Homeಕರ್ನಾಟಕಅವಮಾನ ತಾಳಲಾರದೆ ದಲಿತ ಯುವಕನ ಆತ್ಮಹತ್ಯೆ ಪ್ರಕರಣ: ಪೆತ್ತಾಂಡ್ಲಹಳ್ಳಿಯಿಂದ ಯಶಸ್ವಿ ಬೈಕ್ ರ್‍ಯಾಲಿ

ಅವಮಾನ ತಾಳಲಾರದೆ ದಲಿತ ಯುವಕನ ಆತ್ಮಹತ್ಯೆ ಪ್ರಕರಣ: ಪೆತ್ತಾಂಡ್ಲಹಳ್ಳಿಯಿಂದ ಯಶಸ್ವಿ ಬೈಕ್ ರ್‍ಯಾಲಿ

- Advertisement -
- Advertisement -

ಬೈಕ್‌ನಲ್ಲಿ ಓವರ್‌ಟೇಕ್ ಮಾಡಿದ ಎಂಬ ಕ್ಷುಲ್ಲಕ ಕಾರಣಕ್ಕೆ ದಲಿತ ಯುವಕನ ಬೈಕ್ ಮತ್ತು ಮೊಬೈಲ್ ಕಿತ್ತುಕೊಂಡು ಸವರ್ಣೀಯರು ಮರಕ್ಕೆ ಕಟ್ಟಿ ಥಳಿಸಿದ್ದರಿಂದ ಅವಮಾನ ತಾಳಲಾರದೆ ದಲಿತ ಯುವಕ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು (ಸೋಮವಾರ) ಬೈಕ್‌ ರ್‍ಯಾಲಿ ನಡೆಸಲಾಗಿದೆ.

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಬೇವಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿತ್ತು. ಬೇವಹಳ್ಳಿಯ ಉದಯ್ ಕಿರಣ್ ಸಾವಿಗೆ ಶರಣಾಗಿದ್ದರು. ಆತನ ಮೇಲೆ ಪೆತಾಂಡ್ಲಹಳ್ಳಿ ಗ್ರಾಮದ ಕೆಲವು ಸವರ್ಣೀಯರು ಹಲ್ಲೆ ನಡೆಸಿದ್ದರು. ಇದರ ಹಿನ್ನೆಲೆಯಲ್ಲಿ ಆರೋಪಿಗಳ ಸ್ಥಳವಾದ ಪೆತಾಂಡ್ಲಹಳ್ಳಿಯಿಂದ ಹಿಡಿದು ಕೋಲಾರ ಜಿಲ್ಲಾಧಿಕಾರಿ ಕಚೇರಿಯವರೆಗೆ ದಲಿತ ಹಾಗೂ ಪ್ರಗತಿಪರ ಸಂಘಟನೆಗಳು ಬೈಕ್‌ ರ್‍ಯಾಲಿ ನಡೆಸಿವೆ.

“ಬೈಕ್‌ ರ್‍ಯಾಲಿ ಯಶಸ್ವಿಯಾಗಲಿ, ನೊಂದ ಕುಟುಂಬಕ್ಕೆ ನ್ಯಾಯ ಸಿಗಲೇಬೇಕು, ನೊಂದ ಕುಟುಂಬಕ್ಕೆ ಪರಿಹಾರ ಕೊಡಲೇಬೇಕು” ಎಂಬ ಘೋಷಣೆಗಳನ್ನು ರಸ್ತೆಯುದ್ಧಕ್ಕೂ ಕೂಗಲಾಯಿತು.

ಪೆತ್ತಾಂಡ್ಲಹಳ್ಳಿಯಿಂದ ಪ್ರಾರಂವಾಗಿರುವ ರ್‍ಯಾಲಿಯಲ್ಲಿ ಸ್ವಯಂಪ್ರೇರಿತರಾಗಿ ಪ್ರತಿಯೊಬ್ಬರು ಪಾಲ್ಗೊಳ್ಳಬೇಕು. ಜಾತಿ, ಅಸ್ಪೃಶ್ಯತೆ ವಿರುದ್ಧ ಪ್ರತಿರೋಧ ತೋರಿಸುವ ರ್‍ಯಾಲಿಯಲ್ಲಿ ಎಲ್ಲರೂ ಸೇರಿಕೊಳ್ಳಬೇಕು ಎಂದು ರ್‍ಯಾಲಿಯುದ್ಧಕ್ಕೂ ಮನವಿ ಮಾಡಲಾಯಿತು.

