠಾಕೂರ್. ಇನ್ನೂ ಏನಾದರೂ ಗೊಂದಲ ಇದೆಯೆ?

ಇದನ್ನೂ ಓದಿ: ಬೊಮ್ಮಾಯಿಯವರು ಬಯಸುವ ಯುಪಿ ಮಾದರಿಯ ಆಳ-ಅಗಲ ಬಲ್ಲಿರೇನು!?

ಕೇಂದ್ರ ಸರ್ಕಾರ ತಂದಿದ್ದ ಮೂರು ಕರಾಳ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಶಾಂತಿಯುತವಾದ ಪ್ರತಿಭಟನೆ ನಡೆಸಿದ್ದರು. ಶಾಂತಿಯುತವಾದ ಪ್ರತಿಭಟನೆಯ ಮೇಲೆ ಜೀಪ್ ಹತ್ತಿಸಿ ನಾಲ್ಕು ಮಂದಿ ರೈತರನ್ನು ಕೊಂದು, ಹತ್ತಾರು ಮಂದಿ ರೈತರನ್ನು ಗಂಭೀರವಾಗಿ ಗಾಯಗೊಳಿಸಿದ ಪಾಖಂಡಿಯ ಹೆಸರು ಆಶಿಶ್ ಮಿಶ್ರಾ ಠೇಣಿ. ದುರ್ಘಟನೆಗೆ ಹತ್ತಾರು ವಿಡಿಯೋ ಸಾಕ್ಷಿಗಳಿದ್ದಾಗಿಯೂ ನೂರಾರು ಪ್ರತ್ಯಕ್ಷ ಸಾಕ್ಷಿಗಳಿದ್ದಾಗಿಯೂ ಇಡೀ ಜಗತ್ತು ಟಿ.ವಿ ಪರದೆಯ ಮೇಲೆ ಈ ದುರ್ಘಟನೆಯ ನೇರಪ್ರಸಾರ ನೋಡಿದ್ದಾಗಿಯೂ, ಆ ಆರೋಪಿಯನ್ನು ಪೊಲೀಸರು ಮುಟ್ಟಲೇ ಇಲ್ಲ. ಕಾರಣ, ಆತ ಕೇಂದ್ರದ ಗೃಹ ಖಾತೆಯ ರಾಜ್ಯ ಸಚಿವ ಅಜಯ್ ಮಿಶ್ರಾ ಠೇಣಿಯ ಸುಪುತ್ರ.

ಇಡೀ ದೇಶದ ತುಂಬಾ ಆಕ್ರೋಶ ಭುಗಿಲೆದ್ದು, ಮಂತ್ರಿಯ ಮಗನನ್ನು ಬಂಧಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸುವವರೆಗೆ ಆತ ಜಾಲಿ ಟ್ರಿಪ್‌ನಲ್ಲಿದ್ದ. ಇತ್ತೀಚೆಗೆ, ಆತ ಜಾಮೀನಿನ ಮೇಲೆ ಬಿಡುಗಡೆ ಕೂಡ ಆಗಿದ್ದಾನೆ. ಇನ್ನು ಪ್ರಕರಣ ಪೂರ್ತಿ ಹಳ್ಳ ಹಿಡಿಯುವುದೊಂದು ಬಾಕಿ ಇದೆ.

ವರ್ತಮಾನದ ಭೀಕರ ವಿದ್ಯಮಾನವೊಂದಕ್ಕೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ. ದೆಹಲಿಯ ಜಂತರ್‌ಮಂತರ್‌ನಲ್ಲಿ ನಮ್ಮ ದೇಶದ ಪುತ್ರಿಯರು ನ್ಯಾಯಕ್ಕಾಗಿ ಅಂಗಲಾಚುತ್ತಾ ಆಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಅವರು ಸಾಮಾನ್ಯ ಹೆಣ್ಣು ಮಕ್ಕಳಲ್ಲ, ದೇಶಕ್ಕಾಗಿ ಹೋರಾಡಿ ಚಿನ್ನದ ಪದಕ ಗೆದ್ದುಕೊಟ್ಟಂತಹ ಖ್ಯಾತ ಕ್ರೀಡಾಪಟುಗಳು.

ಇವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ’ಭಾರತ ಕುಸ್ತಿ ಫೆಡರೇಷನ್’ನ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಎಂಬ ಕಾಮುಕನ ವಿರುದ್ಧ ಸಿಡಿದೆದ್ದು, ಆತನನ್ನು ಹುದ್ದೆಯಿಂದ ವಜಾ ಮಾಡಿ, ಬಂಧಿಸಬೇಕೆಂದು ಆಗ್ರಹಿಸಿ ನೂರಾರು ಕ್ರೀಡಾಪಟುಗಳು ಬೀದಿಗಿಳಿದಿದ್ದಾರೆ.

ಆತನ ಮೇಲೆ ಪೊಲೀಸರು ಕೇಸು ದಾಖಲಿಸಿಕೊಳ್ಳಲು ತಯಾರಿರಲಿಲ್ಲ. ಈ ವಿಷಯ ಸುಪ್ರೀಂ ಮೆಟ್ಟಿಲು ಹತ್ತಿದ ಮೇಲೆಯೇ ಕೇಸು ದಾಖಲಾಗಿದೆ. ಅದರೆ, ಆತನನ್ನು ಮುಟ್ಟುವ ಸಾಹಸಕ್ಕೆ ಪೊಲೀಸರು ಕೈಹಾಕಿಲ್ಲ. ಯಾಕೆಂದರೆ, ಆತ ಉತ್ತರ ಪ್ರದೇಶ ಬಿಜೆಪಿಯ ಪ್ರಭಾವಿ ಸಂಸದ. ಮೇಲಾಗಿ, ಸಿಎಂ ಯೋಗಿ ಅವರ ಠಾಕೂರ್ ಜಾತಿಬಂಧು. ಹೀಗಾಗಿಯೇ, ಪ್ರಧಾನಿ ಮೋದಿಗೆ ನೇರವಾಗಿ ಅಹವಾಲು ಸಲ್ಲಿಸಿದರೂ ಕೂಡ, ಆ ಪಾತಕಿಯ ಗೋಜಿಗೆ ಪೊಲೀಸರು ಹೋಗಿಲ್ಲ.

ಇವು ಕೆಲವೇಕೆಲವು ಉದಾಹರಣೆಗಳಷ್ಟೇ. ಉತ್ತರ ಪ್ರದೇಶದ ಅಪರಾಧಿ ಜಗತ್ತನ್ನು, ಪೊಲೀಸ್ ಮತ್ತು ಸರ್ಕಾರದ ಭಾಗಿದಾರಿಕೆಯನ್ನು ಬರೆಯುತ್ತಾ ಹೋದರೆ, ದೊಡ್ಡ ಗ್ರಂಥವೇ ಆಗುತ್ತದೆ. ಈಗ ನಮ್ಮ ಕರ್ನಾಟಕದ ವಿಚಾರಕ್ಕೆ ಬರೋಣ. ಮೇಲೆ ಹೆಸರಿಸಲಾದ ಯಾವೊಂದು ಪಾತಕ ಕೃತ್ಯಕ್ಕೆ ಹೋಲಿಸಬಹುದಾದ ಘಟನೆ ನಮ್ಮ ನಾಡಿನಲ್ಲಿ ನಡೆಯಲು ಸಾಧ್ಯವಿದೆಯೇ? ಕನ್ನಡ ನಾಡಿನ ಪ್ರಜ್ಞಾವಂತ ಜನರು ಇಂಥದ್ದಕ್ಕೆ ಅವಕಾಶ ಕೊಡುತ್ತಾರೆಯೇ? ಖಂಡಿತಾ ಸಾಧ್ಯವಿಲ್ಲ. ಕರ್ನಾಟಕದಲ್ಲಿ ಇಂಥ ಘೋರ ಘಟನೆಗಳನ್ನು ಕಲ್ಪಿಸಿಕೊಳ್ಳುವುದೂ ಸಾಧ್ಯವಿಲ್ಲ. ಒಂದು ಪಕ್ಷ ಘೋರ ಘಟನೆಗಳು ನಡೆದಾಗ ಸರ್ಕಾರವನ್ನು ಕಟಕಟೆಗೆ ನಿಲ್ಲಿಸುವ ಶಕ್ತಿಯಂತೂ ಒಂದು ಮಟ್ಟಕ್ಕೆ ಕರ್ನಾಟಕ ಜನಕ್ಕಿದೆ.

