Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಹಾವೇರಿ: ಪ್ರಗತಿಗೆ ಪರಿತಪಿಸುತ್ತಿರುವ ಮುಖ್ಯಮಂತ್ರಿಯವರ ’ಮರುಭೂಮಿ’ಯಲ್ಲಿ ಲಿಂಗಾಯತ ಪ್ರತಿಷ್ಠೆಯ ಪೈಪೋಟಿ!

ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಹಾವೇರಿ: ಪ್ರಗತಿಗೆ ಪರಿತಪಿಸುತ್ತಿರುವ ಮುಖ್ಯಮಂತ್ರಿಯವರ ’ಮರುಭೂಮಿ’ಯಲ್ಲಿ ಲಿಂಗಾಯತ ಪ್ರತಿಷ್ಠೆಯ ಪೈಪೋಟಿ!

- Advertisement -
- Advertisement -

ಯಾಲಕ್ಕಿ ಕಂಪಿನ ಸೀಮೆಯೆಂದೆ ಹೆಸರುವಾಸಿಯಾಗಿರುವ ಹಾವೇರಿ ಕರ್ನಾಟಕದ ಹೃದಯ; ಉತ್ತರ ಕರ್ನಾಟಕದ ಹೆಬ್ಬಾಗಿಲು. ಮಲೆನಾಡು-ಅರೆ ಮಲೆನಾಡು ಮತ್ತು ಬಿಸಿಲು ನಾಡುಗಳ ವಿಭಿನ್ನ ಭೌಗೋಳಿಕ ಗುಣದ ಹಾವೇರಿ ಜಿಲ್ಲೆಯ ’ರಾಜಧಾನಿ’ ಹಾವೇರಿ ನಗರ ನಿಖರವಾಗಿ ಕರ್ನಾಟಕದ ನಟ್ಟನಡುವೆ ಇದೆ. ಉತ್ತರದ ಬೀದರ್ ಮತ್ತು ದಕ್ಷಿಣದ ಚಾಮರಾಜನಗರಕ್ಕೆ ಸಮಾನಾಂತರದಲ್ಲಿರುವ ಹಾವೇರಿಯನ್ನು ಕೇಂದ್ರವಾಗಿಟ್ಟುಕೊಂಡು, 1997ರ ಆಗಸ್ಟ್ 24ರಂದು ಧಾರವಾಡದ ದಕ್ಷಿಣ ದಿಕ್ಕಿನ ಏಳು ತಾಲೂಕುಗಳನ್ನು ಒಳಗೊಂಡ ಹಾವೇರಿ ಜಿಲ್ಲೆ ರಚಿಸಲಾಯಿತು. ಪ್ರಾಕೃತಿಕ-ಸಾಂಸ್ಕೃತಿಕ-ಸಾಹಿತ್ಯಿಕ ಹಾಗು ರಾಜಕೀಯ ಹಿರಿಮೆ-ಗರಿಮೆಗಳ ಹಾವೇರಿ ಜಿಲ್ಲೆ ಬೆಳ್ಳಿ ಹಬ್ಬದ ಹೊಸ್ತಿಲಲ್ಲಿರುವಾಗಲೆ ನಾಡಿಗೆ ಮುಖ್ಯಮಂತ್ರಿಯೊಬ್ಬನನ್ನು ಕೊಟ್ಟು ಗಮನವನ್ನೇನೊ ಸೆಳೆದಿದೆ; ಆದರೆ ಆಳುವವರ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಇಡೀ ಜಿಲ್ಲೆ ಇಪ್ಪತ್ತೈದು ವರ್ಷಗಳಿಂದ ಹಿಂದುಳಿದ ಪ್ರದೇಶವೆಂಬ ಹಣೆಪಟ್ಟಿ ಕಳಚಿಕೊಳ್ಳಲಾಗದೆ ಚಡಪಡಿಸುತ್ತಲೆ ಇದೆ!

ದಾರ್ಶನಿಕ-ಕವಿಗಳಾದ ಸಂತ ಶಿಶುನಾಳ ಶರೀಫ, ತ್ರಿಪದಿಗಳ ಸರ್ವಜ್ಞ, ಕೀರ್ತನೆಗಳ ಕನಕದಾಸ, ಸೂಫಿ ಸಂತರು, ಶರಣ ಶ್ರೇಷ್ಠರು, ಸ್ವಾತಂತ್ರ್ಯ ಹೋರಾಟಗಾರರಾದ ಮೈಲಾರ ಮಹದೇವಪ್ಪ, ಹಳ್ಳಿಕೇರಿ ಗುದ್ಲೆಪ್ಪ, ತಿರಕಪ್ಪ ಮಡಿವಾಳ, ಕನ್ನಡಪರ ಹೋರಾಟಗಾರ-ರಾಜಕಾರಣಿ ಪಾಟೀಲ ಪುಟ್ಟಪ್ಪ (ಪಾಪು), ಮಹಾದೇವ ಬಣಕಾರ್, ಕನ್ನಡ ಕಾದಂಬರಿ ಪಿತಾಮಹ ಗಳಗನಾಥರು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ವಿ.ಕೃ.ಗೋಕಾಕ್, ಬಂಡಾಯ ಸಾಹಿತಿ ಚಂದ್ರಶೇಖರ ಪಾಟೀಲ (ಚಂಪಾ), ಹಿಂದುಸ್ತಾನಿ ಮತ್ತು ಕರ್ನಾಟಕ ಸಂಗೀತದ ಸುಪ್ರಸಿದ್ಧ ಗಾಯಕರಾದ ಪಂಚಾಕ್ಷರಿ ಗವಾಯಿ ಮತ್ತು ಪುಟ್ಟರಾಜ ಗವಾಯಿಗಳಂಥ ನಾಮಾಂಕಿತರ ಕರ್ಮಭೂಮಿಯಾಗಿದ್ದ ಹಾವೇರಿ ಜಿಲ್ಲೆ ರೋಚಕ ರಾಜಕಾರಣದ ಅಖಾಡವೂ ಹೌದು! ಹುಬ್ಬಳ್ಳಿ-ಕುಂದಗೋಳದಿಂದ ಶಿಗ್ಗಾಂವ್-ಸವಣೂರಿಗೆ ವಲಸೆ ಬಂದು ಶಾಸಕನಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೆಕ್ಕಾಚಾರದಲ್ಲಿ ಹಾವೇರಿ ಜಿಲ್ಲೆಯಲ್ಲಿ ರಾರಾಜಿಸುವ ರಾಜಕೀಯ ನಾಯಕ!

ಶಿವಕುಮಾರ ಉದಾಸಿ

ಅಭಿವೃದ್ಧಿ ಪಥದಲ್ಲಿ ತೀರಾ ಹಿಂದುಳಿದಿರುವ ಹಾವೇರಿ ಜಿಲ್ಲೆಯಲ್ಲಿ ಜಾತಿ-ಧರ್ಮದ ರಾಜಕೀಯ ವರಸೆ ಸದಾ ಜೋರು. ಜನತಾ ಪರಿವಾರದ ಗಟ್ಟಿ ನೆಲೆಯಾಗಿದ್ದ ಈ ರಾಜಕೀಯ ಪ್ರಜ್ಞೆಯ ನೆಲದಲ್ಲೀಗ ಕಾಂಗ್ರೆಸ್-ಬಿಜೆಪಿಯ ಸಮಬಲದ ಸೆಣಸಾಟ ಸಾಗಿದೆ. ಲಿಂಗಾಯತರ ಪ್ರಶ್ನಾತೀತ ನಾಯಕ ಯಡಿಯೂರಪ್ಪ ಬಿಜೆಪಿ ವಿರುದ್ಧ ಬಂಡೆದ್ದು ಕೆಜೆಪಿಯ ಅಶ್ವಮೇಧ ಯಾಗದ ಕುದುರೆ ಬಿಟ್ಟಿದ್ದೇ ಹಾವೇರಿಯಿಂದ! ಶಿವಮೊಗ್ಗೆಯ ನಂತರ ಯಡಿಯೂರಪ್ಪರಿಗೆ ಹೆಚ್ಚು ಪ್ರಭಾವ ಇರುವುದು ಹಾವೇರಿಯಲ್ಲೆಂದು ವಿಶ್ಲೇಷಿಸಲಾಗುತ್ತಿದೆ. ಲಿಂಗಾಯತರ ಅದರಲ್ಲೂ ಪಂಚಮಸಾಲಿ ಲಿಂಗಾಯತರ ಏಕಸ್ವಾಮ್ಯ ರಾಜಕಾರಣದ ಹಾವೇರಿ ಜಿಲ್ಲೆಯಲ್ಲಿ ಹಾನಗಲ್ ಒಂದನ್ನು ಬಿಟ್ಟು ಉಳಿದೆಲ್ಲ ಅಸೆಂಬ್ಲಿ ಕ್ಷೇತ್ರದಲ್ಲಿ 30-35 ಸಾವಿರದಷ್ಟಿರುವ ಕುರುಬ ಸಮುದಾಯದವರು ಪೈಪೋಟಿ ಕೊಡುತ್ತಿದ್ದಾರೆ. ಸಿರಿಗೆರೆ ಮಠದಿಂದ ಒಂದು ರಹಸ್ಯ ಫರ್ಮಾನು ಹೊರಟರೆ ಸಾಕು ಹಾವೇರಿ ಜಿಲ್ಲೆಯ ರಾಜಕೀಯ-ಸಾಮಾಜಿಕ ವಲಯದಲ್ಲಿ ರಾತ್ರಿ ಬೆಳಗಾಗುವುದರಲ್ಲಿ ’ಪವಾಡ’ವೆ ಆಗಿಹೋಗುತ್ತದೆ ಎಂಬ ಮಾತು ಕೇಳಿಬರುತ್ತದೆ. ಈ ಜಾತಿ ಸಮೀಕರಣದ ರಾಜಕಾರಣಕ್ಕೆ ಇತ್ತೀಚಿನ ವರ್ಷಗಳಲ್ಲಿ ಕೇಸರಿ ಖದರು ಏರಿರುವುದು ಆತಂಕಕಾರಿಯಾಗಿದೆ ಎಂದು ಪ್ರಜ್ಞಾವಂತರು ಹೇಳುತ್ತಾರೆ.

