Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರಗಳ ಸಮೀಕ್ಷೆ:ಶಿವಮೊಗ್ಗ ರೌಂಡ್‌ಅಪ್: ಯಡಿಯೂರಪ್ಪರ ಕಾವಲಿಲ್ಲದ ಕೇಸರಿ ಕೋಟೆಗೆ ಕಾಂಗ್ರೆಸ್-ಜೆಡಿಎಸ್ ಲಗ್ಗೆ!

ಶಿವಮೊಗ್ಗ ರೌಂಡ್‌ಅಪ್: ಯಡಿಯೂರಪ್ಪರ ಕಾವಲಿಲ್ಲದ ಕೇಸರಿ ಕೋಟೆಗೆ ಕಾಂಗ್ರೆಸ್-ಜೆಡಿಎಸ್ ಲಗ್ಗೆ!

- Advertisement -
- Advertisement -

ಶಿವಮೊಗ್ಗ ಜಿಲ್ಲೆ ಕರ್ನಾಟಕದ ದಕ್ಷಿಣ ಕರಾವಳಿ ನಂತರದ ಎರಡನೇ ಹಿಂದುತ್ವದ ಪ್ರಯೋಗ ಶಾಲೆ ಎಂದೆ ಗುರುತಿಸಲ್ಪಡುತ್ತಿರುವ ಧರ್ಮಕಾರಣದ ರಣಕಣ! ಲಿಂಗಾಯತ ಪ್ರತಿಷ್ಠೆ ನಿರ್ಣಾಯಕವಾಗಿರುವ ಈ ಕೇಸರಿ ಕೋಟೆಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸುಮಾರು ಎರಡು ದಶಕಗಳಿಂದ ಅಧಿಪತಿಯಾಗಿದ್ದರು. ಬಿಜೆಪಿಯಲ್ಲಿ ಲಿಂಗಾಯತ ಲೀಡರ್‌ಗಳನ್ನು ವ್ಯವಸ್ಥಿತವಾಗಿ ನೇಪತ್ಯಕ್ಕೆ ಸರಿಲಾಗುತ್ತಿದೆ ಎಂಬ ಭಾವನೆಯ ಈ ಪರ್ವದಲ್ಲಿ ಜಿಲ್ಲೆಯ ರಾಜಕೀಯ ಭೂಮಿಕೆಯಲ್ಲಿ ಮಹತ್ವದ ಸ್ಥಿತ್ಯಂತರಗಳಾಗಿವೆೆ. ಜಿಲ್ಲೆಯ ರಾಜಕೀಯದ ಮೇಲೆ ಪ್ರಚಂಡ ಹಿಡಿತ ಹೊಂದಿದ್ದ ಬಂಗಾರಪ್ಪನವರ ನಿರ್ಗಮನದ ನಂತರ ಆ ತಲೆಮಾರಿನ ಜನಾಕರ್ಷಕ ವ್ಯಕ್ತಿತ್ವದ ಯಡಿಯೂರಪ್ಪ, ಕಾಗೋಡು ತಿಮ್ಮಪ್ಪ, ಈಶ್ವರಪ್ಪ ಒಬ್ಬರ ಹಿಂದೊಬ್ಬರಂತೆ ಪವರ್ ಪಾಲಿಟಿಕ್ಸ್‌ನಿಂದ ಹೊರಬಿದ್ದಿದಾರೆ.

ಮತ್ತೊಂದೆಡೆ ಆಯನೂರು ಮಂಜುನಾಥ್, ಆರಗ ಜ್ಞಾನೇಂದ್ರ, ಕಿಮ್ಮನೆ ರತ್ನಾಕರ್- ಹೀಗೆ ಮುಂತಾದವರು ಕೊನೆಯ “ಪ್ರದರ್ಶನ” ಕೊಡುತ್ತಿದ್ದಾರೆ. ಈ ನಿವೃತ್ತಿ ಪ್ರಕ್ರಿಯೆಯ ಮತ್ತೊಂದು ಮಗ್ಗುಲಲ್ಲಿ ಮಧು ಬಂಗಾರಪ್ಪ, ಹರತಾಳು ಹಾಲಪ್ಪ, ಬೇಳೂರು ಗೋಪಾಲಕೃಷ್ಣ, ಕುಮಾರ ಬಂಗಾರಪ್ಪ ಮತ್ತು ವಿಜಯೇಂದ್ರ ಮುಂಚೂಣಿಗೆ ಬಂದಿದ್ದಾರೇನೋ ನಿಜ; ಆದರೆ ಹೊಸ ಪೀಳಿಗೆಯ “ಶೋ ಮ್ಯಾನ್”ಗಳು ಇಡೀ ಜಿಲ್ಲೆಯನ್ನು ಪ್ರಭಾವಿಸುವುದು ಒತ್ತಟ್ಟಿಗಿರಲಿ, ತಂತಮ್ಮ ಕ್ಷೇತ್ರದಲ್ಲೇ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡಬೇಕಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಸಮಾಜವಾದಿ ಹೋರಾಟದ ನೆಲವಾದ ಶಿವಮೊಗ್ಗ ಜಿಲ್ಲೆಯ ರಾಜಕಾರಣವೆಂದರೆ ಲಾಗಾಯ್ತಿನಿಂದ ಮೇಲ್ವರ್ಗದ ಬ್ರಾಹ್ಮಣ-ಲಿಂಗಾಯತ ಮತ್ತು ಹಿಂದುಳಿದ ವರ್ಗದ ದೀವರು (ಈಡಿಗರು) ಜನಾಂಗದ ಮೇಲಾಟ. ಶೋಷಿತ ದೀವರು ಸಮುದಾಯದ ನಾಯಕರೇ ಸಮಾಜವಾದಿ ಹೋರಾಟದ ಮುಂಚೂಣಿಯಲ್ಲಿದ್ದರು. ಯಾವಾಗ ಬಂಗಾರಪ್ಪ ಪ್ರವರ್ಧಮಾನಕ್ಕೆ ಬಂದರೋ ಆಗ ತಣ್ಣನೆಯ ಮಲೆನಾಡಿನ ಶಿವಮೊಗ್ಗ ಜಿಲ್ಲಾ ರಾಜಕಾರಣದಲ್ಲಿ ಹಿಂದುಳಿದ ವರ್ಗದ ಸ್ವಾಭಿಮಾನದ “ಬಿಸಿ” ಏರಲಾರಂಭಿಸಿತೆಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.

ಸ್ವಾತಂತ್ರ್ಯ ಪೂರ್ವದಲ್ಲಿಯೇ ಶಿವಮೊಗ್ಗ ಸಂಘಪರಿವಾರದ ನೆಲೆಗಳಲ್ಲಿ ಒಂದೆಂದು ಗುರುತಿಸಲ್ಪಟ್ಟಿತ್ತು; ಜನಸಂಘದ ಕಾಲದಲ್ಲಿಯೇ ಜಿಲ್ಲೆಯ ಅಲ್ಲಲ್ಲಿ ಹಿಂದುತ್ವ ಬೇರುಬಿಟ್ಟಿತ್ತು. ಲಾಲ್‌ಕೃಷ್ಣ ಆದ್ವಾನಿಯವರ ರಥಯಾತ್ರೆ-ಇಟ್ಟಿಗೆ ಯಾತ್ರೆಯ ಸಂದರ್ಭದಲ್ಲಿ ಹಿಂದುತ್ವ ಉದ್ದೀಪನಕ್ಕೆ ಪ್ರಬಲ ಪ್ರಯತ್ನಗಳಾದವು. ಸರಿಸುಮಾರು ಅದೇ ಹೊತ್ತಿಗೆ ಶಿಕಾರಿಪುರದ ಲಿಂಗಾಯತ ಸಮುದಾಯದ ಯಡಿಯೂರಪ್ಪ ಕೇಸರಿ ಪಕ್ಷದ ಆಯಕಟ್ಟಿನ ಸ್ಥಾನಕ್ಕೆ ಬಂದರು. ಬಂಗಾರಪ್ಪರನ್ನು ಹಿಮ್ಮೆಟ್ಟಿಸುವ ಹಠದಲ್ಲಿದ್ದ ಬ್ರಾಹ್ಮಣ-ಲಿಂಗಾಯತ ಮೇಲ್ವರ್ಗಕ್ಕೆ ಯಡಿಯೂರಪ್ಪ ಕಣ್ಮಣಿಯಾದರು. 2000ದ ದಶಕದಕಲ್ಲಿ ರಾಜ್ಯ ಬಿಜೆಪಿಯ ಪ್ರಶ್ನಾತೀತ ನಾಯಕನಾಗಿ ಹೊರಹೊಮ್ಮಿದ್ದ ಯಡಿಯೂರಪ್ಪ ಜಿಲ್ಲೆಯಲ್ಲಿ ಲಿಂಗಾಯತ ಪ್ರತಿಷ್ಠೆ-ಹಿಂದುತ್ವ-ಹಣ ಹದವಾಗಿ ಬೆರೆಸಿ ಬಂಗಾರಪ್ಪರಿಗೆ ಮುಖಾಮುಖಿಯಾದರೆಂದು ಜಿಲ್ಲೆಯ ರಾಜಕಾರಣದ ನಾಡಿಮಿಡಿತ ಬಲ್ಲವರು ಹೇಳುತ್ತಾರೆ.

ಜಿಲ್ಲೆಯಲ್ಲಿ ಧರ್ಮಕಾರಣ, ಜಾತಿಕಾರಣ ಅದೆಷ್ಟು ಬಿರುಸಾಯಿತೆಂದರೆ, ಒಂದು ಹಂತದಲ್ಲಿ ಸಮಾಜವಾದಿ ಹಿನ್ನಲೆಯ ಬಂಗಾರಪ್ಪನವರೇ ದಿಕ್ಕೆಟ್ಟು ಬಿಜೆಪಿ ಸೇರಿದರು. ಆದರೆ ರೆಬೆಲ್ ಸ್ವಭಾವದ ಬಂಗಾರಪ್ಪ ಅಲ್ಲಿ ಉಳಿಯಲಾಗದೆ ಹೋದಷ್ಟೆ ವೇಗವಾಗಿ ಹೊರಬಂದರು. ಇದರಿಂದ ಬಂಗಾರಪ್ಪನವರು ಬಿಜೆಪಿಗೆ ಹರವು ಹೆಚ್ಚಿಸಿಕೊಟ್ಟಂತಾಗಿತ್ತು. ಬಂಗಾರಪ್ಪ ಜತೆ ಬಿಜೆಪಿ ಸೇರಿದ್ದ ಅನುಯಾಯಿಗಳು ಹಿಂತಿರುಗಿ ಬರಲಿಲ್ಲ; ಬಂಗಾರಪ್ಪರ ದೆಸೆಯಿಂದ ಕೇಸರಿ ಪಕ್ಷಕ್ಕೆ ಶಿಫ್ಟ್ ಆಗಿದ್ದ ಹಿಂದುಳಿದ ವರ್ಗದ ಮತಗಳಲ್ಲಿ ದೊಡ್ಡ ಪಾಲು ಅಲ್ಲೇ ಉಳಿಯಿತು. ಸ್ವಯಂಕೃತಾಪರಾಧ ಬಂಗಾರಪ್ಪನವರನ್ನು ಕೊನೆಗಾಲದಲ್ಲಿ ಬಹುವಾಗಿ ಬಾಧಿಸಿತು! ಯಡಿಯೂರಪ್ಪ ಅಂಡ್ ಸನ್ಸ್‌ನ “ಧನಕಾರಣ” ಎದುರಿಸಲಾಗದೆ ಬಂಗಾರಪ್ಪ ಮಂಕಾದರು. ಲೋಕಸಭಾ ಚುನಾವಣೆಯಲ್ಲಿ ಯಡಿಯೂರಪ್ಪರ ಮಗ ರಾಘವೇಂದ್ರರ ಕೈಲಿ ಬಂಗಾರಪ್ಪ ಸೋತುಹೋದರು; ಬಂಗಾರಪ್ಪರ ನಿಧನದ ನಂತರ ಯಡಿಯೂರಪ್ಪ ಶಿವಮೊಗ್ಗೆಯ ರಾಜಕಾರಣದಲ್ಲಿ ಏಕಮೇವಾದ್ವಿತೀಯರಾಗಿದ್ದು ಇತಿಹಾಸ.

