Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಬ್ಯಾಡಗಿ: ಒಣ ಮೆಣಸಿನಕಾಯಿ ಸೀಮೆಯ ಕೈ-ಕಮಲ ಪಾಳೆಯಗಳಲ್ಲಿ ಬಣ ಬಡಿದಾಟ!!

ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಬ್ಯಾಡಗಿ: ಒಣ ಮೆಣಸಿನಕಾಯಿ ಸೀಮೆಯ ಕೈ-ಕಮಲ ಪಾಳೆಯಗಳಲ್ಲಿ ಬಣ ಬಡಿದಾಟ!!

- Advertisement -
- Advertisement -

“ಕುಲ ಕುಲ ಕುಲವೆಂದು ಹೊಡೆದಾಡದಿರಿ” ಎಂದು ಸಮಾನತೆಯ ಸಂದೇಶದ ಕೀರ್ತನೆ ಹಾಡಿದ ದಾರ್ಶನಿಕ ಕನಕದಾಸರ ಕರ್ಮಭೂಮಿ ಬ್ಯಾಡಗಿ. ಪ್ರಾಕೃತಿಕವಾಗಿ ಸುಡುಬಿಸಿಲು ನಾಡಿನ ಮಡಿಲಲ್ಲಿರುವ ಬ್ಯಾಡಗಿಯ ಅಂಚಲ್ಲಿ ಮಲೆನಾಡಿದೆ. ಶ್ರಮ ಸಂಸ್ಕೃತಿಯ ನೇಗಿಲ ಯೋಗಿಗಳ ಈ ನಾಡಲ್ಲಿ ಅಂತಾರಾಷ್ಟ್ರೀಯ ಮೆಣಸಿನ ಮಾರುಕಟ್ಟೆಯಿಂದಾಗಿ ಉಪವಾಸ ಬೀಳುವವರು ಕಮ್ಮಿಯಾದರೂ ಲಾಗಾಯ್ತಿನ ಏಕತಾನತೆಯ ಬದುಕು ಬದಲಾಗುತ್ತಿಲ್ಲ; ಸಾಮಾಜಿಕ-ರಾಜಕೀಯ-ಶೈಕ್ಷಣಿಕ ವಲಯದಲ್ಲಿ ಪ್ರಗತಿಯ ಪರಿವರ್ತನೆ ಆಗುತ್ತಿಲ್ಲ. ಅಕ್ಕಪಕ್ಕದ ಹಾವೇರಿ ಮತ್ತು ರಾಣೆಬೆನ್ನೂರಿನಲ್ಲಿರುವಂತೆ ಮತೀಯ ಮಸಲತ್ತಿಲ್ಲದ ಬ್ಯಾಡಗಿಯ ರಾಜಕಾರಣಕ್ಕೆ ರೈತಾಪಿ ವರ್ಗದ ಅಸಹಾಯಕತೆ ಮತ್ತು ಜಾತಿ ಪ್ರತಿಷ್ಠೆಯ ಪೈಪೋಟಿಯೆ ಬಂಡವಾಳ. ಕುರುಬರ ಕಾಗಿನಲೆ ಗುರು ಪೀಠ, ಹರಿಹರ ಮಠ ಮತ್ತು ಸಾದರ ಲಿಂಗಾಯತರ ಸಿರಿಗೆರೆ ಮಠದ ಮಂತ್ರಾಕ್ಷತೆ ಚುನಾವಣೆಯಲ್ಲಿ ಚಮತ್ಕಾರ ಮಾಡುತ್ತದೆಂಬುದು ಬಹಿರಂಗ ರಹಸ್ಯ!

ಇತಿಹಾಸ-ಸಂಸ್ಕೃತಿ

ಉತ್ತರ ಕರ್ನಾಟಕದ ಮಣ್ಣಿನ ಸೊಗಡಿನ ಜವಾರಿ ಕನ್ನಡ ಭಾಷಾ ಸಂಸ್ಕೃತಿಯ ಬ್ಯಾಡಗಿಯಲ್ಲಿ ಉರ್ದು, ಲಂಬಾಣಿಯಂಥ ಭಾಷೆಗಳೂ ಕೇಳಿಬರುತ್ತವೆ. ಬ್ಯಾಡಗಿಯ ಸಾಮಾಜಿಕ-ರಾಜಕೀಯ ವಲಯದಲ್ಲಿ ಬಹುಸಂಖ್ಯಾತ ಲಿಂಗಾಯತ ಮತ್ತು ಕುರುಬರ ಮೇಲಾಟ ಕಂಡೂಕಾಣದಂತೆ ನಡೆದಿರುತ್ತದೆ. ಕಲ್ಯಾಣಿ ಚಾಲುಕ್ಯ, ರಾಷ್ಟ್ರಕೂಟ ರಾಜಪ್ರಭುತ್ವಕ್ಕೆ ಒಳಪಟ್ಟಿದ್ದ ಐತಿಹಾಸಿಕ ಹಿನ್ನೆಲೆಯ ಈ ತಾಲೂಕಲ್ಲಿ ಇತಿಹಾಸಪೂರ್ವ ನಾಗರಿಕತೆಯ ಕುರುಹುಗಳೂ ಕಾಣಿಸುತ್ತವೆ. ಅನಾದಿಕಾಲದಲ್ಲಿ ಬೇಟೆಯಾಡಿ ಬದುಕುತ್ತಿದ್ದ ಬೇಡ ಜನಾಂಗದ ನೆಲೆ ಇದಾಗಿದ್ದರಿಂದ ’ಬ್ಯಾಡಗಿ’ ಎಂಬ ಹೆಸರು ಬಂತೆಂಬ ತರ್ಕವಿದೆ.

ಮೈಲಾರ ಮಹದೇವಪ್ಪ

ಸ್ವಾತಂತ್ರ್ಯ ಸಮರದದ ಇತಿಹಾಸದಲ್ಲಿ ಬ್ಯಾಡಗಿಯ ಮೋಟೆಬೆನ್ನೂರಿನ ಹುತಾತ್ಮ ಮೈಲಾರ ಮಹಾದೇವಪ್ಪರ ಹೋರಾಟದ ಕೆಚ್ಚೆದೆಯ ಅಧ್ಯಾಯ ಅಚ್ಚಳಿಯದೆ ದಾಖಲಾಗಿದೆ! ಗಾಂಧೀಜಿಯವರ ಉಪ್ಪಿನ ದಂಡಿ ಸತ್ಯಾಗ್ರಹದಲ್ಲಿ ಕರ್ನಾಟಕದಿಂದ ಭಾಗವಹಿಸಿದ್ದ ಏಕೈಕ ಪ್ರತಿನಿಧಿ ಮೈಲಾರ ಮಹದೇವಪ್ಪ. ಬ್ರಿಟಿಷರ ನಿದ್ದೆಗೆಡಿಸುತ್ತಿದ್ದ ಮಹದೇವಪ್ಪ ಮತ್ತವರ ಸಂಗಡಿಗರನ್ನು ಮೋಸದಿಂದ ಗುಂಡು ಹೊಡೆದು ಕೊಲ್ಲಲಾಯಿತು. 15-16ನೇ ಶತಮಾನದ ಭಕ್ತಿ ಪಂಥದ ಮಹತ್ವದ-ಜನಪ್ರಿಯ ಕೀರ್ತನಕಾರ ಕನಕದಾಸರ ಸಾಹಿತ್ಯ ರಚನೆ-ಸಮಾಜ ಸುಧಾರಣೆಯ ನೆಲೆವಾಗಿದ್ದ ಬ್ಯಾಡಗಿಯ ಕಾಗಿನೆಲೆ ಗ್ರಾಮದಲ್ಲಿ 600 ವರ್ಷಗಳಷ್ಟು ಹಳೆಯದಾದ ಆದಿಕೇಶವ ದೇವಸ್ಥಾವಿದೆ. ಜಾತಿ ಪದ್ಧತಿಯ ತಾರತಮ್ಯ ಅಲ್ಲಗಳೆದ ಕನಕದಾಸರ (ತಿಮ್ಮಪ್ಪ ಬೀರಪ್ಪ ನಾಯಕ) ಹುಟ್ಟೂರಾದ ಶಿಗ್ಗಾವಿಯ ಬಾಡದಿಂದ ತಮ್ಮ ಆರಾಧ್ಯ ದೈವ ಆದಿಕೇಶವ ಮೂರ್ತಿಯನ್ನು ಕಾಗಿನೆಲೆಗೆ ತಂದು ಪ್ರತಿಷ್ಠಾಪಿಸಿದ್ದರು. ಇಲ್ಲಿ ಕನಕದಾಸರು ಬಳಸುತ್ತಿದ್ದ ಶಂಖ ಮತ್ತು ಅಕ್ಷಯ ಪಾತ್ರೆಗಳನ್ನು ಸಂರಕ್ಷಿಸಿಡಲಾಗಿದೆ.