ಇತಿಹಾಸ-ಸಂಸ್ಕೃತಿ

’ಹಾವು’ ಮತ್ತು ’ಕೆರಿ’ ಪದಗಳಿಂದ “ಹಾವೇರಿ” ಎಂಬ ಹೆಸರು ವ್ಯುತ್ಪತ್ತಿಯಾಗಿದೆ ಎಂದು ಸ್ಥಳನಾಮ ಪುರಾಣ ಹೇಳುತ್ತದೆ. ಅಂದರೆ ಹಿಂದೆ ಈ ಸ್ಥಳ ಅಸಂಖ್ಯ ಹಾವುಗಳಿಂದ ತುಂಬಿದ ಕೆರೆಯಾಗಿತ್ತೆಂಬ ಜಿಜ್ಞಾಸೆಯಿದೆ. ಪುರಾತನ ಕಾಲದಲ್ಲಿ ಹಾವೇರಿ ಯಾಲಕ್ಕಿ ಸಂಸ್ಕರಣೆ ಮತ್ತು ಮಾರಾಟದ ಕೇಂದ್ರವಾಗಿತ್ತು. ಬೇರೆಬೇರೆ ಕಡೆಯಿಂದ ಬರುತ್ತಿದ್ದ ಯಾಲಕ್ಕಿಯನ್ನು ಹಾವೇರಿಯಲ್ಲಿದ್ದ ಹಲವು ಭಾವಿಗಳಲ್ಲಿ ನೆನೆಸಿ ಹದಮಾಡಲಾಗುತ್ತಿತ್ತು; ದೊಡ್ಡ ಮಟ್ಟದಲ್ಲಿ ಯಾಲಕ್ಕಿ ವಹಿವಾಟು ಹಾವೇರಿಯಲ್ಲಿ ಆಗುತ್ತಿದ್ದರಿಂದ ಯಾಲಕ್ಕಿ ಪರಿಮಳದ ಪ್ರದೇಶ ಎಂಬ ಪ್ರಸಿದ್ಧಿ ಬಂತೆನ್ನಲಾಗುತ್ತದೆ. ಈಗಲೂ ಹಾವೇರಿಯ ಪಟ್ಟೇಗಾರ ಮನೆತನದವರು ತಯಾರಿಸುವ 1 ರಿಂದ 20 ಎಳೆವರೆಗಿನ ಯಾಲಕ್ಕಿ ಮಾಲೆಗಳು ದೇಶವಿದೇಶಗಳಲ್ಲಿ ಹೆಸರುವಾಸಿಯಾಗಿದೆ.

ಚಾಲುಕ್ಯರು, ರಾಷ್ಟ್ರಕೂಟರಂಥ ರಾಜಸಾಮ್ರಾಜ್ಯಗಳಿಗೆ ಒಳಪಟ್ಟದ್ದ ಹಾವೇರಿಯ ಸುತ್ತಲ ಪ್ರದೇಶದಲ್ಲಿ ಆ ಕಾಲದ 1,300 ಶಿಲಾ ಬರಹಗಳು ಪತ್ತೆಯಾಗಿದೆ. ಐತಿಹಾಸಿಕ ಹಿನ್ನಲೆಯ ಹಾವೇರಿಯಲ್ಲಿ ಇತಿಹಾಸ ಪೂರ್ವ ನಾಗರಿಕತೆಯ ಸಾಕಷ್ಟು ಐತಿಹ್ಯವೂ ಕಾಣಸಿಗುತ್ತದೆ. ಪ್ರಾಚೀನ ಕಾಲದಲ್ಲಿ 1,000 ಮಠಗಳು ಹಾವೇರಿ ಸೀಮೆಯಲ್ಲಿದ್ದವೆಂದು ಇತಿಹಾಸ ಹೇಳುತ್ತದೆ! ಈಗ ತಾಲೂಕಿನ ಸ್ಥಾನಮಾನಕ್ಕಾಗಿ ಹೋರಾಟ ನಡೆದಿರುವ ಹಾವೇರಿ ತಾಲೂಕಿನ ದೊಡ್ಡ ಗ್ರಾಮ ’ಗುತ್ತಲ’ವನ್ನು ರಾಜಧಾನಿ ಮಾಡಿಕೊಂಡು ರಾಜ್ಯದ ಪ್ರಮುಖ ರಾಜಮನೆತನದಲ್ಲಿ ಒಂದಾದ ಗುತ್ತರು ಆಡಳಿತ ನಡೆಸಿದ್ದರು. ಗುತ್ತರು ಚಾಲುಕ್ಯರ ಮಾಂಡಲೀಕರಾಗಿದ್ದರು. ಗುತ್ತವೊಳಲ್, ಗುತ್ತರ ಪೊಳಲ್, ಗುತ್ತೊಳಲ್, ಗುತ್ತಲು ಎಂದು ಕರೆಯಲ್ಪಡುತ್ತಿದ್ದ ಈಗಿನ ಪಟ್ಟಣ ಪಂಚಾಯತ್ ಮಟ್ಟದ ಗುತ್ತಲ 12ನೇ ಶತಮಾನದಲ್ಲಿ ಪ್ರಸಿದ್ಧ ಪಟ್ಟಣವಾಗಿತ್ತು. ಕಲ್ಯಾಣಿ ಚಾಲುಕ್ಯರು, ವಿಜಯನಗರ ಅರಸರು, ಬಹುಮನಿ ಸುಲ್ತಾನರು, ಪೇಶ್ವೆಗಳು, ಸವಣೂರಿನ ನವಾಬರೆ ಮುಂತಾದ ಪ್ರಮುಖ ರಾಜ ವಂಶಜರ ಆಳ್ವಿಕೆಯ ಬಳಿಕ ಗುತ್ತಲ ಬ್ರಿಟಿಷರ ವಶವಾಗಿತ್ತು.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಧಾರವಾಡ: ಲಿಂಗಾಯತ ಏಕಸ್ವಾಮ್ಯದ ರಾಜಕಾರಣಕ್ಕೆ ಕೇಸರಿ ಖದರು!

ಹಾವೇರಿಯ ಸಂವಹನ-ವ್ಯವಹಾರ ನಡೆಯುವುದು ಉತ್ತರ ಕರ್ನಾಟಕದ ಖಡಕ್ ಕನ್ನಡದಲ್ಲಿ; ಲಂಬಾಣಿ, ಉರ್ದು, ಮರಾಠಿ ಭಾಷೆಗಳು ಕೂಡ ಕೇಳಿಬರುತ್ತವೆ. ಉತ್ತರ ಕರ್ನಾಟಕದ ಸಾಂಸ್ಕೃತಿಕ ಸಂವೇದನೆ ತೀವ್ರವಾಗಿರುವ ಹಾವೇರಿಯಲ್ಲಿ ಪ್ರಸಿದ್ಧ ಹಸು-ಹೋರಿ-ಎಮ್ಮೆ ಸಂತೆ, ಕುರಿ ಮಾರಾಟ, ಜಾತ್ರೆ-ಉತ್ಸವ, ದೊಡ್ಡಾಟ, ಕೊಬ್ಬರಿ ಹೋರಿ ಸ್ಪರ್ಧೆ ಅನೂಚಾನಾಗಿ ನಡೆದುಬಂದಿದೆ. ಹಾವನೂರಿನ ಪ್ರಸಿದ್ಧ ದ್ಯಾಮವ್ವ ಜಾತ್ರೆಗೆ ಸುತ್ತಲಿನ ಜಿಲ್ಲೆಗಳ ದೊಡ್ಡ ಜನಸ್ತೋಮವೇ ನೆರೆಯುತ್ತದೆ. ಶಿಲ್ಪ ಕಲಾ ವೈಭವ ಬಿಂಬಿಸುವ ಹಲವಾರು ಕುರುಹುಗಳು ಹಾವೇರಿಯಲ್ಲಿದೆ. ಹಾವೇರಿ ಪಟ್ಟಣದಲ್ಲಿರುವ ಭವ್ಯ ಶಿಲ್ಪ ಕಲೆಯ ಪುರಸಿದ್ಧೇಶ್ವರ ದೇವಸ್ಥಾನ 12ನೇ ಶತಮಾನದ ಚಾಲುಕ್ಯರ ಪಾಶ್ಚಾತ್ಯ ಕಲೆಯ ಅಲಂಕೃತ ಉದಾಹರಣೆಯೆಂದು ಪರಿಗಣಿತವಾಗಿದೆ. ದೇಗುಲದ ಗೋಪುರ ಏಕಕೂಟವಾಗಿದ್ದು ಸುಂದರ ಸೂಕ್ಷ್ಮ ಕೆತ್ತನೆಗಳ ಸಂಗಮದಿಂದ ಅಚ್ಚರಿ ಮೂಡಿಸುತ್ತದೆ. ಸಾಮಾನ್ಯವಾಗಿ ಚಾಲುಕ್ಯರ ನಿರ್ಮಾಣಗಳು ಪೂರ್ವದಲ್ಲಿ ಉದಯಿಸುವ ಸೂರ್ಯನಿಗೆ ಎದುರಾಗಿವೆ; ಆದರೆ ಹಾವೇರಿಯ ಈ ದೇವಸ್ಥಾನ ಪಶ್ಚಿಮಕ್ಕೆ ಮುಖಮಾಡಿದೆ.