ಈ ನಡುವೆ ಜಿಲ್ಲೆಯಲ್ಲಿ ಹಿಂದುತ್ವ ನಿಗಿ-ನಿಗಿ ಬೆಂಕಿ ಉಗುಳತೊಡಗಿತು. ದೊಡ್ಡ ಸಂಖ್ಯೆಯಲ್ಲಿ ಮುಸಲ್ಮಾನರಿರುವ ಶಿವಮೊಗ್ಗ ನಗರದಲ್ಲಿ ಹಿಂದುತ್ವದ ಕೆಲವು ಕಾಲಾಳುಗಳು ಕೊಲೆಮಾಡಿದರು! ಕೆಲವರು ಕೊಲೆಯಾಗಿ ಹೋದರು! ತೀರ್ಥಹಳ್ಳಿಯ ನಂದಿತಾ ಎಂಬ ಪುಟ್ಟ ಹುಡುಗಿ ಆತ್ಮಹತ್ಯೆ ಮಾಡಿಕೊಂಡಿದ್ದನ್ನೇ ಬಿಜೆಪಿ ಬೂಸ್ಟ್ ಮಾಡಿಕೊಂಡು ಜಿಲ್ಲೆಯನ್ನು ತಲ್ಲಣಗೊಳಿಸಿತು. ಈಗ ಶಿವಮೊಗ್ಗ ಜಿಲ್ಲಾ ರಾಜಕಾರಣದ ಚಕ್ರ ಪೂರ್ತಿ ಒಂದು ಸುತ್ತುತಿರುಗಿದೆ; ಯಡಿಯೂರಪ್ಪ ಬಿಜೆಪಿಯಲ್ಲಿ ನೆಲೆ-ಬೆಲೆ ಕಳೆದುಕೊಡಿದ್ದಾರೆ; ಶಿವಮೊಗ್ಗ ನಗರ ಒಂದು ಬಿಟ್ಟು ಉಳಿದೆಡೆ ಹಿಂದುತ್ವದ ಆವೇಶ ಕಮ್ಮಿಯಾಗಿದೆ. ಸಂಘ ಪರಿವಾರ ಯಡಿಯೂರಪ್ಪರನ್ನು ಹೊರಗಿಟ್ಟು ಲಿಂಗಾಯತರ ಹಂಗಿಲ್ಲದೆ ಬಿಜೆಪಿ ಕಟ್ಟುವ ತಂತ್ರಗಾರಿಕೆ ನಡೆಸಿದೆ ಎಂಬ ಮಾತುಗಳು ಜಿಲ್ಲೆಯಲ್ಲಿ ಸಾಮಾನ್ಯವಾಗಿದೆ.

ಲಿಂಗಾಯತ ಮತದಾರರು ವಿಚಲಿತರಾಗಿದ್ದಾರೆ; ಯಡಿಯೂರಪ್ಪರ ಹೆಸರು ಹೇಳಿ ಶಾಸಕರಾಗುತ್ತಿದ್ದ ಶಿಷ್ಯರಲ್ಲಿ ನಡುಕ ಮೂಡಿದೆ. ಜಿಲ್ಲೆಯ ಏಳು ಕ್ಷೇತ್ರದಲ್ಲಿ ಆರು ಬಿಜೆಪಿಗೆ ತಂದುಕೊಡುತ್ತಿದ್ದ ಯಡಿಯೂರಪ್ಪ ಈಗ ತವರೂರು ಶಿಕಾರಿಪುರದಲ್ಲೇ ತನ್ನ ರಾಜಕೀಯ ಉತ್ತರಾಧಿಕಾರಿ ಮಗ ವಿಜಯೇಂದ್ರನನ್ನು ಗೆಲ್ಲಿಸಿಕೊಳ್ಳಲು ತಿಣುಕಾಡುತ್ತಿದ್ಧಾರೆ. ಅತ್ತ ಕಾಂಗ್ರೆಸ್ ಪಾಳೆಯದಲ್ಲಿ ಜಿಲ್ಲೆಯಲ್ಲಿ ಪಕ್ಷ ಮುನ್ನಡೆಸುವ ಛಾತಿಯ ನಾಯಕನಿಲ್ಲವಾಗಿದೆ. ಬಂಗಾರಪ್ಪರ ನಿರ್ಗಮನದ ನಂತರ ಕಾಗೋಡು ತಿಮ್ಮಪ್ಪರಿಗೂ ಜಿಲ್ಲಾ ಕಾಂಗ್ರೆಸ್‌ಗೆ ಸಮರ್ಥ ಮುಂದಾಳತ್ವ ಕೊಡಲಾಗಲಿಲ್ಲ. ಕಾಂಗ್ರೆಸ್ ಕ್ಯಾಂಡಿಡೆಟ್‌ಗಳು ಒನ್ ಮ್ಯಾನ್ ಆರ್ಮಿಗಳಂತಾಗಿದ್ದಾರೆ; ಬಹುತೇಕ ಇಂತಹದೇ ಸನ್ನಿವೇಶದಲ್ಲಿ ಬಿಜೆಪಿ ಅಭ್ಯರ್ಥಿಗಳಿದ್ದಾರೆ; ಬಿಜೆಪಿ ಹುರಿಯಾಳುಗಳಿಗೆ ಯಡಿಯೂರಪ್ಪ ಇದ್ದೂ ಇಲ್ಲದಂತಾಗಿದ್ದಾರೆ ಎಂಬ ಸುದ್ದಿ ಸದ್ದು ಮಾಡುತ್ತಿರುವ ಶಿವಮೊಗ್ಗೆಯ ಏಳು ಅಖಾಡಗಳಲ್ಲಿ ಕೊನೆ ಹಂತದಲ್ಲಿ ಮೂಡುತ್ತಿರುವ ಜಯಾಪಜಯದ ಚಿತ್ತಾರಗಳು ಇಲ್ಲಿದೆ.

ಶಿವಮೊಗ್ಗ: ಹಿಂದುತ್ವದ ಛಾಯೆಯಲ್ಲಿ ತ್ರಿಕೋನ ಕಾಳಗ

ಸದಾ ಬೂದಿ ಮುಚ್ಚಿದ ಕೋಮು ಕೆಂಡದMತಿರುವ ಶಿವಮೊಗ್ಗ ನಗರದಲ್ಲಿ ಸಣ್ಣದೊಂದು ಸಂಶಯದ ಗಾಳಿ ಸೋಕಿದರೂ ಸಾಕು, ನೋಡನೋಡುತ್ತಿದ್ದಂತೆ ಬೆಂಕಿ ಹೊತ್ತಿಉರಿಯುತ್ತದೆ. ಇಂಥ ದುಗುಡ-ದುಮ್ಮಾನದ ನಗರಿಯನ್ನು ತನ್ನ ಒಡಲಲ್ಲಿಟ್ಟುಕೊಂಡಿರುವ ಶಿವಮೊಗ್ಗ ವಿಧಾಸಭಾ ಕ್ಷೇತ್ರದಲ್ಲಿ ಹಿಂದುತ್ವದ ಅಂಡರ್‌ಕರಂಟ್ ಇದೆ. ಮುಸ್ಲಿಮರು 45 ಸಾವಿರದಷ್ಟಿರುವ ಕ್ಷೇತ್ರದಲ್ಲಿ ಸಂಘಿಗಳು ಮತೀಯ ಧ್ರುವೀಕರಣವನ್ನು ವ್ಯವಸ್ಥಿತವಾಗಿ ಮಾಡಿದ್ದಾರೆ. ಹಿಂದುತ್ವದ ಸುಮಾರು 60-70 ಮತಗಳು ಇರಬಹುದೆಂದು ಅಂದಾಜಿಸಲಾಗಿದೆ. ಕ್ಷೇತ್ರದ ಉದ್ದಗಲಕ್ಕೆ ಕೇಸರಿ ಜಾಲ ವ್ಯಾಪಕವಾಗಿ ಪಸರಿಸಿದೆ. ಈ ಕೋಮು ಸೂಕ್ಷ್ಮ ಪ್ರದೇಶದ ನಾಡಿಮಿಡಿತ ಅರಿತಿದ್ದ ಮಾಜಿ ಮಂತ್ರಿ ಈಶ್ವರಪ್ಪ ಪ್ರಚೋದಕ ಮಾತುಳನ್ನಾಡುತ್ತಲೇ ಪದಪದೇ ಆರಿಸಿ ಬಂದಿದ್ದರು.

ಇಂಥ ಈಶ್ವರಪ್ಪ ಭ್ರಷ್ಟಾಚಾರ ಮತ್ತು ಬಾಯಿ ಬಡುಕತನದ ಆರೋಪದಿಂದ ಸಂಘ ಶ್ರೇಷ್ಠರ ಕೆಂಗಣ್ಣಿಗೆ ತುತ್ತಾಗಿದ್ದರು. “ನಿಮಗೆ ಟಿಕೆಟ್ ಇಲ್ಲ; ನಿವೃತ್ತಿ ಘೋಷಿಸಿ” ಎಂದು ಹೈಕಮಾಂಡ್ ಆಜ್ಞೆ ಮಾಡಿದಾಗ ಈಶ್ವರಪ್ಪ ಭಯಭಕ್ತಿಯಿಂದ ಒಪ್ಪಿಕೊಂಡಿದ್ದರು. ಈ ಶರಣಾಗತಿ ಹಿಂದೆ ಮಗನಿಗೆ ಕೇಸರಿ ಟಿಕೆಟ್ ಕೊಡಿಸುವ ತಂತ್ರ ಅಡಗಿತ್ತೆಂಬ ಮಾತು ಬಿಜೆಪಿ ವಲಯದಲ್ಲಿ ಸಾಮಾನ್ಯವಾಗಿದೆ. ಆದರೆ ಈಶ್ವರಪ್ಪರ ಮಗ ಕಾಂತೇಶ್‌ಗೂ ಬಿಜೆಪಿ ಮಣೆಹಾಕಲಿಲ್ಲ. ಅಳೆದು-ತೂಗಿ ಕೊನೆ ಕ್ಷಣದಲ್ಲಿ ಕಾರ್ಪೊರೇಟರ್-ಕಟ್ಟರ್ ಸಂಘಿ-ಚನ್ನಿ ಯಾನೆ ಚನ್ನಬಸಪ್ಪಗೆ ಕೇಸರಿ ಪರಿವಾರ ಅಖಾಡಕ್ಕಿಳಿಸಿದೆ.