ಕಾಗಿನೆಲೆಯಲ್ಲಿ ಕುರುಬರ ಧಾರ್ಮಿಕ-ಸಾಂಸ್ಕೃತಿಕ-ರಾಜಕೀಯ ಶಕ್ತಿ ಕೇಂದ್ರವಿದೆ (ಗುರು ಪೀಠ). ಕಾಗಿನೆಲೆಯನ್ನು ಅಭಿವೃದ್ಧಿ ಪ್ರಾಧಿಕಾರದ ಮೂಲಕ ಆಕರ್ಷಕವಾಗಿಸಲಾಗಿದೆ. ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಬೃಹತ್ ಕನಕ ಪರಿಸರ ಉದ್ಯಾನ, ಕನಕ ಕೆರೆ, ಸಂಗೀತ ಕಾರಂಜಿಗಳನ್ನು ಅಭಿವೃದ್ಧಿಪಡಿಸಿ ಕಾಗಿನೆಲೆಯನ್ನು ಪ್ರವಾಸಿ ತಾಣವಾಗಿ ಮಾರ್ಪಡಿಸಿದೆ. ಈಗ ಅಪಾರ ಆಸ್ತಿಕರನ್ನು ಸೆಳೆಯುತ್ತಿರುವ ತಾಲೂಕಿನ ಐತಿಹಾಸಿಕ ಕದರಮಂಡಲಗಿ ದೇವಸ್ಥಾನದಲ್ಲಿ ಕುಳಿತು ಕನಕದಾಸರು ತಮ್ಮ ’ಮೋಹನ ತರಂಗಿಣಿ’ ಮಹಾಕಾವ್ಯವನ್ನು ರಚಿಸಿದ್ದರೆನ್ನಲಾಗುತ್ತದೆ. ವಚನ ಸಾಹಿತಿ-ಸಮಾಜವಾದಿ ರಾಜಕಾರಣಿ-ಮಾಜಿ ಎಮ್ಮೆಲ್ಲೆ ಮತ್ತು ಮಾಜಿ ಎಮ್ಮೆಲ್ಸಿ ಮಹದೇವ ಬಣಕಾರ ಬ್ಯಾಡಗಿಯವರು. ಬ್ಯಾಡಗಿಯ ಯುವಕರ ನೆಚ್ಚಿನ ಆಟ ಕಬಡ್ಡಿ; ರೋಚಕ ಹೋರಿ ಹಬ್ಬದ ಸಂಪ್ರದಾಯದ ಬ್ಯಾಡಗಿಯಲ್ಲಿ ಸಂಗಮೇಶ್ವರ ದೇವಾಲಯ ಹಾಗು ಆಡಮ್ ಶಫಿ ದರ್ಗಾ ಇದೆ.

ಮೆಣಸಿನ ಸಾಮ್ರಾಜ್ಯದ ಆರ್ಥಿಕತೆ!

ಬ್ಯಾಡಗಿ ಕೃಷಿ ಪ್ರಧಾನ ತಾಲೂಕು; ತುಂಗಭದ್ರೆ ಕೃಷಿಕರ ಜೀವನಾಡಿ; ತುಂಗಭದ್ರೆಯ ನೀರನ್ನು ಏತ ನೀರಾವರಿ ಮೂಲಕ ಕೆರೆಗಳಿಗೆ ತುಂಬಿಸಲಾಗುತ್ತಿದೆ. ಬೋರ್‌ವೆಲ್ ಅವಲಂಬಿಸಿ ಕೃಷಿ ಕಾಯಕ ಮಾಡುವವರೂ ಇದ್ದಾರೆ. ಗೋವಿನ ಜೋಳ ಮತ್ತು ಹತ್ತಿ ಬ್ಯಾಡಗಿಯ ಆರ್ಥಿಕ ಬೆಳೆ. ತರಕಾರಿ, ಎಣ್ಣೆ ಬೀಜಗಳು, ರಾಗಿ ಸಹ ಬೆಳೆಯಲಾಗುತ್ತಿದೆ; ಮಲೆನಾಡಿನ ಅಂಚಿನ ಪ್ರದೇಶದಲ್ಲಿ ಭತ್ತ, ಕಬ್ಬು ಮತ್ತು ಇತ್ತೀಚಿನ ವರ್ಷದಲ್ಲಿ ಅಡಕೆ ಕೃಷಿ ಮಾಡಲಾಗುತ್ತಿದೆ. ಬೀಜೋತ್ಪಾದನೆಯ ಪ್ರಮುಖ ಪ್ರದೇಶವಿದು. ಇಲ್ಲಿಯ ರೈತರು ತಯಾರಿಸಿದ ಎಣ್ಣೆ ಕಾಳುಗಳು, ಮೆಕ್ಕೆ ಜೋಳ ಮುಂತಾದ ಬೀಜಗಳನ್ನು ವಿವಿಧ ಭಾಗಗಳ ರೈತರು ಖರೀದಿಸುತ್ತಾರೆ.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಹಾವೇರಿ: ಪ್ರಗತಿಗೆ ಪರಿತಪಿಸುತ್ತಿರುವ ಮುಖ್ಯಮಂತ್ರಿಯವರ ’ಮರುಭೂಮಿ’ಯಲ್ಲಿ ಲಿಂಗಾಯತ ಪ್ರತಿಷ್ಠೆಯ ಪೈಪೋಟಿ!

ಬ್ಯಾಡಗಿಯ ಆರ್ಥಿಕತೆ ಕೃಷಿ ಮತ್ತು ಸುಪ್ರಸಿದ್ಧ ಬ್ಯಾಡಗಿ ಬ್ರ್ಯಾಂಡಿನ ಡಬ್ಬಿ ಮತ್ತು ಕಡ್ಡಿ ಎಂಬ ಎರಡು ಜಾತಿಯ ಮೆಣಸಿನ ಆವಕ-ಜಾವಕ ವಹಿವಾಟಿನ ಮೇಲೆ ನಿಂತಿದೆ. ಬ್ಯಾಡಗಿ ಎಪಿಎಂಸಿ ಆವರಣದ ಮೆಣಸಿನ ಮಾರುಕಟ್ಟೆಯಲ್ಲಿ ವಾರ್ಷಿಕ ಎರಡರಿಂದ ಎರಡೂವರೆ ಸಾವಿರ ಕೋಟಿ ರೂ. ವಹಿವಾಟಾಗುತ್ತದೆ! ಇದು ಏಷ್ಯಾ ಖಂಡದ ಎರಡನೆ ಅತಿ ದೊಡ್ಡ ಮೆಣಸಿನಕಾಯಿ ಮಾರುಕಟ್ಟೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 15-20 ಸಾವಿರ ರೈತರು ಆಂಧ್ರ ಪ್ರದೇಶದ ಗುಂಟೂರು ಭಾಗವೂ ಸೇರಿದಂತೆ ರಾಜ್ಯದ ಹಲವೆಡೆಯ 5-6 ನೂರು ಕಿ.ಮೀ ದೂರದಿಂದ ರೈತರು ಮೆಣಸು ಮಾರಾಟಕ್ಕೆ ಬರುತ್ತಾರೆ. 1970-80ರ ದಶಕದಲ್ಲಿ ಬ್ಯಾಡಗಿ ಮತ್ತದರ ಹತ್ತಿರದ ತಿಮ್ಕಾಪುರ, ಹಿರೇಕೆರೂರು ಮುಂತಾದೆಡೆ ದೊಡ್ಡಮಟ್ಟದ ಮೆಣಸಿನ ಫಸಲಾಗುತ್ತಿತ್ತು; ಮುರುಡು ರೋಗ ಮತ್ತು ಪುನರಾವರ್ತಿತ ಬೆಳೆಯಿಂದಾಗಿ ಮೆಣಸಿನ ಕೃಷಿ ನಿಂತುಹೋಗಿದೆ ಎಂದು ಹೇಳಲಾಗುತ್ತದೆ. ವಿಪರ್ಯಾಸವೆಂದರೆ, ಅಂತಾರಾಷ್ಟ್ರೀಯ ಖ್ಯಾತಿಯ ಮೆಣಸಿನ ವ್ಯಾಪಾರ-ಉದ್ಯಮ ಕೇಂದ್ರವಾದ ಬ್ಯಾಡಗಿಯಲ್ಲಿ ಈಗ ಒಂದೇ ಒಂದು ಮೆಣಸು ಬೆಳೆಯುತ್ತಿಲ್ಲ!