ಹಾವೇರಿಯ ವರದಾ-ತುಂಗ ಭದ್ರಾ ನದಿ ಸಂಗಮ ಪ್ರದೇಶದ ಗಳಗನಾಥದಲ್ಲಿ ಚಾಲುಕ್ಯರ ಕಾಲದ ಗಳಗೇಶ್ವರ ದೇವಸ್ಥಾನವಿದೆ. ಪಿರಾಮಿಡ್ ಆಕಾದಲ್ಲಿರುವ ದೇವಸ್ಥಾನದ ಗೋಪುರ ನೆಲದಿಂದ ಮೇಲೇರುತ್ತಿರುವಂತೆ ಭಾಸವಾಗುತ್ತದೆ. ಹಾವೇರಿಯ ಹುಕ್ಕೇರಿ ಮಠ, ಸೇಂಟ್ ಆನ್ಸ್ ಚರ್ಚ್, ಇರ್ಷಾದ್ ಅಲಿ ಬಾಬಾ ದರ್ಗಾ ಸುತ್ತಲಿನಲ್ಲಿ ಪ್ರಸಿದ್ಧವಾಗಿದೆ. ಸ್ವಾತಂತ್ರ್ಯ ಸಂಗ್ರಾಮ, ಕರ್ನಾಟಕ ಏಕೀಕರಣ ಹೋರಾಟದ ಇತಿಹಾಸದಲ್ಲಿ ಅಚ್ಚಳಿಯದ ಅಧ್ಯಾಯಗಳನ್ನು ದಾಖಲಿಸಿರುವ ಹಾವೇರಿ ಸಾಹಿತ್ಯ-ಸಂಸ್ಕೃತಿಗೂ ಅನನ್ಯ ಕೊಡುಗೆ ಕೊಟ್ಟಿದೆ. ಸ್ವಾತಂತ್ರ್ಯ ಹೋರಾಟಗಾರ ಗುದ್ಲೆಪ್ಪ ಹಳ್ಳಿಕೇರಿ ಹಾವೇರಿಯ ಹೊಸರಿತ್ತಿಯವರು. ಗುರುಕುಲ ಮಾದರಿಯ ಗಾಂಧಿ ಗ್ರಾಮೀಣ ಗುರುಕುಲ ಹೆಸರಿನ ವಸತಿ ಶಾಲೆಯನ್ನು ಗುದ್ಲೆಪ್ಪ ಹಳ್ಳಿಕೇರಿ ಸ್ಥಾಪಿಸಿದ್ದರು. ಕನ್ನಡ ನಾಡು-ನುಡಿಗಾಗಿ ಸೆಣಸಾಡಿದ-ಎರಡು ಬಾರಿ ರಾಜ್ಯಸಭೆ ಸದಸ್ಯರಾಗಿದ್ದ ಪಾಪು, ಕನ್ನಡ ಕಾದಂಬರಿ ಪಿತಾಮಹ ಗಳಗನಾಥ (ವೆಂಕಟೇಶ ತಿರಕೊ ಕುಲಕರ್ಣಿ), ಗಾನ ಯೋಗಿ ಗುರು ಪುಟ್ಟರಾಜ ಗವಾಯಿ, ಹಿಂದುಳಿದ ವರ್ಗಗಳ ಬೈಬಲ್ ಎನ್ನಲಾದ-ಹಿಂದುಳಿದ ವರ್ಗಗಳ ಮೀಸಲಾತಿ ವರದಿ ತಯಾರಿಸಿದ ಕಾನೂನು ತಜ್ಞ ಎಲ್.ಜಿ.ಹಾವನೂರ್, ವಿದ್ವಾಂಸ-ನಟ-ನಿರ್ದೇಶಕ ಶ್ರೀನಿವಾಸ ಹಾವನೂರ್ ಮತ್ತು ಭೂದಾನ ಚಳವಳಿಯ ಸಂತ ವಿನೋಬಾ ಭಾವೆಯವರ ತಾಯಿ ಹಾವೇರಿಯ ಪ್ರಖ್ಯಾತ ಪ್ರತಿಭೆಗಳು!

ಕೃಷಿಯೆ ಜೀವ-ಜೀವನ!

ವರದಾ-ತುಂಗಭದ್ರಾ ನದಿ ಪಾತ್ರದಲ್ಲಿರುವ ಹಾವೇರಿ ಅಕ್ಷರಶಃ ಮಣ್ಣಿನ ಮಕ್ಕಳ ಸೀಮೆ; ವರದೆ ಹಾವೇರಿ ಭಾಗದಲ್ಲಿ ಹರಿದರೆ, ತುಂಗ ಭದ್ರೆ ಗುತ್ತಲ ಕಡೆಯ ಜೀವನಾಡಿ. ಶೇ.90ರಷ್ಟು ಮಂದಿಗೆ ಕೃಷಿ ಕಾಯಕವೆ ಬದುಕಿಗಾಧಾರ. ನೇಗಿಲ ಯೋಗಿಗಳ ಗೇಯ್ಮೆ ಮೇಲೆಯೇ ಹಾವೇರಿಯ ಆರ್ಥಿಕತೆ ಅವಲಂಬಿಸಿದೆ. ಗೋವಿನ ಜೋಳ ಮತ್ತು ಹತ್ತಿ ಪ್ರಮುಖ ಆರ್ಥಿಕ ಬೆಳೆ. ಕಬ್ಬು, ಶೇಂಗಾ ಮುಂತಾದ ಎಣ್ಣೆ ಕಾಳುಗಳು, ಮೆಣಸು, ಉದ್ದು, ಹೂವು ಸಹ ರೈತರು ಬೆಳೆಯುತ್ತಾರೆ. ತುಂಗಾ ಮೇಲ್ದಂಡೆ ಯೋಜನೆ ಮತ್ತು ವರದಾ ನದಿಯಿಂದಾಗಿ ಹಾವೇರಿಯ ಹಳ್ಳಿಗಳಲ್ಲಿ ಕೃಷಿ ಸಮೃದ್ಧವಾಗಿದೆ. ದುರಂತವೆಂದರೆ ಅಧಿಕಾರಸ್ಥರ ಹೊಣೆಗೇಡಿತನದಿಂದಾಗಿ ರೈತರ ಬೆಳೆಗೆ ತಕ್ಕ ಬೆಲೆ ಮಾತ್ರ ಸಿಗುತ್ತಿಲ್ಲ; ಸರಕಾರ ಕೆಲವು ಕೃಷಿ ಉತ್ಪನ್ನಕ್ಕೆ ಬೆಂಬಲ ಬೆಲೆ ಘೋಷಿಸುತ್ತದೆ ನಿಜ. ಆದರೆ ಸರಿಯಾದ ಖರೀದಿ ಕೇಂದ್ರ ತೆರೆಯುವುದಿಲ್ಲ; ಎಪಿಎಂಸಿ ರೈತರ ಶೋಷಿಸುವ ದಲ್ಲಾಳಿ ಮಾಫಿಯಾದ ಅಡ್ಡೆಯಂತಾಗಿದೆ. ರೈತರ ಅಸಾಯಕತೆಯನ್ನು ಅಸ್ತ್ರ ಮಾಡಿಕೊಂಡು ದಲ್ಲಾಳಿಗಳು ಕೃಷಿ ಉತ್ಪನ್ನವನ್ನು ಅಗ್ಗಕ್ಕೆ ಕುದುರಿಸಿಕೊಳ್ಳುತ್ತಿದ್ದಾರೆ; ಹೀಗಾಗಿ ರೈತರು ಅದೆಷ್ಟೇ ಬೆವರು ಹರಿಸಿದರೂ ಆರ್ಥಿಕವಾಗಿ ಏಳ್ಗೆ ಹೊಂದುತ್ತಿಲ್ಲ ಎಂದು ರೈತ ಮುಂದಾಳು ಒಬ್ಬರು ’ನ್ಯಾಯಪಥ’ಕ್ಕೆ ನೋವಿನಿಂದ ತಿಳಿಸಿದರು!

ಬಸವರಾಜ್ ಶಿವಣ್ಣವರ್

ಜಿಲ್ಲಾ ಕೇಂದ್ರವಾಗಿ ಇಪ್ಪತ್ತೈದು ವರ್ಷ ಕಳೆದರೂ ಹಾವೇರಿಯಲ್ಲಿ ವಾಣಿಜ್ಯ-ವ್ಯಾಪಾರ ಬೆಳೆದಿಲ್ಲ. ಮಂಡಕ್ಕಿ ಭಟ್ಟಿಗಳು ಮತ್ತು ಖಾದ್ಯ ತೈಲ ಮಿಲ್‌ಗಳೇ ಹಾವೇರಿ-ಗತ್ತಲದ ’ದೊಡ್ಡ’ ಕೈಗಾರಿಕೆಗಳು! ಹಾವೇರಿಗಿಂತ ರಾಣೆಬೆನ್ನೂರಲ್ಲೇ ವಹಿವಾಟು ಜೋರು. ಜನರು ತಮ್ಮ ಅಗತ್ಯಗಳಿಗಾಗಿ ಹುಬ್ಬಳ್ಳಿ ಮತ್ತು ರಾಣೆಬೆನ್ನೂರಿನತ್ತ ಮುಖಮಾಡುವುದೇ ಹೆಚ್ಚು. ಹಾವೇರಿ ಮಾರುಕಟ್ಟೆ ಬಲಾಢ್ಯ-ಬಹುಸಂಖ್ಯಾತ ಲಿಂಗಾಯತರ ಹಿಡಿತದಲ್ಲಿದೆ. ದುಡಿವ ಕೈಗಳಿಗೆ ಕೆಲಸ ಕೊಡುವ ಕೈಗಾರಿಕೆ-ಉದ್ಯಮ ಒಂದೂ ಹಾವೇರಿಯಲ್ಲಿಲ್ಲ. ಘೋಷಣೆಯಾಗಿದ್ದ ಸ್ಟೀಲ್ ಫ್ಯಾಕ್ಟರಿಯೂ ಅಧಿಕಾರಸ್ಥರ ಅಸಡ್ಡೆಯಿಂದ ಕೈತಪ್ಪಿದೆ; ಕೃಷಿಯಿಂದ ಬದುಕು ಕಟ್ಟಿಕೊಳ್ಳೋಣವೆಂದರೆ ಸಮರ್ಪಕವಾಗಿ ಬೀಜ-ರಸಗೊಬ್ಬರವೂ ಸಿಗುತ್ತಿಲ್ಲ. ರಸಗೊಬ್ಬರಕ್ಕಾಗಿ ಪ್ರತಿಭಟನೆ ನಡೆಸಿದ್ದ ರೈತರ ಮೇಲೆ 2008ರಲ್ಲಿ ಗೋಲಿಬಾರ್ ಮಾಡಲಾಗಿತ್ತು; ರೈತ ನಾಯಕ ಎಂದು ಹೇಳಿಕೊಳ್ಳುವ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗಲೆ ಪೊಲೀಸರು ಗುಂಡು ಹೊಡೆದು ಇಬ್ಬರು ರೈತರನ್ನು ಕೊಂದಿದ್ದು ದುರಂತ ಎಂದು ರೈತರು ವಿಷಾದ-ಆಕ್ರೋಶದಿಂದ ಹೇಳುತ್ತಾರೆ.

ದಶಕಗಳಿಂದ ಸಂಸದರಾಗಿರುವ ಶಿವಕುಮಾರ ಉದಾಸಿ ಕ್ಷೇತ್ರ ಕಡೆಗಣಿಸಿ ಹಾನಗಲ್‌ಗಷ್ಟೆ ಸೀಮಿತವಾಗಿದ್ದಾರೆಂಬ ಆರೋಪ ಕೂಡ ಬಲವಾಗಿದೆ. ಮತ್ತೆ ಶಾಸಕನಾಗುವ ಒಂದೇ ಗುರಿಯಲ್ಲಿ ಬಸವರಾಜ ಬೊಮ್ಮಾಯಿ ಶಿಗ್ಗಾವಿ-ಸವಣೂರಿಗೆ ಮಾತ್ರ ಮುಖ್ಯಮಂತ್ರಿ ಎಂಬಂತಾಗಿದ್ದಾರೆ ಎಂದು ಜನರು ಮಾತನಾಡಿಕೊಳ್ಳುವುದು ಜಿಲ್ಲೆಯಲ್ಲಿ ಸಾಮಾನ್ಯವಾಗಿದೆ!

ಮೇಲ್ವರ್ಗದ ಮರ್ಜಿಯಲ್ಲಿ ಮೀಸಲು ಕ್ಷೇತ್ರ!