ಯಡಿಯೂರಪ್ಪರ ಪರಮಾಪ್ತ ಎಮ್ಮೆಲ್ಸಿ ಆಯನೂರು ಮಂಜುನಾಥ್ ಆರಂಭದಲ್ಲಿ ಈಶ್ವರಪ್ಪರಿಗೆ ಮತ್ತೆ ಟಿಕೆಟ್ ಕೊಡಕೂಡದೆಂದು ಬಂಡೆದ್ದಿದ್ದರು. ಈಶ್ವರಪ್ಪ ವಿರುದ್ಧ ಬಹಿರಂಗ ಫ್ಲೆಕ್ಸ್ ಸಮರವನ್ನೇ ಸಾರಿದ್ದರು. ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿದ್ದ ಆಯನೂರು, ಅದು ದಕ್ಕದಿದ್ದಾಗ, ಕಾಂಗ್ರೆಸ್ ಕೂಡ ಕೈಹಿಡಿಯದಿದ್ದಾಗ, ಜೆಡಿಎಸ್ ಸೇರಿಕೊಂಡು ಆ ಪಾರ್ಟಿಯ ಹುರಿಯಾಳಾಗಿದ್ದಾರೆ. ಮಾಜಿ ಶಾಸಕ ಚಂದ್ರಶೇಖರಪ್ಪರ ಮಗ ಹಾಲಿ ಕಾರ್ಪೊರೇಟರ್ ಯೋಗೇಶ್‌ರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಈ ಪ್ರಮುಖ ಮೂರೂ ಪಕ್ಷದ ಕ್ಯಾಂಡಿಡೇಟ್‌ಗಳು ಕ್ಷೇತ್ರದ ಪ್ರಥಮ ಬಹುಸಂಖ್ಯಾತ (ಅಂದಾಜು 70 ಸಾವಿರ ಮತದಾರರು) ಲಿಂಗಾಯತ ಕೋಮಿಗೆ ಸೇರಿದವರು. ಲಿಂಗಾಯತರ ಮತ ಮೂರು ಪಾಲಾಗಲಿದ್ದು, ಮೇಲ್ನೋಟಕ್ಕೆ ತ್ರಿಕೋನ ಕಾಳಗದಂತೆ ಕಾಣಿಸುತ್ತದೆ. ಹಿಂದುತ್ವ ಕಾಪಾಡುತ್ತದೆಂಬ ನಿರೀಕ್ಷೆ ಬಿಜೆಪಿ ನಿಷ್ಠಾವಂತರದು. ಆದರೆ ಒಮ್ಮೆ ಪ್ರಬಲ ಲಿಂಗಾಯತ ಸಮುದಾಯದ ಕೈಗೆ ಕ್ಷೇತ್ರ ಜಾರಿದರೆ ಮುಂದೆ ತನ್ನ ಕುಲ ಕಂಠೀರವ ಕಾಂತೇಶ್‌ಗೆ ಬಿಜೆಪಿಯಲ್ಲಿ ಅವಕಾಶ ಸಿಗುವುದು ಕಷ್ಟವೆಂಬ ದೂರಾಲೋಚನೆಯಿಂದ ಕುರುಬ ಜಾತಿಯ ಈಶ್ವರಪ್ಪ ತಟಸ್ಥರಾಗಿದ್ದಾರೆ; ಯಡಿಯೂರಪ್ಪರಿಗೆ ಆಯನೂರ್ ಅಂದರೆ ಸೆಳೆತ. ಹೀಗಾಗಿ ಬಿಜೆಪಿಗೆ ಒಳೇಟು ಬೀಳವುದು ಖಾತ್ರಿ ಎಂಬ ಮಾತು ಕ್ಷೇತ್ರದಲ್ಲಿ ಕೇಳಿಬರುತ್ತಿದೆ.

ಜೆಡಿಎಸ್ ಹುರಿಯಾಳು ಆಯನೂರುಗೆ ಸ್ವಪಕ್ಷದ ಬಲಕ್ಕಿಂತ ಯಡಿಯೂರಪ್ಪರ ಕೃಪಾಶಿರ್ವಾದದ ಮೇಲೆ ನಂಬಿಕೆ ಜಾಸ್ತಿ. ಇಲ್ಲಿಯ ಲಿಂಗಾಯತರು ಯಡಿಯೂರಪ್ಪ ಕೆಜೆಪಿ ಕಟ್ಟಿದಾಗ ಬೆನ್ನಿಗೆ ನಿಂತಿದ್ದರು. ಕಾಂಗ್ರೆಸ್ ಟಿಕೆಟ್ ಸಿಗದ ಸಿಟ್ಟಲ್ಲಿ ಜೆಡಿಎಸ್ ಸೇರಿರುವ ಮಾಜಿ ಶಾಸಕ-ಬ್ರಾಹ್ಮಣ ಸಮುದಾಯದ ಪ್ರಸನ್ನಕುಮಾರ್ ಮತ್ತು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಶ್ರೀಕಾಂತ್‌ಗೆ ಮುಸ್ಲಿಮ್ ಒಡನಾಟವಿದೆ. ಹಾಗಾಗಿ ಆಯನೂರ್ ಸ್ವಜಾತಿ ಲಿಂಗಾಯತ ಮತಬ್ಯಾಂಕ್‌ನ ದೊಡ್ಡ ಪಾಲಿನ ಜತೆ ಮುಸಲ್ಮಾನರ ಓಟು ಗಿಟ್ಟಿಸುವ ಲೆಕ್ಕಾಚಾರದಲ್ಲಿ ಬಲಗೊಳ್ಳುತ್ತಿದ್ದಾರೆ. ಕಾಂಗ್ರೆಸ್ ಕ್ಯಾಂಡಿಡೇಟ್ ಬಗ್ಗೆ ಪಕ್ಷದಲ್ಲಿ ಸಮಾಧಾನವಿಲ್ಲ. ಈಶ್ವರಪ್ಪನವರ ಮನೆಯಿರುವ ವಾರ್ಡ್‌ನಿಂದ ಸತತ ಮೂರು ಸಲ ಕಾರ್ಪೊರೇಟರ್ ಆಗಿರುವ ಯೋಗೇಶ್ ಅಸೆಂಬ್ಲಿ, ಪಾರ್ಲಿಮೆಂಟ್ ಇಲೆಕ್ಷನ್‌ನಲ್ಲಿ ಬಿಜೆಪಿ ಪರ ಕೆಲಸ ಮಾಡುತ್ತಾರೆ; ಈಶ್ವರಪ್ಪ-ಬಿಜೆಪಿ ಜತೆ ಕೊಡು-ಕೊಳ್ಳು ಸಂಬಂಧವಿರುವ ಯೋಗೇಶ್ ಪಕ್ಷಕ್ಕೆಂದೂ ನಿಷ್ಠನಲ್ಲ ಎಂಬ ಪುಕಾರು ಕಾಂಗ್ರೆಸ್‌ನಲ್ಲಿ ಜೋರಾಗಿದೆ.

ಸಾದರ ಲಿಂಗಾಯತರ ಮತದೊಂದಿಗೆ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತ ಯೋಗೇಶ್ ಪಡೆಯುತ್ತಾರೆ. ಯಾರೂ ಗಂಭೀರವಾಗಿ ಪರಿಗಣಿಸದ ಸಮಾರು 50-60 ಸಾವಿರ ದಲಿತ ಮತಗಳಿವೆ. ಈ ನಿರ್ಣಾಯಕ ಮತಗಳು ಎತ್ತ ಹೋಗಲಿದೆ ಎಂಬುದರ ಚುನಾವಣಾ ಹವಾಮಾನ ತಜ್ಞರ ಲೆಕ್ಕಕ್ಕೂ ಸಿಗುತ್ತಿಲ್ಲ. ಫೋಟೋ ಫಿನಿಶ್ ಫಲಿತಾಂಶ ಮೂವರಲ್ಲಿ ಯಾರ ಪರವಾಗಿಯಾದರೂ ಬರಬಹುದೆಂದು ಅನ್ನಿಸಿದರೂ ಹಿಂದುತ್ವದ ಅದೃಶ್ಯ ಮತದಾರರಿಂದಾಗಿ ಬಿಜೆಪಿಗೇ ಛಾನ್ಸ್ ಹೆಚ್ಚೆಂಬ ಚರ್ಚೆ ಶಿವಮೊಗ್ಗೆಯ ರಾಜಕೀಯ ಕಟ್ಟೆಯಲ್ಲಿ ಹೋರಾಗಿದೆ.

ಶಿವಮೊಗ್ಗ ಗ್ರಾಮಾಂತರ: ಶಾರದಾ ಗೆಲುವು ಗ್ಯಾರಂಟಿ

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಡಾ.ಶ್ರೀನಿವಾಸ್ ಕರಿಯಣ್ಣ, ಬಿಜೆಪಿಯ ಹಾಲಿ ಶಾಸಕ ಅಶೋಕ್ ನಾಯ್ಕ್ ಮತ್ತು ಜೆಡಿಎಸ್‌ನ ಮಾಜಿ ಶಾಸಕಿ ಶಾರದಾ ಪೂರ್ಯಾ ನಾಯ್ಕ್ ನಡುವೆ ತ್ರಿಕೋನ ಕಾಳಗ ನಡೆಯುತ್ತಿರುವಂತೆ ಕಾಣಿಸುತ್ತದೆ. ಆದರೆ ಕಾಂಗ್ರೆಸ್ ಕ್ಯಾಂಡಿಡೇಟ್ ದುರ್ಬವಾಗಿರುವುದರಿಂದ ಜನಾನುರಾಗಿ ಶಾರದಾ ನಾಯ್ಕ್ ಮತ್ತು ಧನಬಲದ ಅಶೋಕ್ ನಾಯ್ಕ್ ನಡುವೆ ಪ್ರಬಲ ಪೈಪೋಟಿಯಿದೆ. ಕಳೆದ ಬಾರಿಯೇ ಗೆಲ್ಲುತ್ತಾರೆಂದು ಬಹಳ ನಿರೀಕ್ಷೆ ಮೂಡಿಸಿದ್ದ ಶಾರದಾ ನಾಯ್ಕ್‌ಗೆ ಕೊನೆಗಳಿಗೆಯಲ್ಲಿ ಸಿದ್ದರಾಮಯ್ಯರಿಂದಾಗಿ ಮುಸ್ಲಿಮ್ ಮತಗಳು ಬರದೆ ಸಣ್ಣ ಅಂತರದಲ್ಲಿ ಹಿಮ್ಮೆಟ್ಟಿದ್ದರು. ಸೋತರೂ ಶಾರದಾ ಜನ ಸಂಪರ್ಕದಿಂದ ವಿಮುಖರಾಗಲಿಲ್ಲ; ಗೆದ್ದ ಬಿಜೆಪಿಯ ಅಶೋಕ್ ನಾಯ್ಕ್ ಜನರ ಕೈಗೆಟುಕದೆ ಸಂಪನ್ಮೂಲ ಸಂಗ್ರಹಣೆಯ ರಾಜಕಾರಣದಲ್ಲಿ ನಿರತರಾಗಿದ್ದರೆಂಬ ಸಿಟ್ಟು ಕ್ಷೇತ್ರದಲ್ಲಿದೆ.