ಹಲವೆಡೆಗಳಿಂದ ಬ್ಯಾಡಗಿಗೆ ಪ್ರವಾಹೋಪಾದಿಯಲ್ಲಿ ಹರಿದುಬರುವ ಮೆಣಸು ವ್ಯಾಪಾರದ ಸುತ್ತ ಹಲವು ಹಳ್ಳಿಗರು ಬದುಕು ಕಟ್ಟಿಕೊಂಡಿದ್ದಾರೆ. ಮೆಣಸು ಕೆಡದಂತೆ ಸಂರಕ್ಷಿಸುವ ಶೇ.30ರಷ್ಟು ಶೈತ್ಯಾಗಾರ, ಶೇ.50ರಷ್ಟು ಮೆಣಸಿನ ಪುಡಿ ಮಾಡುವ ಸಣ್ಣ ಕೈಗಾರಿಕೆಗಳು, ಮೆಣಸಿನ ಮೂಟೆ ತಲೆ ಹೊರೆಯಲ್ಲಿ ಸಾಗಿಸುವ ನೂರಾರು ಕೂಲಿ ಕಾರ್ಮಿಕರು, ಮೆಣಸಿನ ತುಂಬು (ತೊಟ್ಟು) ತೆಗೆಯುವ ಸಾವಿರಾರು ಮಹಿಳಾ ಕಾರ್ಮಿಕರು, ಹತ್ತಿರತ್ತಿರ 550 ದಲಾಲರು, ಸುಮಾರು 500 ಖರೀದಿದಾರರು ಇಲ್ಲಿದ್ದಾರೆ; ಲಿಪ್‌ಸ್ಟಿಕ್, ಪೊಲಿರೆಸಿನ್ ಮತ್ತು ಕೆಂಪು ವರ್ಣದ್ರವ್ಯ (COLOR PIGMENT) ತಯಾರಿಕೆಗೆ ಹಾಗು ಖಾರದ ಪುಡಿ-ಮಸಾಲೆ ಪೌಡರ್ ತಯಾರಿಸುವ ಭಾರತದ ನಾಮಾಂಕಿತ ಕಂಪನಿಗಳಾದ ಎಂಡಿಎಚ್, ಎವೆರೆಸ್ಟ್, ಪ್ರವೀಣ್, ಎ.ಕೆ.ಪ್ಲೇವರ್, ಈಸ್ಟರ್ನ್ ಕಾಂಡಿಮೆಂಟ್ಸ್‌ಗೆ ಬ್ಯಾಡಗಿ ಮಾರುಕಟ್ಟೆ ಮೆಣಸು ಬಳಕೆಯಾಗುತ್ತಿದೆ. ಈ ಮೆಣಸಿನಿಂದ ಎಣ್ಣೆ ಸಹ ತೆಗೆಯಲಾಗುತ್ತಿದೆ. ಬ್ಯಾಡಗಿಯ ಬಹುತೇಕ ಕುಟುಂಬಗಳ ಜೀವನಾಧಾರ ಮೆಣಸಿನ ಕ್ರಯ-ವಿಕ್ರಯ ಮತ್ತು ಮೆಣಸಿನಕಾಯಿ ಉತ್ಪನ್ನಗಳ ಉದ್ಯಮ. ಒಂದು ಅಂದಾಜಿನಂತೆ ದೇಶವಿದೇಶದಲ್ಲಿ ಕಂಪು ಸೂಸುತ್ತಿರುವ ಬ್ಯಾಡಗಿ ಮೆಣಸಿನ ವ್ಯಾಪಾರ-ವಹಿವಾಟು 25-30 ಸಾವಿರ ಕುಟುಂಬಗಳಿಗೆ ಅನ್ನದ ಮೂಲವಾಗಿದೆ!

ಕ್ಷೇತ್ರ ಪರಿಚಯ

ಬ್ಯಾಡಗಿ ವಿಧಾನಸಭಾ ಕ್ಷೇತ್ರ ರಚನೆಯಾಗಿದ್ದು 1962ರ ಎರಡನೆ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ. ಮೊದಲ ಮೂರು ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರವಾಗಿದ್ದ ಬ್ಯಾಡಗಿ ಲಿಂಗಾಯತರ ಏಕಸ್ವಾಮ್ಯಕ್ಕೆ ಒಳಪಟ್ಟಿತ್ತು. 1978ರಿಂದ 2004ರವರೆಗೆ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಿತ್ತಾದರೂ ಸಾಮಾಜಿಕ ಮತ್ತು ರಾಜಕೀಯವಾಗಿ ಸಶಕ್ತರಾದ ಲಿಂಗಾಯತರ ಹಿಡಿತದಿಂದ ಹೊರಬರಲಾಗಲಿಲ್ಲ ಎನ್ನಲಾಗುತ್ತಿದೆ. ವಲಸೆ ಬಂದ ದಲಿತ ಸಮುದಾಯದ ಮುಖಂಡರು ಶಾಸಕರಾದರು; ಅವರ ಜುಟ್ಟು ಮಾತ್ರ ಲಿಂಗಾಯತ ಮುಂದಾಳು ಎನಿಸಿಕೊಂಡವರ ಕೈಲಿರುತ್ತಿತ್ತು ಎಂಬ ಮಾತು ಕೇಳಿಬರುತ್ತದೆ. 2007ರಲ್ಲಾದ ವಿಧಾನಸಭಾ ಕ್ಷೇತ್ರಗಳ ಭೌಗೋಳಿಕ ಪರಿಧಿ ಪುನರ್‌ರಚನೆ ಪ್ರಕ್ರಿಯೆಯಲ್ಲಿ ಬ್ಯಾಡಗಿ ಮತ್ತೆ ಸಾಮಾನ್ಯ ಕ್ಷೇತ್ರವಾಗಿದೆ. ತನ್ಮೂಲಕ ಕ್ಷೇತ್ರದ ಜಾತಿ ಸಮೀಕರಣವೂ ಬದಲಾಗಿದೆ.

ಹಾವೇರಿ-ಬ್ಯಾಡಗಿ-ರಾಣೆಬೆನ್ನೂರು ತಾಲೂಕುಗಳ ಆಯ್ದ ಹಳ್ಳಿಗಳನ್ನು ಸೇರಿಸಿ ಕ್ಷೇತ್ರ ರಚಿಸಲಾಗಿದೆ. ದಲಿತ ಅಭ್ಯರ್ಥಿಗಳ ಸೋಲು-ಗೆಲುವು ನಿರ್ಧರಿಸುತ್ತಿದ್ದ ಪ್ರಬಲ ಲಿಂಗಾಯತ ಸಮುದಾಯಕ್ಕೆ ಸರಿಸುಮಾರು ಅಷ್ಟೇ ಶಕ್ತಿಶಾಲಿಯ ಕುರುಬರು ಪೈಪೋಟಿ ಕೊಡುತ್ತಿದ್ದಾರೆ ಎಂಬ ತರ್ಕ ಬ್ಯಾಡಗಿಯ ರಾಜಕೀಯ ಕಟ್ಟೆಯಲ್ಲಿದೆ. ಒಟ್ಟು 2,05,878 ಮತದಾರರಿರುವ ಬ್ಯಾಡಗಿ ಕ್ಷೇತ್ರದಲ್ಲಿ 60 ಸಾವಿರ ಲಿಂಗಾಯತರು, 50 ಸಾವಿರ ಕುರುಬರು, 28 ಸಾವಿರ ಮುಸಲ್ಮಾನರು, 27 ಸಾವಿರ ಪರಿಶಿಷ್ಟ ಜಾತಿ, 24 ಸಾವಿರ ಪರಿಶಿಷ್ಟ ಪಂಗಡ, 10 ಸಾವಿರ ಗಂಗಾಮತಸ್ಥರು ಇರಬಹುದೆಂದು ಅಂದಾಜಿಸಲಾಗಿದೆ.

ಶಾಸಕಿಯಾದ ಸ್ವಾತಂತ್ರ್ಯ ಹೋರಾಟಗಾರ್ತಿ

ಸ್ವಾತಂತ್ರ್ಯ ಹೋರಾಟಗಾರ್ತಿ ಸಿದ್ಧಮ್ಮ ಮೈಲಾರ್ ಬ್ಯಾಡಗಿಯ ಪ್ರಥಮ ಶಾಸಕಿ. ಸಿದ್ಧಮ್ಮ ಬ್ರಿಟಿಷರೊಂದಿಗೆ ಸೆಣಸಾಡಿ ವೀರಮರಣ ಹೊಂದಿದ ಮೋಟೆಬೆನ್ನೂರಿನ ಮೈಲಾರ್ ಮಹಾದೇವಪ್ಪರ ಮಡದಿ. ಮೊದಲ ಚುನಾವಣೆಯಲ್ಲಿ ಸಿದ್ಧಮ್ಮ ಪಕ್ಕದ ಹಾವೇರಿಯಲ್ಲಿ ಕಾಂಗ್ರೆಸ್ ಶಾಸಕಿಯಾಗಿದ್ದರು. 1962ರಲ್ಲಿ ತವರು (ಬ್ಯಾಡಗಿ) ಅಸೆಂಬ್ಲಿ ಕ್ಷೇತ್ರವಾದಾಗ ಅಲ್ಲಿಂದಲೆ ಸ್ಪರ್ಧಿಸಿ 21,092 ಮತ ಪಡೆದರು. ಅವರಿಗೆದುರಾಗಿ ಸಮಾಜವಾದಿ ಚಳವಳಿಯಲ್ಲಿ ಗುರುತಿಸಿಕೊಂಡಿದ್ದ ಸಾಹಿತಿ ಮಹದೇವ ಬಣಕಾರ್ ನಿಂತಿದ್ದರು. ಕಾಂಗ್ರೆಸ್‌ನ ಸಿದ್ಧಮ್ಮ 7,134 ಮತದಂತರದಿಂದ ಎರಡನೆ ಬಾರಿ ಎಮ್ಮೆಲ್ಲೆಯಾದರು.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಕಲಘಟಗಿ: ಪ್ರಗತಿಗೆ ಪರಿತಪಿಸುತ್ತಿರುವ ಕ್ಷೇತ್ರಕ್ಕೆ ವಲಸಿಗ ಶಾಸಕರೆ ಶಾಪ!