2007ರಲ್ಲಾದ ವಿಧಾನಸಭಾ ಕ್ಷೇತ್ರಗಳ ಭೌಗೋಳಿಕ ಪರಿಧಿ ಪುನರ್ ನಿಗದಿ ಸಂದರ್ಭದಲ್ಲಿ ಹಾವೇರಿ ಆಕಾರ ಬದಲಾಗಿದೆ. ಲಿಂಗಾಯತ ಮತ್ತು ಕುರುಬರ ಮೇಲಾಟದ ಈ ರಣರಂಗವನ್ನು ಡಿಲಿಮಿಟೇಶನ್‌ನಲ್ಲಿ ಪರಿಶಿಷ್ಟ ಜಾತಿಗೆ ಮೀಸಲು ಮಾಡಲಾಯಿತು; ಅದುವರೆಗೆ ಎಸ್‌ಸಿಗೆ ಮೀಸಲಾಗಿದ್ದ ಪಕ್ಕದ ಬ್ಯಾಡಗಿಯನ್ನು ಸಾಮಾನ್ಯ ಕ್ಷೇತ್ರ ಮಾಡಲಾಯಿತು. ಆ ಪ್ರಕ್ರಿಯೆಯಲ್ಲಿ ನ್ಯಾಯವಾಗಿ ದಲಿತರು ಹೆಚ್ಚಿದ್ದ ಜಿಲ್ಲೆಯ ಹಾನಗಲ್ ಮೀಸಲು ಕ್ಷೇತ್ರವಾಗಬೇಕಿತ್ತು. ಹಾನಗಲ್ ಮೀಸಲು ಕ್ಷೇತ್ರವಾದರೆ ಅಂದು ಅಧಿಕಾರದಲ್ಲಿದ್ದ ಬಿಜೆಪಿಯ ಮುಂಚೂಣಿ ಮುಂದಾಳು ಸಿ.ಎಂ.ಉದಾಸಿ ಕ್ಷೇತ್ರ ಕಳೆದುಕೊಳ್ಳುತ್ತಿದ್ದರು. ಉದಾಸಿ ಅಸ್ತಿತ್ವ ಉಳಿಸಿಕೊಳ್ಳಲು ಹಾನಗಲ್ ಮೀಸಲಾಗದಂತೆ ನೋಡಿಕೊಂಡರು; ಉದಾಸಿಯವರನ್ನು ಬಚಾವ್ ಮಾಡುವ ಮಸಲತ್ತಿನಲ್ಲಿ ಸವಣೂರು ತಾಲೂಕಿನ ದಲಿತರು ಹೆಚ್ಚಿರುವ ಹಳ್ಳಿಗಳನ್ನು ಹಾವೇರಿಗೆ ಜೋಡಿಸಿ ಮೀಸಲು ಕ್ಷೇತ್ರ ಮಾಡಲಾಯಿತೆಂಬ ಚರ್ಚೆ ಇವತ್ತಿಗೂ ಹಾವೇರಿ ರಾಜಕೀಯದ ಕಟ್ಟೆಯಲ್ಲಿದೆ.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಕಲಘಟಗಿ: ಪ್ರಗತಿಗೆ ಪರಿತಪಿಸುತ್ತಿರುವ ಕ್ಷೇತ್ರಕ್ಕೆ ವಲಸಿಗ ಶಾಸಕರೆ ಶಾಪ!

1994ರ ತನಕ ಹಾವೇರಿ ಲಿಂಗಾಯತ ಮೀಸಲು ಕ್ಷೇತ್ರದಂತಾಗಿತ್ತು. ಅದರಲ್ಲೂ ಪಂಚಮಸಾಲಿ ಒಳ ಪಂಗಡದ್ದೇ ಏಕಸ್ವಾಮ್ಯ. ಪ್ರಮುಖ ಪಕ್ಷದ ಎದುರಾಳಿಗಳು ಲಿಂಗಾಯತರೇ ಆಗಿರುತ್ತಿದ್ದರು. 1994ರಲ್ಲಿ ಕುರುಬ ಸಮುದಾಯದ ಬಸವರಾಜ್ ಶಿವಣ್ಣವರ್ ಜನತಾದಳದಿಂದ ಗೆಲ್ಲುವ ಮೂಲಕ ಕ್ಷೇತ್ರದ ರಾಜಕೀಯ ಸಮೀಕರಣ ಬದಲಾಯಿತು. ಈಗ ಹಾವೇರಿ ಹೆಸರಿಗಷ್ಟೇ ಮೀಸಲು ಕ್ಷೇತ್ರ; ಚುನಾವಣಾ ರಾಜಕಾರಣ ನಡೆಯುವುದು ಬಹುಸಂಖ್ಯಾತ ಪಂಚಮಸಾಲಿ ಲಿಂಗಾಯತರ ಇಷ್ಟಾನಿಷ್ಠದಂತೆ; ಜತೆಗೆ ಹಿಂದುತ್ವದ ರಹಸ್ಯ ಕಾರ್ಯಸೂಚಿ ಸದಾ ವ್ಯಗ್ರವಾಗಿಯೇ ಇರುತ್ತದೆ. ಯಾವ ಪಕ್ಷದ ದಲಿತ ಅಭ್ಯರ್ಥಿ ತಮಗೆ ವಿಧೇಯರಾಗಿರುತ್ತಾರೋ ಅಂಥವರನ್ನು ಲಿಂಗಾಯತರು ಗೆಲ್ಲಿಸಿಕೊಳ್ಳಲು ಪ್ರಯತ್ನಿಸುತ್ತಾರೆ; ರಾಜ್ಯ ಮಟ್ಟದ ಲಿಂಗಾಯತ ಹಿತಾಸಕ್ತಿ ರಾಜಕಾರಣ, ಧರ್ಮಕಾರಣ ಮತ್ತು ಸಿರಿಗೆರೆ ಮಠದ ಮಂತ್ರಾಕ್ಷತೆ ಚುನಾವಣೆಯಲ್ಲಿ ಅದೃಶ್ಯ ಪರಿಣಾಮ ಬೀರುತ್ತದೆ ಎಂದು ರಾಜಕೀಯ ವಿಮಶಕರು ಅಭಿಪ್ರಾಯಪಡುತ್ತಾರೆ. ಒಟ್ಟು 2,28,864 ಮತದಾರರಿರುವ ಹಾವೇರಿ ಕ್ಷೇತ್ರದಲ್ಲಿ ಲಿಂಗಾಯತರು 68 ಸಾವಿರ, ಕುರುಬರು 35 ಸಾವಿರ, ಮುಸ್ಲಿಮ್ 36 ಸಾವಿರ, ಎಸ್‌ಸಿ 28 ಸಾವಿರ, ಎಸ್‌ಟಿ 16 ಸಾವಿರ, ವಿಶ್ವಕರ್ಮ 15 ಸಾವಿರ ಮತ್ತು ಸಣ್ಣ-ಪುಟ್ಟ ಸಮುದಾಯದ ಮತಗಳಿರಬಹುದೆಂದು ಅಂದಾಜಿಸಲಾಗಿದೆ.

ಚುನಾವಣಾ ಚಿತ್ರಗಳು

1957ರಲ್ಲಾದ ಮೊದಲ ಚುನಾವಣೆಯಲ್ಲಿ 17,286 ಮತ ಪಡೆದಿದ್ದ ಕಾಂಗ್ರೆಸ್ ಅಭ್ಯರ್ಥಿ ಸಿದ್ಧವ್ವ ಮೈಲಾರ್ ಪಕ್ಷೇತರ ಎದುರಾಳಿ ಪಂಚಾಕ್ಷರಪ್ಪ ವಳಸಂಗದ್ ಅವರನ್ನು ಭರ್ಜರಿ 15,219 ಮತದಂತರದಿಂದ ಮಣಿಸಿ ಆಯ್ಕೆಯಾದರು. 1962ರಲ್ಲಿ ಲಿಂಗಾಯತ ಕೋಮಿನ ಕಾಂಗ್ರೆಸ್ ಕ್ಯಾಂಡಿಡೇಟ್ ಬಸವರಾಜ ಮಾಗಾವಿ (18,945) ಮತ್ತು ಪಕ್ಷೇತರ ಹುರಿಯಾಳು ಶಿವರಾಜ್ ನೆಲವಿಗಿ ಮುಖಾಮುಖಿಯಾದರು. ಕಾಂಗ್ರೆಸ್‌ನ ಮಾಗಾವಿ 9,155 ಮತದಂತರದಿಂದ ಗೆದ್ದು ಶಾಸಕನಾದರು. 1967ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಾರ್ಟಿ ಪೈಪೋಟಿ ಕೊಟ್ಟಿತ್ತು. ಕಾಂಗ್ರೆಸ್‌ನ ಎಂ.ಬಿ.ವೀರಪ್ಪ (20,494) ಸಿಪಿಎಂನ ವಿ.ಪಿ.ರೇವಪ್ಪರನ್ನು (11,905) ಸೋಲಿಸಿದರು. 1972ರಲ್ಲಿ ಕಾಂಗ್ರೆಸ್‌ನ ದಾಯಾದಿ ಬಣಗಳ ನಡುವೆ ಜಿದ್ದಾಜಿದ್ದಿ ಏರ್‍ಪಟ್ಟಿತ್ತು. 15,650 ಮತ ಪಡೆದಿದ್ದ ಸಂಸ್ಥಾ ಕಾಂಗ್ರೆಸ್‌ನ ಎಂ.ಎಸ್.ದಾನಪ್ಪರನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಟಿ.ಎಫ್.ಸಿದ್ದಪ್ಪ (25,061) ಸುಲಭವಾಗಿ ಸೋಲಿಸಿ ಶಾಸನಸಭೆಗೆ ಪ್ರವೇಶ ಪಡೆದರು. ಪ್ರಭಾವಿ ಪಂಚಮಸಾಲಿ ಲಿಂಗಾಯತ ನಾಯಕರಾಗಿದ್ದ ಎಫ್.ಎಸ್.ತಾವರೆ 1978ರಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದರು. ಜನತಾ ಪಕ್ಷದ ಹುರಿಯಾಳಾಗಿದ್ದ ಎಸ್.ಎಲ್.ಒಡೆಯರ್‌ಗೆ ಕೇವಲ 17,105 ಮತ ಪಡೆಯಲಷ್ಟೇ ಸಾಧ್ಯವಾಯಿತು. 34,067 ಮತ ಪಡೆದ ತಾವರೆ ದೊಡ್ಡ ಅಂತರದಲ್ಲಿ ಶಾಸಕನಾದರು.