ಪಕ್ಕದ ಶಿವಮೊಗ್ಗ ನಗರ ಕ್ಷೇತ್ರಕ್ಕೆ ವಿರುದ್ಧವಾಗಿ ಈ ಎಸ್‌ಸಿ ಮೀಸಲು ಕ್ಷೇತ್ರದಲ್ಲಿ ಹಿಂದುತ್ವದ ಹವಾ ಇಲ್ಲ. ಯಡಿಯೂರಪ್ಪರ ಮುಖ ನೋಡಿ ಬಿಜೆಪಿಗೆ ಮತ ಹಾಕುತ್ತಿದ್ದ 55 ಸಾವಿರದಷ್ಟಿರುವ ಲಿಂಗಾಯತರು ಈ ಬಾರಿ ಗೊಂದಲದಲ್ಲಿದ್ದಾರೆ. ಬಂಜಾರ, ಬೋವಿ ಸಮಾಜದವರೇ ಅಧಿಕವಾಗಿರುವ ಕ್ಷೇತ್ರದಲ್ಲಿ ಒಳ ಮೀಸಲಾತಿ ಅನ್ಯಾಯದ ಕೂಗೆದ್ದಿರುವುದು ಬಿಜೆಪಿಗೆ ಹಾನಿ ಮಾಡುತ್ತಿದೆ. ಬಂಜಾರ ಸಮುದಾಯದ ಮತ ಸಾರಸಗಟಾಗಿ ಶಾರದ ನಾಯ್ಕ್‌ಗೆ ಸಿಗುವ ಸಾಧ್ಯತೆಯಿದೆ. ಮುಸ್ಲಿಮರು ಕಾಂಗ್ರೆಸ್‌ಗೆ ಮತ ಹಾಕಿದರೆ ಬಿಜೆಪಿ ಗೆಲ್ಲುತ್ತದೆಂದು ಈ ಬಾರಿ ಮುಸ್ಲಿಂ ಸಮುದಾಯ ಶಾರದಾರನ್ನು ಬೆಂಬಲಿಸುತ್ತಿದ್ದಾರೆ. ಕಳೆದ ಬಾರಿ ಸೋತ ಸಿಂಪತಿಯೂ ಇದೆ. ಬಿಜೆಪಿ ಶಾಶಕ ಅಶೋಕ್‌ಗಿಂತ ಬೆಟರ್ ಕೆಲಸಗಾರ್ತಿ ಎಂಬ ಮೆಚ್ಚುಗೆಯಿದೆ. ಜಿಲ್ಲೆಯಲ್ಲಿ ಸಾಗರ ಬಿಟ್ಟರೆ ಬಿಜೆಪಿ ಹುರಿಯಾಳು ಹಣದ ಹೊಳೆ ಹರಿಸುವುದು ಶಿವಮೊಗ್ಗ ಗ್ರಾಮಾಂತರದಲ್ಲಿಯೇ ಎಂಬ ಮಾತು ಕೇಳಿಬರುತ್ತಿದೆ. ಹಲವು ಕಾರಣದಿಂದ ಪಿಚ್ ಶಾರದಾ ನಾಯ್ಕ್‌ಗೆ ಪೂರಕವಾಗುತ್ತಿದ್ದರೆ, ಬಿಜೆಪಿ ಅಶೋಕ್ ನಾಯ್ಕ್ ಮತ್ತು ಕಾಂಗ್ರೆಸ್‌ನ ಡಾ .ಶ್ರೀನಿವಾಸ್ ಹೈರಾಣಾಗುತ್ತಿದ್ದಾರೆ; ಧನ ಬಲ ವರ್ಸಸ್ ಜನ ಬಲ ಹೋರಾಟದಲ್ಲಿ ಜೆಡಿಎಸ್‌ನ ಶಾರದಾ ನಾಯ್ಕ್ ಗೆಲುವು ಖಚಿತ ಎಂಬ ಅಭಿಪ್ರಾಯ ಸಾಮಾನ್ಯವಾಗಿದೆ.

ಭದ್ರಾವತಿ: ಸಂಗಮೇಶ್-ಶಾರದಾರಲ್ಲಿ ಗೆಲ್ಲೊರ‍್ಯಾರು?

ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿ ಒಮ್ಮೆಯೂ ಗೆಲ್ಲದ ಕ್ಷೇತ್ರ ಭದ್ರಾವತಿ. ಈ ಬಾರಿಯೂ ಕೇಸರಿ ಪಕ್ಷಕ್ಕೆ ಅವಕಾಶವಿಲ್ಲ. ಬಿಜೆಪಿ ಅಭ್ಯಥಿ ಮಂಗೋಟೆ ರುದ್ರೇಶ್ ಆಟಕ್ಕುಂಟು-ಲೆಕ್ಕಕ್ಕಿಲ್ಲ. ಕದನ ಕುತೂಹಲವೇನಿದ್ದರೂ ಕಾಂಗ್ರೆಸ್ ಶಾಸಕ ಸಂಗಮೇಶ್ವರ ಮತ್ತು ಜೆಡಿಎಸ್‌ನ ಶಾರದಾ ಅಪ್ಪಾಜಿ ಗೌಡ ನಡುವೆ. ಭದ್ರಾವತಿ ಕ್ಷೇತ್ರ ಹೆಚ್ಚುಕಡಿಮೆ ಸಮಬಲದಲ್ಲಿರುವ ಲಿಂಗಾಯತ-ಒಕ್ಕಲಿಗ ಜಿದ್ದಾಜಿದ್ದಿಯ ರಣಕಣ. ಕೋವಿಡ್‌ನಿಂದ ನಿಧನರಾಗಿರುವ ಜೆಡಿಎಸ್‌ನ ಮಾಜಿ ಶಾಸಕ ಅಪ್ಪಾಜಿ ಗೌಡ ಮತ್ತು ಕಾಂಗ್ರೆಸ್‌ನ ಸಂಗಮೇಶ್ವರ್ ಹಲವು ಚುನಾವಣೆಗಳಲ್ಲಿ ನೇರ-ನಿಕಟವಾಗಿ ಸೆಣಸಾಡಿದ್ದಾರೆ. ಈಗ ಅಪ್ಪಾಜಿ ಗೌಡರ ಪತ್ನಿ ಶಾರದಾ ಗೌಡ ಜೆಡಿಎಸ್ ಹುರಿಯಾಳಾಗಿ ಸಂಗಮೇಶ್ವರ್‌ಗೆ ಮುಖಾಮುಖಿಯಾಗಿದ್ದಾರೆ. ಭದ್ರಾವತಿಯಲ್ಲಿ ಯಾವಾಗಲೂ ಧರ್ಮ-ಪಕ್ಷ ಗೌಣ; ಜಾತಿ ಪ್ರತಿಷ್ಠೆಯ ವ್ಯಕ್ತಿ ವರ್ಚಸ್ಸಿನ ಕಾಳಗವೇ ಪ್ರಧಾನ.

ಕ್ಷೇತ್ರದಲ್ಲಿ ಸುಮಾರು 50 ಸಾವಿರವಿರುವ ಮುಸಲ್ಮಾನ ಮತಗಳೇ ನಿರ್ಣಾಯಕ. ಕಾಂಗ್ರೆಸ್ ಕ್ಯಾಂಡಿಡೇಟ್‌ಗೆ ಆಂಟಿ ಇನಕಂಬೆನ್ಸ್ ಕಾಡುತ್ತಿದೆ. ಆರೋಗ್ಯವೂ ಹದಗೆಟ್ಟಿರುವುದರಿಂದ ಕದನ ಕಣದಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ; ಸಂಗಮೇಶ್ವರ್ ಕುಟುಂಬದವರೇ ಚುನಾವಣೆ ನಡೆಸುತ್ತಿದ್ದಾರೆ. ಶಾರದಾ ಗೌಡರಿಗೆ ಸದಾ ಜನರ ನಡವೆ ಇರುತ್ತಿದ್ದ ಪತಿಯ ಅಗಲುವಿಕೆಯ ಅನುಕಂಪವಿದೆ. ಗಂಡ ಮೂರು ಬಾರಿ ಶಾಸಕನಾಗಿದ್ದಾಗ ರಾಜಕಾರಣದಲ್ಲಿ ಪಳಗಿರುವ ಶಾರದಾ ಗೌಡ, ಮಗನನ್ನು ಜತೆಗಿಟ್ಟುಕೊಂಡು ರಣ ತಂತ್ರ ಹೆಣೆದಿದ್ದಾರೆ. ಅಪ್ಪಾಜಿ ಗೌಡರ ಅಭಿಮಾನಿಗಳ ದೊಡ್ಡ ದಂಡು ಕ್ಷೇತ್ರದಲ್ಲಿದೆ. ಕತ್ತು-ಕತ್ತಿನ ಹೋರಾಟ ಏರ್ಪಟ್ಟಿದೆ; ಒಕ್ಕಲಿಗ ಮತ್ತು ಲಿಂಗಾಯತರಷ್ಟೆ ಇರುವ ಮುಸ್ಲಿಮರ ಮತಗಳನ್ನು ಯಾರು ಹೆಚ್ಚು ಸೆಳೆಯುತ್ತಾರೋ ಅವರ ಕೊರಳಿಗೆ ಜಯದ ಮಾಲೆ ಬೀಳಲಿದೆ. ಕ್ಷೇತ್ರ ಹದಗೊಂಡಿರುವ ಪರಿ ಶಾರದಾ ಗೌಡ ಸಣ್ಣ ಅಂತದಲ್ಲಿ ದಡ ಸೇರುವ ಸಾಧ್ಯತೆಯ ಸಂಕೇತಗಳನ್ನು ಬಿತ್ತರಿಸುತ್ತಿದೆ ಎನ್ನಲಾಗಿದೆ.

ತೀರ್ಥಹಳ್ಳಿ: ಸೆಕ್ಯುಲರ್ ಕಿಮ್ಮನೆಗೆ ಛಾನ್ಸ್!

ತೀರ್ಥಹಳ್ಳಿಯಲ್ಲಿ ಸಾಂಪ್ರದಾಯಿಕ ಪ್ರತಿಸ್ಪರ್ಧಿಗಳಾದ ಹಾಲಿ ಮಂತ್ರಿ ಆರಗ ಜ್ಞಾನೇಂದ್ರ ಮತ್ತು ಮಾಜಿ ಸಚಿವ ಕಾಂಗ್ರಸ್‌ನ ಕಿಮ್ಮನೆ ರತ್ನಾಕರ್ ಮಧ್ಯೆ ರಣರೋಚಕ ಸೆಣಸಾಟ ಆಗುತ್ತಿದೆ. ಒಕ್ಕಲಿಗ ಸಮುದಾಯದ ಇಬ್ಬರೂ ಇದು ತಮ್ಮ ಕೊನೆಯ ಚುನಾವಣೆಯೆಂದು ಭಾವನಾತ್ಮಕ ಆಟ ಆಡುತ್ತಿದ್ದಾರೆ. ಸೆಕ್ಯುಲರ್ ಸ್ವಭಾವ ಮತ್ತು ಜನಪರ ಕೆಲಸಗಾರಿಕೆಯಿಂದ ಕ್ಷೇತ್ರದಲ್ಲಿ ಮನುಷ್ಯ ಸಂಬಂಧ ಕಟ್ಟಿಕೊಂಡಿರುವ ಕಿಮ್ಮನೆ ರತ್ನಾಕರ್ ಕಳೆದ ಬಾರಿ ಸೋಲಲು ಕಾರಣಗಳೇ ಇರಲಿಲ್ಲ. ಬಿಜೆಪಿ ಕ್ಷೇತ್ರದಲ್ಲಿ ದ್ವಿತೀಯ ಬಹು ಸಂಖ್ಯಾತ (ಸುಮಾರು 40 ಸಾವಿರ ಮತ) ಈಡಿಗ ಸಮುದಾಯದ ನಂದಿತಾ ಎಂಬ ಹೈಸ್ಕೂಲು ಹುಡುಗಿ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಮತ ಧ್ರುವೀಕರಣಕ್ಕೆ ಉಪಯೋಗಿಸಿಕೊಂಡು ಗೆಲುವು ಸಾಧಿಸಿತ್ತು. ಅಂದು ಮಂತ್ರಿಯಾಗಿದ್ದ ಕಿಮ್ಮನೆ ಕೊಲೆಗಡುಕ ಮುಸಲ್ಮಾನರ ಬೆನ್ನಿಗಿದ್ದಾರೆಂದು ಸುಳ್ಳು ಸೃಷ್ಟಿಸಿ ಅಪಪ್ರಚಾರ ಮಾಡಲಾಗಿತ್ತು. ಆನಂತರ ಕಿಮ್ಮನೆ ದೇವಸ್ಥಾನವೊಂದರಲ್ಲಿ- ನಂದಿತಾ ಪ್ರಕರಣದಲ್ಲಿ ತನ್ನ ಪಾತ್ರವೇನಿಲ್ಲ; ನಂದಿತಾ ಕುಟುಂಬಕ್ಕೆ ನಾನು ಅನ್ಯಾಯ ಮಾಡಿಲ್ಲ. ನನ್ನ ಮೇಲೆ ಹುಸಿ ಆರೋಪ ಹೊರಿಸುತ್ತಿರುವವರಿಗೆ ಶಿಕ್ಷೆ ಕೊಡುವಂತೆ- ಆಣೆಪ್ರಮಾಣ ಮಾಡಿದ್ದರು. ಇದು ಹಿಂದುತ್ವದ ಬುಡವನ್ನೇ ಅಲುಗಾಡಿಸಿಬಿಟ್ಟಿತು.