1967ರ ಜಿದ್ದಾಜಿದ್ದಿಯಲ್ಲಿ ಕನ್ನಡ ಪರ ಹೋರಾಟಗಾರ-ಪಿಎಸ್‌ಪಿ ಹುರಿಯಾಳು ಮಹದೇವ ಬಣಕಾರ್ (23,055) ಕಾಂಗ್ರೆಸ್ ಕ್ಯಾಂಡಿಡೇಟ್ ಸಿದ್ಧಮ್ಮ ಮೈಲಾರ್‌ರನ್ನು (13,928) ಆ ಕಾಲಕ್ಕೆ ಭರ್ಜರಿ ಎನ್ನಬಹುದಾದ ಮತದಂತರದಲ್ಲಿ ಸೋಲಿಸಿ ಶಾಸನಸಭೆಗೆ ಪ್ರವೇಶ ಪಡೆದರು! ಸೋಲಿನ ನಂತರ ಸಿದ್ಧಮ್ಮ ರಾಜಕಾರಣದ ನೇಪಥ್ಯಕ್ಕೆ ಸರಿದರೆ, 1972 ಇಲೆಕ್ಷನ್‌ನಲ್ಲಿ ಶಾಸಕ ಬಣಕಾರ್‌ಗೆ ಪುನರಾಯ್ಕೆ ಸಾಧ್ಯವಾಗಲಿಲ್ಲ. ಆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹೊಸ ಮುಖ ಕೆ.ಎಫ್.ಪಾಟೀಲ್ ಮತ್ತು ಸಂಸ್ಥಾ ಕಾಂಗ್ರೆಸ್‌ನ ಎಚ್.ಆರ್.ಕಲಿನೀರಪ್ಪ ಮುಖಾಮುಖಿಯಾದರು. 19,792 ಓಟು ಪಡೆದ ಕಾಂಗ್ರೆಸ್‌ನ ಪಾಟೀಲ್ 12,419 ಮತ ಪಡೆಸ ಕಲಿನೀರಪ್ಪರನ್ನು ಮಣಿಸಿದರು.

ಮೇಲ್ವರ್ಗದ ’ಮೀಸಲು’ ಆಡುಂಬೊಲ!

1978ರ ಡಿಲಿಮಿಟೇಶನ್‌ನಲ್ಲಿ ಬ್ಯಾಡಗಿ ಪರಿಶಿಷ್ಟ ಕ್ಷೇತ್ರವಾಯಿತು. ಕ್ಷೇತ್ರವನ್ನು ಎಸ್‌ಸಿ ಸಮುದಾಯಕ್ಕೆ ಕಾಯ್ದಿರಿಸಿದರೂ, ಲಿಂಗಾಯತ ಲೀಡರ್‌ಗಳ ’ಮೆಚ್ಚುಗೆ’ಗೆ ಪಾತ್ರರಾದ ದಲಿತ ನಾಯಕರಿಗೆ ಮಾತ್ರ ಕಾಂಗ್ರೆಸ್ ಮತ್ತು ಜನತಾ ಪರಿವಾರದ ಟಿಕೆಟ್ ದೊರೆಯುತಿತ್ತು! ಕಾಂಗೈನ ಎಂ.ಎಂ.ಮಾಳಗಿ ಬ್ಯಾಡಗಿಯ ಮೊದಲ ದಲಿತ ವರ್ಗದ ಶಾಶಕರು. 1978ರ ಚುನಾವಣೆಯಲ್ಲಿ ಮಾಳಗಿ (27,640) ಹಾಗು ಜನತಾ ಪಕ್ಷದ ಕೆ.ಎನ್.ಅಣ್ಣಿಗೇರಿ (16,289) ಮಧ್ಯೆ ಸ್ಪರ್ಧೆ ಏರ್‍ಪಟ್ಟಿತ್ತು. 1983ರಲ್ಲಿ ಕಾಂಗ್ರೆಸ್ ಪಾರ್ಟಿ ಶಾಸಕ ಮಾಳಗಿಗೆ ಅವಕಾಶ ನಿರಾಕರಿಸಿ ಹುಬ್ಬಳ್ಳಿಯಿಂದ ಹೆಗ್ಗಪ್ಪ ಲಮಾಣಿಯವರನ್ನು ಬ್ಯಾಡಗಿಗೆ ಕರೆಸಿಕೊಂಡಿತು. ಜನತಾ ಪಕ್ಷ ಕೂಡ ಹುಬ್ಬಳ್ಳಿ ಕಡೆಯ ಕೆ.ಎಸ್.ಬಿಳಗಿಯವರನ್ನು ಕಣಕ್ಕಿಳಿಸಿತು. ಬಂಡೆದ್ದು ಸ್ಪರ್ಧಿಸಿದ್ದ ಶಾಸಕ ಮಾಳಗಿ 10,204 ಮತ ಪಡೆದರೆ ಹೊರತು ಗೆಲ್ಲಲಾಗಲಿಲ್ಲ. ಹೆಗ್ಗಪ್ಪ ಲಮಾಣಿ (20,377) ಬಿಳಗಿಯವರನ್ನು (13,488) ಸೋಲಿಸಿದರು.

ಮಹದೇವ ಬಣಕಾರ್

1985ರಲ್ಲಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಬಿಜೆಪಿ ಹಂಗಿನಿಂದ ಹೊರಬರಲು ವಿಧಾನಸಭೆ ವಿಸರ್ಜಿಸಿದರು; ಆಗ ಎದುರಾದ ನಡುಗಾಲ ಚುನಾವಣೆ ಹೊತ್ತಲ್ಲಿ ಹೆಗಡೆ ಉತ್ತರ ಕರ್ನಾಟಕದ ಲಿಂಗಾಯತರ ಅಚ್ಚುಮೆಚ್ಚಿನ ನಾಯಕರಾಗಿ ಹೊರಹೊಮ್ಮಿದ್ದರು. ಈ ಸಾಂದರ್ಭಿಕ ಅನುಕೂಲತೆಯಿಂದಾಗಿ 36,694 ಮತ ಬಾಚಿದ ಜನತಾ ಪಕ್ಷದ ಹುರಿಯಾಳು ಕೆ.ಎಸ್.ಬಿಳಗಿ ಕಾಂಗ್ರೆಸ್‌ನ ಹೆಗ್ಗಪ್ಪ ಲಮಾಣಿಯವರನ್ನು 10,507 ಓಟಿನಿಂದ ಪರಾಭವಗೊಳಿಸಿದರು. 1989ರ ಚುನಾವಣೆ ಎದುರಾದಾಗ ಹೆಗಡೆ-ದೇವೇಗೌಡರ ಸಂಘರ್ಷದಿಂದ ಜನತಾದಳ ಕಸುವು ಕಳೆದುಕೊಂಡಿತ್ತು; ಕಾಂಗ್ರೆಸ್‌ನ ಸಿಎಂ ಕ್ಯಾಂಡಿಡೇಟಾಗಿದ್ದ ಲಿಂಗಾಯತರ ಪ್ರಭಾವಿ ಮುಂದಾಳು ವೀರೇಂದ್ರ ಪಾಟೀಲರ ವರ್ಚಸ್ಸಿನ ಮುಂದೆ ಹೆಗಡೆ ಮಂಕಾಗಿದ್ದರು. ಈ ಲಿಂಗಾಯತ ಪ್ರತಿಷ್ಠೆಯ ಹಣಾಹಣಿಯಲ್ಲ್ಲಿ ಶಾಸಕ ಬಿಳಗಿಗೆ (31,565) ಕಾಂಗ್ರೆಸ್‌ನ ಲಮಾಣಿಯವರನ್ನು (34,405) ಮಣಿಸಲಾಗಲಿಲ್ಲ.

1994ರ ಚುನಾವಣಾ ಸಮರಾಂಗಣ ಸಿದ್ಧವಾದಾಗ ಜನತಾದಳದ ದಾಯಾದಿ ತಂಡಗಳು ಒಂದಾಗಿದ್ದವು; ಲಿಂಗಾಯತರ ನೇತಾರ ವೀರೇಂದ್ರ ಪಾಟೀಲರನ್ನು ಕಾಂಗ್ರೆಸ್ ಅವಮಾನಕರವಾಗಿ ದೂರಮಾಡಿತ್ತು. ಕಾಂಗ್ರೆಸ್‌ನಿಂದ ಸಿಡಿದು ಕೆಸಿಪಿ ಕಟ್ಟಿದ್ದ ಹಿಂದುಳಿದ ವರ್ಗದ ನಾಯಕ ಬಂಗಾರಪ್ಪ ಬ್ಯಾಡಗಿಯಲ್ಲಿ ತನ್ನ ಅಭ್ಯರ್ಥಿಯನ್ನು ನಿಲ್ಲಿಸಿದ್ದರು. ಬಹುಸಂಖ್ಯಾತ ಲಿಂಗಾಯತರು ಜನತಾದಳದತ್ತ ವಾಲಿದ್ದರು. ಮಾಜಿ ಶಾಸಕ ಕೆ.ಎಸ್.ಬಿಳಗಿ (29,905) ಜನತಾದಳ ಹುರಿಯಾಳಾಗಿದ್ದರು; ಕಾಂಗ್ರೆಸ್ ಪಕ್ಕದ ರಾಣೆಬೆನ್ನೂರಿನ ರುದ್ರಪ್ಪ ಲಮಾಣಿಗೆ (27,045) ಮಣೆಹಾಕಿತ್ತು. ಬಂಗಾರಪ್ಪರ ಹುರಿಯಾಳು ಪಡೆದ 5,300 ಮತ ಕಾಂಗ್ರೆಸ್ ಸೋಲಿಗೆ ಸಾಕಾಯಿತೆಂಬ ವಿಶ್ಲೇಷಣೆಗಳು ಬ್ಯಾಡಗಿಯ ರಾಜಕೀಯ ಚರಿತ್ರೆಯಲ್ಲವೆ. ಒಟ್ಟಿನಲ್ಲಿ ಜೆಡಿಎಸ್‌ನ ಬಿಳಗಿ 2,860 ಮತದಿಂದ ಗೆಲುವು ಕಂಡಿದ್ದರು. ಆ ಹಣಾಹಣಿಯಲ್ಲಿ ಬಿಜೆಪಿ 17,669 ಮತ ಗಿಟ್ಟಿಸಿ ಚಿಗುರುವ ಸೂಚನೆ ಕೊಟ್ಟಿತ್ತು ಎಂದು ಅಂದಿನ ಚುನಾವಣಾ ಚಮತ್ಕಾರ ಕಂಡ ಹಿರಿಯರು ಹೇಳುತ್ತಾರೆ.