1983ರಲ್ಲಿ ಮೊದಲ ಬಾರಿ ಹಾವೇರಿಯಿಂದ ಕಾಂಗ್ರೆಸ್ಸೇತರ ಅಭ್ಯರ್ಥಿ ಎಮ್ಮೆಲ್ಲೆಯಾದರು. 1983ರಲ್ಲಿ ಅವಿಭಜಿತ ಧಾರವಾಡ ಜಿಲ್ಲೆಯಲ್ಲಿ ಬೀಸಿದ್ದ ಕಾಂಗ್ರೆಸ್ ವಿರೋಧಿ ಬಿರುಗಾಳಿಯಲ್ಲಿ 33,316 ಮತ ಪಡೆದ ಜನತಾ ಪಕ್ಷದ ಸಿ.ಸಿ.ಕಲಕೋಟಿ ತಮ್ಮ ಎದುರಾಳಿ ಆರ್.ಬಿ.ಗಿರ್ಜಿಯವರನ್ನು (ಕಾಂಗ್ರೆಸ್) 6,503 ಮತದಂತರದಿಂದ ಮಣಿಸಿದರು. 1985ರಲ್ಲಿ ಅಂದಿನ ಸಿಎಂ ರಾಮಕೃಷ್ಣ ಹೆಗಡೆ ತಮ್ಮ ಅಲ್ಪಸಂಖ್ಯಾತ ಸರಕಾರಕ್ಕೆ ಬಾಹ್ಯ ಬೆಂಬಲ ನೀಡಿದ್ದ ಬಿಜೆಪಿ ಕಾಟ ತಾಳಲಾರದೆ ಅಸೆಂಬ್ಲಿ ವಿಸರ್ಜಿಸಿ ನಡುಗಾಲ ಚುನಾವಣೆ ಘೋಷಿಸಿದರು. ಆ ಸಂದರ್ಭದಲ್ಲಿ ಹೆಗಡೆ ಉತ್ತರ ಕನಾಟಕದ ಲಿಂಗಾಯತರ ಒಲವಿನ ನಾಯಕಾಗಿ ಅವತರಿಸಿದ್ದರು. ಹೀಗಾಗಿ 1985ರ ಚುನಾವಣೆಯಲ್ಲಿ ಜನತಾ ಪಕ್ಷದ ಹುರಿಯಾಳಾಗಿದ್ದ ಕಲಕೋಟಿಗೆ (35,564) ಕಾಂಗ್ರೆಸ್‌ನ ಮೀನಾಕ್ಷಿ ಗಿರ್ಜಿಯವರನ್ನು ಸೋಲಿಸುವುದು ಕಷ್ಟವಾಗಲಿಲ್ಲ; 9,936 ಮತದಂತರದಿಂದ ಕಲಕೋಟಿ ಪುನರಾಯ್ಕೆಯಾದರು.

ಸಿ.ಸಿ ಕಲಕೋಟಿ

ಜನತಾ ದಳ 1989ರ ಚುನಾವಣೆ ಎದುರಾದಾಗ ದಾಯಾದಿ ಕಲಹದಿಂದ ದ್ವಿದಳವಾಗಿತ್ತು. ಹೆಗಡೆ-ಎಸ್.ಆರ್.ಬೊಮ್ಮಾಯಿಯಿದ್ದ ಬಣದ (ಜನತಾ ದಳ) ಟಿಕೆಟ್ ಕುರುಬ ಸಮುದಾಯದ ಬಸವರಾಜ ಶಿವಣ್ಣವರ್ ಪಡೆದರು. ಆದರೆ ಕಾಂಗ್ರೆಸ್‌ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ವಿರೇಂದ್ರ ಪಾಟೀಲರ ವರ್ಚಸ್ಸಿನ ಮುಂದೆ ಹೆಗಡೆ-ಬೊಮ್ಮಾಯಿ ಮಂಕಾಗಿದ್ದರಿಂದ ಜನತಾದಳದ ಆಟಗಾರನಿಗೆ ಚುನಾವಣಾ ಪಿಚ್ ಪ್ರತಿಕೂಲಕರವಾಗಿ ಪರಿಣಮಿಸಿತ್ತು. 45,331 ಮತ ಗಿಟ್ಟಿಸಿದ ಬಲಾಢ್ಯ ಪಂಚಮಸಾಲಿ ಲಿಂಗಾಯತ ಸಮುದಾಯದ ಕಾಂಗ್ರೆಸ್ ಹುರಿಯಾಳು ಎಂ.ಡಿ.ಶಿವಾಪುರ್ 5,843 ಮತದಂತರದಿಂದ ಗೆದ್ದು ಎಮ್ಮೆಲ್ಲೆ ಆದರು.

ಬದಲಾದ ಜಾತಿ ಸೂತ್ರ!

1994ರ ಚುನಾವಣೆ ಹೊತ್ತಲ್ಲಿ ಆಳುವ ಕಾಂಗ್ರೆಸ್‌ನಲ್ಲಿ ಭಿನ್ನಮತ ತಾರಕ ತಲುಪಿತ್ತು. ಹಿಂದುಳಿದ ವರ್ಗದ ವರ್ಚಸ್ವಿ ನಾಯಕರೆನಿಸಿದ್ದ ಬಂಗಾರಪ್ಪ ಸಿಡಿದು ತಮ್ಮದೇ ಕೆಸಿಪಿ ಕಟ್ಟಿಕೊಂಡಿದ್ದರು; ವಿರೇಂದ್ರ ಪಾಟೀಲರನ್ನು ಅವಮಾನಿಸಲಾಯಿತೆಂದು ಲಿಂಗಾಯತರು ಕಾಂಗ್ರೆಸ್ ಮೇಲೆ ಮುನಿದಿದ್ದರು. ಜನತಾದಳದ ಹೆಗಡೆ-ದೇವೇಗೌಡರ ನಡುವೆ ತೇಪೆ ಹಾಕಲಾಗಿತ್ತು. ಇದೆಲ್ಲದರ ಪರಿಣಾಮವಾಗಿ ಹಾವೇರಿ ಆಖಾಡದಲ್ಲಿ ಜನತಾದಳದ ಹುರಿಯಾಳು ಶಿವಣ್ಣವರ್ 55,806ರಷ್ಟು ಆಗಾಧ ಮತ ಪಡೆದು ಕಾಂಗ್ರೆಸ್‌ನ ಆರ್.ಸಿ.ಮಾಗಾವಿಯವರನ್ನು (23,086) ಹೀನಾಯವಾಗಿ ಸೋಲಿಸಲು ಸಾಧ್ಯವಾಯಿತು ಎಂದು ಅಂದಿನ ರಣರೋಚಕ ಹಣಾಹಣಿ ಕಂಡ ಹಿರಿಯರು ಹೇಳುತ್ತಾರೆ!

ಕಾಂಗ್ರೆಸ್‌ನ ಭಿನ್ನ ಬಣಗಳು 1999ರ ಚುನಾವಣೆ ವೇಳೆಗೆ ಒಂದಾಗಿದ್ದರೆ, ಜನತಾದಳ, ಜೆಡಿಎಸ್ ಮತ್ತು ಜೆಡಿಯು ಎಂದು ಹೋಳಾಗಿತ್ತು. ಶಾಸಕ ಶಿವಣ್ಣವರ್ ದೇವೇಗೌಡರ ಜೆಡಿಎಸ್‌ನಲ್ಲಿ ಉಳಿದು ಆ ಪಕ್ಷದ ಕ್ಯಾಂಡಿಡೇಟಾದರು. ಕಾಂಗ್ರೆಸ್ 1985ರಲ್ಲಿ ಸೋತಿದ್ದ ಮೀನಾಕ್ಷಿ ಗಿರ್ಜಿಯವರನ್ನು ಮತ್ತೆ ಕಣಕ್ಕಿಳಿಸಿತು. ಆದರೆ ಗಿರ್ಜಿಗೆ ಸ್ವಜಾತಿ ಲಿಂಗಾಯತರು ಮತ್ತು ಮುಸ್ಲಿಮರನ್ನು ಒಲಿಸಿಕೊಳ್ಳಲು ಆಗಲಿಲ್ಲ. ಜೆಡಿಎಸ್‌ನ ಶಿವಣ್ಣವರ್ ಮತ್ತು ಬಹುಸಂಖ್ಯಾತ ಪಂಚಮಸಾಲಿ ಪಂಗಡದ ಪಕ್ಷೇತರ ಅಭ್ಯರ್ಥಿ ಡಾ.ಚಿತ್ತರಂಜನ್ ಕಲಕೋಟಿ ಮಧ್ಯೆ ನೇರ-ನಿಕಟ ಹೋರಾಟ ಆಯಿತು. ಸ್ವಜಾತಿ ಕುರುಬರ ಮತ್ತು ಮುಸಲ್ಮಾನರ ಮತಗಳನ್ನು ಏಕ ಗಂಟಿನಲ್ಲಿ ಪಡೆದ ಶಿವಣ್ಣವರ್ (35,399), ಕಲಕೋಟಿ (32,704) ಎದುರು ತಿಣುಕಾಡಿ ಅಂತೂ 2,695 ಮತದಂತರದಿಂದ ದಡಸೇರಿ ಎರಡನೇ ಬಾರಿ ಶಾಸಕನಾದರು.

ಯಡಿಯೂರಪ್ಪ ಮತ್ತು ಹಿಂದುತ್ವ

2004 ಅಸೆಂಬ್ಲಿ ಇಲೆಕ್ಷನ್ ಬರುವಾಗ ಯಡಿಯೂರಪ್ಪ ರಾಜ್ಯ ಲಿಂಗಾಯತರ ಸರ್ವೋಚ್ಛ ನಾಯಕನಾಗಿ ಗುರುತಿಸಿಕೊಂಡಿದ್ದರು; ಮತ್ತು ಧರ್ಮಕಾರಣ ಹಾವೇರಿಯನ್ನು ಪ್ರಭಾವಿಸತೊಡಗಿತ್ತು. ಅದೇ ವೇಳೆಗೆ ಕಾಂಗ್ರೆಸ್‌ನಲ್ಲಿ ಸಮರ್ಥ ಕ್ಯಾಂಡಿಡೇಟ್ ಇಲ್ಲದಿರುವುದನ್ನು ಲೆಕ್ಕಹಾಕಿ ಶಾಸಕ ಶಿವಣ್ಣವರ್ ಜೆಡಿಎಸ್‌ಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರಿದರು. ಬಿಜೆಪಿಯ ಅಸಲಿ ರಾಜಕಾರಣದಲ್ಲಿ ನಿಪುಣರಾಗಿದ್ದ ಗಾಣಿಗ ಲಿಂಗಾಯತ ಸಮುದಾಯದ ಶಿವರಾಜ ಸಜ್ಜನರ್ ಕೇಸರಿ ಕ್ಯಾಂಡಿಡೇಟಾದರು. ಬಸವರಾಜ ಶಿವಣ್ಣವರ್ ಕಾಂಗ್ರೆಸ್ ಟಿಕೆಟ್ ಪಡೆಯಲು ಸಫಲರಾದರು. ಕೈ-ಕಮಲದ ನಡುವೆ ನೇರ-ನಿಕಟ ಕದನವೇ ನಡೆಯಿತು. ಬಿಜೆಪಿಯ ಸಜ್ಜನರ್ (53,482), ಕಾಂಗ್ರೆಸ್‌ನ ಶಿವಣ್ಣವರ್‌ರನ್ನು 2,196 ಮತಗಳಿಂದ ಮಣಿಸಿದರು.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಕುಂದಗೋಳ: ಸಮನ್ವಯತೆ-ಸಂಗೀತದ ನೆಲೆವೀಡಲ್ಲಿ ಹಿಂದುಳಿದಿರುವಿಕೆ-ಧರ್ಮಕಾರಣ ಜುಗಲ್‌ಬಂದಿ!