ತನಿಖೆಯಲ್ಲೂ ನಂದಿತಾಳದು ವಿಷ ಕುಡಿದು ಆದ ಆತ್ಮಹತ್ಯೆಯಂತಲೇ ಸಾಬೀತಾಯಿತು. ಕಿಮ್ಮನೆ ತಮ್ಮ ಎದುರಾಳಿ ಆರಗರಿಗೆ ನಂದಿತಾ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಸವಾಲು ಹಾಕುತ್ತಿದ್ದಾರೆ. ಅಖಾಡದಲ್ಲಿ ಆರಗ ಜ್ಞಾನೇಂದ್ರಗೆ ನಂದಿತಾ ಪ್ರಕರಣ ಉಲ್ಟಾ ಹೊಡೆದಿದೆ. ನಂದಿತಾ ಕುಟುಂಬದ ಬಗ್ಗೆ ಕಾಳಜಿ ಇದ್ದಿದ್ದರೆ ಅಥವಾ ಮುಸ್ಲಿಮರಿಂದಲೆ ಆಕೆಯ ಸಾವಾಗಿದೆ ಎಂಬುದಾಗಿದ್ದರೆ ಗೃಹ ಮಂತ್ರಿಯಾಗಿರುವ ಆರಗ ಕೇಸ್ ರಿ-ಓಪನ್ ಮಾಡಿಸಬಹುದಿತ್ತಲ್ಲ; ಈಗೇಕೆ ನಂದಿತಾಳ ಕುಟುಂಬವನ್ನು ಆರಗ ಮತ್ತು ಸಂಘ ಪರಿವಾರ ಕೈಬಿಟ್ಟಿದೆ? ಎಂಬ ಸಹಜ ಅನುಮಾನ-ಅಸಮಾಧಾನ ಗುಪ್ತಗಾಮಿಯಾಗಿ ರಣಾಂಗಣದಲ್ಲಿ ಹರದಾಡುತ್ತಿದೆ. ಜತೆಗೆ ಹಿಂದುತ್ವ ಆರ್ಭಟವೂ ತೀರ್ಥಹಳ್ಳಿಯಲ್ಲಿ ಗಣನೀಯವಾಗಿ ಕಮ್ಮಿಯಾಗಿದೆ. ಮಂತ್ರಿಯಾಗಿದ್ದರೂ ಕ್ಷೇತ್ರದ ಸಮಸ್ಯೆ-ಸಂಕಟ ಪರಿಹಾರಕ್ಕೆ ಆರಗ ಮುಂದಗಲಿಲ್ಲವೆಂಬ ಬೇಸರ ಕ್ಷೇತ್ರದಲ್ಲಿದೆ. ಸಂಘಿ ಸಂಘಟನೆ ಬಲವಾಗಿದ್ದರೂ ಆರಗರಿಗೆ ಒಳೇಟಿನ ಆತಂಕ ಕಾಡುತ್ತಿದೆ. ಕಟ್ಟರ್ ಕೇಸರಿ ಪಡೆ ಆರಗ ಕಾಸು ಬಿಚ್ಚುತ್ತಿಲ್ಲ ಎಂಬ ಆಕ್ರೋಶದಲ್ಲಿದೆ; 72 ವಯಸ್ಸು ದಾಟಿರುವ ಆರಗರಿಗೆ ಮತ್ತೆ ಅವಕಾಶ ಕೊಟ್ಟಿರುವುದು ಟಿಕೆಟ್ ಆಕಾಂಕ್ಷಿಗಳ ಅಸಮಧಾನಕ್ಕೆ ಕಾರಣವಾಗಿದೆ ಎಂಬ ಮಾತು ಕೇಳಿಬರುತ್ತಿದೆ.

ಕ್ಷೇತ್ರ ಕಳಕಳಿಯ ಕಿಮ್ಮನೆಯನ್ನು ಕಳೆದ ಬಾರಿ ಹಿಂದುತ್ವದ ಹುಸಿ ಹುಯಿಲು ನಂಬಿ ಸೋಲಿಸಿದ ಪಶ್ಚಾತಾಪ ಜನರಲ್ಲಿದೆ. ಮೊನ್ನೆ ರಾಹುಲ್ ಗಾಂಧಿ ತೀರ್ಥಹಳ್ಳಿಗೆ ಬಂದಾಗ ನಿರೀಕ್ಷೆಗೂ ಮೀರಿ ಜನರು ಸ್ವಯಂಪ್ರೇರಿತರಾಗಿ ಬಂದಿದ್ದು ಕಿಮ್ಮನೆ ಸೇಪ್‌ಝೋನ್ ತಲುಪಿರುವುದನ್ನು ಬಿಂಬಿಸುತ್ತದೆ ಎಂದು ಚುನಾವಣಾ “ಹವಾಮಾನ ತಜ್ಞ”ರು ತರ್ಕಿಸುತ್ತಾರೆ. ಶಿವಮೊಗ್ಗ ತಾಲೂಕಿನ ನಿಡಿಗೆ ಮತ್ತು ಹೊಸನಗರ ತಾಲೂಕಿನ ಹುಮ್ಜಾ, ನಗರ ಹೋಬಳಿಗಳಲ್ಲಿ ಕಾಂಗ್ರೆಸ್ ಪರ ಒಲವಿದೆ. ಎಲ್ಲಕ್ಕಿಂತ ಹೆಚ್ಚಾಗಿ ತೀರ್ಥಹಳ್ಳಿ ಅಖಾಡದಲ್ಲಿ ಕಿಂಗ್ ಮೇಕರ್ ಆಗುತ್ತಿದ್ದ ಜೆಡಿಎಸ್ ಈ ಬಾರಿ ಸೊರಗಿದೆ. ಕಳೆದ ಸಲ 40,127 ಮತ ಪಡೆದಿದ್ದ ಜೆಡಿಎಸ್‌ನ ಮಂಜುನಾಥ ಗೌಡ ಕಾಂಗ್ರೆಸ್‌ನಲ್ಲಿದ್ದಾರೆ. ಕೈ ಟಿಕೆಟ್‌ನ ಪ್ರಬಲ ಆಕಾಂಕ್ಷಿಯಾಗಿದ್ದ ಮಂಜುನಾಥ ಗೌಡ ಡಿಕೆಶಿ ಮಧ್ಯಸ್ಥಿಕೆಯಿಂದ ಖುಷಿಗೊಂಡು ಕಿಮ್ಮನೆ ಪರ ಕೆಲಸ ಮಾಡುತ್ತಿದ್ದಾರೆ. ಎಮ್ಮೆಲ್ಸಿ ಮಾಡುವ ಮತ್ತು ಮುಂದಿನ ಬಾರಿ ಕಿಮ್ಮನೆ ಕ್ಷೇತ್ರ ಬಿಟ್ಟುಕೊಡುವ ಒಪ್ಪಂದ ಮಂಜುನಾಥ ಗೌಡರನ್ನು ಕ್ಷೇತ್ರದಲ್ಲಿ ಸಕ್ರಿಯಗೊಳಿಸಿದೆ ಎಂದು ಸುದ್ದಿಹಬ್ಬಿದೆ. ಮಂಜುನಾಥ ಗೌಡರಿಗೆ ತನ್ನಿಂದಲೇ ಕಿಮ್ಮನೆ ಗೆದ್ದರೆಂಬ ಕ್ರೆಡಿಟ್ ಬೇಕಾಗಿದೆ. 45 ಸಾವಿರ ಮತದಾರರು ಇದ್ದಾರೆ ಎನ್ನಲಾಗುತ್ತಿರುವ ಒಕ್ಕಲಿಗರಲ್ಲಿ ಕಿಮ್ಮನೆ ಪರವೇ ಜಾಸ್ತಿ ಒಲವಿದೆ. ಪ್ರಬಲ ಆರೆಸ್ಸೆಸ್ ನೆಟ್‌ವರ್ಕ್ ಮತ್ತು ಕಾಂಗ್ರೆಸ್-ಕಿಮ್ಮನೆ ಜಂಟಿ ಬಲದ ಮಧ್ಯೆ ಜಿದ್ದಾಜಿದ್ದಿ ಜೋರಾಗಿದೆ. ಎದುರಾಳಿಗಳ ಸದ್ಯದ ಬಲಾಬಲ ಮತ್ತು ಕ್ಷೇತ್ರದ ಕ್ಯಾಸ್ಟ್ ಕೆಮಿಸ್ಟ್ರಿ ಸೂತ್ರಗಳು ಕಾಂಗ್ರೆಸ್‌ನ ಕಿಮ್ಮನೆ ಕೈ ಮೇಲಾಗುತ್ತಿದೆ ಎನ್ನುತ್ತಿವೆ.

ಶಿಕಾರಿಪುರ: ಯಡಿಯೂರಪ್ಪ ಪ್ರತಿಷ್ಠೆ ಪಣಕ್ಕೆ!