ರಾಜಕೀಯ ಚಿತ್ರಣ 1999ರ ಅಸೆಂಬ್ಲಿ ಕಾಳಗದ ವೇಳೆಗೆ ಮತ್ತೆ ಅದಲು ಬದಲಾಗಿತ್ತು. ಆಗ ಜನತಾದಳ ದ್ವಿದಳವಾಗಿದ್ದರೆ, ಕಾಂಗ್ರೆಸ್‌ನ ದಾಯಾದಿ ಬಣಗಳು ಬೆಸೆದುಕೊಂಡಿದ್ದವು. ಕಳೆದ ಬಾರಿ ಸೋತಿದ್ದ ಕಾಂಗ್ರೆಸ್‌ನ ರುದ್ರಪ್ಪ ಲಮಾಣಿ ಮರಳಿ ಯತ್ನ ಮಾಡಹತ್ತಿದ್ದರು. ಮಾಜಿ ಶಾಸಕ ಕೆ.ಎಸ್.ಬಿಳಗಿ ಜೆಡಿಯು ಹುರಿಯಾಳಾಗಿದ್ದರೆ, ಮಾಜಿ ಶಾಸಕ ಎಂ.ಎಂ.ಮಾಳಗಿ ಮಗ ದುರ್ಗೇಶ ಮಾಳಗಿ ಜೆಡಿಎಸ್‌ನಿಂದ ನಿಂತಿದ್ದರು. ಈ ಚತುಷ್ಕೋನ ಜಿದ್ದಾಜಿದ್ದಿಯಲ್ಲಿ 37,712 ಮತ ಪಡೆದ ಕಾಂಗ್ರೆಸ್‌ನ ರುದ್ರಪ್ಪ ಲಮಾಣಿ ಹತ್ತಿರದ ಪ್ರತಿಸ್ಪರ್ಧಿ ಪಕ್ಷೇತರ ಅಭ್ಯರ್ಧಿ ನೆಹರು ಓಲೇಕಾರ್‌ರನ್ನು 17,736 ಮತದಿಂದ ಸೋಲಿಸಿ ಶಾಸಕನಾದರು. 2004ರ ಚುನಾವಣೆ ಎದುರಾದಾಗ ಯಡಿಯೂರಪ್ಪ ರಾಜ್ಯ ಲಿಂಗಾಯತರ ಏಕಮೇವಾದ್ವಿತೀಯ ನಾಯಕರಾಗಿ ಹೊರಹೊಮ್ಮಿದ್ದರು. ತತ್ಪರಿಣಾಮವಾಗಿ ಬ್ಯಾಡಗಿಯ ಕದನದಲ್ಲಿ ನಿರ್ಣಾಯಕ ಪಾತ್ರವಾಡುವ ಲಿಂಗಾಯತರು ಬಿಜೆಪಿ ಪರವಾಗಿದ್ದರು. ಕಳೆದ ಬಾರಿ ಪಕ್ಷೇತರನಾಗಿ ಶಕ್ತಿ ಪ್ರದರ್ಶಿಸಿದ್ದ ನೆಹರು ಓಲೇಕಾರ್‌ಗೆ ಬಿಜೆಪಿ ಟಿಕೆಟ್ ಕೊಡಲಾಗಿತ್ತು. ದಲಿತರಿಗೆ ಕಾಂಗ್ರೆಸ್‌ನ ಲಂಬಾಣಿ ಹುರಿಯಾಳಿಗಿಂತ ಛಲವಾದಿ ಓಲೇಕಾರ್ ಸಹ್ಯವಾಗಿದ್ದರು.ಈ ಜಾತಿ ಸಮೀಕರಣದ ಹಣಾಹಣಿಯಲ್ಲಿ 52,686 ಮತ ಸೆಳೆದ ಬಿಜೆಪಿಯ ಓಲೇಕಾರ್ ಕಾಂಗ್ರೆಸ್‌ನ ರುದ್ರಪ್ಪ ಲಮಾಣಿಯನ್ನು 11,278 ಮತದಿಂದ ಸೋಲಿಸಿದರು.

ಲಿಂಗಾಯತ-ಕುರುಬ ಪ್ರತಿಷ್ಠೆ

2008ರ ಚುನಾವಣೆ ಪೂರ್ವದಲ್ಲಾದ ಕ್ಷೇತ್ರಗಳ ಪರಿಧಿ-ಮೀಸಲಾತಿ ಬದಲಾವಣೆಯಲ್ಲಿ ಬ್ಯಾಡಗಿ ಸಾಮಾನ್ಯ ಕ್ಷೇತ್ರವಾಯಿತು. ಆ ಚುನಾವಣೆಯಲ್ಲಿ ಸಾದರ ಲಿಂಗಾಯತ ಪಂಗಡದ ಹಣವಂತ, ಮೆಣಸಿನಕಾಯಿ ಮಂಡಿ ವರ್ತಕ ಸುರೇಶ್ ಗೌಡ್ರ ಪಾಟೀಲ್, ತಮ್ಮ ಗಾಡ್‌ಫಾದರ್ ಯಡಿಯೂರಪ್ಪರ ಕೃಪೆಯಿಂದ ಬಿಜೆಪಿ ಟಿಕೆಟ್ ತಂದರೆಂಬ ಮಾತು ಇವತ್ತಿಗೂ ಬ್ಯಾಡಗಿಯ ರಾಜಕೀಯ ವಲಯದಲ್ಲಿ ಚಾಲ್ತಿಯಲ್ಲಿದೆ. ತಮ್ಮ ತವರು ಕ್ಷೇತ್ರವಾದ ಪಕ್ಕದ ಹಾವೇರಿ ಎಸ್‌ಸಿ ಸಮುದಾಯಕ್ಕೆ ಮೀಸಲಾಗಿದ್ದರಿಂದ ಕುರುಬ ಸಮುದಾಯದ ಬಸವರಾಜ್ ಶಿವಣ್ಣವರ್ ವಲಸೆ ಬಂದು ಕಾಂಗ್ರೆಸ್ ಹುರಿಯಾಳಾದರು. ಪ್ರಬಲ ಲಿಂಗಾಯತ ಮತ್ತು ಕುರುಬರ ಜಾತಿ ಪ್ರತಿಷ್ಠೆಯ ಮುಖಾಮುಖಿ ಮೇಲಾಟದಲ್ಲಿ 48,238 ಮತ ಪಡೆದ ಕಾಂಗ್ರೆಸ್‌ನ ಶಿವಣ್ಣವರ್‌ರನ್ನು ಬಿಜೆಪಿಯ ಸುರೇಶ್ ಗೌಡ್ರನ್ನ 11,404 ಮತದಿಂದ ಮಣಿಸಿ ಎಮ್ಮೆಲ್ಲೆಯಾದರು.

ಯಡಿಯೂರಪ್ಪ 2013ರ ಅಸೆಂಬ್ಲಿ ಚುನಾವಣೆ ಹತ್ತಿರ ಬಂದಾಗ ಬಿಜೆಪಿ ವಿರುದ್ಧ ಬಂಡೆದ್ದು ತಮ್ಮದೆ ಕೆಜೆಪಿ ಪಕ್ಷ ಸ್ಥಾಪಿಸಿಕೊಂಡಿದ್ದರು. ತಮ್ಮ ತವರು ಜಿಲ್ಲೆ ಶಿವಮೊಗ್ಗೆಗೆ, ಅದರಲ್ಲೂ ತಾವು ಪ್ರತಿನಿಧಿಸುವ ಶಿಕಾರಿಪುರಕ್ಕೆ ಹೊಂದಿಕೊಂಡಿರುವ ಲಿಂಗಾಯತ ಬಾಹುಳ್ಯದ ಹಾವೇರಿ ಜಿಲ್ಲೆಯಲ್ಲಿ ಕೆಜೆಪಿಗೆ ಹೆಚ್ಚು ಸ್ಥಾನ ಬರುವ ನಿರೀಕ್ಷೆ ಯಡಿಯೂರಪ್ಪನವರದಾಗಿತ್ತು. ಬ್ಯಾಡಗಿ ಮತ್ತು ಹಾವೇರಿಯಲ್ಲಂತೂ ಗೆಲುವು ಖಾತ್ರಿಯೆಂದೆ ಲೆಕ್ಕಹಾಕಿದ್ದರು. ತಮ್ಮನ್ನು ಹಿಂಬಾಲಿಸಿದ್ದ ಶಾಸಕ ಸುರೇಶ್ ಗೌಡ್ರಗಿಂತ ಹಾವೇರಿಯಿಂದೊಮ್ಮೆ ಎಮ್ಮೆಲ್ಲೆಯಾಗಿದ್ದ ಗಾಣಿಗ ಲಿಂಗಾಯತ ಪಂಗಡದ ಶಿವರಾಜ ಸಜ್ಜನರ್‌ರೆ ಸಮರ್ಥರೆಂದು ಯಡಿಯೂರಪ್ಪ ಭಾವಿಸಿದ್ದರು.