ಹಾವೇರಿ 2008ರಲ್ಲಿ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಯಿತು. ಅದುವರೆಗೆ ಮೀಸಲು ಕ್ಷೇತ್ರವಾಗಿದ್ದ ಪಕ್ಕದ ಬ್ಯಾಡಗಿಯಲ್ಲಿ ಶಾಸಕರಾಗಿದ್ದ ರುದ್ರಪ್ಪ ಲಮಾಣಿ ಕಾಂಗ್ರೆಸ್ ಅಭ್ಯರ್ಥಿಯಾಗಲು ಕಟಿಪಿಟಿ ನಡೆಸಿದರು. ಆದರೆ ಸ್ಥಳೀಯ ಶಾರದಾ ಬೆಟಗೇರಿಗೆ ಕಾಂಗ್ರೆಸ್ ಅವಕಾಶ ಕೊಟ್ಟಿತು. ರುದ್ರಪ್ಪ ಲಮಾಣಿ ಬಂಡೆದ್ದು ತೊಡೆತಟ್ಟಿದರು. ಬಿಜೆಪಿ ಬ್ಯಾಡಗಿ ಮೂಲದ ನೆಹರು ಓಲೇಕಾರ್‌ಗೆ ಆಖಾಡಕ್ಕೆ ಇಳಿಸಿತು. ಕಾಂಗ್ರೆಸ್ ಓಟ್ ಬ್ಯಾಂಕ್ ರುದ್ರಪ್ಪ ಹಾಗು ಶಾರದಾ ನಡುವೆ ಹಂಚಿಕೆಯಾದರೆ ಬಹುಸಂಖ್ಯಾತ ಪಂಚಮಸಾಲಿ ಮತ ಸಾರಾಸಗಟಾಗಿ ಬಿಜೆಪಿಗೆ ಒಲಿಯಿತು. ಬಿಜೆಪಿಯ ಓಲೇಕಾರ್ (41,068) ಹತ್ತಿರದ ಪ್ರತಿಸ್ಪರ್ಧಿ ಪಕ್ಷೇತರ ಹುರಿಯಾಳು ಲಮಾಣಿಯವರನ್ನು (23,002) ಸೋಲಿಸಿ ಶಾಸಕನಾದರು.

ಶಾಸಕ ಓಲೇಕಾರ್ 2013ರಲ್ಲಿ ಯಡಿಯೂರಪ್ಪರ ಕೆಜೆಪಿ ಹುರಿಯಾಳಾಗಿ ಯುದ್ಧರಂಗಕ್ಕೆ ಧುಮುಕಿದರು. ಕಾಂಗ್ರೆಸ್ ಮಾಜಿ ಶಾಸಕ ರುದ್ರಪ್ಪ ಲಮಾಣಿಗೆ ಮಣೆಹಾಕಬೇಕಾಗಿ ಬಂತು. ಓಲೇಕಾರ್‌ಗೆ ಯಡಿಯೂರಪ್ಪರ ಬಲವೇನೋ ಇತ್ತು; ಆದರೆ ಅದಕ್ಕಿಂತ ಪ್ರಬಲವಾದ ಆಂಟಿ ಇನ್‌ಕಂಬೆನ್ಸಿ ಸುತ್ತಿಕೊಂಡಿತ್ತು. ಹೀಗಾಗಿ ಕಾಂಗ್ರೆಸ್‌ನ ಲಮಾಣಿ 83,119 ಮತ ಪಡೆದರು. ಓಲೆಕಾರ್ 30,208 ಮತಗಳ ಆಗಾಧ ಅಂತರದ ಸೋಲು ಅನುಭವಿಸಿದರು! 2018ರಲ್ಲಿ ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಗುತ್ತಾರೆಂದು ಲಿಂಗಾಯತರು ಒಳ ಪಂಗಡ ಬೇಧ ಬಿಟ್ಟು ಒಂದಾಗಿದ್ದರು; ಜತೆಗೆ ಕೋಮು ಧ್ರುವೀಕರಣದ ತಾಕತ್ತೂ ಸೇರಿಕೊಂಡಿತ್ತು. ಯಡಿಯೂರಪ್ಪರಿಗಾಗಿ ಲಿಂಗಾಯತರು ಓಲೇಕಾರ್ ಮೇಲಿನ ಮುನಿಸು ಮರೆತಿದ್ದರು. ಹೀಗಾಗಿ ಓಲೇಕಾರ್ 86,565ರಷ್ಟು ದೊಡ್ಡ ಸಂಖ್ಯೆಯ ಮತ ಪಡೆಯಲು ಸಾಧ್ಯವಾಗಿ ಕಾಂಗ್ರೆಸ್‌ನ ಲಮಾಣಿಯವರನ್ನು 11,304 ಮತದಂತರದಿಂದ ಸೋಲಿಸುವಂತಾಯಿತೆಂಬ ವಿಶ್ಲೇಷಣೆಗಳು ಹಾವೇರಿಯಲ್ಲಿ ಕೇಳಿರುತ್ತದೆ.

ಕ್ಷೇತ್ರದ ಕತೆ-ವ್ಯಥೆ

ಪ್ರಗತಿ-ಅಭಿವೃದ್ಧಿಯ ಹಲವು ಕನಸುಗಳನ್ನು ಹೊತ್ತುಕೊಂಡು ಜಿಲ್ಲಾ ರಚನೆಗಾಗಿ ಹಾವೇರಿ ಮತ್ತದರ ಸುತ್ತಲಿನ ಮಂದಿ ಛಲದ ಹೋರಾಟ ಮಾಡಿದ್ದರು. 1972ರಲ್ಲೇ ಪ್ರತ್ಯೇಕ ಜಿಲ್ಲೆಗಾಗಿ ಕೂಗೆದ್ದಿತ್ತು. 25 ವರ್ಷಗಳ ಸುದೀರ್ಘ ಪ್ರತಿಭಟನೆಯ ಫಲವಾಗಿ ಹಾವೇರಿ ಜಿಲ್ಲೆಯೇನೋ ಅಸ್ತಿತ್ವಕ್ಕೆ ಬಂತು. ಆದರೆ ಜಿಲ್ಲೆಯಾಗಿ ಎರಡೂವರೆ ದಶಕ ಕಳೆದರೂ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿಯೇ ಉಳಿದಿದೆ! ಹಾವೇರಿ ತಾಲೂಕು ಅಥವಾ ಹಾವೇರಿ ವಿಧಾನಸಭಾ ಕ್ಷೇತ್ರದ ಗೋಳಂತೂ ಹೇಳತೀರದು; ಜಿಲ್ಲಾ ಕೇಂದ್ರ ಹಾವೇರಿ ನಗರವೂ ಒಳಗೊಂಡಂತೆ ಇಡೀ ವಿಧಾನಸಭಾ ಕ್ಷೇತ್ರ ದೊಡ್ಡದೊಂದು ಹಳ್ಳಿಯಂತೆ ಕಾಣಿಸುತ್ತದೆ.

ಹಿಂದುಳಿದಿರುವಿಕೆಯ ಸಾಕ್ಷಾತ್ ದರ್ಶನ ಆಗಬೇಕೆಂದಿದ್ದರೆ ಹಾವೇರಿ ತಾಲೂಕಿನ ಎಲ್ಲಾದರೂ ನಾಲ್ಕು ಹೆಜ್ಜೆ ಹಾಕಿದರೆ ಸಾಕೆಂಬ ಮಾತು ಸಾಮಾನ್ಯವಾಗಿದೆ! ಕುಡಿಯುವ ನೀರು, ರಸ್ತೆ ಸಂಪರ್ಕ, ಸಾರಿಗೆ, ಆರೋಗ್ಯ, ಶಿಕ್ಷಣ, ವಸತಿಯಂಥ ಕನಿಷ್ಠ ಮೂಲ ಸೌಕರ್ಯಕ್ಕಾಗಿ ಜನರು ಪರಿತಪಿಸುತ್ತಿದ್ದಾರೆ; ಜಿಲ್ಲಾ ಮಟ್ಟದ ಸರಕಾರಿ ಕಚೇರಿಗಳು ಎಲ್ಲೆಲ್ಲಿಯೊ ಚದುರಿಹೋಗಿ ಜನರು ಪಡಬಾರದ ಪಾಡು ಪಡುತ್ತಿದ್ದಾರೆ. ಜಿಲ್ಲಾ ಕೇಂದ್ರವೇ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ಗಬ್ಬುನಾರುತ್ತಿದೆ.

ಯಡಿಯೂರಪ್ಪ

ಶಾಶ್ವತ ಕುಡಿಯುವ ನೀರು ಮತ್ತು ಒಳ ಚರಂಡಿಗಾಗಿ ಕೋಟ್ಯಂತರ ರೂ. ವ್ಯಯಿಸಿದರೂ ಹಲವು ವರ್ಷಗಳಿಂದ ಯೋಜನೆ ಮಾತ್ರ ಸಾಕಾರಗೊಳ್ಳುತ್ತಿಲ್ಲವೇಕೆಂಬುದು ಬಿಡಿಸದ ಒಗಟಾಗಿ ಜನರನ್ನು ಕಾಡುತ್ತಲೇ ಇದೆ. ಕೋಟಿಕೋಟಿಗಳ ಜಿಲ್ಲಾಸ್ಪತ್ರೆ ಇದ್ದರೂ ಪ್ರಯೋಜನ ಇಲ್ಲದಾಗಿದೆ. ಅಗತ್ಯ ವೈದ್ಯರು-ಸೌಲಭ್ಯ ಇಲ್ಲದಿರುವುದರಿಂದ ಜನರು ಉತ್ತಮ ಚಿಕಿತ್ಸೆಗಾಗಿ ಹುಬ್ಬಳ್ಳಿ, ದಾವಣಗೆರೆಯತ್ತ ಹೋಗುವಂತಾಗಿದೆ! ಶೈಕ್ಷಣಿಕ ಸೌಲಭ್ಯವೂ ಅಷ್ಟಕ್ಕಷ್ಟೇ ಆಗಿರುವ ಹಾವೇರಿಯ ಯಾವ ಕ್ಷೇತ್ರದಲ್ಲೂ ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಕೈಗಾರಿಕೀಕರಣಕ್ಕಾಗಿ ಜನರು ಹಂಬಲಿಸುತ್ತಿದ್ದಾರೆ.