ಪೆತ್ತಾಂಡ್ಲಹಳ್ಳಿಯಲ್ಲಿ ಸಂವಿಧಾನಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಮತ್ತು ಮೃತ ಉದಯ್‌ ಕಿರಣ್ ಅವರ ಭಾವಚಿತ್ರವಿರುವ ಪ್ಲೆಕ್ಸ್‌ಗೆ ಉದಯ್ ಅವರ ತಂದೆ, ತಾಯಿ ಹಾಗೂ ಸಹೋದರರು ಮಾಲಾರ್ಪಣೆ ಮಾಡಿದರು.

“ನಮ್ಮಲ್ಲಿಲ್ಲ ಹಿಂದೂ ರಕ್ತ, ನಮ್ಮಲ್ಲಿಲ್ಲ ಕ್ರೈಸ್ತ ರಕ್ತ, ನಮ್ಮಲ್ಲಿಲ್ಲ ಮುಸ್ಲಿಂ ರಕ್ತ, ನಮ್ಮಲ್ಲಿಲ್ಲ ಒಕ್ಕಲಿಗರ ರಕ್ತ, ನಮ್ಮಲ್ಲಿಲ್ಲ ರೆಡ್ಡಿ ರಕ್ತ, ನಮ್ಮಲ್ಲಿಲ್ಲ ದಲಿತ ರಕ್ತ, ನಮ್ಮಲ್ಲಿರುವುದು ಒಂದೇ ರಕ್ತ- ಅದುವೇ ಮಾನವ ಕೆಂಪು ರಕ್ತ. ದಲಿತರು ಕೂಡ ಮನುಷ್ಯರು, ಮನುಷ್ಯ ಜಾತಿ ಒಂದೇ, ಜಾತಿ ಧರ್ಮಗಳನ್ನು ಬಿಟ್ಟು ಮಾನವರಾಗಿ ಬಾಳೋಣ” ಎಂಬ ಸಂದೇಶಗಳನ್ನು ಸಾರುವ ಮೂಲಕ ಜೈಭೀಮ್‌ ಘೋಷಣೆ ಮೊಳಗಿಸಲಾಯಿತು.

ಎಸ್‌ಎಫ್‌ಐ ಮುಖಂಡ ವಾಸುದೇವ ರೆಡ್ಡಿ ಮಾತನಾಡಿ, “ಅಸ್ಪೃಶ್ಯತೆಯ ನೋವುಂಡ ಉದಯ್‌ ಕುಟುಂಬ ಸೇಡು ತೀರಿಸಿಕೊಳ್ಳಬೇಕೆಂದು ಈ ಹೋರಾಟ ಮಾಡುತ್ತಿಲ್ಲ. ನಮ್ಮ ಮಗನಿಗಾದ ಅನ್ಯಾಯ ಈ ದೇಶದ ಯಾವುದೇ ಕುಟುಂಬಕ್ಕೆ ಆಗಬಾರದೆಂಬ ಕಾರಣಕ್ಕಾಗಿ ಈ ಕಾರ್ಯಕ್ರಮ ಆಯೋಜಿಸಿದ್ದೇವೆ. ಇದು ಪೆತ್ತಾಂಡ್ಲಹಳ್ಳಿ ಗ್ರಾಮಸ್ಥರ ವಿರುದ್ಧದ ಹೋರಾಟವಲ್ಲ. ನಾವೆಲ್ಲ ಜಾತಿ, ಧರ್ಮಗಳನ್ನು ಬಿಟ್ಟು ಮಾನವರಾಗಿ ಬದುಕೋಣ ಎಂಬ ಸಂದೇಶ ಸಾರುವುದಕ್ಕಾಗಿ ಡಿಸಿ ಕಚೇರಿ ಚಲೋ ಹಮ್ಮಿಕೊಂಡಿದ್ದೇವೆ. ಉದಯ್‌ ಕುಮಾರ್‌ ಕುಟುಂಬದ ಜೊತೆಗೆ ನೀವೆಲ್ಲರೂ ನಿಲ್ಲಬೇಕು” ಎಂದು ತಿಳಿಸಿದರು.

ದಲಿತ ಮುಖಂಡರಾದ ಮೆಕ್ಯಾನಿಕ್ ಸೀನಣ್ಣ ಅವರು ಕೆಂಪು ನಿಶಾನೆ ತೋರುವ ಮೂಲಕ ಬೈಕ್‌ ರ್‍ಯಾಲಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ನೊಂದ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಲು ಕಾರ್ಯಕ್ರಮ ಮಾಡುತ್ತಿದ್ದೇವೆ. ರ್‍ಯಾಲಿಯನ್ನು ಮಾಡಬಾರದು ಎಂದು ಕೆಲವರು ತೊಂದರೆಯನ್ನೂ ಕೊಟ್ಟರು. ಆದರೆ ಅನೇಕರು ಬೆಂಬಲ ನೀಡಿದರು” ಎಂದು ಹೇಳಿದರು.