ಶಿವರಾಜ್ ಸಜ್ಜನರ್

ಆದರೆ ಯಡಿಯೂರಪ್ಪ ಮತ್ತು ಸಜ್ಜನರ್‌ಗೆ ಕ್ಷೇತ್ರದ ಬಹಸಂಖ್ಯಾತ ಪಂಚಮಸಾಲಿ ಲಿಂಗಾಯತರನ್ನು ಒಲಿಸಿಕೊಳ್ಳಲಾಗಲಿಲ್ಲ. ಬಿಜೆಪಿ ಅಭ್ಯರ್ಥಿ ವಿರುಪಾಕ್ಷಪ್ಪ ಬಳ್ಳಾರಿ ಸ್ವಪಂಗಡದ ಪಂಚಮಸಾಲಿಗಳ ಓಟು ದಂಡಿಯಾಗಿ ಸೆಳೆದುಕೊಂಡರೆಂಬ ವಿಶ್ಲೇಷಣೆಗಳು ಕೇಳಿಬರುತ್ತದೆ. ಕಾಂಗ್ರೆಸ್‌ನ ಬಸವರಾಜ್ ಶಿವಣ್ಣವರ್ (57,707) ಕೆಜೆಪಿಯ ಶಿವರಾಜ್ ಸಜ್ಜನರ್ (44,348) ಹಾಗು ಗಣಿ (ಕಲ್ಲು ಕ್ವಾರಿ) ಉದ್ಯಮಿ ಬಿಜೆಪಿಯ ವಿರುಪಾಕ್ಷಪ್ಪ ಬಳ್ಳಾರಿ (37,877) ನಡುವೆ ನಿಕಟ ತ್ರಿಕೋನ ಕಾಳಗ ನಡೆದು ಹೋಯಿತು! ಅಂತಿಮವಾಗಿ ಕಾಂಗ್ರೆಸ್‌ನ ಶಿವಣ್ಣವರ್ ಹತ್ತಿರದ ಪ್ರತಿಸ್ಪರ್ಧಿ ಕೆಜೆಪಿಯ ಸಜ್ಜನರ್‌ರನ್ನು 13,359 ಮತದಿಂದ ಮಣಿಸಿ ಶಾಸನಸಭೆಗೆ ಹೋದರು.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ನವಲಗುಂದ: ರೈತ ಬಂಡಾಯದ ನೆಲದಲ್ಲಿ ಜಾತಿ ಪ್ರತಿಷ್ಠೆಯ ಪೈಪೋಟಿ!

2018ರ ಅಸೆಂಬ್ಲಿ ಚನಾವಣೆಯಲ್ಲಿ ಯಡಿಯೂರಪ್ಪರಿಗೆ ತಮ್ಮ ಅನುಯಾಯಿಗಳಾದ ಶಿವರಾಜ್ ಸಜ್ಜನರ್ ಮತ್ತು ಸುರೇಶ್ ಗೌಡ್ರ ಇಬ್ಬರಲ್ಲಿ ಒಬ್ಬರಿಗೂ ಬಿಜೆಪಿ ಟಿಕೆಟ್ ಕೊಡಿಸಲು ಆಗಲಿಲ್ಲ; ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತು ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಶಿ ಬಣದ ವಿರುಪಾಕ್ಷಪ್ಪ ಬಳ್ಳಾರಿಗೆ ಅವಕಾಶ ಸಿಕ್ಕಿತು. ಕಾಂಗ್ರೆಸ್ ಟಿಕೆಟ್ ಕುರುಬರ ಶಿವಣ್ಣವರ್ ಬದಲಿಗೆ ಸಾದರ ಲಿಂಗಾಯತ ಸಮುದಾಯದ ಎಸ್.ಆರ್.ಪಾಟೀಲ್‌ಗೆ ಕೊಡಲಾಯಿತು. ಈ ಜಿದ್ದಾಜಿದ್ದಲ್ಲಿ ಬಹುಸಂಖ್ಯಾತ ಸ್ವಪಂಗಡದ ಪಂಚಮಸಾಲಿಗಳ ಮತ ದಂಡಿಯಾಗಿ ಬಾಚಿದ ಬಿಜೆಪಿಯ ವಿರುಪಾಕ್ಷಪ್ಪ ಬಳ್ಳಾರಿ (91,721) ಕಾಂಗ್ರೆಸ್‌ನ ಪಾಟೀಲ್‌ರನ್ನು 21,271 ಮತಗಳ ಆಗಾಧ ಅಂತರದಿಂದ ಹೈರಾಣಾಗಿಸಿ ಶಾಸಕ ಎನಿಸಿಕೊಂಡರು!

ಕ್ಷೇತ್ರದ ಇಷ್ಟ-ಕಷ್ಟ

ಬ್ಯಾಡಗಿಯಲ್ಲಿ ಫಲವತ್ತಾದ ಭೂಮಿಯಿದೆ; ಆದರೆ ಕೃಷಿ ಉನ್ನತೀಕರಣಕ್ಕೆ ಆಳುವ ಮಂದಿ ಮುಂದಾಗುತ್ತಿಲ್ಲ. ನೀರಾವರಿ ಯೋಜನೆಗಳು ಉದ್ಘಾಟನೆಗಾಗಿ ಮುಖ್ಯಮಂತ್ರಿಯವರನ್ನು ಕಾಯುತ್ತಿವೆ. ರಾತ್ರಿ ಹೊತ್ತಲ್ಲಿ ಮಾತ್ರ ವಿದ್ಯುತ್ ಪೂರೈಕೆ ಆಗುವುದು ಹಾಗು ನಕಲಿ ಬೀಜ ಹಾವಳಿಯಿಂದ ರೈತರು ಕಂಗಾಲಾಗಿದ್ದಾರೆ. 1,017 ಎಕರೆ 17 ಗುಂಟೆ ಫಲವತ್ತಾದ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಕೈಗಾರಿಕಾ ಕಾರಿಡಾರ್ ಮಾಡುವ ಯೋಜನೆಯ ಭೂತ ರೈತರನ್ನು ಕಾಡತೊಡಗಿದೆ. ಜೀವವಾದರೂ ಕೊಟ್ಟೇವು; ತುತ್ತಿಗಾಧಾರವಾದ ಹೊಲ ಬಿಡಲಾರೆವೆಂದು ರೈತರು ಹೇಳುತ್ತಿದ್ದಾರೆ. ಕೃಷಿ ಕಾಯಕ ದುಬಾರಿ ಆಗುತ್ತಿರುವುದರಿಂದ ರೈತ ಕುಟುಂಬಗಳು ಬ್ಯಾಡಗಿ ಮೆಣಸಿನ ಮಾರ್ಕೆಟ್ ಮತ್ತು ಗಾರ್ಮೆಂಟ್ಸ್ ಉದ್ಯಮ ಅವಲಂಬಿಸುವಂತಾಗಿದೆ. ಶಿಕ್ಷಣ, ಆರೋಗ್ಯ, ಕುಡಿಯುವ ನೀರಿನಂಥ ಮೂಲಸೌಕರ್ಯಗಳೂ ಅಷ್ಟಕ್ಕಷ್ಟೆ; ಉತ್ತಮ ಶಿಕ್ಷಣ ಮತ್ತು ವೈದ್ಯಕೀಯ ಸೌಲಭ್ಯಕ್ಕಾಗಿ ದೂರದ ಹುಬ್ಬಳ್ಳಿ ಅಥವಾ ದಾವಣಗೆರೆಗೆ ಹೋಗಬೇಕಾಗಿದೆ. ನಿರ್ವಸಿತರಿಗೆ ವಸತಿ ಯೋಜನೆಗಳು ಕೈಗೆಟುಕುತ್ತಿಲ್ಲ ಎಂಬ ಅಳಲು ಕ್ಷೇತ್ರದಲ್ಲಿದೆ.