ಹಾವೇರಿ ಕೃಷಿ ಪ್ರಧಾನ ತಾಲೂಕು; ಹಳ್ಳಿಗಳ ತುತ್ತಿನ ಚೀಲ ತುಂಬುವುದೆ ವ್ಯವಸಾಯದಿಂದ; ಕೃಷಿಯೆ ಹಾವೇರಿಯ ಆರ್ಥಿಕ ಚೈತನ್ಯ. ಆದರೂ ಅನ್ನದಾತರಿಗೆ ಸೇವೆ-ಸೌಲಭ್ಯ ಮಾತ್ರ ಸಮರ್ಪಕವಾಗಿ ಸಿಗುತ್ತಿಲ್ಲ. ಅನಿಯಮಿತ ವಿದ್ಯುತ್ ಪೂರೈಕೆಯಿಂದ ಹೊಲಗಳಿಗೆ ನೀರೊದಗಿಸಲಾಗುತ್ತಿಲ್ಲ.

ಜಿಲ್ಲೆಯಾಗುತ್ತಲೆ-ಅಂದರೆ 25 ವರ್ಷಗಳ ಹಿಂದೆಯೆ-ರೈತರಿಗೆ ಆರ್ಥಿಕ ಸೌಲಭ್ಯ ಒದಗಿಸುವ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಆಗಬೇಕಿತ್ತು; ಡಿಸಿಸಿ ಬ್ಯಾಂಕಾದರೆ ರೈತರು ಸಬಲರಾಗಿ ಅವರನ್ನು ಯಾಮಾರಿಸುವ ರಾಜಕಾರಣ ನಡೆಯದೆಂಬ ದುರಾಲೋಚನೆಯಿಂದ ಅಧಿಕಾರಸ್ಥರು ಅದಕ್ಕೆ ಅಡ್ಡಗಾಲು ಹಾಕುತ್ತಿದ್ದಾರೆ. ಪ್ರತ್ಯೇಕ ಹಾಲು ಒಕ್ಕೂಟ ಮಾಡದೆಯೂ ರೈತರನ್ನು ಸತಾಯಿಸಲಾಯಿತು. ಇತ್ತೀಚೆಗಷ್ಟೆ ಹಾಲು ಒಕ್ಕೂಟ ಸ್ಥಾಪಿಸಲಾಗಿದೆಯಾದರೂ ಅದಕ್ಕೆ ಬೇಕಾದ ಮೂಲ ಸೌಕರ್ಯ ಒದಗಿಸುತ್ತಿಲ್ಲ; ಕೃಷಿ ಉತ್ಪನ್ನಕ್ಕೆ ಸಂಬಂಧಿಸಿದ ಹಲವು ಕೈಗಾರಿಕೆ-ಉದ್ಯಮ ತರುವ ಅವಕಾಶವಿದ್ದರೂ ಆಳುವ ಮಂದಿ ಬುದ್ಧಿಪೂರ್ವಕವಾಗೆ ಸುಮ್ಮನಿದ್ದಾರೆ. ಸಂಗೂರು ಸಕ್ಕರೆ ಕಾರ್ಖಾನೆ ಇದ್ದರೂ ರೈತರ ಪಾಲಿಗೆ ಇಲ್ಲದಂತಾಗಿದೆ. ಕಬ್ಬು ಮಾರಿದ ಬಾಕಿ ಹಣ ರೈತರಿಗೆ ಸಿಗುತ್ತಿಲ್ಲ; ಕಬ್ಬು ನುರಿಯುವ ಕೆಲಸವೂ ಸರಿಯಾಗಿ ಆಗುತ್ತಿಲ್ಲ. ಮೆಕ್ಕೆ ಜೋಳ ಸಂರಕ್ಷಣೆಗೆಂದು ಸ್ಥಾಪಿಸಿದ್ದ ಸೈಲೋ ಘಟಕ ನಿಷ್ಪ್ರಯೋಜಕವಾಗಿದೆ ಎಂದು ಪ್ರಜ್ಞಾವಂತ ರೈತರೊಬ್ಬರು ’ನ್ಯಾಯಪಥ’ಕ್ಕೆ ರೈತಾಪಿ ವರ್ಗದ ಸಂಕಟ ವಿವರಿಸಿದರು.

ತುಂಗಾ ಮೇಲ್ದಂಡೆ ಯೋಜನೆಯ ಮುಖ್ಯ ಕಾಲುವೆ ಆಗಿದ್ದರೂ ಹೊಲಗಳಿಗೆ ನೀರು ಹರಿಸುವ ಮರಿ ಕಾಲುವೆಗಳ (ಬಸಿ ಕಾಲುವೆ) ಅಭಿವೃದ್ಧಿ ಆಗಿಲ್ಲ. ಇದಕ್ಕಿಂತ ಆಘಾತಕಾರಿಯೆಂದರೆ ಯೋಜನೆಗಾಗಿ ಸ್ವಾಧೀನಪಡಿಸಿಕೊಂಡ ರೈತರ ಭೂಮಿಗೆ ಇಪ್ಪತ್ತು ವರ್ಷದಿಂದ ಪರಿಹಾರ ಸಿಕ್ಕಿಲ್ಲ. ನೀರೂ ಇಲ್ಲ; ಪರಿಹಾರವೂ ಇಲ್ಲದಾಗಿದೆ. ಇದಕ್ಕೆ ಸ್ಥಳೀಯ ಶಾಸಕ-ಸಂಸದರ ಹೊಣೆಗೇಡಿತನವೆ ಕಾರಣವೆಂದು ರೈತರು ದೂರುತ್ತಾರೆ. ಇಡೀ ತಾಲೂಕಿನಲ್ಲಿ ನೀರಿಗೆ ಹಾಹಾಕಾರವಿದೆ. ಬೇಸಿಗೆಯಲ್ಲಿ ತುಂಗಭದ್ರಾ ನದಿಯಲ್ಲಿ ನೀರು ಕಡಿಮೆಯಾದಾಗ ನಾಲೆಯಲ್ಲಿ ನೀರಿನ ಪ್ರಮಾಣವೂ ಕಮ್ಮಿಯಾಗಿ ಹಾವೇರಿ-ಗುತ್ತಲ ಪ್ರದೇಶದಲ್ಲಿ ಕುಡಿಯುವ ನೀರಿಗೆ ತತ್ವಾರ ಬರುತ್ತದೆ. ಆಗ 15-20 ದಿನಕ್ಕೊಮ್ಮೆ ಜೀವಜಲ ಸಿಕ್ಕರೆ ಅದೇ ದೊಡ್ಡದು. ಮಳೆಗಾಲದಲ್ಲಿ ಉಕ್ಕಿ ಹರಿದು ವ್ಯರ್ಥವಾಗುವ ವರದೆಯ ನೀರು ಸಂಗ್ರಹಕ್ಕೆ ಒಂದು ಬ್ಯಾರೇಜ್ ಅಥವಾ ಆಣೆಕಟ್ಟೆ ಕಟ್ಟಿದ್ದರೆ ತಾಲೂಕಿಗೆ ನೀರಿನ ಕೊರತೆ ನೀಗುತಿತ್ತು. ಇದಕ್ಕೆಲ್ಲ ಆಳುವವರಲ್ಲಿ ಇಚ್ಛಾ ಶಕ್ತಿ ಬೇಕು ಎಂದು ಕ್ಷೇತ್ರದ ಜನರು ಆಕ್ರೋಶದಿಂದ ಹೇಳುತ್ತಾರೆ.

ರುದ್ರಪ್ಪ ಲಮಾಣಿ

ತಾಲೂಕು ಕೇಂದ್ರ ತುಂಬ ದೂರವಾಗುವುದರಿಂದ ಗುತ್ತಲ ತಾಲೂಕು ರಚಿಸುವಂತೆ ಸುತ್ತಲಿನ ಹಳ್ಳಿಗರು ಹಲವು ವರ್ಷದಿಂದ ಆಗ್ರಹಿಸುತ್ತಲೆ ಇದ್ದಾರೆ. ಪಟ್ಟಣ ಪಂಚಾಯ್ತಿ ಪ್ರದೇಶವಾದ ಗುತ್ತಲ ತಾಲೂಕಾಗಲು ಅರ್ಹ ಎಂಬ ಅಂಶ ಎಂ.ಬಿ.ಪ್ರಕಾಶ್ ವರದಿಯಲ್ಲೂ ಇತ್ತೆನ್ನಲಾಗುತ್ತಿದೆ. ಹೈಸ್ಕೂಲು-ಪಿಯು-ಡಿಗ್ರಿ ಕಾಲೇಜು ಅವಶ್ಯವಾಗಿರುವ ಗುತ್ತಲ ಭಾಗಕ್ಕೆ ಅಗ್ನಿಶಾಮಕ ಠಾಣೆ ಜರೂರಾಗಿ ಬೇಕಾಗಿದೆ. ಮೆಕ್ಕೆ ಜೋಳ ಮತ್ತು ಕಬ್ಬಿನ ಗದ್ದೆಗೆ ಮೇಲಿಂದ ಮೇಲೆ ಬೆಂಕಿ ಬೀಳುವುದರಿಂದ ಅಗ್ನಿಶಾಮಕ ಠಾಣೆ ಅನಿವಾರ್ಯವಾಗಿದೆ; ಕಳೆದ ನವೆಂಬರ್ 1ರಿಂದ 27ರವರೆಗೆ 12 ಬೆಂಕಿ ಅವಘಡಗಳಾಗಿದೆ. ಭೂ ಅಭಿವೃದ್ಧಿ ಬ್ಯಾಂಕ್ ಮತ್ತು ಹಾವನೂರು-ಹಂಸಿ ಸೇತುವೆ ಬಹು ದಿನದ ಬೇಡಿಕೆ. ಸದ್ರಿ ಸೇತುವೆಯಾದರೆ 15-20 ಕಿ.ಮೀ ಸುತ್ತಿ ಬಳಸಿ ಹಾವೇರಿ ತಲುಪುವುದು ತಪ್ಪುತ್ತದೆ. ಈ ಸಮಸ್ಯೆಗಳ ಪರಿಹಾರ ತಮಗೆ ಸಂಬಂಧಿಸಿದ್ದಲ್ಲ ಎಂಬಂತೆ ಶಾಸಕ-ಸಂಸದರಿದ್ದಾರೆ ಎಂದು ರೈತರು ಹೇಳುತ್ತಾರೆ.