ಪ್ರಕರಣದ ವಿವರ

ದಲಿತ ಯುವಕನ ಆತ್ಮಹತ್ಯೆಗೆ ಸಂಬಂಧಿಸಿದಂತೆ ಪೆತ್ತಾಂಡ್ಲಹಳ್ಳಿಯ ಸವರ್ಣೀಯರಾದ ಗೋಪಾಲಕೃಷ್ಣಪ್ಪ, ಶಿವರಾಜ್ ಬಿನ್ ಮುನಿವೆಂಕಟಪ್ಪ, ಗೋಪಾಲಕೃಷ್ಣಪ್ಪ ಬಿನ್ ಮುನಿಸ್ವಾಮಿ, ಮುನಿವೆಂಕಟಪ್ಪ ಬಿನ್ ಮುನಿಸ್ವಾಮಿ ಎಂಬುವವರ ಮೇಲೆ ದಲಿತ ದೌರ್ಜನ್ಯ ತಡೆ ಕಾಯ್ದೆ ಮತ್ತು ಐಪಿಸಿ ಸೆಕ್ಷನ್ 341, 34, 504, 306 ಮತ್ತು 323ರ ಅಡಿಯಲ್ಲಿ ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನವೆಂಬರ್ 30ರ ಸಂಜೆ ನಾಲ್ಕು ಗಂಟೆಯ ಸುಮಾರಿಗೆ ಮುಳಬಾಗಿಲು ತಾಲ್ಲೂಕಿನ ಬೈರಕೂರು ಹೋಬಳಿಯ ಪೆತಾಂಡ್ಲಹಳ್ಳಿ ಗ್ರಾಮದ ಸವರ್ಣೀಯ ಜನಾಂಗದ ರಾಜು ಬಿನ್ ಗೋಪಾಲಕೃಷ್ಣಪ್ಪ ರವರ ದ್ವಿಚಕ್ರ ವಾಹನವನ್ನು ಬೇವಹಳ್ಳಿಯ ಉದಯ್ ಕಿರಣ್ ಮತ್ತು ನಾಗರಾಜು ಓವರ್ ಟೇಕ್ ಮಾಡಿದರು ಎಂದು ಆರೋಪಿಸಿ ಬೈರಕೂರಿನಲ್ಲಿ ಉದಯ್ ಕಿರಣ್ ವಾಹನವನ್ನು ಅಡ್ಡಗಟ್ಟಿ ನಿಂದಿಸಿ, ಹಲ್ಲೆ ಮಾಡಲಾಗಿದೆ ಎಂದು ಮೃತ ಯುವಕನ ಸೋದರ ಮಾವ ನಾಗರಾಜು ಆರೋಪಿಸಿದ್ದರು.

ಆ ನಂತರವೂ ಸಹ ಕಾಡೆನಹಳ್ಳಿಯಿಂದ ವಾಪಸ್ಸು ಬರುತ್ತಿದ್ದ ಉದಯ್ ಕಿರಣ್ ಮತ್ತು ನಾಗರಾಜರನ್ನು ಮತ್ತೆ ಪೆತಾಂಡ್ಲಹಳ್ಳಿ ಗ್ರಾಮದ ಬಳಿ ರಾಜು ಬಿನ್ ಗೋಪಾಲಕೃಷ್ಣಪ್ಪ, ಶಿವರಾಜ್ ಬಿನ್ ಮುನಿವೆಂಕಟಪ್ಪ, ಗೋಪಾಲಕೃಷ್ಣಪ್ಪ ಬಿನ್ ಮುನಿಸ್ವಾಮಿ, ಮತ್ತು ಮುನಿವೆಂಕಟಪ್ಪ ಬಿನ್ ಮುನಿಸ್ವಾಮಿ ಬಳಿ ಅಡ್ಡಗಟ್ಟಿ, ಹೊಡೆದು ಆತನ ದ್ವಿಚಕ್ರ ವಾಹನ ಮತ್ತು ಮೊಬೈಲ್ ಕಿತ್ತುಕೊಂಡು ನಿಮ್ಮ ಮನೆಯವರನ್ನು ಕರೆದುಕೊಂಡು ಬನ್ನಿ ಎಂದು ದೌರ್ಜನ್ಯವೆಸಗಿರುತ್ತಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...