ಬ್ಯಾಡಗಿಯ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಪ್ರಾಂಗಣ ದಿನಕಳೆದಂತೆ ವೇಗವಾಗಿ ಹಿಗ್ಗುತ್ತಿರುವ ಮೆಣಸಿನ ವ್ಯವಹಾರದಿಂದ ಕಿಶ್ಕಿಂಧೆಯಂತಾಗಿದೆ. ಮೆಣಸಿನ ಋತುವಿನಲ್ಲಿ ಕನಿಷ್ಟವೆಂದರೂ ಆರೆಂಟು ನೂರು ಲಾರಿ ಮತ್ತು ಅಷ್ಟೆ ಪ್ರಮಾಣದ ಟ್ರ್ಯಾಕ್ಟರ್‌ಗಳು ಮೆಣಸು ಹೊತ್ತುಕೊಂಡು ಬರುತ್ತವೆ. ಅವುಗಳಿಗೆ ನಿಲ್ಲಲು ಜಾಗವಿಲ್ಲದೆ ರೈತರು, ವ್ಯಾಪಾರಸ್ಥರು ಪರದಾಡುವಂತಾಗಿದೆ. ಈಗಿರುವ 300 ಎಕರೆ ಪ್ರಾಂಗಣಕ್ಕೆ 200 ಎಕರೆಯಷ್ಟಾದರೂ ಸೇರಿಸಿ ವಿಸ್ತರಿಸುವಂತೆ ಕೂಗೆದ್ದಿದೆ. ಚಿಲ್ಲಿ ಪಾರ್ಕ್ ಬೇಡಿಕೆ ಬಹುದಿನಗಳಿಂದ ಇದ್ದರೂ ಇದ್ಯಾವುದೂ ತಮಗೆ ಸಂಬಂಧಿಸಿದ್ದಲ್ಲ ಎಂಬಂತೆ ಶಾಸಕ-ಸಂಸದರಿದ್ದಾರೆ ಎಂಬ ಮಾತು ಕೇಳಿಬರುತ್ತದೆ.

ಎಸ್.ಆರ್.ಪಾಟೀಲ್

ಬ್ಯಾಡಗಿ ಮುಖ್ಯ ರಸ್ತೆ ಅಗಲೀಕರಣಕ್ಕಾಗಿ ಕಳೆದ 13 ವರ್ಷದಿಂದ ಪ್ರತಿಭಟನೆ, ಬಂದ್, ಹೋರಾಟ ನಡೆಯುತ್ತಿದೆ. ಪ್ರತಿದಿನ ಸಾವಿರಾರು ವಾಹನಗಳು ಮೆಣಸಿನ ಮಾರುಕಟ್ಟೆಗೆ ಬರುತ್ತಿರುವುದರಿಂದ ಟ್ರಾಫಿಕ್ ಜಾಮ್ ಆಗಿ ಅಪಘಾತ-ಅನಾಹುತ ಆಗುತ್ತಿದೆ. ಮೋಟೆಬೆನ್ನೂರು ಬಳಿ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ನಿರ್ಮಾಣ ಮಾಡಲಾಗಿರುವ ಅವೈಜ್ಞಾನಿಕ ಮೇಲ್‌ಸೇತುವೆಯಿಂದ ಅಪಘಾತ ಹೆಚ್ಚುತ್ತಿದ್ದು ರೈತರು ಎತ್ತಿನಗಾಡಿ-ಟ್ರ್ಯಾಕ್ಟರ್ ಓಡಿಸದಂತಾಗಿದೆ. ಏಳು ವರ್ಷ ಕಳೆದರೂ ಜನರನ್ನು ಕಾಡುತ್ತಿರುವ ಬ್ಯಾಡಗಿಯ ರೈಲ್ವೆ ಗೇಟ್ ಕಾಮಗಾರಿ ಮುಗಿಯುತ್ತಿಲ್ಲ. ಸಂಸದರು ಸುಳ್ಳು ಹೇಳುತ್ತಲೇ ಕಾಲ ಕಳೆಯುತ್ತಿದ್ದಾರೆಂಬ ಆಕ್ರೋಶ ಕ್ಷೇತ್ರದಲ್ಲಿ ಮಡುಗಟ್ಟಿದೆ.

ಟಿಕೆಟ್‌ಗಾಗಿ ಪೈಪೋಟಿ!

ಪ್ರಬಲ ಎದುರಾಳಿ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಬ್ಯಾಡಗಿಯಲ್ಲಿ ಸಮಬಲದಲ್ಲಿವೆ; ಎರಡೂ ಪಾಳೆಯದ ಬಣ ಬಡಿದಾಟ, ಸೋಲಿಸುವವರ ರೊಚ್ಚು ಹೆಚ್ಚುಕಡಿಮೆ ಒಂದೇ ತೆರನಾಗಿದೆ. ಕೈ-ಕಮಲದಲ್ಲಿ ಇರುವುದು ಇಬ್ಬಿಬ್ಬರೆ ಪ್ರಮುಖ ಟಿಕಟ್ ಆಕಾಂಕ್ಷಿಗಳು. ಆದರೆ, ಟಿಕಟ್‌ಗಾಗಿ ಎರಡೂ ಪಕ್ಷದ ಪ್ರಬಲರ ನೇರ ಹಣಾಹಣಿ ಕ್ಷೇತ್ರದಾದ್ಯಂತ ಕದನ ಕುತೂಹಲ ಕೆರಳಿಸಿಬಿಟ್ಟಿದೆ. ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಕಂಡರೆ ಬಿಜೆಪಿಯ ಒಂದು ವರ್ಗಕ್ಕೆ ಆಗುವುದಿಲ್ಲ. ರಿಯಲ್ ಎಸ್ಟೇಟ್-ಕಲ್ಲು ಗಣಿ-ಸರಕಾರಿ ಗುತ್ತೇದಾರಿಕೆ ವೃತ್ತಿಯ ಶಾಸಕರಿಗೆ ಕ್ಷೇತ್ರದ ಜನರ ಸಮಸ್ಯೆ-ಸಂಕಟಕ್ಕಿಂತ ತಮ್ಮ ಬಿಸ್ನೆಸ್ ಕಡೆಗೆ ಕಾಳಜಿ ಜಾಸ್ತಿ; ಸರಕಾರಿ ಗುತ್ತಿಗೆಗಳನ್ನು ಅವರ ಸೋದರರು ಅಥವಾ ಹಿಂಬಾಲಕರಷ್ಟೆ ಹಿಡಿಯುತ್ತಾರೆ ಎಂಬ ಅಸಮಾಧಾನ ಬಿಜೆಪಿ ಕಾರ್ಯಕರ್ತರಲ್ಲಿದೆ. ಸಾಮಾನ್ಯ ಬಜೆಟ್ ಕಾಮಗಾರಿ ಬಿಟ್ಟರೆ ಶಾಸಕ ಬಳ್ಳಾರಿಯವರು ದೂರದೃಷ್ಟಿಯುಳ್ಳ ಜನೋಪಯೋಗಿ ಕೆಲಸಗಳಾವುವನ್ನೂ ಮಾಡಿಲ್ಲ ಎಂದು ಜನರು ಬೇಸರಿಸುತ್ತಾರೆ.

ಬ್ಯಾಡಗಿ ಬಿಜೆಪಿಯಲ್ಲಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಮತ್ತು ಮಾಜಿ ಶಾಸಕ ಸುರೇಶ್ ಗೌಡ್ರ ಪಾಟೀಲ್‌ರ ಎರಡು ಬಣಗಳಿವೆ. ಇಬ್ಬರೂ ತಂತಮ್ಮ ಗಾಡ್‌ಫಾದರ್‌ಗಳನ್ನು ಹಿಡಿದು 2023ರ ಚುನಾವಣೆಯಲ್ಲಿ ಕೇಸರಿ ಪಾಳೆಯದ ಕ್ಯಾಂಡಿಡೇಟಾಗುವ ಪ್ರಯತ್ನ ನಡೆಸಿದ್ದಾರೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಂಘ ಪರಿವಾರದಲ್ಲಿ ಪ್ರಭಾವಿಯಾಗಿರುವ ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಶಿ ಮತ್ತು ಮಾಜಿ ಮಂತ್ರಿ ಈಶ್ವರಪ್ಪ ತನಗೆ ಟಿಕೆಟ್ ಕೊಡಿಸುತ್ತಾರೆಂಬ ನಂಬಿಕೆ ಬಳ್ಳಾರಿಯವರದು; ಮಾಜಿ ಸಿಎಂ ಯಡಿಯೂರಪ್ಪ ತಮ್ಮ ಕೈಬಿಡುವುದಿಲ್ಲ ಎಂಬ ಭಾವನೆ ಸುರೇಶ್ ಗೌಡ್ರರದು. ಕಳೆದ ಬಾರಿ ಟಿಕೆಟ್ ಸಿಗದ ಸಿಟ್ಟಲ್ಲಿ ಕಾಂಗ್ರೆಸ್ ಸೇರಿ ಮತ್ತೆ ತವರಿಗೆ ವಾಪಸಾಗಿರುವ ಸುರೇಶ್ ಗೌಡ್ರ ಕ್ಷೇತ್ರದಲ್ಲಿ ಪಂಚಮಸಾಲಿಗಳಿಗಿಂತ ಕಡಿಮೆ ಇರುವ ಸಾದರ ಲಿಂಗಾಯತ ಒಳ ಪಂಗಡದವರು. ಈ ಎರಡು ಋಣಾತ್ಮಕ ಅಂಶಗಳನ್ನು ಮುಂದೆಮಾಡಿ ಸುರೇಶ್ ಗೌಡ್ರರಿಗೆ ಟಿಕೆಟ್ ತಪ್ಪಿಸವ ತಂತ್ರಗಾರಿಕೆ ಶಾಸಕ ಬಳ್ಳಾರಿಯವರ ಬಾಸ್‌ಗಳು ಹೆಣೆದಿದ್ದಾರೆ; ತನಗಲ್ಲದಿದ್ದರೆ ತನ್ನ ಮಗ ಬಾಲಚಂದ್ರ ಗೌಡ್ರನಿಗಾದರೂ ಅವಕಾಶ ಕೊಡಿಯೆಂದು ಸುರೇಶ್ ಗೌಡ್ರ ಬೇಡಿಕೆ ಇಟ್ಟಿದ್ದಾರೆನ್ನಲಾಗುತ್ತಿದೆ.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಕುಂದಗೋಳ: ಸಮನ್ವಯತೆ-ಸಂಗೀತದ ನೆಲೆವೀಡಲ್ಲಿ ಹಿಂದುಳಿದಿರುವಿಕೆ-ಧರ್ಮಕಾರಣ ಜುಗಲ್‌ಬಂದಿ!