ಶಿಕಾರಿಪುರ ಯಡಿಯೂರಪ್ಪರ ಪ್ರತಿಷ್ಠೆಯಿಂದಾಗಿ ರಾಜ್ಯದ ಗಮನ ಸೆಳೆದಿದೆ. ಬಿಜೆಪಿಯೊಳಗಿನ ಹಿತಶತ್ರು ಪಡೆಯ ಕ್ಯಾಪ್ಟನ್ ಬಿ.ಎಲ್.ಸಂತೋಷ್‌ರ ವಿಪ್ರ ಲಾಬಿಯ ಅಡೆತಡೆಯ ನಡುವೆಯೂ ಪಟ್ಟುಹಿಡಿದು ಕುಲ ಕಂಠೀರವ ವಿಜಯೇಂದ್ರಗೆ ಶಿಕಾರಿಪುರದ ಟಿಕೆಟ್ ಕೊಡಿಸಿದ ಯಡಿಯೂರಪ್ಪರಿಗೆ ಈಗ ಚುನಾವಣೆ ಗಲ್ಲೇಬೇಕಾದ ಕಠಿಣ ಸವಾಲು ಎದುರಾಗಿದೆ. ಯಡಿಯೂರಪ್ಪರನ್ನು ಎಂಟು ಬಾರಿ ಶಾಸಕನಾಗಿ ಮಾಡಿದ್ದ ಶಿಕಾರಿಪುರದ ಜನರು ಅಷ್ಟೆ ನಿರಾಯಾಸವಾಗಿ ಯಡಿಯೂರಪ್ಪರ ಪುತ್ರನನ್ನು ಗೆಲ್ಲಿಸುವ ಮನಸ್ಥಿತಿಯಲ್ಲಿಲ್ಲ. ಯಡಿಯೂರಪ್ಪ ಫ್ಯಾಮಿಲಿ ಮೇಲೆ ಕ್ಷೇತ್ರದಲ್ಲಿ ಅಸಮಾಧಾನ ಮಡುಗಟ್ಟಿದೆ. ಯಡಿಯೂರಪ್ಪರ ಭೇಟಿಯಾಗಬೇಕೆಂದರೆ ಅವರ ಪಿ.ಎ ಗುರುಮೂರ್ತಿ ಎಂಬ ಸಂಘಿ ವಿಪ್ರೋತ್ತಮನ ಮುಂದೆ ನಡುಬಗ್ಗಿಸಿ ನಿಲ್ಲಬೇಕಾಗಿದ್ದ ಅವಮಾನಕರ ಪ್ರಸಂಗಗಳನ್ನು ಜನ ಮರೆತಿಲ್ಲ. ಯಡಿಯೂರಪ್ಪ ಹಿರಿಯರೆಂಬ ಕಾರಣಕ್ಕೆ ಸಹಿಸಿಕೊಂಡಿದ್ದ ಜನರಿಗೆ ಚುನಾವಣೆ ಸಂದರ್ಭದಲ್ಲಿ ದಿಢೀರ್ ಎಂದು ಪ್ರತ್ಯಕ್ಷನಾಗಿರುವ “ಪೋರ” ವಿಜಯೇಂದ್ರ ಸಹ್ಯವಾಗುತ್ತಿಲ್ಲ ಎನ್ನಲಾಗುತ್ತಿದೆ.

ತಂದೆಯ ನೆರಳಲ್ಲಿ ರಾಜ್ಯಮಟ್ಟದ ನಾಯಕನ ಧರತಿಯಲ್ಲಿ ಓಡಾಡಿಕೊಂಡಿದ್ದ ವಿಜಯೇಂದ್ರ ಶಿಕಾರಿಪರದ ಕಷ್ಟ-ಸುಖಕ್ಕೆಂದೂ ಸ್ಪಂದಿಸಿದವರಲ್ಲ; ಸ್ವಜಾತಿ ಲಿಂಗಾಯತರಿಗೂ ವಿಜಯೇಂದ್ರನೆಂದರೆ ಅಷ್ಟಕ್ಕಷ್ಟೆ. ಸುಮಾರು 58 ಸಾವಿರದಷ್ಟಿರುವ ವಿವಿಧ ಒಳಪಂಗಡಗಳ ಲಿಂಗಾಯತರಲ್ಲಿ ಅರ್ಧದಷ್ಟಿರುವ ಸಾದರ ಲಿಂಗಾಯತರು ಗಾಣಿಗ ಸಬ್‌ಸೆಟ್‌ನ ಯಡಿಯೂರಪ್ಪ ಕುಟುಂಬ ಪರಿವಾರವನ್ನು ತಮ್ಮವರೆಂದು ಒಪ್ಪಿಕೊಂಡಿದ್ದೇ ಇಲ್ಲ. ಸಾದರ ಪ್ರಭಾವಿ ನಾಯಕರಾಗಿದ್ದ ಶಾಂತವೀರಪ್ಪ ಗೌಡರನ್ನು ಯಡಿಯೂರಪ್ಪ ಬಳಸಿ ಎಸೆದರೆಂಬ ಸಿಟ್ಟು ಆ ಸಮುದಾಯದಲ್ಲಿದೆ. ಪ್ರತಿ ಚುನಾವಣೆಯಲ್ಲಿಯೂ ಸಾದರು ಕೈಕೊಡುವ ಭೀತಿಯಲ್ಲಿರುತ್ತಿದ್ದ ಯಡಿಯೂರಪ್ಪರಿಗೆ ಈ ಸಲವೂ ಅದೇ ಆತಂಕ ಇನ್ನಷ್ಟು ಹೆಚ್ಚಾಗಿದೆ. ಯಡಿಯೂರಪ್ಪರಿಗೆ ರಾಜಕೀಯ ದೀಕ್ಷೆ ಕೊಟ್ಟಿದ್ದ ಶಾಂತವೀರಪ್ಪ ಗೌಡರು ತಿರಗಿಬಿದ್ದು ರಣ ಕಹಳೆ ಮೊಳಗಿಸಿದ್ದಾರೆ; ಚಿಕ್ಕಪ್ಪನ ಮಗ ನಾಗರಾಜ್ ಗೌಡರನ್ನು ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲಿಸಿ ಯದ್ಧದ ಸಾರಥ್ಯ ವಹಿಸಿದ್ದಾರೆ.

ಸಮರಾಂಗಣದಲ್ಲಿ ಎದುರಾಳಿ ನಾಗರಾಜ ಗೌಡ ಬಲಾಢ್ಯನಾಗುತ್ತಿರುವುದು ಅಪ್ಪ-ಮಗನ ಜಂಘಾಬಲವನ್ನೇ ಉಡುಗಿಸಿಬಿಟ್ಟಿದೆ. ನಾಗರಾಜ ಗೌಡ ಕಾಂಗ್ರೆಸ್ ಟಿಕೆಟ್‌ಗೆ ಪ್ರಯತ್ನಿಸಿದ್ದರು. ಆದರೆ ಸಿದ್ದರಾಮಯ್ಯ ಮತ್ತು ಯಡಿಯೂರಪ್ಪರ ಮ್ಯಾಚ್ ಫಿಕ್ಸಿಂಗ್‌ನಿಂದಾಗಿ ದುರ್ಬಲ ಅಭ್ಯರ್ಥಿ ಗೋಣಿ ಮಾಲತೇಶ್ ಎಂಬುವವರಿಗೆ ಕಾಂಗ್ರೆಸ್ ಟಿಕೆಟ್ ದಕ್ಕಿತೆಂಬ ಗುಲ್ಲೆದ್ದಿದೆ. ಬಂಡೆದ್ದು ಕಣಕ್ಕಿಳಿದಿರುವ ನಾಗರಾಜ್ ಗೌಡಗೆ ಗ್ರಾಮೀಣ ಭಾಗದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ; ಕಾಂಗ್ರೆಸ್‌ನಿಂದ ಅನ್ಯಾಯವಾಗಿದೆ ಎಂಬ ಅನುಕಂಪ ಜನರಲ್ಲಿದೆ. ಚುನಾವಣಾ ವೆಚ್ಚಕ್ಕೆಂದು ಜನರೇ ಹಣ ಒಟ್ಟುಗೂಡಿಸಿಕೊಡುತ್ತಿದ್ದಾರೆ; ಬಹುಶಃ ಕಾಂಗ್ರೆಸ್ ಕ್ಯಾಂಡಿಡೇಟಾಗಿದ್ದರೆ ನಾಗರಾಜ್ ಗೌಡಗೆ ಈ ಪರಿಯ ಜನ ಬೆಂಬಲ ಸಿಗುತ್ತಿರಲ್ಲವೇನೋ ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ.

ಬಿಜೆಪಿ ಸರಕಾರದ ಒಳ ಮೀಸಲಾತಿ ನೀತಿ ಯಡಿಯೂರಪ್ಪ-ವಿಜಯೇಂದ್ರಗೆ ತೊಡಕಾಗಿದೆ. ಕ್ಷೇತ್ರದಲ್ಲಿ 26 ಸಾವಿರ ಮತದಾರರಿದ್ದಾರೆ ಎನ್ನಲಾಗುತ್ತಿವ ಲಂಬಾಣಿಗಳು ತಿರುಗಿಬಿದ್ದಿದ್ದಾರೆ. ಬಿಜೆಪಿಗರಿಗೆ ತಾಂಡಾಗಳಿಗೆ ಪ್ರವೇಶ ನಿರಾಕರಿಸಲಾಗುತ್ತಿದೆ. ಇದನ್ನು ನಿರೀಕ್ಷಿಸಿದ್ದ ಯಡಿಯೂರಪ್ಪ ಚುನಾವಣೆ ಹೊತ್ತಲ್ಲಿ ಒಳ ಮೀಸಲಾತಿ ಜೇನುಗೂಡಿಗೆ ಕೈಹಾಕದಂತೆ ಎಚ್ಚರಿಸಿದ್ದರಂತೆ. ‘ಆದರೆ ಸಂತೋಷ್ ಟೀಮ್ ವಿಜಯೇಂದ್ರಗೆ ಸಮಸ್ಯೆ ಆಗಬೇಕೆಂದೇ ಬೊಮ್ಮಾಯಿ ಸರಕಾರ ಒಳ ಮೀಸಲಾತಿ ಘೋಷಿಸಿಸುಂತೆ ನೋಡಿಕೊಂಡಿದೆ; ಸಂಘಿಗಳ ಇಂಥ ಹಲವು ಕಾಲೆಳೆದಾಟಗಳಿಂದ ವಿಜಯೇಂದ್ರ ಕಂಗೆಟ್ಟಿದ್ದಾರೆ’ ಎಂಬ ಮಾತು ಅಖಾಡದಲ್ಲಿ ಕೇಳಿಬರುತ್ತಿದೆ.

ಶಿಕಾರಿಪುರದಲ್ಲಿ ತ್ರಿಕೋನ ಕಾಳಗ ನಡೆಯುತ್ತಿರುವಂತೆ ಭಾಸವಾದರೂ ದಿನ ಕಳೆದಂತೆ ವಿಜಯೇಂದ್ರಗೆ ಸಮಸ್ಯೆಯಾಗುತ್ತಿದೆ. ಪ್ರತಿಕೂಲ ಪರಿಸ್ಥಿಯನ್ನು ಅನುಕೂಲಕರವಾಗಿ ಮಾರ್ಪಡಿಸಿಕೊಳ್ಳಲು “ಹಣಾ”ಹಣಿಯ ಅಂತಿಮ ಅಸ್ತ್ರ ಬಿಡುವ ತಯಾರಿ ವಿಜಯೇಂದ್ರ ನಡೆಸಿದ್ದಾರೆ. ಪ್ರಬಲ ಪೈಪೋಟಿ ಕೊಡುತ್ತಿರುವ ನಾಗರಾಜ್ ಗೌಡರಿಗೆ ಆರ್ಥಿಕ ಸಂಪನ್ಮೂಲದ ಕೊರತೆ ಕಾಡುತ್ತಿದೆ. ಯಡಿಯೂರಪ್ಪ ಕುಟುಂಬದ ವಿರೋಧಿ ಮತಗಳು ಕಾಂಗ್ರೆಸ್ ಹಾಗು ಬಂಡಾಯ ಹುರಿಯಾಳು ನಾಗರಾಜ ಗೌಡರ ನಡುವೆ ಹಂಚಿಹೋಗುತ್ತದೆ; ಚುನಾವಣೆ ಮುಂಚಿನ ಒಂದು ಹಗಲು ಎರಡು ರಾತ್ರಿಯ “ಪ್ರಚಾರ”ದಲ್ಲಿ ಯಡಿಯೂರಪ್ಪ ಪರಿವಾರ ನಿಷ್ಣಾತವಾಗಿದೆ. ಪ್ರತಿಷ್ಠೆ ಪಣಕ್ಕಿಟ್ಟಿರುವ ಯಡಿಯೂರಪ್ಪರಿಗಿದು ಮಾಡುಮಡಿ ಹೋರಾಟ. ಹೀಗಾಗಿ ಕತ್ತುಕತ್ತಿನ ಸೆಣಸಾಟದಲ್ಲಿ ಕಾಸಿನ ಕೊರತೆಯ ನಾಗರಾಜ್ ಗೌಡ ಗೆದ್ದೇಗೆಲ್ಲುತ್ತಾರೆಂದು ಹೇಳಲಾಗದೆಂದು ಕ್ಷೇತ್ರದ ಕಾಂಚಣ ಮಹಿಮೆ ಗೊತ್ತಿರುವವರು ಹೇಳುತ್ತಾರೆ.