ಬ್ರಿಜ್ ಭೂಷಣ್ ಶರಣ್ ಸಿಂಗ್

ಗೂಂಡಾ ರಾಜ್ಯವನ್ನು ಮಟ್ಟಹಾಕುತ್ತೇನೆಂದು ಘೋಷಿಸಿರುವ ಯೋಗಿಯ ಪೊಲೀಸರು ನಕಲಿ ಎನ್ಕೌಂಟರ್‌ಗಳಲ್ಲಿ ಕೊಂದುಹಾಕುತ್ತಿರುವುದು ಮುಸ್ಲಿಂ ಹಿನ್ನೆಲೆಯ ಕ್ರಿಮಿನಲ್‌ಗಳನ್ನು ಮಾತ್ರ. ವಾಸ್ತವದಲ್ಲಿ ಠಾಕೂರ್ ಜಾತಿ ಹಿನ್ನೆಲೆಯ ಡಾನ್‌ಗಳು ಹುಲುಸಾಗಿ ಬೆಳೆಯುತ್ತಿದ್ದಾರೆ ಎಂಬ ಗಂಭೀರ ಆರೋಪವನ್ನು ಯೋಗಿ ಎದುರಿಸುತ್ತಿದ್ದಾರೆ. ಇನ್ನೊಂದು ಕಡೆ, ಬುಲ್ಡೋಜರ್‌ಗಳನ್ನು ಬಳಸಿ, ಮನೆಗಳನ್ನು ಕೆಡವುತ್ತಿರುವ ಕಾನೂನುಬಾಹಿರ ಸರ್ಕಾರಿ ಅಪರಾಧ ಗುರಿ ಮಾಡಿರುವುದು ಕೂಡ ಬಡ ಮುಸ್ಲಿಮರ ಮನೆಗಳನ್ನೇ. ಒಂದು ಕಾನೂನು ಆಡಳಿತವಿರುವ ರಾಜ್ಯದಲ್ಲಿ ಇಂಥ ಗೂಂಡಾ ನಡವಳಿಕೆ ಸಾಧ್ಯವೇ?

ಇನ್ನು, ಶಿಕ್ಷಣ ಕ್ಷೇತ್ರದಲ್ಲಿ, ಆರೋಗ್ಯ ವ್ಯವಸ್ಥೆಯಲ್ಲಿ ಉತ್ತರ ಪ್ರದೇಶದೊಂದಿಗೆ ಕರ್ನಾಟಕವನ್ನು ಹೋಲಿಸುವುದು ನಮಗೆ ನಾವು ಅವಮಾನ ಮಾಡಿಕೊಂಡಂತೆ. ಉದ್ಯೋಗದ ವಿಷಯದಲ್ಲಂತೂ ಕೇಳುವುದೇ ಬೇಡ. ಉತ್ತರ ಪ್ರದೇಶದ ನಿರುದ್ಯೋಗಿ ಯುವಕರು ಬದುಕು ಹುಡುಕಿಕೊಂಡು ಲಕ್ಷಾಂತರ ಸಂಖ್ಯೆಯಲ್ಲಿ ಕರ್ನಾಟಕಕ್ಕೆ ವಲಸೆ ಬಂದಿದ್ದಾರೆ. ನಮ್ಮ ನಾಡಿನ ಉದ್ದಗಲಕ್ಕೂ ಇಂಥ ಬಡಪಾಯಿ ಉತ್ತರ ಪ್ರದೇಶಿಗರನ್ನು ನಾವು ನಿತ್ಯವೂ ಕಾಣುತ್ತೇವೆ.

ಸ್ನೇಹಿತರೇ, ಹೀಗೆ ಯಾವ ರೀತಿಯಿಂದಲೂ ನಮ್ಮ ಹೆಮ್ಮೆಯ ಕರುನಾಡಿಗೆ ಸರಿಸಾಟಿಯಲ್ಲದ ಹಿಂದುಳಿದ, ಗೂಂಡಾ ರಾಜ್ಯ ಕುಖ್ಯಾತಿಯ ಉತ್ತರ ಪ್ರದೇಶದ ಮಾದರಿಯನ್ನು ಅನುಸರಿಸುತ್ತೇವೆ ಎನ್ನುವ ಈ ರಾಜಕಾರಣಿಗಳಿಗೆ ಏನು ಹೇಳೋಣ? ತಮ್ಮ ರಾಜಕೀಯ ದುರ್ಲಾಭಕ್ಕೋಸ್ಕರ ನಮ್ಮ ಸಮೃದ್ಧ ನಾಡಿನ ಹಿತವನ್ನು ಬಲಿಕೊಡಲು ಹವಣಿಸುತ್ತಿದ್ದಾರೆ ಅಂತ ತಾನೇ ಇದರರ್ಥ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...