ಶಾಸಕ ಬಳ್ಳಾರಿ ಈ ಐದು ವರ್ಷದಲ್ಲಿ ಕ್ಷೇತ್ರದ ಮಂದಿಗಾಗಲಿ, ಕಾರ್ಯಕರ್ತರಿಗಾಗಲಿ ಸ್ಪಂದಿಸಿಲ್ಲ; ಜನಪರ ಕೆಲಸಗಾರನೂ ಅಲ್ಲ. ಹಾಗಾಗಿ ಬಳ್ಳಾರಿಗೆ ಟಿಕೆಟ್ ಕೊಟ್ಟರೆ ಕಾಂಗ್ರೆಸ್ ಸುಲಭವಾಗಿ ಗೆಲ್ಲುತ್ತದೆ ಎಂಬ ವಾದ ವಿರೋಧಿ ಬಣ ಹೈಕಮಾಂಡ್ ಮುಂದೆ ಮಂಡಿಸಿದೆ. ಈ ಇಬ್ಬರಲ್ಲಿ ಯಾರಿಗೆ ಅವಕಾಶ ಕೊಟ್ಟರೂ ವಿರೋಧಿ ಬಳಗ ಬಿಜೆಪಿಯನ್ನು ಮಣ್ಣುಮುಕ್ಕಿಸಲು ಹವಣಿಸುವುದು ಗ್ಯಾರಂಟಿ. ಹಾಗಾಗಿ ಮೂರನೆ ’ಕಪ್ಪು ಕುದುರೆ’ಯ ಹುಡುಕಾಟ ಬಿಜೆಪಿಯಲ್ಲಿ ನಡೆಯುತ್ತಿದೆ. ಸುರೇಶ್ ಗೌಡ್ರ ಮತ್ತು ವಿರುಪಾಕ್ಷಪ್ಪ ಬಳ್ಳಾರಿ ಮೇಲಾಟದಲ್ಲಿ ಆರೆಸ್ಸೆಸ್ ಕೃಪಾರ್ಶೀರ್ವಾದದ ಎಂ.ಎಸ್.ಪಾಟಿಲ್ ರಾಜಿ ಅಭ್ಯರ್ಥಿಯಾಗುವ ಸಾಧ್ಯತೆಯ ಸಂಕೇತಗಳು ಬಿತ್ತರವಾಗುತ್ತಿವೆ ಎಂಬ ಚರ್ಚೆ ಬ್ಯಾಡಗಿಯ ರಾಜಕೀಯ ವಲಯದಲ್ಲಿ ಬಿರುಸಾಗಿದೆ.

ಕಾಂಗ್ರೆಸ್‌ನಲ್ಲಿ ಕ್ಯಾಂಡಿಡೇಟಾಗಲು ಕುರುಬರ ಕೋಮಿನ ಮಾಜಿ ಶಾಸಕ ಬಸವರಾಜ್ ಶಿವಣ್ಣವರ್ ಹಾಗು ಮೂರ್‍ನಾಲ್ಕು ದಶಕದಿಂದ ಬ್ಯಾಡಗಿ ಕಾಂಗ್ರೆಸ್ ಕಿಂಗ್ ಮೇಕರ್‌ನಂತಿರುವ ಲಿಂಗಾಯತ ಸಮುದಾಯದ ಎಸ್.ಆರ್.ಪಾಟೀಲ್ ಮಧ್ಯೆ ಹಣಾಹಣಿ ನಡೆಯುತ್ತಿದೆ. ಕಳೆದ ಬಾರಿ ತಾವೇ ಕಿಂಗ್ ಆಗುವ ಇರಾದೆಯಿಂದ ಪಾಟೀಲ್ ಚುನಾವಣಾ ಕಣಕ್ಕಿಳಿದಿದ್ದರು. ಆದರೆ ಹೀನಾಯವಾಗಿ ಸೋತರು. ತಮ್ಮ ಪರಾಜಯಕ್ಕೆ ಬಸವರಾಜ್ ಶಿವಣ್ಣವರ್ ಕುತಂತ್ರವೆ ಕಾರಣವೆಂಬ ಭಾವನೆ ಪಾಟೀಲರದೆನ್ನಲಾಗಿದೆ. ಈ ಬಾರಿ ಮತ್ತೊಂದು ಕೈ ನೋಡುವ ಹುಮ್ಮಸ್ಸಿನಲ್ಲಿರುವ ಪಾಟೀಲ್ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಟಿಕೆಟ್ ದಯಪಾಲಿಸುವ ವಿಶ್ವಾಸದಲ್ಲಿದ್ದಾರೆ ಎಂಬ ಬಾತ್ಮಿ ಕಾಂಗ್ರೆಸ್ ವಲಯದಿಂದ ಬರುತ್ತಿದೆ. ಶಿವಣ್ಣವರ್ ಮಾಜಿ ಸಿಎಂ ಸಿದ್ದರಾಮಯ್ಯರ ಶಿಷ್ಯ. ಹಾನಗಲ್ ಒಂದನ್ನು ಬಿಟ್ಟು ಹಾವೇರಿ ಜಿಲ್ಲೆಯ ಉಳಿದೈದು ಕ್ಷೇತ್ರದಲ್ಲಿ 30ರಿಂದ 35 ಸಾವಿರದಷ್ಟು ಇರುವ ಕುರಬ ಸಮುದಾಯಕ್ಕೆ ಒಂದು ಸೀಟು ಕೊಡಬೇಕಾದ ಅನಿವಾರ್ಯತೆ ಕಾಂಗ್ರೆಸ್ಸಿಗಿದೆ.

ಈ ಹಿನ್ನೆಲೆಯಲ್ಲಿ ಶಿವಣ್ಣವರ್‌ಗೆ ಕಳೆದ ಬಾರಿ ಕೈಗೆಟುಕದ ಟಿಕೆಟ್ ಈ ಸಲ ಪಡೆಯುವ ಯೋಗ ಬಂದಿದೆ ಎಂಬ ಮಾತು ಕೇಳಿಬರುತ್ತಿದೆ. ಕೆಲಸಗಾರ ಇಮೇಜಿನ ಶಿವಣ್ಣವರ್ ಚುನಾವಣಾ ರಾಜಕಾರಣದಲ್ಲಿ ಪಳಗಿದ ಹಳೆಯ ಹುಲಿ. ಶಿವಣ್ಣವರ್ ಕಾಂಗ್ರೆಸ್ ಹುರಿಯಾಳಾದರೆ ಪಕ್ಷದೊಳಗಿನವರೇ ಕಾಲೆಳೆಯುವುದು ಖಂಡಿತ; ಕ್ಷೇತ್ರದ ಜಾತಿ ರಾಸಾಯನಿಕ ಸೂತ್ರ ಮತ್ತು ರಾಜಕೀಯ ಲೆಕ್ಕಾಚಾರಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಬ್ಯಾಡಗಿ ಪಿಚ್ ಕಾಂಗ್ರೆಸ್ ಪರವಾಗಿ ಹದಗೊಳ್ಳುತ್ತಿರುವಂತೆ ಭಾಸವಾಗುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದಲಿತ ಸಮುದಾಯದ ಆಕ್ರೋಶಕ್ಕೆ ಮಣಿದ ರಾಜ್ಯ ಸರ್ಕಾರ; ‘ಪ್ರಬುದ್ಧ’ ಯೋಜನೆ ಪುನರಾರಂಭ

0
ಎಸ್‌ಸಿ-ಎಸ್‌ಟಿ ಮತ್ತು ಇತರ ದುರ್ಬಲ ಸಮುದಾಯಗಳ ವಿದ್ಯಾರ್ಥಿಗಳು ತಮ್ಮ ಸ್ನಾತಕೋತ್ತರ ಮತ್ತು ಪಿಎಚ್‌ಡಿ ಕೋರ್ಸ್‌ಗಳನ್ನು ವಿದೇಶದ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ನಡೆಸಲು ಸಮಾಜ ಕಲ್ಯಾಣ ಇಲಾಖೆಯಿಂದ ನೀಡುವ ಆರ್ಥಿಕ ಯೋಜನೆಯಾದ 'ಪ್ರಬುದ್ಧ' ಕಾರ್ಯಕ್ರಮವನ್ನು ನಿಲ್ಲಿಸಿದ್ದ...