ಸೊರಬ: ಸಹೋದರರ ಸೋಜಿಗ ಸಮರ

ಸೊರಬ ಕರ್ನಾಟಕ ಕಂಡ ಕಲರ್‌ಫುಲ್ ರಾಜಕಾರಣಿ-ಮಾಜಿ ಸಿಎಂ-ಸಾರೆಕೊಪ್ಪ ಬಂಗಾರಪ್ಪರ ಪ್ರತಿಸ್ಪರ್ಧಿ ಮಕ್ಕಳಾದ ಕುಮಾರ್ ಬಂಗಾರಪ್ಪ ಮತ್ತು ಮಧು ಬಂಗಾರಪ್ಪರ ಸಾಂಪ್ರದಾಯಿಕ ಸಮರ ಭೂಮಿ. ಕೌಟುಂಬಿಕ ವೈಶಮ್ಯದಿಂದ ಈ ಸಹೋದರರು ರಾಜಕೀಯ ರಂಗದಲ್ಲೂ ಬದ್ಧ ವೈರಿಗಳಾಗಿದ್ದಾರೆ. ಐದು ಚುನಾವಣಾ ಅಖಾಡದಲ್ಲಿ ಮುಖಾಮುಖಿಯಾಗಿರುವ ಸಹೋದರರು ಈಗ ಮತ್ತೆ ಜಿದ್ದಾಜಿದ್ದಿಗೆ ಬಿದ್ದಿದ್ದಾರೆ. ಕಳೆದ ಬಾರಿ ಬಿಜೆಪಿಯಿಂದ ಚುನಾಯಿತರಾಗಿರುವ ಕುಮಾರ್‌ಗೆ ಜೆಡಿಎಸ್ ಹುರಿಯಾಳಾಗಿ ಮಧು ಪೈಪೋಟಿ ಕೊಟ್ಟಿದ್ದರು. ಈಗ ಮಧು ಕಾಂಗ್ರೆಸ್ ಕ್ಯಾಡಿಡೇಟ್; ಕುಮಾರ್ ಸ್ಥಳೀಯ ಬಿಜೆಪಿಯ ಪ್ರಬಲ ವಿರೋಧದ ನಡುವೆಯೂ ಕೇಸರಿ ಟಿಕೆಟ್‌ಅನ್ನು ಯಡಿಯೂರಪ್ಪ ಮೂಲಕ ‘ಪಡೆದು’ಕೊಂಡಿದ್ದಾರೆ ಎಂಬ ಗುಲ್ಲೆದ್ದಿದೆ. ಎಸ್.ಬಂಗಾರಪ್ಪನವರಿಗೆ ಸವಾಲು ಹಾಕುತ್ತಿದ್ದ ಬಾಸೂರು ಚಂದ್ರೇಗೌಡ ಜೆಡಿಎಸ್ ಉಮೇದುವಾರರಾಗಿದ್ದಾರೆ.

ತ್ರಿಕೋನ ಸ್ಪರ್ಧೆ ನಡೆಯುತ್ತಿರುವಂತೆ ಕಾಣಿಸುವ ಕಣದಲ್ಲಿ ಸಹೋದರರ ಸವಾಲ್ ಕದನ ಕುತೂಹಲ ಕೆರಳಿಸಿದೆ. ಕಳೆದ ಆರೆಂಟು ತಿಂಗಳಿದ ಮೂಲ ಬಿಜೆಪಿಗರು, ಸಂಘ ಪರಿವಾರರಿಗರು ಮತ್ತು ಬಂಗಾರಪ್ಪ ಕುಟುಂಬವನ್ನು ಪರಂಪರಾಗತವಾಗಿ ವಿರೋಧಿಸಿಕೊಂಡು ಬಂದಿರುವ ಲಿಂಗಾಯತ-ಬ್ರಾಹ್ಮಣ ಲೀಡರ್‌ಗಳೆಲ್ಲ ಸೇರಿ ನಮೋ ವೇದಿಕೆ ಕಟ್ಟಿಕೊಂಡು ಶಾಸಕ ಕುಮಾರ್‌ಗೆ ಟಿಕೆಟ್ ಕಟ್ ಮಾಡುವಂತೆ ಕೂಗೆಬ್ಬಿಸುತ್ತ ಬಂದಿದದ್ದರು. ಯಡಿಯೂರಪ್ಪರ ತಾಕತ್ತು ಬಳಸಿ ಪ್ರತಿರೋಧವನ್ನೆಲ್ಲ ಹಿಮ್ಮಟ್ಟಿಸಿದ ಕುಮಾರ್ ಬಿಜೆಪಿ ಕಪ್ಪು ಕುದುರೆಯಾಗಲು ಸಫಲರಾಗಿದ್ದಾರೆ. ಅಖಾಡದಲ್ಲಿನ ಪಟ್ಟು-ಪ್ರತಿಪಟ್ಟು,ವ್ಯೂಹ-ಚಕ್ರವ್ಯೂಹವೆಲ್ಲವನ್ನೂ ಸೂಕ್ಷ್ಮವಾಗಿ ನೋಡಿದರೆ ಟಿಕೆಟ್ ಪಡೆದಷ್ಟು ಸುಲಭವಾಗಿ ಕುಮಾರ್‌ಗೆ ಗೆಲ್ಲಲಾಗದು ಎಂಬುದು ಪಕ್ಕಾ ಆಗುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಶಾಸಕ ಕುಮಾರ್ ಜೋರಾಗಿ ಬೀಸುತ್ತಿರುವ ಆಡಳಿತ ವಿರೋಧಿ ಅಲೆಗೆ ತತ್ತರಿಸುತ್ತಿದ್ದಾರೆ; ಸ್ವಜಾತಿ ದೀವರು (ಈಡಿಗ) ಕುಮಾರ್ ನಡೆ-ನುಡಿಗೆ ಆಕ್ರೋಶಿತರಾಗಿದ್ದಾರೆ. ಸ್ವಜಾತಿ ಲಿಂಗಾಯತರ ಮೇಲೆ ಯಡಿಯೂರಪ್ಪರಿಗಿದ್ದ ಹಿಡಿತ ಸಡಿಲವಾಗಿದೆ. ಲಿಂಗಾಯತರು ಮತ್ತು ಬ್ರಾಹ್ಮಣರು ಕುಮಾರ್‌ನ ಸೋಲಿಸುವ ಹಠಕ್ಕೆ ಬಿದ್ದಿದ್ದಾರೆ. ಕಳೆದ ಬಾರಿ ಯಡಿಯೂರಪ್ಪರ ದೆಸೆಯಿಂದ 35 ಸಾವಿರ ಮತದಾರರಿರುವ ಲಿಂಗಾಯತರು ಸಾರಾಸಗಟಾಗಿ ಬಿಜೆಪಿ ಬೆಂಬಲಿಸಿದ್ದರು. ಈಗ ಈ ಲಿಂಗಾಯತರು, ಬ್ರಾಹ್ಮಣರು ಮತ್ತು ಸಂಘ ನಿಷ್ಠರು ಕುಮಾರ್‌ನ ಹಣಿಯುವ ಇರಾದೆಯಿಂದ ಒಂದಾಗಿ ಜೆಡಿಎಸ್ ಅಭ್ಯರ್ಥಿ ಬಾಸೂರು ಚಂದ್ರೇಗೌಡರ ಬೆನ್ನಿಗೆ ನಿಂತಿದ್ದಾರೆ. 17 ಸಾವಿರ ಮತವಿದೆ ಎನ್ನಲಾಗಿರುವ ಮಡಿವಾಳರು ಸ್ವಜಾತಿ ಅಭ್ಯರ್ಥಿ ಪರಶುರಾಮ್ ಅವರನ್ನು ಕೈಬಿಡಲಾರರು ಎನ್ನಲಾಗುತ್ತಿದೆ .ಈ ಸರಳ ಜಾತಿ ಸಮೀಕರಣ ಬಿಜೆಪಿಗೆ ಮತ ಖೋತಾಗುತ್ತದೆ ಎಂಬುದನ್ನು ಖಾತ್ರಿಪಡಿವಂತಿದೆ ಎಂದು ತರ್ಕಿಸಲಾಗುತ್ತಿದೆ.

ಅಂದಾಜು 60 ಸಾವಿರ ಮತವಿರುವ ಪ್ರಥಮ ಬಹುಸಂಖ್ಯಾತ ದೀವರ ಒಲವು ಕಾಂಗ್ರೆಸ್ ಹುರಿಯಾಳು ಮಧು ಕಡೆಗಿದೆ ಎನ್ನಲಾಗುತ್ತಿದೆ. ಕಳೆದ ಬಾರಿ ಸೋತ ಸಿಂಪತಿಯಿದೆ.ದೊಡ್ಡ ಬಂಗಾರಪ್ಪರ ಅಭಿಮಾನಿ ಬಳಗ ಬೆನ್ನಿಗಿದೆ. ಕುಮಾರ್‌ಗಿಂತ ಮಧು ಜನಪರ ಕೆಲಸಗಾರ ಎಂಬ ಅಭಿಪ್ರಾಯವಿದೆ. ಸೋತರೂ ಜನರ ಹತ್ತಿರವಿದ್ದ ಮಧು ಮತ್ತು ಶಾಸಕನಾಗಿದ್ದರೂ ಜನರಿಂದ ದೂರವಿದ್ದ ಕುಮಾರ್‌ರ ಗುಣ-ಅವಗುಣಗಳ ಚರ್ಚೆ ರಣಕಣದಲ್ಲಿ ಅನುರಣಿಸುತ್ತಿದೆ. ಧನಾಸ್ತ್ರ ಪ್ರಯೋಗಿಸುತ್ತಿದ್ದರೂ ಕುಮಾರ್ ಕಳೆಗುಂದುತ್ತಿದ್ದಾರೆ; ಜೆಡಿಎಸ್‌ನ ಬಾಸೂರು ಚಂದ್ರೇಗೌಡ ಮತ ಸೆಳೆದಷ್ಟೂ ಮಧು ಬಂಗಾರಪ್ಪರ ಗೆಲುವಿನ ಸಾಧ್ಯತೆ ಹೆಚ್ಚಾಗುತ್ತ ಹೋಗುತ್ತದೆ; ಪಿಚ್ ಕಾಂಗ್ರೆಸ್ ಕ್ಯಾಡಿಡೇಟ್ ಮಧುಗೆ ಅನುಕೂಲಕರವಾಗಿದೆ ಎಂಬ ವಿಶ್ಲೇಷಣೆಗಳಾಗುತ್ತಿವೆ.