ಟಿಕೆಟ್‌ಗಾಗಿ ಲಾಗ!

ಹಾವೇರಿ ಕಾಂಗ್ರೆಸ್ ಮತ್ತು ಬಿಜೆಪಿಯ ಮುಖಾಮುಖಿಯ ಆಖಾಡ! ಎರಡೂ ಪಾರ್ಟಿಯ ಬೇರುಗಳು ಕ್ಷೇತ್ರದಾದ್ಯಂತ ಸಾಕಷ್ಟು ಆಳಕ್ಕಿಳಿದಿವೆ. ಹೀಗಾಗಿ ಶಾಸಕನಾಗುವ ಕನಸು ಕಟ್ಟಿಕೊಂಡವರ ಟಿಕೆಟ್ ಪೈಪೋಟಿ ಕಾಂಗ್ರೆಸ್-ಬಿಜೆಪಿಯಲ್ಲಿ ಬಿರುಸಾಗುತ್ತಿದೆ. ಮಾಜಿ ಸಿಎಂ ಯಡಿಯೂರಪ್ಪರ ಕಟ್ಟಾ ಬೆಂಬಲಿಗ ಹಾಲಿ ಶಾಸಕ ನೆಹರು ಓಲೆಕಾರ್ ತಮ್ಮ ಗಾಡ್‌ಫಾದರ್ ಮೂಲಕ ಮತ್ತೆ ಬಿಜೆಪಿ ಅಭ್ಯರ್ಥಿಯಾಗುವ ಪ್ರಯತ್ನ ನಡೆಸಿದ್ದಾರೆ; ಅದಕ್ಕೆ ಸಮಾನಾಂತರವಾಗಿ ಕಟ್ಟಾ ಬಿಜೆಪಿಗರು ಓಲೇಕಾರ್‌ಗೆ ಟಿಕೆಟ್ ತಪ್ಪಿಲು ಹವಣಿಸುತ್ತಿದ್ದಾರೆ. ಟಿಕೆಟ್ ಸಿಕ್ಕರೂ ಬಿಜೆಪಿಗರೆ ಸೋಲಿಸುತ್ತಾರೆ ಎಂಬ ಚರ್ಚೆ ಹಾವೇರಿಯ ರಾಜಕೀಯ ಕಟ್ಟೆಯಲ್ಲಿದೆ. ಸಿಡಿಮಿಡಿ ಸ್ವಭಾವದ ಓಲೇಕಾರ್ ಬಗ್ಗೆ ಅಧಿಕಾರಿಗಳು-ಬಿಜೆಪಿ ಕಾರ್ಯಕರ್ತರಷ್ಟೆ ಅಲ್ಲ, ಜನಸಾಮಾನ್ಯರಿಗೂ ರೇಜಿಗೆ ಮೂಡಿದೆ. ಶಾಸಕರು ಮನುಷ್ಯ ಸಂಬಂಧಗಳನ್ನು ಕಟ್ಟಿಕೊಳ್ಳಲು ವಿಫಲರಾಗಿದ್ದಾರೆ; ನೊಂದವರಿಗೆ ಸ್ಪಂದಿಸುವುದಿಲ್ಲ; ಅಭಿವೃದ್ಧಿ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ; ತಮ್ಮ ಹಿಂಬಾಲಕರಿಗೆ ಕಮಿಷನ್ ಆಧಾರದಲ್ಲಿ ಕಾಮಗಾರಿ ಗುತ್ತಿಗೆ ಕೊಡಿಸಿ ಕಳಪೆ ಕೆಲಸಕ್ಕೆ ಕಾರಣರಾಗಿದ್ದಾರೆ ಎಂಬ ಆರೋಪ ಜೋರಾಗಿ ಕ್ಷೇತ್ರದಾದ್ಯಂತ ಕೇಳಿಬರುತ್ತದೆ.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ನವಲಗುಂದ: ರೈತ ಬಂಡಾಯದ ನೆಲದಲ್ಲಿ ಜಾತಿ ಪ್ರತಿಷ್ಠೆಯ ಪೈಪೋಟಿ!

ತಮಗೆ ಮಂತ್ರಿ ಮಾಡಲಿಲ್ಲವೆಂದು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದ ಓಲೇಕಾರ್ ಆ ನಂತರ ಸರಕಾರವನ್ನಷ್ಟೇ ಅಲ್ಲ, ಸಾಕ್ಷಾತ್ ಮುಖ್ಯಮಂತ್ರಿಯವರನ್ನೇ ಮೂದಲಿಸಿ ಸುದ್ದಿಯಾಗಿದ್ದರು! ಒರಟು ನಡವಳಿಕೆಯಿಂದ ಪಕ್ಷದ ಹಿರಿಯ-ಕಿರಿಯರನ್ನು ಎದುರು ಹಾಕಿಕೊಂಡಿರುವುದು ಮತ್ತು ಆಡಳಿತ ವಿರೋಧಿ ಅಲೆಯಿಂದ ಕುಗ್ಗಿ ಹೋಗಿರುವ ಓಲೇಕಾರ್‌ಗೆ ಬಿಜೆಪಿಯಿಂದ ಸ್ಪರ್ಧಿಸುವ ಅವಕಾಶ ಸಿಗುವ ಸಾಧ್ಯತೆ ಕ್ಷೀಣಿಸುತ್ತಿರುವುದರಿಂದ ಮೂರ್‍ನಾಲ್ಕು ಮಂದಿ ಟಿಕೆಟ್‌ಗೆ ತಂತ್ರಗಾರಿಕೆ ಶುರುಹಚ್ಚಿ ಕೊಂಡಿದ್ದಾರೆನ್ನಲಾಗಿದೆ. ಹಾವೇರಿಯಲ್ಲಿ ಗ್ರೇಡ್-2 ತಹಶೀಲ್ದಾರ್ ಆಗಿರುವ ಗವಿಸಿದ್ಧ ದ್ಯಾಮಣ್ಣವರ್‌ಗೆ ಕ್ಯಾಂಡಿಡೇಟ್ ಮಾಡುವ ಯೋಚನೆಯಲ್ಲಿದ್ದಾರೆ ಆರೆಸ್ಸೆಸ್ ಸರದಾರರು; ಕೇಸರಿ ಪಕ್ಷದ ಅಭ್ಯರ್ಥಿಯಾಗುವ ಅವಕಾಶ ಸಿಗಬಹುದೆಂಬ ನಿರೀಕ್ಷೆಯಲ್ಲಿ ಕಾಂಗ್ರೆಸ್ ಬಿಟ್ಟುಹೋಗಿದ್ದ ಜಿಪಂ ಮಾಜಿ ಅಧ್ಯಕ್ಷ ಪರಮೇಶಪ್ಪ ಮೇಗಳಮನಿ ಮತ್ತು ನಿವೃತ್ತ ಮುನ್ಸಿಪಾಲಿಟಿ ನೌಕರ ವೆಂಕಟೇಶ್ ನಾರಾಯಣಿ ಸಹ ಟಿಕೆಟ್ ಟ್ಯಾಕ್ಟಿಕ್ ಮಾಡುತ್ತಿದ್ದಾರೆಂಬ ಬಾತ್ಮಿ ಬಿಜೆಪಿ ಬಿಡಾರದಿಂದ ಬರುತ್ತಿದೆ.

ಕಾಂಗ್ರೆಸ್ ಟಿಕೆಟ್‌ಗಾಗಿ ಮಾಜಿ ಮಂತ್ರಿ ರುದ್ರಪ್ಪ ಲಮಾಣಿ ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಂ.ಹಿರೇಮಠ ಮಧ್ಯೆ ಪ್ರಬಲ ಪೈಪೋಟಿ ಏರ್‍ಪಟ್ಟಿದೆ ಎನ್ನಲಾಗುತ್ತಿದೆ. ಸಿದ್ದರಾಮಯ್ಯ ಸರಕಾರದಲ್ಲಿ ಮಂತ್ರಿಯಾಗಿದ್ದ ಲಮಾಣಿ ಜನಬಳಕೆಯ ಸರಳ-ಸೌಮ್ಯ ಕೆಲಸಗಾರ ಎಂಬ ಸದಭಿಪ್ರಾಯ ಕ್ಷೇತ್ರದಲ್ಲಿದೆ. ಲಮಾಣಿ ತಾನೆ ಕ್ಯಾಂಡಿಡೇಟೆಂದು ತೋರಿಸಿಕೊಳ್ಳುತ್ತ ಕ್ಷೇತ್ರದಾದ್ಯಂತ ಓಡಾಟ ಆರಂಭಿಸಿದ್ದಾರೆ. ಹಾವೇರಿಯಲ್ಲಿ ಅಯ್ನೋರು (ಲಿಂಗಾಯತ) ಎಂದು ಗುತಿರುತಿಸಲ್ಪಡುವ ಹಿರೇಮಠ ಬೇಡಜಂಗಮ (ಎಸ್‌ಸಿ) ಜಾತಿ ಪ್ರಮಾಣ ಪತ್ರ ಪಡೆದು ಮೀಸಲು ಕ್ಷೇತ್ರದಲ್ಲಿ ಶಾಸಕನಾಗುವ ಯೋಚನೆಯಲ್ಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಸದ್ಯದ ಪರಿಸ್ಥಿತಿಯಲ್ಲಿ ಹಾವೇರಿ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಸುತ್ತು ಹಾಕಿದರೆ ಬಿಜೆಪಿ ಬಗ್ಗೆ ಮತದಾರರು ಬೇಸರದಲ್ಲಿರುವುದು ಸ್ಪಷ್ಟವಾಗುತ್ತದೆ; ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಯಾರೆ ನಿಂತರೂ ಗೆಲುವು ಕಾಂಗ್ರೆಸಿನದು; ಚುನಾವಣೆ ಎದುರಿಸುವ ತಂತ್ರಗಾರಿಕೆಯಲ್ಲಿ ಪಳಗಿರುವ ಶಾಸಕ ಓಲೇಕಾರ್ ಬಿಜೆಪಿ ಹುರಿಯಾಳಾದರೆ ಸ್ವಲ್ಪ ಪೈಪೋಟಿ ಆಗುತ್ತದೆ; ಉಳಿದ ಯಾರೇ ಬಿಜೆಪಿ ಅಭ್ಯರ್ಥಿಯಾದರೂ ಕಾಂಗ್ರೆಸ್ ದಿಗ್ವಿಜಯ ಸಾಧಿಸುತ್ತದೆ ಎಂದು ರಾಜಕೀಯ ’ಗಣಿತಜ್ಞರು’ ಅಭಿಪ್ರಾಯಪಡುತ್ತಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...