ಸಾಗರ: ಕುರುಡು ಕಾಂಚಾಣದ ಕುಣಿತ

ಸಾಗರದಲ್ಲಿ ಬಂಗಾರಪ್ಪನವರ ಗರಡಿಯಲ್ಲಿ ಪಳಗಿದ ಹಾಲಿ ಎಮ್ಮೆಲ್ಲೆ ಹರತಾಳು ಹಾಲಪ್ಪ ಮತ್ತು ಮಾಜಿ ಎಮ್ಮೆಲ್ಲೆ ಬೇಳೂರು ಗೋಪಾಲಕೃಷ್ಣ ನಡುವೆ “ಜೀವನ್ಮರಣ”ದ ಹೋರಾಟ ನಡೆದಿದೆ. ಬಂಗಾರಪ್ಪ ಬಿಜೆಪಿ ಸೇರಿದಾಗ ಶಾಸಕರಾಗಿದ್ದ ಈ ಇಬ್ಬರು ಆ ಬಳಿಕ ಗುರುವಿಗೆ ತಿರುಮಂತ್ರ ಹಾಕಿದ ಇತಿಹಾಸವನ್ನು ಇವತ್ತಿಗೂ ಜನರು ಮರೆತಿಲ್ಲ. ಬಂಗಾರಪ್ಪ ಬಿಜೆಪಿಯಿಂದ ಹೊರಬಂದಾಗ ಗೋಪಾಲಕೃಷ್ಣ ಮತ್ತು ಹಾಲಪ್ಪ ಅಧಿಕಾರ ಲಾಲಸೆಯಿಂದ ಯಡಿಯೂರಪ್ಪರ ಮುಂದೆ ಮಂಡಿಯೂರಿದರು. ಹಾಲಪ್ಪರನ್ನು ಯಡಿಯೂರಪ್ಪ ಮಂತ್ರಿ ಮಾಡಿದಾಗ ಮುನಿಸಿಕೊಂಡ ಗೋಪಾಲಕೃಷ್ಣ ಭಿನ್ನಮತೀಯರ ಜತೆ ಸೇರಿಕೊಂಡು ಸಿಎಂ ಯಡಿಯೂರಪ್ಪರನ್ನು ಸತಾಯಿಸಿದ್ದರು. ಯಡಿಯೂರಪ್ಪ 2018ರಲ್ಲಿ ಗೋಪಾಲಕೃಷ್ಣಗೆ ಬಿಜೆಪಿ ಟಿಕೆಟ್ ತಪ್ಪಿಸಿ ಸೇಡು ತೀರಿಸಿಕೊಂಡಿದ್ದರು. ತನಗೆ ಟಿಕೆಟ್ ನಿರಾಕರಿಸಲಾಯಿತು ಎಂಬುದಕ್ಕಿAತ ತವರಿನಲ್ಲಿ ಕಡುಶತ್ರು ಹಾಲಪ್ಪರಿಗೆ ಅವಕಾಶ ಮಾಡಿಕೊಟ್ಟಿದ್ದು ಗೋಪಾಲಕೃಷ್ಣರನ್ನು ಕೆರಳಿಸಿತ್ತು.

ಕಾಂಗ್ರೆಸ್ ಸೇರಿಕೊಂಡಿದ್ದ ಗೋಪಾಲಕೃಷ್ಣ 2018ರಲ್ಲಿ ಸೋದರಮಾವ ಕಾಗೋಡು ತಿಮ್ಮಪ್ಪರ ಪರ ಪ್ರಚಾರ ನಡೆಸಿದರು. ಲಾಗಾಯ್ತಿನಿಂದ ಕಾಗೋಡರನ್ನು ವಿರೋಧಿಸಿಕೊಂಡು ಬಂದಿರುವ ಸುಮಾರು 32 ಸಾವಿರ ಮತದಾರರು ಇದ್ದಾರೆನ್ನಲಾದ ಹವ್ಯಕ ಬ್ರಾಹ್ಮಣರು ಏಕಗಂಟಲ್ಲಿ ಬಿಜೆಪಿಗೆ ಮತ ಹಾಕಿದ್ದರಿಂದ ಹಾಲಪ್ಪ ನಿರಾಯಾಸವಾಗಿ ಆಯ್ಕೆಯಾದರು. ಈ ಬಾರಿ ಗೋಪಾಲಕೃಷ್ಣ ಕಾಂಗ್ರೆಸ್ ಅಭ್ಯರ್ಥಿತನ ಪಡೆದುಕೊಂಡು ಬದ್ಧವೈರಿ ಹಾಲಪ್ಪಗೆ ಸೆಡ್ಡುಹೊಡೆದಿದ್ದಾರೆ. ರಣರೋಚಕ ಕಾಳಗವೇ ನಡೆಯುತ್ತಿದೆ! ಹಾಲಪ್ಪಗೆ ಒಳೇಟುಗಳು ಒಂದರ ಹಿಂದೊಂದು ಬೀಳುತ್ತಿವೆ. ಮೂಲ ಬಿಜೆಪಿಗರು ಮತ್ತು ಕಟ್ಟರ್ ಸಂಘಿಗಳು ಭ್ರಷ್ಟಾಚಾರದ ಆರೋಪ ಮತ್ತು ಕಾರ್ಯಕರ್ತರ ಎದುರುಹಾಕಿಕೊಂಡಿರುವ ಹಾಲಪ್ಪಗೆ ಟಿಕೆಟ್ ಕೊಡಕೂಡದೆಂದು ಒತ್ತಾಯಿಸಿದ್ದರು. ಆದರೆ ಯಡಿಯೂರಪ್ಪರಿಂದ ಲಾಬಿಮಾಡಿಸಿದ ಹಾಲಪ್ಪ ಕೇಸರಿ ಟಿಕೆಟ್ “ಪಡೆದು”ಕೊಂಡರು ಎನ್ನಲಾಗುತ್ತಿದೆ.

ರಣಕಣದಲ್ಲಿ ಹಾಲಪ್ಪ ಸ್ವಪಕ್ಷೀಯರದೇ ದಾಳಿಗೆ ಹೈರಾಣಾಗಿಹೋಗಿದ್ದಾರೆ. ಕಟ್ಟಾ ಬಿಜೆಪಿ ಮತದಾರರಾದ ಹವ್ಯಕ ಬ್ರಾಹ್ಮಣರಿಗೆ ಹಾಲಪ್ಪ ಮತ್ತೆ ಎಮ್ಮೆಲ್ಲೆಯಾಗುವುದು ಬೇಡವಾಗಿದೆ. ಈ ಬ್ರಾಹ್ಮಣ ಮತಗಳು ಆಮ್ ಆದ್ಮಿ ಪಾರ್ಟಿಯಿಂದ ನಿಂತಿರುವ ಸ್ಥಳೀಯ ಹವ್ಯಕ ಸಮುದಾಯದ ಹೈಕೋರ್ಟ್ ವಕೀಲ ದಿವಾಕರ್‌ರತ್ತ ಹರಿಯುವ ಸಾಧ್ಯತೆ ದಟ್ಟವಾಗಿದೆ. 18 ಸಾವಿರದಷ್ಟಿರುವ ಲಿಂಗಾಯತರ ಮೇಲೆ ಯಡಿಯೂರಪ್ಪ ಪ್ರಭಾವ ಮೊದಲಿನಂತಿಲ್ಲ. ಮೂಲ ಬಿಜೆಪಿಗರು ಮತ್ತು ಆರೆಸ್ಸೆಸ್ ಟೀಮು ಹಾಲಪ್ಪ ವಿರುದ್ದ ಕರಪತ್ರ ಮುದ್ರಿಸಿ ಮನೆ-ಮನೆಗೆ ಹಂಚುತ್ತಿದೆ. ಸಮಸ್ಯೆ ಹೇಳಿಕೊಂಡು ಬರುವ ಅಸಾಯಕ ಮಂದಿಗೆ ಸಮಾಧಾನ ಹೇಳುವುದಿರಲಿ, ನೊಂದವರನ್ನು ಗುರಾಯಿಸುವ ಗುಣಧರ್ಮವೇ ಹಾಲಪ್ಪರ ಈ ದುಸ್ಥಿತಿಗೆ ಕಾರಣ; ಯಾರೆ ಕಂಡರೂ ಹೆಗಲ ಮೇಲೆ ಕೈಹಾಕಿ ಮಾನವೀಯತೆಯಿಂದ ಮಾತಾಡಿಸುವ ಗೋಪಾಲಕೃಷ್ಣ ಬೆಟರ್ ಎಂಬ ಮಾತು ಕೇಳಿಬರುತ್ತಿದೆ.

ಸಾಗರ ಕ್ಷೇತ್ರದಲ್ಲಿ 62 ಸಾವಿರದಷ್ಟು ಮತದಾರರನ್ನು ಹೊಂದಿದ್ದಾರೆ ಎನ್ನಲಾದ ಈಡಿಗ (ದೀವರು ಮತ್ತು ಬಿಲ್ಲವರು)ರ ದೊಡ್ಡ ಸಮೂಹ ಹಾಲಪ್ಪ ಎಂದರೆ ಮೂಗುಮುರಿಯುತ್ತದೆ. ಸ್ವಜಾತಿ ಓಟು ಹೆಚ್ಚು ಪಡೆಯುವ ಗೋಪಾಲಕೃಷ್ಣರಿಗೆ ಅಲ್ಪಸಂಖ್ಯಾತರೆ ಮುಂತಾದ ಕಾಂಗ್ರೆಸ್‌ನ ಬೇಸ್ ಓಟುಗಳು ಬರುತ್ತವೆ. ಆದರೆ ಹಾಲಪ್ಪರ ಹಣ ಬಲ ಎದುರಿಸಲು ಗೋಪಾಲಕೃಷ್ಣರಿಗೆ ಸಾಧ್ಯವಾಗುತ್ತಿಲ್ಲ. ಮತದಾನಕ್ಕೆ ಕ್ಷಣ ಗಣನೆ ಶುರುವಾದಾಗ ಕುರುಡು ಕಾಂಚಾಣದ ಕುಣಿತ ಬಿರುಸಾಗಲಿದೆ ಎನ್ನಲಾಗುತ್ತಿದೆ. ಸದ್ಯಕ್ಕೆ ಕಾಂಗ್ರೆಸ್‌ನ ಗೋಪಾಲಕೃಷ್ಣ ಮುಂದಿದ್ದಾರಾದರೂ ಫೋಟೋ ಫಿನಿಶ್ ಫಲಿತಾಂಶ ಬರುವ ಸಾಧ್ಯತೆ ದಟ್ಟವಾಗಿದೆ ಎಂಬ ರಣರೋಚಕ ತರ್ಕಗಳು ನಡೆದಿದೆ. ಸಾಗರದಲ್ಲಿ ಗೆಲ್ಲುವುದು ಜನ ಬಲವೋ? ಧನ ಭಲವೋ? ಎಂಬದು ಚುನವಣಾ ವಿಶ್ಲೇಷಕರ ವಿವೇಚನೆಗೂ ನಿಲುಕುತ್ತಿಲ್ಲ!

ಇದನ್ನೂ ಓದಿ: ಕೊಲೆ ಬೆದರಿಕೆ ಖರ್ಗೆಯವರ ಕುಟುಂಬಕ್ಕೆ ಮಾತ್ರವಲ್ಲ, ಇಡೀ ನಾಡಿಗೇ ಹಾಕಿದ ಬೆದರಿಕೆಯಾಗಿದೆ: ದೇವನೂರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...